ಗುಜರಾತಿನಲ್ಲೊಂದು ಸೂರ್ಯ ಸೈನಿಕ ಶಾಲೆ

ಸಾಧನೆ - 0 Comment
Issue Date : 20.04.2015


ಗುಜರಾತ್ ಸರ್ಕಾರ ಹಾಗೂ ಸೂರ್ಯ ಫೌಂಡೇಷನ್ ನಡುವಣ ಒಪ್ಪಂದದ ಪರಿಣಾಮವಾಗಿ ರಾಜಸ್ಥಾನ ಮತ್ತು ಗುಜರಾತಿನ ಗಡಿ ಪ್ರದೇಶದಲ್ಲೊಂದು ಸೈನಿಕ ಶಾಲೆ ಎದ್ದು ನಿಂತಿದೆ. ಅದೇ ಸೂರ್ಯ ಸೈನಿಕ ಶಾಲೆ. ಬುಡಕಟ್ಟು, ದಲಿತ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಇದು ಒಂದು ವಸತಿ ಶಾಲೆ. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಕ್ರೀಡಾ ಸೌಲಭ್ಯಗಳ ಜೊತೆಗೆ ಸೈನಿಕ ತರಬೇತಿಯನ್ನೂ ಈ  ಶಾಲೆ ಒದಗಿಸುತ್ತದೆ.
ಆಧುನಿಕ ಕಂಪ್ಯೂಟರ್ ಶಿಕ್ಷಣ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರಗಳಿಗೆ ಸಂಬಂಧಿಸಿದ ಸುಸಜ್ಜಿತ ಪ್ರಯೋಗಾಲಯಗಳು ಈ ಶಾಲೆಯ ವೈಶಿಷ್ಟ್ಯ. ಇಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಸುವುದು ದೃಶ್ಯ – ಶ್ರಾವ್ಯ ಮಾಧ್ಯಮದ ಮೂಲಕವೇ. ಕಳೆದ ವರ್ಷ 10 ಮತ್ತು 12ನೇ ತರಗತಿಯಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿರುವುದು ಗಮನಾರ್ಹ. ವಿದ್ಯಾರ್ಥಿಗಳಿಗೆ ತಮ್ಮ ಶಾರೀರಿಕ ದೃಢತೆ ಕಾಪಾಡಿಕೊಳ್ಳಲು ವಿವಿಧ ಬಗೆಯ ಕ್ರೀಡಾ ಸೌಲಭ್ಯ ಒದಗಿಸಲಾಗಿದೆ. ಉದಾ: ಖೋ – ಖೋ, ಕಬಡ್ಡಿ, ಫುಟ್ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಬ್ಯಾಡ್ಮಿಂಟನ್, ಟೇಬಲ್‌ಟೆನ್ನಿಸ್, ಬಿಲ್ವಿದ್ಯೆ ಹಾಗೂ ಭಾರತೀಯ ಆಟೋಟಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಪ್ರತಿನಿತ್ಯ ಕಠಿಣ ಶಾರೀರಿಕ ಹಾಗೂ ಸೈನಿಕ ತರಬೇತಿ ಇಲ್ಲಿನ ವಿಶೇಷತೆ.
ಶಾಲೆಯಲ್ಲಿ ಎನ್‌ಸಿಸಿ ಘಟಕವೂ ಕಾರ್ಯನಿರ್ವಹಿಸುತ್ತಿದೆ. ಯೋಗ, ಪ್ರಾಣಯಾಮ, ಕರಾಟೆ ಮತ್ತಿತರ ಮಾರ್ಷಲ್‌ ಕಲೆಗಳ ತರಬೇತಿಯೂ ಇಲ್ಲಿ ಲಭ್ಯ. ವಿದ್ಯಾರ್ಥಿಗಳು ಸ್ವಸ್ಥ ಮನಸ್ಸು ಹಾಗೂ ಶರೀರ ಹೊಂದಲು ಪ್ರಕೃತಿ ಚಿಕಿತ್ಸೆಯ ಅಭ್ಯಾಸವನ್ನು ಇಲ್ಲಿ ನಿರ್ವಹಿಸುತ್ತಾರೆ.
ಇತ್ತೀಚೆಗೆ ಗುಜರಾತ್ ರಾಜಭವನದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಪಾಲ ಓ.ಪಿ. ಕೊಹ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರ್.ಸಿ. ಮೀನಾ ಮತ್ತು ಏಕಲವ್ಯ ಸ್ಕೂಲ್ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಜೆ. ಪಟೇಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪ್ರಶಸ್ತಿ ನೀಡಿ ಗೌರವಿಸಿದರು.
ಗುಜರಾತಿನ ಬುಡಕಟ್ಟು ಅಭಿವೃದ್ಧಿ ಖಾತೆಯ ಸಚಿವ ಮಂಗೂ ಭಾಯ್ ಅವರು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಅಲ್ಲಿನ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.
ಸಮಾಜಕ್ಕೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಹಾಗೂ ದೇಶಕ್ಕೆ ದೇಶಭಕ್ತ ನಾಗರಿಕರನ್ನು ನಿರ್ಮಿಸುವುದು ಈ ಶಾಲೆಯ ಹೆಗ್ಗುರಿ ಯಾಗಿದೆ.

   

Leave a Reply