ಕಾವೇರಿಯ ಕರಾಳ ಒಪ್ಪಂದದ ನೆನಪುಗಳು

ಲೇಖನಗಳು - 0 Comment
Issue Date :

-ಯೋಗೀಶ್‌ತೀರ್ಥಪುರ

ಮೈಸೂರು ಪ್ರಾಂತ ಮತ್ತು ಅಂದಿನ ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್‌ನೊಂದಿಗೆ ಎರಡು ಒಪ್ಪಂದಗಳು ನಡೆದವು. ಒಪ್ಪಂದ ಎನ್ನುವುದಕ್ಕಿಂತ ಮೈಸೂರು ಅರಸರ ಮೇಲೆ ಹೇರಿದ ಷರತ್ತುಗಳು ಎಂದೇ ಹೇಳಬಹುದು. ಮೈಸೂರು ಅರಸರು 1892 ಮತ್ತು 1924ರ ಒಪ್ಪಂದಗಳಿಗೆ ಸಹಿ ಮಾಡಲೇಬೇಕಾಯಿತು. ಇಂದಿನ ಹಾಗೆ ಅಂದೂ ಮೈಸೂರಿನ ಜನ ಕಣ್ಣೀರು ಹಾಕಿದ್ದು ನಿಜ. ಒಟ್ಟಿಗೆ ಬಾಳಬೇಕೆಂಬ ಉದ್ದೇಶದಿಂದ ಅಂದೂ ಈ ಕರಾಳ ಒಪ್ಪಂದಗಳನ್ನು ಒಪ್ಪಿಕೊಂಡರು.

ಈ ಒಪ್ಪಂದದಂತೆ ಕೃಷ್ಣರಾಜ ಸಾಗರಕ್ಕೆ ಹರಿದು ಬಂದ ಎಲ್ಲ ನೀರನ್ನು ಹಿಡಿದಿಟ್ಟುಕೊಳ್ಳುವಂತಿಲ್ಲ. ಕಾಲುವೆಗಳಿಗೆ ನೀರು ಹರಿಯಲು ನಿಗದಿತ ಮಟ್ಟದವರೆಗೆ ನೀರು ನಿಲ್ಲಬೇಕು. ಆ ಮಟ್ಟದಿಂದ ಮೇಲೆ ಹರಿಯುವ ನೀರನ್ನು ಮಾತ್ರ ಮೈಸೂರು ಬಳಸಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಯಿತು. ಇದರಿಂದ ಮೈಸೂರು ಪ್ರಾಂತದಲ್ಲಿ ನೀರಾವರಿ ಪ್ರಗತಿ ಕಾಣಲು ಸಾಧ್ಯವಾಗಲಿಲ್ಲ.

 ಇದರೊಂದಿಗೆ ತಮಿಳುನಾಡಿನಲ್ಲಿ ಒಂದು ಲಕ್ಷ ಎಕರೆ ನೀರಾವರಿ ಪ್ರದೇಶಪಡಿಸುವ ಸಾಮರ್ಥ್ಯ ಇರುವ 93.5 ಟಿಎಂಸಿ ನೀರು ಸಂಗ್ರಹಿಸುವ ಮೆಟ್ಟೂರು ಜಲಾಶಯ ನಿರ್ಮಿಸಲು ಅನುಮತಿ ನೀಡಿತು. ಅಲ್ಲದೆ ಕಾವೇರಿ ಉಪನದಿಗಳಿಗೆ ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಲಾಯಿತು. ಮೈಸೂರು ಪ್ರಾಂತದಲ್ಲಿ ಮಾತ್ರ 45 ಟಿಎಂಸಿಗಿಂತ ಹೆಚ್ಚು ನೀರಿನ ಸಂಗ್ರಹ ಇರುವ ಜಲಾಶಯ ನಿರ್ಮಿಸುವಂತಿಲ್ಲ. ಕಾವೇರಿಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಪ್ರವಾಹ ಬಂದಾಗ ಮಾತ್ರ ನೀರನ್ನು ಸಂಗ್ರಹಿಸಬಹುದು. ಈ ಒಪ್ಪಂದಗಳ ಪ್ರಕಾರ ಕಾವೇರಿಯಲ್ಲಿ ನಿಗದಿತ ನೀರಿನ ಪ್ರವಾಹ ಇರಲೇಬೇಕು. ಅದಕ್ಕಿಂತ ಹೆಚ್ಚಾಗಿದ್ದಲ್ಲಿ ಮಾತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಕರಾಳ ಒಪ್ಪಂದಗಳಿಂದ ಕೆಆರ್‌ಎಸ್ ನಿರ್ಮಾಣ 13 ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಇದೇ ಅಣೆಕಟ್ಟಿನ ಬೃಂದಾವನದಲ್ಲಿ ನೂರಾರು ಕನ್ನಡ ಮತ್ತು ತಮಿಳು ಚಿತ್ರಗಳು ನಿರ್ಮಾಣಗೊಂಡಿದ್ದು ವಿಪರ್ಯಾಸವೇ ಸರಿ. ದೇಶದ ಎಲ್ಲ ಸಿನಿಮಾ ನಟ ನಟಿಯರಿಗೆ ಇದು ಸ್ವರ್ಗವಾಗಿತ್ತು.

 ಕರಾಳ ಒಪ್ಪಂದಗಳ ಫಲವಾಗಿ 1924ರ ವೇಳೆಗೆ ಮೈಸೂರು ಪ್ರದೇಶದಲ್ಲಿ ಕೇವಲ 3.15 ಲಕ್ಷ ಎಕರೆಯಷ್ಟು ನೀರಾವರಿಯಾಗಿತ್ತು. ಅದೇ ವೇಳೆಯಲ್ಲಿ ತಮಿಳುನಾಡಿನಲ್ಲಿ 14.5 ಲಕ್ಷ ಎಕರೆ ಇದ್ದದ್ದು 1972ರಲ್ಲಿ 22 ಲಕ್ಷ ಎಕರೆಗಳಿಗೆ ಏರಿತು. ತಮಿಳುನಾಡು ಮೊಂಡಾಟಮಾಡಿ ಕೈಗೊಂಡ ನೀರಾವರಿ ಪ್ರದೇಶದ ಅಭಿವೃದ್ಧಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೇಲೆ ಮೂಲ ಬಂಡವಾಳವಾಯಿತು.

ಐತಿಹಾಸಿಕ ಮಹಾಪರಾಧ

ಜಗತ್ತಿನಲ್ಲಿ ಎಲ್ಲೂ ಕಂಡರಿಯದ ನಿಯಮವನ್ನು ಕಾವೇರಿ ವಿವಾದದಲ್ಲಿ ಮೊದಲಿನಿಂದಲೂ ಪಾಲಿಸುತ್ತ ಬರಲಾಗಿದೆ. ಆಗಿನ ಕಾಲದಲ್ಲಿ ಅಲಹಾಬಾದ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಗ್ರಿಫನ್ ನೀಡಿದ ತೀರ್ಪನ್ನು ಬದಿಗೊತ್ತಿ 1892 ಮತ್ತು 1924ರ ಒಪ್ಪಂದ ಮಾಡಿಕೊಳ್ಳಲಾಯಿತು. ಇದನ್ನೇ ಆಧಾರವಾಗಿಟ್ಟುಕೊಳ್ಳಬೇಕು ಎಂದು ತಮಿಳುನಾಡು ಕಾವೇರಿ ನ್ಯಾಯಾಧಿಕರಣದ ಮುಂದೆಯೂ ವಾದಿಸಿತು.

 ಕರ್ನಾಟಕವನ್ನು ನೀರಾವರಿ ಪ್ರದೇಶ ಹೆಚ್ಚಿಸಿಕೊಳ್ಳದಂತೆ ನಿರ್ಬಂಧ ಹೇರುವುದು ಹಾಗೂ ತಮ್ಮ ನೀರಾವರಿ ಪ್ರದೇಶಗಳನ್ನು ಹೆಚ್ಚಿಸಿಕೊಂಡು ಅದಕ್ಕೆ ಬೇಸಿಗೆಯಲ್ಲೂ ನೀರು ಬಿಡುವಂತೆ ಒತ್ತಾಯಿಸುವುದು ತಮಿಳುನಾಡಿನ ಕೆಲಸವಾಯಿತು. ನದಿ ಪಾತ್ರದಲ್ಲಿ ಕೆಳಗೆ ಇರುವವರಿಗೆ ನೀರಿನ ಪಾಲನ್ನು ರಕ್ಷಿಸುವುದೇ ನಿಯಮವಾಯಿತು. ಈ ನಿಯಮ ಬೇರೆ ಎಲ್ಲೂ ಕೇಳಿಬಂದಿಲ್ಲ. ಈ ನಿಯಮ ಎಲ್ಲ ಕಡೆ ಅನ್ವಯವಾಗಿದ್ದರೆ ಗಂಗಾ, ಸಿಂಧೂ ಮತ್ತು ನೈಲ್ ನದಿಗಳು ಬಂಗ್ಲಾದೇಶ, ಪಾಕಿಸ್ತಾನ ಮತ್ತು ಈಜಿಪ್ಟ್ ದೇಶಗಳ ಸ್ವತ್ತಾಗಬೇಕಿತ್ತು.

ಕಾವೇರಿಗೆ ಆದ ಅನ್ಯಾಯಗಳು

ಜನಸಾಮಾನ್ಯರಲ್ಲಿ ಈಗ ಕಾವೇರಿ ನ್ಯಾಯ ಎಂಬ ಹೊಸ ಪರಿಭಾಷೆ ಹುಟ್ಟಿಕೊಂಡಿದೆ. ಯಾವುದೇ ನದಿಯ ಕೆಳದಂಡೆಯಲ್ಲಿರುವವರು ನೀರಿನ ಹಕ್ಕು ಸಾಧಿಸುವುದನ್ನು ಕಾವೇರಿ ನ್ಯಾಯ ಎಂದು ಕರೆಯುವ ಪರಿಪಾಠ ಬೆಳೆದಿದೆ. ಕಾವೇರಿ ವಿವಾದವನ್ನು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕೆಂದು ಎಲ್ಲ ಸರ್ಕಾರಗಳೂ ಹೇಳುತ್ತಲೇ ಬಂದಿವೆ. ಆದರೂ ತಮಿಳುನಾಡು ಸರ್ಕಾರ ಹಿಂದಿನಿಂದಲೂ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮನಸ್ಸು ಮಾಡೇ ಇಲ್ಲ. ಪ್ರತಿ ಬಾರಿ ಕಾವೇರಿ ವಿವಾದವನ್ನು ಸುಪ್ರೀಂಕೋರ್ಟ್, ಪ್ರಧಾನಿ, ಕಾವೇರಿ ಉಸ್ತುವಾರಿ ಸಮಿತಿ ಮುಂದೆ ತೆಗೆದುಕೊಂಡು ಹೋಗುವುದು, ಎಲ್ಲಿಯಾದರೂ ತನ್ನ ಪರ ತೀರ್ಪು ಬರಲಿಲ್ಲ ಎಂದರೆ ಮತ್ತೊಂದು ಕಡೆ ಹಾರುವುದು ತಮಿಳುನಾಡು ಅನುಸರಿಸಿಕೊಂಡು ಬಂದಿರುವ ತಂತ್ರ. ಕಾವೇರಿ ನ್ಯಾಯಾಧೀಕರಣ ರಚನೆ ಬೇಡ ಎಂದು ಎಲ್ಲರೂ ಹೇಳಿದಾಗ ಅದಕ್ಕಾಗಿ ಹಟ ಹಿಡಿದಿದ್ದು ತಮಿಳುನಾಡು.

 ಭಾಷಾವಾರು ಪ್ರಾಂತ ರಚನೆಯಾದ ಮೇಲೆ 1972ರಲ್ಲಿ ಕೇಂದ್ರ ಸರ್ಕಾರ ಸತ್ಯಶೋಧನಾ ಸಮಿತಿ ರಚಿಸಿತು. 1976ರಲ್ಲಿ ತಜ್ಞರು ಒಪ್ಪಂದ, ರೂಪುರೇಷೆ ಸಿದ್ಧಪಡಿಸಿದರು. ಇದರಂತೆ ನೀರಿನ ಹಂಚಿಕೆಯೊಂದಿಗೆ ಕಾವೇರಿ ಕಣಿವೆ ಪ್ರಾಧಿಕಾರ ರಚಿಸುವ ಉದ್ದೇಶವಿತ್ತು. ಇದಕ್ಕೆ ಸಂಸತ್ತಿನ ಅನುಮೋದನೆ ಸಿಕ್ಕಿತು. ಆದರೆ ತಮಿಳುನಾಡು ಸರ್ಕಾರ ಇದನ್ನು ಒಪ್ಪಲಿಲ್ಲ.

 ಕೇಂದ್ರ ಸರ್ಕಾರ ಹಲವು ಬಾರಿ ಮುಖ್ಯಮಂತ್ರಿಗಳ ಸಭೆ ಕರೆಯಿತು. ತಮಿಳುನಾಡು ಯಾವುದಕ್ಕೂ ಒಪ್ಪಲಿಲ್ಲ. ಅದಕ್ಕೆ ಬದಲಾಗಿ 1986ರಲ್ಲಿ ನ್ಯಾಯ ಪಂಚಾಯಿತಿ ರಚಿಸುವಂತೆ ಕೇಂದ್ರವನ್ನು ಒತ್ತಾಯಿಸಿತು. ಕೇಂದ್ರ ಸರ್ಕಾರ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಬಯಸಿತು. ತಮಿಳುನಾಡು ರೈತರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ ನ್ಯಾಯಾಧಿಕರಣ ರಚನೆಗೆ ಒತ್ತಾಯಿಸಿದರು. ಇದನ್ನು ಒಪ್ಪಿದ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿತು. ಅಂದು ಪ್ರಧಾನಿಯಾಗಿ ವಿ.ಪಿ.ಸಿಂಗ್, ತಮಿಳುನಾಡು ಮುಖ್ಯಮಂತ್ರಿಯಾಗಿ ಕರುಣಾನಿಧಿ ಇದ್ದರು. ಕೊನೆಗೆ ಕೇಂದ್ರ ಸರ್ಕಾರ 2.6.1990ರಂದು ನ್ಯಾಯಾಧಿಕರಣವನ್ನು ರಚಿಸಿತು.

ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಬರುವುದು ತಡವಾಗುವುದರಿಂದ ಮಧ್ಯಂತರ ತೀರ್ಪು ನೀಡುವಂತೆ ತಮಿಳುನಾಡು ಒತ್ತಾಯಿಸಿತು. 1991ರಲ್ಲಿ ನ್ಯಾಯಾಧಿಕರಣ ತಮಿಳುನಾಡಿಗೆ 205 ಟಿಎಂಸಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಪ್ರತಿ ವರ್ಷ ನೀಡಬೇಕೆಂದು ಆದೇಶಿಸಿತು. ಅಲ್ಲದೆ ಪ್ರತಿ ವಾರ ನೀರು ಬಿಡುಗಡೆಯಾಗಬೇಕು, ಒಂದು ವೇಳೆ ಒಂದು ವಾರ ನೀರು ಬಿಡಲಿಲ್ಲ ಎಂದರೆ ಮಾರನೇ ವಾರ ಎರಡು ವಾರಗಳ ನೀರನ್ನು ಬಿಡಬೇಕು, ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 11.20 ಲಕ್ಷ ಎಕರೆಗಳಿಗಿಂತ ಹೆಚ್ಚಿಸುವಂತಿಲ್ಲ ಎಂದಿತು. ಈ ಮಧ್ಯಂತರ ತೀರ್ಪು ಕಬ್ಬಿಣದ ಕಡಲೆಯಾಯಿತು. ಮಳೆ ಬಾರದ ವರ್ಷದಲ್ಲಿ ನೀರು ಬಿಡುವುದು ಕಷ್ಟವಾಯಿತು. 1991ರಲ್ಲಿ ಕರ್ನಾಟಕ ವಿಧಾನಮಂಡಲದ ಅನುಮೋದನೆ ಪಡೆದು ಕಾವೇರಿ ಕಣಿವೆ ಪ್ರದೇಶ ನೀರಾವರಿ ಸಂರಕ್ಷಣಾ ಸುಗ್ರೀವಾಜ್ಞೆ ಹೊರಡಿಸಲಾಯಿತು. ಸುಪ್ರೀಂಕೋರ್ಟ್ ಇದನ್ನು ತಳ್ಳಿಹಾಕಿತು.

ಕನ್ನಡಿಗರ ಪಾಲಿಗೆ ಪಾವನತೀರ್ಥ
ಪುರಾತನ ಕಾಲದಿಂದಲೂ ಕಾವೇರಿ ಪವಿತ್ರ ನದಿಗಳಲ್ಲೊಂದು. ಭಾರತೀಯರು ನಿತ್ಯ ಸ್ನಾನ ಮಾಡುವಾಗ ಗಂಗೆಯಿಂದ ಹಿಡಿದು ಕಾವೇರಿಯವರೆಗೆ ಎಲ್ಲ ನದಿಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿವರ್ಷ ತುಲಾ ಸಂಕ್ರಮಣ ಕಾವೇರಿ ಉದ್ಭವವಾಗುವ ದಿನ. ಆ ದಿನವನ್ನು ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜನ ಹಬ್ಬವಾಗಿ ಆಚರಿಸುತ್ತಾರೆ.

ಕರ್ನಾಟಕದ ಗಡಿಯನ್ನು ಗುರುತಿಸುವಾಗ ಕಾವೇರಿಯಿಂದ ಗೋದಾವರಿಯವರೆಗೆ ಇರುವ ನಾಡು ಎಂದು ಕವಿಗಳು ಹೇಳಿದ್ದಾರೆ. ಕೊಡಗಿನಲ್ಲಿ ಪ್ರತಿ ಮನೆಯಲ್ಲೂ ಒಬ್ಬರಲ್ಲ ಮತ್ತೊಬ್ಬರು ಕಾವೇರಿ ಹೆಸರನ್ನು ಹೊಂದಿರುತ್ತಾರೆ. ಕಾವೇರಿಯಪ್ಪ, ಕಾವೇರಿಯಮ್ಮ ಹೆಸರುಗಳು ಸಾಮಾನ್ಯ.

ಕಾವೇರಿ ಬರಿ ನೀರಲ್ಲ. ಅದು ಕನ್ನಡಿಗರ ಪಾಲಿಗೆ ಪಾವನತೀರ್ಥ. ಜೀವನದಿ. ಆದುದರಿಂದಲೇ ನದಿಯೊಂದಿಗೆ ಕನ್ನಡಿಗರಿಗೆ ಭಾವನಾತ್ಮಕ ನಂಟು ಬೆಳೆದಿದೆ. ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣದಲ್ಲಿ ಕಾವೇರಿಯ ಉಲ್ಲೇಖವಿದೆ. ಅಗಸ್ತ್ಯ ಮಹಾಮುನಿಯ ಪತ್ನಿಯಾದ ಈಕೆ ಲೋಕಲ್ಯಾಣಕ್ಕಾಗಿ ನದಿಯಾಗಿ ಹರಿದಳು ಎಂದು ಪುರಾಣಗಳು ಹೇಳುತ್ತವೆ.

ಕಾವೇರಿ ಹರಿಯುವ ಸ್ಥಳದಲ್ಲಿ ಮೂರು ದ್ವೀಪಗಳು ಸೃಷ್ಟಿಯಾಗಿವೆ. ಮೊದಲನೆಯದು ಶ್ರೀರಂಗಪಟ್ಟಣ, ಎರಡನೆಯದು ಶಿವನಸಮುದ್ರ, ಮೂರನೆಯದು ಶ್ರೀರಂಗಂ. ಮೂರೂಕಡೆ ಹಾಯಾಗಿ ಮಲಗಿರುವ ರಂಗನಾಥನ ವಿಗ್ರಹಗಳಿವೆ. ಇವುಗಳನ್ನು ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗ ಎಂದು ಕರೆಯುತ್ತಾರೆ. ಒಂದೇ ದಿನ ಮೂರೂ ದೇವಾಲಯಗಳನ್ನು ನೋಡಿದರೆ ಪುಣ್ಯ ಲಭಿಸುತ್ತದೆ ಎಂದು ಶ್ರೀವೈಷ್ಣವರು ಭಾವಿಸುತ್ತಾರೆ. ಕಾವೇರಿಗೆ ಮೊದಲ ನದಿಯಾಗಿ ಕನ್ನಿಕಾ ಸೇರುವುದು. ಆಮೇಲೆ ಹಾರಂಗಿ, ಕಡಮೂರು, ಕುಮ್ಮಹೊಳೆ, ಲಕ್ಷ್ಮಣತೀರ್ಥ, ಹೇಮಾವತಿ, ಲೋಕಪಾವನಿ, ಕಪಿಲಾ, ಸುವರ್ಣಾವತಿ, ಗುಂಡಲ್, ಶಿಂಷಾ, ಅರ್ಕಾವತಿ ನದಿಗಳು ಸೇರುತ್ತವೆ. ಕನ್ನಡದ ವ್ಯಾಕರಣಗ್ರಂಥ ಶಬ್ದಮಣಿ ದರ್ಪಣಂನಲ್ಲಿ ಕಾವೇರಿ ವಿವಾದದ ಉಲ್ಲೇಖ ಬರುತ್ತದೆ.

ಕ್ರಿ.ಶ. 1146ರಿಂದ 1163 ವರೆಗೆ ಚೋಳನಾಡನ್ನು ಆಳಿದ ರಾಜರಾಜನ್ ಮತ್ತು ಮೈಸೂರು ಪ್ರಾಂತ್ಯದ ಭೋಸಳ ರಾಜನ ನಡುವೆ ಮೊದಲನೆಯ ನರಸಿಂಹನ್ ನಡುವೆ ಕಾವೇರಿಗಾಗಿ ಕದನ ನಡೆದಿತ್ತು. ಮೈಸೂರು ಅರಸರು ಕಾವೇರಿ ವಿನಿಯೋಗ ಎಂಬ ತೆರಿಗೆಯನ್ನೂ ವಿಧಿಸಿದ್ದರು. ಈ ರೀತಿ ಕಾವೇರಿ ಮೊದಲಿನಿಂದಲೂ ಎಲ್ಲರ ಆಡಳಿತದ ಕಾಲದಲ್ಲೂ ವಿವಾದದ ಕೇಂದ್ರಬಿಂದುವಾಗಿದ್ದಳು.

   

Leave a Reply