ಕಾಶಿಪುರ ಉಳಿಸೋಣ ಬನ್ನಿ

ಲೇಖನಗಳು - 0 Comment
Issue Date :

-ಹರಿಹರಪುರ ಶ್ರೀಧರ್

ಒಂದು ವಿಶಾಲವಾದ ಪ್ರದೇಶದಲ್ಲಿ ವಿಶ್ವನಾಥನ ದೇವಸ್ಥಾನ, ಕುದುರೆಲಾಯ, ಆನೆಯನ್ನು ಕಟ್ಟುವ ಸ್ಥಳ, ಯಜ್ಞಶಾಲೆ, ನೃತ್ಯಮಂಟಪ, ಸ್ವಾಗತ ಮಂಟಪಗಳು, ಉಯ್ಯಾಲೆ ಮಂಟಪ, ಎಲ್ಲಕ್ಕಿಂತಲೂ ಮಿಗಿಲಾದುದು ಸುಮಾರು 25-30 ಅಡಿ ಎತ್ತರದ ಮಹಾದ್ವಾರ.ದ್ವಾರಪಾಲಕರ ಮಂಟಪಗಳು!!

ಇವೆಲ್ಲವೂ ಇದ್ದ ಕಾಶಿಪುರದ ವಿಶ್ವನಾಥನ ದೇವಾಲಯ ಸಮುಚ್ಚಯವು ಹಾಸನ-ಹಳೇ ಬೀಡು ರಸ್ತೆಯ ಅಡಗೂರಿಗೆ ಕೇವಲ ಎರಡು ಮೂರು  ಕಿಲೋಮೀರ್ಟ ದೂರದಲ್ಲಿ ಇದೆ! ಎಂದರೆ ನಂಬುತ್ತೀರಾ?

 ನಂಬಲೇ ಬೇಕು. ಏಕೆಂದರೆ ದೇವಾಲಯ ಸಮುಚ್ಚಯ ಇದೆ. ಆದರೆ ಪಾಳು ಬಿದ್ದಿದೆ!!

 ವಿಚಿತ್ರವೆಂದರೆ ಅಡಗೂರಿನ ಹಲವರಿಗೆ ಈ ವಿಷಯವೇ ಗೊತ್ತಿಲ್ಲ. ಆರೇಳು ವರ್ಷಗಳ ಹಿಂದೆ ಸಾಮಾಜಿಕ ಕಳಕಳಿಯ ಮಿತ್ರ ದಿ॥ದಾಸೇಗೌಡರು ಬದುಕಿದ್ದಾಗ ಬೇಲೂರಿನ ಇತಿಹಾಸ ಸಂಶೋದಕ ಡಾ. ಶ್ರೀವತ್ಸ ಎಸ್.ವಟಿಯವರೊಡನೆ ನಾನು ಅಲ್ಲಿಗೆ ಒಮ್ಮೆ ಹೋಗಿ ಬಂದಿದ್ದೆ. ಅಡಗೂರಿನಿಂದ  ಒಂದು ಗಾಡಿಜಾಡಿನಲ್ಲಿ ಆಗ ಹೋಗಿಬಂದಿದ್ದೆವು. ಆ ರಸ್ತೆಯನ್ನು ನಾನು ಮರೆತು ಅಲ್ಲಿನ ಜನರನ್ನು ವಿಚಾರಿಸಿದರೆ ಹಲವರು  ಇಲ್ಯಾವ ಕಾಶಿಪುರ ? ಎಂದರು. ಗೊತ್ತಿಲ್ಲ, ಗೊತ್ತಿಲ್ಲ ಎಂಬ ಉತ್ತರಗಳು. ಆದರೆ ಒಬ್ಬ ಪುಣ್ಯಾತ್ಮ ಹೀಗೆ ಹೋಗಿ ಎಂದು ಮಾರ್ಗದರ್ಶನ ಮಾಡಿದರು. ಅಡಗೂರಿನಿಂದ ಸುಮಾರು 300 ಮೀಟರ್ ಹೋದೆವು. ಅಲ್ಲಿಂದ ರಸ್ತೆ ಕವಲೊಡದಿದೆ.  ಒಂದು ರಸ್ತೆಯಲ್ಲಿ ನಮ್ಮ ಕಾರ್ ಹೊರಟಿತು. ರಸ್ತೆ ಕವಲೊಡೆದ ಜಾಗದಲ್ಲಿ ವಿಚಾರಿಸಲು ಯಾರೂ ಇರಲಿಲ್ಲ. ನಾವು ದಾರಿ ತಪ್ಪಿದೆವು. ಸುಮಾರು ಒಂದು ಕಿಲೋ ಮೀಟರ್ ದೂರ ಹೋದಮೇಲೆ ಆ ರಸ್ತೆಯ ದುರಸ್ಥಿ ನಡೆಯುತ್ತಿತ್ತು. ಸುಮಾರು ಎರಡು ಕಿಲೋ ಮೀಟರ್ ರಸ್ತೆಯನ್ನು ಇಟಾಚಿಯಿಂದ ಬಗೆದು ಹಾಕಿದ್ದರು. ದುರಸ್ತಿ ಮಾಡುತ್ತಿದ್ದ ಜನರನ್ನು ವಿಚಾರಿಸಲಾಗಿ  ನೀವ್ಯಾಕೆ ಇಲ್ಲಿ ಬಂದಿರಿ, ನೀವು ಅಲ್ಲೇ ಹೋಗಬೇಕಿತ್ತು ! ಎಂದರು. ಈ ರಸ್ತೆಯಲ್ಲೂ ಹೋಗಬಹುದು ಸ್ವಲ್ಪದೂರ ಹೀಗೇ ಹೋಗಿ ಎಂದರು.  ಕಾರ್ ಹೋಗುವ ಸ್ಥಿತಿಯಲ್ಲಿ ಆ ರಸ್ತೆ ಇರಲಿಲ್ಲ. ಸ್ವಲ್ಪ ದೂರ ಕಷ್ಟಪಟ್ಟು ಹೋದೆವು. ರಸ್ತೆಯಲ್ಲಿ ಕಿತ್ತಿದ್ದ ಕಲ್ಲುಗಳು ಉದ್ದಕ್ಕೂ ಕಾರು ಸಾಗಲು ಅಡಚಣೆಯಾಗಿತ್ತು. ಸರಿ, ನಾವು ಕಾಶಿಪುರ ನೋಡಲೇ ಬೇಕೆಂಬ ಸಂಕಲ್ಪ ಮಾಡಿದ್ದರಿಂದ ಕಾರ್ ನಲ್ಲಿ ಕುಳಿತಿದ್ದ ನಾವು ಕಾರ್ ನಿಂದ ಇಳಿದು ರಸ್ತೆಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ಎತ್ತಿ ಆಚೀಚೆ ಹಾಕುತ್ತಾ ಕಾರ್ ಚಕ್ರ ಹರಿಯಲು ಜಾಗ ಮಾಡುತ್ತಾ ಸಾಗಿದೆವು. ಕಾರ್ ಆ ರಸ್ತೆಯಲ್ಲೇ ಮುಂದುವರೆಯಿತು. ಸುಮಾರು ಎರಡು ಕಿಲೋ ಮೀಟರ್‌ಗಳು ನಾವು ಮುಂದೆ ನಡೆಯುತ್ತಾ ಹೋದೆವು. ಹಿಂದೆ ಕಾರ್ ನಮ್ಮನ್ನು ಅನುಸರಿಸಿತು.ಅಂತೂ ಕಾಶಿಪುರ ತಲುಪಿದೆವು.

 ದೇವಾಲಯದ ಕಲ್ಲುಗಂಬಗಳು, ಮಂಟಪಗಳು ಪೊದೆಯಿಂದ ಆವೃತವಾಗಿವೆ. ಮಹಾದ್ವಾರದಲ್ಲಿ ಪೊದೆಗಳು ಬೆಳೆದು ಪ್ರವೇಶ ನಿರ್ಬಂಧಿಸಿವೆ. ದೇವಾಲಯದ ಹತ್ತಿರ ಹೋಗುವಾಗಲೇ ಯಾರೋ ಹೇಳಿದ್ದರು  ಅಲ್ಲಿ ಸರ್ಪ ಇದೆ. ಹೋಗ ಬೇಡಿ!

 ನಾವು ಅವರ ಮಾತಿಗೆ ಕಿವಿಗೊಡದೆ ಪೊದೆಯ ಕವಲುಗಳನ್ನು ಮುರಿಯುತ್ತಾ ಒಳಗೆ ಪ್ರವೇಶಿಸಿದೆವು. ಮೇಲೆ ತಿಳಿಸಿದ ಒಂದೊಂದೇ ಮಂಟಪಗಳನ್ನು, ಮಹಾದ್ವಾರವನ್ನು, ಕುದುರೆ ಲಾಯವನ್ನು, ಗರ್ಭಗೃಹವನ್ನು ನೋಡುವಾಗ ಕಣ್ಣು ತೇವವಾಯ್ತು. ಅದರ ಭವ್ಯ ಸ್ಥಿತಿಯನ್ನು ಕಲ್ಪಿಸಿ ಕೊಂಡು ಪೇಚಾಡಿದೆವು. ಗರ್ಭ ಗೃಹವನ್ನು ಕಷ್ಟಪಟ್ಟು ಪ್ರವೇಶಿಸಿದೆವು. ಅಲ್ಲಿದ್ದ ವಿಶ್ವನಾಥನ ಲಿಂಗವನ್ನು ಬಗೆದು ಕಿತ್ತು ಪಕ್ಕಕ್ಕಿಟ್ಟಿದ್ದಾರೆ!! ಲಿಂಗದಡಿ ಇದ್ದಿರಬಹುದಾದ ಚಿನ್ನ,ವಜ್ರ ವೈಢೂರ್ಯಗಳನ್ನು ದೋಚಲು ಮಾಡಿರುವ ಯತ್ನವಿದು. ನಾನು ಆರೇಳು ವರ್ಷಗಳ ಹಿಂದೆ ಹೋಗಿದ್ದಾಗ ಗರ್ಭಗೃಹದಲ್ಲಿ ಲಿಂಗ ಇತ್ತು!! ಈಗ ನೋಡಿದರೆ ಅದನ್ನು ಕಿತ್ತಿಡಲಾಗಿದೆ. ಲಿಂಗವೇನಾದರೂ ಸುಂದರವಾಗಿದ್ದರೆ ಅದನ್ನೂ ಕದ್ದೊಯ್ಯುತ್ತಿದ್ದರೇನೋ ! ಆದರೆ ಕಲ್ಲಿನ ಲಿಂಗ. ಅಲ್ಲೇ ಇದೆ. ಅಭಿಷೇಕದ ನೀರು ಗರ್ಭಗೃಹದಿಂದ ಹೊರಬರಲು ಇದ್ದ ಕಲ್ಲಿನ ದೋಣಿ ದೇವಾಲಯದ ಪೊದೆಯ ಮಧ್ಯೆ ಬಿದ್ದಿದೆ!!

 ‘ಇಂತಾ ಒಂದು ಸ್ಥಳದ ಶಾಸನವೇ ಇಲ್ಲ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ. ಶ್ರೀವತ್ಸ ಎಸ್. ವಟಿ. ಸರ್ಕಾರದಲ್ಲಿ ಯಾವ ದಾಖಲೆಗಳಿವೆಯೋ ಗೊತ್ತಿಲ್ಲ. ಅದನ್ನು ರಕ್ಷಿಸುವ ಕೆಲಸವನ್ನು ಸರ್ಕಾರವೂ ಮಾಡಿಲ್ಲ. ಕಾಶಿಪುರವು ಬೇರ್ಜಾ ಜನ ವಾಸವಿಲ್ಲದ ಗ್ರಾಮವಾದ್ದರಿಂದ ಅಲ್ಲಿ ಜನರಿಲ್ಲ. ಹತ್ತಿರದ ಅಡಗೂರಿನ ಜನರ ಕೃಷಿ ಭೂಮಿ ಕಾಶಿಪುರದಲ್ಲೇ ಇದೆ. ಅಲ್ಲೇ ದನ ಮೇಯಿಸುತ್ತಿದ್ದವರು ಅಡಗೂರಿನ ಜನರೇ. ಯಾರಿಗೂ ಇದರ ಉಸಾಬರಿ ಬೇಕಿಲ್ಲ!

 ಆದರೆ ಸ್ವಲ್ಪವಾದರೂ ನಮ್ಮ ಇತಿಹಾಸ ಪರಂಪರೆಯ ಬಗ್ಗೆ ಕಳಜಿ ಇದ್ದವನಿಗೆ ಈ ಸ್ಥಳ ನೋಡಿದಾಗ ದುಃಖವಾಗದೇ ಇರದು. ಅಲ್ಲಿನ ಚಿತ್ರಗಳನ್ನು ತೆಗೆದು Face book ನಲ್ಲಿ ಪ್ರಕಟಿಸಿದಾಗ ಅದನ್ನು ನೋಡಿದ ನೂರಾರು ಜನರು ಸ್ಥಳವನ್ನು ನೋಡಲು ಆಸಕ್ತರಾಗಿ ನನ್ನೊಡನೆ ಮಾತನಾಡಿದ್ದಾರೆ. ಅದಕ್ಕಾಗಿಯೇ ಒಂದು ಶ್ರಮದಾನ- ಸತ್ಸಂಗ ವನ್ನು ಆಯೋಜಿಸಲಾಗಿದೆ. ಇದೇ 5.11.2017 ಭಾನುವಾರ ಬೆಳಿಗ್ಗೆ 11.00 ರಿಂದ ಒಂದೆರಡು ಗಂಟೆಯ ಕಾಲ ಅಲ್ಲಿ ಶ್ರಮದಾನ ನಡೆದು ಅಲ್ಲಿನ ಮಂಟಪಗಳ, ಮಹಾದ್ವಾರದ, ಗರ್ಭಗೃಹದ ಸುತ್ತ ಇರುವ ಗಿಡ ಗಂಟಿಗಳನ್ನು ಸ್ವಚ್ಚ ಪಡಿಸಲಾಗುವುದು.

ಆಸಕ್ತರು ಅಂದು ಬೆಳಿಗ್ಗೆ  10.30 ಕ್ಕೆ ಅಡಗೂರು ಬಸ್ ನಿಲ್ದಾಣಕ್ಕೆ ಬನ್ನಿ. ಅಲ್ಲಿಂದ ಎಲ್ಲರೂ ಒಟ್ಟಾಗಿ ಹೋಗೋಣ. ಸುಮಾರು ಎರಡು ಕಿಲೋ ಮೀಟರ್‌ಗಳ ಬೇರೆಯ ಮಾರ್ಗದಲ್ಲಿ ಕಾರ್ ಕೂಡ ಹೋಗಬಹುದು.ನಡೆದೂ ಹೋಗಬಹುದು. ಬರಲು ಆಸಕ್ತಿ ಇರುವವರು ಒಂದು ಕುಡಗೋಲು ಅಥವಾ ಮಚ್ಚನ್ನು ತನ್ನಿ. ಶ್ರಮದಾನ ಮಾಡೋಣ. ಪ್ರಾಚೀನ ದೇವಾಲಯವನ್ನು ಉಳಿಸುವ ದಿಕ್ಕಿನಲ್ಲಿ ಕಾರ್ಯಾರಂಭ ಮಾಡೋಣ. ಕಾಶಿಪುರವನ್ನು  ಜಿಲ್ಲೆಯ ಅತ್ಯಂತ ಸುಂದರ ವಾದ ಪ್ರೆೀಕ್ಷಣೀಯ ಸ್ಥಳವನ್ನಾಗಿ ಮಾಡಲು ಎಲ್ಲಾ ಅವಕಾಶಗಳೂ ಇವೆ. ನಮ್ಮ ಪ್ರಾಚೀನ ಸಂಪತ್ತನ್ನು ಉಳಿಸೋಣ ಬನ್ನಿ.

ಸಂಪರ್ಕಿಸಿ:

 7892940096 /9663572406

 

   

Leave a Reply