ಕೃಷಿ ಅಭಿವೃದ್ಧಿಗೆ ತಾತ್ಸಾರ ಸರಿಯಲ್ಲ

ಕೃಷಿ - 0 Comment
Issue Date : 30.12.2013

ರಾಜ್ಯದ ಕೃಷಿಕ ಶ್ರಮಜೀವಿ. ದಣಿವರಿಯದ ದುಡಿಮೆಗಾರ. ವರ್ಷದಲ್ಲಿ 365ದಿನ ವಿರಾಮವಿಲ್ಲದೆ ದುಡಿಯುವ ಧೀಮಂತ. ಬಿಸಿಲು, ಮಳೆ, ಛಳಿಯೆನ್ನದೆ ಕೃಷಿಕಾರ್ಯ ನಿರ್ವಹಿಸಬೇಕು. ದುಡಿಮೆಯಲ್ಲಿ ಲಾಭವಿಲ್ಲದೆ ಪ್ರತಿ ವರ್ಷ ಸಾಲ ಮಾಡಲೇಬೇಕು. ಸಹಕಾರಿ ಸಾಲ ಸಾಕಷ್ಟು ಸಿಗದೆ ಹಾಗೂ ಎಷ್ಟೂ ಸಿಗದೆ ಸಾಹುಕಾರಿ ಸಾಲಕ್ಕೆ ಹೆಚ್ಚಿನ ಬಡ್ಡಿಕೊಟ್ಟು ಮೊರೆ ಹೋಗಲೇಬೇಕು. ಕೃಷಿಕನ ಸೇವೆ ಅಗತ್ಯ ಹಾಗೂ ಅನನ್ಯ. ರಾಜ್ಯದ 6.11ಕೋಟಿ ಜನತೆಗೆ ಆಹಾರಧಾನ್ಯ, ಎಣ್ಣೆ ಕಾಳು, ಧಾನ್ಯ, ಸಕ್ಕರೆ, ಹಾಲು ಇತ್ಯಾದಿ ಏನೆಲ್ಲ ಪೂರೈಸಲೇಬೇಕು. ಬಟ್ಟೆಬರೆಗಾಗಿ ಹತ್ತಿ ಬೆಳೆಯಲೇಬೇಕು. ಸಕ್ಕರೆಗಾಗಿ ಕಬ್ಬು ಬೆಳೆಯಲೇಬೇಕು. ಉಪಯೋಗಿಸಲು ಬೇಕಾದ ಹಾಲನ್ನು ಉತ್ಪಾದಿಸಬೇಕು. ಊಟಕ್ಕೆ ಬೇಕಾದ ತರಕಾರಿಗಾಗಿ ವಿವಿಧ ತರಕಾರಿ ಬೆಳೆಯಲೇಬೇಕು. ಹೀಗೆ ರೈತನ ದುಡಿಮೆ ಎಲ್ಲರಿಗೂ ಅತ್ಯವಶ್ಯಕವಾಗಿದೆ. ರೈತನ ವ್ಯವಸಾಯಕ್ಕಾಗಿ ಗೊಬ್ಬರ, ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಹು ದುಬಾರಿಯಲ್ಲಿ ಕೊಳ್ಳಲೇಬೇಕು. ಕೃಷಿ ಕಾರ್ಮಿಕರಿಗೆ ದುಬಾರಿ ಕೂಲಿ ಕೊಡಲೇಬೇಕು. ಈ ಎಲ್ಲವನ್ನು ಎದುರಿಸಿ ವಿವಿಧ ವಕ್ಕಲುತನ ಪಸಲನ್ನು ಬೆಳೆಯಲೇಬೇಕು. ಕೃಷಿ ಉತ್ಪನ್ನ ಮಾರಾಟದಿಂದ ಬಂದ ಆದಾಯ ವೆಚ್ಚಕ್ಕೆ ಸಾಲದು. ಜೀವನ ನಡೆಸುವುದೇ ಕಷ್ಟಕರ. ಪಡೆದ ಸಾಲ ಸಾಲದು. ಹೆಚ್ಚಿನ ಸಾಲಕ್ಕಾಗಿ ವಿವಿಧ ಮೂಲಗಳತ್ತ ಮೊರೆಹೋಗಲೇಬೇಕು. ರೈತನ ಕಷ್ಟನಷ್ಟಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿ ಹಾಗೂ ಅವನ ಅರ್ಥಿಕ ಅಭಿವೃದ್ಧಿಗಾಗಿ ಪ್ರತಿವರ್ಷ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಅನೇಕ ಉದಾತ್ತ ಯೋಜನಾ ಕಾರ್ಯಕ್ರಮಗಳನ್ನು ರೂಪಿಸಿ ಇವುಗಳ ಅನುಷ್ಠಾನಕ್ಕಾಗಿ ಬಜೆಟ್‌ದಲ್ಲಿ ಸಾಕಷ್ಟು ಹಣ ನಿಗದಿ ಮಾಡಿದ್ದರೂ ಕೆಲವಷ್ಟು ಹಣವನ್ನು ನಿಗದಿ ಮಾಡಿ ಕೊಡುತ್ತದೆ. ಈ ಹಣವನ್ನು ಕೃಷಿ ಇಲಾಖೆಯಲ್ಲಿಯ ಅಧಿಕಾರಿಗಳು ರಾಜ್ಯಾದ್ಯಂತ ರೈತರಿಗಾಗಿ ವೆಚ್ಚ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಕೃಷಿಕರ ಅಭಿವೃದ್ಧಿಗಾಗಿ ಕೃಷಿ ಇಲಾಖೆಯೊಂದಿದೆ. ಈ ಕೃಷಿ ಇಲಾಖೆ ಭಾರಿ ದೊಡ್ಡ ಕೃಷಿ ಇಲಾಖೆಯಾಗಿದೆ. ನಿಗದಿ ಮಾಡಿದ ಈ ಇಲಾಖೆಯ ಹಣ ಭಾರಿ ಕಡಿಮೆ. ಈ ಕೃಷಿ ಇಲಾಖೆಯಲ್ಲಿ 5558ಕ್ಕೂ ಹೆಚ್ಚು ಸಿಬ್ಬಂದಿ ಇದೆ. ಅನೇಕ ಕೆ.ಎ.ಎಸ್ ಹಾಗೂ ಐ. ಎ.ಎಸ್ ಅಧಿಕಾರಿಗಳಿದ್ದಾರೆ. ಕೃಷಿ ಬಜೆಟ್‌ದಲ್ಲಿ ಬಹುಪಾಲು ಮೊತ್ತ ವೇತನ ಭತ್ತೆ, ವಿವಿಧ ಭತ್ತೆ ಇತ್ಯಾದಿಗೆ ಹೋಗುತ್ತದೆ. ಹೋಗಲಿ ಯಾರ ತಕರಾರು ಇಲ್ಲ. ಬಜೆಟ್‌ದಲ್ಲಿಯ ಅಧಿಕಾರಿಗಳ ಹಾಗೂ ಆಡಳಿತ ವೆಚ್ಚಕ್ಕೆ ಪ್ರತಿ ತಿಂಗಳು ಹಾಗೂ ವರ್ಷದಲ್ಲಿ ನೂರಕ್ಕೆ ನೂರರಷ್ಟು ವೆಚ್ಚವಾಗುತ್ತದೆ. ಆಗಲಿ, ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಕೃಷಿ ಇಲಾಖೆಗೆ ನಿಗದಿಪಡಿಸಿದ ಅಭಿವೃದ್ಧಿ ಮೊತ್ತ ನೂರಕ್ಕೆ ನೂರರಷ್ಟು ವೆಚ್ಚವಾಗಿ ಅಭಿವೃದ್ಧಿ ಪಡಿಸುತ್ತಿಲ್ಲ. ಕೃಷಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ತೃಪ್ತಿ ಅತೃಪ್ತಿ ಬಗ್ಗೆ, ಸಾಧನೆ ಬಾಧನೆ ಬಗ್ಗೆ, ಆಯವ್ಯಯದ ಬಗ್ಗೆ , ಕ್ರಿಯೆ – ನಿಷ್ಕ್ರಿಯೆಯ ಬಗ್ಗೆ, ಲೋಪದೋಷಗಳ ಬಗ್ಗೆ, ಹೈ-ಗೈ ಬಗ್ಗೆ, ಸಾಫಲ್ಯ -ವೈಫಲ್ಯಗಳ ಬಗ್ಗೆ, ತಾರಕ ಮಾರಕಗಳ ಬಗ್ಗೆ, ಹಣದ ಸದ್ಬಳಕೆ, ದುರ್ಬಳಕೆ, ನಿರ್ಬಳಕೆ ಇತ್ಯಾದಿ ಬಗ್ಗೆ ವಿಧಾನ ಸಭೆಯ ಅಧಿವೇಶನದಲ್ಲಿ ಯಾವುದೇ ಚರ್ಚೆಯಾಗುವುದಿಲ್ಲ. ಸಲಹೆ ಸೂಚನೆ ಮಾರ್ಗದರ್ಶನ ಯಾರಿಂದಲೂ ಯಾರಿಗೂ ಇಲ್ಲ. ಇದು ರಾಜ್ಯ ಕೃಷಿ ಬಜೆಟ್‌ನ ದುರ್ದೈವ ಹಾಗೂ ದುರುಂತ. ರಾಜ್ಯ ಸರಕಾರದ ವರದಿ ಪ್ರಕಾರ ಕೊಯ್ಲಿನೋತ್ತರ ತಂತ್ರಜ್ಞಾನ ಮತ್ತು ನಿರ್ವಹಣೆ, ರಾಷ್ಟೀಯ ಆಹಾರ ಸಂಸ್ಕರಣೆ ಅಭಿಯಾನ, ಹತ್ತಿ ಬೆಳೆ, ವಿಸ್ತೃತ ನೀರಾವರಿ, ಎಣ್ಣೆಕಾಳು ಉತ್ಪಾದನಾ ಕಾರ್ಯಕ್ರಮ, ಕೃಷಿ ಅಭಿವೃದ್ಧಿ, ಕೃಷಿ ತಂತ್ರಜ್ಞಾನ ನಿರ್ವಹಣೆ, ಕೃಷಿ ವಿಕಾಸ, ಐಸೋಪಾನ ಎಣ್ಣೆಕಾಳು, ಬೀಜಕ್ಷೇತ್ರ, ಬೀಜಗಳ ಪೂರೈಕೆ, ಬೀಜಹಾನಿ ನಿಧಿ, ಬೀಜ ಪ್ರಮಾಣ, ಬೀಜನಿಗಮ, ಮಣ್ಣು ಆರೋಗ್ಯ ಕೇಂದ್ರ, ರಾಸಾಯನಿಕ ಗೊಬ್ಬರ, ಮೇಲಿನ ಬಡ್ಡಿ ಸಹಾಯ ಧನ, ಕೀಟನಾಶಕ ನಿಯಂತ್ರಣ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ಬೇಸಾಯ ಚಟುವಟಿಕೆ, ಸಮಗ್ರ ಕೃಷಿ ವಿಸ್ತರಣೆ, ಕೃಷಿ ತರಬೇತಿ, ಹಸಿರು ಹಬ್ಬ ಕೃಷಿ ಮೇಳ, ಕೃಷಿ ಮಹಿಳೆಯರ ಮತ್ತು ಯುವಕರಿಗೆ ಕೃಷಿ ತರಬೇತಿ,, ಹೊಸ ಬೆಳೆ ವಿಮೆ, ಬೆಳೆ ಸಾಲಕ್ಕೆ ಸಹಾಯಧನ, ಸಾವಯವ ಕೃಷಿ, ಜೈವಿಕ ಇಂಧನ, ಹಾವು ಕಡಿತಕ್ಕೆ ಪರಿಹಾರ, ಸುವರ್ಣ ಭೂಮಿ , ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತರ ಅಧ್ಯಯನ, ಪ್ರವಾಸ, ಕೃಷಿ ಮಿಷನ್, ಭೂಸಾರ ಸಮೀಕ್ಷೆ ಮತ್ತು ಪರೀಕ್ಷೆ, ರೈತ ಸಂಪರ್ಕ ಕೇಂದ್ರ, ಮೈಕ್ರೋ ನಿರಾವರಿ, ಕೃಷಿ ವಿಶ್ವವಿದ್ಯಾಲಯ, ಬೀಜ ಕ್ಷೇತ್ರ ಮತ್ತು ಅಭಿವೃದ್ಧಿ ಕೇಂದ್ರ, ಹನಿ ನೀರಾವರಿ, ಬೇಸಾಯ ಚಟುವಟಿಕೆ, ಸಸ್ಯ ಸಂರಕ್ಷಣೆ ಇತ್ಯಾದಿ ಸುಮಾರು ಅರವತ್ತು ಯೋಜನೆಗಳು ಕೇಂದ್ರ – ವಲಯ, ರಾಜ್ಯ-ವಲಯ, ಜಿಲ್ಲಾ ವಲಯ ಇತ್ಯಾದಿ ಕೇಂದ್ರ ಹಾಗೂ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಎಲ್ಲ ಕೃಷಿ ಯೋಜನೆಗಳಿಗೆ 2011-12ರಲ್ಲಿ ನಿಗದಿತ ಅನುದಾನ 1432.50 ಕೋಟಿ. ಮಾಡಿದ ವೆಚ್ಚ 1196.12 ಕೋಟಿ. ಬಳಸದೆ ಉಳಿಸಿದ ಮೊತ್ತ 236.39 ಕೋಟಿ. 2012-13ರಲ್ಲಿ ಈ ಎಲ್ಲಾ ಕೃಷಿ ಯೋಜನೆಗಳಿಗೆ ನಿಗದಿತ ಅನುದಾನ 1705.72 ಕೋಟಿ. ವೆಚ್ಚ ಮಾಡಿದ ಹಣ 1253.08 ಕೋಟಿ. ಬಳಸದೆ ಉಳಿಸಿದ ಹಣ 452.65 ಕೋಟಿ. ಈ ನಿರ್ಬಳಕೆ ಹಾಗೂ ಅಭಿವೃದ್ಧಿ ಕುಂಠಿತ ಪ್ರತಿ ವರ್ಷ ಮುಂದುವರೆಯುತ್ತಲೇ ಇದೆ. 2011-12ರಲ್ಲಿ ಹತ್ತಿಯ ಬಗ್ಗೆ 250.00ಲಕ್ಷ ಅನುದಾನವಿದ್ದರೂ ಕೇವಲ 68ಲಕ್ಷ ವೆಚ್ಚ ಮಾಡಲಾಗಿದೆ. 2011- 12ರಲ್ಲಿ ನಿಗದಿತ ಮೊತ್ತ 600ಲಕ್ಷ ಇದ್ದರೂ ಕೇವಲ 80ಲಕ್ಷ ವೆಚ್ಚ ಮಾಡಲಾಗಿದೆ. ಎಣ್ಣೆಕಾಳು ಉತ್ಪಾದನೆಯ ಬಗ್ಗೆ 2011-12ರಲ್ಲಿ ನಿಗದಿತ 104.32 ಕೋಟಿ ಇದ್ದರೂ ವೆಚ್ಚ ಕೇವಲ 40.54 ಕೋಟಿ ಇದೆ. 2012-13ರಲ್ಲಿ 100 ಕೋಟಿಯಲ್ಲಿ ಕೇವಲ 38.48ಕೋಟಿ ವೆಚ್ಚ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ ನಿಗದಿತ 279.09 ಕೋಟಿಯಲ್ಲಿ 2011-12ರಲ್ಲಿ 270.44 ಕೋಟಿ ವೆಚ್ಚ ಮಾಡಲಾಗಿದೆ. 12-13ರಲ್ಲಿ ನಿಗದಿತ 285.39ಕೋಟಿಯಲ್ಲಿ 170.57 ಕೋಟಿ ವೆಚ್ಚ ಮಾಡಲಾಗಿದೆ. ಹೊಸ ಬೆಳೆ ವಿಮೆ ಯೋಜನೆಗೆ 11-12ರಲ್ಲಿ 18 ಕೋಟಿ, 12-13ರಲ್ಲಿ 33.74 ಕೋಟಿ ಉಳಿಸಲಾಗಿದೆ. ಇದು ಕೆಲವು ಸ್ಯಾಂಪಲ್ ಮಾತ್ರ. ಒಟ್ಟಿನ ಮೇಲೆ ಕೃಷಿ ಇಲಾಖೆಯ ಕಾರ್ಯ ಹಿಂದಿನ ಸರಕಾರದಲ್ಲಿ ತೃಪ್ತಿಕರವಿಲ್ಲ, ಇದು ಮುಂದುವರೆಯಬಾರದು. ಇದನ್ನೆಲ್ಲಾ ಈಗಿನ ಸರಕಾರ ಗಮನಕ್ಕೆ ತೆಗೆದುಕೊಂಡು ಮುಂದೆ ಹೀಗಾಗದಂತೆ ಹೊಸ ಸರಕಾರ ನೋಡಿಕೊಳ್ಳಬೇಕು. ಆಗ ಮಾತ್ರ ಈ ರಾಜ್ಯದಲ್ಲಿ ರೈತರ ಭವಿಷ್ಯ ಉತ್ತಮ.

ಬಿ.ಜಿ.ಬಣಕಾರ

   

Leave a Reply