ಗಂಗೆಯ ಶಿಖರಗಳಲ್ಲಿ ರವಿ ಕಾಣದ್ದನ್ನುಕಂಡ ಕವಿ

ಲೇಖನಗಳು - 0 Comment
Issue Date :

-ಬಿ. ಕೆ. ರಂಗನಾಥ

ಪ್ರವಾಸ ಹೋಗುವ ಅಪೇಕ್ಷೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದರಲ್ಲೂ ಪುಣ್ಯಕ್ಷೇತ್ರಗಳ ಪ್ರವಾಸ ಮಾಡಬೇಕೆಂಬ ಇಚ್ಛೆಯುಳ್ಳವರೇ ಅಧಿಕ. ಅಂತಹ ಆಸ್ತಿಕರ ಪೈಕಿ ಅಧ್ಯಾತ್ಮ ಸಾಧಕರಾಗಿದ್ದರೆ ಅವರು ಅಲ್ಲಿನ ದೈವೀಶಕ್ತಿಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ತವಕದಲ್ಲಿರುತ್ತಾರೆ. ಅವರಿಗೆ ಇಹದ ಯಾವುದೇ ವಸ್ತು, ನೋಟ, ದೃಶ್ಯ ಮುಖ್ಯವಾಗುವುದೇ ಇಲ್ಲ ಮತ್ತು ಗಮನಕ್ಕೂ ಬಾರದು. ಇನ್ನು ಸಾಮಾನ್ಯ ವ್ಯಕ್ತಿಗಳಾಗಿ ಹೋದವರು ಕೂಡ ಅಲ್ಲಿನ ದೇವರ ಮೂರ್ತಿಯನ್ನು ಕಂಡೋ, ಅಲ್ಲಿನ ಇತಿಹಾಸವನ್ನು ಕೇಳಿಯೋ ಸಂಪೂರ್ಣ ಭಾವಪರವಶರಾಗುತ್ತಾರೆ, ದೇವರ ಅನುಗ್ರಹಕ್ಕಾಗಿ ಭಕ್ತಿಪೂರ್ವಕವಾಗಿ ಅಲ್ಲಿನ ಶಿಷ್ಟಾಚಾರಗಳನ್ನು ಪಾಲಿಸಿ ಕೃತಾರ್ಥಭಾವವನ್ನು ಪಡೆದು ಹಿಂದಿರುಗುತ್ತಾರೆ. ಮತ್ತೊಂದು ಗುಂಪಿದೆ, ಅವರು ಅಲ್ಲಿನ ಪ್ರಕೃತಿಸೌಂದರ್ಯವನ್ನು ಆಸ್ವಾದಿಸಲೆಂದೇ ಹೋಗುತ್ತಾರೆ. ಈ ಗುಂಪಿನ ಪ್ರವಾಸಿಗರಿಗೆ ಅಲ್ಲಿನ ಇತಿಹಾಸ, ಪುರಾಣ, ದೇವರು-ದಿಂಡರು ಇವ್ಯಾವುದೂ ಮುಖ್ಯವಾಗುವುದಿಲ್ಲ. ಅವರಿಂದ ನೀವು ಹೆಚ್ಚಿನ ಮಾಹಿತಿಯನ್ನಂತೂ ನಿರೀಕ್ಷಿಸುವಂತೆಯೇ ಇಲ್ಲ. ಆದರೆ, ಇವೆಲ್ಲವೂ ಸಮ್ಮಿಳಿತಗೊಂಡಿರುವ ಪ್ರವಾಸಿಗರು ಬಹಳ ಕಡಿಮೆಯೇ! ಅದರಲ್ಲೂ ತಾನು ಕಂಡದ್ದನ್ನು ಸಮಗ್ರದೃಷ್ಟಿಯಿಂದ ವಿಶ್ಲೇಷಿಸಿ ಓದುಗರಿಗೆ ಉಣಬಡಿಸುವ ಸಾಮರ್ಥ್ಯ ಇರುವವರಂತೂ ತೀರಾ ಕಡಿಮೆ. ಅಂತಹ ಅಪರೂಪದ ವ್ಯಕ್ತಿಗಳ ಪೈಕಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರೂ ಓರ್ವರಾಗಿದ್ದರು ಎಂಬುದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ವಿಷಯ. ಅವರು ರಚಿಸಿರುವ ಪ್ರವಾಸ ಕಥನ ಗಂಗೆಯ ಶಿಖರಗಳಲ್ಲಿ ಪುಸ್ತಕವೇ ಇದಕ್ಕೆ ಸಾಕ್ಷಿ.

ಪುಸ್ತಕದ ಮುನ್ನುಡಿಯಲ್ಲೇ ಅವರು ಬರೆದಿರುವುದು ಹೀಗೆ: ನಾನು ಪುಣ್ಯ ಸಂಪಾದನಾರ್ಥಿಯಾದ ಯಾತ್ರಿಕನೂ ಅಲ್ಲ ಅಥವಾ ಕೇವಲ ಸೌಂದರ್ಯಾನ್ವೇಷಿಯಾದ ಪ್ರವಾಸಿಯೂ ಅಲ್ಲ. ಈ ಎರಡೂ ಅಲ್ಲದ ಒಂದು ನಿಲುವಿನಲ್ಲಿ ನಾನು ಹೊರಟ ದಾರಿಯಲ್ಲಿ  ನಾನು ಪಡೆದ ಅನುಭವಗಳನ್ನು ಈ ಕಥನದಲ್ಲಿ ನಿರೂಪಿಸಿದ್ದೇನೆ ಈ ಮಾತು ಅಕ್ಷರಶಃ ಸತ್ಯವಾಗಿದೆ. ಪುಸ್ತಕವನ್ನು ಓದಿದವರಿಗೆ ಅಧ್ಯಾತ್ಮದ ಉತ್ತುಂಗದಲ್ಲಿರುವ ಭಾವಪರವಶತೆ, ಯಾತ್ರಾ ಉದ್ದೇಶದ ಭಕ್ತಿ ಹಾಗೂ ಪ್ರಾಕೃತಿಕ ದೃಶ್ಯಾವಳಿಯ ಸೌಂದರ್ಯೋಪಾಸನೆಯ ನಡುವೆ ಇನ್ನೊಂದು ದೃಷ್ಟಿಕೋನವಿದೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ.

 ಈ ಪ್ರವಾಸ ಕಥನದಲ್ಲಿ ಇರುವುದು ಹಿಮಾಲಯದ ಚಾರ್ ಧಾಮ್‌ಗಳೆಂದು ಪ್ರಖ್ಯಾತಿ ಪಡೆದಿರುವ ಗಂಗೋತ್ರಿ, ಯಮುನೋತ್ರಿ, ಬದರಿ ಮತ್ತು ಕೇದಾರಕ್ಕೆ ಭೇಟಿ ನೀಡಿದ ಅನುಭವ. ಬಹುತೇಕ ಜನರು ಇವುಗಳನ್ನು ಸಂದರ್ಶಿಸಿಯೇ ಇರುತ್ತಾರೆ. ಜಿಎಸ್‌ಎಸ್ ಅವರು ನೋಡಿದ ದೃಶ್ಯಗಳನ್ನೂ ನೋಡಿಯೇ ಇರುತ್ತಾರೆ.

ಆದರೆ, ಅಂತಹವರೂ ಸಹ ಈ ಪ್ರವಾಸ ಕಥನವನ್ನು ಓದಿದಾಗ ವಾಹ್! ಎಂದು ಉದ್ಗರಿಸದೇ ಇರಲು ಸಾಧ್ಯವಿಲ್ಲ. ನಮ್ಮ ದೇಶದ ನಂಬಿಕೆ, ಧರ್ಮ, ಸಂಸ್ಕೃತಿ, ಪರಂಪರೆ, ಪುರಾಣ, ಇತಿಹಾಸಗಳೆಲ್ಲದರ ಪ್ರತ್ಯಕ್ಷ ಸ್ವರೂಪವನ್ನು ಈ ನಾಲ್ಕು ಧಾಮಗಳಲ್ಲಿ ಗುರುತಿಸಿರುವುದು ಜಿಎಸ್‌ಎಸ್ ಅವರ ವಿಶೇಷತೆ. ಸರ್ವಧರ್ಮ ಸಮಭಾವ, ವಿವಿಧತೆಯಲ್ಲಿ ಏಕತೆ, ದೇವನೊಬ್ಬ ನಾಮ ಹಲವು, ಸತ್ಯವೊಂದು; ಹೇಳುವ ವಿಧಾನ ಬೇರೆ ಮುಂತಾದ ರಾಷ್ಟ್ರೀಯ ಅಖಂಡತೆಯ ದೃಷ್ಟಿಕೋನ ಈ ಪ್ರವಾಸಕಥನದಲ್ಲಿ ಮೆರೆದಿದೆ. ಶಿವ-ವಿಷ್ಣು, ರಾಮ-ಕೃಷ್ಣ, ಗಂಗೆ-ಕಾವೇರಿ, ಶಂಕರ-ಬಸವ, ಉತ್ತರ-ದಕ್ಷಿಣ ಹೀಗೆ ಪ್ರತಿಯೊಂದರಲ್ಲೂ ಪ್ರತ್ಯೇಕತೆಯನ್ನೇ ಕಾಣಬಯಸುವ ಕಲುಷಿತ ಮನಸ್ಸುಗಳನ್ನು ತೊಳೆದು ಶುದ್ಧಗೊಳಿಸುವ ಸಾಮರ್ಥ್ಯ ಈ ಬರವಣಿಗೆಯಲ್ಲಿದೆ.

 ಕೃತಿಗೆ ಹೆಸರಿಟ್ಟ ಬಗ್ಗೆ ಉಲ್ಲೇಖಿಸುತ್ತಾ ಅವರು ಹೀಗೆ ಹೇಳುತ್ತಾರೆ:  ಈ ಕೃತಿಗೆ ನಾನು ಗಂಗೆಯ ಶಿಖರಗಳಲ್ಲಿ ಎಂದು ಹೆಸರು ಕೊಟ್ಟಿದ್ದೇನೆ. ಗಂಗೋತ್ರಿಯಂತೂ ಗಂಗೆಯ ಜನ್ಮಭೂಮಿ; ಕೇದಾರ ಬದರಿಗಳು ಶಿವ ಹಾಗೂ ವಿಷ್ಣುವಿನ ನೆನಪುಗಳಿಂದ ಪೌರಾಣಿಕವಾಗಿ ಗಂಗೆಯೊಂದಿಗೆ ಸಂಬಂಧಿಸಿರುವ ಜೊತೆಗೆ ಅಲ್ಲಿ ಉಗಮಿಸುವ ಮಂದಾಕಿನೀ, ಅಲಕನಂದಾ ನದಿಗಳೂ ಗಂಗೆಯನ್ನು ಸೇರುತ್ತವೆ. ಯಮುನೆಯಂತೂ ಗಂಗೆಯನ್ನು ಪ್ರಯಾಗದಲ್ಲಿ ಸೇರುತ್ತಾಳೆ. ಭಾರತದ ಶತಶತಮಾನಗಳ ನಾಗರಿಕತೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ ಗಂಗೆಗೆ ಸಂಬಂಧಿಸಿದ ಈ ಪರ್ವತ ಶಿಖರಗಳ ನಡುವೆ ನಾನು ಕೈಗೊಂಡ ಈ ಪ್ರವಾಸ ಕಥನಕ್ಕೆ ಗಂಗೆಯ ಶಿಖರಗಳಲ್ಲಿ ಎಂದು ಕರೆದಿದ್ದೇನೆ.

 ಇನ್ನೊಂದೆಡೆ ಅವರು ಬರೆಯುತ್ತಾ,  ಬದರಿ ಕೇದಾರಗಳಿಗೆ ಹೊರಡುವ ಯಾತ್ರಿಕರು ಮೊದಲು ಬರಬೇಕಾದ್ದು ಹರಿದ್ವಾರಕ್ಕೆ-ಶಿವಭಕ್ತರು ಈ ಊರನ್ನು ಹರದ್ವಾರವೆಂದೂ, ವಿಷ್ಣುಭಕ್ತರು ಇದನ್ನು ಹರಿದ್ವಾರವೆಂದೂ ಕರೆಯುತ್ತಾರೆ. ಶಿವನ ಆವಾಸವೆಂದು ನಂಬಿರುವ ಕೇದಾರಕ್ಕೆ ಹೋಗಬೇಕಾದರೂ, ವಿಷ್ಣುವಿನ ಕ್ಷೇತ್ರವೆಂದು ಹೆಸರಾಗಿರುವ ಬದರಿಗೆ ಹೋಗಬೇಕಾದರೂ ಇದೇ ಬಾಗಿಲು. ಹೀಗಾಗಿ ಇದು ಹರದ್ವಾರವೂ ಹೌದು, ಹರಿದ್ವಾರವೂ ಹೌದು.

 ಇಡೀ ಪ್ರವಾಸ ಕಥನದಲ್ಲಿ ಪೌರಾಣಿಕ, ಐತಿಹಾಸಿಕ ಸಂಗತಿಗಳು, ಜನರ ನಂಬಿಕೆಗೆ ಇಂಬು ಕೊಡುವ ಚಿಹ್ನೆಗಳೂ, ವಿವಿಧ ಚರಿತ್ರಕಾರರ ಉಲ್ಲೇಖಗಳೂ ಸಾಕಷ್ಟಿವೆ. ಮಹಮ್ಮದೀಯ ಚರಿತ್ರಕಾರರೂ ಹರಿದ್ವಾರವನ್ನು ಗಂಗಾದ್ವಾರ ಎಂದು ಉಲ್ಲೇಖಿಸಿರುವ ಉದ್ದೇಶ, ವಿಶೇಷತೆಯ ವಿವರಣೆ ಇಲ್ಲಿದೆ. ಭಗೀರಥ ತಪಸ್ಸು, ಗಂಗೆಯ ಆವಿಷ್ಕಾರ, ಪ್ರದೀಪ-ಶಂತನು ಘಟನೆಯಿಂದ ಹಿಡಿದು ಭಾರದ್ವಾಜ-ಘೃತಾಚಿಯ ಮಿಲನದಿಂದ ದ್ರೋಣಾಚಾರ್ಯರು ಹುಟ್ಟಿದ್ದು, ಅರ್ಜುನನು ತೀರ್ಥಯಾತ್ರೆಯ ವೇಳೆ ನಾಗಲೋಕನ ಉಲೂಚಿಯನ್ನು ವರಿಸಿದ್ದು ಮುಂತಾದ ಎಲ್ಲ ಮಹಾನ್ ಘಟನೆಗಳಿಗೆ ಈ ಗಂಗಾದ್ವಾರ ಸಾಕ್ಷಿಯಾಗಿರುವುದನ್ನು ಲೇಖಕರು ವಿವರಿಸಿದ್ದಾರೆ.

 ಗಂಗೆಯ ನೀರನ್ನು ಕುರಿತಾಗಿಯೂ ಅವರು ಧಾರ್ಮಿಕ, ಪೌರಾಣಿಕ, ಐತಿಹಾಸಿಕ, ವೈಜ್ಞಾನಿಕ ಶ್ರೇಷ್ಠತೆಯನ್ನು ಸಾರುವ ಘಟನಾವಳಿಗಳನ್ನು ಉಲ್ಲೇಖಿಸಿದ್ದಾರೆ. ಗಂಗೆಯ ಬಗ್ಗೆ ತನಗೆ ಯಾವುದೇ ಧಾರ್ಮಿಕ ಭಾವನೆ ಇಲ್ಲವೆಂದು ಹೇಳುತ್ತಿದ್ದ, ವಿಚಾರವಾದಿ ಎನಿಸಿಕೊಳ್ಳುತ್ತಿದ್ದ ಜವಾಹರಲಾಲ್ ನೆಹರು ಕೂಡ ತಮ್ಮ ಮರಣಪತ್ರದಲ್ಲಿ ಗಂಗೆಯ ಬಗ್ಗೆ ಭಾವುಕ ಉದ್ಗಾರ ದಾಖಲಿಸಿರುವುದನ್ನು ಲೇಖಕರು ಉದಾಹರಿಸಿದ್ದಾರೆ. ಬ್ರಿಟಿಷರು ಭಾರತದಿಂದ ತಮ್ಮ ದೇಶಕ್ಕೆ ಹಡಗಿನಲ್ಲಿ ಹೋಗುವಾಗ ಸೇವನೆಗಾಗಿ ಗಂಗೆಯ ನೀರನ್ನೇ ಶೇಖರಿಸಿ ಒಯ್ಯುತ್ತಿದ್ದರಂತೆ. ಇಂಗ್ಲೆಂಡ್ ತಲುಪುವವರೆಗೂ ಅದು ಹಾಳಾಗದೆ ಶುದ್ಧವಾಗಿಯೇ ಇರುತ್ತಿತ್ತು. ಆದರೆ, ವಾಪಸ್ ಭಾರತಕ್ಕೆ ಬರುವಾಗ ಅವರಿಗೆ ತೊಂದರೆಯಾಗುತ್ತಿತ್ತು. ಏಕೆಂದರೆ ಥೇಮ್ಸ್ ನದಿಯೂ ಸೇರಿದಂತೆ ಅವರ ದೇಶದಿಂದ ತರುವ ಯಾವುದೇ ನದಿಯ ನೀರು ಪ್ರಯಾಣ ಪೂರ್ತಿ ಹಾಳಾಗದೆ ಉಳಿಯುತ್ತಿರಲಿಲ್ಲ. ಅಷ್ಟೇಕೆ, ಭಾರತದ ಸಾಕಷ್ಟು ಸಂಗತಿಗಳನ್ನು ದ್ವೇಷಿಸುತ್ತಿದ್ದ ಮೊಗಲ್ ಚಕ್ರವರ್ತಿಗಳು ಸಹ ಗಂಗೆಯಲ್ಲಿನ ವಿಶೇಷ ಗುಣಗಳಿಂದಾಗಿ ಗಂಗಾಜಲವನ್ನೇ ಬಳಸುತ್ತಿದ್ದರು. ವಿಶ್ವವಿಖ್ಯಾತ ವಿಜ್ಞಾನಿ ಜಗದೀಶ ಚಂದ್ರ ಬೋಸ್ ಗಂಗಾಜಲದ ಬಗ್ಗೆ ಸಂಶೋಧನೆ ನಡೆಸಿ ಸ್ವಯಂಶುದ್ಧೀಕರಣ ಸಾಮರ್ಥ್ಯ ಗಂಗಾನದಿಗೆ ಇದೆ ಎಂದು ಹೇಳಿದ್ದಾರೆ. ಗಂಗೆಯ ಸರ್ವಶ್ರೇಷ್ಠತೆಯನ್ನು ಸಾರಲು ಲೇಖಕರು ಇವೆಲ್ಲವನ್ನೂ ಜೋಡಿಸಿರುವುದು ಅವರ ಪ್ರತಿಪಾದನೆಗೆ ಹೆಚ್ಚಿನ ಮೌಲ್ಯ ಒದಗಿಸಿದೆ.

 ಕೇವಲ ಇಷ್ಟೇ ಆಗಿದ್ದರೆ ಈ ಪುಸ್ತಕವು ಒಂದು ಧರ್ಮಗ್ರಂಥವೋ, ಇತಿಹಾಸಗ್ರಂಥವೋ ಆಗಿಬಿಡಬಹುದಾದ ಸಾಧ್ಯತೆ ಇತ್ತು. ಅದಕ್ಕೆ ಅವಕಾಶ ನೀಡದೆ ಒಳಲೆಯೊಳಗೆ ಹಾಲು ಹಾಕಿ ಮಗುವಿಗೆ ಕುಡಿಸುವಂತೆ ಲೇಖಕರು ಆಯಾ ಸ್ಥಳದ ಜನಜೀವನ, ಹವಾಮಾನ, ಪ್ರಯಾಣದ ವೇಳೆ ಜರುಗಿದ ತಮಾಷೆಯ ಘಟನೆಗಳು, ಮೈಜುಮ್ಮೆನ್ನುವ ದೃಷ್ಟಾಂತಗಳು ಮುಂತಾದವುಗಳೊಂದಿಗೆ ಮುಖ್ಯ ವಿಷಯವನ್ನು ಸೇರಿಸಿರುವುದರಿಂದ ಓದುಗರು ಸರಾಗವಾಗಿ ಓದಿಕೊಂಡು ಹೋಗಲು ಸಾಧ್ಯವಾಗಿದೆ. ಓರ್ವ ಪ್ರವಾಸಿಗನಿಗೆ ನೀಡಬೇಕಾದ ಮಾಹಿತಿಗಳೂ ಈ ಲೇಖನಗಳಲ್ಲಿ ಅಡಕವಾಗಿವೆ. ಅಲ್ಲಿ ವಾಹನಗಳಲ್ಲಿ ಓಡಾಡುವಾಗ, ನಡೆದು ಹೋಗಬಹುದಾದ ಸಂದರ್ಭಗಳಲ್ಲಿ ವಹಿಸಬೇಕಾದ ಎಚ್ಚರಿಕೆಗಳು, ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ವಿವೇಕಜಾಗೃತಿ, ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಅಲ್ಲಲ್ಲಿ ನಮಗೆ ಪ್ರಾಪ್ತವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಪ್ರವಾಸ ಕಥನಗಳಲ್ಲಿ ವೈಯಕ್ತಿಕ ವಿಷಯಗಳೇ ಬಹಳಷ್ಟು ಜಾಗ ಪಡೆದಿರುತ್ತವೆ. ಜಿಎಸ್‌ಎಸ್ ಈ ಬಗ್ಗೆ ತುಂಬಾ ಜಾಗರೂಕತೆ ವಹಿಸಿದ್ದಾರೆ. ಎಲ್ಲಿ ಎಷ್ಟು ಹೇಳಬೇಕೋ ಅಷ್ಟಕ್ಕೆ ಸೀಮಿತವಾಗಿಸಿದ್ದಾರೆ.

 ಈ ಪುಸ್ತಕದಲ್ಲಿ-ಗಂಗೆಯಲ್ಲಿ ದೀಪಮಾಲೆ, ಯಮುನೋತ್ರಿಯ ದಾರಿಯಲ್ಲಿ, ಕಣಿವೆಯಲ್ಲಿ ಖಾಂಡವ ದಹನ, ಗಂಗಾಲಹರಿ, ಕೇದಾರನಾಥಕ್ಕೆ, ವಿಶಾಲ ಬದರಿಗೆ, ಬೆಟ್ಟಗಳಿಂದ ಬಯಲಿಗೆ, ಹಿಮಾಲಯದ ಸ್ಮತಿ ಸಂಪುಟ-ಎಂಬ ಎಂಟು ಅಧ್ಯಾಯಗಳು ಲೇಖಕರ ಲೇಖನಿಯಿಂದ ಅನಾವರಣಗೊಂಡಿವೆ. 1985 ರಲ್ಲಿ ಮೊದಲು ಪ್ರಕಾಶನಗೊಂಡ ಪುಸ್ತಕವು ಈಗಾಗಲೇ ಎಂಟಕ್ಕೂ ಹೆಚ್ಚಿನ ಮುದ್ರಣವನ್ನು ಕಂಡಿರುವುದು ಪುಸ್ತಕವು ಕನ್ನಡಿಗರ ಮನ ಗೆದ್ದಿರುವುದಕ್ಕೆ ಸಾಕ್ಷಿ. ಸುಮಾರು ಮೂವತ್ತೆರಡು ವರ್ಷಗಳ ಹಿಂದೆ ಬರೆದಿರುವುದರಿಂದ ಸ್ಥಳೀಯ ಕೆಲವು ವಿವರಣೆಗಳು ಈಗ ಕಾಲಬಾಹ್ಯವಾಗಿರಬಹುದು. ಹವಾಮಾನದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಎಲ್ಲ ಕ್ಷೇತ್ರಗಳಲ್ಲೂ ಈಗ ಪ್ರವಾಸಿಗರ ದೃಷ್ಟಿಯಿಂದ ಸರ್ಕಾರಿ ಮತ್ತು ಖಾಸಗಿ ಸೌಲಭ್ಯಗಳು ಸಾಕಷ್ಟು ಹೆಚ್ಚಾಗಿವೆ. ಪ್ರಯಾಣದ ರೀತಿಯಲ್ಲೂ ಸುಧಾರಣೆಗಳಾಗಿವೆ. ಪುಸ್ತಕದಲ್ಲಿನ ಈ ಎಲ್ಲ ಅಂಶಗಳು ಅಂದಿಗಿಂತ ಇಂದು ಭಿನ್ನವಾಗಿರಬಹುದು. ಆದರೆ, ಬರವಣಿಗೆ, ನಿರೂಪಣೆ, ವಿಷಯ ವೈವಿಧ್ಯ, ಐತಿಹಾಸಿಕ ಮಾಹಿತಿ, ಪೌರಾಣಿಕ ವಿವರಣೆ, ಭಾವನಾತ್ಮಕ ಸಂಗತಿಗಳ ಮಟ್ಟಿಗಂತೂ ಪುಸ್ತಕವು ಎಂದೆಂದಿಗೂ ಪ್ರಸ್ತುತವೇ ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಕಾಲಿಕವಾಗಿ ಒಂದು ಮಾದರಿಯ ಪ್ರವಾಸ ಕಥನ ಇಲ್ಲಿ ರೂಪುಗೊಂಡಿದೆ ಎಂಬುದನ್ನು ಯಾರೂ ನಿರಾಕರಿಸಲಾರರು.

ಅದಕ್ಕೇ ತಾನೆ ರವಿ ಕಾಣದ್ದನ್ನು ಕವಿ ಕಂಡ ಎಂಬ ಲೋಕೋಕ್ತಿ ನಮ್ಮಲ್ಲಿ ಚಾಲ್ತಿಯಲ್ಲಿರುವುದು!

 

   

Leave a Reply