ಕಾಶ್ಮೀರಕ್ಕಾಗಿ ಬಲಿದಾನ ಮಾಡಿದ ಮಹಾನ್ ಯೋಧ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 4.7.2016

ಅಕ್ಟೋಬರ್ 21, 1951ರಂದು ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗ, ತಾವು ಆ ರಾಜಕೀಯ ವಿಚಾರಧಾರೆಯ ಬೀಜ ಬಿತ್ತುತ್ತಿದ್ದು, ಮುಂದಿನ 60 ವರ್ಷಗಳಲ್ಲಿ ಅದು ಅಧಿಕಾರಕ್ಕೆ ಬಂದೀತೆಂದು ಅವರಿಗೆ ಅನಿಸಿತ್ತೇ? ಖಂಡಿತ ಅನಿಸಿರಬೇಕು. ಕಾರಣ, ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಸಾಮಾನ್ಯ ರಾಜಕಾರಣಿಯೇನೂ ಆಗಿರಲಿಲ್ಲ. ಅವರನ್ನು ಸ್ಟೇಟ್ಸ್‌ಮನ್ (ಮುತ್ಸದ್ದಿ) ಎಂದು ಪರಿಗಣಿಸಬೇಕಾಗುತ್ತದೆ. ಒಂದು ಸ್ವಪ್ನದೊಂದಿಗೆ ಅವರು ಜನಸಂಘವನ್ನು ಸ್ಥಾಪಿಸಿದ್ದರು, ಹಾಗೂ ರಾಷ್ಟ್ರವಾದವನ್ನು ಜನಸಂಘದ ಡಿಎನ್‌ಎ ಮಾಡಿಬಿಟ್ಟಿದ್ದರು. ಇದೇ ರಾಷ್ಟ್ರವಾದದ ಆಧಾರದ ಮೇಲೆ ಇಂದಿನ ಭಾರತೀಯ ಜನತಾ ಪಕ್ಷ ನಿಂತಿದೆ. 1977ರಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಹೋರಾಡಲು ಜನಸಂಘವು ಆಗ ಜನತಾ ಪಕ್ಷದಲ್ಲಿ ವಿಲೀನಗೊಂಡಿತ್ತು. ಜನಸಂಘ ಎಂಬ ಹೆಸರು ಹೋಯಿತು, ಆದರೆ ರಾಷ್ಟ್ರವಾದವೆಂಬ ಡಿಎನ್‌ಎ ಹೋಗಲಿಲ್ಲ. ಅಲ್ಲದೆ ಈ ಕಾರಣಕ್ಕೇ ಜನತಾ ಪಕ್ಷದ ಮನೆಮುರುಕ ಸಮಾಜವಾದಿಗಳು ಮತ್ತು ಎಡಪಂಥಿ ವಿಚಾರದ ಜನರಿಗೆ ಜನಸಂಘದ ಮಂದಿ ಪಕ್ಷದಲ್ಲಿ ಬೇಡವೆನಿಸಿತು. ಜನತಾ ಪಕ್ಷದಿಂದ ಜನಸಂಘ ಹೋಯಿತು, ಜನತಾ ಪಕ್ಷ ಇತಿಹಾಸದ ಗರ್ಭಕ್ಕೆ ಸೇರಿತು.
ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಜನಸಂಘದ ಸ್ಥಾಪನೆಯ ಬಳಿಕ ಎರಡು ವರ್ಷಗಳಲ್ಲಿ ಬಹು ಸಂಶಯಾಸ್ಪದ ಸ್ಥಿತಿಯಲ್ಲಿ ನಿಧನ ಹೊಂದಿದರು.ಕಾಶ್ಮೀರದ ಶ್ರೀನಗರ ಕಾರಾಗೃಹದಲ್ಲಿ ಅವರ ಮೃತ್ಯುವಾಯಿತು. ಇಂದು ಶ್ಯಾಮಪ್ರಸಾದ ಮುಖರ್ಜಿ ಎಂದರೆ ದೇಶಕ್ಕಾಗಿ ಬಲಿದಾನ ಮಾಡಿದ, ಕಾಶ್ಮೀರಕ್ಕಾಗಿ ಹುತಾತ್ಮರಾದ ಓರ್ವ ಮಹಾನ್ ನಾಯಕ, ಎಂಬ ಪ್ರತಿಮೆ ನಮ್ಮ ಕಣ್ಣಮುಂದಿದೆ. ಪಾಕಿಸ್ತಾನವು ಕಾಶ್ಮೀರದ ಮೇಲೆ ದಾಳಿ ಮಾಡಿದ ಬಳಿಕ ಕಾಶ್ಮೀರದ ಮಹಾರಾಜರು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದರು. ವಿಲೀನೀಕರಣ ಮಾಡಲು ಅವರು ಅನಾವಶ್ಯಕ ಕಾಲಹರಣ ಮಾಡಿದ್ದರಿಂದ ಕಾಶ್ಮೀರದ ಬಹುದೊಡ್ಡ ಭೂಭಾಗವು ಇಂದು ಪಾಕಿಸ್ತಾನದ ವಶಕ್ಕೆ ಹೋಗಿದೆ. ಕಾಶ್ಮೀರವು ಭಾರತದಲ್ಲಿ ವಿಲೀನಗೊಂಡ ಬಳಿಕ ಭಾರತದ ಸುಮಾರು 460 ಸಂಸ್ಥಾನಗಳು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡಂತೆ, ಹಾಗೇನೂ ಆಗಲಿಲ್ಲ. ಪಂ. ನೆಹರೂ ಅವರು ಕಾಶ್ಮೀರಕ್ಕೆ ಸ್ವತಂತ್ರ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಸಂವಿಧಾನಕ್ಕೆ ಸೇರಿಸಿದರು. ಅದೇನು ಆ ವಿಧಿ ?
ಈ ವಿಧಿಯ ಅವಕಾಶದಂತೆ ಭಾರತೀಯ ಸಂಸತ್ತಿನ ಬಹುಪಾಲು ಕಾಯ್ದೆಗಳು ಕಾಶ್ಮೀರಕ್ಕೆ ಅನ್ವಯಿಸುತ್ತಿಲ್ಲ. ಭಾರತದ ಯಾವ ನಾಗರಿಕನೂ ಕಾಶ್ಮೀರಕ್ಕೆ ಹೋಗಿ ಜಮೀನು ಖರೀದಿಸಲು ಸಾಧ್ಯವಿಲ್ಲ. ಕಾಶ್ಮೀರಕ್ಕೆ ಸ್ವಾಯತ್ತತೆಯ ಸ್ಥಾನಮಾನವಿರುವುದು. ಪಂ. ನೆಹರೂ ಮತ್ತು ಅವರ ಜೊತೆಗಾರರು 1947ರಲ್ಲಿ ದೇಶದ ವಿಭಜನೆಯನ್ನು ಮಾನ್ಯಮಾಡಿ ನಮ್ಮ ಮಾತೃಭೂಮಿಯನ್ನು ಎರಡು ತುಂಡು ಮಾಡಿದರು. ಅಲ್ಲದೆ ಸ್ವಾತಂತ್ರ್ಯಾನಂತರ ಪಂ. ನೆಹರೂ ಅವರು ಸಂವಿಧಾನಕ್ಕೆ 370ನೇ ವಿಧಿ ಸೇರಿಸಿ ಭಾರತದಲ್ಲೇ ಎರಡು ದೇಶಗಳನ್ನು ನಿರ್ಮಿಸಿದರು. 1952-53ರಲ್ಲಿ ಕಾಶ್ಮೀರದ ಮುಖ್ಯಮಂತ್ರಿಯನ್ನು ಪ್ರಧಾನಿಯೆಂದು ಹೇಳಲಾಗುತ್ತಿತ್ತು. ಕಾಶ್ಮೀರದ ಧ್ವಜ ಬೇರೆಯೇ ಆಗಿತ್ತು, ಅದರ ಸಂವಿಧಾನವೂ ಬೇರೆಯೇ ಆಗಿತ್ತು. ಡಾ. ಶ್ಯಾಮಪ್ರಸಾದ ಮುಖರ್ಜಿಯವರಿಗೆ ಇದನ್ನು ಸಹಿಸಲಾಗಲಿಲ್ಲ. ಜನಸಂಘದ ಮೊದಲ ಅಧಿವೇಶನವು 1952ರಲ್ಲಿ ಕಾನಪುರದಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಅವರು ಎಲ್ಲರೊಂದಿಗೆ ಸಂಕಲ್ಪ ಮಾಡಿದರು,
‘ಏಕ್ ದೇಶ್ ಮೆ ದೋ ವಿಧಾನ್
ದೋ ಪ್ರಧಾನ್
ದೋ ನಿಶಾನ್
ನಹೀಂ ಚಲೇಂಗೇ, ನಹೀ ಚಲೇಂಗೇ ’
ಮತ್ತು ದೇಶದೆಲ್ಲೆಡೆ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಹಾಗೂ ಜಮ್ಮೂ ಮತ್ತು ಕಾಶ್ಮೀರವನ್ನು ಭಾರತದಲ್ಲಿ ಪೂರ್ಣವಾಗಿ ವಿಲೀನೀಕರಣಗೊಳಿಸಲು ಆಂದೋಲನ ಹೂಡುವ ಸಂಕಲ್ಪ ತೊಡಲಾಯಿತು. ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಡಾ. ಶ್ಯಾಮಪ್ರಸಾದ ಮುಖರ್ಜಿಯವರು ದೇಶದೆಲ್ಲೆಡೆ ಪ್ರವಾಸ ಮಾಡಬೇಕೆಂದು ನಿಶ್ಚಯಿಸಲಾಯಿತು. ಅಟಲ್‌ಬಿಹಾರಿ ವಾಜಪೇಯಿಯವರನ್ನು ಅವರು ತಮ್ಮ ಸಹಾಯಕ್ಕೆ ತೆಗೆದುಕೊಂಡರು. ಕಾಶ್ಮೀರವನ್ನು ಪ್ರವೇಶಿಸಲು ಪರ್ಮಿಟ್ ಬೇಕು,ಪ್ರತಿಯೊಬ್ಬರ ಬಳಿ ಪರಿಚಯಪತ್ರ ಬೇಕು, ಎಂದು ಜಮ್ಮೂ-ಕಾಶ್ಮೀರ ಸರ್ಕಾರವು ಆದೇಶ ಹೊರಡಿಸಿತ್ತು. ಭಾರತದಲ್ಲಿ ಇಷ್ಟೊಂದು ರಾಜ್ಯಗಳಿದ್ದರೂ, ಭಾರತೀಯ ನಾಗರಿಕನು ಎಲ್ಲಿಗೂ ಯಾವಾಗ ಬೇಕಾದರೂ ಹೋಗಬಲ್ಲ. ಅಲ್ಲಿ ಅವನಿಗೆ ಪರ್ಮಿಟ್ ಮತ್ತು ಪರಿಚಯಪತ್ರದ ಅವಶ್ಯಕತೆಯಿರುವುದಿಲ್ಲ. ಈ ಆದೇಶವು ಭಾರತದ ಸಾರ್ವಭೌಮತ್ವಕ್ಕೇ ಸವಾಲೊಡ್ಡುವಂತಿತ್ತು. ಆಗ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದವರು ಶೇಖ್ ಅಬ್ದುಲ್ಲಾ. ಅವರು ಅಂತಹ ಸಾಹಸ ಮಾಡಿದ್ದಾದರೂ ಪಂ. ನೆಹರೂ ತಮ್ಮ ಬೆಂಬಲಕ್ಕಿದ್ದಾರೆಂಬ ಕಾರಣದಿಂದ. ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಇದಕ್ಕೆ ಸವಾಲೊಡ್ಡಲು ನಿಶ್ಚಯಿಸಿದರು. ಅಲ್ಲದೆ ಅವರು ಕಾಶ್ಮೀರವನ್ನು ಪ್ರವೇಶಿಸಲು -ಎಂದರೆ ಅನುಮತಿಯಿಲ್ಲದೆ- ನಿರ್ಧರಿಸಿದರು.
ಶ್ರೀಗುರೂಜಿಯವರಿಗೆ ಈ ವಿಷಯ ತಿಳಿದಾಗ, ಭವಿಷ್ಯದ ದೃಷ್ಟಿಯಿಂದ ಡಾ. ಮುಖರ್ಜಿಯವರು ಕಾಶ್ಮೀರಕ್ಕೆ ಹೋಗಬಾರದೆಂದು ಅವರಿಗನಿಸಿತು. ಅಲ್ಲಿ ಅವರ ಪ್ರಾಣಕ್ಕೆ ಅಪಾಯವುಂಟಾದೀತು. ಜನಸಂಘವನ್ನು ಶ್ಯಾಮಪ್ರಸಾದರು ಪ್ರಾರಂಭಿಸಿದ್ದರೂ, ಅದಕ್ಕೆ ದೇಶವ್ಯಾಪಿ ಸ್ವರೂಪವನ್ನು, ಕಾರ್ಯಕರ್ತರನ್ನು ಶ್ರೀಗುರೂಜಿಯವರು ನೀಡಿದ್ದರು. ಸಂಘದ ಬಹು ಶ್ರೇಷ್ಠ ಮತ್ತು ಕರ್ತೃತ್ವಶಾಲಿ ಪ್ರಚಾರಕರನ್ನು ನೀಡಿದರು. ಶ್ಯಾಮಪ್ರಸಾದ ಮುಖರ್ಜಿಯವರು ಕಾಶ್ಮೀರಕ್ಕೆ ಹೋಗಬಾರದೆಂಬ ಆಶಯದ ತಮ್ಮ ಪತ್ರವನ್ನು ಶ್ರೀಗುರೂಜಿಯವರು ಒಬ್ಬ ಕಾರ್ಯಕರ್ತನ ಬಳಿ ನೀಡಿ, ಅದನ್ನು ಮುಖರ್ಜಿಯವರಿಗೆ ಕೊಡುವಂತೆ ಹೇಳಿದರು. ಆ ಕಾರ್ಯಕರ್ತನ ಮೂಲಕ ಆ ಪತ್ರವು ಮುಖರ್ಜಿಯವರಿಗೆ ಸಕಾಲದಲ್ಲಿ ತಲಪಲು ಸಾಧ್ಯವಾಗಲಿಲ್ಲ.
8 ಮೇ 1953ರಂದು ಕಾಶ್ಮೀರಕ್ಕೆ ಹೋಗಲು ಡಾ. ಮುಖರ್ಜಿಯವರು ರೈಲ್ವೆಮಾರ್ಗವಾಗಿ ಹೊರಟರು. ಎಲ್ಲ ಮಾರ್ಗಗಳಲ್ಲೂ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ರಾವೀ ನದಿ ತೀರದ ಮಾಧವಪುರದಲ್ಲಿ ಪ್ರವಾಸದ ಅಂತಿಮ ಹಂತವಿತ್ತು. ನದಿಯ ಸೇತುವೆಯ ಮೇಲೆ ಜಮ್ಮೂ-ಕಾಶ್ಮೀರದ ಪೊಲೀಸರು ಡಾ. ಮುಖರ್ಜಿಯವರನ್ನು ತಡೆದರು. ಎಸ್‌ಪಿಯು ಅವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯ ಆದೇಶವನ್ನು ನೀಡಿದರು. ಅದರಲ್ಲಿ ಬರೆದಿತ್ತು, ‘‘ನೀವು ಕಾಶ್ಮೀರವನ್ನು ಹೀಗೆ ಪ್ರವೇಶಿಸಲು ಸಾಧ್ಯವಿಲ್ಲ.’’ ಮುಖರ್ಜಿಯವರು ಅವನಿಗೆ ಹೇಳಿದರು, ‘‘ನಾನು ಕಾಶ್ಮೀರಕ್ಕೆ ಪ್ರವೇಶಿಸುವ ಉದ್ದೇಶದಿಂದಲೇ ಬಂದಿದ್ದೇನೆ,’’ ಅನಂತರ ಸಾರ್ವಜನಿಕ ಸುರಕ್ಷಾ ಕಾಯ್ದೆಯಂತೆ ಡಾ. ಮುಖರ್ಜಿಯವರನ್ನು ಬಂಧಿಸಲಾಯಿತು. ಅವರೊಂದಿಗೇ ವೈದ್ಯ ಗುರುದತ್ತ ಮತ್ತು ಟೆಕ್ಚನ್ ಹೀಗೆ ಇಬ್ಬರು ಕಾರ್ಯಕರ್ತರನ್ನೂ ಬಂಧಿಸಲಾಯಿತು. ಅಟಲ್‌ಜಿಯವರೂ ಅವರ ಜೊತೆಗಿದ್ದರು. ಡಾ. ಮುಖರ್ಜಿಯವರು ಅಟಲ್‌ಜಿಯವರಿಗೆ ಹೇಳಿದರು, ‘‘ನೀವೀಗ ಹಿಂತಿರುಗಿ, ಏನಾಯಿತೆಂದು ಜನರಿಗೆ ತಿಳಿಸಿ.’’ ಅವರನ್ನು ಬಂಧಿಸಿ ಶ್ರೀನಗರ ನಗರದ ಬಳಿಯ ನಿಶಾತ್‌ಬಾಗ್‌ನ ಒಂದು ಸಣ್ಣ ಮನೆಯಲ್ಲಿ ಇರಿಸಲಾಯಿತು. ಇದೇ ಮನೆಯಲ್ಲಿ 23 ಜೂನ್ 1953ರಂದು ಸ್ವಲ್ಪ ಅನಾರೋಗ್ಯದಿಂದ ಸೆರೆಯಲ್ಲಿದ್ದಾಗಲೇ ಅವರು ಮೃತಪಟ್ಟರು. ಇಡೀ ದೇಶಕ್ಕೆ ಈ ಸುದ್ದಿ ತಿಳಿದಾಗ ಅದರಿಂದ ಭಾರೀ ಧಕ್ಕೆಯುಂಟಾಯಿತು. ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಮೃತ್ಯುವು ಬಹು ಸಂಶಯಾತ್ಮಕ ಸ್ಥಿತಿಯಲ್ಲಾಯಿತು. ಆದರೆ ಈ ಮೃತ್ಯುವಿನ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಲಯೀನ ತನಿಖೆ ನಡೆಸಲು ಪಂ. ನೆಹರೂ ನಿರಾಕರಿಸಿದ್ದು ದುರ್ಭಾಗ್ಯಕರ. ಅದೇಕೆ ? ಇದು ಲಕ್ಷ ಮೌಲ್ಯದ ಪ್ರಶ್ನೆ. ಅದು ಬಹುಕಾಲ ಅನುತ್ತರಿತವಿದ್ದೀತೆಂದು ಅನಿಸುತ್ತಿಲ್ಲ. ಕಾಲವು ನೆಹರೂ ಮೇಲೆ ಬಹಳ ಸೇಡು ತೀರಿಸಿಕೊಂಡಾಗಿದೆ. ಶ್ಯಾಮಪ್ರಸಾದ ಮುಖರ್ಜಿಯವರ ಹತ್ಯೆಯ ಪ್ರಕರಣವೂ ಇಂದಲ್ಲ ನಾಳೆ ಜಗತ್ತಿನೆದುರು ಬಯಲಾಗದೇ ಇರಲಾರದು.
ಶ್ಯಾಮಪ್ರಸಾದ ಮುಖರ್ಜಿ ನಿಧನ ಹೊಂದಿದಾಗ ಅವರ ತಾಯಿ ಜೋಗಮಾಯಾ ದೇವಿ ಜೀವಂತವಾಗಿದ್ದರು. ಅವರು 4 ಜುಲೈ 1953ರಂದು ಪಂ. ನೆಹರೂ ಅವರಿಗೆ ಪತ್ರ ಬರೆದರು. ಆ ಪತ್ರವು ಓರ್ವ ವೀರಮಾತೆಯದು. ತನ್ನ ಕರ್ತೃತ್ವಶಾಲಿ ಪುತ್ರನು ಅಗಲಿದ್ದರಿಂದ ಆಕೆಗೆ ದುಃಖವಂತೂ ಆಗಿತ್ತು, ಆದರೆ ಆಕೆ ಅಳುತ್ತ ಕೂತಿರಲಿಲ್ಲ. ದೇಶದ ಅಖಂಡತೆಗಾಗಿ ತನ್ನ ಪುತ್ರನ ಬಲಿದಾನವಾಯಿತೆಂದು ಆಕೆಗೆ ಅಭಿಮಾನವೂ ಇದೆ. ಜೋಗಮಾಯಾ ದೇವಿಯ ಪತ್ರದ ಭಾವಾನುವಾದ ಹೀಗಿದೆ, ‘‘ನನ್ನ ಮಗನ ಮೃತ್ಯುವಿನಿಂದ ದೇಶವಿಡೀ ಶೋಕಕ್ಕೀಡಾಗಿದೆ. ಅವನಿಗೆ ಹೌತಾತ್ಮ್ಯ ಪ್ರಾಪ್ತವಾಗಿದೆ. ಈ ದುಃಖವು ನನಗೆ ಎಂದರೆ ಅವನ ತಾಯಿಗೆ ತೀರಾ ಗಾಢವಾಗಿದೆ. ಅದನ್ನು ವ್ಯಕ್ತಪಡಿಸಲೂ ಆಗುತ್ತಿಲ್ಲ. ನನಗೆ ಸಾಂತ್ವನ ಹೇಳಿರೆಂದು ನಾನೇನೂ ನಿಮಗೆ ಪತ್ರ ಬರೆಯುತ್ತಿಲ್ಲ. ನಾನು ನಿಮ್ಮಿಂದ ನ್ಯಾಯವನ್ನು ಅಪೇಕ್ಷಿಸುತ್ತಿದ್ದೇನೆ. ನನ್ನ ಮಗನು ಸ್ಥಾನಬದ್ಧತೆಯಲ್ಲಿದ್ದಾಗ ಮೃತಪಟ್ಟ. ಅವನ ವಿರುದ್ಧ ಯಾವ ದಾವೆಯೂ ಇರಲಿಲ್ಲ . ಕಾಶ್ಮೀರ ಸರ್ಕಾರವು ಅವರ ಬಗ್ಗೆ ಸಾಧ್ಯವಾದಷ್ಟೂ ಮಾಡಲು ಪ್ರಯತ್ನಿಸಿತು, ಎಂದು ನೀವು ನಿಮ್ಮ ಪತ್ರದಲ್ಲಿ ಹೇಳಿ ನನ್ನ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದೀರಿ. ನಿಮ್ಮ ಅಭಿಪ್ರಾಯವನ್ನು ನಿಮಗೆ ದೊರೆತ ಮಾಹಿತಿ ಮತ್ತು ಭರವಸೆಯ ಆಧಾರದ ಮೇಲೆ ನೀಡಿದ್ದೀರಿ. ಯಾರ ಮೇಲೆ (ನನ್ನ ಮಗನ ಅಕಾಲ ಮೃತ್ಯುವಿನ) ದಾವೆಯಿದೆಯೋ ಅಂತಹವರಿಂದ ಈ ಭರವಸೆ ಮತ್ತು ಅಭಿಪ್ರಾಯಗಳು ದೊರಕಿದ್ದರಿಂದ, ಅವುಗಳಿಗೇನೂ ಬೆಲೆಯಿಲ್ಲ. ನನ್ನ ಮಗನು ಸ್ಥಾನಬದ್ಧತೆಯಲ್ಲಿದ್ದಾಗ ನೀವು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗಿ ನೀವು ಹೇಳುತ್ತೀರಿ. ನನ್ನ ಮಗನ ಬಗ್ಗೆ ನಿಮಗೆ ಅದೆಷ್ಟು ಆತ್ಮೀಯತೆಯಿತ್ತೆಂದು ನೀವು ಬರೆದಿದ್ದೀರಿ. ಆದರೆ ನನ್ನ ಮಗನನ್ನು ಸ್ಥಾನಬದ್ಧತೆಯಲ್ಲಿಟ್ಟಿದ್ದ ಜಾಗಕ್ಕೆ ಹೋಗಿ ಅವನ ಆರೋಗ್ಯವನ್ನು ವಿಚಾರಿಸಿ, ಅವನನ್ನು ಭೇಟಿಯಾಗಿಲ್ಲವೇಕೆಂದು ನನಗೆ ತಿಳಿಯುತ್ತಿಲ್ಲ.
‘‘ಸಂಶಯಾಸ್ಪದ ಸ್ಥಿತಿಯಲ್ಲಿ ಅವನ ಮೃತ್ಯುವಾಗಿದೆ. ಎಲ್ಲಕ್ಕೂ ಆಘಾತಕಾರಿ ಸಂಗತಿಯೆಂದರೆ ನನ್ನ ಮಗನನ್ನು ಸೆರೆಹಿಡಿದ ಬಳಿಕ ಅವನ ಮೃತ್ಯುವಿನ ಸುದ್ದಿಯನ್ನು ನನಗೆ ಹೇಳಲಾಗುತ್ತದೆ, ಅದೂ ಸಹ ಮೃತ್ಯು ಸಂಭವಿಸಿ ಎರಡು ಗಂಟೆಗಳನಂತರ. ಈ ಸಂದೇಶವನ್ನೂ ತಂತಿ ಮೂಲಕ ನನಗೆ ತಿಳಿಸಲಾಯಿತು. ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಎಂಬ ಸಂದೇಶವೂ ಅವನ ಮೃತ್ಯುವಿನ ಬಳಿಕ ನನಗೆ ತಲಪಿತು. ನನ್ನ ಮಗನ ಆರೋಗ್ಯವು ಅವನನ್ನು ಸೆರೆಹಿಡಿದ ದಿವಸದಿಂದಲೂ ಚೆನ್ನಾಗಿರುತ್ತಿರಲಿಲ್ಲ, ಎಂಬ ನಂಬಲರ್ಹ ಮಾಹಿತಿ ನನಗಿದೆ. ಈ ಸಮಯದಲ್ಲಿ ಅವನು ಎಷ್ಟೋ ಸಲ ಅಸ್ವಸ್ಥನಾಗಿದ್ದ. ನನ್ನ ಪ್ರಶ್ನೆಯೆಂದರೆ, ನೀವಾಗಲೀ ಅಥವಾ ಕಾಶ್ಮೀರ ಸರ್ಕಾರವಾಗಲೀ ನನಗೇಕೆ ಈ ಮಾಹಿತಿಯನ್ನು ಕಳುಹಿಸಿಲ್ಲ ? ಅದನ್ನು ಬಚ್ಚಿಟ್ಟಿದ್ದೇಕೆ ?
‘‘ಕಾಶ್ಮೀರ ಸರ್ಕಾರವು ಶ್ಯಾಮಪ್ರಸಾದರ ಆರೋಗ್ಯದ ಪೂರ್ವೇತಿಹಾಸವನ್ನು ತಿಳಿದುಕೊಳ್ಳಲು ಯಾವ ಆಸಕ್ತಿಯನ್ನೂ ತೋರಲಿಲ್ಲ.
ಅದನ್ನು ತಿಳಿದುಕೊಂಡು ಅವರ ಚಿಕಿತ್ಸೆ ಮಾಡುವವರಿಗೆ ಸೂಕ್ತ ಮಾಹಿತಿ ನೀಡಬೇಕಾಗಿತ್ತು. ಮತ್ತೆ ಮತ್ತೆ ಉದ್ಭವಿಸುವ ಅನಾರೋಗ್ಯವು ಕೆಲ ಎಚ್ಚರಿಕೆಗಳನ್ನು ನೀಡುತ್ತಿದ್ದು, ಆ ಬಗ್ಗೆಯೂ ಗಮನವೀಯಲಿಲ್ಲ. ಇದರಿಂದ ತೀರಾ ಭಯಾನಕ ಪರಿಣಾಮವಾಗಿದೆ. ಜೂನ್ 22ರಂದು ಬೆಳಿಗ್ಗೆ ನನ್ನ ಮಗನು, ‘ಭಾರೀ ಅಸ್ವಾಸ್ಥ್ಯ ಅನಿಸುತ್ತಿದೆ’ ಎಂದಿದ್ದಕ್ಕೆ ನನ್ನ ಬಳಿ ಖಚಿತ ಪುರಾವೆಯಿದೆ. ಸರ್ಕಾರ ಮಾಡಿದ್ದೇನು ? ವೈದ್ಯಕೀಯ ಚಿಕಿತ್ಸೆ ನೀಡಲು ಅರೆಮನಸ್ಸು, ಆಸ್ಪತ್ರೆಗೆ ಸೇರಿಸಲು ಭಾರಿ ನಿರ್ಲಕ್ಷ್ಯ,ಅವನ ಇಬ್ಬರು ಸಹಕಾರಿಗಳನ್ನು ಜೊತೆಗೆ ಕರೆದೊಯ್ಯಲು ನಿರಾಕರಿಸಿದ್ದು, ಇವೆಲ್ಲ ಹೃದಯಶೂನ್ಯ ವ್ಯವಹಾರದ ಉದಾಹರಣೆಗಳು.’’
ಮುಂದಿನ ಎರಡು ಪ್ಯಾರಾಗಳಲ್ಲಿ , ಶ್ಯಾಮಪ್ರಸಾದ ಮುಖರ್ಜಿಯವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರು ಮತ್ತು ಅವರನ್ನು ಬಂಧಿಸಿದ ಸರ್ಕಾರವು ಅವರ ಆರೋಗ್ಯವನ್ನು ಉದ್ದೇಶಪೂರ್ವಕ ನಿರ್ಲಕ್ಷಿಸಿದ್ದನ್ನು, ಅವರ ತಾಯಿ ಹೇಳಿದ್ದಾರೆ. ಅಲ್ಲದೆ ತಮ್ಮ ಕರ್ತವ್ಯಪಾಲನೆಯಲ್ಲಿ ಅಕ್ಷಮ್ಯ ಅಪರಾಧವೆಸಗಿದ್ದಾರೆಂದು, ಅವರಿಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮುಂದೆ ಆಕೆ ಬರೆಯುತ್ತಾರೆ, ‘‘ನಾನು ನನ್ನ ಮಗನ ಮೃತ್ಯುವಿಗೆ ಇಲ್ಲಿ ಶೋಕಿಸಲು ಇಚ್ಛಿಸುತ್ತಿಲ್ಲ. ಸ್ವತಂತ್ರ ಭಾರತದ ನಿರ್ಭಯ ಪುತ್ರನು ಸ್ಥಾನಬದ್ಧತೆಯಲ್ಲಿರುವಾಗ ಮೃತ್ಯುವನ್ನು ಎದುರಿಸಿದ್ದಾನೆ. ಯಾವುದೇ ದಾವೆಯಿಲ್ಲ, ಮತ್ತು ಬಹು ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಅವನ ಮೃತ್ಯುವಾಗಿದೆ. ನಾನು ಮಹಾನ್ ಪುತ್ರನ ತಾಯಿಯು ಪೂರ್ಣ ನಿಷ್ಪಕ್ಷಪಾತ ಮತ್ತು ಮುಕ್ತ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದೇನೆ. ಈ ತನಿಖೆಯನ್ನು ಸ್ವತಂತ್ರ ಮತ್ತು ಸಮರ್ಥ ವ್ಯಕ್ತಿಯಿಂದ ವಿಳಂಬಿಸದೆ ಮಾಡಿಸಬೇಕು. ನನಗೆ ಗೊತ್ತಿದೆ, ಹೋದ ಜೀವ ಮತ್ತೆ ಬರುತ್ತಿಲ್ಲ, ಆದರೆ ಮೃತ್ಯುವಿನ ನೈಜ ಕಾರಣಗಳು ಹಾಗೂ ಈ ಮಹಾನ್ ದುರಂತದ ವಿವರಗಳು ಸ್ವತಂತ್ರ ಭಾರತದ ಜನತೆಗೆ ತಿಳಿಯಬೇಕೆಂದು ನಾನು ಇಚ್ಛಿಸುತ್ತೇನೆ. ಅಲ್ಲದೆ ಈ ದುರಂತದಲ್ಲಿ ಸರ್ಕಾರದ ಪಾತ್ರವೇನಿತ್ತೆಂದೂ ತಿಳಿಯಬೇಕು.
‘‘ಯಾರಿಂದ ಎಲ್ಲೇ ಅನ್ಯಾಯವಾದರೂ, ಅನ್ಯಾಯ ಮಾಡುವವನು ಯಾವುದೇ ಸ್ಥಾನಮಾನದವನಾಗಿದ್ದರೂ ಅವನ ಬಗ್ಗೆ ನ್ಯಾಯ ತೀರ್ಮಾನವಾಗಬೇಕು. ಜನರೂ ಜಾಗರೂಕವಾಗಿರಬೇಕು. ಒಬ್ಬ ತಾಯಿಗೆ ದುಃಖದ, ವೇದನೆಯ ಕಣ್ಣೀರು ಹರಿಸುವ ಸಂದರ್ಭ ಮತ್ತೆಂದೂ ಬರಬಾರದು. ನೀವು ಯಾವ ರೀತಿಯ ಕ್ರಮ ಕೈಗೊಳ್ಳುವವರಿದ್ದೀರೆಂದು ನಮಗೆ ಶೀಘ್ರಾತಿಶೀಘ್ರ ತಿಳಿಸಬೇಕೆಂದು, ಭಾರತದ ಮಾತೆಯರ ವತಿಯಿಂದ ನಿಮ್ಮಲ್ಲಿ (ಎಂದರೆ ನೆಹರೂರಲ್ಲಿ ) ವಿನಂತಿಸುತ್ತಿದ್ದೇನೆ. ಪರಮೇಶ್ವರನು ನಿಮಗೆ ಶಕ್ತಿ ನೀಡಲಿ, ಮತ್ತು ಸತ್ಯ ಬೆಳಕಿಗೆ ಬರಲೆಂದು, ಪ್ರಾರ್ಥನೆ.’’
ಈ ಪತ್ರದನಂತರ ಇನ್ನೂ ಒಂದು ಪ್ಯಾರಾ ಇದ್ದು, ಕೊನೆಯಲ್ಲಿ ‘ದುಃಖದಲ್ಲಿರುವ ನಿಮ್ಮ’ ಎಂದು ಮಾತೆಯ ಸಹಿಯಿದೆ.
ಶ್ಯಾಮಪ್ರಸಾದ ಮುಖರ್ಜಿಯವರು ಕಾಶ್ಮೀರದಲ್ಲಿ ಬಲಿದಾನ ಮಾಡಿದ್ದು ಅದೇನೂ ವ್ಯರ್ಥವಾಗಿಲ್ಲ. ಪರ್ಮಿಟ್ ಪದ್ಧತಿ ರದ್ದಾಯಿತು ಹಾಗೂ ಕಾಶ್ಮೀರವು ಭಾರತಕ್ಕೆ ಜೋಡಿಸಲ್ಪಟ್ಟಿತು. ಕಾಶ್ಮೀರವೆಂದರೆ ಜಮ್ಮೂ, ಲಡಾಖ್ ಮತ್ತು ಮುಸ್ಲಿಂ ಕಣಿವೆ. ಜಮ್ಮೂವಿನಲ್ಲಿ ಹಿಂದುಗಳಿದ್ದಾರೆ, ಲಡಾಖ್‌ನಲ್ಲಿ ಬೌದ್ಧರಿದ್ದಾರೆ ಮತ್ತು ಕಣಿವೆಯ ಕೆಲ ಜಿಲ್ಲೆಗಳಲ್ಲಿ ಮುಸಲ್ಮಾನ ಬಹುಸಂಖ್ಯರಿದ್ದಾರೆ. ಅವರು ಮಾನಸಿಕವಾಗಿ ಭಾರತದೊಂದಿಗೆ ವಿಲೀನಗೊಂಡಿದ್ದಾರೆಂದು ಭಾವಿಸುವುದು ಸಾಹಸವೆನಿಸೀತು. ಅವರನ್ನು ನೇರಮಾರ್ಗಕ್ಕೆ ತರುವ ಅನೇಕ ಓರೆಕೋರೆ ಉಪಾಯಗಳಿವೆ. ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ಸಾರ್ಥಕವಾಗಬೇಕಾದರೆ, ಇಂದಲ್ಲ ನಾಳೆ ಈ ಮಾರ್ಗವನ್ನು ಶೋಧನೆ ಮಾಡಲೇಬೇಕು. ಕೆಲ ಸಮಸ್ಯೆಗಳು ಮೂರ್ಖತೆಯಿಂದ ಹುಟ್ಟಿಕೊಳ್ಳುತ್ತವೆ. ಪಂ. ನೆಹರೂ ಅವರು ಕಾಶ್ಮೀರ ಸಮಸ್ಯೆಯನ್ನು ಹುಟ್ಟುಹಾಕಿದರು.ಮುಂಬರುವ ಪೀಳಿಗೆಯು ಅದನ್ನು ಜಾಣ್ಮೆಯಿಂದ ಪರಿಹರಿಸಬೇಕಾಗಿದೆ.

   

Leave a Reply