ಕೇವಲ ಹೆಣ್ಣಲ್ಲ , ಈಕೆ ಎಲ್ಲರ ಮಾನ್ಯತೆ ಪಡೆದ ಮಾತೆ

ಬೋಧ ಕಥೆ - 0 Comment
Issue Date : 14.04.2015

ಭಾರತೀಯ ಸ್ತ್ರೀ ಪರಂಪರೆಯು ಸಾಧಾರಣ ಕೌಟುಂಬಿಕ ಜೀವನ ಹಾಗೂ ಅಸಾಧಾರಣ ಆಧ್ಯಾತ್ಮಿಕತೆಯ ಸಮನ್ವಯಕ್ಕೆ ಬಹುದೊಡ್ಡ ನಿದರ್ಶನ. ಇವರ ಬದುಕು ಪಾಶ್ಚಾತ್ಯ ಭ್ರಮೆಯ ಲೋಕದ ಮಹಿಳೆಯರಂತೆ ಪ್ರದರ್ಶನದ್ದಲ್ಲ, ನಿದರ್ಶನ!
ಕುಟುಂಬ ಜೀವನ ಹಾಗೂ ಆಧ್ಯಾತ್ಮಿಕತೆ ಎರಡೂ ಎಂದೂ ಪರಸ್ಪರ ವಿರೋಧವುಳ್ಳವಲ್ಲ. ಆಧ್ಯಾತ್ಮಿಕತೆಯು ಬದುಕಿನ ಬುನಾದಿ. ಬ್ರಹ್ಮವಾದಿನಿಯೊಬ್ಬಳು ಸದ್ಯೋವಧು ಆಗಿರಬಹುದು, ಸದ್ಯೋವಧುವೊಬ್ಬಳು ಬ್ರಹ್ಮವಾದಿನಿಯೂ ಆಗಿರಬಹುದು. ಕುಟುಂಬ ಜೀವನವೆಂದರೆ ಸಾಧಾರಣ, ಸಂಕುಚಿತ, ಸ್ವಾರ್ಥಪರ, ಸ್ಥಿಮಿತರಹಿತ, ಹೀನ ಅಲ್ಲ. ಅದೂ ಸಹ ಪರಮ ಸುಖದ ಸಾಧನೆಯ ಮಾರ್ಗ ಎಂಬುದನ್ನು ತೋರಿದ ಹಲವು ಸ್ತ್ರೀಯರು ನಮ್ಮ ವೇದ, ಪುರಾಣ, ಉಪನಿಷತ್ತಿನಲ್ಲಿ ಕಾಣಸಿಗುತ್ತಾರೆ.
ಮಾರ್ಕಂಡೇಯ ಪುರಾಣದ ಮದಾಲಸಾ ಋತಧ್ವಜನ ಪತ್ನಿ. ಈಕೆ ಪರಮ ಪಾಂಡಿತ್ಯವುಳ್ಳವಳು, ತಪಸ್ವಿನಿ, ಕರ್ತವ್ಯಪರಾಯಣ ಗೃಹಿಣಿ, ವಿಧೇಯ ಪತ್ನಿ, ಆದರ್ಶ ಮಾತೆ. ಸಾಂಖ್ಯಪದ್ಧತಿ ಭಾರತೀಯ ವೇದಾಂತದ ಬಹುದೊಡ್ಡ ಪರಂಪರೆ. ಕಪಿಲ ಇದರ ಸ್ಥಾಪಕ, ಆತ ಮಹಾಮುನಿ. ಈತನ ತಾಯಿ ಸಹ ಅಸಾಮಾನ್ಯಳು! ಈಕೆ ಪ್ರಜಾಪತಿ ಕರ್ದಮನ ಪತ್ನಿ ದೇವಹೂತಿ. ಅಸಾಧಾರಣ ಆಧ್ಯಾತ್ಮಿಕ ಸಿದ್ಧಿಪಡೆದ ಈಕೆ ತನ್ನ ಪತಿ ಹಾಗೂ ಪುತ್ರನೊಡನೆ ನಡೆಸಿದ ಅದ್ಭುತ ಸಂವಾದವು ವೇದಾಂತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿದೆ. ಪುರಾಣ ಸಾಹಿತ್ಯದಲ್ಲಿ ಕಂಡುಬರುವ ಸತೀ ಹಾಗೂ ಉಮಾ ತಮ್ಮ ಬದುಕನ್ನೇ ಪತಿಗಾಗಿ ಮೀಸಲಿಟ್ಟವರು!
ಪ್ರಸಿದ್ಧ ವೈಯಾಕರಣಿ ಪಾಣಿನಿಯ ಪ್ರಕಾರ ಪತ್ನೀ ಶಬ್ದಕ್ಕೆ ಮೂಲ ಅರ್ಥವೇ ಪತಿಯ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವವಳು ಎಂಬುದಾಗಿದೆ.
ಈ ನೆಲೆಯಲ್ಲಿ ನೋಡಿದಾಗ ಬ್ರಾಹ್ಮವಿವಾಹದಲ್ಲಿ ಪತಿ ತನ್ನ ಪತ್ನಿಗೆ ‘ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ’ – ಧರ್ಮ – ಅರ್ಥ – ಕಾಮಗಳಲ್ಲಿ ನಾನು ನಿನ್ನನ್ನು ಅತಿಕ್ರಮಿಸುವುದಿಲ್ಲ ಎಂದು ಭಾೆ ಕೊಡುತ್ತಾನಲ್ಲ ಅದು ಬಹು ಯೋಗ್ಯವೇ ಆಗಿದೆ. ಮನು, ಪರಾಶರ ಮುಂತಾದ ಹಲವು ಸ್ಮೃತಿಕಾರರು ಸ್ತ್ರೀಯ ಗೌರವವನ್ನು ಬಹುವಾಗಿ ಕೊಂಡಾಡಿದ್ದಾರೆ. ‘ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ’ – ಸ್ತ್ರೀಯರಿಗೆ ಗೌರವ – ಸನ್ಮಾನ ಪೂಜೆ (ಪೂಜ್ಯ – ಆದರಣೀಯ ನಡವಳಿಕೆಯ ಮೂಲಕ ಕೊಡುವ ಗೌರವವೇ ಪೂಜೆ!) ಎಂಬ ಮನುಮಹನೀಯನ ಮಾತು ಈಗಿನ ಕಾಲದ ವಿಚಾರವಂತರೆಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿರುವ ವಿಕಾರವಾದಿಗಳಿಗೆ ೋಚರವಾಗುವುದೇ ಇಲ್ಲ!
ಆಕೆ ಕ್ಷೇತ್ರ! ಆದ್ದರಿಂದ ಆಕೆ ಪಾವಿತ್ರ್ಯವಂತೆ. ಹಾಗೆಂದೇ ಆಕೆಯ ಸಂರಕ್ಷಣೆ ನಮ್ಮ ಪರಮ ಕರ್ತವ್ಯ ಎಂದರು ನಮ್ಮ ಹಿರಿಯರು. ಬೀಜ ಹಾಳಾದರೆ ಬದಲಿಸಬಹುದು! ಆದರೆ ಕ್ಷೇತ್ರವೇ ಹಾಳಾದರೆ ಎಂಬ ಕಾಳಜಿ ನಮ್ಮವರದು. ಆದ್ದರಿಂದಲೇ ಆಕೆಯ ರಕ್ಷಣೆಗಾಗಿ ಹಲವು ಕಟ್ಟುಪಾಡು ವಿಧಿಸಿದರು. ಅವರಿಗೆ ಸ್ತ್ರೀ ಮಾರಾಟದ ಸರಕಲ್ಲ! ಆಕೆ ಮಾನಿನಿ! ಇದರ ಸೂಕ್ಷ್ಮ ಅರಿಯದ ಈಗಿನವರು ಆಕೆಗೆ ಸ್ವಾತಂತ್ರ್ಯವನ್ನೇ ನೀಡಿಲ್ಲ, ಆಕೆಯದು ದಾಸ್ಯದ ಬದುಕು ಎನ್ನುತ್ತಾ ವೈವಾಹಿಕ ಬದುಕನ್ನೇ ದಾಸ್ಯ – ಬಂಧನ ಎಂದುಬಿಟ್ಟರು.
ಆದರೆ ಇದು ಬರೀ ಬಂಧನವಲ್ಲ, ಭವ ಬಂಧನದಿಂದ ಬದುಕನ್ನು ಬಿಡಿಸಿ ಬಿಡುವ ಸುಂದರ ಬದುಕಿನ ಸಂವರ್ಧನ ಕ್ಷಮತೆ. ಹಾಗೆಂದೇ ಇದರ ಕೇಂದ್ರವಾದ ಸ್ತ್ರೀ ಸಾಮಾನ್ಯಳಲ್ಲ , ಎಲ್ಲರ ‘ಮಾನ್ಯತೆ’ ಪಡೆದ ಮಾತೆ.

   

Leave a Reply