ಕಾಶ್ಮೀರ ಅಬ್ದುಲ್ಲಾ ವಂಶದ ಆಸ್ತಿಯಲ್ಲ

ಲೇಖನಗಳು - 0 Comment
Issue Date :

-ರಮೇಶ ಪತಂಗೆ

ಶ್ರೀನಗರದ ಸಾಂಸದ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲರು ನವೆಂಬರ್ 11ರಂದು ಹೇಳಿದರು, ಪಾಕ್‌ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದು, ಅದನ್ನು ದೊರಕಿಸಲು ಎಷ್ಟೇ ಕದನಗಳನ್ನು ಮಾಡಿದರೂ ಅದರಿಂದೇನೂ ಉಪಯೋಗವಿಲ್ಲ. ಫಾರುಖ್ ಅಬ್ದುಲ್ಲರು ಪಳಗಿದ ರಾಜಕಾರಣಿ. ಪಳಗಿದ ರಾಜಕಾರಣಿಯು ಪ್ರಸಿದ್ಧಿಗಾಗಿ, ವಿವಾದವೆಬ್ಬಿಸಲು, ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಇಂತಹ ರೀತಿಯ ವಾದಗ್ರಸ್ತ ಹೇಳಿಕೆ ನೀಡುತ್ತಿರುತ್ತಾರೆ. ಇತರ ರಾಜ್ಯಗಳಲ್ಲೂ ಇಂತಹ ಪಳಗಿದ ರಾಜಕಾರಣಿಗಳಿದ್ದಾರೆ.

 ಪಿ. ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಭಾರತದ ಸಂಸತ್ತು ಪಾಕ್‌ವ್ಯಾಪ್ತ ಕಾಶ್ಮೀರ ಸಹಿತ ಸಂಪೂರ್ಣ ಕಾಶ್ಮೀರ ಭಾರತದ್ದು, ಎಂಬ ಆಶಯದ ನಿರ್ಣಯವನ್ನು 22ಫೆಬ್ರವರಿ 1994ರಂದು ಸ್ವೀಕರಿಸಿದ್ದು ,ಅದು ಸರ್ವಾನುಮತದಿಂದ ಅಂಗೀಕೃತವಾಗಿದೆ. ಫಾರುಖ್ ಅಬ್ದುಲ್ಲರಿಗೆ ಇದು ಗೊತ್ತಿಲ್ಲವೆಂದಲ್ಲ. ಮೇಲಿನಂತೆ ಹೇಳಿಕೆ ನೀಡಿ ತಾವು ಭಾರತೀಯ ಸಂಸತ್ತಿಗೆ, ಪರ್ಯಾಯವಾಗಿ ಭಾರತೀಯ ಜನತೆಗೆ (ಸಂಸತ್ತು ಭಾರತೀಯ ಜನತೆಯನ್ನು ಪ್ರತಿನಿಧಿಸುತ್ತದೆ) ಅಪಮಾನ ಮಾಡುತ್ತಿದ್ದೇವೆ, ಎಂದು ಅಬ್ದುಲ್ಲರು ತಿಳಿಯಬೇಕು. ಇದೇ ಹೇಳಿಕೆಯಲ್ಲಿ ಮುಂದುವರಿದು ಅಬ್ದುಲ್ಲರು  ಹೇಳಿದ್ದಾರೆ, ‘ಸ್ವತಂತ್ರ ಕಾಶ್ಮೀರವು ವಾಸ್ತವಿಕವಾಗಿರಲು ಸಾಧ್ಯವಿಲ್ಲ. ಏಕೆಂದರೆ ಕಾಶ್ಮೀರವು ನಾಲ್ಕೂ ಕಡೆಗಳಿಂದ ಭೂವೇಷ್ಟಿತ (ಲ್ಯಾಂಡ್‌ಲಾಕ್ಡ್) ಪ್ರದೇಶವಾಗಿದೆ. ಒಂದು ಕಡೆ ಚೀನ, ಇನ್ನೊಂದು ಕಡೆ ಪಾಕಿಸ್ತಾನ ಹಾಗೂ ಮೂರನೇ ಕಡೆ ಭಾರತವಿದೆ. ಈ ಮೂರೂ ದೇಶಗಳ ಬಳಿ ಅಣ್ವಸ್ತ್ರಗಳಿವೆ. ನಮ್ಮ ಕಡೆ ಕೇವಲ ಅಲ್ಲಾ ಇದ್ದಾನೆ. ಆದ್ದರಿಂದ ಆಜಾದ್ ಕಾಶ್ಮೀರವು ವಾಸ್ತವಿಕವಾಗಿರಲು ಸಾಧ್ಯವಿಲ್ಲ.’ ಇಷ್ಟು ಹೇಳಿ ಅವರು ನಿಂತಿಲ್ಲ. ‘ನಮಗೆ ಅಂತರ್ಗತ ಸ್ವಾಯತ್ತತೆ ಬೇಕು. ಅದು ನಮ್ಮ ಅಧಿಕಾರವಾಗಿದೆ. ಭಾರತವು ನಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ. ಅದು ನಮಗೆ ವಿಶ್ವಾಸಘಾತ ಮಾಡಿದೆ. ನಾವು ಪ್ರೇಮದಿಂದ ಭಾರತದಲ್ಲಿ ಸೇರ್ಪಡೆಗೊಳ್ಳಲು ತೀರ್ಮಾನಿಸಿದ್ದರ ಬಗ್ಗೆ ಭಾರತಕ್ಕೇನೂ ಪರಿವೆಯಿಲ್ಲ’ ಎಂದು ಮುಕ್ತಾಫಲ ಉದುರಿಸಿದ್ದಾರೆ.

 ಮೊದಲು ಸ್ವಾಯತ್ತತೆಯ ವಿಷಯ ನೋಡೋಣ. ಸಂವಿಧಾನದ 370ನೇ ವಿಧಿಯು ಜಮ್ಮೂ ಮತ್ತು ಕಾಶ್ಮೀರಕ್ಕೆ ಸ್ವತಂತ್ರ ಸ್ಥಾನಮಾನ ನೀಡಿದೆ. ಭಾರತದ ಯಾವ ನಾಗರಿಕನೂ ಕಾಶ್ಮೀರದಲ್ಲಿ ಜಮೀನು ಖರೀದಿಸಲು ಸಾಧ್ಯವಿಲ್ಲ. ಅಲ್ಲಿ ಸ್ಥಾವರ ಆಸ್ತಿಪಾಸ್ತಿ ಖರೀದಿಸಲು ಸಾಧ್ಯವಿಲ್ಲ. ಭಾರತದ ಎಲ್ಲ   ಕಾಯ್ದೆಗಳೂ ಜಮ್ಮೂ-ಕಾಶ್ಮೀರಕ್ಕೆ ಅನ್ವಯಿಸುತ್ತಿಲ್ಲ. ಈ 370ನೇ ವಿಧಿಯು ಕಾಶ್ಮೀರವನ್ನು ಭಾರತದಿಂದ ಭಾವನಾದೃಷ್ಟಿಯಿಂದ ಪ್ರತ್ಯೇಕಿಸುತ್ತದೆ. ಈ 370ನೇ ವಿಧಿಯನ್ನು ಡಾ. ಅಂಬೇಡ್ಕರರು ಸಂವಿಧಾನಕ್ಕೆ ಸೇರಿಸಿದ್ದಲ್ಲ, ಅದರ ಶ್ರೇಯಸ್ಸನ್ನು ಪಂ. ನೆಹರೂ ಅವರಿಗೆ ನೀಡಬೇಕಾಗುತ್ತದೆ. ಆ ಕುರಿತು ಧನರಾಜ್ ಡಾಹಾಟ್ ಅವರು ‘ಡಾ. ಅಂಬೇಡ್ಕರ್ ಮತ್ತು ಕಾಶ್ಮೀರ ಸಮಸ್ಯೆ’ ಎಂಬ ಪುಸ್ತಕದಲ್ಲಿ (ಪುಟ 71-72) ಬರೆಯುತ್ತಾರೆ, ‘‘ಪಂ. ನೆಹರೂ ಅವರು ಶೇಖ್ ಅಬ್ದುಲ್ಲರನ್ನು ಆಗಿನ ಕಾನೂನು ಮಂತ್ರಿ ಡಾ. ಬಾಬಾಸಾಹೆಬ್ ಅಂಬೇಡ್ಕರರ ಬಳಿಗೆ ಕಳುಹಿಸಿದರು. ಶೇಖ್ ಅಬ್ದುಲ್ಲರು ಹೇಳುವುದನ್ನು ಪೂರ್ಣವಾಗಿ ಕೇಳಿದ ಬಳಿಕ ಡಾ. ಅಂಬೇಡ್ಕರರು ನೀಡಿದ ಉತ್ತರದ ಬಗ್ಗೆ ಪ್ರೊ. ಬಲರಾಜ್ ಮಧೋಕ್ ಬರೆಯುತ್ತಾರೆ: ಅವರು (ಡಾ. ಅಂಬೇಡ್ಕರರು) ಶೇಖ್ ಅಬ್ದುಲ್ಲರಿಗೆ ಸ್ಪಷ್ಟವಾಗಿ ಜಬರಿಸುತ್ತಾರೆ. ‘‘ನಿಮ್ಮ ಇಚ್ಛೆಯಂತೆ ಭಾರತವು ನಿಮ್ಮ ರಕ್ಷಣೆ ಮಾಡಬೇಕು, ನಿಮ್ಮ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಬೇಕು, ನಿಮಗೆ ಧಾರಾಳವಾಗಿ ಆಹಾರಧಾನ್ಯಗಳನ್ನು ಪೂರೈಸಬೇಕು, ಕಾಶ್ಮೀರಕ್ಕೆ ಸಂಪೂರ್ಣ ಭಾರತದಲ್ಲಿ ಬರೋಬ್ಬರಿ ಸಮಾನ ಅಧಿಕಾರ ನೀಡಬೇಕು, ಆದರೆ ಭಾರತ ಸರ್ಕಾರಕ್ಕೆ ಮಾತ್ರ ತೀರಾ ಸೀಮಿತ ಅಧಿಕಾರವಿರಬೇಕು ಹಾಗೂ ಭಾರತದ ಜನತೆಗೆ ಕಾಶ್ಮೀರದಲ್ಲಿ ಏನೂ ಅಧಿಕಾರವಿರಬಾರದು. ಈ ವಿಷಯಕ್ಕೆ ಭಾರತದ ಕಾನೂನು ಮಂತ್ರಿಯಾಗಿ ನಾನು ಮಾನ್ಯತೆ ನೀಡುವುದರಿಂದ ಭಾರತದ ಹಿತಕ್ಕೆ  ದ್ರೋಹ ಬಗೆದಂತಾದೀತು.ಇದನ್ನು ನಾನೆಂದೂ ಮಾಡಲಾರೆ.

 ಒಂದು ರಾಜ್ಯದಲ್ಲಿ ಎರಡು ಧ್ವಜ ಮತ್ತು ಎರಡು ಸಂವಿಧಾನ ಇರಲಾಗದು. ಇದಕ್ಕಾಗಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರು ಕಾಶ್ಮೀರಕ್ಕೆ ಹೋಗಿ ಸತ್ಯಾಗ್ರಹ ಮಾಡಿದರು. ಫಾರುಖ್ ಅಬ್ದುಲ್ಲರ ತಂದೆ-ಶೇಖ್ ಅಬ್ದುಲ್ಲರು- ಡಾ. ಶ್ಯಾಮಪ್ರಸಾದ ಮುಖರ್ಜಿಯವರನ್ನು ಬಂಧಿಸಿದರು ಹಾಗೂ ಜೈಲಿನಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಸಂಶಯಾಸ್ಪದ ಮೃತ್ಯುವಾಯಿತು. ಭಾರತದ ಯಾವ ರಾಜ್ಯವೂ ಸ್ವಾಯತ್ತತೆಗೆ ಆಗ್ರಹಿಸುತ್ತಿಲ್ಲ. ಅಲ್ಲದೆ ತಾವು ಒಂದೇ ಭಾರತದ ಅಂಗಗಳೆಂಬ ಭಾವನೆ ಎಲ್ಲ ರಾಜ್ಯಗಳದ್ದು. ರಾಜ್ಯಗಳ ಜನತೆಯೂ ತಮ್ಮನ್ನು ‘ನಾನು ಭಾರತೀಯನು’ ಎಂದು ಭಾವಿಸುತ್ತಾರೆ. ಫಾರುಖ್ ಅಬ್ದುಲ್ಲಾ ಮತ್ತು ಅವರ ಮನೆತನದ ಭಾವನೆ ಇದಕ್ಕಿಂತ ಭಿನ್ನವಾಗಿದೆ. ಅವರಿಗೆ ಭಾರತದಿಂದ ಎಲ್ಲ ರೀತಿಯ ನೆರವು ಬೇಕು. ನೆರೆ ಬಂದಿತು, ಹಣ ಕೊಡಿ, ಆಹಾರ ಕೊಡಿ. ಪಾಕಿಸ್ತಾನದ ಸೈನ್ಯ ಬಂದಿತು, ನಮ್ಮ ರಕ್ಷಣೆ ಮಾಡಿ. ಪಾಕಿಸ್ತಾನದ ಭ ಯೋತ್ಪಾದಕರು ಬಂದರು,ಅವರಿಂದ ನಮ್ಮನ್ನು ರಕ್ಷಿಸಿ. ನಮಗೆ ರಸ್ತೆಗಳನ್ನು ನಿರ್ಮಿಸಿ ಕೊಡಿ, ನಮ್ಮಲ್ಲಿ ಉದ್ದಿಮೆ-ವ್ಯಾಪಾರ ವೃದ್ಧಿಸಿ. ಅದಕ್ಕೆ ಬದಲಾಗಿ ನಾವು ಭಾರತವನ್ನು ಬೈಯುವೆವು, ನಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಕೂಗಾಡುವೆವು. ಭಾರತೀಯ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಲು ಯುವಕರನ್ನು ಉದ್ರೇಕಿಸುವೆವು. ಸೈನ್ಯವು ಕಾರ್ಯಾಚರಣೆ ಕೈಗೊಂಡಲ್ಲಿ ಕೂಗಾಡುವೆವು- ಇದು ಅವರ ಭಾವನೆ. ಕಾಶ್ಮೀರದ ರಕ್ಷಣೆಗೆ ಕಳೆದ ಎರಡು-ಮೂರು ವರ್ಷಗಳಲ್ಲಿ ಮಹಾರಾಷ್ಟ್ರದ ಅನೇಕ ಜವಾನರು ಪ್ರಾಣತೆತ್ತರು. ಅವರಲ್ಲಿ ಒಬ್ಬ ಜವಾನನ ಮನೆಗೆ ಹೋಗಲೂ ಈ ನಾಲಾಯಕ್ ಅಬ್ದುಲ್ಲಾ ಸೌಜನ್ಯ ತೋರುತ್ತಿಲ್ಲ, ಮೇಲೆ ಮುಖವೆತ್ತಿ ಸ್ವಾಯತ್ತತೆಯ ಬೇಡಿಕೆಯಿಡುತ್ತಾರೆ.

 ಕಾಶ್ಮೀರಕ್ಕಾಗಿ ಭಾರತವು ನೀರಿನಂತೆ ಹಣ ಖರ್ಚುಮಾಡಿದೆ. 24 ಜುಲೈ 2016ರ ‘ದಿ ಹಿಂದೂ’ ದೈನಿಕದ ವಾರ್ತೆಯ ಶೀರ್ಷಿಕೆ ಹೀಗಿದೆ: ‘ಜಮ್ಮೂ ಮತ್ತು ಕಾಶ್ಮೀರ 1% ಜನಸಂಖ್ಯೆಯಿದ್ದರೂ 10% ಕೇಂದ್ರದ ಹಣವನ್ನು ಖರ್ಚುಮಾಡಲಾಗುತ್ತಿದೆ. ಕಳೆದ ಹದಿನಾರು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ 1.14 ಲಕ್ಷ ಕೋಟಿ ರೂಪಾಯಿ ಅನುದಾನದ ಸ್ವರೂಪ ಬಂದಿದೆ.’’ಎಷ್ಟೊಂದು ಪ್ರಚಂಡ ಮೊತ್ತವಿದು! ಸುದ್ದಿಯಲ್ಲಿ ಮುಂದೆ ಹೇಳಲಾಗಿದೆ, ಉತ್ತರ ಪ್ರದೇಶದ ಜನಸಂಖ್ಯೆಯು ದೇಶದ ಜನಸಂಖ್ಯೆಯ 13% ಇದ್ದು, ಇದೇ ಅವಧಿಯಲ್ಲಿ (2000-2016) ಅದಕ್ಕೆ ಕೇಂದ್ರದ ಅನುದಾನದ 8.2%ದಷ್ಟೇ ಮೊತ್ತ ದೊರಕಿದೆ. ಜಮ್ಮೂ-ಕಾಶ್ಮೀರದ 2011ರ ಜನಗಣತಿಯಂತೆ ತಲಾ 91,300 ರೂಪಾಯಿ ದೊರಕಿದ್ದು, ಉತ್ತರ ಪ್ರದೇಶಕ್ಕೆ ತಲಾ 4,300 ದೊರಕಿದೆ. ಕಾಶ್ಮೀರದಲ್ಲಿ ಅಬ್ದುಲ್ಲಾ ಮನೆತನದ ಆಡಳಿತವು ಸತತವಾಗಿ ಮುಂದುವರಿದಿತ್ತು. ಅವರು ಈ ಹಣದಿಂದ ಮಾಡಿದ್ದೇನು ? ಆ ಬಗ್ಗೆ ನಿರ್ದಾಕ್ಷಿಣ್ಯವಾಗಿ ಆಡಿಟ್ ಮಾಡಬೇಕು. ‘ಹಿಂದೂ’ನ ವಾರ್ತೆಯಲ್ಲಿ ಕ್ಯಾಗ್ ರಿಪೋರ್ಟ್‌ನ ವರದಿ ನೀಡಿ ಹೀಗೆ ಹೇಳಿದೆ, ರಾಜ್ಯದ ಒಟ್ಟು ಉತ್ಪನ್ನದ 54% ಭಾಗವು ಅನುದಾನದ್ದಾಗಿದೆ. ತೀರಾ ಗಂಭೀರ ಸ್ವರೂಪದ ಹಣಕಾಸು ವ್ಯವಹಾರವಿದು. ಸತತವಾಗಿ ಬಜೆಟಿಂಗ್, ಉಳಿತಾಯಗಳಲ್ಲಿ ಅವ್ಯವಹಾರವಿದ್ದು, ಹೆಚ್ಚುವರಿ ಖರ್ಚಾಗುತ್ತ ಬಂದಿದೆ. ಖರ್ಚಿನ ವ್ಯವಸ್ಥೆಯಿಲ್ಲದಿದ್ದರೂ ಖರ್ಚುಮಾಡಲಾಗಿದೆ. ಅಬ್ದುಲ್ಲಾ ಮನೆತನದ ಸಂಪತ್ತಿನ ಶೋಧನೆ ಮಾಡಬೇಕು. ದೇಶ-ವಿದೇಶಗಳಲ್ಲಿ ಎಲ್ಲೆಲ್ಲಿ ಅದರ ಸಂಪತ್ತಿದೆಯೆಂದು ಅಗೆದು ತೆಗೆಯಬೇಕು. ಸ್ವಾಯತ್ತತೆಯ ಮೌಲ್ಯವನ್ನು ಅವರಿಂದ ವಸೂಲು ಮಾಡಬೇಕು.

 ಫಾರುಖ್ ಅಬ್ದುಲ್ಲರ ಹೇಳಿಕೆ ಬಂದನಂತರ ಸಿನೆನಟ ಋಷಿ ಕಪೂರ್‌ನಿಗೂ ಕಂಠಬಿರಿದಿದ್ದು, ಆತ ಹೇಳಿದ, ‘‘ಪಾಕ್‌ವ್ಯಾಪ್ತ ಕಾಶ್ಮೀರವು ಪಾಕಿಸ್ತಾನದ್ದೇ ಆಗಿದೆ.’’ ಟ್ವಿಟರ್‌ನಲ್ಲಿ ಆತ ಹೇಳುತ್ತಾನೆ, ‘‘ಫಾರುಖ್ ಅಬ್ದುಲ್ಲಾಗೆ ಸಲಾಮ್ ! ನಾನು ನಿಮ್ಮ ಅಭಿಪ್ರಾಯದೊಂದಿಗೆ ಪೂರ್ಣ ಸಹಮತ ಹೊಂದಿದ್ದೇನೆ. ಜಮ್ಮೂ-ಕಾಶ್ಮೀರ ನಮ್ಮದು, ಮತ್ತು ಪಾಕ್‌ವ್ಯಾಪ್ತ ಕಾಶ್ಮೀರ ಅವರದ್ದು. ಸಮಸ್ಯೆ ಬಗೆಹರಿಸಲು ಇದೊಂದೇ ಉಪಾಯವಾಗಿದ್ದು, ಅದಕ್ಕೆ ಒಪ್ಪಿಕೊಳ್ಳಬೇಕು. ನಾನು ಸಾಯುವ ಮೊದಲು ಪಾಕಿಸ್ತಾನವನ್ನು ನೋಡಲು ಇಚ್ಛಿಸುತ್ತೇನೆ. ನನ್ನ ಮೂಲಗಳು ಅಲ್ಲಿಯೇ ಇವೆ. ಜಯ್ ಮಾತಾ ದೀ !’’ ಕಪೂರ್ ಮನೆತನ ಪೇಶಾವರದ್ದು. ವಿಭಜನೆಯ ಬಳಿಕ ಅವನು ಭಾರತಕ್ಕೆ ಬಂದನು.  ಪಾಕಿಸ್ತಾನಕ್ಕೆ ಹೋಗಿರುವ ನನ್ನ ಜನ್ಮಭೂಮಿಯನ್ನು ನಾನು ಮರಳಿ ಪಡೆಯುವೆ ಹಾಗೂ ಈ ಸ್ವತಂತ್ರ ಭೂಮಿಗೆ ನನ್ನ ಮಕ್ಕಳನ್ನು ಕೊಂಡೊಯ್ಯುವೆ, ಎಂಬ ವಿಚಾರವೇಕೆ ಋಷಿ ಕಪೂರ್‌ನ ಮನಸ್ಸಲ್ಲಿ ಬರುತ್ತಿಲ್ಲ ? ಈ ರೀತಿ ಯೋಚಿಸುವ ಬದಲು, ನಾನು ಪಾಕಿಸ್ತಾನಕ್ಕೆ ಹೋಗುವ ವ್ಯವಸ್ಥೆ ಮಾಡಿ ಎಂದು ಈ ಕಪೂರನು ಅಬ್ದುಲ್ಲನಿಗೆ ಕರ್ಪೂರ ಹಚ್ಚಿ ಆರತಿ ಬೆಳಗುತ್ತಿದ್ದಾನೆ.

 ಪಾಕ್‌ವ್ಯಾಪ್ತ ಕಾಶ್ಮೀರವೇ ಏನು, ಸಂಪೂರ್ಣ ಪಾಕಿಸ್ತಾನವೇ ಅಖಂಡ ಭಾರತದ ಭಾಗವಾಗಿದೆ.  ಜಿನ್ನಾ ಅವರು ಭಾರತವನ್ನು  ವಿಭಜಿಸಿ ಗಳಿಸಿದ್ದೇನು ? ಎಂದು ಇಂದು ಪಾಕಿಸ್ತಾನದಲ್ಲಿ ಕೆಲವು ಬುದ್ಧಿಜೀವಿಗಳು ಚರ್ಚಿಸುತ್ತಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯ ಜನ್ಮಭೂಮಿಯಾಗಿದೆ. ಸಿಂಧಿಗಳು ಪಂಜಾಬಿಗಳನ್ನು ಕೊಲ್ಲುತ್ತಾರೆ, ಪಂಜಾಬಿಗಳು ಸಿಂಧಿಗಳನ್ನು ಕೊಲ್ಲುತ್ತಾರೆ, ಪಠಾಣರು ಇವರಿಬ್ಬರನ್ನೂ ಕೊಲ್ಲುತ್ತಾರೆ ಹಾಗೂ ಈ ಮೂವರೂ ಸೇರಿ ಬಲೂಚಿಗಳನ್ನು ಕೊಲ್ಲುತ್ತಾರೆ. ರಝಾ ಅಹ್ಮದ್ ರಝಾ ಎಂಬ ಒಬ್ಬ ಪ್ರಾಧ್ಯಾಪಕರು ಹೇಳುತ್ತಾರೆ, ‘‘ನಾನು ಪಾಕಿಸ್ತಾನಿ ಭಾರತೀಯನು. ಬಲೂಚಿಸ್ತಾನದಿಂದ ಬಾಂಗ್ಲಾದೇಶದವರೆಗೆ ಭಾರತ ಒಂದೇ ಆಗಿದೆ.’’ ಏಕತ್ವದ ಈ ಭಾವನೆಯನ್ನು ಹಿಂಸಾಚಾರ ಮಾಡದೆಯೆ, ಯುದ್ಧ ಮಾಡದೆಯೆ ಬೆಳೆಸುವ ಬಗೆ ಹೇಗೆಂದು ಮುಂಬರುವ ಕಾಲದಲ್ಲಿ ವಿಶೇಷವಾಗಿ ಆಲೋಚಿಸಬೇಕು. ಹೀಗೆ ಆಲೋಚಿಸುವ ಕ್ಷಮತೆಯು ಫಾರುಖ್ ಅಬ್ದುಲ್ಲರಲ್ಲಿ ಇದೆಯೇ ಅಥವಾ ಇಲ್ಲವೇ ನನಗೆ ಗೊತ್ತಿಲ್ಲ, ಆದರೆ ಇತರರು ಆ ದೃಷ್ಟಿಯಿಂದ ಪ್ರಯತ್ನಿಸಲು ಅಡ್ಡಿಯೇನಿಲ್ಲ. ‘ಕಾಶ್ಮೀರವು ನಿನ್ನ ವಂಶದ ಆಸ್ತಿಯಲ್ಲ,ಇದು ಭಾರತದ ಅವಿಭಾಜ್ಯ ಅಂಗ.  ಇತರ ರಾಜ್ಯಗಳು ಹೇಗೆ ಭಾರತದ ಅಂಗಗಳಾಗಿ ನೆಮ್ಮದಿಯಿಂದ ಇವೆಯೋ, ಆ ಪದ್ಧತಿಯಿಂದಲೇ ನೀವು ಇರಲು ಕಲಿಯಿರಿ’ ಎಂದು ದೇಶವು ಅಬ್ದುಲ್ಲನಿಗೆ ಹೇಳುವ ಅವಶ್ಯಕತೆಯಿದೆ. ‘ಹಾಗೆ ಕಲಿಯದಿದ್ದರೆ ಒಂದು ಸಂಗತಿ ನೆನಪಿಡು, ಭಾರತೀಯ ಜನತೆಯ ಸಹನೆಗೂ ಮಿತಿಯಿದೆ, ಅದು ವಿಪರೀತಕ್ಕೆ ಹೋಗುವಷ್ಟು ಅದನ್ನು ಒಯ್ಯಬೇಡ.’

 

   

Leave a Reply