ಕೆರೆಯಲ್ಲಿ ಸಿಕ್ಕ ಚಿನ್ನದ ಸರ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 07.05.2016

-ನಾಗೇಶ ಹೆಗಡೆ

ಬೆಳ್ಳಕ್ಕಿ ಮತ್ತು ಹೆಗ್ಗಣ್ಣ ಇಬ್ರೂ ಎದ್ದರು. ಕೆರೆಯ ಮಣ್ಣು ತೆಗೆಯೋದು ಹೇಗೆ? ಯೋಚನೆ ಮಾಡಿದವು.
ಬೆಳ್ಳಕ್ಕಿಗೆ ಉಪಾಯ ಹೊಳೆಯಿತು. ‘‘ಒಂದು ಚಿನ್ನದ ಸರ ಬೇಕು. ಎಲ್ಲಿ ಂದ ತರೋಣ?’’ ಎಂದು ಹೆಗ್ಗಣ್ಣನನ್ನು ಕೇಳಿತು.
ಹೆಗ್ಗಣ್ಣ ಯೋಚಿಸಿದ, ‘‘ನನ್ನ ಬಿಲದಲ್ಲಿ ಸರಾನೂ ಇದೆ; ಉಂಗುರಾನೂ ಇದೆ. ಆದರೆ ಅಸಲೀ ಚಿನ್ನದ್ದಲ್ಲ. ಗಣಪತಿ ಮುಳುಗಿಸಲು ಕೆರೆಗೆ ಬರ‌್ತಾರಲ್ಲ? ಬಾಳೆಕಂಬ, ಮಾವಿನ ತೋರಣ ಎಲ್ಲಾದರ ಮಧ್ಯೆ ಗಣಪತಿಗೆ ಹಾಕಿದ್ದ ನಕಲಿ ಸರ, ಕಡಗ, ಉಂಗುರ ಎಲ್ಲಾ ಎತ್ತಿ ಇಟ್ಟಿದ್ದೀನಿ’’ ಅಂದ,
ಬೆಳ್ಳಕ್ಕಿಯಣ್ಣ ಗೊಳ್ಳೆಂದು ನಕ್ಕ. ‘‘ಗಣಪನನ್ನೇ ಹೊತ್ಕೊಂಡ್‌ಬರಬೇಕಾದ ನೀನು! ಅವನನ್ನ ಬಿಟ್ಟು ಕೇವಲ ಅವನ ಆಭರಣಗಳನ್ನಷ್ಟೇ ಹೊತ್ತು ತಂದಿದೀಯ ಕಳ್ಳ! ತೋರಿಸು ಎಲ್ಲಿವೆ ನೋಡೋಣ’’ ಎಂದಿತು.
ಹೆಗ್ಗಣ್ಣಪ್ಪ ತನ್ನ ಬಿಲಕ್ಕೆ ಹೋಗಿ ನಕಲಿ ಚಿನ್ನಾಭರಣಗಳನ್ನು ಬೆಳ್ಳಕ್ಕಿಯಣ್ಣ ಅವುಗಳಲ್ಲಿ ಒಂದನ್ನು ಎತ್ತಿಕೊಂಡು ಜಿಗಣೆ ಪೈಲ್ವಾನನ ಬಳಿ ಬಂದ.
ಲಾರಿ ತೊಳೆಯಲು ಬಂದಿದ್ದ ಕ್ಲೀನರು, ಡ್ರೈವರು, ಹಮಾಲರು ಜಿಗಣೆಗಳ ಕಾಟ ತಾಳಲಾರದೆ ಪರಾರಿ ಆಗಿದ್ದರು. ಅವರ ಕಾಲಿಗೆ ರಕ್ತ ಹೀರಿ ದಪ್ಪಗೆ ಊದಿಕೊಂಡಿದ್ದ ಜಿಗಣೆಗಳು ಬೆಚ್ಚಗೆ ನೀರಂಚಿಗೆ ಮಲಗಿದ್ದವು.
ಬೆಳ್ಳಕ್ಕಿ ಜಿಗಣೆ ಪೈಲ್ವಾನನನ್ನು ಎಬ್ಬಿಸಿತು.
‘‘ಜಿಗಣೆ ಪೈಲ್ವಾನ್! ಜಿಗಣೆ ಪೈಲ್ವಾನ್, ನನ್ನ ಕಾಲಿಗೆ ಒಂದಿಷ್ಟು ರಕ್ತ ಬಳೀತಿಯಾ?’’ ಕೇಳಿತು.
ನಾಲ್ಕಾರು ಜಿಗಣೆಗಳು ಸರಸರ ಬೆಳ್ಳಕ್ಕಿಯ ಕಾಲನ್ನೇರಿ ಬಂದವು. ತಮ್ಮ ಹೊಟ್ಟೆಯಲ್ಲಿದ್ದ ಮನುಷ್ಯ ರಕ್ತವನ್ನು ಅಲ್ಲಿ ಕಾರಿದವು. ಬೆಳ್ಳಕ್ಕಿಯ ಬಿಳೀ ಕಾಲು ಕೆಂಪಾಯಿತು.
‘‘ಬರ‌್ತೀನಿ ಧನ್ಯವಾದ!’’ ಎಂದು ಹೇಳಿ ಬೆಳ್ಳಕ್ಕಿ ಸೀದಾ ಹಾರಿಹೋಗಿ ಕುಂಬಾರ ರಾಮಣ್ಣನ ಮನೆಯ ಅಂಗಳಕ್ಕೆ ಬಂದು ದೊಪ್ಪನೆ ಎಚ್ಚರ ತಪ್ಪಿದ ಹಾಗೆ ನಟಿಸಿ ಕೆಳಕ್ಕೆ ಬಿತ್ತು.
ತಿಗರಿ ತಿರುಗಿಸುತ್ತ ಗಡಿಗೆ ಮಡಕೆ ಮಾಡಲೆಂದು ಕೆಸರು ಮಣ್ಣನ್ನು ತುಳಿಯುತ್ತಿದ್ದ ಕುಂಬಾರ ರಾಮಣ್ಣ ತಿರುಗಿ ನೋಡಿದ.
‘‘ಅಯ್ಯೋ ಪಾಪ!’’ ಎನ್ನುತ್ತ ಕುಂಬಾರ ರಾಮಣ್ಣನ ಹೆಂಡತಿ ಓಡಿಬಂದಳು. ಬೆಳ್ಳಕ್ಕಿಯ ಕಾಲಿನ ರಕ್ತ ನೋಡಿ ದಿಗಿಲು ಬಿದ್ದು, ತಲೆಗೆ ನೀರು ಚಿಮುಕಿಸಿದಳು.
ಮೆಲ್ಲಗೆ ಎಚ್ಚರ ಬಂದಂತೆ ನಟಿಸಿ ಬೆಳ್ಳಕ್ಕಿ ಎದ್ದು ನಿಂತು ಕುಂಟುತ್ತ ರೆಕ್ಕೆ ಬಿಡಿಸಿತು.
‘‘ಎಲ್ಲಿಂದ ಬಂದೆ ಬೆಳ್ಳಕ್ಕಿ? ಯಾರು ಹೊಡೆದರು?’’ ಕೇಳಿದಳು ರಾಮಣ್ಣನ ಹೆಂಡತಿ.
‘‘ತೊಂಡೂರಿನ ಕೆರೇಲಿ ಮೀನು ಹಿಡಿಯೋಕಂತ ನಿಂತ್ಕಂಡಿದ್ದೆ. ಅಲ್ಲಿ ಒಂದಿಷ್ಟು ಚಿನ್ನದ ಉಂಗುರ, ಸರ, ಬಳೆ, ನಾಣ್ಯ ಎಲ್ಲ ಚೆಲ್ಲಾಪಿಲ್ಲಿ ಆಗಿ ಕೆಸರಿನಲ್ಲಿ ಬಿದ್ದಿದ್ದವು. ಮೀನು ನುಂಗಲೆಂದು ಬಗ್ಗಿದಾಗ ನನ್ನ ಗಂಟಲಲ್ಲೂ ಒಂದು ಉಂಗುರ ಸಿಕ್ಕಿಕೊಂಡಿತು’’ ಬೆಳ್ಳಕ್ಕಿಯ ಮಾತಿಗೆ ಅರ್ಧಕ್ಕೇ ತಡೆ ಬಿತ್ತು.
‘‘ಏನು ಚಿನ್ನಾಭರಣ? ಎಲ್ಲಿ ಯಾವ ಕೆರೇಲಿ?’’ ರಾಮಣ್ಣನ ಹೆಂಡತಿಯ ಕಣ್ಣಲ್ಲಿ ಆಸೆ ಮಿಂಚಿತು. ಕೆಸರು ತುಳಿಯುತ್ತಿದ್ದ ರಾಮಣ್ಣನೂ ಕುತೂಹಲದಿಂದ ಇತ್ತ ಬಂದ.
‘‘ಬೆಳ್ಳಕ್ಕಿ ತನ್ನ ಸುಳ್ಳು ಕತೆಯನ್ನು ಮುಂದುವರೆಸಿತು: ಹಿಂದೆ ಯಾವುದೋ ಪಾಳೇಗಾರ ಅಲ್ಲಿ ಎಷ್ಟೋ ಮಡಕೆ ತುಂಬ ಚಿನ್ನಾಭರಣ ತುಂಬಿ ಕೆರೆ ನೀರಲ್ಲಿ ಮುಳುಗಿಸಿ ಇಟ್ಟಿದ್ನಂತೆ. ಈಗ ಕೆರೇಲಿ ನೀರು ಕಮ್ಮಿಯಾಗಿ ಹೂಳು ತುಂಬಿಕೊಂಡಿದೆ. ಮೊನ್ನೆ ಯಾವುದೋ ಎರಡು ಆನೆ ಬಂದು ಕೆಸರಲ್ಲಿ ಸಿಕ್ಕಿಕೊಂಡು ಒದ್ದಾಡಿದಾಗ ಚಿನ್ನ ತುಂಬಿದ್ದ ಮಡಕೆಗಳೆಲ್ಲಾ ಒಡೆದು, ಬಂಗಾರದ ಆಭರಣ ಚೆಲ್ಲಾಪಿಲ್ಲಿಯಾಗಿ ಕೆಸರು ಮಣ್ಣಲ್ಲಿ ಹರಡಿವೆ. ಈ ಚಿನ್ನ ಹುಡುಕೋಕೆ ಯಾರೋ ಬಂದಿದ್ರು. ಮೀನು ಹುಡುಕ್ತಾ ಇದ್ದ ನಾನೂ ಚಿನ್ನದ ನಾಣ್ಯ ನುಂಗ್ತಾ ಇದ್ದೇನೆ ಅಂತ ತಿಳಿದು ಕಲ್ಲು ಬೀಸಿ ನನಗೆ ಗಾಯ ಮಾಡಿದ್ರು’’ ಎಂದು ಬೆಳ್ಳಕ್ಕಿ ಸುಳ್ಳಿನ ಚಿನ್ನದಂಥ ಮಾಲೆಯನ್ನೇ ಪೋಣಿಸಿತು.
‘‘ಬಾ ಇಲ್ಲಿ; ನಿನ್ನ ಗಾಯಕ್ಕೆ ಪಟ್ಟಿ ಹಚ್ತೇನೆ’’ ಎನ್ನುತ್ತ ರಾಮಣ್ಣ ಸಮೀಪ ಬಂದ.
ಬೆಳ್ಳಕ್ಕಿ ಹಾರಿ ಎತ್ತರದ ಕಟ್ಟೆಯ ಮೇಲೆ ಕುಂಟು ಕಾಲಲ್ಲಿ ನಿಂತಿತು.
‘‘ಇಲ್ಲ ನಾನು ಹೊಗ್ತೇನೆ. ಇನ್ನೂ ಕೊಂಚ ಹೊತ್ತು ಇಲ್ಲೇ ಇದ್ರೆ ಚಿನ್ನದ ಬೇಟೆಗಾರರು ನನ್ನನ್ನು ಬೆನ್ನಟ್ಟಿ ಇಲ್ಲಿಗೂ ಬರ‌್ತಾರೆ. ’’
ಹಾಗೆ ಹೇಳುತ್ತಲೇ ‘ಕೊಕ್’ ಅನ್ನುತ್ತಾ ಅದು ತನ್ನ ಗಂಟಲಿನಿಂದ ನಕಲಿ ಉಂಗುರವನ್ನು ಹೊರಕ್ಕೆ ಕಕ್ಕಿತು. ಸೂರ್ಯನ ಬೆಳಕಿನಲ್ಲಿ ಅದು ಚಿನ್ನದ ಬಣ್ಣದಲ್ಲಿ ಫಳಫಳ ಹೊಳೆಯಿತು.
‘‘ನೋಡಿ ಈಗ ಗಂಟಲಿನಿಂದ ಹೊರಕ್ಕೆ ಬಂತು! ಇದು ಯಾರ ಬಳಿ ಇದ್ರೂ ಕಷ್ಟ ತಪ್ಪಿದ್ದಲ್ಲ. ದೂರ ಬಿಸಾಕ್ತೇನೆ’’ ಎಂದು ಅದನ್ನು ಕಚ್ಚಿಕೊಂಡು ಹಾರಿಯೇ ಹೋಯಿತು.
ರಾಮಣ್ಣ ‘‘ನಿಲ್ಲೂ! ನಿಲ್ಲೂ’’ ಎಂದು ಕೂಗುತ್ತ ಆ ಚಿನ್ನದ ಉಂಗುರವನ್ನು ಪಡೆಯಲೆಂದು ಬೆಳ್ಳಕ್ಕಿಯ ಹಿಂದೆ ತುಸು ದೂರ ಓಡಿದ. ಹೆಂಡತಿ ಕರೆದಳು.
‘‘ರೀ ಬಿಡ್ರೀ ಅದನ್ನ, ಬರ‌್ರೀ ಇಲ್ಲಿ! ತೊಂಡೂರ ಕೆರೆಗೇ ಹೋಗೋಣ. ಕೊಪ್ಪರಿಗೆ ಚಿನ್ನಾಭರಣ ಅಲ್ಲಿ ಬಿದ್ದಿರುವಾಗ, ಈ ಒಂದು ಉಂಗುರಕ್ಕೆ ಯಾಕೆ ಆಸೆಪಡ್ತೀರಿ?’’ ಕೇಳಿದಳು.
‘‘ರಾಮಣ್ಣನಿಗೂ ಅದು ಹೌದೆನ್ನಿಸಿತು. ಆದ್ರೆ ಅಷ್ಟು ದೊಡ್ಡ ಕೆರೇಲಿ ಎಲ್ಲೀ ಅಂತ ನಾವು ಹುಡುಕೋದು?’’ ಕೇಳಿದ.
‘‘ಹುಡುಕೋದೇ ಬ್ಯಾಡ. ಹ್ಯಾಗಿದ್ರೂ ನಮಗೆ ಗಡಿಗೆ ಮಡಕೆ ಮಾಡೋಕೆ ಮಣ್ಣು ಬೇಕು. ಅಲ್ಲಿಂದಲೇ ಎತ್ತಿ ತರ‌್ತಾ ಇದ್ರೆ ಸರಿ! ಚಿನ್ನ ಎಂದಿದ್ರೂ ನಮ್ಮ ತಿಗರಿವರೆಗೆ ಬಂದೇ ಬರ್ತದೆ. ಮನೆ ಅಂಗಳಕ್ಕೆ ಎಲ್ಲಾ ಮಣ್ಣನ್ನೂ ಸಾಗಿಸಿ ತಂದರೆ ಚಿನ್ನ ಇಲ್ಲೇ ಸಿಗ್ತದೆ. ನಾವು ಚಿನ್ನ ಹುಡುಕ್ತಾ ಇದೀವಿ ಅನ್ನೋ ಸಂಶಯಾನೂ ಯಾರಿಗೂ ಬರಲ್ಲ’’ ಅಂದಳು ರಾಮಿ.
ರಾಮಣ್ಣನಿಗೂ ಈ ಉಪಾಯ ಸರಿ ಎನ್ನಿಸಿತು. ಇಂದಿನಿಂದ ತೊಂಡೂರಿನ ಕೆರೆಯಿಂದ್ಲೇ ಮಣ್ಣು ತರೋದೆಂದು ನಿರ್ಧರಿಸಿ ಬುಟ್ಟಿ, ಸಲಿಕೆ ಎತ್ತಿ ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಹೊರಟೇ ಬಿಟ್ರು.
ಬೆಳ್ಳಕ್ಕಿ ಬಾಯಲ್ಲಿದ್ದ ಉಂಗುರವನ್ನು ಮತ್ತೆ ನುಂಗಿಕೊಂಡು ಹಾರುತ್ತ ಹಾರುತ್ತ ಇಟ್ಟಿಗೆ ಮಾಡುವ ಬೀರಣ್ಣನ ಬಟ್ಟಿಯ ಬಳಿ ಬಂತು. ಅಲ್ಲೂ ನೆಲಕ್ಕೆ ಹಠಾತ್ತಾಗಿ ಬಿದ್ದಂತೆ ನಟಿಸಿ ಅಲ್ಲೂ ನಾಟಕ ಆಡಿತು.
ಇಟ್ಟಿಗೆ ಮಾಡುವವರಿಗೂ ತೊಂಡೂರು ಕೆರೆಯ ಮಣ್ಣನ್ನೇ ಎತ್ತಿ ತರುವ ಆಸೆಯಾಯಿತು.
ಅರ್ಧ ತಾಸಿನಲ್ಲೇ ಬೀರಣ್ಣ, ಬೀರಣ್ಣನ ಮಗ ಬೋರಣ್ಣ, ಬೋರಣ್ಣನ ಅಮ್ಮ ಈರಮ್ಮ ಮೂವರು ಇಟ್ಟಿಗೆ ಮಾಡಲು ಕೆರೆ ಮಣ್ಣನ್ನು ಎತ್ತಿ ತರಲೆಂದು ಮೂರು ಚಕ್ಕಡಿ ಬಂಡಿಯಲ್ಲಿ ತೊಂಡೂರಿನ ಕೆರೆಯತ್ತ ಹೊರಟರು. ಅವರ ಬಂಡಿಯಲ್ಲೂ ಬುಟ್ಟಿ, ಸಲಿಕೆ ಎಲ್ಲ ಇದ್ದವು.
ನೋಡ ನೋಡುತ್ತಾ ಕೆರೆಯ ಒಂದು ತುದಿಯಲ್ಲಿ ಬೀರಣ್ಣ, ಇನ್ನೊಂದು ತುದಿಯಲ್ಲಿ ರಾಮಣ್ಣನ ಕುಟುಂಬದವರು ಕೆರೆ ಅಂಗಳದ ಮಣ್ಣನ್ನು ಅಗೆಯಲು ಆರಂಭಿಸಿದರು.

   

Leave a Reply