ಕ್ರಿಶ್ಚಿಯನ್ ಮಿಶನರಿಗಳ ಕುತಂತ್ರ!

ಲೇಖನಗಳು - 0 Comment
Issue Date :

-ಚಿರಂಜೀವಿ ಭಟ್

ಡಿಸೆಂಬರ್ 25 ಬೆಳಗ್ಗೆ ಏಕಾಏಕಿ ವಾಟ್ಸ್‌ಆ್ಯಪ್ ಬಡಿದುಕೊಳ್ಳಲು ಶುರುವಾಯಿತು. ಏನು ಎಂದು ನಿದ್ದೆಗಣ್ಣಿನಲ್ಲಿ ನೋಡಿದರೆ ಕ್ರಿಸ್‌ಮಸ್ ಶುಭಾಶಯಗಳು. ಅರೇ ನಾನು ಕ್ರಿಶ್ಚಿಯನ್ನಾ ಎಂದು ನನಗೆ ಆ ನಿದ್ದೆಗಣ್ಣಿನಲ್ಲಿ ಅನಿಸಿದ್ದು ಸುಳ್ಳಲ್ಲ. ಯಾಕಿಷ್ಟು ಮೆಸೆಜ್‌ಗಳು? ಸರಿ ಮೆಸೆಜ್ ಕಳಿಸಿದವರ‌್ಯಾರು? ಡಿಸೋಜ, ಜಾನ್. ರೊಡ್ರಿಕ್, ರಾಬರ್ಟ್ ಇವರ‌್ಯಾರೂ ಅಲ್ಲ. ಅದೇ ಗಣೇಶ, ಮಹೇಶ, ಸಂಜಯ್, ವಿನಯ್, ಶರತ್, ಮಂಜುನಾಥ್. ಇಮಾಮ್ ಸಾಬಿಗೂ, ಗೋಕುಲಾಷ್ಟಮಿಗೂ ಏನ್ ಸಂಬಂಧ ಎನ್ನುವುದು ಹಳೇ ಮಾತು. ಜನಾರ್ದನನಿಗೂ ಜೀಸಸ್‌ಗೂ ಏನ್ ಸಂಬಂಧ ಎಂಬುದು ಹೊಸತು.

 ಇದಕ್ಕೆ ಕಾರಣ ಸ್ವತಃ ಹಿಂದೂಗಳು ಹೌದು ಹಾಗೂ ಹಿಂದೂಗಳು ಅಲ್ಲ. ನಮ್ಮ ಅಳಿವಿಗೆ ನಾವೂ ಕಾರಣ ಹೌದು, ಆದರೆ ನಾವು ಕಾರಣರಲ್ಲ ಎಂಬ ಸ್ಥಿತಿಗೆ ಬರುವುದಕ್ಕೆ ಮಾತ್ರ ಖಂಡಿತವಾಗಿಯೂ ನಾವೇ ಕಾರಣ. ಒಂದು ಉದಾಹರಣೆ ಕೊಡುತ್ತೇನೆ: ಲಕ್ಕಸಂದ್ರದಲ್ಲಿರುವ ಮೇರಿ ಇಮ್ಯಾಕ್ಯೂಲೇಟ್ ಕಾನ್ವೆಂಟ್‌ನಲ್ಲಿ ಇಬ್ಬರು ಹಿಂದೂ ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಾರಣ ಇಷ್ಟೇ: ಪ್ರಿಯಾಂಕಾ ಜನಾರ್ದನ್ ಮತ್ತು ಸೊನಾಲಿ ದಯಾನಂದ ಸಾಗರ್ ಸೇರಿದಂತೆ ಏಳು ಹುಡುಗಿಯರು ಶಾಲೆಯ ಗ್ರೌಂಡ್‌ನಲ್ಲಿ ಹೋಳಿ ಹಬ್ಬ ಆಚರಿಸಿರುತ್ತಾರೆ. ಇದು ಕ್ರಿಶ್ಚಿಯನ್ ಶಾಲಾ ಮಂಡಳಿಯ ಗಮನಕ್ಕೆ ಬಂದು, ಟೀಚರ್‌ಗಳು ಅವರಿಗೆ ಎಲ್ಲರ ಮುಂದೆ ಅವಮಾನವಾಗುವಂಥ ಶಿಕ್ಷೆ ಕೊಡುತ್ತಾರೆ. ಇದನ್ನು ತಡೆಯಲಾಗದೇ ಇಬ್ಬರು (ಪ್ರಿಯಾಂಕಾ ಮತ್ತು ಸೊನಾಲಿ) ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ಹಿಂದೂಗಳು ಧ್ವನಿ ಎತ್ತುವುದಿರಲಿ, ಹೀಗೊಂದು ಘಟನೆ ನಡೆದಿದೆ ಎಂದಾದರೂ ಕೇಳಿದ್ದಾರಾ? ಇಲ್ಲ. ಇದು ಒಂದು ಉದಾಹರಣೆ ಅಷ್ಟೇ. ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್ ಸೇರಿದಂತೆ ಬೆಂಗಳೂರಿನಲ್ಲೇ ಇರುವ ಕ್ರಿಶ್ಚಿಯನ್ ಶಾಲೆಗಳಿಗೆ ಹೋದರೆ ಅಲ್ಲಿ ಹಿಂದೂ ಹಬ್ಬದ ಆಚರಣೆಗೆ ತೀವ್ರ ವಿರೋಧ ಇರುವುದನ್ನು ಅಥವಾ ಆಚರಿಸಿದರೆ ಮಕ್ಕಳನ್ನು ತೀವ್ರ ಮುಜುಗರಕ್ಕೀಡು ಮಾಡುವುದನ್ನು ನೀವು ನೋಡಬಹುದು. ಆದರೆ ಕ್ರಿಸ್‌ಮಸ್ ಬಂದಾಗ ಮಾತ್ರ ಎಲ್ಲೆಲ್ಲೂ ಸಂಭ್ರಮ. ಇದರಲ್ಲೂ ಎರಡು ವಿಧ. ಚಿಕ್ಕಮಕ್ಕಳಿಗೆ ಸಂತಾ ಕ್ಲಾಸ್ ಎಂಬ ಯಾವ ಬೈಬಲ್‌ನಲ್ಲೂ  ಬಾರದ, ಕಪೋಲಕಲ್ಪಿತ ಅಜ್ಜನನ್ನು ಸೃಷ್ಟಿಸಿ ಅವನು ನಿಮಗೆಲ್ಲ  ಕ್ರಿಸ್‌ಮಸ್‌ನಂದು ಬೆಳಗಾಗುವಷ್ಟರಲ್ಲಿ ಚಾಕ್ಲೇಟ್ ತಂದು ಕಾಲುವಾಸನೆ ಬರುವ ಕಾಲ್ಚೀಲದಲ್ಲಿ ಅಡಗಿಸಿಟ್ಟಿರುತ್ತಾರೆ. ಅದಕ್ಕೆ ನೀವು

ಕ್ರಿಸ್‌ಮಸ್‌ನ್ನು ಅಷ್ಟು ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿಕೊಡುವುದು. ಇನ್ನೊಂದು ವಿಧವೆಂದರೆ, 5ನೇ ತರಗತಿಯ ಮೇಲ್ಪಟ್ಟ ಹುಡುಗರಿಗೆ ಕ್ರಿಸ್‌ಮಸ್ ಆಚರಣೆ ಕಡ್ಡಾಯ ಮಾಡಿಬಿಡುವುದು. ಇದೇ ಮಕ್ಕಳು ದೊಡ್ಡವರಾಗುವ ವೇಳೆ ವರ್ಷದಲ್ಲಿ ಸಾಕಷ್ಟು ಬರುವ ಹಿಂದೂ ಹಬ್ಬಗಳನ್ನು ಮರೆತು, ಒಂದು ಕ್ರಿಸ್‌ಮಸ್‌ಗಾಗಿ ಕಾಯುತ್ತಾ ಕುಳಿತಿರುತ್ತಾರೆ. ನಾವು ಎಂದಾದರೂ ಶಾಲಾ ಮಂಡಳಿಗೆ ಈ ಬಗ್ಗೆ ಕೇಳಿದ್ದೀವಾ? ಇಲ್ಲ. ವಾಟ್ಸ್ ಆ್ಯಪ್ ಸೇರಿದಂತೆ ಹಲವಾರು ಕಡೆ ಹಿಂದೂಗಳು ಕ್ರಿಸ್‌ಮಸ್ ಶುಭಾಶಯ ತಿಳಿಸುವುದಕ್ಕೆ ಅರ್ಧ ಕಾರಣ ಇದು.

 ಇನ್ನರ್ಧ ನಮ್ಮದಲ್ಲದ್ದು. ಅಂದರೆ ಬೇರೆಯವರು ಮಾಡುವ ಕುತಂತ್ರದಿಂದಾಗಿ ಹಿಂದೂ ಹಬ್ಬಗಳು ನಶಿಸಿ ಕೇವಲ ಕ್ರಿಸ್‌ಮಸ್ ಮತ್ತು ಗುಡ್‌ಫ್ರೈಡೇ ಎಂಬುದರಲ್ಲೇ ಇರುತ್ತೇವೆ.

 ಮತಾಂತರ ಮಾಡುವ ಜಾಲದಲ್ಲಿ ಬಹುದೊಡ್ಡ ಹೆಸರು ದಿ ಸೆವೆಂಥ್ ಡೇ ಅಡ್ವೆಂಟಿಸ್ಟ್ . ಈ ತಂಡದ್ದು ಒಂದೇ ಗುರಿ. ಭಾರತವನ್ನು 2030ರ ವೇಳೆಗೆ ಕ್ರಿಶ್ಚಿಯನ್ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು. ಇದೇ ಉದ್ದೇಶದೊಂದಿಗೆ ಎನ್‌ಜಿಒ ಹೆಸರಿನಲ್ಲಿ ಬಡವರಿಗೆ ಸಹಾಯ ಮಾಡುತ್ತೀವಿ ಎಂದು ಭಾರತದಲ್ಲಿ  90ರ ದಶಕಗಳಿಂದಲೂ  ಬೇರು ಬಿಟ್ಟಿದೆ. ಇವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟರೆ ನಿಮಗೆ ತಿಳಿಯಬಹುದು. ಒಂದೇ ದಿನದಲ್ಲಿ ಆಂಧ್ರದ ಒಂಗೋಲ್‌ದಲ್ಲಿ 15,018 ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ಕೀರ್ತಿ ಸವೆಂಥ್ ಡೇ ಅಡ್ವೆಂಟಿಸ್ಟ್‌ಗಳದ್ದು. ಇವರು 2005ರ ವೇಳೆಗೆ 10,000 ಚರ್ಚ್‌ಗಳನ್ನು ಕಟ್ಟುವುದಕ್ಕೆ ಹಣ ಬೇಕು ಎಂದು ಅಡ್ವೆಂಟಿಸ್ಟ್‌ನ ರಾನ್ ವ್ಯಾಟ್ಸ್  ಕೇಳಿದ್ದಕ್ಕೆ ಚರ್ಚ್ ನಿರ್ಮಾಣ ಸಂಘಟನೆಯ ಕೈಲ್ ಫೀಸ್, ಒಂಗೋಲ್‌ದಲ್ಲಿ ಇವರು ಮಾಡಿರುವ ಸಾಧನೆಗೆ ಹೋಲಿಸಿದರೆ, 10,000 ಚರ್ಚ್ ಕಟ್ಟುವುದೇನು ದೊಡ್ಡ ವಿಷಯವೇ ಅಲ್ಲ ಎಂದು ಪತ್ರ ಬರೆದಿದ್ದರು. ಹೀಗೆ ಮತಾಂತರ ಮತ್ತು ಚರ್ಚ್ ನಿರ್ಮಾಣ ಮುಖೇನ ಒಂದು ದಾರಿಯಲ್ಲಿ ಜೀಸಸ್‌ನನ್ನು ಭಾರತದಲ್ಲಿ ಪ್ರತಿಷ್ಠಾಪಿಸ ಹೊರಟಿದ್ದರೆ, ಮತ್ತೊಂದು ಕಡೆ ಹಿಂದೂ ಹಬ್ಬಗಳ ಆಚರಣೆ ಮತ್ತು ಸಂಸ್ಕೃತಿಯನ್ನು ನಾಶ ಮಾಡಿ ತಮ್ಮತನವನ್ನು ಸಾಧಿಸುವುದು ಇವರ ಮತ್ತೊಂದು ದಾರಿ. ಒಟ್ಟಾರೆ ಇವರ ಉದ್ದೇಶ ಭಾರತ ಕ್ರಿಸ್ತನ ಪಾದದಡಿಯಲ್ಲಿ ಬಿದ್ದಿರಬೇಕು ಎಂಬುದಷ್ಟೇ ಆಗಿರುತ್ತದೆ.

ಅಲ್ಲ ಸ್ವಾಮಿ, ಒಂದು ಕ್ರಿಸ್‌ಮಸ್ ಗಿಡ ತಂದು, ಅದಕ್ಕೆ ಗಂಟೆ-ಚೆಂಡು ಕಟ್ಟಿ, ಜಿಂಗಲ್ ಬೆಲ್ ಹಾಡು ಹಾಕಿ, ಕೇಕ್ ಕತ್ತರಿಸುವುದರ ಹಿಂದೆ ಇಷ್ಟೆಲ್ಲ ಸಂಗತಿ ಇದೆಯಾ ಎಂದು ನಿಮಗನಿಸಬಹುದು. ನಾವು ಬೇಸ್ತು ಬೀಳುವುದೇ ಅಲ್ಲಿ. ಇದು ಯಾರಿಗೂ ಗೊತ್ತಾಗದಂತೆ ಮಾಡುವ ಕೆಲಸ. ಕ್ರಿಶ್ಚಿಯನ್ನರಿಗೆ ಮತಾಂತರ ಮಾಡುವುದಕ್ಕೆ ಮನೆಯ ನೀರಿನ ಟ್ಯಾಂಕ್‌ನಲ್ಲಿ  ಮೊಣಕಾಲಷ್ಟು  ನೀರಿದ್ದರೂ ಸಾಕು. ಮೂಗು ಮುಚ್ಚಿಕೊಂಡು ಮೂರು ಸಲ ಮುಳುಗೇಳಿಸಿ ಮತಾಂತರ ಮಾಡಿಸುತ್ತಾರೆ. ಹಿಂದೂಗಳು ಮಾತ್ರ ಮೂರು ಮತ್ತೊಂದು ಜನರಿಗೆ ಪೆಂಡಾಲ್ ಹಾಕಿ, ವಾದ್ಯ ಗೋಷ್ಠಿ ಇರಿಸಿ ಘರ್ ವಾಪಸಿ ಮಾಡುವುದು. ಇದೇ ಮಾದರಿಯಲ್ಲೇ ಅವರು ನಮ್ಮ ಸಂಸ್ಕೃತಿಯ ಮೇಲೆ ನಿಧಾನವಾಗಿ ದಾಳಿ ಮಾಡುತ್ತಿರುವುದು. ನಿಮ್ಮ ಮಕ್ಕಳು ಇವತ್ತಿಗೂ ಹಣೆಗೆ ಕುಂಕುಮ ಇಟ್ಟುಕೊಂಡು ಬಿಷಪ್ ಕಾಟನ್ ಶಾಲೆಗೆ ಹೋಗುವಂತಿಲ್ಲ ಎಂದರೆ, ಯಾವ ಮಟ್ಟಿಗೆ ಅವರು ಮುಂದಿನ ಪೀಳಿಗೆಯನ್ನು ತಯಾರು ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಸ್ವತಃ ಕೆ.ಜೆ. ಜಾರ್ಜ್ ಅವರ ಕುಟುಂಬದ ಒಬ್ಬ ಹುಡುಗ ಬಿಷಪ್ ಕಾಟನ್ ಶಾಲೆಯಲ್ಲಿ ಓದುತ್ತಿರುವುದರಿಂದ, ಯಾರೊಬ್ಬರೂ ಹಿಂದೂಗಳ ಹಕ್ಕು, ಹಬ್ಬಗಳ ಆಚರಣೆಯ ಹಕ್ಕಿನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇಲ್ಲ. ಪ್ರಶ್ನಿಸಿದರೆ ನಮ್ಮ ಮಗನಿಗೆ ಏನಾದರೂ ತೊಂದರೆಯಾದೀತು ಎಂದು ಸುಮ್ಮನಿದ್ದಾರೆ. ಆದರೆ ನಾಳೆ ಇದೇ ಹಿಂದೂ ಮಕ್ಕಳು, ಹಿಂದೂ ಆಚರಣೆಗಳು ಸರಿ ಇಲ್ಲ ಎಂದು ಕ್ರಿಸ್‌ಮಸ್ ಕೇಕ್ ಕತ್ತರಿಸುತ್ತಾರೆ ಎಂಬುದು ನೆನಪಿರಲಿ.

 ಹಿಂದೂ ಹಬ್ಬಗಳು ಎಲ್ಲವೂ ಅವೈಜ್ಞಾನಿಕ, ಕ್ರಿಶ್ಚಿಯನ್ನರ ಹಬ್ಬ  ಮತ್ತು ಸಂತಾ ಕ್ಲಾಸ್ ಮಾತ್ರ ವೈಜ್ಞಾನಿಕ ಎಂದೆಲ್ಲ ಬ್ರಿಟಿಷರ ಕಾಲದಿಂದಲೂ ಬಿಂಬಿಸುತ್ತಿರುವ ಕಾರಣ ನಾವಿನ್ನೂ ಅದೇ ಬೌದ್ಧಿಕ ದಾರಿದ್ರ-ದಾಸ್ಯದಲ್ಲೇ ಇದ್ದೀವಿ. ಅದರಿಂದ ಹೊರಬಂದು, ನಿನ್ನ ಕ್ರಿಸ್‌ಮಸ್ ನಿನಗೆ ಹೇಗೆ ಕುಣಿದು ಕುಪ್ಪಳಿಸುವಷ್ಟು ಆನಂದ ತಂದುಕೊಡುತ್ತದೆಯೋ, ಭಾರತೀಯನಾಗಿ, ಹಿಂದೂವಾಗಿ ಉಗಾದಿ, ದೀಪಾವಳಿ, ಗಣೇಶ ಚತುರ್ಥಿ, ಹೋಳಿಯಂಥ ಹಬ್ಬಗಳು ಅದಕ್ಕಿಂತ ಹೆಚ್ಚಿನ ಖುಷಿಯನ್ನು ನನಗೆಕೊಡುತ್ತಿದೆ ಎಂದು ಗಟ್ಟಿಯಾಗಿ, ಆತ್ಮವಿಶ್ವಾಸದಿಂದ ಹೇಳುವ ಮೂಲಕ ನಮ್ಮ ಹಬ್ಬವನ್ನು ನಾವು ಉಳಿಸಿಕೊಳ್ಳುವ ಜರೂರತ್ತು ನಮಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಕ್ರಿಸ್‌ಮಸ್ ವಿರೋಧಿಸಿದರೂ ಕೆಟ್ಟವರು, ಹಿಂದೂ ಹಬ್ಬ ಆಚರಿಸಿದರೂ ಕೆಟ್ಟವರು. ನಮ್ಮ ಹಬ್ಬ ಆಚರಿಸಿಯೇ ಕೆಟ್ಟವರಾಗೋಣ ಬಿಡಿ.

 ತುಪ್ಪದ ಹೋಳಿಗೆ ತಿಂದ ಸಮಾಧಾನವಾದರೂ ಇರುತ್ತದೆ.

 

   

Leave a Reply