ಕೊಡಗು ಮತ್ತು ಜನಪದ ಸಂಸ್ಕೃತಿ

ಸಂಸ್ಕೃತಿ-ಕಲೆ - 2 Comments
Issue Date : 09.10.2013

 

ರ್ನಾಟಕದಲ್ಲಿ  ಕೊಡಗು ಅಥವಾ ಕೂರ್ಗ್‌ ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು 900 ಮೀಟರಿನಿಂದ 1715 ಮೀಟರು ಎತ್ತರಕ್ಕಿದೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ಕಾಫಿ ತೋಟಗಳು, ಟೀ ತೋಟಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ದಕ್ಣಿಣ ಭಾರತದಲ್ಲೇ ಇದು ತುಂಬಾ ಜನಪ್ರಿಯ ವಾರದ ರಜಾ ಕಳೆಯುವ ತಾಣ ಕೂಡ ಹೌದು.

 ಕೊಡಗು ಹೆಸರು ಮತ್ತು ಇತಿಹಾಸ

“ಕೊಡಗು” ಎಂಬ ಹೆಸರಿನ ಮೂಲದ ಬಗ್ಗೆ ಹಲವು ಸಿದ್ಧಾಂತಗಳಿವೆ. ಕೆಲವರು ಹೇಳುತ್ತಾರೆ, ಕೊಡಗು ಎಂಬುದು ಕ್ರೊಡದೇಶ – ಕೊಡವರ ನಾಡು ಎಂಬಲ್ಲಿಂದ ಉದ್ಭವವಾಯಿತು ಎಂದು. ಇನ್ನೂ ಕೆಲವರು ಹೇಳುತ್ತಾರೆ ಕೊಡಗು ಮೂಲ ಶಬ್ದವು ಕೊಡವ ಎಂಬ ಶಬ್ದದಿಂದ ಬಂತು ಎಂದು. ಕೊಡವ ಎಂದರೆ ಕೊಡ (ಕೊಡು) ಮತ್ತು ಅವ್ವ(ತಾಯಿ) ಅಂದರೆ ತಾಯಿ ಕಾವೇರಿ ಎಂಬುದರಿಂದ ಉದ್ಭವವಾಯಿತು ಎಂದು ಹೇಳಲಾಗುತ್ತದೆ.  ಪ್ರಮುಖವಾಗಿ ಕೊಡಗಿನಲ್ಲಿ ಅಮ್ಮಕೊಡವ, ಕೊಡವ, ಐರಿ ಹೆಗ್ಗಡೆ(ಪೆರ್‍ಗಡೆ), ಗೊಲ್ಲ, ಕಾಪಾಳ, ಜಮ್ಮಮಾಪಿಳ್ಳೆ, ಗೌಡ ಹೀಗೆ ಹಲವು ವಿಧದ ಪಂಗಡಗಳಿವೆ.

ಕೊಡಗಿನ ಇತಿಹಾಸ ದಾಖಲೆಗಳು ನಮ್ಮನ್ನು 8ನೇ ಶತಮಾನಕ್ಕೂ ಹಿಂದೆ ಕರೆದುಕೊಂಡು ಹೋಗುತ್ತವೆ. ಆಗ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಕೊಡಗು ನಂತರದಲ್ಲಿ ಪಾಂಡ್ಯರು, ಚೋಳರು, ಕದಂಬರು, ಚಾಲುಕ್ಯರು ಮತ್ತು ಚಂಗಾಳ್ವರಂತಹ ಹಲವು ಆಡಳಿತಗಾರರ ಕೈಯಿಂದ ಹಸ್ತಾಂತರಗೊಳ್ಳುತ್ತಲೇ ಹೋಯಿತು, ಹೊಯ್ಸಳರು ಕೊಡಗನ್ನು 1174ನೇ ಇಸವಿಯಲ್ಲಿ ವಶಪಡಿಸಿಕೊಂಡರು, ಆದರೆ ವಿಜಯನಗರ ಅರಸರಿಂದ 14ನೇ ಶತಮಾನದ ಮಧ್ಯದಲ್ಲಿ ವಶಪಡಿಸಿಕೊಳ್ಳಲ್ಪಟ್ಟಿತು, ಅದರ ನಂತರದಲ್ಲಿ ಸ್ಥಳೀಯ ಆಡಳಿತಗಾರರಾದ ನಾಯಕರಿಂದ ಆಳಲ್ಪಟ್ಟಿತು. ಹಾಲೇರಿ ವಶಂವು ಅಥವಾ ಲಿಂಗಾಯತ ವಂಶದ ರಾಜರು ಕೊಡಗನ್ನು 16ನೇ ಶತಮಾನದಿಂದ 19ನೇ ಶತಮಾನದವರೆಗೂ ಆಳಿದರು. 

ಕೊಡಗಿನ ವಿವಿಧ ಜನಾಂಗಗಳು ತಮ್ಮ ಸ್ವಂತಿಕೆಯನ್ನು ಕಾಪಾಡಿಕೊಂಡು ವರ್ತಮಾನದ ಅಗತ್ಯ ಮತ್ತು ಪ್ರಭಾವಗಳಿಗೆ ಅನುಗುಣವಾಗಿ ವಿವಿಧ ರೀತಿಯ ಆಚರಣೆಗಳನ್ನು ಮಾರ್ಪಾಡು ಮಾಡಿಕೊಂಡಿದೆ. ಅವುಗಳಲ್ಲಿ ಕೊಡವ ಮತ್ತು ಅಮ್ಮಕೊಡವರು ತಮ್ಮ ಹಿರಿಯರ ವಂಶದ ಮೂಲಪುರುಷನ ಜ್ಞಾಪಕಾಥವಾಗಿ ವಂಶದ ‘ಕಾರಣಪುರುಷ’ (ಕಾರಣವ)ನ ನೆನಪಿಗಾಗಿ ಕೈಮಡ-ಸಣ್ಣ ಸ್ಮಾರಕ ಕಟ್ಟಡ ಅಥವಾ ಗುಡಿ ಎಂಬರ್ಥದಲ್ಲಿ ಕಟ್ಟಿರುತ್ತಾರೆ. ವಿಶೇಷ ಹಬ್ಬ ಹರಿದಿನಗಳಲ್ಲಿ ಮತ್ತು ವರ್ಷಕೊಮ್ಮೆ ಈ ಕಾರಣವನಿಗೆ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಇವರು ವಾಸಿಸಲು ಕಟ್ಟಿದ ಮೂಲಮನೆಗೆ ‘ಐನ್‍ಮನೆ’ಯಾಗಿ ಪೂಜ್ಯವಾಗಿ ಕಾಣುತ್ತಾರೆ.

 ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಬ್ರಿಟಿಷರ ಆಳ್ವಿಕೆಯಲ್ಲಿ ಕೊಡಗು ಇತ್ತು. ಆನಂತರದಲ್ಲಿ 1950ರಲ್ಲಿ ಸ್ವತಂತ್ರ ರಾಜ್ಯವಾಯಿತು. 1956ರಲ್ಲಿ ರಾಜ್ಯಗಳ ಮರುಹೊಂದಾಣಿಕೆಯಲ್ಲಿ ಕೊಡಗನ್ನು ಇಂದಿನ ಕರ್ನಾಟಕದ ಜೊತೆ ಸೇರಿಸಲಾಯಿತು. ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಎಂಬ ಮೂರು ತಾಲೂಕುಗಳನ್ನು ಹೊಂದುವ ಮೂಲಕ ಕರ್ನಾಟಕದಲ್ಲೇ ಅತಿ ಸಣ್ಣ ಜಿಲ್ಲೆಯಾಗಿದೆ. ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿಯಾಗಿದೆ.

ಸ್ಥಳೀಯ ಸಂಸ್ಕೃತಿ

 ಸುಂದರ ಘಟ್ಟಪ್ರದೇಶದ ಕೊಡಗು ತನ್ನ ವಿಶಿಷ್ಟ ಸಂಸ್ಕೃತಿಯಿಂದಲೂ ತುಂಬಾ ಜನಪ್ರಿಯ. 

ಕೊಡಗಿನ ಪ್ರಮುಖ ಹಬ್ಬಗಳು

 ಹುತ್ತರಿ ಹಬ್ಬದಂದು ಗದ್ದೆಯಲ್ಲಿ ಕದಿರು ಕೊಯ್ಯುವುದು, ಕುಲದೈವವನ್ನು ‘ಪೊಲಿ ಪೊಲಿಯೇ ಬಾ..’ ಎಂದು ಆಹ್ವಾನಿಸಿ ಗದ್ದೆಯಲ್ಲಿ ಫಸಲು ತುಂಬಿರಲೆಂದು ಪ್ರಾಥಿಸುವುದು ಹುತ್ತರಿಯ ಸಂಪ್ರದಾಯ.  ಮನೆಮಂದಿಯೆಲ್ಲಾ ಒಟ್ಟುಗೂಡುವ ಹುತ್ತರಿಗೆ ತಂಬಿಟ್ಟು ಎಂಬುದು ವಿಶೇಷ ತಿನಿಸು.  ಹುತ್ತರಿಯ ಕೋಲಾಟ ಮತ್ತು ಇನ್ನಿತರ ಪಂದ್ಯಾಟಗಳು ಸಾಂಸ್ಕೃತಿಕ ನೃತ್ಯಗಳು ಆ ಹಬ್ಬದ ಆಕರ್ಷಣೆ.

 ತುಲಾ ಸಂಕ್ರಮಣ ದಿನವನ್ನು ಕೊಡಗಿನಲ್ಲಿ ‘ಕಾವೇರಿ ಸಂಕ್ರಮಣ’ವನ್ನಾಗಿ ಆಚರಿಸುತ್ತಾರೆ. ತಲಕಾವೇರಿಯಲ್ಲಿ ತೀರ್ಥಸ್ನಾನ ಮಾಡುವ ಮೂಲಕ ಯಾತ್ರಿಕರು ಪವಿತ್ರತೆ ಪಡೆಯುತ್ತಾರೆ ಎಂಬ ನಂಬಿಕೆ ಇದೆ.  ವರ್ಷಪ್ರತಿ ಅಕ್ಟೋಬರ್ 17ರಂದು ಕಾವೇರಿ ತುಲಾ ಸಂಕ್ರಮಣ, ಕಾವೇರಿ ಭಕ್ತರಿಗೆ ದೊಡ್ಡ ಉತ್ಸವ.  ಅಂದು ತಲಕಾವೇರಿಯಲ್ಲಿ ಕಾವೇರಿಯು ಗುಂಡಿಗೆಯಲ್ಲಿ ಉದ್ಭವಿಸುವ ಪವಿತ್ರವಾದ ಅಪೂರ್ವಕ್ಷಣ ವೈಜ್ಞಾನಿಕ ದೃಷ್ಟಿಕೋನಕ್ಕೆ ನಿಲುಕದ್ದು.

ಕೈಲುಮುಹೂರ್ತವನ್ನು ಸಾಮಾನ್ಯವಾಗಿ ಸೆಪ್ಟಂಬರ್ ಮೂರರಂದು ಆಚರಿಸುತ್ತಾರೆ. ಇದು ಆಯುಧಗಳನ್ನು ಪೂಜಿಸುವ ದಿನ. ತೆಂಗಿನಕಾಯಿಗೆ ಗುಂಡುಹೊಡೆಯುವುದು, ಓಟಗಳ ಸ್ಪರ್ಧೆ‍ ಸೇರಿದಂತೆ ಹಲವಾರು ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.

ದಸರಾ ನಾಡಹಬ್ಬವನ್ನು ಪ್ರಮುಖವಾಗಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ವಿಜಯದಶಮಿ ದಿನದಂದು ರಾತ್ರಿ ಉತ್ಸವಮೂರ್ತಿಗಳನ್ನು ವಿದ್ಯುದೀಪಲಂಕೃತವಾಗಿಸಿ ನಗರದ ಪ್ರಮುಖ ಬೀದಿಗಳಲ್ಲಿ  ಮೆರವಣಿಗೆ ಸಾಗುತ್ತದೆ.  ಸಂಗೀತ ರಸಮಂಜರಿ ಸೇರಿದಂತೆ ವಿವಿಧ ರೀತಿಯ ಮನರಂಜನಾ ಕಾಯ‍ಕ್ರಮಗಳೂ ನಡೆಯುತ್ತವೆ.

ಉಡುಪು

 ಕುಪ್ಪಸ – ದಟ್ಟಿ, ಪೀಚೆಕತ್ತಿ, ರುಮಾಲು, ಪಾನಿಮಂಡೆತುಣಿ ಮತ್ತು ಚೇಲೆ ಧರಿಸಿದರೆ ಅದು ಕೊಡಗಿನ ಪುರುಷರ ವಿಶೇಷ ಉಡುಪಾಗುತ್ತದೆ.  ಕೊಡಗಿನ ಮಹಿಳೆಯರು ಸೀರೆಯ ಸೆರಗನ್ನು ಹಿಂಭಾಗಕ್ಕೆ ನೆರಿಗೆ ಬರುವಂತೆ ತೊಡುತ್ತಾರೆ.  ಕೊಡವ ಜನಾಂಗದ ವಿವಾಹ, ನಾಡಹಬ್ಬ ಮತ್ತು ವಿಶೇಷ  ಸಮಾರಂಭಗಳಲ್ಲಿ ಈ ರೀತಿಯ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಸ್ತ್ರೀ-ಪುರುಷರನ್ನು ಕಾಣಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗು ಕಾಫಿ ಉತ್ಪನ್ನಗಳಿಗೆ ಹೆಸರಾಗಿದೆ ಮತ್ತು ಇಲ್ಲಿ ಸಾಮಾನ್ಯವಾಗಿ ತಂಪಾದ ವಾತಾವರಣ ಇರುತ್ತದೆ. ಕೊಡಗಿನಲ್ಲಿ ಬ್ರಿಟಿಷರು ಕಾಫಿಯನ್ನು ಪರಿಚಯಿಸಿದರು. ಅರೇಬಿಕಾ ಮತ್ತು ರೋಬಸ್ಟಾಗಳು ಇಲ್ಲಿ ಬೆಳೆಯುವ ಪ್ರಮುಖ ಕಾಫಿ ತಳಿಗಳು. ಅಲ್ಲದೇ ಈ ಪ್ರದೇಶವು ಜೇನು, ಏಲಕ್ಕಿ, ಮೆಣಸು ಮತ್ತು ಕಿತ್ತಳೆ ಉತ್ಪಾದನೆಗೆ ಕೂಡಾ ಜನಪ್ರಿಯವಾಗಿದೆ.

 ಕೊಡವರು ಇಲ್ಲಿಯ ಮುಖ್ಯ ಜನರು. ‘ಕೊಡವ ತಕ್ಕ್’ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ, ತಮಿಳು, ಅರೆಗನ್ನಡ, ತುಳು, ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು 500,000 ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. 

 ಕೊಡಗಿನ ತಿನಿಸುಗಳು

ಅಕ್ಕಿ ರೊಟ್ಟಿ, ಕಡುಬು, ಪಾಪುಟ್ಟು, ತಂಬುಟ್ಟು, ಹಿರಳೇಕಾಯಿ ಚಟ್ನಿ, ಮಾವಿನಹಣ್ಣಿನ ಚಟ್ನಿ, ಕಣಿಲೆ ಪಲ್ಯ, ಹಲಸಿನ ಹಣ್ಣಿನ ಹಪ್ಪಳ, ಮಳೆಗಾಲದಲ್ಲಿ ಚಳಿ ತಡೆಯಲು ಹಾಗೂ ವಿಶೇಷ ಸಂದರ್ಭಗಳು ಬಂದಾಗಲೆಲ್ಲಾ ದ್ರಾಕ್ಷಾರಸ ಎಂಬ ಪಾನೀಯವನ್ನು ಸೇವಿಸುತ್ತಾರೆ.  ಹೆಚ್ಚಿನ ಜನಾಂಗದವರು ಮಾಂಸಾಹಾರಿಗಳು.  ಕೊಡಗಿನವರು ಆತಿಥ್ಯಕ್ಕೆ ಹೆಸರಾದವರು.

 ಪ್ರವಾಸಿಗರ ಆಕರ್ಷಣಾ ಸ್ಥಳಗಳು

ಧಾರ್ಮಿಕ ಕ್ಷೇತ್ರಗಳು


ತಲಕಾವೇರಿ

ಕೊಡಗಿನ ಪವಿತ್ರ ಯಾತ್ರಾಕ್ಷೇತ್ರ ತಲಕಾವೇರಿ.  ಕರ್ನಾಟಕದ ‘ಜೀವನದಿ’ ಎನಿಸಿರುವ ಕಾವೇರಿಯ ಉಗಮ ಸ್ಥಳ ಇದು.  ತಲಕಾವೇರಿಯ ಪವಿತ್ರ ಗುಂಡಿಗೆಯಲ್ಲಿ ಉಗಮವಾಗುವ ಕಾವೇರಿ. ಕೊಡಗಿನ ಕುಲದೇವಿಯೂ ಆಗಿರುವ ಕಾವೇರಿಯನ್ನು ಕೊಡಗಿನ ಜನ ‘ಕಾವೇರಮ್ಮೆ’ ಎಂದು ಭಕ್ತಿ, ಗೌರವದಿಂದ ಕರೆಯುತ್ತಾರೆ. 

ತಲಕಾವೇರಿಯ ಸುತ್ತಮುತ್ತಲಿನ ರಮಣೀಯ ಪ್ರಕೃತಿಯನ್ನು ವೀಕ್ಷಿಸಲು ಇಲ್ಲಿನ ಬ್ರಹ್ಮಗಿರಿ ಬೆಟ್ಟವನ್ನು ಏರಬೇಕು.    ಸುಮಾರು 300 ಮೆಟ್ಟಿಲುಗಳನ್ನು ಹೊಂದಿರುವ ಬ್ರಹ್ಮಗಿರಿಯ ತುದಿಭಾಗದಲ್ಲಿ ನಿಂತರೆ ಮುಗಿಲನ್ನು ಚುಂಬಿಸ ಹೊರಟಂತೆ ನಿಂತಿರುವ ಗಿರಿ-ಶಿಖರಗಳು… ಎತ್ತ ನೋಡಿದರಲ್ಲಿ ಹಸಿರು ತುಂಬಿಕೊಂಡ ನಿಸರ್ಗ ಕಂಡುಬರುತ್ತದೆ.  ಬ್ರಹ್ಮಗಿರಿ ಏರಿ ಪ್ರಕೃತಿಯ ಸುಂದರತೆ ಕಂಡಾಗ ಕಾವೇರಿ ದರ್ಶನ ಭಾಗ್ಯ ಪೂರ್ಣ.

 ಭಾಗಮಂಡಲ

‘ದಕ್ಷಿಣ ಕಾಶಿ’ ಎನಿಸಿಕೊಂಡಿರುವ ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯವು ಕೊಡಗಿನ ಪವಿತ್ರ ಯಾತ್ರಾಕ್ಷೇತ್ರ. ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣದಿಂದ ಈ ತಾಣಕ್ಕೆ ಭಾಗಮಂಡಲ ಎಂಬ ಹೆಸರು ಬಂದಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಯ ಜೊತೆಗೆ ಕನ್ನಿಕಾ  ಮತ್ತು ಗುಪ್ತಗಾಮಿನಿ ಸುಜ್ಯೋತಿ ನದಿಗಳು ಸೇರಿಕೊಂಡು ಪುಣ್ಯಧಾಮವಾಗಿದೆ.

 ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ಕೋಟೆಗಳು, ಪುರಾತನ ದೇವಸ್ಥಾನಗಳು, ಪಾರ್ಕ್‌‌ಗಳು, ಜಲಪಾತಗಳು ಮತ್ತು ಅಭಯಾರಣ್ಯಗಳಂತಹ ಆಕರ್ಷಕ ಸ್ಥಳಗಳು ಕೊಡಗಿನಲ್ಲಿವೆ. ಇಲ್ಲಿಗೆ ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತಾರೆ. ಕೊಡಗಿನ ಪ್ರಮುಖ ಆಕರ್ಷಣೆಯೆಂದರೆ ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್‌, ನಾಲ್ಕ್‌ನಾಡ್‌ ಅರಮನೆ ಮತ್ತು ಗದ್ದಿಗೆ (ರಾಜರ ಸಮಾಧಿ).

 

ಕೊಡಗಿನಲ್ಲಿ ಚೆಲವಾರ ಜಲಪಾತ, ಹಾರಂಗಿ ಡ್ಯಾಮ್‌, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್‌, ಹೊನ್ನಮ್ಮನ ಕೆರೆ ಮತ್ತು ಮಂಡಲಪಟ್ಟಿ ಪ್ರದೇಶಗಳಂತ ನಿಸರ್ಗ ತಾಣಗಳನ್ನು ನೋಡಬಹುದು. ಎಲ್ಲೂ ಕಾಣಸಿಗದ ಪ್ರಾಣಿಗಳನ್ನು ನೋಡುವಲ್ಲಿ ಆಸಕ್ತಿಯಿರುವವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಕೂಡಾ ನಿಸರ್ಗಪ್ರಿಯ ಪ್ರವಾಸಿಗರಿಗೆ ಭೇಟಿ ನೀಡಲು ಸೂಕ್ತ ಸ್ಥಳ.

 

 

 

 

 

   

2 Responses to ಕೊಡಗು ಮತ್ತು ಜನಪದ ಸಂಸ್ಕೃತಿ

  1. rajanna. l

    kodagina jaanapada samskruthi thumbaane vishistavadudu. pattole-palameyindididu halavaru kruthiglu idakke nidrshanvagive. innashtu mahithigalu kodava jaaanapadeeya amshagalu adashtu beega hora barali embudu nanna anisike.

  2. k.uftu/tfu

    kjgj; good

Leave a Reply