ಕಿರಿಯರ ಹಿರಿತನ

ಯಾದವ್ ರಾವ್ ಜೋಷಿ - 0 Comment
Issue Date :

ಇದಕ್ಕಿಂತಲೂ ಇನ್ನು ಸರ್ವೋಚ್ಚ ಆನಂದವು ಜೀವನದಲ್ಲಿ ಇನ್ನಾವುದಾದರೂ ಇರಲು ಸಾಧ್ಯವೇ? ಈ ದೃಶ್ಯವನ್ನು ನಾನು ಪ್ರತಿದಿನ ನೋಡುತ್ತಿದ್ದರೂ ಮನಸ್ಸಿನ ಸಮಾಧಾನವೆಂದೇನೂ ಆಗುವುದಿಲ್ಲ. ಬಾರಿ ಬಾರಿ ಅದನ್ನೇ ಚಿಂತಿಸುತ್ತ ಇರೋಣವೆಂದು ಅನಿಸುತ್ತದೆ. ಈ ಆನಂದವು ಅವರ್ಣನೀಯವಾಗಿದೆ, ಅನಿರ್ವಚನೀಯವಾಗಿದೆ.’

 ನಮ್ಮ ಬಸ್ಸು ಪ್ರಯಾಣವು ಸಾಗಿತ್ತು. ನಮ್ಮ ಸಾರಥಿಯು ಜನರಿಲ್ಲದ ಒಂದು ಸ್ಥಳದಲ್ಲಿ ಬಸ್ಸು ನಿಲ್ಲಿಸಿದನು. ತನ್ನ ಊಟದ ಒಂದು ದೊಡ್ಡ ಡಬ್ಬಿಯನ್ನು ಅವನು ತೆರೆದು ಒಂದು ದೊಡ್ಡ ಮರದ ಕೆಳಗೆ ಇಟ್ಟನು. ನೋಡುತ್ತಿರುವಂತೆಯೇ ಅನೇಕ ಮಂಗಗಳು ಅಲ್ಲಿಗೆ ಬಂದವು ಮತ್ತು ಕ್ಷಣಾರ್ಧದಲ್ಲಿ ಆ ಡಬ್ಬಿಯನ್ನು ಮುಗಿಸಿಬಿಟ್ಟವು. ಅನಂತರ ಕೆಲ ಹೊತ್ತುಗಳು ಸಾರಥಿಯೊಂದಿಗೆ ಆಟವಾಡಿದವು, ಮತ್ತು ಹೊರಟು ಹೋದವು. ಖಾಲಿಯಾದ ಡಬ್ಬಿಯನ್ನು ಸಾರಥಿಯು ತಂದು ತನ್ನ ಸ್ಥಾನದಲ್ಲಿ ಪುನಃ ಕುಳಿತನು ಮತ್ತು ಮೇಲಿನ ಉದ್ಗಾರಗಳನ್ನು ತೆಗೆದನು. ಅವನ ಮುಖ ಮುದ್ರೆಯಲ್ಲಿ ದೈವೀ ಸಮಾಧಾನವುವಿಲಸಿತಗೊಂಡಿತ್ತು. ಅವನ ಈ ಕ್ರಮವು ಎಷ್ಟೋ ವರ್ಷಗಳಿಂದ ಅಖಂಡವಾಗಿ ನಡೆದು ಬಂದಿತ್ತು. ಪ್ರವಾಸದ ಪ್ರಾರಂಭದಿಂದಲೇ ಆ ಸಾರಥಿಯು ನನ್ನ ಗಮನವನ್ನು ಸೆಳೆದುಕೊಂಡಿದ್ದನು. ಅವನ ವಯಸ್ಸು ಸುಮಾರು 60ರದಿರಬೇಕು. ಹಣೆಯಲ್ಲಿ ಕುಂಕುಮದ ದೊಡ್ಡ ತಿಲಕವಿದ್ದು ಸದಾ ಸರ್ವದಾ ಮುಖದಲ್ಲಿ ಮುಗುಳ್ನಗೆ ತುಂಬಿತ್ತು. ಯಾವುದೇ ಊರಿನಲ್ಲಿ ಬಸ್ ನಿಂತೊಡನೆ ಅವನ ಸುತ್ತಲೂ 5-25 ಬಾಲಕರು ಕೂಡುತಿದ್ದರು. ಅವರೆಲ್ಲರಿಗೂ ಆತನು ಏನಾದರೂ ತಿಂಡಿಕೊಡುತ್ತಿದ್ದ. ತಮ್ಮ ಚಿಕ್ಕ ದೊಡ್ಡ ಕೆಲಸಗಳನ್ನು ಆ ಬಾಲಕರು ಅವನಿಗೆ ಹೇಳುತಿದ್ದರು. ಊರಿನ ದೊಡ್ಡ ದೊಡ್ಡ ಜನರೂ ಸಹ ಅವನೊಡನೆ ಬಂದು ತಮ್ಮ ಕೆಲಸಗಳನ್ನು ಹೇಳುತ್ತಿದ್ದರು. ಕೆಲವರು ತರಕಾರಿಗಾಗಿ , ಇನ್ನೂ ಕೆಲವರು ಅಕ್ಕಿಗಾಗಿ ಹೀಗೆ ಅವನೊಡನೆ ಹಣ ಕೊಡುತ್ತಿದ್ದರು. ಸಾರಥಿಯೂ ಅವರ ಕೆಲಸಗಳನ್ನು ಪ್ರಸನ್ನ ಮುದ್ರೆಯಿಂದ ಕೇಳುವನು ಮತ್ತು ಆ ಊರಿಗೆ ಪುನಃ ಬರುವಾಗ ಅವುಗಳನ್ನು ಮಾಡಿಯೇ ಬರುತ್ತಿದ್ದನು. ಸರ್ವರೂ ಆತನನ್ನು ಅಜ್ಜಾಎಂದು ಸಂಬೋಧಿಸುವರು. ಅವನು ಎಲ್ಲರಿಗೂ ತನ್ನವನೆಂದು ತೋರುತ್ತಿತ್ತು. ಅತ್ಯಂತ ಸಾಮಾನ್ಯ ಮನುಷ್ಯ, ಆದರೆ ಹೃದಯದ ಸ್ನೇಹಾರ್ದತೆಯಿಂದ ನನಗೆ ಅವನು ಅಸಾಮಾನ್ಯನೆಂದು ತೋರಿತು!

***

ಇಂತಹುದೇ ಇನ್ನೊಂದು ಪ್ರಸಂಗ. ನಾನು ಕಲ್ಕತ್ತೆಯಿಂದ ಮದ್ರಾಸಿಗೆ ಬರುತ್ತಿದ್ದೆ. ನಮ್ಮ ಡಬ್ಬಿಯೊಳಗೆ 13-14 ವರ್ಷದ ಮೀಸೆಕುಡಿಯೂ ಹೊರಬರದ ಒಬ್ಬ ಬಾಲಕನು ಕೂತಿದ್ದನು. ಸ್ವಭಾವದಲ್ಲಿ ಶಾಂತ ಮತ್ತು ಹೆಚ್ಚು ಮಾತನಾಡದವನು….. ರಾತ್ರಿಯ ಹೊತ್ತಾದೊಡನೆ ನಾನು ಮಲಗಲೆಂದು ಮೇಲಿನ ಬರ್ತ್ (ಆಛ್ಟಿಠಿ) ಮೇಲೆ ಹೋದೆನು. ಯೋಗಾಯೋಗದಿಂದ ಆ ಬಾಲಕನೂ ಮಲಗಲೆಂದು ಬಂದನು. ಸಹಜವಾಗಿ ನಾನವನಿಗೆ ಅವನು ಯಾರು, ಎಲ್ಲಿಂದ ಬಂದ, ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಇತ್ಯಾದಿ ಸಾಮಾನ್ಯವಾದ ಪ್ರಶ್ನೆಗಳನ್ನು ವಿಚಾರಿಸಿದೆ ಮತ್ತು ನಾನು ನಿದ್ರೆ ಮಾಡಿದೆ.

 1- 2 ಘಂಟೆಗಳಲ್ಲಿ ಎಚ್ಚರವಾಯಿತು. ನಾನು ಎದ್ದು ನೋಡುತ್ತೇನೆ, ಆ ಬಾಲಕನು ಅಲ್ಲಿರಲೇ ಇ್ಲಲ! ಅವನ ಬದಲಿಗೆ ಅವನ ಜಾಗದಲ್ಲಿ ಒಬ್ಬ ಚೆನ್ನಾಗಿ ಬೆಳೆದ ಗಟ್ಟಿಮುಟ್ಟಿ, ಜೋರದಾರ್ ಮೀಸೆ ಇದ್ದ ಒಬ್ಬ ಸರದಾರ್‌ಜೀಅಸ್ತವ್ಯಸ್ತವಾಗಿ ಹರಡಿಕೊಂಡಿದ್ದನು. ಕೆಳಗೆ ನೋಡಿದರೆ ಆ ಬಾಲಕನು ಮಧ್ಯರಾತ್ರಿ ಒಂದು ಚಿಕ್ಕ ಸ್ಥಳದಲ್ಲಿ ಹೇಗಾದರೂ ಇದ್ದು ಎಚ್ಚರವಾಗಿಯೇ ಕೂತುಕೊಂಡದ್ದು ಕಂಡು ಬಂದಿತು. ಇದೇನು ಎಂದು ತಿಳಿದುಕೊಳ್ಳಲೆಂದು ನಾನು ಕೆಳಗಿಳಿದೆನು ಮತ್ತು ಅವನೊಡನೆ ಎಲ್ಲವನ್ನೂ ವಿಚಾರಿಸಿದೇನು. ಮೇಲೆ ಮಲಗಿದ ಸರ್ದಾರಜೀ ಶಾಲೆಯಲ್ಲಿ ಅವನಿಗೆ ಎನ್.ಸಿ.ಸಿ. ಶಿಕ್ಷಕರಾಗಿದ್ದಾರೆ. ಶಿಕ್ಷಕರು ಎಚ್ಚರದಿಂದಿದ್ದು ತಾನು ಅವರೆದುರು ಮಲಗಿರುವುದು ಅವನಿಗೆ ಪ್ರಶಸ್ತವೆನಿಸಲಿಲ್ಲ. ಆದುದರಿಂದ ಯಾವ ಕ್ಷಣದಲ್ಲಿ ಆ ಶಿಕ್ಷಕರು ಡಬ್ಬಿಯಲ್ಲಿರುವುದನ್ನು ತಾನು ಕಂಡೆನೋ ಆ ಕ್ಷಣವೇ ತನ್ನ ಜಾಗವನ್ನು ಅವರಿಗೆ ಬಿಟ್ಟುಕೊಟ್ಟೆ ಮತ್ತು ಕೆಳಗಿಳಿದು ಕುಳಿತುಕೊಂಡೆ ಎಂದು ಅವನು ಹೇಳಿದನು. ನನ್ನ ಮನಸ್ಸಿನಲ್ಲಿ ವಿಚಾರ ಚಕ್ರವು ಪ್ರಾರಂಭವಾಯಿತು. ಇಂದು ಎಲ್ಲಿ ನೋಡಿದರೂ ವಿದ್ಯಾರ್ಥಿಗಳಲ್ಲಿ ಶಿಸ್ತಿಲ್ಲ, ಶಿಕ್ಷಕರ ಬಗ್ಗೆ ಆದರವಿಲ್ಲ, ಎಂದು ಬೊಬ್ಬಾಟ ನಡೆದಿದೆ; ಆದರೆ ನಾನು ಕಣ್ಣಾರೆ ಕಂಡಿದ್ದು ಬೇರೆಯೇ ಆಗಿತ್ತು. 20ನೇ ಶತಮಾನದಲ್ಲಿ 1956ನೇ ವರ್ಷದಲ್ಲಿ , ಅದೂ ಸಹಾ ಮದ್ರಾಸಿನಂತಹ ದೊಡ್ಡ ನಗರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿ; ಆದರೂ ಅವನ ಮನಸ್ಸಿನಲ್ಲಿ ಶಿಕ್ಷಕರ ಬಗ್ಗೆ ಇಷ್ಟು ಕೃತಜ್ಞತಾ ಬುದ್ಧಿಯನ್ನು ಕಂಡು ನಾನು ಆಶ್ಚರ್ಯಚಕಿತನಾದೆ ! ‘ಸ್ವಂತಕ್ಕೆ ಕಷ್ಟವಾದರೂ ಚಿಂತೆಯಿಲ್ಲ, ಆದರೆ ಶಿಕ್ಷಕರಿಗೆ ತೊಂದರೆಯಾಗಲು ಬಿಡಲಾರೆ.’ ಈ ಬಗ್ಗೆ ಅವನು ಎಷ್ಟು ದಕ್ಷನಾಗಿದ್ದನು! ಇನ್ನು ವಯಸ್ಸು ನೋಡಿದರೋ 13 – 14 ವರ್ಷಗಳು ! ಆ ಬಾಲಕನ ಚಿಕ್ಕಮೂರ್ತಿ ಮತ್ತು ಆ ಪ್ರಸಂಗವು ಇನ್ನೂ ಹೇಗಿತ್ತೋ ಹಾಗೆಯೇ ಎದ್ದು ನಿಂತಿದೆ.

***

ಅನೇಕ ಜನರು ತಮ್ಮ ಸ್ವಾರ್ಥ ಸಾಧಿಸಲು ಸಂಘದ ಹೆಸರಿನ ದುರುಪಯೋಗವನ್ನು ಮಾಡುತ್ತಾರೆ. ಅನೇಕ ಕಡೆಗಳಲ್ಲಿ ಇಂತಹ ವಿಪರೀತ ಅನುಭವವು ಬಂದಿದೆ. ಇದನ್ನು ತಡೆಯಲೆಂದು ಪರಿಚಯ ಪತ್ರದ ಯೋಜನೆಯು ಹೊರಟಿತು. ಪರಿಚಯ ಪತ್ರವಿಲ್ಲದೆ ಯಾರಿಗೂ ಆಶ್ರಯ ಕೊಡಬಾರದೆಂದು ಸೂಚನೆಯನ್ನು ಸರ್ವತ್ರ ಕಳುಹಿಸಲಾಗಿತ್ತು. ಪ್ರವಾಸವು ನಡೆಯುತ್ತಿರುವಾಗಲೇ ನಾನೊಂದು ಊರಿಗೆ ಹೋದೆ. ಅಲ್ಲಿಯ ಕಾರ್ಯವಾಹರನ್ನು ಸಂಘದ ಹೆಸರು ಹೇಳಿ ಯಾರೋ ಮೋಸಗಾರನು ಮೋಸಮಾಡಿದ್ದಾನೆಂದು ಆಗ ನನಗೆ ತಿಳಿಯಿತು. ‘ ಪರಿಚಯ ಪತ್ರವಿಲ್ಲದೆ ನೀವು ಅವನಗೆ ಆಶ್ರಯವೇಕೆ ಕೊಟ್ಟಿರಿ? ಈ ಬಗ್ಗೆ ನಿಮಗೆ ಸೂಚನೆಗಳು ಬಂದಿದ್ದುವಲ್ಲವೇ? ’ ಎಂದು ನಾನು ಅವರಿಗೆ ಕೇಳಿದೆ. ಆ ಕಾರ್ಯವಾಹರು ನನಗೆ ಸೂಚನೆಗಳು ಗೊತ್ತಿದ್ದುವು. ಆದರೆ ನಾನು ತಿಳಿದೂ ಆತನಿಗೆ ಆಶ್ರಯವನ್ನು ಕೊಟ್ಟಿದ್ದೆನು. ನನ್ನ ಸ್ವಂತಕ್ಕೆ ಅದರಿಂದ 20-25 ರೂ.ಗಳ ನಷ್ಟವಾದುದು ಸತ್ಯವಾದರೂ ಅದರ ಬಗ್ಗೆ ನನಗೆ ದುಃಖವೆನಿಸುವುದಿಲ್ಲಎಂದು ಹೇಳಿದರು. ನಾನು ಉತ್ಸುಕತೆಯಿಂದ ಎಲ್ಲವನ್ನೂ ಕೇಳತೊಡಗಿದೆನು. ‘ಇಂದು ಸರ್ವತ್ರ ಸಮಾಜದಲ್ಲಿ ಪರಸ್ಪರರ ಬಗ್ಗೆ ಅವಿಶ್ವಾಸದ ಮತ್ತು ಸಂಶಯದ ದೂಷಿತ ವಾತಾವರಣವು ಹರಡಿದೆ. ಯಾರೂ ಯಾರ ಮೇಲೂ ಒಂದು ತೃಣದಷ್ಟೂ ವಿಶ್ವಾಸವಿಡಲು ಸಿದ್ಧರಿಲ್ಲ. ಇಂತಹ ವಾತಾವರಣದಲ್ಲಿಯೂ ವಿಶ್ವ ಪ್ರಯತ್ನ ಮಾಡಿ ಸಂಘವು ಸಂಘದ ಸ್ವಯಂಸೇವಕನೆಂದೊಡನೆ, ಅವನು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲಿಯವನೇ ಇರಲಿ, ಅವನನ್ನು ತನ್ನ ಸಹೋದರನಂತೆಯೇ ಭಾವಿಸಬೇಕು, ಅವನ ಸುಖದುಃಖಗಳಲ್ಲಿ ಸಮರಸವಾಗಬೇಕು, ಅವನ ಬಗ್ಗೆ ತನ್ನತನ ಇರಬೇಕು ಎನ್ನುವ ವಾತಾವರಣವನ್ನು ನಿರ್ಮಿಸಿದೆ. ಸಮಾಜಧಾರಣೆಗಾಗಿ ಈ ಗುಣಗಳ ನಿತಾಂತ ಅವಶ್ಯಕತೆ ಇದೆ. ಇದಿಲ್ಲದಿದ್ದರೆ ಸಮಾಜ ಜೇವನವು ಉಧ್ವಸ್ತಗೊಳ್ಳುವುದೆಂದು ನಮ್ಮ ಪಾಠವಾಗಿದೆ.’

 ಹೀಗಿರುವಾಗ ತಾನು ಸ್ವಯಂಸೇವಕನೆಂದು ಯಾರು ಹೇಳಿಕೊಳ್ಳುತ್ತಾನೋ ಅವನೊಡನೆ ಕೇವಲ ಪರಿಚಯ ಪತ್ರವಿಲ್ಲವೆಂಬ ಮಾತ್ರಕ್ಕೇ ಅವನನ್ನು ಅವಿಶ್ವಾಸಾರ್ಹನೆಂದು ಏಕೆ ಭಾವಿಸಬೇಕು? ಸಂಶಯದ ಮೇಲೆಯೇ ನಡೆಯುವುದೆಂದಾದರೆ ಪರಿಚಯ ಪತ್ರವನ್ನು ತರುವ ಎಲ್ಲವರೂ ಒಳ್ಳೆಯವರೇ ಇರುವರೆಂದು ಹೇಗೆ ಹೇಳಲು ಸಾಧ್ಯ? ಕೃತ್ರಿಮ ಪರಿಚಯ ಪತ್ರವನ್ನು ಮಾಡಲು ಆಗುವುದಿಲ್ಲವೇ? ‘ಸ್ವಯಂಸೇವಕನು ನನ್ನ ಸ್ವಂತ ತಮ್ಮ ಇನ್ನು ,ಅವನೊಡನೆ ಪರಿಚಯಪತ್ರವಿರಲಿ, ಇಲ್ಲದಿರಲಿಯಾವ ಈ ಭಾವನೆಯನ್ನು ನಾವು ಮಹತ್ವ್ರಯಾಸದಿಂದ ನಿರ್ಮಾಣ ಮಾಡಿದ್ದೇವೋ ಅದನ್ನು ಏನಾದರೂ ಮಾಡಿ ರಕ್ಷಿಸಲೇಬೇಕು. ಮತ್ತು ಅದಕ್ಕಾಗಿ ಸ್ವಲ್ಪ ಕಳಕೊಳ್ಳಬೇಕಾದರೂ ಆಗಲಿ. ಅದಕ್ಕಾಗಿ ದುಃಖಿಸಬೇಕಾದ ಕಾರಣವಿಲ್ಲ. ವೈಯಕ್ತಿಕ ಜೀವನದಲ್ಲಿ ನಮಗೇನು ಕಡಿಮೆ ಪೆಟ್ಟುಗಳು ಬೀಳುತ್ತಿವೆಯೇ? ವಿಶ್ವಾಸಾರ್ಹ ಜನರಿಂದ, ಅತಿ ಸಮೀಪದ ಆಪ್ತರಿಂದಲೂ ಅನೇಕ ಬಾರಿ ವಿಶ್ವಾಸಘಾತವಾಗುವುದೆಂದು ಎಲ್ಲರ ಬಗ್ಗೆಯೂ ಸಂಶಯ ಪಿಶಾಚಿಯನ್ನು ನಾವು ಎಂದಾದರೂ ತಾಳಿದ್ದೆವೇ? ಮತ್ತು ಹಾಗಾದರೆ ಜೀವನಕ್ಕೆ ಅರ್ಥವೇನೂ ಇರಲಾರದು. ಅದುದರಿಂದ ಈ ಪಾರಿವಾರಿಕ ಪ್ರೇಮದ ಭಾವನೆಯನ್ನೇ ವಿಶಾಲಗೊಳಿಸುತ್ತ ಕೊನೆಗೆ ಅದು ಸಮಾಜವ್ಯಾಪ್ತಗೊಳ್ಳಬೇಕು ಇದೇ ನಮ್ಮ ಕಾರ್ಯದ ಮೂಲ ಪ್ರೇರಣೆಯಲ್ಲವೇ?’ ಮೇಲಿನ ಯುಕ್ತಿವಾದದಿಂದ ನಾನು ಸುಮ್ಮನಾದೆ. ಒಂದು ಚಿಕ್ಕ ಊರಿನ ಓರ್ವ ಸಾಮಾನ್ಯ ಸ್ವಯಂಸೇವಕನಿಂದ ಕೂಡಾ ಎಷ್ಟು ಅಸಾಮಾನ್ಯ ವಿಚಾರವು ನನಗೆ ಲಭಿಸಿತು!

***

ದೊಡ್ಡವರ ಚಿಕ್ಕ ಚಿಕ್ಕ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬುದು ಸರ್ವಸಾಮಾನ್ಯವಾಗಿ ಜನಸಾಮಾನ್ಯರ ಪ್ರವೃತ್ತಿಯಾಗಿರುತ್ತದೆ. ಅಸಾಮಾನ್ಯರಾರಿರುತ್ತಾರೋ ಅವರ ಸಾಮಾನ್ಯ ಜೀವನವು ಹೇಗಿರುತ್ತದೆಂಬುದನ್ನು ತಿಳಿಯಬೇಕು ಎಂಬ ಉತ್ಸುಕತೆ ಎಲ್ಲರಿಗೂ ಇರುತ್ತದೆ. ಕೆಲವು ತಿಂಗಳುಗಳ ಹಿಂದೆ ಇಲ್ಲಿ ಬುಲ್ಗಾನಿನ್ ಬಂದು ಹೋದರು. ಆಗ ವೃತ್ತ ಪತ್ರಗಳಲ್ಲಿ ಅವರ ಬಗ್ಗೆ ಅತಿ ಚಿಕ್ಕ ಚಿಕ್ಕ ವಿಷಯಗಳ ಅದೆಷ್ಟೋ ರಸಭರಿತ ವರ್ಣನೆಗಳು ಬರುತ್ತಿದ್ದವು. ಮತ್ತು ಜನರೂ ಎಷ್ಟೋ ಉತ್ಸುಕತೆಯಿಂದ ಅದನ್ನು ಓದುತ್ತಿದ್ದರು; ಅವನು ಗಡ್ಡದ ಉದ್ದಳತೆ ಎಷ್ಟಿದೆ, ಇವುಗಳ ಮೇಲೆಯೇ ಎಲ್ಲ ಗಮನವೂ ಕೇಂದ್ರಿತವಾಗಿದೆಯೋ ಎಂಬಂತೆ! ಮಹಾತ್ಮಾಜೀ ಅಥವಾ ಜವಾಹರಲಾಲರ ಬಗ್ಗೆಯೂ, ಅವರ ಚಿಕ್ಕ ಚಿಕ್ಕ ಸಂಗತಿಗಳ ಬಗ್ಗೆ ಇಂದಿಗೂ ಜನರಲ್ಲಿ ಅದೆಷ್ಟು ಉತ್ಸುಕತೆ ಇದೆ!

 ಆದರೆ ನನ್ನ ಸ್ವತಃ ನೋಡುವ ದೃಷ್ಟಿಯು ಸ್ವಲ್ಪ ಭಿನ್ನವಿದೆ, ಬೇರೆಯೇ ಆಗಿದೆ. ಯಾರು ಚಿಕ್ಕ ಚಿಕ್ಕವರಿದ್ದಾರೋ ಅವರೊಳಗಿನ ದೊಡ್ಡತನ, ಕಿರಿಯರೊಳಗಿನ ಹಿರಿತನ ನೋಡುವ ಪ್ರಯತ್ನವು ನನ್ನದಾಗಿರುತ್ತದೆ. ಸಾಮಾನ್ಯರೊಳಗಿನ ಅಸಾಮಾನ್ಯತೆಯ ದರ್ಶನವಾಗುತ್ತಿರುವಾಗ ನನಗೆ ಪರಮಾನಂದವೆನಿಸುತ್ತದೆ. ದೊಡ್ಡವರ ಚಿಕ್ಕ ಚಿಕ್ಕ ಸಂಗತಿಗಳನ್ನು ತಿಳಿಯುವುದರಿಂದ ಮನಸ್ಸಿಗಾಗುವ ಅವರ್ಣನೀಯ ಸಮಾಧಾನಕ್ಕಿಂತ ಅದೆಷ್ಟೋ ಪಾಲು ಹೆಚ್ಚು ನನಗೆ, ಕಿರಿಯರೊಳಗಿನ ಹಿರಿತನವನ್ನು ಕಾಣುವಾಗ, ಅನುಭವಿಸುವಾಗ ಲಭಿಸುತ್ತದೆ. ಜನತೆಯಲ್ಲಿನ ಜನಾರ್ದನ, ನರರೊಳಗಿನ ನಾರಾಯಣ, ಮತ್ತು ಪತಿತರೊಳಗೂ ಪಾವನ ತೋರುವುದೆಂದರೆ ಅದೆಷ್ಟು ಮಹದ್ಭಾಗ್ಯ! ಸಮಾಜದೊಳಗಿನ ಅತಿ ಕೆಳಗಿನಮಟ್ಟದವನೆಂದು ಗಣಿಸಲಾದ ಮೋಟರ್ ಡ್ರೈವರ್ಆದರೆ ಅವನ ಅಂತಃಕರದೊಳಗಿನ ಸರ್ವಭೂತಹಿತೇ ರತಃಪಶು ಪ್ರಾಣಿಗಳ ಮೇಲೂ ತನ್ನಂತೆಯೇ ಪ್ರೀತಿಸುವ ಅವನ ಮಹಾನತೆ; 13-14 ವರ್ಷದ ಎಳೇ ಮಗು, ಆದರೆ ಸ್ವತಃ ಕಷ್ಟ ಪಟ್ಟಾದರೂ ಶಿಕ್ಷಕನಿಗೆ ವಿಶ್ರಾಂತಿ ಸಿಗಲೆಂದು ಸತತ ಪ್ರಯತ್ನ ಮತ್ತು ತೊಂದರೆ ಸಹಿಸುವ ಆ ಬಾಲಕನ ಉದಾರ ಹೃದಯ; ಸ್ವಯಂಸೇವಕನೆಂದನೇ ಸರಿ, ಆತನು ತನ್ನ ಸ್ವಂತ ತಮ್ಮ ಇನ್ನು, ಅದಕ್ಕಾಗಿ ಬೇಕಾದಷ್ಟು ನಷ್ಟ ಸಹಿಸಬೇಕಾದರೂ ಚಿಂತೆ ಇಲ್ಲ ಈ ಮಹಾನ್ ತತ್ವದ ಸಾಕ್ಷತ್ ದರ್ಶನವು ಯಾರ ಜೀವನದಲ್ಲಿ ಪ್ರತಿಬಿಂಬಿತವಾಗಿದೆಯೋ ಆ ಚಿಕ್ಕ ಊರಿನ ಶಾಖೆಯ ಒಬ್ಬ ಕಾರ್ಯವಾಹ; ಇವು ಮತ್ತು ಇಂತಹುದೇ, ಜೀವನದಲ್ಲಿ ಘಟಿಸುವ ಅನೇಕ ದೃಶ್ಯಗಳು ನನ್ನ ಗಮನವನ್ನು ಸೆಳೆದುಬಿಡುತ್ತದೆ! ಪ್ರವಾಸದಲ್ಲಿರುವಾಗ ಇಂತಹ ಅನಂತ ಉದಾಹರಣೆಗಳು ಪ್ರತ್ಯಕ್ಷ ಅನುಭವಕ್ಕೆ ಬರುತ್ತಿದ್ದು, ಮನಸ್ಸು ಅವುಗಳಿಗೆ ಸೋತು ಹೋಗುತ್ತಿದೆ. ಮತ್ತು ತನ್ನ ಜೀವನದಲ್ಲೂ ಭವ್ಯತೆ , ಉದಾತ್ತತೆ, ಔದಾರ್ಯ ಬರಬೇಕು ಎಂಬ ಇಚ್ಛೆಯು ಉತ್ಕಟವಾಗಿದ್ದರೆ ನಾವು ಸದಾ ಸರ್ವದಾ ಕಣ್ತೆರೆದುಕೊಂಡಿದ್ದು ಈ ಚಿಕ್ಕವರ ದೊಡ್ಡತನ, ಕಿರಿಯರ ಹಿರಿತನ, ಸಾಮಾನ್ಯರೊಳಗಿನ ಅಸಾಮಾನ್ಯತ್ವ ಇವುಗಳ ಅವಿರತ ಅವಲೋಕನ ಮಾಡುತ್ತ ಇರಬೇಕೆಂಬ ಒಂದು ವಿಚಾರವು ಸಹಜವಾಗಿ ಬರುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿ ಆತ್ಮ ವಿಶ್ವಾಸವು ನಿಶ್ಚಿತವಾಗಿ ನಿರ್ಮಾಣಗೊಂಡು ನೋಡು ನೋಡುತ್ತಿರುವ ಹಾಗೆಯೇ ನಮ್ಮ ಜೀವನವೂ ಭವ್ಯ, ಉದಾತ್ತ, ಮತ್ತು ಉತ್ತುಂಗವಾದೀತು. ಇದರ ಬದಲಿಗೆ ಕೇವಲ ವಿಭೂತಿಗಳ ಚಿಕ್ಕ ಚಿಕ್ಕ ವಿಷಯಗಳ ಕಡೆಗೇ ನಾವು ಲಕ್ಷ ಕೊಡುತ್ತ ನಿಂತರೆ ನ ದೇವ ಚರಿತಂ ಚರೇತ್ಎಂಬ ನ್ಯಾಯದಂತೆ ಅವರದಂತೂ ನಮ್ಮಲ್ಲಿ ಅವತರಿಸಲಾರದು, ಆದರೆ ಕ್ಷುದ್ರ ಸಂಗತಿಗಳೇ ನಮ್ಮಲ್ಲಿ ಬರಬಹುದು. ಲೋಕಮಾನ್ಯರ ಗಂಭೀರತೆ, ಪ್ರಸಂಗಾವಧಾನತೆ, ಉತ್ಕಟ ದೇಶಭಕ್ತಿಯಂತಹ ಅನೇಕ ಲೋಕೋತ್ತರ ಗುಣಗಳನ್ನು ಸ್ವಜೀವನದಲ್ಲಿ ತರುವುದು ಅನೇಕರಿಗೆ ಕಠಿಣವಾಗಿ ಹೋಯಿತು; ಆದರೆ ಅವರ ಸುಪಾರಿಯು ಮಾತ್ರ ಅನೇಕರ ಜೀವನದೊಳಗೆ ಪ್ರವೇಶ ಮಾಡಿತು; ಇದು ಸರ್ವ ವಿದಿತವೇ ಆಗಿದೆ. ಆದುದರಿಂದ ನಾವು ಒಂದೇ ನಿಶ್ಚಯ ಮಾಡೋಣ ಅದೆಂದರೆ ನಾವು ನರರೊಳಗಿನ ನಾರಾಯಣ, ಜನತೆಯೊಳಗಿನ ಜನಾರ್ದನ, ಮತ್ತು ಪತಿತರೊಳಗಿನ ಪಾವನರ ದರ್ಶನ ಪಡೆಯೋಣ ಮತ್ತು ನಾವೂ ನಾರಾಯಣ, ಜನಾರ್ದನ ಮತ್ತು ಪಾವನರಾಗೋಣ.

1956

   

Leave a Reply