ಗುಣಮಟ್ಟದಲ್ಲಿ ರಾಜಿ ಇಲ್ಲ ಬೆಲೆ ದುಬಾರಿ ಅಲ್ಲ ಇದುವೇ ಜನ ಔಷಧಿ

ಲೇಖನಗಳು - 0 Comment
Issue Date :

ಮಾರುಕಟ್ಟೆಯಲ್ಲಿ ಔಷಧದ ದರ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೆ. ಕೆಲವಂತೂ ಸಾಮಾನ್ಯರ ಕೈಗೆಟುಕಲು ಸಾಧ್ಯವಾಗದಷ್ಟು ದುಬಾರಿಯಾಗಿರುತ್ತದೆ. ಅದೊಂದು ರೀತಿ ಮಾಫಿಯಾ ಆಗಿಬಿಟ್ಟಿದೆ. ಇದೇ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಕಡಿಮೆ ದರದಲ್ಲಿ ಸಿಗುವಂತೆ ಮಾಡಲು ರೂಪಿತಗೊಂಡ ಯೋಜನೆಯೇ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಪರಿಯೋಜನೆ. ಇಲ್ಲಿ ಸಾಮಾನ್ಯ ಜ್ವರ, ನೆಗಡಿಯಂತವುಗಳಿಗೆ ಸಿಗುವ ಮಾತ್ರೆಗಳಿಂದ ಹಿಡಿದು ಕ್ಯಾನ್ಸರ್‌ನಂತಹ ಖಾಯಿಲೆಯ ಔಷಧಗಳು ಕೂಡ ಕಡಿಮೆ ದರದಲ್ಲಿ ದೊರಕುವಂತೆ ಮಾಡಲಾಗಿದೆ. ಎಷ್ಟೋ ಜನರು ಇಂತಹ ಖಾಯಿಲೆ ಬಂದಾಗ ಚಿಕಿತ್ಸೆಯ ವೆಚ್ಚ ಭರಿಸಲಾಗದೇ, ಡಾಕ್ಟರ್‌ಗಳು ಹೇಳುವ ದುಬಾರಿ ಔಷಧಗಳನ್ನು ಕೊಂಡುಕೊಳ್ಳಲಾಗದೇ ಹಾಗೆಯೇ ಆಸ್ಪತ್ರೆಯಿಂದ ಹಿಂದಿರುಗುವವರಿದ್ದಾರೆ. ಜನೌಷಧ ಅಂತವರಿಗೆ ಜೆನೆರಿಕ್ ಔಷಧಗಳನ್ನು ಕಡಿಮೆ ದರದಲ್ಲಿ ಒದಗಿಸುವುದರ ಮೂಲಕ ಸಹಾಯಕವಾಗಲಿದೆ.

ಜನೌಷಧ ಯೋಜನೆಯು ಫಾರ್ಮಾಸಿಟಿಕಲ್ ಡಿಪಾರ್ಟ್‌ಮೆಂಟ್‌ನ ಸೀನಿಯರ್ ಆಫೀಸರ್‌ಗಳು, ಫಾರ್ಮಾ ಇಂಡಸ್ಟ್ರಿಯ ಪ್ರತಿನಿಧಿಗಳು, ಎನ್.ಜಿ.ಓ.ಗಳು, ರಾಜ್ಯ ಸರ್ಕಾರಗಳು, ಪ್ರತಿಷ್ಠಿತ ಆಸ್ಪತ್ರೆಯ ಪ್ರಖ್ಯಾತ ಡಾಕ್ಟರ್‌ಗಳನ್ನೆಲ್ಲಾ ಒಳಗೊಂಡು ರೂಪಿತಗೊಂಡಿರುವ ಒಂದು ಯೋಜನೆ. ಈ ಯೋಜನೆಯ ಮೂಲ ಉದ್ದೇಶ, ಉತ್ತಮ ಗುಣಮಟ್ಟದ ಔಷಧಗಳನ್ನು ಕಡಿಮೆ ದರದಲ್ಲಿ ನೀಡುವುದಾಗಿದೆ. ಸುಮಾರು 500ಕ್ಕೂ ಹೆಚ್ಚು ಔಷಧಗಳು ಈ ಯೋಜನೆಯಡಿಯಲ್ಲಿ ಲಭ್ಯವಿದೆ.

 ಎಲ್ಲಾ ವರ್ಗದವರಿಗೂ ಕಡಿಮೆ ದರದ ಜೆನೆರಿಕ್ ಔಷಧಗಳು ಸಿಗುವಂತಾಗಬೇಕು, ಜನರಲ್ಲಿ ಜೆನೆರಿಕ್ ಔಷಧಗಳ ಬಗ್ಗೆ ಜಾಗೃತಿ ಮೂಡಿಸುವುದು, ಡಾಕ್ಟರ್‌ಗಳು ಜೆನೆರಿಕ್ ಔಷಧಗಳನ್ನೇ ಹೆಚ್ಚು ನೀಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ಕೆಲಸ ಮಾಡುತ್ತದೆ.

ಏನಿದು ಜೆನೆರಿಕ್ ಔಷಧ?

ಸರಳವಾಗಿ ಹೇಳುವುದಾದರೆ ಬ್ರಾಂಡೆಡ್ ಅಲ್ಲದ, ಆದರೆ ಅಷ್ಟೇ ಉತ್ತಮ ಗುಣಮಟ್ಟದ ಔಷಧ ಎನ್ನಬಹುದು. ಜೆನೆರಿಕ್ ಎಂದಾಕ್ಷಣ ತುಂಬಾ ವಿಶೇಷವಾದದ್ದೇನಲ್ಲ, ಇದು ಔಷಧದ ರಾಸಾಯನಿಕ ಹೆಸರು ಅಷ್ಟೇ. ಯಾವುದೇ ಬ್ರಾಂಡ್ ಹೆಸರು ಇಲ್ಲದೇ ಕೇವಲ ಜೆನೆರಿಕ್ ಹೆಸರಿನಿಂದಷ್ಟೇ ಔಷಧಗಳು ಲಭ್ಯವಿದೆ. ಅದು ಕೂಡ ಅತಿ ಕಡಿಮೆ ಬೆಲೆಗೆ.

  ಸಾಮಾನ್ಯವಾಗಿ ಒಂದು ಹೊಸ ಔಷಧವನ್ನು ಕಂಡುಹಿಡಿಯುವಾಗ ಔಷಧ ಕಂಪನಿಯು ಅದಕ್ಕಾಗಿ ಸಾಕಷ್ಟು ಹಣ ಸುರಿದಿರುತ್ತದೆ. ಅದಲ್ಲದೇ ಕಂಡುಹಿಡಿದ ನಂತರ ಅದರ ಗುಣಮಟ್ಟ ಹಾಗೂ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರುವುದು ಎನ್ನುವುದರ ಬಗ್ಗೆ ಸಾಕಷ್ಟು ವೆಚ್ಚ ಮಾಡಿ ಪರೀಕ್ಷೆಗಳನ್ನು ಮಾಡಲಾಗುವುದು. ಅದು ಬಹಳಷ್ಟು ಸಮಯವನ್ನು ಕೂಡ ತೆಗೆದುಕೊಳ್ಳುತ್ತದೆ. ಕಂಪನಿಯು ಇನ್ನಷ್ಟು ಉತ್ತಮ ಔಷಧಗಳನ್ನು ತಯಾರಿಸಲು ವ್ಯಯಿಸಿದ ಹಣವನ್ನು ರಿಕವರ್ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದೇ ಕಾರಣಕ್ಕೆ ಕಂಪನಿಯು ಕೆಲ ವರ್ಷಗಳ ಕಾಲ ಆ ಔಷಧದ ಮೇಲೆ ಪೇಟೆಂಟ್ ಪಡೆಯುತ್ತದೆ. ಈ ಸಮಯದಲ್ಲಿ ಬೇರೆ ಯಾವುದೇ ಕಂಪನಿಯೂ ಈ ಔಷಧವನ್ನು ತಯಾರಿಸುವಂತಿಲ್ಲ. ಒಮ್ಮೆ ಕಂಪನಿಯ ಪೇಟೆಂಟ್ ಅವಧಿಯು ಮುಗಿದ ನಂತರ ಯಾವ ಕಂಪನಿಯಾದರೂ ಈ ಔಷಧಗಳನ್ನ ತಯಾರು ಮಾಡಬಹುದು. ಆ ಔಷಧಗಳನ್ನು ಅವುಗಳ ಜೆನೆರಿಕ್ ಹೆಸರಿನಲ್ಲಿಯೇ ತಯಾರಿಸಿ ಅವುಗಳ ಪರಿಣಾಮಕತ್ವವನ್ನು ಸಾಬೀತುಪಡಿಸಿದ ನಂತರ ಲೈಸೆನ್ಸ್ ಪಡೆದು ಮಾರುಕಟ್ಟೆಯಲ್ಲಿ ಬಿಡಬಹುದು. ಇವೇ ಜೆನೆರಿಕ್ ಔಷಧಗಳು. ಜನೌಷಧ ಮಳಿಗೆಗಳಲ್ಲಿ ಸಿಗುವ ಔಷಧಗಳು ಈ ಜೆನೆರಿಕ್ ಔಷಧಗಳೇ ಆಗಿವೆ.

  ಜೆನೆರಿಕ್ ಹೆಸರಿನಲ್ಲಿ ಔಷಧಗಳನ್ನು ತಯಾರಿಸುವ ಕಂಪನಿಯು ಆ ಔಷಧ ಸಂಶೋಧನೆ ಹಾಗೂ ಪರೀಕ್ಷೆಗಳಿಗಾಗಿ ಹಣ ವ್ಯಯಿಸದೇ ಇರುವುದರಿಂದ ಬಹಳ ಕಡಿಮೆ ದರದಲ್ಲಿ ಈ ಔಷಧಗಳನ್ನು ನೀಡಬಲ್ಲದು.!!

  ಡಾಕ್ಟರ್‌ಗಳು ಜೆನೆರಿಕ್ ಔಷಧಗಳನ್ನು ಹೇಳುವುದಿಲ್ಲ ಏಕೆ ಅನ್ನುವ ಪ್ರಶ್ನೆಯಿದೆ. ಸಾಮಾನ್ಯವಾಗಿ ಮೆಡಿಕಲ್ ಕಾಲೇಜುಗಳಲ್ಲಿ ಔಷಧಗಳನ್ನು ಅವುಗಳ ಜೆನೆರಿಕ್ ಹೆಸರಿನಿಂದಲೇ ಹೇಳಿಕೊಡಲಾಗುತ್ತದೆ. ಆದರೂ ಅವರು ಬ್ರಾಂಡೆಡ್ ಔಷಧಗಳನ್ನೇ ಬರೆದುಕೊಡುತ್ತಾರೆ.

ಏಕೆಂದರೆ ಡಾಕ್ಟರ್‌ಗಳಿಗೆ ಪ್ರತಿನಿತ್ಯ ಮಾರುಕಟ್ಟೆಗೆ ಬರುವ ಔಷಧಗಳ ಬಗ್ಗೆ ತಿಳಿದುಬರುವುದು ಫಾರ್ಮಾಸಿಟಿಕಲ್ ಕಂಪನಿಯ ಮೆಡಿಕಲ್ ರೆಪ್ರೆಸೆಂಟೇಟಿವ್ ಅವರಿಂದ. ಸ್ವಾಭಾವಿಕವಾಗಿ ಅವರು ತಮ್ಮದೇ ಕಂಪನಿಯ ಔಷಧಗಳನ್ನ ಹೆಚ್ಚಾಗಿ ಪ್ರೊಮೋಟ್ ಮಾಡುತ್ತಾರೆ. ಅದಲ್ಲದೇ ತಮ್ಮದೇ ಕಂಪನಿಯ ಔಷಧಗಳನ್ನು ರೋಗಿಗಳಿಗೆ ನೀಡುವಂತೆ ಡಾಕ್ಟರ್‌ಗಳಿಗೆ ಇನ್ಸೆಂಟಿವ್ಸೃ್ ಅಥವಾ ಕಮಿಷನ್ ನೀಡಲಾಗುತ್ತದೆ ಎನ್ನುವ ಅಪವಾದವೂ ಇದೆ. ಆದರೆ ಇದು ಎಲ್ಲಾ ಡಾಕ್ಟರ್‌ಗಳಿಗೆ ಅನ್ವಯವಾಗುವುದಿಲ್ಲ.

ಜೆನೆರಿಕ್ ಔಷಧಗಳಿಗೂ ಹಾಗೂ ಬ್ರಾಂಡೆಡ್ ಔಷಧಗಳಿಗೂ ಗುಣಮಟ್ಟದಲ್ಲಿ ವ್ಯತ್ಯಾಸವಿರುತ್ತದೆಯೇ?

ಖಂಡಿತವಾಗಿಯೂ ಇಲ್ಲ. ಸಾಮಾನ್ಯವಾಗಿ ಕಡಿಮೆ ಬೆಲೆ ಎಂದರೆ ಕಡಿಮೆ ಗುಣಮಟ್ಟದ್ದು ಎನ್ನುವ ಮನಸ್ಥಿತಿ ಜನರದ್ದು. ಆದರೆ ಜನೌಷಧಗಳಲ್ಲಿ ಸಿಗುವ ಜೆನೆರಿಕ್ ಔಷಧಗಳು ಹಾಗಲ್ಲ. ಜೆನೆರಿಕ್ ಹಾಗೂ ಬ್ರಾಂಡೆಡ್ ಔಷಧ ಎರಡರಲ್ಲೂ ಬಳಸುವ ಪ್ರಮುಖ ಅಂಶಗಳು ಒಂದೇ ಆಗಿರುತ್ತದೆ. ಹಾಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ಅಷ್ಟೇನೂ ಪ್ರಮುಖವಲ್ಲದ ಅಂಶಗಳಾದ ಕಲರಿಂಗ್ ಏಜೆಂಟ್, ಫಿಲರ್ಸ್, ಫ್ಲೇವರ್‌ಗಳಲ್ಲಿ ವ್ಯತ್ಯಾಸ ಕಾಣಬಹುದು ಆದರೆ ಪ್ರಮುಖ ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗಾಗಿ ಇವುಗಳು ಕೂಡ ಬ್ರಾಂಡೆಡ್ ಔಷಧಗಳಂತೆಯೇ ಉತ್ತಮ ಗುಣಮಟ್ಟದ್ದಾಗಿದೆ ಹಾಗೂ ಅಷ್ಟೇ ಪರಿಣಾಮಕಾರಿ ಕೂಡ.

 ಜನೌಷಧದಲ್ಲಿ ಕಡಿಮೆ ದರದಲ್ಲಿ ದೊರಕುವ ಈ ಔಷಧಗಳು ಮಾರುಕಟ್ಟೆಗೆ ಬರುವ ಮುನ್ನವೇ ಅವುಗಳ ಗುಣಮಟ್ಟ, ಪರಿಣಾಮಕತ್ವ ಹಾಗೂ ಅವು ಎಷ್ಟರ ಮಟ್ಟಿಗೆ ಸುರಕ್ಷಿತವಾದುದು ಎನ್ನುವುದರ ಬಗ್ಗೆಯೂ ಪರೀಕ್ಷೆ ನಡೆಸಲಾಗುತದೆ. ತಯಾರಾದ ಈ ಔಷಧಗಳನ್ನು ಎನ್.ಎ.ಬಿ.ಎಲ್ (ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರೀಸ್) ಅನುಮೋದನೆ ಪಡೆದಿರುವ ಲ್ಯಾಬೋರೇಟರಿಗಳಲ್ಲಿ ಪರೀಕ್ಷಿಸಿ ನಂತರ ಮಾರುಕಟ್ಟೆಗೆ ಬಿಡಲಾಗುತ್ತದೆ.

 ಜನೌಷಧ ಪರಿಯೋಜನೆಯನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರುವುದಕ್ಕೆ ಬಿ.ಪಿ.ಪಿ.ಐ (ಬ್ಯೂರೋ ಆಫ್ ಫಾರ್ಮಾ ಪಿ.ಎಸ್.ಉ ಆಫ್ ಇಂಡಿಯಾ) ಅನ್ನು ಸ್ಥಾಪಿಸಲಾಗಿದೆ. ಈ ಬಿ.ಪಿ.ಪಿ.ಐ. ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿ ರಾಜ್ಯದೆಲ್ಲೆಡೆ ಜನೌಷಧ ಮಳಿಗೆಗಳನ್ನು ತೆರೆಯುವಂತೆ ಮಾಡುವುದು, ಮಳಿಗೆಯ ಕೆಲಸಗಳನ್ನ ಮಾನಿಟರ್ ಮಾಡುವುದು, ಔಷಧಗಳ ದರ ನಿಗದಿಪಡಿಸುವುದು ಹಾಗೂ ಮಳಿಗೆಗಳಿಗೆ ಔಷಧಗಳು ವಿತರಣೆಯಾಗುತ್ತಿದೆಯೇ ಎಂದು ನೋಡಿಕೊಳ್ಳುತ್ತದೆ.

ಬಿ.ಪಿ.ಪಿ.ಐ.ಯ ಮುಖ್ಯ ಉದ್ದೇಶವೇ ದೇಶಾದ್ಯಂತ ಹೆಚ್ಚೆಚ್ಚು ಜನೌಷಧ ಮಳಿಗೆಗಳನ್ನು ತೆರೆಯುವುದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು, ಸರ್ಕಾರಿ ಆಸ್ಪತ್ರೆಯ ಬಳಿ ಅಥವಾ ಅಲ್ಲೇ ಹತ್ತಿರದಲ್ಲಿ ಜನೌಷಧ ಮಳಿಗೆ ತೆರೆಯಲು ಅನುಕೂಲವಾಗುವಂತೆ ಜಾಗವನ್ನು ನೀಡಬೇಕು. ಜನೌಷಧಗಳನ್ನು ಸರ್ಕಾರಿ ಜಾಗ ಅಥವಾ ಸರ್ಕಾರಿ ಏಜೆನ್ಸಿಗಳಾಗಿರುವ ಅಂಚೆ ಕಛೇರಿ, ರೈಲ್ವೇ, ಪಂಚಾಯತ್, ಡಿಫೆನ್ಸ್, ಟ್ರಾನ್ಸ್ಪೋರ್ಟ್ ಡಿಪಾರ್ಟ್‌ಮೆಂಟ್‌ಗಳಲ್ಲಿಯೂ ಕೂಡ ಅನುವು ಮಾಡಿಕೊಡಬಹುದಾಗಿದೆ. ಬಿ.ಪಿ.ಪಿ.ಐ. ಇದಕ್ಕಾಗಿ ಒಬ್ಬ ಸಾಮಾನ್ಯನೂ ಸರಳವಾಗಿ ತುಂಬಬಹುದಾದಂತಹ ಅರ್ಜಿಯನ್ನು ಸಿದ್ಧಪಡಿಸಿದೆ. ಅದಲ್ಲದೇ, ಹಿಂದೆ ಜನೌಷಧ ಮಳಿಗೆಯನ್ನು ಹಾಕಲು ಅರ್ಜಿಯ ಜೊತೆ 2000 ರೂ.ಗಳನ್ನು ಕಟ್ಟಬೇಕಿತ್ತು,

ಆದರೆ ಈಗ ಜನೌಷಧವನ್ನು ಹೆಚ್ಚು ಪ್ರಚುರಪಡಿಸುವುದಕ್ಕಾಗಿ ಆ ಶುಲ್ಕವನ್ನು ಕೈ ಬಿಡಲಾಗಿದೆ. ಇದಲ್ಲದೇ ಜನೌಷಧ ಮಳಿಗೆಗಳನ್ನು ಶುರು ಮಾಡಲು ಎನ್.ಜಿ.ಒ/ ಏಜೆನ್ಸಿ ಅಥವಾ ವೈಯಕ್ತಿಕವಾಗಿಯೇ ಶುರುಮಾಡುವವರಿಗೆ ಕೂಡ ಹಣಕಾಸಿನ ಸಹಾಯ ಕೂಡ ನೀಡಲಾಗುತ್ತದೆ. ಅದಲ್ಲದೇ ಸರ್ಕಾರಿ ಆಸ್ಪತ್ರೆಯ ಬಳಿ ಜನೌಷಧವನ್ನು ಅರಂಭಿಸುವುದಾದಲ್ಲಿ ಜಾಗವನ್ನು ಉಚಿತವಾಗಿಯೇ ನೀಡಲಾಗುವುದು. ಆ ಜಾಗವು ಸಾಮಾನ್ಯವಾಗಿ ಆಸ್ಪತ್ರೆಗೆ ಹತ್ತಿರದಲ್ಲೇ ಇದ್ದು ಹೊರರೋಗಿಗಳಿಗೆ ಸುಲಭವಾಗಿ ಸಿಗುವಂತಿದ್ದರೆ ಒಳಿತು ಎನ್ನುತ್ತದೆ ಬಿ.ಪಿ.ಪಿ.ಐ. ಇದಲ್ಲದೇ ರಾಜ್ಯಸರ್ಕಾರವು ಆಸ್ಪತ್ರೆಗಳಿಗೆ ಹಾಗೂ ಡಾಕ್ಟರ್‌ಗಳಿಗೆ ಹೆಚ್ಚೆಚ್ಚು ಜೆನೆರಿಕ್ ಔಷಧಗಳನ್ನೇ ನೀಡುವಂತೆ ಸೂಚಿಸಬೇಕು ಎಂದು ಸೂಚಿಸಿದೆ.

ಜನ ಔಷಧ ಮಳಿಗೆಯನ್ನು ತೆರೆಯುವುದಾದರೆ ಏನು ಮಾಡಬೇಕು?
ಜನ ಔಷಧ ಮಳಿಗೆಯನ್ನು ಯಾರು ಬೇಕಾದರೂ ತೆರೆಯಬಹುದು. ರಾಜ್ಯಸರ್ಕಾರ, ಎನ್.ಜಿ.ಓ, ಟ್ರಸ್ಟ್ಗಳು, ಡಾಕ್ಟರ್‌ಗಳು, ಖಾಸಗಿ ಆಸ್ಪತ್ರೆ, ನಿರುದ್ಯೋಗಿ ಫಾರ್ಮಾಸಿಸ್ಟ್, ಅಥವಾ ವಾಣಿಜ್ಯೋದ್ಯಮಿ ಕೂಡ ಈ ಮಳಿಗೆಯನ್ನು ತೆರೆಯಬಹುದು. ಎನ್.ಜಿ.ಓಗಳಿಗೆ, ಟ್ರಸ್ಟ್ಗಳಿಗೆ ಮಳಿಗೆಯನ್ನು ತೆರೆಯಲು ಬೇರೆ ಬೇರೆ ರೀತಿಯ ಗೈಡ್‌ಲೈನ್‌ಗಳನ್ನು ಜನೌಷಧ ವೆಬ್ಸೈಟಿನಲ್ಲಿ ನೀಡಲಾಗಿದೆ. ವೈಯಕ್ತಿಕವಾಗಿ ತೆರೆಯುವವರು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.
1. ಬಿ.ಫಾರ್ಮ/ ಡಿ.ಫಾರ್ಮ ಪದವಿಯನ್ನು ಹೊಂದಿರಬೇಕು ಜೊತೆಗೆ ಕಂಪ್ಯೂಟರ್ ಬಗ್ಗೆ ಜ್ಞಾನ ಹೊಂದಿರಬೇಕು.
2. ಸ್ವಂತ ಜಾಗವನ್ನು ಹೊಂದಿರಬೇಕು ಅಥವಾ ಬೇರೆಯವರಿಂದ ಪಡೆದಿದ್ದಾದಲ್ಲಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳಿರಬೇಕು.
3. ಜಾಗವು ಬಿ.ಪಿ.ಪಿ.ಐ ಅನುಮೋದನೆಗೆ ತಕ್ಕನಾಗಿ 120 ಚದರ ಅಡಿ ಇರಬೇಕು.
4. ಔಷಧಗಳನ್ನು ಮಾರಾಟ ಮಾಡಲು ಲೈಸೆನ್ಸ್ ಹೊಂದಿರಬೇಕು.

ಅರ್ಜಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಬಿ.ಪಿ.ಪಿ.ಐ.ಗೆ ಸಲ್ಲಿಸಬಹುದು. ಒಂದು ವೇಳೆ ಅರ್ಜಿದಾರರಿಗೆ ಔಷಧ ಮಳಿಗೆಯನ್ನು ನಡೆಸಿದ ಅನುಭವವಿಲ್ಲದೇ ಇದ್ದಲ್ಲಿ, ಬಿ.ಪಿ.ಪಿ.ಐ ಅವರಿಗೆ ಅವಶ್ಯಕ ತರಬೇತಿಯನ್ನು ಕೂಡ ನೀಡುತ್ತದೆ.

ಮೊದಲೇ ಹೇಳಿದಂತೆ ಜನೌಷಧದಲ್ಲಿ ಔಷಧಗಳು ಇತರ ಬ್ರಾಂಡೆಡ್ ಔಷಧಗಳಿಗಿಂತ ಕಡಿಮೆ ದರದಲ್ಲಿ ದೊರಕುತ್ತದೆ. ಈ ಕೆಳಗೆ ಕೆಲ ಔಷಧಗಳ ದರ ಜನೌಷಧದಲ್ಲಿ ಹಾಗೂ ಇತರೆಡೆ ಎಷ್ಟು ಎನ್ನುವುದನ್ನ ಹೋಲಿಸಿ ಬರೆಯಲಾಗಿದೆ.

   

Leave a Reply