ಕೊಲ್ಯ ರಮಾನಂದ ಸ್ವಾಮೀಜಿ

ಲೇಖನಗಳು ; ಸ್ಮರಣೆ - 0 Comment
Issue Date :

ಮಂಗಳೂರು : ಕೆಲ ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಯ ರಮಾನಂದ ಸ್ವಾಮೀಜಿ (66) ಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೇ 14 ರಂದು ಸಕ್ಕರೆಕಾಯಿಲೆಯಿಂದಾಗಿ ತೀವ್ರ ರಕ್ತದೊತ್ತಡ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮೀಜಿಯವರು ಸ್ಪಂದಿಸುತ್ತಿದ್ದರಾದರೂ, ಮೇ 23ರ ಬೆಳಗ್ಗೆ ಹೃದಯಾಘಾತಕ್ಕೀಡಾದರು. ಬಳಿಕ ಅಪರಾಹ್ನ ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು.
ರಮಾನಂದ ಸ್ವಾಮೀಜಿಗಳು ಕಳೆದ 40 ವರ್ಷಗಳ ಹಿಂದೆ ಕೊಲ್ಯ ಕ್ಷೇತ್ರದಲ್ಲಿ ಮೂಕಾಂಬಿಕಾ ದೇವಸ್ಥಾನದ ಪ್ರತಿಷ್ಠಾಪನೆ ನಡೆಸಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಕನ್ಯಾಕುಮಾರಿಯಿಂದ ಕಾಶಿ ಕ್ಷೇತ್ರದವರೆಗೆ 2 ಬಾರಿ ತೀರ್ಥ ಯಾತ್ರೆ ಮಾಡಿದ ಬಳಿಕ ಕಾಶಿಯಿಂದ ಪೂಜಿಸಿ ತಂದ ಕಾಶಿ ಶಿವಲಿಂಗ- ಅನ್ನಪೂರ್ಣೇಶ್ವರಿ ಲಿಂಗವನ್ನು ಕೊಲ್ಯದ ಮೂಕಾಂಬಿಕಾ ದೇವಸ್ಥಾನದಲ್ಲಿ 1988ರ ಫೆ.19ರಂದು ಪ್ರತಿಷ್ಠೆ ಮಾಡಿದ್ದರು. 33 ವರ್ಷಗಳ ಕಾಲ ಶಬರಿಮಲೆ ಯಾತ್ರೆ ಕೈಗೊಂಡವರು 108 ದಿನಗಳ ಮೌನವ್ರತ ನಡೆಸಿದ್ದರು.

ಬಡವರಿಗಿಲ್ಲದ ಆಹಾರ ನನಗ್ಯಾಕೆ?
ದೇಶದ ಕೋಟ್ಯಂತರ ಜನರು ಆರೋಗ್ಯಕರ ಊಟ, ಉತ್ತಮ ಬಟ್ಟೆ, ವಾಸಯೋಗ್ಯ ಮನೆಯಿಲ್ಲದೆ ಬದುಕುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಯತಿವರ್ಯರು ಸುಖ ವೈಭವ ಅನುಭವಿಸುವುದರಲ್ಲಿ ಅರ್ಥವಿಲ್ಲ ಅಂದುಕೊಂಡ ಕೊಲ್ಯ ಶ್ರೀಗಳು 1980ರ ಜು.6ರಿಂದ ಅಕ್ಕಿಯಿಂದ ತಯಾರಿಸಿದ ಆಹಾರ, ಹಾಲು, ಹಣ್ಣು, ಸಕ್ಕರೆ ಹಾಗೂ ಎಲ್ಲಾ ರೀತಿಯ ಸಿಹಿ ತಿಂಡಿಗಳ ಸೇವನೆಯನ್ನು ನಿಲ್ಲಿಸಿದ್ದರು. ಕೇವಲ ಗೋಧಿಯಿಂದ ತಯಾರಿಸುತ್ತಿದ್ದ ಉಪ್ಪಿಟ್ಟು ಅವರ ಆಹಾರವಾಗಿತ್ತು.

ಸಂಘ ಚಟುವಟಿಕೆಗೆ ಬೆಂಬಲ
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸಂಘಪರಿವಾರದ ಎಲ್ಲ ಕಾರ್ಯಗಳಲ್ಲೂ ಸಕ್ರಿಯ ಸಹಭಾಗಿತ್ವ ನೀಡಿ ಬೆಂಬಲಿಸಿದ ಸ್ವಾಮೀಜಿಯವರು, ಹಿಂದು ಸಮಾಜಕ್ಕೆ ಯಾವುದೇ ಸಂಕಷ್ಟ ಬಂದಾಗ ಮುಂದೆ ನಿಂತು ಹೋರಾಟ ನಡೆಸುತ್ತಿದ್ದರು. ಹಿಂದು ಸಮಾಜೋತ್ಸವ, ಹಿಂದು ಜನಜಾಗೃತಿ, ಸಾಮಾಜಿಕ ಸಾಮರಸ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು. ಕಳೆದ 40 ವರ್ಷಗಳಿಂದಲೂ ಸಂಘದ ಸಂಪರ್ಕದಲ್ಲಿದ್ದ ಸ್ವಾಮೀಜಿಯವರು, ಸಾಮಾಜಿಕ ಸಾಮರಸ್ಯಕ್ಕಾಗಿ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಸಂತಾಪದ ಮಹಾಪೂರ
ಶ್ರೀಗಳ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಣಿಲ ಶ್ರೀ ಮೋಹನದಾಸ್ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪೂರ್ವಾಶ್ರಮ
ಸ್ವಾಮೀಜಿಯವರು 1949ರ ಡಿ.9ರಂದು ಕಾಸರಗೋಡು ತಾಲೂಕಿನ ಬದಿಯಡ್ಕದ ಉಬ್ರಂಗಳ ಗ್ರಾಮದ ನಡುಮೂಲೆ ಎಂಬಲ್ಲಿ ಕುಂಞಂಬು ಮಣಿಯಾಣಿ ಮತ್ತು ಮಾಕು ಅಮ್ಮ ದಂಪತಿಗೆ ಜನಿಸಿದರು. ಅಗಲ್ಪಾಡಿಯ ಅನ್ನಪೂಣೇಶ್ವರಿ ಪ್ರೌಢಶಾಲೆಯಲ್ಲಿ ಶ್ರೀಗಳ ವಿದ್ಯಾಭ್ಯಾಸ ನಡೆದಿತ್ತು. ನಂತರ 1979ರ ಏ.22ರಂದು ಕಾಕಿನಾಡದ ಪುಪೇಟೆಯ ಪರಮಹಂಸ ಧ್ಯಾನಯೋಗಿ ಶ್ರೀ ಶಿವಬಾಲಯೋಗಿ ಮಹಾರಾಜ್ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು.

   

Leave a Reply