ಕುಟುಂಬವೇ ಸಮಾಜದ ಹಾಗೂ ರಾಷ್ಟ್ರದ ಆಸ್ತಿ ಮತ್ತು ಶಕ್ತಿ

ಲೇಖನಗಳು - 0 Comment
Issue Date :

-ಮಹದೇವಯ್ಯ ಕರದಳ್ಳಿ

ಭಾರತದ ಅಂತಃಸತ್ವ ಪಾರಿವಾರಿಕ ಸಂಬಂಧಗಳಲ್ಲಿದೆ. ಮನೆಯ ಸುರಕ್ಷತೆಗೆ ಭದ್ರತೆಗೆ ಆಧಾರಸ್ತಂಭಗಳು ಇದ್ದಂತೆ ಸಾಮಾಜಿಕ ಸಾಮರಸ್ಯಕ್ಕೆ, ಏಕತೆಗೆ, ರಾಷ್ಟ್ರೀಯ ಸುರಕ್ಷತೆಯ ಆಧಾರಸ್ತಂಭ ಭಾರತೀಯ ಕುಟುಂಬಗಳು ಎನ್ನಬಹುದು. ಅವಿಭಕ್ತ ಕುಟುಂಬಗಳು ಕ್ರೀಯಾಶೀಲವಾಗಿದ್ದಾಗ ಸ್ವಉದ್ಯೋಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಹಂಬಲ ಇತ್ತು. ವಿವಿಧ ಮತ ಪಂಥ ಪಂಗಡಗಳ ಸಮಾಜಗಳು ಪರಸ್ಪರ ಪೂರಕವಾಗಿದ್ದವು. ಹಿರಿಯರ, ಮಕ್ಕಳ, ವಿಧವೆಯರ, ಅಸಹಾಯಕರ, ಅನಾರೋಗ್ಯವಂತ ಸದಸ್ಯರ ಯೋಗಕ್ಷೇಮ ಕುಟುಂಬದ ಜವಾಬ್ದಾರಿಯಾಗಿದ್ದರಿಂದ ಎಲ್ಲರಿಗೂ ಸುರಕ್ಷೆಯಿತ್ತು. ಮನೆ ಮಂತ್ರಾಲಯವಾಗಿತ್ತು. ಮೊದಲ ಪಾಠಶಾಲೆಯಾಗಿತ್ತು. ತಾಯಿತಂದೆಗಳು ಮೊದಲ ಶಿಕ್ಷಕರಾಗಿದ್ದರು. ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿತ್ತು. ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಮಾಮ, ಮಾಮಿ ಸೇರಿದಂತೆ ಮಗು ನಮ್ಮದೆಂದು ಭಾವಿಸುವ 5-6 ಶಿಕ್ಷಕರು ಅವಿಭಕ್ತ ಕುಟುಂಬದಲ್ಲಿ ಇರುತ್ತಿದ್ದರು. ಅಕ್ಷರ ಕಲಿಯುವುದಕ್ಕಿಂತ ಪೂರ್ವದಲ್ಲೇ ಮಗು ಬದುಕಿಗೆ ಅವಶ್ಯಕವಾದ, ಪ್ರಕೃತಿಪೂರಕ ಶಿಕ್ಷಣನ್ನು ಸಾಂದರ್ಭಿಕವಾಗಿ ಮತ್ತು ಅನೌಪಚಾರಿಕ ಶಿಕ್ಷಣ ರೂಪದಲ್ಲಿ ಕುಟುಂಬದ ಅನ್ಯಾನ್ಯ ಸದಸ್ಯರಿಂದ ಪಡೆಯುತ್ತಿತ್ತು.

ಅವಿಭಕ್ತ ಕುಟುಂಬದ ಮಗುವಿನ ವ್ಯವಹಾರ ಜ್ಞಾನ, ಐಕ್ಯೂ ಹೆಚ್ಚಿನ ಮಟ್ಟದಲ್ಲಿ ಇರುತ್ತಿತ್ತು. ವ್ಯಕ್ತಿಹಿತಕ್ಕಿಂತ ಕುಟುಂಬದ ಹಿತಶ್ರೇಷ್ಠ ಎನ್ನುವ ಭಾವನೆ, ಮುಂದೆ ವ್ಯಕ್ತಿಹಿತಕ್ಕಿಂತ ಸಮಾಜ ಹಿತ, ರಾಷ್ಟ್ರಹಿತ ಶ್ರೇಷ್ಠ ಎನ್ನುವ ಭಾವನೆ ಮೂಡಿಸುತ್ತಿತ್ತು. ಆಂಗ್ಲ ಮಾಧ್ಯಮ ಶಿಕ್ಷಣ, ಪಾಶ್ಚಾತ್ಯ ಚಿಂತನೆಯನ್ನು ಶ್ರೇಷ್ಠ ಎಂದು ಬಿಂಬಿಸುವವರಿಂದಾಗಿ ಜವಾಬ್ದಾರಿರಹಿತ, ಭೋಗಲಾಲಸೆಯ ಜೀವನ ಆರಂಭವಾಯ್ತು.

 ಗಿಳಿಪಾಠದಂತೆ ಶಬ್ದಗಳನ್ನು ಬಾಯಿಪಾಠ ಮಾಡಿಸುವ ಶಿಕ್ಷಣ ಶ್ರೇಷ್ಠ ಅನ್ನಿಸತೊಡಗಿತು. ಅಂಕ ಆಧಾರಿತ ಶಿಕ್ಷಣದಿಂದಾಗಿ ಮಗುವಿನ ವಿಕಾಸಕ್ಕೆ ಬೇಕಾದ ಸಾಹಿತ್ಯ, ಸಂಗೀತ, ಕಲೆ, ಆಟ ಮತ್ತಿತರ ಸಂಗತಿಗಳು ಗೌಣವಾಗತೊಡಗಿದವು.

 ಕೌಟುಂಬಿಕ ಹಿತಕ್ಕಿಂತ ವ್ಯಕ್ತಿಹಿತ ಶ್ರೇಷ್ಠವಾಯ್ತು. ಸ್ವಾರ್ಥಕ್ಕಾಗಿ ಅವಿಭಕ್ತ ಕುಟುಂಬಗಳು ವಿಘಟನೆಯಾಗಿ, ವಿಭಜನೆಗೊಂಡು ವಿಭಕ್ತ, ನ್ಯೂಕ್ಲಿಯರ್ ಕುಟುಂಬಗಳ ಜನನಕ್ಕೆ ದಾರಿ ಮಾಡಿಕೊಟ್ಟಿತು. ಸಂಬಂಧ ಹಳಸಲು ಕಾರಣವಾಗುವ ಮಾಧ್ಯಮಗಳಲ್ಲಿನ ಧಾರಾವಾಹಿಗಳಿಂದಾಗಿ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಮತ್ತು ಸಾಮಾಜಿಕ ಸಾಮರಸ್ಯ ಹದಗೆಡುತ್ತಿದೆ. ಕೌಟುಂಬಿಕ ರೂಢಿಗತ ಪಾರಂಪರಿಕ ಆಚರಣೆಗಳು, ಸತ್ ಸಂಸ್ಕಾರಗಳು ಮರೆಯಾಗತೊಡಗಿದವು. ರಾಷ್ಟ್ರೀಯತೆಯನ್ನು ಪೋಷಿಸುತ್ತಿದ್ದ ನಾಗರಿಕತೆಯನ್ನು ಅನಾಗರಿಕ ಪ್ರವೃತ್ತಿ ಎಂದು, ಶ್ರೇಷ್ಠವಾದ ಸಂಸ್ಕಾರ ನೀಡುವ ಗೃಹಸ್ಥ ಜೀವನವನ್ನು ಕನಿಷ್ಠ ಎಂದು ಬಿಂಬಿಸಲಾಗುತ್ತಿದೆ. ಅತಿಥಿಸತ್ಕಾರ, ದಾನಧರ್ಮ ಮಾಡುವ, ದಾಸೋಹ ನಡೆಸುವ, ಹಿರಿಯರಿಗೆ ಗೌರವ, ಕಿರಿಯರಲ್ಲಿ ಪ್ರೀತಿ ತೋರಿಸುವ, ದೇವರಲ್ಲಿ ಶ್ರದ್ಧೆಯುಳ್ಳ, ಅಕ್ಕಪಕ್ಕದ ಮನೆಯವರ ಜೊತೆ ಅಣ್ಣ, ಅಕ್ಕ ಎಂದು ಸಂಬಂಧ ಜೋಡಿಸುವ ಪದ್ಧತಿಗಳಿಗೆ ಎಳ್ಳುನೀರು ಬಿಡಲಾಗುತ್ತಿದೆ.

 ಇವೆಲ್ಲದರಿಂದ ಕುಟುಂಬ ಪದ್ಧತಿಯನ್ನು ರಕ್ಷಿಸಿ, ಬೆಳೆಸುವ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಭಾರತ ಭಾರತವಾಗಿ ಉಳಿಯುವಲ್ಲಿ ಕುಟುಂಬ ಬಹು ಮಹತ್ತರ ಪಾತ್ರವಹಿಸುತ್ತದೆ. ಭಾರತೀಯರಿಗೆ ಕುಟುಂಬವಿಲ್ಲದೆ ಬದುಕಿಲ್ಲ. ಭವಿಷ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎನ್ನುವಂತೆ ಮಕ್ಕಳು ಕುಟುಂಬದ ಮತ್ತು ದೇಶದ ಆಸ್ತಿಯಾಗಲು ವಾರದಲ್ಲಿ ಒಂದು ನಿಗದಿತ ದಿನ ದೇವಸ್ಥಾನಕ್ಕೆ, ಪುರಾಣ, ಕೀರ್ತನೆ, ಪ್ರವಚನಗಳು ನಡೆವಲ್ಲಿ, ಸತ್ಸಂಗಗಳಿಗೆ ಕರೆದುಕೊಂಡು ಹೋಗಬೇಕು. ವರ್ಷದಲ್ಲಿ 2-3 ಸಲ ನೆಪ ಮಾಡಿಕೊಂಡು ಹಬ್ಬ ಹರಿದಿನ, ಜಾತ್ರೆ ಮುಂತಾದ ಪವಿತ್ರ ದಿನಗಳಲ್ಲಿ ಪರಿವಾರದವರೆಲ್ಲ ಒಂದೆಡೆ ಸೇರಬೇಕು. ಓದಿನ ಒತ್ತಡ ಎಷ್ಟೇ ಇದ್ದರೂ ರಜಾದಿನಗಳಲ್ಲಿ ಹತ್ತಿರದ ಸಂಬಂಧಿಕರ ಮನೆಗಳಿಗೆ ಕಳಿಸಬೇಕು. ವರ್ಷದಲ್ಲಿ ಒಂದೆರಡು ಸಲ ನಮ್ಮ ಗ್ರಾಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು.

 ಪರಿವಾರದವರ ನಡುವೆ ಸಾಮೀಪ್ಯ ಹೆಚ್ಚಿದಷ್ಟು ಸಂಬಂಧದ ಬಳ್ಳಿ ಬೆಳೆಯುತ್ತದೆ, ಹರಡುತ್ತದೆ. ಮಕ್ಕಳನ್ನೆ ಆಸ್ತಿ ಎಂದು ಭಾವಿಸೋಣ. ಆಟ ಆಡಿ ಆಯಾಸವಾದಾಗ ಓಡೋಡಿ ತಾಯಿ ತೊಡೆಯ ಮೇಲೆ ಮಲಗುವ ಹಂಬಲ ಮಗುವಿಗಾಗಬೇಕು. ತಾಯಿ ಮಗುವಿನ ಹಣೆಯ ಬೆವರ ಹನಿ ಒರೆಸಿ ಅಪ್ಪಿಕೊಳ್ಳಬೇಕು. ಹಾಡು ಹೇಳುತ್ತ, ಪಶು -ಪಕ್ಷಿಗಳನ್ನು, ಗಿಡಗಳನ್ನು, ಚಂದಿರನನ್ನು ತೋರಿಸುತ್ತ ಉಣಿಸಬೇಕು. ಲಾಲಿ ಹೇಳಿ ಮಲಗಿಸಬೇಕು. ಬಿದ್ದಾಗ ಕೈಹಿಡಿದು ಎತ್ತಲು, ಕೈಹಿಡಿದು ನಡೆಸಲು ಮಗ್ಗುಲಲ್ಲಿ ತಂದೆ ಇರಬೇಕು. ಮಕ್ಕಳು ಬಾಲ್ಯದಲ್ಲಿ ಹಾಕುವ ತಪ್ಪು ಹೆಜ್ಜೆಗಳನ್ನು, ತೊದಲ್ನುಡಿಗಳನ್ನು ಸಂತೋಷದಿಂದ ಆಲಿಸುವ, ಆನಂದಿಸುವ ಪಾಲಕರು ಮಕ್ಕಳ ಎದುರಿಗೆ ಇರಬೇಕು. ಹಣದಿಂದ ಖರೀದಿಸಲಾಗದ ಆನಂದವನ್ನು ನೀಡುವ ಮಕ್ಕಳ ಬಾಲ್ಯವನ್ನು ಪಾಲಕರು ಪರರಿಗೆ ಒಪ್ಪಿಸಬಾರದು. ಬಾಲ್ಯ ಬಾಡಲು ಬಿಡಬಾರದು.

 ಬದುಕಿಗೆ ಭದ್ರತೆ ನೀಡುವ ನಾವೆಲ್ಲ ಒಂದೇ ಪರಿವಾರದವರು ಎಂಬ ಭಾವನೆ ಮಕ್ಕಳಲ್ಲಿ ಬೆಳೆಸಲು ನಿರಂತರ ಪ್ರಯತ್ನಿಸಬೇಕು. ಕುಟುಂಬ ಪ್ರಬೋಧನ’ ಎನ್ನುವ ಹೆಸರಿನಲ್ಲಿ ಕೌಟುಂಬಿಕ ಜಾಗೃತಿ ಕಾರ್ಯಕ್ರಮಗಳು ಆರಂಭವಾಗಿವೆ, ಭಾಗವಹಿಸಿ ಬೆಂಬಲಿಸೋಣ. ಮಕ್ಕಳ ಕ್ರಿಯಾಶೀಲತೆ ಬೆಂಬಲಿಸುವುದರ ಜೊತೆಯಾಗಿ, ಅವರಲ್ಲಿ ಕುಟುಂಬದ ಸದಸ್ಯರ ಬಗ್ಗೆ ಗೌರವ, ಪ್ರೀತಿ ಅಭಿಮಾನ ಮೂಡಿಸಬೇಕು. ಗಿಡಕ್ಕೆ ನೀರೆರೆದು ಪೋಷಿಸಿ ಮರವಾಗಿ ಬೆಳೆಸುವಂತೆ ಹಿರಿಯರಾದವರೆಲ್ಲರೂ ಪ್ರಯತ್ನಪೂರ್ವಕವಾಗಿ ಅಮೂಲ್ಯವಾದ ಕೌಟುಂಬಿಕ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ. ಭವ್ಯ ಭಾರತದ ಆಧಾರ ಸ್ತಂಭವಾದ, ಸಮಾಜದ ನಿಜವಾದ ಆಸ್ತಿ ಮತ್ತು ಶಕ್ತಿಯಾದ ಕುಟುಂಬ ಸಂಸ್ಕೃತಿ ಚಿರಸ್ಥಾಯಿ ಆಗುವಂತೆ ರಕ್ಷಿಸೋಣ. ಆಗ ಸಮಾಜದಲ್ಲಿ ಸಾಮರಸ್ಯ ವಿಕಾಸದ ಚಿಂತನೆ ಮೂಡುತ್ತವೆ. ದೇಶದ ಸಮಗ್ರವಿಕಾಸಕ್ಕೆ ದೃಢವಾದ ಹೆಜ್ಜೆಯಿಟ್ಟಂತೆ ಆಗುತ್ತದೆ.

   

Leave a Reply