ಕೋರ್ಟ್ ಅವಲಂಬನೆ ಎಷ್ಟು ಸೂಕ್ತ?

ಯುವ - 0 Comment
Issue Date : 10.07.2015

ಭಾರತ ರಾಷ್ಟ್ರವು ಹಳ್ಳಿಗಳ ರಾಷ್ಟ್ರ. ಇಲ್ಲಿ ಹಳ್ಳಿಗಳೇ ಪ್ರಧಾನ, ಹಳ್ಳಿಗಳ ಏಳಿಗೆ ರಾಷ್ಟ್ರದ ಏಳಿಗೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಸತ್ಯ. ಆದರೆ ಹಳ್ಳಿಗಳಲ್ಲಿ ವಾಸಿಸುವ ಜನಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. ನಗರಗಳಿಗೆ ದಿನೇ ದಿನೇ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಪ್ರಧಾನ ಕಾರಣ ಏನು ಎನ್ನುವುದು ಸ್ವಲ್ಪ ಕಷ್ಟವಾ ದರೂ ವಾಸ್ತವ ಯೋಚಿಸಬೇಕಲ್ಲವೆ?
ಹಳ್ಳಿಯಿಂದ ನಗರಕ್ಕೆ ಹೋದವರು ನಗರಕ್ಕೆ ಹೊಂದಿ ಕೊಂಡು ಅಲ್ಲಿಯ ಜೀವನವನ್ನು ಅನುಸರಿಸುತ್ತಾರೆ. ನಾನು ಚೆನ್ನಾಗಿದ್ದಾರೆ ಸಾಕು, ಬೇರೆಯವರು ಏನೂ ಬೇಕಾದರೂ ಆಗಲಿ ಎನ್ನುವವರು ಹೆಚ್ಚಾಗಿದ್ದಾರೆ. ಹಳ್ಳಿಯಲ್ಲಿ ನಾವು – ನಮ್ಮವರು – ನಮ್ಮ ಕುಟುಂಬ – ನಮ್ಮ ಊರು ಎನ್ನುವ ಸ್ವಭಾವ ಹುಟ್ಟಿನಿಂದಲೇ ಬರುತ್ತದೆ. ನಗರದಲ್ಲಿ ಇಲ್ಲವೆಂದು ಅಲ್ಲ, ಆದರೆ ಅವರ ಸಂಖ್ಯೆ ಕಡಿಮೆ ಇದೆ ಎನ್ನಬಹುದು. ನಾವು ಎನ್ನುವುದು ಹೋಗಿ, ನಾನು ಎನ್ನುವುದು; ನಮ್ಮ ಕುಟುಂಬ ಹೋಗಿ ನನ್ನ ಕುಟುಂಬ; ನಾನು, ನನ್ನ ಹೆಂಡತಿ ಅಬ್ಬಬ್ಬಾ ಎಂದರೆ ಮಕ್ಕಳು ಎನ್ನುವುದು ಕಂಡುಬರುತ್ತದೆ. ಜನ್ಮವಿತ್ತ ತಾಯಿ ತಂದೆ ಎಲ್ಲರೂ ಲೆಕ್ಕವೇ ಇಲ್ಲದ ಸ್ಥಿತಿಯನ್ನು ತಲುಪಿರುತ್ತಾರೆ. ಇಂತಹ ಸ್ಥಿತಿಯಲ್ಲಿ ನಮ್ಮ ಕುಟುಂಬ, ನಮ್ಮ ಊರು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಈ ರೀತಿಯ ನಗರ ಜೀವನ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಹಳ್ಳಿಗಳಲ್ಲಿ ಈ ರೀತಿಯ ವ್ಯವಸ್ಥೆ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಒಬ್ಬರಿಗಾಗಿ ಒಬ್ಬರು – ಎಲ್ಲರಿಗಾಗಿ ಎಲ್ಲರು ಎನ್ನುವಂತೆ ಜೀವಿಸುತ್ತಿರುತ್ತಾರೆ. ಈ ಜೀವನ ನಡೆಸುವ ಹಳ್ಳಿಯಲ್ಲಿ ಯಾವುದೇ ಕಷ್ಟಗಳು ಬಂದರೂ ಎಲ್ಲರೂ ಸೇರಿ ಆ ಕಷ್ಟವನ್ನು ಎದುರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರೀಕರಣದ ಪ್ರಭಾವದಿಂದ ಅಲ್ಲಿಯೂ ಎಲ್ಲೋ ಒಂದು ಕಡೆ ವ್ಯತ್ಯಾಸ ಆಗುತ್ತಿರುವಂತೆ ಕಾಣುತ್ತದೆ. ಅಲ್ಲಿಯೂ ಸಹ ದ್ವೇಷ, ಅಸೂಯೆ, ತಾರತಮ್ಯ ಎದ್ದು ಕಾಣುತ್ತಿದೆ. ಅದಕ್ಕೆ ಕಾರಣ ಬೇರೆಯೇ ಇರಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ, ಇದನ್ನು ಮಾಡಿ, ಇದನ್ನು ಬಿಡಿ ಎನ್ನುವುದನ್ನು ಜನ ಪ್ರತಿನಿಧಿಗಳಾಗಲೀ ಕುಟುಂಬದ ಒಡೆಯನಾಗಲೀ ಅಥವಾ ಊರಿನ ಮುಖಂಡನಾಗಲಿ ಎಂದು ಎಲ್ಲಿಯೂ ಹೇಳುವ ಉದಾಹರಣೆಗಳೇ ಮಾಯ ವಾಗಿವೆ.
20 ವರ್ಷಗಳ ಪೂರ್ವದಲ್ಲಿ ಹಳ್ಳಿಯಲ್ಲಿ ಜನರ ಮಧ್ಯೆ ಯಾವುದೇ ಜಗಳ ಪ್ರಾರಂಭವಾದರೆ ಅದನ್ನು ಬಗೆಹರಿ ಸುತ್ತಿದ್ದದ್ದು ಊರಿನ ಯಜಮಾನರುಗಳೇ. ಅದೇ ರೀತಿಯಲ್ಲಿ ಕುಟುಂಬದಲ್ಲಿ ಏರುಪೇರುಗಳಾದರೆ ಮನೆಯ ಒಡೆಯ / ಒಡತಿ ಅದನ್ನು ಬಗೆಹರಿಸುತ್ತಿದ್ದರು. ಅದೇ ರೀತಿಯಲ್ಲಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅನುಭವಿ ಮುಖಂಡರು, ಯಜಮಾನರು, ವಿದ್ಯಾವಂತರು ಸಮಸ್ಯೆ ಗಳನ್ನು ಬಗೆಹರಿಸುತ್ತಿದ್ದರು. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಕರೆದು ಬುದ್ಧಿ ಹೇಳಿ ಸರಿಯಾಗಿ ನಡೆ ಎಂದು ತಿಳಿಸುತ್ತಿದ್ದರು. ಅದನ್ನು ಸರಿಪಡಿಸಿಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡದೆ ಇರುವ ಮಾನಸಿಕತೆ ಬೆಳೆದಿರುವುದರಿಂದ ಈ ವ್ಯವಸ್ಥೆ ಮರೆಯಾಗುತ್ತಿದೆ. ಎಲ್ಲ ಸಮಸ್ಯೆಗಳೂ ಕೋರ್ಟಿನಲ್ಲಿಯೇ ತೀರ್ಮಾನ ಆಗಬೇಕು ಎನ್ನುವಂತಹ ಹಂಬಲ ಜನರಲ್ಲಿ ಹೆಚ್ಚಾಗಿದೆ ಎನಿಸುತ್ತಿದೆ.
ಸಣ್ಣ ಸಮಸ್ಯೆಯಾಗಲೀ ದೊಡ್ಡ ಸಮಸ್ಯೆಯಾಗಲೀ ಅದು ಕೋರ್ಟಿನಲ್ಲಿಯೇ ತೀರ್ಮಾನವಾಗಬೇಕೇ? ಎನ್ನುವುದು ನನ್ನ ಪ್ರಶ್ನೆ. ಹಿಂದೆ ಕೋರ್ಟಿಗೆ ಹೋಗುವುದೇ ಒಂದು ಅಪರಾಧ ಆಗಿರುತ್ತಿತ್ತು. ಅದೇ ರೀತಿಯಲ್ಲಿ ಪೊಲೀಸ್ ಠಾಣೆಗೆ ಹೋದರೆ ಅಂತಹ ವ್ಯಕ್ತಿಗೆ ಹಳ್ಳಿಯಲ್ಲಿ ಯಾವುದೇ ಮರ್ಯಾದೆ ಸಿಗುತ್ತಿರಲಿಲ್ಲ. ಆದರೆ ಇಂದು ಸಣ್ಣ ಸಣ್ಣ ವಿಷಯಕ್ಕೂ ಪೊಲೀಸ್ ಠಾಣೆ, ಕೋರ್ಟು, ಕಚೇರಿಗಳಿಗೆ ಹೋಗಿ ಬರುವುದು ಸರ್ವೇ ಸಾಮಾನ್ಯವಾಗಿದೆ. ಯಾವ ರೀತಿಯಲ್ಲಿ ಎಂದರೆ ಯಜಮಾನರು, ಅನುಭವಿಗಳು, ತಿಳಿದವರು, ಹಿರಿಯರು ಏನೇ ಹೇಳಿದರೂ ಅದನ್ನು ಲೆಕ್ಕಿಸದೆ ಕೋರ್ಟ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂಬ ಮನಸ್ಥಿತಿ ಬಂದುಬಿಟ್ಟಿದೆ. ಕೋರ್ಟ್ ಸಾಕ್ಷಿಗಳನ್ನು ಪರಿಶೀಲಿಸಿ ತೀರ್ಮಾನವನ್ನು ಕೊಟ್ಟಿರುತ್ತದೆ. ಸಾಕ್ಷಿಗಳು ಯಾವುದೋ ಆಸೆ ಆಮಿಷಗಳಿಗೆ ಒಳಗಾಗಿ ಸುಳ್ಳು ಸಾಕ್ಷಿಗಳ ನ್ನು ಸೃಷ್ಟಿಸಿ ಹೇಳಿದರೂ ಅದನ್ನು ನೋಡಿ ತೀರ್ಮಾನ ಕೊಡುವ ಕೋರ್ಟ್ ಅದೆಷ್ಟು ವಾಸ್ತವವಾಗಿ ಪರಿಶೀಲಿಸುತ್ತದೆ ಎನ್ನುವುದು ಯೋಚಿಸಬೇಕಾದ ಸಂಗತಿಯಾಗಿದೆ. ‘ಯಾವ ದೇಶದಲ್ಲಿ ನ್ಯಾಯಾಲಯಗಳು ಹೆಚ್ಚು ಹೆಚ್ಚು ಇರುತ್ತವೆಯೋ ಅಲ್ಲಿ ಹೆಚ್ಚು ಹೆಚ್ಚು ಅನ್ಯಾಯಗಳು ನಡೆಯುತ್ತಿರುತ್ತವೆ’ ಎಂದು ಎಲ್ಲೋ ಓದಿದ್ದು ನೆನಪಿಗೆ ಬರುತ್ತದೆ. ಅದೇ ರೀತಿಯಲ್ಲಿ ಅಪರಾಧಗಳು ಹೆಚ್ಚಾದಂತೆಲ್ಲಾ ಪೊಲೀಸ್ ರಕ್ಷಣೆ ಹೆಚ್ಚಾಗುತ್ತದೆ. ಈ ವ್ಯವಸ್ಥೆ ನಮಗೆ ಬೇಕಾ ಎನ್ನುವುದು ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ.
ಹಿಂದೆ ಪರಸ್ಪರ ಮಾತುಕತೆಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಲ್ಲದೇ ಆ ಸಮಯದಲ್ಲಿ ಜನರು ಕ್ಷೇಮವಾಗಿಯೇ ಜೀವಿಸುತ್ತಿದ್ದರು. ಆದರೆ ಇಂದಿನ ದಿನಗಳ ಲ್ಲಿ ಪ್ರತಿಯೊಂದು ಹಂತದಲ್ಲಿಯೂ ಕೋರ್ಟ್ ನಿರ್ದೇಶನ ನೀಡುವುದು, ತೀರ್ಮಾನ ಹೇಳುವ ಮೊದಲೇ ಕೆಲಸವನ್ನು ಸ್ಥಗಿತಗೊಳಿಸುವುದು ಇಂತಹ ಅನೇಕ ಬೇಡದ ವಿಚಾರ ಕಾಣುತ್ತಿದೆ. ಇದೊಂದು ಅನಾರೋಗ್ಯಕರ ಸಂಗತಿ.
ಇತ್ತೀಚಿನ ದಿನಗಳಲ್ಲಿ ಸರಿಯಾದ ಆಡಳಿತ ನಡೆಸಲು ಸರ್ಕಾರದ ಹುದ್ದೆಗಳನ್ನು ತುಂಬಲು, ಸಂಸಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವುದನ್ನು, ಶಾಲಾ ಪಠ್ಯಕ್ರಮವನ್ನು ಇದೇ ಇರಬೇಕು ಎನ್ನುವುದನ್ನು, ಉದ್ಯೋಗದ ಮೀಸಲಾತಿ ಯನ್ನು, ರಾಜಕೀಯ ಬೆಳವಣಿಗೆಯನ್ನು ಇತ್ಯಾದಿ ಎಲ್ಲ ವನ್ನೂ ಕೋರ್ಟ್ ತೀರ್ಮಾನ ನೀಡಿದರೆ ಮಾತ್ರವೇ ಆ ಕೆಲಸಗಳು ಜಾರಿಯಾಗುತ್ತಿರುವ ಪರಿಸ್ಥಿತಿ ಬಂದಿದೆ. ಕರ್ನಾ ಟಕದಲ್ಲಿ ಸರಿಯಾದ ಸಮಯಕ್ಕೆ, ಪ್ರಜಾ ಪ್ರಭುತ್ವದ ನೀತಿಗೆ ಅನುಗುಣವಾಗಿ, ಸಂವಿಧಾನಕ್ಕೆ ಬದ್ಧವಾಗಿ ಚುನಾವಣೆ ನಡೆಯಬೇಕಾದರೂ ಕೋರ್ಟ್‌ನ ತೀರ್ಮಾನ ವನ್ನು ಕಾಯುತ್ತಿರುವುದು ಗಮನಿಸಬಹುದು. ಕೋರ್ಟ್ ಹೇಳುವ ಮೊದಲು ಅದನ್ನು ಸರಿ ಮಾಡಿಕೊಂಡು ಹೋಗಲು ಸಾಧ್ಯವಿಲ್ಲವೆ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಲ್ಲಿ ಅದು ಖಂಡಿತ ಸಾಧ್ಯವಾಗುತ್ತದೆ.
‘ಅತಿಯಾದದ್ದು ಯಾವುದೂ ಒಳಿತಲ್ಲ’ ಎನ್ನುವಂತೆ. ಅತಿಯಾದ ಕೋರ್ಟ್‌ನ ಅವಲಂಬನೆಯೂ ಒಳಿತು ತಾರದು.
ನಮ್ಮ ನಮ್ಮಲ್ಲೇ ಹಿರಿಯರು, ಅನುಭವಿಗಳ ಮುಂದೆ ಆಗುವ ತೀರ್ಮಾನಗಳಿಗೆ ಕೋರ್ಟ್ ಕಛೇರಿ ಅಂತ ಹೋಗಿ ಅದಕ್ಕೆ ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡಿದಲ್ಲಿ ಆದರಿಂದ ದ್ವೇಷವೇ ಹೆಚ್ಚಾಗುತ್ತದೆ ವಿನಾ ಕಡಿಮೆಯಂತೂ ಆಗುವುದಿಲ್ಲ. ಆದ್ದರಿಂದ ನ್ಯಾಯಾಲಯವನ್ನು ಅವಶ್ಯಕತೆ ಇದ್ದಷ್ಟೇ ಬಳಿಸಿಕೊಳ್ಳಬೇಕೇ ವಿನಾ ಬೇಡವಾದ ವಿಷಯಕ್ಕೆ ಕೋರ್ಟನ್ನು ಅವಲಂಬಿಸಬಾರದು. ಕೆಲ ಪ್ರಭಾವಿಗಳು, ರಾಜಕಾರಣಿಗಳು, ಕೋರ್ಟಿನ ನ್ಯಾಯಾಧೀಶರುಗಳನ್ನು ಆಸೆ – ಆಕಾಂಕ್ಷೆಗಳನ್ನು ತೋರಿಸಿ ಹಣಕ್ಕಾಗಿ ನ್ಯಾಯವನ್ನೇ ಸತ್ಯವನ್ನೇ ಮಾರಿಕೊಳ್ಳುವ ಕೆಲಸ ನಡೆದಿದೆಯೆಂಬ ಅನು ಮಾನ ಕಂಡು ಬರುತ್ತಿದೆ. ಈ ರೀತಿಯ ಸಂದರ್ಭಗಳು ಇರುವಾಗ ಕೋರ್ಟಿನ ತೀರ್ಪು ಅಂತಿಮ ಎನ್ನುವುದು, ಅದಕ್ಕೇ ಅವಲಂಬಿತವಾಗುವುದು ಎಷ್ಟು ಸೂಕ್ತ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

– ಅರುಣಕುಮಾರ, ಯಳನಾಡು

   

Leave a Reply