ಕಾಶ್ಮೀರದ ನೆಲೆಯಲ್ಲಿ ಹುಟ್ಟಿತ್ತು ಮಾತೃಸ್ವರೂಪಿ ಶಕ್ತಿಯ ಆರಾಧನೆ

ಲೇಖನಗಳು - 0 Comment
Issue Date :

-ಸುನಿಲ್ ರೈನಾ ರಜಾನಕ

ಸರ್ವವ್ಯಾಪಿ ವಿಶ್ವಮಾತೆಯಾದ ಶಕ್ತಿದೇವಿಯ ಆರಾಧನೆ ಋಗ್ವೇದದಷ್ಟೇ ಪ್ರಾಚೀನವಾದದ್ದು. ತಂತ್ರ ಮತ್ತು ಪುರಾಣಗಳಲ್ಲಿಯೂ ಸಹ ಇದು ವಿವರವಾಗಿ ಉಲ್ಲೇಖಿತವಾಗಿದೆ. ಸರ್ವೋಚ್ಚ ಸತ್ಯವು ಅತೀಂದ್ರಿಯವೂ ಹಾಗೆಯೇ ಸರ್ವವ್ಯಾಪಿಯೂ ಆಗಿದೆ. ಈ ಸರ್ವವ್ಯಾಪ್ತವಾಗಿರುವ ರೂಪವೇ ದೈವತ್ವದ ಶಕ್ತಿ ಸ್ವರೂಪವಾಗಿದೆ. ಹಾಗಾಗಿ ಪ್ರಜ್ಞೆಯ ಮಾತೃಸ್ವರೂಪದ ಆರಾಧನೆಯು ಎಲ್ಲ ಕಾಲದಲ್ಲೂ ಎಲ್ಲ ಪ್ರದೇಶದಲ್ಲೂ ನಡೆದುಕೊಂಡು ಬಂದಿದೆ. ಈ ಪ್ರಜ್ಞೆಯೇ ಸತ್ಯ ಮತ್ತು ಅನ್ವೇಷಕ ಅಧ್ಯಾತ್ಮದ ಮೆಟ್ಟಿಲನ್ನು ಏರುತ್ತ ಹೋದಂತೆ ಅದು ಆತನಿಗೆ ಗೋಚರವಾಗುತ್ತ ಹೋಗುತ್ತದೆ.

ದೈವತ್ವದೊಂದಿಗೆ ಒಂದು ಅನನ್ಯ ಸಂಬಂಧವನ್ನು ಜೋಡಿಸಲು ಮಾನವನ ಮನಸ್ಸು ಎಂದೆಂದಿಗೂ ಬಯಸುತ್ತದೆ. ತೀವ್ರವಾದ ಈ ಬಯಕೆಯೇ ದೈವತ್ವವನ್ನು ಮಾತೃಸ್ವರೂಪದಲ್ಲಿ ಕಾಣುವುದಕ್ಕೆ ಕಾರಣವಾಗಿದೆ. ಎಲ್ಲ ಸನ್ನಿವೇಶಗಳಲ್ಲಿಯೂ ಮಾನವರ ಮಗುವಿನ ಆತ್ಮ ತಾಯಿಯ ಆತ್ಮದ ಕಡೆಗೆ ಸುಲಭವಾಗಿ ಹೊರಳುತ್ತದೆ. ತಾಯಿಯ ಕಾರುಣ್ಯ ಹೃದಯವೂ ಸಹ ತನ್ನ ಅಸಂಖ್ಯಾತ ಮಕ್ಕಳಿಗಾಗಿ ಸದಾ ತೆರೆದಿರುತ್ತದೆ. ಆದ್ದರಿಂದ ಸ್ತ್ರೀರೂಪದಲ್ಲಿ ಸತ್ಯದ ಆರಾಧನೆ ಅತ್ಯಂತ ಪ್ರೇರಣಾದಾಯಿ, ನಿರಾಡಂಬರವಾಗಿದ್ದು ತೃಪ್ತಿಕರವೂ, ಸಮಾಧಾನಕರವೂ ಆಗಿದೆ. ಇದರ ಅಭಿವ್ಯಕ್ತಿಯನ್ನು ವೇದಕಾಲದಲ್ಲಿ ದೇವಜನನಿ ಅದಿತಿಯ ಆರಾಧನೆಯಲ್ಲಿ ನೋಡಬಹುದು. ಹಾಗೆಯೇ ನಂತರದ ಪೌರಾಣಿಕ ಕಾಲಘಟ್ಟದಲ್ಲಿ ದುರ್ಗೆ, ಸರಸ್ವತಿ, ಲಕ್ಷ್ಮಿ, ಗಾಯತ್ರಿ ಮೊದಲಾದ ದೇವತೆಗಳ ಆರಾಧನೆಯಲ್ಲಿಯೂ ಕಾಣಬಹುದು. ಭಗವದ್ಗೀತೆಯೂ ಸಹ ಸ್ತ್ರೀರೂಪವನ್ನು ಪ್ರಕೃತಿ ಎಂದು ಉಲ್ಲೇಖಿಸುತ್ತದೆ, ಇದೂ ಕೂಡ ಕಾಲಕಾಲಕ್ಕೆ ಕಂಡುಬರುವ ದೈವತ್ವದ ಮಾತೃರೂಪ ಕಲ್ಪನೆಯ ಅಭಿವ್ಯಕ್ತಿಯೇ ಆಗಿದೆ. ಸ್ತ್ರೀರೂಪದಲ್ಲಿ ಸತ್ಯದ ಆರಾಧನೆಯು ಅಜ್ಞಾನದಿಂದ ಜನಿಸುವ ಅಶುದ್ಧತೆಗಳನ್ನು ಕರಗಿಸುವುದು ಹಾಗೂ ಸತ್ಯದ ಉಜ್ವಲ ಪ್ರಕಾಶ ಅಸಂಕಲ್ಪಿತವಾಗಿ ಮತ್ತು ಬಿರುಸಾಗಿ ಹರಿದು ಪರಮ ಜಾಗೃತಿ ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ. ಪರಮಾನಂದ ಪ್ರವಾಹದ ಅನುಭವವಾಗಿ ಶುದ್ಧ ಸತತ ಸಮಾಧಿಯ ಸ್ಥಿತಿ ಪ್ರಾಪ್ತವಾಗುತ್ತದೆ.

 ಭಾರತ ಉಪಖಂಡದಲ್ಲಿ ಅನೇಕ ಶಕ್ತಿಪೀಠಗಳಿವೆ – ಬಲೂಚಿಸ್ತಾನದ ಹಿಂಗ್ಲಜ್‌ನಿಂದ ಅಸ್ಸಾಮಿನ ಕಾಮಾಖ್ಯ, ಕಾಶ್ಮೀರದ ಚಕ್ರೇಶ್ವರಿ, ದಕ್ಷಿಣದ ಪೀತಕಾಪುರೇಶ್ವರಿವರೆಗಿನ ಶಕ್ತಿಪೀಠಗಳು ಅನ್ವೇಷಕರ ಹಿಂಜರಿಯದ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ. ಶಕ್ತಿಯ ಆರಾಧನೆಯನ್ನು ವಿವರವಾಗಿ ಹೇಳಿರುವ ತಂತ್ರಗಳಲ್ಲಿ ವೈಶ್ವಿಕ ಶಕ್ತಿಯನ್ನು ನಮ್ಮೊಳಗೆ ಹೀರಿಕೊಳ್ಳುವ ಮತ್ತು ತನ್ಮೂಲಕ ನಮ್ಮ ವಿಚಾರ, ಗುಣಗಳು, ಭೌತಿಕ ಆಚರಣೆಗಳು ಶುದ್ಧಗೊಳ್ಳುವ ವಿಧಿವಿಧಾನಗಳನ್ನು ಹೇಳಲಾಗಿದೆ. ಶಕ್ತಿಯ ಅರ್ಚನೆಯು ಒಂದು ಕ್ರಿಯಾತ್ಮಕ ರೂಪವಾಗಿದ್ದು ಶರೀರ, ಮನೋ ಬುದ್ಧಿಗಳನ್ನು ಆನಂದದ ಅಭಿವ್ಯಕ್ತಿಯಿಂದ ತುಂಬಿಸುತ್ತದೆ. ಹಾಗಾಗಿ ಇದು ಚಕ್ರಗಳ ರೂಪದಲ್ಲಿರುವ ಕುಂಡಲಿನಿ ಎಂದು ಕರೆಯಲಾಗುವ ಮಾನವ ಶರೀರದ ಸೂಕ್ಷ್ಮ ಶಕ್ತಿಕೇಂದ್ರಗಳನ್ನು ಜಾಗ್ರತಗೊಳಿಸಲು ಶಕ್ತವಾಗಿದೆ.

 ವಿಶ್ವಮಾತೆಯನ್ನು ಸ್ತುತಿಸುವ ಶ್ಲೋಕ, ಭಜನೆ ಹಾಡುಗಳು ಅನೇಕ ಶ್ರೇಷ್ಠ ಸಾಧುಸಂತರು ಋಷಿಗಳಿಂದ ಕಾಲಕಾಲಕ್ಕೆ ರಚಿತವಾಗಿವೆ. ಇವು ಮಾನವರನ್ನು ಮಾತೃಸ್ವರೂಪದೊಂದಿಗೆ ಜೋಡಿಸುವ ಕೊಂಡಿಗಳಾಗಿವೆ. ನಿತ್ಯವೂ ಪಠಿಸಲಾಗುವ, ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಭಕ್ತರು ಪಾರಾಯಣ ಮಾಡುವ ಕಾಶ್ಮೀರದ ಪಂಚಸ್ತವಿ, ಮಧ್ಯಭಾರತದ ದುರ್ಗಾ ಸಪ್ತಶತಿ, ದಕ್ಷಿಣ ಭಾರತದ ಲಲಿತಾ ಸಹಸ್ರನಾಮ ಇತ್ಯಾದಿಗಳು. ಇವುಗಳಲ್ಲಿ ಪ್ರಮುಖವಾದವು. ಆದಿಶಂಕರರು ರಚಿಸಿದ ಸೌಂದರ್ಯಲಹರಿ, ಅಭಿನವಗುಪ್ತರ ತ್ರಿಂಶಿಕಾ, ವ್ಯಾಸ ವಿರಚಿತ ಮಹಾಭಾಗವತ ಪುರಾಣ ಹಾಗೂ ಮಾರ್ಕಂಡೇಯ ಪುರಾಣ ಮೊದಲಾದವುಗಳು ಮಾತೆಯ ವೈಶ್ವಿಕ ರೂಪವನ್ನು ಪರಿಚಯಿಸುವುದರ ಜೊತೆಗೆ ಲಕ್ಷಣ, ತೇಜಸ್ಸು ಮತ್ತು ಸೌಂದರ್ಯದ ಅಭಿವ್ಯಕ್ತಿಯನ್ನು ವಿವರಿಸುತ್ತವೆ.

 ರುದ್ರಮಾಲಾ ತಂತ್ರದಲ್ಲಿ ಶಿವನ ವಾಹನ ನಂದಿಯು ತನ್ನ ಸ್ವಾಮಿಯನ್ನು ಆತನ ಪೂಜೆಯ ರಹಸ್ಯವನ್ನು ಹೇಳು ಎಂದು ಪ್ರಶ್ನಿಸಿದ ಪ್ರಸ್ತಾಪವಿದೆ. ನಂದಿಯ ಮಾತಿಗೆ ಪ್ರಸನ್ನನಾದ ಶಿವನು ಈ ವಿಶ್ವವು ಮಾತೃ ಶಕ್ತಿಯಿಂದ ಸೃಷ್ಟಿಸಲ್ಪಟ್ಟಿತು ಮತ್ತು ಅವಳೇ ಈ ವಿಶ್ವದ ಸ್ಥಿತಿ ಹಾಗೂ ಲಯವನ್ನು ಮುನ್ನಡೆಸುವವಳು ಎಂದು ಹೇಳಿದನು. ಮುಂದುವರಿದು ಹೇಳಿದ ಶಿವನು – ನನ್ನ ಪ್ರಾರ್ಥನೆಯಿಂದ ಪ್ರಸನ್ನಳಾದ ಶಕ್ತಿಯು ನನ್ನೊಳಗೆ ಸೇರಿದಳು. ಅದರಿಂದಲೇ ನಾನು ಸಾರ್ವಭೌಮತೆಯನ್ನು ಪಡೆಯುವಂತಾಯಿತು ಎಂದನು. ಆದ್ದರಿಂದ ಶಕ್ತಿಯನ್ನು ಎಲ್ಲ ಸ್ಥಿತಿ ಹಾಗೂ ಸನ್ನಿವೇಶಗಳಲ್ಲಿ ಆರಾಧಿಸುವುದು, ಧ್ಯಾನಿಸುವುದು, ಭಜಿಸುವುದು ಮತ್ತು ನಮಿಸುವುದರಿಂದ ಯಶಸ್ಸು, ವಿವೇಕ, ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ.

ವರ್ತಮಾನ ಸನ್ನಿವೇಶದಲ್ಲಿ ನಮ್ಮ ದೇಶವನ್ನು ಮಾನವತೆಯ ವಿರೋಧಿಗಳಿಂದ ರಕ್ಷಿಸಲು, ಜೊತೆಯಾಗಿ ಕೆಲಸಮಾಡಿ ವಿಶ್ವದ ಸಭ್ಯ ದೇಶಗಳ ಸಾಲಿನಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವನೀಯ ಸ್ಥಾನವನ್ನು ಗಳಿಸಿಕೊಡಲು, ನಾಗರಿಕರಿಗೆ ವಿವೇಕಜ್ಞಾನ ನೀಡಲು, ವೈಯಕ್ತಿಕ ಬದುಕು ಮತ್ತು ಸಮಾಜದಲ್ಲಿನ ಕೊಳೆಯನ್ನು ನಿವಾರಿಸಿ ನಮ್ಮ ಸುತ್ತಲನ್ನು ಸ್ವಚ್ಛಗೊಳಿಸಲು, ಜಾತಿ ವರ್ಗಗಳ ಮೌಢ್ಯವನ್ನು ದೂರಗೊಳಿಸಲು ಶಕ್ತಿದೇವಿಯ ಆರಾಧನೆ ನಡೆಯಬೇಕಾಗಿದೆ. ಜೊತೆಗೆ ಹೆಣ್ಣು ಭ್ರೂಣ ಹತ್ಯೆಯಂತ ಘೋರ ಪದ್ಧತಿನ್ನು ಕೊನೆಗಾಣಿಸಿ ಪ್ರತಿ ಹೆಣ್ಣು ಮಗುವೂ ಶಕ್ತ್ತಿಮಾತೆಯ ಸ್ವರೂಪ ಹಾಗೂ ಮಾನವತೆಗೆ ನೀಡಿದ ಆಶೀರ್ವಾದ ಎಂದು ಮನಗಾಣುವಂತಾಗಲು ಶಕ್ತಿ ದೇವತೆಯ ಪೂಜೆ ಅಗತ್ಯವಾಗಿದೆ.

 

   

Leave a Reply