ಕಾನೂನು ಪಾಲನೆ ಆಗುತ್ತಿದೆಯೆ?

ಯುವ - 0 Comment
Issue Date : 30.04.2015

ಮೂಢನಂಬಿಕೆ ನಿಷೇಧಿಸಬೇಕೆಂಬ ಕಾನೂನು ಕಡ್ಡಾಯವಾಗಿ ಜಾರಿಗೆ ಬರಬೇಕೆಂಬ ವಾದ – ವಿವಾದ ಜೋರಾಗಿಯೇ ನಡೆದದ್ದನ್ನು ನಾವು ನೋಡಿದೆವು, ಕೇಳಿದೆವು. ಹೇಳಬೇಕೆಂದರೆ ಸರ್ಕಾರ ಕಾನೂನು ಜಾರಿಗೆ ತಂದರೂ ಅದನ್ನು ಜನ ಪಾಲಿಸುವರೇ ಎಂಬುದು ಮುಖ್ಯ ಪ್ರಶ್ನೆ.
ಧೂಮಪಾನ ನಿಷೇಧ ಕಾನೂನು ಬಂದು ಬಹಳ ವರ್ಷವೇ ಆಗಿಹೋಗಿದೆ. ಆದರೆ ನೋಡುತ್ತಿದ್ದೀರಲ್ಲಾ; ರಸ್ತೆ – ರಸ್ತೆಗಳಲ್ಲಿ ಅಂಗಡಿಗಳ ಮುಂದೆ ರಾಜಾರೋಷವಾಗಿ ಧೂಮಪಾನ ಮಾಡುವ ಭೂಪರನ್ನು! ಕಾನೂನು ಏನು ಮಾಡುತ್ತಿದೆ. ಅವರಿಗೆ?
ವಾಹನ ಓಡಿಸಲು 18 ವರ್ಷ ಆಗಬೇಕು. ಆದರೆ ಊರು – ಊರಲ್ಲಿ , ಹಳ್ಳಿಗಳಲ್ಲಿ ಸಣ್ಣ – ಸಣ್ಣ ಮಕ್ಕಳು ಕಾರು – ಬೈಕು, ಸ್ಕೂಟರನ್ನು ಓಡಿಸುವುದನ್ನು ನೋಡುತ್ತಲೇ ಇದ್ದೇವೆ. ಕಾನೂನನ್ನು ಕಡೆಗಣಿಸಿ, ಪಾಲಕರೇ ಮಕ್ಕಳ ಕೈಗೆ ತಮ್ಮ ವಾಹನವನ್ನು ಕೊಡುತ್ತಿದ್ದಾರೆ. ಇಂತಹ ಮಕ್ಕಳು ಮಾಡಿಕೊಳ್ಳುತ್ತಿರುವ ಅವಘಡಗಳನ್ನು ನಿತ್ಯವೂ ನೋಡುತ್ತಲೇ ಇದ್ದೇವೆ. ಹೆಲ್ಮೆಟ್ ಕಡ್ಡಾಯ ಎಂದರೂ ಅದನ್ನು ಧರಿಸದೇ ವಾಹನ ಚಲಾಯಿಸಿಕೊಂಡು ಬರುತ್ತಾರೆ.
ರಾತ್ರಿ 10ರ ನಂತರ ಮೈಕ್ ಹಾಕಬಾರದು, ಪಟಾಕಿ ಹಚ್ಚಬಾರದೆಂದಿದ್ದರೂ ಮಧ್ಯರಾತ್ರಿಯವರೆಗೂ ಮೈಕ್ ಕರ್ಕಶವಾಗಿ ಕಿರುಚುತ್ತಲೇ ಇರುತ್ತದೆ. ಪಟಾಕಿಯ ಶಬ್ಧ ಬರುತ್ತಲೇ ಇರುತ್ತದೆ. ಇವರಿಗೆಲ್ಲ ಕಾನೂನು ಏನು ಮಾಡುತ್ತಿದೆ? ಇನ್ನು ಕಸದ ತಿಪ್ಪೆ; ಎಲ್ಲೆಂದರಲ್ಲಿ ‘ಬುದ್ಧಿ ಇರುವ ಜನರೇ’ ಎಸೆದು ಹೋಗುತ್ತಾರೆ.. ಸಾರ್ವಜನಿಕ ನಲ್ಲಿಯಲ್ಲಿ ಕೈ ತೊಳೆದು ನೀರು ನಿಲ್ಲಿಸದೆ ಮುಂದೆ ನಡೆಯುತ್ತಾರೆ. ಇನ್ನೊಂದು ಕಡೆ ಸರ್ಕಾರ ಕುಡಿತದಿಂದ ಮನೆ ಹಾಳು, ಮರ್ಯಾದೆ ಹಾಳು ಇತ್ಯಾದಿ ಇತ್ಯಾದಿ ಘೋಷಣೆ ಹೇಳುತ್ತಾ ಈ ಪ್ರಚಾರಕ್ಕೆ ಕೋಟ್ಯಂತರ ಹಣ ಹಾಳು ಮಾಡುತ್ತಿದೆಯೇ ವಿನಾ ಲಾಭ ಏನೂ ಸಿಕ್ಕಿಲ್ಲ. ಅದು ಹಾಳು ಎಂದು ಗೊತ್ತಿದ್ದೂ ಕುಡಿಯುತ್ತಾರೆ. ಸಿನಿಮಾ, ನಾಟಕಗಳಲ್ಲೂ ಇದರ ವೈಭವೀಕರಣ ನೋಡುತ್ತಿದ್ದೇವೆ. ಸಿನಿಮಾದಲ್ಲಿ ಈ ದೃಶ್ಯಕ್ಕೆ ಏಕೆ ಕತ್ತರಿ ಹಾಕುತ್ತಿಲ್ಲ? ಇದೆಂಥ ವಿಪರ್ಯಾಸ! ಇದು ಹಾಳು ಎಂದೂ ಗೊತ್ತಿದ್ದೂ, ಸಿನಿಮಾದಲ್ಲಿ ತೋರಿಸುವ ಅಗತ್ಯ ಏನಿದೆ? ಅರ್ಥವಾಗುತ್ತಿಲ್ಲ. ಕಾನೂನು ಇವರ ಬಗ್ಗೆ ಏನು ಕ್ರಮ ಕೈಗೊಂಡಿದೆ – ಇದೂ ಯಕ್ಷಪ್ರಶ್ನೆಯೇ!
ಈಗಂತೂ ಸರ್ಕಾರದ ಕಡೆಯಿಂದ ಅನ್ನಭಾಗ್ಯ, ಶಾದಿ ಭಾಗ್ಯ, ಸೈಕಲ್ ಭಾಗ್ಯ, ಆ ಭಾಗ್ಯ – ಈ ಭಾಗ್ಯ ಎಂದು ಬಹಳಷ್ಟು ಜಾರಿಗೆ ಬಂದಿದೆ. ಆದರೆ ಈ ಯೋಜನೆಯ ದುರುಪಯೋಗವಾಗುತ್ತಿದೆಯೇ ವಿನಾ ಅರ್ಹ ಬಡವರಿಗೆ ಇದು ತಲುಪುತ್ತಲ್ಲೇ ಇಲ್ಲ. ಬದಲಾಗಿ ಜಾತಿ – ಮತ – ಪಂಥ ಭೇದವಿಲ್ಲದೆ, ಈ ಭಾಗ್ಯಗಳನ್ನೆಲ್ಲಾ ಸರ್ಕಾರ ಜಾರಿಗೆ ತಂದಿದ್ದರೆ, ಒಂದು ವೇಳೆ ಇವೆಲ್ಲ ಸಾಥರ್ಕವಾಗುತ್ತಿದ್ದವೋ ಏನೋ. ಆದರೆ ಹೀಗೆ ಆಗಿಲ್ಲ ಎಂಬುದು ದುಃಖಕರ ವಿಚಾರ. ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ – ಸರ್ಕಾರವೇ ಜಾತಿಯನ್ನು ಎತ್ತಿ ಕಟ್ಟುತ್ತಿದೆಯೇ ಎಂಬ ಅನುಮಾನ, ಸಂಶಯ ಬರುವುದು ಸಹಜ ಅಲ್ಲವೇ? ಇದು ಕೇವಲ ಮತ ಬ್ಯಾಂಕ್‌ಗೋಸ್ಕರ ಮಾಡುತ್ತಿರುವ ತಂತ್ರವೆಂದು ಯಾರು ಬೇಕಾದರೂ ಊಹಿಸಬಹುದು.
ನಮ್ಮ ದೇಶದಲ್ಲಿ ಎಷ್ಟೆಷ್ಟೋ ಕಾನೂನುಗಳಿವೆ. ಅವೆಲ್ಲಾ ಪುಸ್ತಕ ರೂಪದಲ್ಲಿವೆಯೇ ವಿನಹ ಆಚರಣೆಯಲ್ಲಿ ಕಾಣುತ್ತಲೇ ಇಲ್ಲ. ಸಣ್ಣ – ಪುಟ್ಟ ಕಾನೂನನ್ನೇ ನಾವು ಅನುಸರಿಸದಿದ್ದ ಮೇಲೆ ಬೇರೆಲ್ಲ ಕಾನೂನನ್ನು ಪಾಲಿಸುತ್ತೇವೆಯೇ? ಮೊದಲು ನಾವು ಕಾನೂನನ್ನು ಗೌರವಿಸುವುದನ್ನು ಕಲಿಯಬೇಕಿದೆ. ನಾವು ಕಲಿತು, ನಮ್ಮ ಮುಂದಿನ ಮಕ್ಕಳಿಗೂ ಕಲಿಸುವ ಕರ್ತವ್ಯ, ಪ್ರಜ್ಞೆಯನ್ನು ಇಟ್ಟುಕೊಳ್ಳೋಣ ಅಲ್ಲವೇ?

   

Leave a Reply