ಗಾದೆ ಮಾತುಗಳು

ಬೋಧ ಕಥೆ - 0 Comment
Issue Date : 08.05.2015

“ಆಡಿ ಉಂಬುವನ ಅರಸನಾಗುವುದಕ್ಕಿಂತ ಮಾಡಿ ಉಂಬುವನ ಆಳಾಗಿ ದುಡಿ’’ ಎನ್ನುವ ಗಾದೆಯಿದೆ. ಉಡಾಳನಾಗಿ ಉಂಡುಂಡು ದುಡಿಯದೇ ಯಾವ ಕೆಲಸವನ್ನು ಮಾಡದೇ ಪೋಕರಿಯಾಗಿ ತಿರುಗುವುದನ್ನು ನೋಡಿ ಈ ಗಾದೆ ಹುಟ್ಟಿಕೊಂಡಿದೆ. ‘‘ವೇದ ಸುಳ್ಳಾದರು ಗಾದೆ ಸುಳ್ಳಲ್ಲ’’ ಎಂಬುವ ನಾಣ್ಣುಡಿಯಿದೆ. ತಂದೆ-ತಾಯಿಯ ಮಾತನ್ನು ಆಲಿಸದೆ, ಗುರುಹಿರಿಯರ ಆಶೀರ್ವಾದ ಪಡೆಯದೇ ಉಂಡಾಡಿ ಗುಂಡನಂತೆ ಆಡಿ ಅಂಡಲೆಯವವನನ್ನು ನೋಡಿ ಹಿರಿಯರು ‘‘ಆಡಿ ಉಂಬುವನ ಅರಸನಾಗಬೇಡ’’ ಎಂದು ಹೇಳಿದ್ದಾರೆ. ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎನ್ನುವ ಗಾದೆಯೂ ಇದೆ. ಬಸವಣ್ಣ ‘‘ಕಾಯಕವೇ ಕೈಲಾಸ’’ ಎಂದು ತಮ್ಮ ವಚನಾಮೃತದಲ್ಲಿ ಹೇಳಿದ್ದಾರೆ. ಶ್ರೀಕೃಷ್ಣ ‘‘ಕರ್ತವ್ಯವೇ ದೇವರು’’ ಎಂದು ಗೀತೋಪದೇಶದಲ್ಲಿ ಸಾರಿ ಸಾರಿ ಹೇಳಿದ್ದಾನೆ.
‘ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂದು ಹಿರಿಯರ ಮಾತು. ಒಬ್ಬ ವ್ಯಕ್ತಿ ಆಡಿ ಉಂಬುವನ ಜೊತೆ ಸೇರಿ, ತಾನು ಏನನ್ನೂ ಕೆಲಸ ಮಾಡದೆ ಉಡಾಳನಾಗಿ, ಹಿರಿಯರು ದುಡಿದು ಗಳಿಸಿದ ಆಸ್ತಿಯನ್ನು ಖರ್ಚುಮಾಡುತ್ತಾ ತಿರುಗಿದರೆ ಸ್ವಲ್ಪಕಾಲದಲ್ಲೇ ಆಸ್ತಿಯೆಲ್ಲಾ ಕರಗಿ ಹೋಗುತ್ತದೆ. ಅಂದರೆ ತಾನು ಮಾಡಿದ ಸಾಲಕ್ಕೆ ಮಾರಬೇಕಾಗುತ್ತದೆ. ಕೊನೆಗೆ ತಾನು ತಂದುಕೊಂಡ ದುಶ್ಚಟಗಳ ತಣಿಸಲು ಕಳ್ಳತನಕ್ಕಿಳಿಯಬೇಕಾಗುತ್ತದೆ. ಕಳ್ಳತನದಲ್ಲಿ ಸಿಕ್ಕಿಬಿದ್ದಾಗ ಜನರಿಂದ ‘ಛೀ… ಥೂ…’ ಎಂದು ಉಗುಳಿಸಿಕೊಳ್ಳುತ್ತಾರೆ. ಸಮಾಜ ಇಂಥವನನ್ನು ದೂರ ತಳ್ಳುತ್ತದೆ. ಹೆಂಡತಿ ಮಕ್ಕಳು ದೂರಸರಿಯುತ್ತಾರೆ. ಆಗ ಇವರು ಹೊಟ್ಟೆಗೆ ಬಟ್ಟೆಗೆ ಅಲೆದಾಡಬೇಕಾಗುತ್ತದೆ. ಕೊನೆಗೆ ಹುಚ್ಚನಾಗುತ್ತಾನೆ, ಬುದ್ಧಿ ನಾಶವಾಗುತ್ತದೆ. ‘‘ಬುದ್ಧಿ ನಾಶವಾದರೆ ಎಲ್ಲವೂ ನಾಶವಾಗುತ್ತದೆ’’ ಎಂದು ಭಗವದ್ಗೀತೆ ಹೇಳುತ್ತದೆ.
ಮೃಗ, ಪಶು, ಪಕ್ಷಿಗಳು; ಕ್ರಿಮಿಕೀಟಾದಿಯಾಗಿ ಎಲ್ಲಾ ಜೀವಿಗಳು ಸದಾ ತಮ್ಮ ಕಾಯಕದಲ್ಲಿ ನಿರತವಾಗಿರುತ್ತವೆ. ಉದಾಹರಣೆಯಾಗಿ ನೋಡೋಣ. ಕೋಳಿ ಸಮಯಕ್ಕೆ ಸರಿಯಾಗಿ ಕೂಗುತ್ತದೆ; ಕೋಗಿಲೆ ಸರಿಯಾಗಿ ಚೈತ್ರಮಾಸಕ್ಕೆ ತನ್ನ ಮಧುರ ಕಂಠದಿಂದ ಕೂಗಿ ಹಾಡುತ್ತದೆ. ಸಕಲ ಚರಾಚರಗಳು ಚಲಿಸುತ್ತಲಿರುತ್ತವೆ. ಇವು ಎಂದೂ ಸೋಮಾರಿಯಾಗುವುದಿಲ್ಲ ! ಮಾನವ ಮಾತ್ರ ಆಗಾಗ ಜಡತ್ವ ಹೊಂದಿ ಹಾಳಾಗುತ್ತಾನೆ.
“¨ÜáwÊæá¿á ®Üí¹ Ÿ¨ÜáPÜá
A¨ÜÃÜÈ ¨æàÊÜÃÜ ÖÜávÜáPÜá
¸ÝÙÜÈ ŸÃÜáÊÜâ¨Üá ¸æÙÜPÜá’
ಎಂದು ಕವಿ ಹಾಡುತ್ತಾನೆ. ಹಾಡಿನಂತೆ ನಡೆದುಕೊಳ್ಳುತ್ತಾನೆ. ‘ಆಡದೆ ಮಾಡು ವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು; ಆಡಿಯೂ ಮಾಡದವನು ಅಧಮನು’ ಎಂದು ಶರಣರು ಹೇಳುತ್ತಾರೆ. ಈಗ ಭರವಸೆಗಳನ್ನು ಕೊಡುವವರು ಬಹಳಷ್ಟು ಮಂದಿ ಇದ್ದಾರೆ. ಹಾಗೆ ಮಾಡುತ್ತೇನೆಂದು, ಹೀಗೆ ಮಾಡುತ್ತೇನೆಂದು ತುಂಬಾ ಮಾತನಾಡಿ ಯಾವ ಕೆಲಸವನ್ನೂ ಮಾಡದೇ ಇರುವವರೇ ಜಾಸ್ತಿ. ಇಂಥವರಿಗೆ ಹಿರಿಯರು, ‘ಆಡಿಯೂ ಮಾಡದವರು ಅಧಮ’ ಎಂದು ಹೇಳಿದ್ದಾರೆ. ‘ಆಡಿ ಕೆಡುವುದಕ್ಕಿಂತ ಮಾಡಿ ಕೆಡು’ ಎನ್ನುವ ಮಾತೊಂದಿದೆ. ಇದರ ಅರ್ಥ ‘ಸುಮ್ಮನೆ ಸೋಮಾರಿಯಾಗಿ ತಿರುತಿರುಗಿ ಕೆಡುವುದಕ್ಕಿಂತ ಕೆಟ್ಟರೂ ಚಿಂತೆಯಿಲ್ಲ ಕೆಲಸ ಮಾಡಿ ಕೆಡು’ ಎಂದು ನುಡಿದಿದ್ದಾರೆ. ‘ನೀ ಮಾಡಿದ ಕೆಲಸ ಕೆಟ್ಟರೂ ಅದರಿಂದ ನಿನಗೆ ಒಂದು ಅನುಭವ ಸಿಗುತ್ತದೆ’ ಎಂದು ಅನುಭವಿಗಳ ಮಾತು.
ಹಳ್ಳಿಯ ಜನರಿಗೆ (ಜಾನಪದರಿಗೆ) ದಿನನಿತ್ಯ ಕೆಲಸಕಾರ‌್ಯಗಳನ್ನು ಯಾರೂ ಹೇಳಿಕೊಡಲಿಲ್ಲ. ಅವರಾಗಿಯೇ ಅವರು ಕಲಿತುಕೊಂಡರು. ಅವರಿಗೆ ಪ್ರಕೃತಿ ಕಲಿಸಿತೆಂದೂ ಹೇಳಬಹುದು. ಅವರು ಬರೀ ಮಾತನಾಡುವುದಿಲ್ಲ. ಮಾತನಾಡದೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಬಡಿಗೇರರು, ಕಮ್ಮಾರರು, ಚಮ್ಮಾರರು, ಕುಂಬಾರರು ಹೀಗೆ ಆಯಗಾರರು ತಮ್ಮ ಕಾಯಕಗಳನ್ನು ತಪ್ಪದೇ ಅಚ್ಚುಕಟ್ಟಾಗಿ ಮಾಡುತ್ತಾರೆ. ಗುಡಿ-ಗುಂಡಾರಗಳಲ್ಲಿರುವ ಪೂಜಾರಿಗಳು ದೇವರ ಸೇವೆ ಮಾಡುತ್ತಾರೆ. ಇದರಲ್ಲಿ ಯಾರೇ ಆಗಲಿ ಕಾಯಕಕ್ಕೆ ಕೈಕೊಟ್ಟರೆ ಅವರ ಬದುಕು ಕಂದಕಕ್ಕೆ ಬೀಳುತ್ತದೆ, ದಿಕ್ಕಾಪಾಲಾಗುತ್ತದೆ.
ಮಹಿಳೆಯರು ಬೆಳಗಿನ ಜಾವ ಕೋಳಿ ಕೂಗುತ್ತಿದ್ದಂತೆ ಹಾಸಿಗೆಯಿಂದ ಎದ್ದವರು ಮನೆಯ ಮುಂದಿನ ಕಸವನ್ನು ಬಳಿದು, ಅಂಗಳವನ್ನು ಸ್ವಚ್ಛಗೊಳಿಸಿ, ಅಂಗಳಕ್ಕೆ ನೀರು ಹಾಕಿ, ರಂಗೋಲಿ ಬಿಡಿಸುತ್ತಾರೆ. ಅಡಿಗೆ ಮಾಡಿ ಮಕ್ಕಳಿಗೆ ಊಟಕ್ಕೆ ನೀಡಿ, ಶಾಲೆಗೆ ಕಳಿಸುತ್ತಾರೆ. ಹೊಲಕ್ಕೆ ಕೆಲಸಕ್ಕೆ ಹೋದ ಗಂಡನಿಗೆ ರೊಟ್ಟಿ, ಮುದ್ದೆ ಬುತ್ತಿ ಕಟ್ಟಿಕೊಂಡು ತಲೆಯ ಮೇಲೆ ಹೊತ್ತು, ಕೊಡದಲ್ಲಿ ನೀರು ತುಂಬಿಕೊಂಡು ನಡುವಿನ ಮೇಲೆ ಇಟ್ಟುಕೊಂಡು ಯಾವುದಾದರೊಂದು ಹಾಡನ್ನು ಗುನುಗುತ್ತಾ ದಾರಿಯಲ್ಲಿ ಸಾಗುತ್ತಾಳೆ. ಹೆಣ್ಣು ಹೊಲದಲ್ಲೂ ಮನೆಯಲ್ಲೂ ನಿರ್ವಂಚನೆಯಿಂದ ದುಡಿಯುತ್ತಾಳೆ.
ಪುರುಷ ಬೆಳಗ್ಗೆ ಎದ್ದವನೇ ಸೆಗಣಿ ಕಸ ಗುಡಿಸಿ, ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಾನೆ. ದನಕರುಗಳಿಗೆ ಮೇವು ಹಾಕಿ, ನೀರು ಕುಡಿಸಿ ಮನೆಗೆ ಬಾವಿಯಿಂದ ನೀರು ತಂದು ಹಂಡೆ ತುಂಬಿಸುತ್ತಾನೆ. ತದನಂತರ ರಂಟೆ ಕುಂಟೆಗಳನ್ನು ಸರಿಪಡಿಸಿಕೊಂಡು ಎತ್ತುಗಳೊಂದಿಗೆ ಚಕ್ಕಡಿಯಲ್ಲಿ ಹೊಲ – ಗದ್ದೆ ಗಳಿಗೆ ಕೆಲಸಕ್ಕೆ ಹೋಗುತ್ತಾನೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎನ್ನುವ ನಾಣ್ಣುಡಿಯಿದೆ. ರೈತ ಅಚ್ಚುಕಟ್ಟಾಗಿ ಬೇಸಾಯ ಮಾಡಿದರೆ ಅನ್ನಕ್ಕೆ ಕೊರತೆಯಿಲ್ಲ. ‘ಅನ್ನಕ್ಕೆ ಮಿಗಿಲು ದೇವರಿಲ್ಲ…’ ಎಂದು ಸರ್ವಜ್ಞ ಕವಿ ಹೇಳುತ್ತಾನೆ. ಇಂಥ ಅನ್ನವನ್ನು ನಾವು ಪಡೆಯಬೇಕಾದರೆ ನಾವು ಸದಾ ದುಡಿಯಬೇಕು. ಅದು ಯಾವ ಕ್ಷೇತ್ರವೇ ಆಗಿರಲಿ, ದುಡಿಮೆಗಾರನ ಕೆಲಸ ನಡೆಯುತ್ತಲೇ ಇರಬೇಕು. ಯಾರೂ ಉಂಡಾಡಿಯಾಗಿ ತಿರುಗಬಾರದು.
ಯೋಧನಾದವನು ದೇಶಕಾಯುವ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಾನೆ. ಯಾವಾಗಲೂ ಎಚ್ಚರವಾಗಿಯೇ ಇರುತ್ತಾನೆ. ಶತ್ರುಗಳು ಗಡಿಯೊಳಕ್ಕೆ ನುಸುಳದಂತೆ ನೋಡಿಕೊಳ್ಳುತ್ತಾನೆ. ಹೀಗೆ ರೈತ ಮತ್ತು ಯೋಧ ದೇಶವನ್ನು ರಕ್ಷಿಸುತ್ತಾರೆ. ಇವರಲ್ಲಿ ರೈತ ಸೋಮಾರಿಯಾದರೆ ದೇಶ ಬಿಕ್ಕುತ್ತದೆ. ಯೋಧ ಸೋಮಾರಿಯಾದರೆ ದೇಶ ಹಾಳಾಗುತ್ತದೆ. ಅದಕ್ಕಾಗಿಯೇ ಲಾಲ್‌ಬಹದ್ದೂರ್ ಶಾಸ್ತ್ರಿಗಳು ‘ಜೈ ಜವಾನ್ ಜೈ ಕಿಸಾನ್ ’’ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ.
‘ಗಾದೆಗಳು, ವೇದಗಳಿಗೆ ಸಮ’ ಎನ್ನುತ್ತಾರೆ ನಮ್ಮ ಜಾನಪದರು. ಜನಪದರ ನುಡಿಗಟ್ಟುಗಳು ನೀತಿ ಬೋಧನೆ ಮಾಡುತ್ತವೆ. ಒಂದೊಂದು ನುಡಿಗಟ್ಟಿಗೆ ಒಂದೊಂದು ಕಥೆಗಳಿರುತ್ತವೆ. ಒಂದೊಂದು ಕಥೆಗೆ ಒಂದೊಂದು ನೀತಿ ಇರುತ್ತದೆ. ಶ್ರಮಜೀವಿಗಳಾದ ಹಳ್ಳಿಗರು (ಜನಪದರು) ದೇವರಲ್ಲಿ ಕೇಳುವುದು ‘‘ಓ ದೇವರೆ, ನಮಗೆ ದುಡಿಯಾಕ ರಟ್ಯಾಗ ಶಕ್ತಿ ಕೊಡು’’ ಎಂದು. ಕಪಟದಾನ ಕೊಡುವವರಿಗೆ ಜನಪದರು –
“JÙæÛ¿á¨Üá JÙÜXoár gÙÜáۨݮÜÊÜ ÊÜÞw
PæãÚÛà ¸æÙÜQàÇæ ÎÊܱÜähæ ÊÜÞw¨ÜÃæ
Gí¨æí©WÜã ¹vܨÜá ŸvÜñÜ®Ü !’
ಎಂದು ಎಚ್ಚರಿಕೆ ನೀಡಿ, ನೀತಿ ಮಾರ್ಗ ತೋರಿಸುತ್ತಾರೆ.
‘ಊರಿಗೆ ದಾರಿ ಯಾರು ತೋರಿದರೇನು?’ ಮಹತ್ವವಾದ ಗಾದೆ ಇದು. ಗಾದೆಗಳು ವೇದಗಳಿಗೆ ಸಮವೆಂದು ಹೇಳುತ್ತಾರೆ ಜಾನಪದರು. ಒಂದು ಊರಿನಲ್ಲಿ ಒಬ್ಬ ಸಾಹುಕಾರನು ಇದ್ದನು. ಅವನು ನಮ್ಮ ಹಳ್ಳಿಯ ಮುಂದೇನಿ ಕಾರಿನಲ್ಲಿ ನಗರಕ್ಕೆ ಹೊರಟಿದ್ದನು. ಇದ್ದಕ್ಕಿದ್ದ ಹಾಗೆ ಅವರು ಹೊರಟಿದ್ದ ಕಾರು ಕೆಟ್ಟು ನಿಂತಿತು. ಕಾರಿನಲ್ಲಿದ್ದ ಕೆಲವರು ಹೆಂಗಸರು ಗಾಬರಿಗೊಂಡಿದ್ದರು. ಕಾರಿನೊಳಗೆ ಸಾಹುಕಾರನ ಮಗಳು ಹೆರಿಗೆ ನೋವಿನಿಂದ ನರಳುತ್ತಿದ್ದಳು. ಆಗ ಸಾಹುಕಾರನು ‘‘ಅಣ್ಣ, ಇಲ್ಲಿಂದ ನಮ್ಮನ್ನು ನಗರಕ್ಕೆ ಹೋಗುವ ದಾರಿ ಹುಡುಕಿ ನಾವು ನಗರದ ಆಸ್ಪತ್ರೆಗೆ ಸೇರುವಂತೆ ಯಾವುದಾದರು ಮಾರ್ಗ ತೋರಿಸು; ನಿನಗೆ ಪುಣ್ಯ ಬರುತ್ತದೆ’’ ಎಂದು ನನ್ನನ್ನು ಕುರಿತು ಕೇಳಿದನು. ನಮ್ಮದು ಚಿಕ್ಕಹಳ್ಳಿಯಾದ್ದರಿಂದ ನಗರಕ್ಕೆ ಹೋಗುವ ಯಾವ ವಾಹನಗಳೂ ಇರಲಿಲ್ಲ. ನನ್ನದೇ ಚಕ್ಕಡಿ ಸರಿಗೊಳಿಸಿ ಜೋರಾಗಿ ಓಡುವ ಎತ್ತುಗಳನ್ನು ಚಕ್ಕಡಿಗೆ ಹೂಡಿ, ಚಕ್ಕಡಿ ತುಂಬಾ ನೆಲ್ಲುಹುಲ್ಲು ಹರಡಿ, ಚಕ್ಕಡಿಯಲ್ಲಿ ಅವರನ್ನೆಲ್ಲ ಕೂಡ್ರಿಸಿಕೊಂಡು ನಗರ ತಲುಪಿ ಸಾಹುಕಾರನ ಮಗಳ ಹೆರಿಗೆ ಆಗುವವರೆಗೆ ಅಲ್ಲಿದ್ದು ನಾನು ಹಳ್ಳಿಗೆ ಬಂದೆನು. ನಾನು ಬರುವಾಗ ಸಾಹುಕಾರರು ‘‘ಅಣ್ಣಾ, ನಿಮ್ಮಳ್ಳಿಯಿಂದ ನಾವು ಬರುವುದಕ್ಕೆ ದಾರಿ ಕಾಣದಿದ್ದಾಗ ನಮಗೆ ದಾರಿ ತೋರಿದವನು ನೀನು, ಅಂಥ ವೇಳೆಯಲ್ಲಿ ನೀನು ದೇವರಂತೆ ಬಂದೆ….’ ಎಂದೆಲ್ಲಾ ಸಾಹುಕಾರ ನನ್ನ ಹೊಗಳಿದ್ದನು. ಆಗ ನನಗೆ ‘‘ಊರಿಂಗೆ ದಾರಿ ಆರು ತೋರಿದರೇನು?’’ ಎನ್ನುವ ದಾಸರಪದ ನೆನಪಿಗೆ ಬಂದಿತ್ತು. ಒಂದು ಊರೆಂದ ಮೇಲೆ ಅನೇಕ ದಾರಿಗಳಿರುತ್ತವೆ. ದೇವಸ್ಥಾನಕ್ಕೆ ದಾರಿ, ಮನೆಗೆ ದಾರಿ, ಶಾಲೆಗೆ ದಾರಿ, ಮಠಕ್ಕೆ ದಾರಿ…. ಹೀಗೆ ಇರುತ್ತವೆ. ಬಾಳಿನ ಬದುಕಿಗೂ ದಾರಿಗಳಿರುತ್ತವೆ. ಬಾಳಿನ ಬದುಕಿಗೆ ದಾರಿ ತೋರಿದಾತನೆ ಗುರು. ನಾವು ದಾರಿ ತಪ್ಪಿದಾಗ ಅವರಿವರನ್ನದೆ, ಯಾರು ಬೇಕಾದವರನ್ನು ನಾವು ದಾರಿ ಕೇಳಬೇಕು. ನಮಗೆ ದಾರಿಯನ್ನು ಯಾರು ತೋರಿದರೇನು? ಇವನು ಸಣ್ಣಜಾತಿಯವನು, ಇವನು ದೊಡ್ಡ ಜಾತಿಯವನು, ಇವನು ಕೀಳು, ಇವನು ಮೇಲು ಎನ್ನುತ್ತಾ ಕುಳಿತರೆ ನಮಗೆ ದಾರಿ ಸಿಗುವುದಿಲ್ಲ. ದಾಸರೆ ಕೇಳಿದ್ದಾರೆ ‘‘ದಾರಿ ಯಾವುದಯ್ಯ ವೈಕುಂಠಕ್ಕೆ?’’ ಎಂದು. ದಾರಿಯ ಬಗ್ಗೆ ಹೇಳುತ್ತಾ ಕೂತರೆ ದಿನಗಳು ಸಾಲದೆ ಹೋಗುವವು. ನಾವು ಕತ್ತಲಲ್ಲಿ ನಡೆಯುವಾಗ ನಮಗೆ ದಾರಿ ಕಾಣುವುದಿಲ್ಲ. ಆಗ ಚಿಕ್ಕ ಕೈದೀವಿಗೆಯ ಬೆಳಕಿನಿಂದ ನಾವು ಕತ್ತಲಲ್ಲಿ ಹೋಗಬೇಕಾಗುತ್ತದೆ. ಹೋದಾಗ ನಮಗೆ ದಾರಿ ಸಿಗುತ್ತದೆ.
ದಾರಿಯ ವಿಷಯ ಬಂದಾಗ ಸಾಲುಮರದ ತಿಮ್ಮಕ್ಕನ ನೆನಪು ಯಾರಿಗಾದರೂ ಬಂದೇ ತೀರುತ್ತದೆ. ಆಕೆ ಹತ್ತಾರು ಕಿಲೋಮೀಟರ್ ದೂರ ದಾರಿಗುಂಟ ಗಿಡಗಳನ್ನು ನೆಟ್ಟು, ನೀರು ಹೊತ್ತು ಸಾವಿರಾರು ಗಿಡಗಳನ್ನು ಮರಗಳನ್ನಾಗಿ ಮಾಡಿ ದಾರಿಹೋಕರಿಗೆ ನೆರಳು ಕೊಟ್ಟಿದ್ದಾಳೆ. ಸರಕಾರ ನಮ್ಮ ತಿಮ್ಮಕ್ಕನಿಗೆ ‘ನಾಡೋಜ’ ಪ್ರಶಸ್ತಿ ಕೊಟ್ಟಿದೆ. ನಮಗೆ ಕೆಲ್ಸ ಸಿಗದಿದ್ದಾಗ ಬದುಕಿಗೊಂಡು ನಾವು ದಾರಿ ಹುಡುಕಲೇಬೇಕು. ಯಾವುದಾದರೊಂದು ನಮ್ಮ ಬದುಕಿಗೆ ದಾರಿಸಿಗದಿದ್ದಾಗ ನಾವು ತಲ್ಲಣಗೊಳ್ಳುತ್ತೇವೆ. ಕನಕದಾಸರು – ‘‘ತಲ್ಲಣಿಸದಿರು ಕಂಡೆ ತಾಳು ಮನವೆ, ಎಲ್ಲರಿಗೂ ದಾರಿ ತೋರಿಸುವವನು ಇದಕ್ಕೆ ಸಂಶಯ ಬೇಡ….’’ ಎಂದು ಹೇಳುತ್ತಾರೆ. ಮತ್ತೊಂದೆಡೆ ಕನಕದಾಸರು ‘‘ದೀನ ನಾ ಬಂದಿರುವೆ , ಬಾಗಿಲಲ್ಲಿ ನಿಂದಿರುವೆ ದಾರಿ ತೋರು ಬಾ ಗುರುವೆ’’…. ಎಂದು ಕೃಷ್ಣನನ್ನು ಕೂಗುತ್ತಾರೆ.
ನಾವು ಯಾವುದಾದರೂ ಊರಿಗೆ ಹೋಗುವಾಗ ಮಧ್ಯದಲ್ಲಿ ಎರಡು ಮೂರು ದಾರಿಗಳು ಕೂಡಿರುತ್ತವೆ. ಆಗ ನಮಗೆ ಯಾವ ದಾರಿಯಲ್ಲಿ ಹೋಗಬೇಕೆಂಬುದು ತಿಳಿಯುವುದಿಲ್ಲ. ಅಲ್ಲೇ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರನ್ನು ಕುರಿತು ನಾವು ಹೋಗುವ ಊರಿನ ದಾರಿ ಬಗ್ಗೆ ಕೇಳಿದಾಗ ಅವರು ನಮ್ಮ ಊರಿಗೆ ಹೋಗುವ ದಾರಿ ತೋರಿಸುತ್ತಾರೆ. ಆಗ ನಾವು ದಾರಿ ತೋರಿಸಿದವರಿಗೆ ಧನ್ಯವಾದಗಳನ್ನು ಹೇಳಿ, ಅವರು ತೋರಿದ ದಾರಿಯಿಂದ ನಮ್ಮೂರು ತಲುಪುತ್ತೇವೆ. ನಮ್ಮ ಬದುಕಿನಲ್ಲಿ ಸಂಕಷ್ಟಗಳು ಬಂದು ಬದುಕಿನ ದಾರಿ ಸಾಗದಿದ್ದಾಗ ನಾವು ದೇವರನ್ನು ಕುರಿತು ‘‘ನಮ್ಮ ಬದುಕಿಗೊಂದು ದಾರಿ ತೋರಿಸು’’ ಎಂದು ಬೇಡಿಕೊಳ್ಳುತ್ತೇವೆ.
ರೈತನೊಬ್ಬ ನೆಲವನ್ನು ಉಳುವಾಗ ಹೊಲ ಹದ ಮಾಡುವ ರಂಟೆ ಕೈಕೊಡುತ್ತದೆ. ಆಗ ಅವನಿಗೆ ಸರಿಪಡಿಸುವುದು ತಿಳಿಯುವುದಿಲ್ಲ. ಊರಿಗೆ ಹೋಗಿ ಸರಿಪಡಿಸಿಕೊಂಡು ಬರಬೇಕೆಂದರೆ ಊರು ದೂರವಿದೆ. ‘‘ಈ ದಿನದ ಬದುಕು ನಿಂತಂತಾಯ್ತು’’ ಎಂದು ರೈತ ಅಂದುಕೊಂಡು ಚಿಂತಿಸುತ್ತಾ ಆ ಕಡೆ ಈ ಕಡೆ ನೋಡಿದಾಗ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ನೋಡುತ್ತಾನೆ. ಆತನನ್ನು ಕರೆದು ರಂಟೆ ಸರಿಪಡಿಸಲು ಕೇಳುತ್ತಾನೆ. ಆಗ ಆ ವ್ಯಕ್ತಿ ಸರಸರನೆ ರಂಟೆ ಸರಿಮಾಡಿಕೊಡುತ್ತಾನೆ. ಆಗ ರೈತ ಆ ವ್ಯಕ್ತಿಯನ್ನು ಕುರಿತು ‘‘ಅಣ್ಣಾ, ನೀನು ದೇವರಂತೆ ಬಂದು ನನ್ನ ರಂಟೆ ಸರಿಪಡಿಸಿ, ಈ ದಿನದ ನನ್ನ ಬದುಕಿಗೊಂದು ದಾರಿ ತೋರಿಸಿದೆ. ಇಲ್ಲದಿದ್ದರೆ ಈ ದಿನ ಕೆಲಸ ನಿಂತು ಹೋಗುತ್ತಿತ್ತು. ರಂಟೆ ಕೆಟ್ಟಾಗ ಇದನ್ನು ಸರಿಪಡಿಸುವುದನ್ನು ನನಗೆ ಕಲಿಸಿದ ಗುರು ನೀನು…’’ ಎಂದೆಲ್ಲಾ ಕೊಂಡಾಡಿದನು.
‘‘ಮಾತು ಬೆಳ್ಳಿ, ಮೌನ ಬಂಗಾರ’’ ಲೋಕಾರೂಢಿ ಗಾದೆ. ಹೌದು, ಅದಕ್ಕಾಗಿಯೇ ಇರಬೇಕು ಬಸವಣ್ಣನವರು ‘‘ನುಡಿದರೆ ಮುತ್ತಿನ ಹಾರದಂತಿರಬೇಕು’’ ಎಂದಿದ್ದಾರೆ. ಮಾತು ಮೃದುವಾಗಿರಬೇಕು. ಮೃದು ಮಾತಿನವನು ಮೌನ ವಹಿಸಿ ಒಳ್ಳೆಯ ಮಾತುಗಳನ್ನು ಆಡುತ್ತಾನೆ. ದಡಬಡ ಮಾತಿನವನು ಅವಸರದಲ್ಲಿ ಆಡಬಾರದ ಮಾತುಗಳನ್ನಾಡಿ, ಗಲಭೆಗೆ ಕಾರಣವಾಗುತ್ತಾನೆ. ‘ತಡೆದು ಮಾತಾಡು ದುಡುದುಣ್ಣು’ ಎಂದು ಶರಣರು ಹೇಳಿದ್ದಾರೆ. ಜನರು, ‘‘ಅವರ ಮನೆಗೆ ಹೋಗಿದ್ದೆ ಸ್ವಾಮಿ, ಬೆಲ್ಲವಿರಲಿ, ಬೆಲ್ಲದಂತ ಮಾತುಗಳನ್ನಾದರೂ ಆಡಲಿಲ್ಲವರು’! ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಬರೀ ತಮ್ಮ ಸಾಹುಕಾರಿಕೆಯ ಮಾತುಗಳಿಂದ ಒರಟಾಗಿ ಮಾತಾಡಿದರು’’ ಎಂದುಕೊಳ್ಳುತ್ತಾರೆ. ಒಳ್ಳೆಯ ಮಾತು ಸದಾ ಬೆಳಗುತ್ತಿರುತ್ತದೆ. ಕೆಟ್ಟ ಮಾತನ್ನಾಡಿ, ಅದನ್ನು ವಾಪಸ್ಸು ಪಡೆಯಬಹುದೆ? ಸರ್ವಜ್ಞ ಕವಿ, ‘‘ಮಾತಿಂಗೆ ಮಾತು ಮಥಿಸಲ್ಕೆ ವಿಧಿಬಂದು ಆತುಕೊಳ್ಳುವುದು’’ ಎಂದು ಹೇಳಿದ್ದಾನೆ. ಯಾರಾದರು ಯಾವುದೇ ಕಾರಣಕ್ಕೆ ತಪ್ಪು ಮಾತನಾಡಿದರಾಗಲಿ, ತಪ್ಪು ಕೆಲಸ ಮಾಡಿದರಾಗಲಿ ತಕ್ಷಣ ತಪ್ಪೊಪ್ಪಿಕೊಂಡು ಮೌನವಹಿಸಿದರೆ ಅಂಥವರು ಕ್ಷಮೆಗೆ ಅರ್ಹರಾಗುತ್ತಾರೆ. ಬಸವಣ್ಣನವರು, ಮಾತಿನ ಬಗ್ಗೆ ‘‘ಅಯ್ಯಾ ಎಂದೊಡೆ ಸ್ವಜರ್ಗ, ಎಲವೋ ಎಂದೊಡೆ ನರಕ’’ ಎಂದು ಹೇಳುತ್ತಾರೆ. ‘ಮಾತು ಜೇನು, ಮಾತು ಮಾಣಿಕ್ಯವಾಗಿರಬೇಕು’ ಎಂಬುದು ಗುರು ಹಿರಿಯರ ಹೇಳಿಕೆ.
ರೆಟ್ಟೆ ಮುರಿದು ದುಡಿಯುವ ರೈತ ಅಥವಾ ಶ್ರಮಜೀವಿ ಅವಾಚ್ಯ ಮಾತುಗಳನ್ನಾಡುವುದು ವಿರಳ. ಅಂದರೆ ಶ್ರಮಜೀವಿಗಳಲ್ಲದವರು ಅವಾಚ್ಯ ಮಾತನಾಡುತ್ತಾರೆಂಬುದಲ್ಲ. ಅವರಲ್ಲಿ ಬಹಳ ಜನ ಕಾಡುಹರಟೆಯೊಂದಿಗೆ ಅವಾಚ್ಯ ಮಾತನಾಡುತ್ತಾರೆ. ಶ್ರಮಜೀವಿಗಳು ಬೆರಳೆಣಿಕೆ ಎಷ್ಟು ಸಿಕ್ಕರೆ, ಶ್ರಮಜೀವಿಗಳಲ್ಲದವರು ಬಹಳಷ್ಟು ಅವಾಚ್ಯ ಶಬ್ದಗಳನ್ನಾಡುತ್ತಾರೆ. ಸುಳ್ಳು ಹೇಳುವುದರಲ್ಲಿಯೂ ಅಷ್ಟೆ! ದುರ್ಯೋಧನ, ಶ್ರೀಕೃಷ್ಣನಿಗೆ ಧಿಕ್ಕಾರದ ಮಾತುಗಳನ್ನಾಡಿ ಅವನನ್ನು ನಿಂದಿಸಿದ್ದಕ್ಕೆ ಮಹಾಯುದ್ಧ ನಡೆಯಿತು, ಇದರಿಂದ ಕೌರವರು ನಾಶವಾದರು. ರಾವಣನ ತಮ್ಮ ವಿಭೀಷಣನ ಒಳ್ಳೆಯ ಮಾತಿಗೆ ರಾವಣ ಧಿಕ್ಕರಿಸಿದ್ದಕ್ಕೆ ರಾವಣ ನಾಶವಾದನು. ಇಂದು ನ್ಯಾಯಾಲಯದಲ್ಲಿ ನ್ಯಾಯದೇವತೆ ಮುಂದೆ ಸುಳ್ಳು ಹೇಳುತ್ತಾರೆ, ಅಸತ್ಯವನ್ನು ಹೇಳುವವರು ಈಗ ಬಹಳ ಜನ ! ನ್ಯಾಯ, ನೀತಿಗಳನ್ನು ಬಿಟ್ಟು ಮಾತನಾಡುವವರು ತಾವು ಗೆದ್ದೆವೆಂದು ಬೀಗುತ್ತಾರೆ. ಹೀಗೆ ಅಹಂಕಾರದಿಂದ ಬೀಗುವವರು ಎಂದಾದರೊಂದು ದಿನ ಸುಳ್ಳಿನ ಸೆಳವಿಗೆ ಸಿಕ್ಕು ನಾಶವಾಗುವುದು ಖಚಿತ. ಮಹಾತ್ಮರು, ‘‘ಸುಳ್ಳು ಸಾವಿನ ಸಂಕೇತ, ಸತ್ಯ ಅಮರತ್ವದ ಸಂಕೇತ’’ ಎಂದು ನುಡಿದಿದ್ದಾರೆ.
“”PÝwPÜãvÜá: PÜãwPÝvܸæàvÜ” ಗಾದೆ ಈಗಲೂ ಜನರಲ್ಲಿ ಜನಜನಿತವಾಗಿದೆ. ಜನರಲ್ಲಿ ಈ ಗಾದೆ ಮೂಡಲು ಅನೇಕ ಕಾರಣಗಳಿವೆ. ಹೆಣ್ಣು-ಗಂಡು ಕೂಡಿಸಲು ಅವರವರ ಹಿರಿಯರು ಸಾಕಷ್ಟು ಶ್ರಮಪಡುತ್ತಾರೆ. ಗಂಡಿನ ಮನೆತನದ ಬಗ್ಗೆ, ಹೆಣ್ಣಿನ ಮನೆತನದ ಬಗ್ಗೆ ತುಂಬಾ ವಿಚಾರಿಸುತ್ತಾರೆ. ಹೆಣ್ಣಿನ ಕಡೆಯ ಹಿರಿಯರು ‘‘ನಿಮ್ಮ ಹುಡುಗ ಏನು ಕೆಲಸ ಮಾಡುತ್ತಾನೆ, ಎಷ್ಟು ಓದಿದ್ದಾನೆ, ಯಾವ ಕೆಲಸ ಮಾಡುತ್ತಾನೆ, ಅವನಿಗೆ ವಯಸ್ಸು ಎಷ್ಟು…?’’ ಹೀಗೆ ಎಲ್ಲಾ ವಿಷಯವನ್ನು ಕೇಳಿ ಕಾಡುತ್ತಾರೆ. ಇದರಿಂದ ಗಂಡಿನವರಿಗೆ ಕಿರಿಕಿರಿಯೆನ್ನಿಸುತ್ತದೆ. ‘‘ಇವರು ನಮ್ಮನ್ನು ಎಷ್ಟು ಕಾಡಿಸುತ್ತಾರೆ. ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಾರೆ ಅಂದುಕೊಳ್ಳದೇ ಇರುವುದಿಲ್ಲ’’.
Wݨæ ÊÜÞñÜáWÜÙÜá
16ನೇ ಪುಟದಿಂದ…
ಗಂಡಿನ ಕಡೆ ಹಿರಿಯರು ಹೆಣ್ಣು ಕೊಡುವವರಿಗೆ ‘‘ನಿಮ್ಮ ಹುಡುಗಿ ಏನು ಓದಿದ್ದಾಳೆ, ಏನು ಕೆಲಸ ಮಾಡುತ್ತಾಳೆ, ಸಂಗೀತ ಬರುತ್ತದೆಯೆ? ಅಡಿಗೆ ಮಾಡುತ್ತಾಳೇನು…? ಅದೂ ಇದು ಕೇಳಿ, ವರದಕ್ಷಿಣೆ ಎಷ್ಟು ಕೊಡುತ್ತೀರಿ, ಬಂಗಾರ-ಬೆಳ್ಳಿ ಎಷ್ಟು ಕೊಡ್ತೀರಿ…?’’ ಹೀಗೆ ಏನೇನೂ ಮಾತನಾಡುತ್ತಾರೆ. ಇದರಿಂದ ಹೆಣ್ಣಿನವರಿಗೆ ಗಂಡಿನವರು ಕಾಡುತ್ತಾರೆಂದೆನ್ನಿಸುತ್ತದೆ. ಎಲ್ಲಾ ಹಿರಿಯರು ಕೂಡಿ, ಹೆಣ್ಣಿನವರನ್ನು ಗಂಡಿನವರನ್ನು ಕಾಡಿ ಮದುವೆಯನ್ನು ಮಾಡಿ ಮುಗಿಸುತ್ತಾರೆ. ಹೀಗೆ ಕಾಡಿ ಕೂಡಿದವರಿಗೆ ಮುಂದೆ ಯಾವ ತಕರಾರು ಇರುವುದಿಲ್ಲ. ಯಾವ ವಿಧವಾದ ತಂಟೆಗಳು ಬರುವುದಿಲ್ಲವೆಂಬುದು ಹಿರಿಯರ ಬಲವಾದ ನಂಬಿಕೆ.
ಮುಂದೆ ಗಂಡಿನ – ಹೆಣ್ಣಿನ ಮನೆಯವರಲ್ಲಿ ತಂಟೆ ತಗಾದಿಗಳು ಬಂದಾಗ ಹಿರಿಯರು ‘‘ಅಲ್ರಯ್ಯ, ಮದುವೆಯ ಪೂರ್ವದಲ್ಲಿ ಎಲ್ಲಾ ವಿಷಯವನ್ನು ಹೇಳಿ, ಕಾಡಿ ಬೇಡಿ ಕೂಡಿದ್ದೀರಿ ! ಹೀಗೆ ಎಲ್ಲಾ ಸಮಕ್ಷಮವಾಗಿ ನಡೆದಿದ್ದರೂ ನೀವೇಕೆ ಹೀಗೆ ಜಗಳ ಮಾಡುತ್ತೀರಿ, ನೀವು ಮದುವೆಯ ವಿಷಯದಲ್ಲಿ ಕಾಡಿ ಕೂಡಿದ್ದೀರಿ. ನಿಮಗೆ ನೀವೇ ಅವಸರವಾಗಿ ಸ್ಪಷ್ಟವಾಗಿ ಮಾತನಾಡದೆ ಕಾಡದೆ ಕೂಡಿದ್ದರೆ ನಾವೆಲ್ಲಾ ಏನೋ ಹೇಳಬಹುದಿತ್ತು? ಕಾಡದೆ ಕೂಡಿದ್ದರೆ ನಾವು ಏನೂ ಹೇಳುವ ಹಾಗಿರಲಿಲ್ಲ. ಯಾಕೆಂದರೆ ಕೂಡಿಕೂಡುವುದ್ರಲ್ಲಿ ಬಹಳ ಸೊಗಸಿರುತ್ತದೆ.’’ ‘‘ಇರ‌್ಲಿ ಬಿಡಿ ಸ್ವಾಮಿ ಕೊಡುಕೊಳ್ಳುವಿಕೆಯನ್ನು ಮುಂದೆ ನೋಡೋಣ. ಈಗ ಇದ್ದದರಲ್ಲೇ ಮದುವೆ ಮಾಡಿ ಮುಗಿಸೋಣ’’ ಎಂದು ಮದುವೆ ಮಾಡಿದವರಿಗೆ ನಾವು ಏನನ್ನ್ನೂ ಹೇಳುವ ಹಾಗಿಲ್ಲ. ನಿಮ್ಮ ನಿಮ್ಮಲ್ಲೆ ನೀವು ಮಾಡಿಕೊಂಡ ಮಾತುಕತೆಗೆ ಆಧಾರವಿರುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರೀಕರು, ‘ಕಾಡಿಕೂಡ್ರಿ: ಕೂಡಿ ಕಾಡಬೇಡ್ರಿ’ ಎಂದು ಹೇಳಿದ್ದಾರೆ.
“”ÓÝÊÜâ PæãÆáÉ™, Ÿ¨ÜáPÜá WæÆáÉ” Gನ್ನುವ ಗಾದೆಯೂ ಜನರಲ್ಲಿದೆ. ‘ಸಾವು’ ಎಂದಾಕ್ಷಣ ಎಲ್ಲರೂ ಹೆದರುವವರೆ, ಪ್ರಾಣಿ-ಪಶು-ಪಕ್ಷಿ ಕೀಟಾದಿಗಳಾ ದಿಯಾಗಿಯೂ ಹೆದರಿ ಓಡುತ್ತವೆ. ಸಾವಿಗೆ ನಾವು ಹೆದರಿ ಓಡಿದರೆ ಅದು ನಮ್ಮನ್ನು ಬಿಡುವುದಿಲ್ಲ. ನಮ್ಮನ್ನು ಸಾಯಿಸಿ ಸಾವು ವಿಜಯಿಯಾಗುತ್ತದೆ. ಸಾವಿಗೆ ನಾವು ಹೆದರಿ ಓಡುವುದಾದರೂ ಎಲ್ಲಿಗೆ? ಆದರೆ ಸಾವಿಗೂ ಸಾವಿದೆ! ಸಾವಿಗೂ ಸೋಲಿದೆ. ಸಾವಿಗೆ ಎದುರಾದವರೆಂದರೆ ಜ್ಞಾನಿಗಳು. ಅವರು ಪ್ರತಿ ಜೀವಿಯಲ್ಲೂ ಅಜೇಯನಾದ ಆತ್ಮನನ್ನು ಕಾಣುತ್ತಾರೆ; ಆತ್ಮಾನಂದ ಪಡೆಯುತ್ತಾರೆ. ಆತ್ಮಾನಂದ ಪಡೆದ ಮಾನವನು ಸಾವನ್ನು ಸೋಲಿಸುತ್ತಾನೆ, ಸಾಯಿಸುತ್ತಾನೆ. ಸಾವು ಸೋತರೆ ಸತ್ತಂತೆ.
ಈಗಲೂ ನಮ್ಮ ಹಿರಿಯರು, ‘‘ನಾವು ದುಡಿದದ್ದನ್ನು ಉಣ್ಣುವುದಿಲ್ಲ. ಪಡೆದದ್ದನ್ನು ಉಣ್ಣುತ್ತೇವೆ’’ ಎಂದು ಹೇಳುತ್ತಾರೆ. ಹುಟ್ಟು-ಸಾವುಗಳು ಸಹಜ ವೆಂಬುದು ಅವರ ಬಲವಾದ ನಂಬಿಕೆ. ಜ್ಞಾನಿಯಾಗುವುದಕ್ಕೆ ಯಾವ ವಿಶ್ವವಿದ್ಯಾಲ ಯಗಳೂ ಬೋಧಿಸಬೇಕಾಗಿಲ್ಲವೆಂಬುದು ನಮ್ಮ ಹಿರಿಯರ ವಾದವಾಗಿದೆ. ಅದಕ್ಕೆಂದೇ ಅವರು ‘‘ಅರಿವೇ ಗುರು’’ ಎಂದಿದ್ದಾರೆ.
ಭಜನೆ ಪದದಲ್ಲಿ –
‘‘ಕೊಟ್ಟ ಶಿವನು ತಾನು ಹೊತ್ತುಕೊಂಡು ಹೋಗುವಾಗ
ಹೊಟ್ಟೇ ಕಿಚ್ಚೀಲೆ ನಾನು ಅಳುತ್ತಿದ್ದೆ’’ –
ಎಂದು ಹಾಡಿ, ಸಾವಿಗೆ ಹೆದರದೆ ಮುಂದೆ ನಡೆಯುತ್ತಾರೆ. ಯುದ್ಧಕ್ಕೆ ಹೋಗುವ ವೀರಯೋಧ ಸಾವಿಗೆ ಹೆದರುವುದಿಲ್ಲ. ಅವನು, ‘‘ಸತ್ತರೆ ವೀರ ಸ್ವರ್ಗ; ಗೆದ್ದರೆ ರಾಜಯೋಗ’’ ಎಂಬ ಆತ್ಮಾನಂದದಿಂದ ಯುದ್ಧಕ್ಕೆ ನುಗ್ಗುತ್ತಾನೆ. ವೀರನಾದವನು ದೇಶವನ್ನು ಹೆತ್ತ ತಾಯಿಗಿಂತಲೂ ಮೇಲೆಂದು ಭಾವಿಸಿ ದೇಶ ರಕ್ಷಣೆಗೆ ತಾನು ಬಲಿಯಾಗಲೂ ಸಿದ್ಧನಾಗುತ್ತಾನೆ.
ಮಾನವರಲ್ಲಿ ಕೆಲವರು ಆತ್ಮಾನಂದ ಪಡೆಯುವುದಕ್ಕಾಗಿ ತಾವು ದುಡಿದ ಹಣದಲ್ಲಿ ಕೊಂಚ ಸತ್ಕಾರಗಳಿಗೆ ದಾನ ಕೊಡುತ್ತಾರೆ. ಇನ್ನೂ ಕೆಲವರು ತಮಗೆಷ್ಟು ಬೇಕೋ ಅಷ್ಟನ್ನೇ ಉಳಿಸಿಕೊಂಡು ಉಳಿದದ್ದನ್ನು ದಾನ ಮಾಡಿ ತ್ಯಾಗಿಗಳಾಗುತ್ತಾರೆ. ಇಂಥ ತ್ಯಾಗಿಗಳು ಸಾವಿಗೆ ಹೆದರುವುದಿಲ್ಲ. ಇವರು, ‘‘ನಮಗೆ ಜನ್ಮ ನೀಡಿದ ಈ ಭೂಮಿ (ಪ್ರಕೃತಿ) ನಮಗೇನು ಕೊಟ್ಟಿದೆ’’ ಎಂದು ಯೋಚಿಸುವುದಿಲ್ಲ. ‘‘ನಾವು ಪ್ರಕೃತಿಗೆ ಏನು ಕೊಟ್ಟಿದ್ದೇವೆ, ಏನು ಕೊಡಬೇಕು’’ ಎನ್ನುವುದನ್ನು ಯೋಚಿಸುತ್ತಾರೆ. ನಿಜಜ್ಞಾನಿಯಾದವನು ಸಾವು-ನೋವು, ಸುಖ-ದುಃಖಗಳನ್ನು ಸಮಾನವಾಗಿ ನೋಡುತ್ತಾನೆ’’ ಎಂದು ಭಗವದ್ಗೀತೆ ಹೇಳುತ್ತದೆ.
‘‘ಸಾವಿಗೂ ಸಾವಿದೆ! ಎಂದರೆ ಆಶ್ಚರ್ಯವಾಗದಿರುವುದೇ? ‘ಸಾವು ಸಾವೆ’ ಸಾವಿಗೆ ಸಾವೆಂದರೇನು?’’ ಎಂದು ಯಾರದರೂ ಪ್ರಶ್ನಿಸಬಹುದು. ‘ಸಾವಿಗೆ ಸಾವು ಯಾವ ದಿನ, ಯಾವಾಗ?’’ ಎಂದು ಕೇಳಬಹುದು. ಮಾನವನು ತಾನು ಮಾಡಿದ ಕಾರ್ಯ ಕೈಗೂಡದಿದ್ದಾಗ ತಾನು ‘ಸತ್ತಂತೆ’ ಎಂದು ಭಾವಿಸುತ್ತಾನೆ. ಆ ಕಾರ‌್ಯದಲ್ಲಿ ತಾನು ಗೆದ್ದಾಗ ಸಾವನ್ನೇ ಗೆದ್ದು ಬಂದೆನೆಂದು ಹಿಗ್ಗುತ್ತಾನೆ. ‘ಸತ್ಯವೆಂಬುದು ಅಮರ, ಸುಳ್ಳೆಂಬುದು ಸಾವು’ ಎಂದು ನಾವು ಅರಿತುಕೊಳ್ಳಬೇಕು. ಸತ್ಯಕ್ಕೆ ಜಯವಾದಾಗ ಸುಳ್ಳೆಂಬ ಸಾವಿಗೆ ಸಾವಿರುತ್ತದೆ. ಸತ್ಯ ಹೇಳುವುದರಲ್ಲಿ ನಾವು ಸೋತಾಗ ಸಾವು ಹುಟ್ಟುತ್ತದೆ. ಸತ್ಯ ಹೇಳಿ ನಾವು ಗೆದ್ದಾಗ ಸಾವು (ಸುಳ್ಳು) ಸಾಯುತ್ತದೆ.
ಸಾವನ್ನು ಸೋಲಿಸಿ ಸಾಯಿಸಿದವರು ನಮ್ಮ ಪುರಾಣ, ಪುಣ್ಯ ಕತೆಗಳಲ್ಲಿ ಹೇರಳವಾಗಿ ದೊರಕುತ್ತಾರೆ. ಮಾರ್ಕಂಡೇಯ ಬಾಲಕನಾಗಿದ್ದರೂ ಮಹಾಜ್ಞಾನಿಯಾಗಿದ್ದ. ತನ್ನೆದುರು ಧುತ್ತೆಂದು ಬಂದು ನಿಂತ ಸಾವನ್ನು ಅಂದರೆ ಮೃತ್ಯುವನ್ನು ತನ್ನ ಜ್ಞಾನಶಕ್ತಿಯಿಂದ ಗೆದ್ದು, ಸಾವನ್ನು ಸೋಲಿಸುತ್ತಾನೆ. ಸಾವಿನ ಒಡೆಯನಾದ ಯಮನನ್ನು ಗೆದ್ದು ಶಿವನಿಂದ ಚಿರಜೀವಿಯಾಗುತ್ತಾನೆ.
ಸತ್ಯವಾನ-ಸಾವಿತ್ರಿ ಆದರ್ಶ ದಂಪತಿಗಳು. ಸತ್ತ ಗಂಡನ ಜೀವವನ್ನು ಮರಳಿ ಪಡೆದ ಮಹಾಸತಿ, ಗಂಡನ ಪ್ರಾಣವನ್ನು ತಿರುಗಿ ಪಡೆಯಲು ಸಾವಿತ್ರಿ ಸಾಕಷ್ಟು ಸಂಕಟಗಳನ್ನು ಸಹಿಸಿ, ಯಮನೊಡ್ಡುವ ಅಗ್ನಿ ಪರೀಕ್ಷೆಗಳನ್ನು ಗೆದ್ದು, ಯಮದೇವನನ್ನೇ ಮೆಚ್ಚಿಸಿ, ವರಗಳನ್ನು ಪಡೆದು ಯಮನೇ ಬೆರಗಾಗುವಂತೆ ಸತ್ಯವನ್ನು ನುಡಿದು ಗಂಡ ಸತ್ಯವಾನನ ಜೀವವನ್ನು ಪಡೆಯುತ್ತಾಳೆ. ಇಲ್ಲಿಯೂ ಸತ್ಯಗೆದ್ದು ಸಾವು (ಸುಳ್ಳು) ಸಾಯುತ್ತದೆ. ಮೃತ್ಯುವನ್ನು ಗೆದ್ದವರಿಗೆ ‘ಚಿರಂಜೀವಿ’ ಎಂದು ‘ಮೃತ್ಯುಂಜಯ’ ಎಂದೂ ಕರೆಯುತ್ತಾರೆ. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಮಹಾಜ್ಞಾನಿಯಾದ ಭೀಷ್ಮನು ಮೃತ್ಯುವಿಗೇ ಸವಾಲು ಹಾಕುತ್ತಾನೆ ! ತಾನು ಕರೆದಾಗ ಬರಬೇಕೆಂದು ಸಾವಿಗೆ ಆಜ್ಞೆ ಮಾಡುತ್ತಾನೆ. ಹೀಗೆ ಸತ್ಪುರುಷರಿಂದ ಜ್ಞಾನಿಗಳಿಂದ, ಪತಿವ್ರತಾ ಸ್ತ್ರೀಯರಿಂದ ಸತ್ಯಗೆದ್ದು, ಸಾವು ಸಾಯುತ್ತದೆ.

– ಬಸಪ್ಪ ಉಪ್ಪಾರ

   

Leave a Reply