ಕಾರವಾರದಲ್ಲಿ ಬಾಳಾಸಾಹೇಬ್ ದೇಶಪಾಂಡೆ ಜನ್ಮಶತಾಬ್ದಿ

ಉತ್ತರ ಕನ್ನಡ - 0 Comment
Issue Date : 03.02.2014

ಕಾರವಾರ: ವನವಾಸಿ ಕಲ್ಯಾಣ ಸಂಸ್ಥೆಯ ಕಾರವಾರ ಶಾಖೆ ಕಳೆದ ಜ.12ರಂದು ಸಂಸ್ಥೆಯ ಸಂಸ್ಥಾಪಕ ಬಾಳಾಸಾಹೇಬ್ ದೇಶಪಾಂಡೆ ಅವರ ಜನ್ಮ ಶತಾಬ್ದಿಯನ್ನು ಆಚರಿಸಿತು. ಈ ಸಂದರ್ಭದಲ್ಲಿ ‘ಸ್ನೇಹಮಿಲನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾನಪದ ಕೋಗಿಲೆ ಎಂದೇ ಹೆಸರಾದ ನಾಡೋಜ ಪ್ರಶಸ್ತಿ ಪುರಸ್ಕೃತ ವನವಾಸಿ ಮಹಿಳೆ ಸುಕ್ರಿ ಬೊಮ್ಮು ಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಕ್ತಾರರಾಗಿ ಆಗಮಿಸಿದ್ದ ರಾಜ್ಯಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ಸಂಸ್ಥೆಯ ಹುಟ್ಟು, ಬೆಳವಣಿಗೆ, ಕಾರ್ಯವ್ಯಾಪ್ತಿ, ವನವಾಸಿಗಳ ಬದುಕಿನ ಸ್ಥಿತಿಗತಿ ಕುರಿತು ವಿವರಿಸಿದರು. ಸಂಸ್ಥಾಪಕ ಬಾಳಾಸಾಹೇಬ ದೇಶಪಾಂಡೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಅವರು ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆದ ದೇಶವೆಂದು ಕೊಂಡಾಡಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ 5 ಸಹಸ್ರ ರೂ. ದೇಣಿಗೆಯಾಗಿ ನೀಡಿ ಹರಸಿದರು. ಅಧ್ಯಕ್ಷತೆ ವಹಿಸಿದ್ದ ಹೃದ್ರೋಗ ತಜ್ಞ ಡಾ.ಕೀರ್ತಿ ನಾಯ್ಕ ಮಾತನಾಡಿ, ಸೇವಾಕಾರ್ಯಕ್ಕೆ ಕಾವಿ ತೊಡಬೇಕಾಗಿಲ್ಲ. ಸೇವೆ ಮಾಡುವ ಮನಸ್ಸು ಬೇಕು. ಅವರವರ ಕಾರ್ಯಕ್ಷೇತ್ರದಲ್ಲಿದ್ದುಕೊಂಡೇ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಬಹುದೆಂದು ಕಿವಿಮಾತು ಹೇಳಿದರು. ಸದ್ಯದಲ್ಲೇ ಆರಂಭವಾಗಲಿರುವ ತನ್ನ ನೂತನ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಸಾಧ್ಯವಾದ ಮಟ್ಟಿಗೆ ಉಚಿತ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಾಯೋಜಕರಾದ ಮಾಸೂರ್‌ಕರ್ ದಂಪತಿ ಬಹುಮಾನ ವಿತರಿಸಿದರು.

   

Leave a Reply