ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಚಿಕ್ಕಮಂಗಳೂರು - 0 Comment
Issue Date : 14.05.2015

ಕಡೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ನಿರ್ಮಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕಡೂರಿನ ಜನತೆಯ ಸಮಕ್ಷಮದಲ್ಲಿ ಈಶ್ವರಾನಂದಪುರ ಸ್ವಾಮೀಜಿ ಅನಾವರಣಗೊಳಿಸಿದರು. ತಿಂಥಿಣಿ ಮಠದ ಸಿದ್ಧರಾಮಾನಂದಪುರಿ ಮತ್ತು ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಉಪಸ್ಥತಿರಿದ್ದರು.
ತಿಂಥಿಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿ ರಾಯಣ್ಣ 1836 ರಲ್ಲೇ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದ. ಆದರೆ ನಮ್ಮ ಮಹಾನ್ ಇತಿಹಾಸಕಾರರು 1856ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಮೊದಲಿಗ ರಾಯಣ್ಣ ಎಂಬುದನ್ನು ಸರ್ಕಾರ ಮತ್ತು ಇತಿಹಾಸ ತಜ್ಞರು ಈ ಬಗ್ಗೆ ಗಮನಹರಿಸಿ ಸತ್ಯವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಶಾಸಕ ವೈ.ಎಸ್.ವಿ.ದತ್ತ ಕಾರ್ಯಕ್ರಮ ಉದ್ಘಾ ಟಿಸಿ, ರಾಯಣ್ಣ ಸರ್ವ ಜನಾಂಗಕ್ಕೂ ಸಲ್ಲುವ ವ್ಯಕ್ತಿ. ಆತ ಕುರುಬ ಜನಾಂಗದವನಾದರೂ ವೀರಶೈವ ವರ್ಗಕ್ಕೆ ಸೇರಿದ ಕಿತ್ತೂರು ರಾಣಿ ಚೆನ್ನಮ್ಮರ ರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಕನಕ ದಾಸರ ಭಾವಚಿತ್ರ ಅನಾವರಣಗೊಳಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳು ಮತ್ತು ಪೂರ್ಣ ಕುಂಭಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ, ತಹಸೀಲ್ದಾರ್ ಚಿನ್ನರಾಜು, ಪುರಸಭೆ ಅಧ್ಯಕ್ಷೆ ಹಾಬೇರಾಬಿ ಮತ್ತಿತರರು ಹಾಜರಿದ್ದರು.
ಸಂಗೊಳ್ಳಿ ರಾಯಣ್ಣನ ಚರಿತ್ರೆ
ಕಿತ್ತೂರಿನ ಸಂಸ್ಥಾನದ ಸ್ವಾತಂತ್ರ್ಯ ರಕ್ಷಣೆಗಾಗಿ ಕಿತ್ತೂರು ಸಂಸ್ಥಾನದಲ್ಲಿ ಹುಟ್ಟಿದ ವೀರ ಸಂಗೊಳ್ಳಿರಾಯಣ್ಣ ಕಿತ್ತೂರಿನ ರಕ್ಷಣೆಗಾಗಿ ಅಸಾಮಾನ್ಯ ಶೌರ್ಯ ತೋರಿದ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರಿಗೆ ಆಪತ್ತು ಬಂದಿದೆ ಎಂದು ರಾಣಿ ಕೈಜೋಡಿಸುವಂತೆ ಕರೆಕೊಟ್ಟಾಗ ಕತ್ತಿ ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ. ಬ್ರಿಟಿಷರು ತಾವು ಉದಾರಿಗಳೆಂದು ತೋರಿಸಿ ಕೊಳ್ಳಲು ಕೆಲವು ರಾಜಬಂದಿಗಳನ್ನು ಬಿಡುಗಡೆ ಮಾಡಿ ದರು. ಅದರಲ್ಲಿ ರಾಯಣ್ಣನೂ ಇದ್ದ. ಭೂಮಿತಾಯಿ ಯಾದ ಕಿತ್ತೂರು ಸಂಸ್ಥಾನವನ್ನು ಬ್ರಿಟಿಷರಿಂದ ಮುಕ್ತಗೊಳಿಸುವುದೇ ಇದಕ್ಕಾಗಿ ರಾಯಣ್ಣನ ಗುರಿ ಆಗಿತ್ತು. ಜನರನ್ನು ಒಂದೆಡೆ ಸೇರಿಸಿ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಸಂಗ್ರಹಿಸಿದ. ಆದರೆ ರಾಣಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಬಂದು ಎರಗಿತು. ಆದರೆ ರಾಯಣ್ಣ ಎದೆಗುಂದಲಿಲ್ಲ. ‘ರಾಣಿಯ ದತ್ತು ಪುತ್ರ ಶಿವಲಿಂಗಪ್ಪರೇ ಕಿತ್ತೂರಿನ ಸಿಂಹಾಸನದ ಹಕ್ಕು ದಾರರು’ ಎಂದು ಘೋಷಿಸಿದ. ಸುರಪುರದ ಅರಸ ವೆಂಕಪ್ಪನಾಯಕನ ಸಹಕಾರದೊಂದಿಗೆ ರಾಯಣ್ಣ ಸೈನೈದೊಂದಿಗೆ ದಾಳಿಯನ್ನು ಮಾಡುತ್ತ ಬ್ರಿಟಿಷರ ನಿದ್ದೆಗೆಡಿಸಿದ. ರಾಯಣ್ಣನನ್ನು ಹಿಡಿಯಲು ಬ್ರಿಟಿಷ್ ಸರ್ಕಾರ ತನ್ನ ಸೈನ್ಯವನ್ನು ಕಳುಹಿಸಿತು. ರಾಯಣ್ಣ ಕಿತ್ತೂರಿಗೆ ನುಗ್ಗಿ ಕಿತ್ತೂರನ್ನು ವಶಪಡಿಸಿಕೊಂಡನು. ಸಹಿಸಲಾಗದ ಬ್ರಿಟಿಷರು ಸಂಚನ್ನು ರೂಪಿಸಿ ಕಿತ್ತೂರಿನ ದ್ರೋಹಿಗಳಾದ ಲಿಂಗನಗೌಡ, ವೆಂಕನಗೌಡರ, ಓಲಿಕಾರ ಲಕ್ಕಪ್ಪರನ್ನು ಜಮೀನಿನ ಆಸೆ ತೋರಿಸಿ ತಮ್ಮ ಸಂಚಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದರು. ವೆಂಕನಗೌಡ, ಲಿಂಗನಗೌಡ ರಾಯಣ್ಣನಿಗೆ ಆಪ್ತರಾದರು. ರಾಯಣ್ಣ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿ ಹೊರ ಟಾಗ ಮೋಸದಿಂದ ಬಂಧಿಸಿದರು. ಆನಂತರ ರಾಯಣ್ಣನ ಶೌರ್ಯಕ್ಕೆ ಹೆದರಿದ ಆಂಗ್ಲ ಅಧಿಕಾರಿಗಳು ತರಾತುರಿಯಲ್ಲಿ ರಾಯಣ್ಣನನ್ನು ಗಲ್ಲಿಗೇರಿಸಿ ಬಿಟ್ಟರು.

   

Leave a Reply