ಕಾಶೀವಿಶ್ವನಾಥ ಶೆಟ್ಟಿ

ಸ್ಮರಣೆ - 0 Comment
Issue Date : 30.4.2016

ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಮತ್ತು ಬಿಜೆಪಿ ಧುರೀಣ ಬಿಎಸ್ ಕಾಶೀವಿಶ್ವನಾಥ ಶೆಟ್ಟಿ(62) ಅವರು ಕೆಲ ಕಾಲದ ಅಸ್ವಸ್ಥತೆಯ ಚಿಕಿತ್ಸೆ ನಂತರ ಏ. 27ರ ರಾತ್ರಿ ನಿಧನರಾದರು.
ದಿವಂಗತ ಬಿ.ಎಸ್ ಶಿವಪ್ಪಶೆಟ್ಟರು ಮತ್ತು ಕಮಲಮ್ಮನವರ ಮಕ್ಕಳಾದ ಕಾಶೀವಿಶ್ವನಾಥ ಶೆಟ್ಟರು ಮೂಲತಹ ಹಾಸನ ಜಿಲ್ಲೆಯ ಬಸವಾಪಟ್ಟಣದವರಾಗಿದ್ದು ವೃತ್ತಿಯಿಂದ ಕೃಷಿಕರಾಗಿದ್ದರು. ಅಂದಿನ ದಿನಗಳಲ್ಲಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮುಂದುವರೆಸಲಾರದೇ ಕೃಷಿಯಲ್ಲೇ ಕಾಯಕವನ್ನು ಕಂಡುಕೊಂಡಿದ್ದರು. ಕಳೆದ ಮೂರು ದಶಕಗಳ ಹಿಂದೆ ಮೈಸೂರಿನಲ್ಲಿ ಸಿಮೆಂಟ್ ವ್ಯಾಪಾರವನ್ನು ಪ್ರಾರಂಭಿಸಿ, ತಮ್ಮ ಸ್ವಂತ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ವ್ಯಾಪಾರಿಗಳಾಗಿ ಗುರುತಿಸಿಕೊಂಡಿದ್ದರು.
ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಕಾಶಿಯವರು ಧರ್ಮ ನಿಷ್ಠರು. ಜಂಗಮ ಮಠದ ಚಂದ್ರಶೇಖರ ಸ್ವಾಮೀಜಿಯವರು ಅವರ ಧಾರ್ಮಿಕ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಧರ್ಮ ವಿಭೂಷಣ ಹಾಗೂ ಧರ್ಮ ಸೇವಾರತ್ನ ಬಿರುದುಗಳನ್ನು ದಯಪಾಲಿಸಿದ್ದರು. ಶತ್ರುವೇ ಮನೆಗೆ ಬಂದರೂ ಅವನು ತಮ್ಮ ಅತಿಥಿ ಎಂದು ಪರಿಗಣಿಸಿ ಎಂದು ಮಕ್ಕಳಿಗೆ ಕಲಿಸಿದ್ದರು. ಶೆಟ್ಟರು ಭಾರತೀಯ ಜನತಾಪಕ್ಷ ಸೇರಿ ರಾಜಕೀಯ ಕ್ಷೇತ್ರದಲ್ಲೂ ಅಪಾರ ಜನಮನ್ನಣೆ ಗಳಿಸಿದ್ದರು. ಮೈಸೂರು ನಗರ ಸಮಿತಿಯ ಉಪಾಧ್ಯಕ್ಷರಾಗಿ, 2008ರ ಮೈಸೂರು ದಸರಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾಗಿ, ರಾಜ್ಯಮಟ್ಟದ ಸಂಸ್ಕಾರ ಭಾರತಿಯ ಸಂಗೀತ ಕಾರ್ಯಗಾರದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಎಲ್ಲರಿಗೂ ಬೇಕಾದವರಾಗಿದ್ದ ಶೆಟ್ಟರು ಪ್ರಸ್ತುತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು.
ಶ್ರೀಯುತರು ಪತ್ನಿ ಶ್ರೀಮತಿ ಸುಜಾತ, ಪುತ್ರರಾದ ಖಂಡೇಶ್, ನವೀನ್ ನಂದನ್ ಮತ್ತು ಅಪಾರ ಬಂಧುಮಿತ್ರರನ್ನು ಸ್ನೇಹಿತರನ್ನೂ ಅಗಲಿದ್ದಾರೆ. ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮಾ. ವೆಂಕಟರಾಂರವರು ತೀವ್ರ ಸಂತಾಪ ಸೂಚಿಸಿದ್ದು, ಅವರ ಕುಟುಂಬ ವರ್ಗಕ್ಕೆ ಶೆಟ್ಟರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

   

Leave a Reply