ಗುಪ್ತಚರರಿಗೆ ಸವಾಲಾದ ಕರಪತ್ರ ಜಾಲ

ಚಂದ್ರಶೇಖರ ಭಂಡಾರಿ - 0 Comment
Issue Date :

– ಚಂದ್ರಶೇಖರ ಭಂಡಾರಿ

….ಆ ದಿನಗಳಲ್ಲಿ ಪುಣೆ ಮತ್ತು ಅದರ ಸುತ್ತಮುತ್ತ ಕ್ಷೇತ್ರದಲ್ಲಿ ಮೂರು ಚಕ್ರಮುದ್ರಣ ಯಂತ್ರಗಳಿದ್ದವು. ಅವುಗಳಿಂದ ಪ್ರತಿನಿತ್ಯ ಮುದ್ರಿತವಾಗುತಿದ್ದ ಕರಪತ್ರಗಳು ಹದಿನೈದರಿಂದ ಹದಿನಾರು ಸಾವಿರದಷ್ಟು. ಇವೆಲ್ಲವೂ – ಒಂದೂ ವ್ಯರ್ಥವಾಗದೆ – ಯೋಜನಾಬದ್ಧವಾಗಿ ವಿತರಣೆಯಾಗುತಿದ್ದವು. ಒಂದೊಂದನ್ನೂ ಓದುತಿದ್ದವರು – ಒಂದೆರಡಲ್ಲ – ಹತ್ತಾರು ಮನೆಗಳವರು, ಅವುಗಳನ್ನು ದಕ್ಷತೆಯಿಂದ ವಿತರಿಸುತಿದ್ದವರು ಬಾಲಕರು ಮತ್ತು ಮಹಿಳೆಯರು. ಅವರಾರು ಸಹ ಕಷ್ಟಗಳು, ಅಡ್ಡಿ ಆತಂಕಗಳು ಇತ್ಯಾದಿ ಯೋಚಿಸುತಿದ್ದವರೇ ಅಲ್ಲ. ಕಷ್ಟಗಳು ಎದುರಾದಲ್ಲಿ ಅವರ ಉತ್ಸಾಹ ಅಧಿಕವಾಗುತಿದ್ದುದೇ ಸಾಮಾನ್ಯವಾದ ಅನುಭವ.
್ಞ ಕಾಂಗ್ಡಾ ಒಂದು ಪರ್ವತೀಯ ಪ್ರದೇಶ. ಅಲ್ಲಿ ಸಾರಿಗೆ ಸೌಕರ‌್ಯಗಳಿರುವುದೇ ವಿರಳ. ಅಂತಹ ಕ್ಷೇತ್ರದಲ್ಲಿ ಬಾಲ ಸ್ವಯಂಸೇವಕರು ಹಲವಾರು ಮೈಲಿಗಳ ದೂರದವರೆಗೆ ಬೆಟ್ಟ ಹತ್ತಿ, ಕಣಿವೆ ಇಳಿದು ತಮಗೆ ನಿರ್ವಹಿಸಲಾದ ಕೆಲಸವನ್ನು ಯಶಸ್ವಿಯಾಗಿ ಪೂರೈಸಿ ಬರುತಿದ್ದರು. ಪೋಲಿಸರ ಕಣ್ಣುತಪ್ಪಿಸಲು ಅವರು ಹೋಗುತಿದ್ದುದು ಮುಖ್ಯರಸ್ತೆಗಳನ್ನು ಬಿಟ್ಟು ನಗರಗಳಲ್ಲಿನ ಸಂದಿಗೊಂದಿಯ ಗಲ್ಲಿಗಳಲ್ಲಿ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಡಿನ ಮಾರ್ಗಗಳಲ್ಲಿ . ಎತ್ತರವಾದ ಪರ್ವತವಾಗಲಿ, ವೇಗದಿಂದ ತುಂಬಿ ಹರಿಯುವ ಪರ್ವತೀಯ ನದಿ ತೊರೆಗಳಾಗಲಿ ಅವರಿಗೆ ಸಮಸ್ಯೆ ಎನಿಸುತ್ತಲೇ ಇರಲಿಲ್ಲ. ಧ್ಯೇಯದ ನಿಷ್ಠೆ, ಕರ್ತವ್ಯಕ್ಕೆ ಬದ್ಧತೆ ಇವು ಅವರಲ್ಲಿ ಉತ್ಸಾಹ, ಕೆಚ್ಚು ಮತ್ತು ನಿರ್ಭೀಕ ಮನೋವೃತ್ತಿ ತುಂಬಿದ್ದವು.
್ಞ ಮಧ್ಯ ಭಾರತದ ಇಂದೋರ್ ನಗರದಲ್ಲಿ ಕರಪತ್ರಗಳ ವಿತರಣೆಯ ವ್ಯವಸ್ಥೆ ವಹಿಸಲಾಗಿದ್ದುದು ಆಗ ಇನ್ನೂ ಬಾಲಕನಾಗಿದ್ದು – ಮುಂದೆ ಹೋಶಂಗಾಬಾದ್ ಜಿಲ್ಲೆಯ ಪಿಪರಿಯಾದಲ್ಲಿ ಅಧ್ಯಾಪಕರಾದ – ಪ್ರಾ.ಗ. ಯಾವಲ್ಕರ್ ಎಂಬವರಿಗೆ. ಅವರಿಗೆ ಅದು ತಲಪುತಿದ್ದುದು – ತಯಾರಾಗುತಿದ್ದ ಸ್ಥಾನ ಅವರಿಗೂ ತಿಳಿಸಲಾಗಿರಲಿಲ್ಲ – ಒಂದು ಹಾಲಿನ ಕ್ಯಾನ್‌ನಲ್ಲಿ. ಅಲ್ಲಿಗೆ ಅದನ್ನು ತಲಪಿಸುತಿದ್ದ ಸ್ವಯಂಸೇವಕ ಹಲವು ಹಾಲಿನ ಕ್ಯಾನುಗಳ ಪೈಕಿ ಒಂದು ಖಾಲಿ ಕ್ಯಾನಿನಲ್ಲಿ ಕರಪತ್ರ ತುಂಬಿ ತಂದು ಡೈರಿಯವನಿಗೆ ಒಪ್ಪಿಸುತ್ತಿದ್ದ. ಈ ರೀತಿಯಲ್ಲಿ ನಗರದಲ್ಲಿನ ಹಲವು ಹಾಲಿನ ಕೇಂದ್ರಗಳಿಗೆ ಕರಪತ್ರಗಳು ತಲಪುತಿದ್ದವು. ಅಲ್ಲಿಂದ ಅವು ನಿಗದಿತ ಬಾಲ ಸ್ವಯಂಸೇವಕರ ಕೈ ಸೇರುತಿದ್ದವು. ತಮಗೆ ಒಪ್ಪಿಸಲಾದ ಬಂಡಲ್‌ನಲ್ಲಿರುವ ಕರಪತ್ರಗಳನ್ನು ಅವರು ಅತಿ ಜಾಣಾಕ್ಷತನದಿಂದ ನಿರ್ಧಾರಿತ ಮನೆಗಳಿಗೆ ಮುಟ್ಟಿಸುತಿದ್ದರು.
ತನ್ನ ಸ್ವಂತದ ಅನುಭವವನ್ನು ಅವರ ಮಾತುಗಳಲ್ಲೆ ಕೇಳಿ : ‘ಆಗ ನಾನಿನ್ನೂ ಬಾಲಕ. ಡೈರಿಯಿಂದ ‘ಆ ಹಾಲಿನವ’ ಪ್ರಾತಃಕಾಲ ನಮ್ಮ ಮನೆಗೆ ಬರುತಿದ್ದ. ಮೊದಲೇ ತಿಳಿದಿದ್ದುದರಿಂದ ಮನೆ ಬಾಗಿಲಲ್ಲೆ ನಾನು ಅವನಿಗಾಗಿ ಕಾಯುತಿದ್ದೆ. ಹೆಚ್ಚು ಮಾತಿಲ್ಲದೆ ಆ ಬಂಡಲ್ ಪಡೆದು ನಾನು ಬೆಳಗ್ಗಿನ ಓಟದ ನೆಪದಲ್ಲಿ (ಜಾಗಿಂಗ್) ಇಂದೋರ್‌ನ ಗಿರಣಿಯ ಬಳಿ ಹೋಗುತಿದ್ದೆ. ಅದು ರಾತ್ರಿಯ ಪಾಳಿ ಮುಗಿದು ಕಾರ್ಮಿಕರು ಹೊರಗೆ ಬರುವ ಸಮಯ. ಕೆಲವೇ ನಿಮಿಷಗಳಲ್ಲಿ ಕರಪತ್ರಗಳನ್ನು ಅವರಿಗೆ ಹಂಚಿ ನಾನು ಮನೆಗೆ ವಾಪಸ್ ಬರುತಿದ್ದೆ. ಒಂದು ದಿನ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡೆ. ಅಂತಹ ಸಾಧ್ಯತೆಯ ಊಹೆ ಮೊದಲಿನಿಂದಲೂ ಇದ್ದ ಕಾರಣ ನಾನು ಸದಾ ಒಂದಿಷ್ಟು ಸಿನೆಮಾ ಕರಪತ್ರಗಳನ್ನೂ ಜತೆಯಲ್ಲಿರಿಸಿಕೊಳ್ಳುತಿದ್ದೆ. ಅವರ ಕೈಗಳಿಗೆ ನಾನು ಸಿಕ್ಕಾಗ ನನ್ನ ಬಳಿಯಿದ್ದುದು ಸಿನೆಮಾ ಕರಪತ್ರಗಳು ಮಾತ್ರ. ಹೀಗಾಗಿ ಅವರ ಕಣ್ಣಿಗೆ ಮಣ್ಣೆರೆಚಲು ನನಗೆ ಕಷ್ಟವೇನೂ ಆಗಲಿಲ್ಲ.
ಯಂತ್ರವತ್ತಾದ ದಕ್ಷತೆ
ಸಂಘದ ಭೂಮಿಕೆ, ತನ್ನ ಮೇಲೆ ಹೊರಿಸಲಾಗಿದ್ದ ಆರೋಪಗಳ ನಿರಾಕರಣ ಮತ್ತು ಸತ್ಯಾಗ್ರಹದ ಔಚಿತ್ಯ ಇತ್ಯಾದಿ ವಿವರಗಳನ್ನೊಳಗೊಂಡ ಕಿರುಹೊತ್ತಿಗೆಯೊಂದನ್ನು ಹೊರತರಬೇಕೆಂದು ಕೇಂದ್ರದಲ್ಲಿ ನಿರ್ಧರಿಸಲಾಗಿತ್ತು. ಅದರ ಮುದ್ರಣದ ಹೊಣೆಯನ್ನು ವಹಿಸಲಾಗಿದ್ದುದು ಇಂದೋರ್‌ನ ಕಾರ್ಯಕರ್ತರಿಗೆ. ಈ ಹೊತ್ತಿಗೆಯ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಬೇಕೆಂಬುದು ಇದರಲ್ಲಿದ್ದ ಬಹುದೊಡ್ಡ ಸವಾಲು. ಕಾರಣವೆಂದರೆ ದೇಶದ ಎಲ್ಲ ಪ್ರಾಂತಗಳಿಗೂ ಹೋಗಬೇಕಾಗಿತ್ತದು. ಸವಾಲು ಸುಲಭದ್ದಾಗಿರಲಿಲ್ಲ. ಆದರೆ ಸ್ವಯಂಸೇವಕರು ಸೋಲೊಪ್ಪುವವರೇನು? ಸೂಚನೆ ಬಂದಾಗ ‘ಸೈ’ ಎಂದರು. ಸಮಸ್ಯೆ ಆರಂಭವಾದುದು ಮುದ್ರಣಾಲಯ ಯಾವುದು ಎಂಬಲ್ಲಿಂದ. ಯಾವುದೇ ಮುದ್ರಣಾಲಯದವರು ತಯಾರಾಗಲಿಲ್ಲ. ನಾಲ್ಕಾರು ಹೆಚ್ಚು ಕಾಸಿಗೆ ಆಸೆಪಟ್ಟು ಸರಕಾರದ ಜತೆ ತೊಡೆ ತಟ್ಟಿ ನಿಲ್ಲುವುದೇ? ಪೊಲೀಸರಿಗೆ ವಾಸನೆ ಹತ್ತಿದಲ್ಲಿ ಮುಂದೆ ಬೀಗ ಮುದ್ರೆ, ಮೊಕದ್ದಮೆ, ನ್ಯಾಯಾಲಯಕ್ಕೆ ಆಚೆ ಈಚೆ ಓಡಾಟ ಇತ್ಯಾದಿ. ‘ನಮಗೇಕೆ ಇಲ್ಲದ ಉಸಾಬರಿ?’ ಎನ್ನುವವರೇ ಎಲ್ಲ. ಆದರೂ ಸ್ವಯಂಸೇವಕರು ಮುದ್ರಣಾಲಯದ ಹುಡುಕಾಟ ಬಿಡಲಿಲ್ಲ. ಕೊನೆಯಲ್ಲಿ ಗಫೂರ್ ಖಾನ್ ಕಿ ಬಜರಿಯಾ ಎಂಬಲ್ಲಿ ಒಂದು ಹೊಸ ಮುದ್ರಣಾಲಯ ಆರಂಭವಾಗಿರುವುದು ತಿಳಿಯಿತು. ಪೂರಾ ಹೊಸದಾಗಿ ಇದ್ದುದರಿಂದ ಅದರ ಮಾಲಿಕರಿಗೆ ಇನ್ನೂ ಅಷ್ಟೇನೂ ಗ್ರಾಹಕರಿರಲಿಲ್ಲ. ಕೆಲಸವೂ ಕಡಿಮೆ ಇತ್ತು. ಅವರು ಒಪ್ಪಿಕೊಂಡರು. ಹಗಲಿನಲ್ಲಿ ಮೊಳೆಗಳ ಜೋಡಣೆ ಹಾಗೂ ರಾತ್ರಿ ಮುದ್ರಣ – ಈ ರೀತಿಯಲ್ಲಿ ಕೆಲಸದ ಯೋಜನೆಯಾಯ್ತು. ರಾತ್ರಿ ಮುದ್ರಣ ಆರಂಭವಾಗುವ ಮೊದಲು ಮುದ್ರಣಾಲಯಕ್ಕೆ ಹೊರಗಿನಿಂದ ಬೀಗ ಹಾಕಲಾಗುತ್ತಿತ್ತು. ಮುದ್ರಣಾಲಯದ ಹೊರಗೆ ಹಲವು ಪಾಳಿಗಳಲ್ಲಿ ಬಾಲಕರು. ಮುದ್ರಣದ ಕೆಲಸ ಮುಂದುವರಿದವಂತೆ ಅವರು ಮುದ್ರಿತ ಹಾಳೆಗಳ ಕಟ್ಟನ್ನು ಹಿಂಬದಿಯಿಂದ ತೆಗೆದುಕೊಂಡು ನೂತನ ವಿದ್ಯಾಲಯದ ಹಿಂದೆ ಅದಕ್ಕಾಗಿಯೇ ಕಾದಿರುತಿದ್ದ ಇನ್ನೊಬ್ಬರಿಗೆ ತಲಪಿಸುವ ಕೆಲಸ ಮಾಡುವರು. ಈ ಇನ್ನೊಬ್ಬರು ಅವುಗಳನ್ನು ಅಲ್ಲಿಂದ ಬೇರೆಡೆಗೆ ಒಯ್ದು ತಲಪಿಸುವರು. ಅಲ್ಲಿ ಹಾಳೆಗಳ ಮಡಚುವಿಕೆ, ಪಿನ್ನಿಂಗ್, ಕಟ್ಟಿಂಗ್ ಇತ್ಯಾದಿ. ಈ ರೀತಿಯಲ್ಲಿ ಒಂದು ವಾರದ ಕಾಲಾವಧಿಯಲ್ಲಿ ತಯಾರಿಸಲಾದ ಹೊತ್ತಿಗೆಗಳು ಒಂದು ಲಕ್ಷ. ಮುಂದೆ ಅವುಗಳನ್ನು ಸೊಗಸಾಗಿ ಪ್ಯಾಕ್ ಮಾಡಿ ದೇಶಾದ್ಯಂತ ಎಲ್ಲ ಪ್ರಾಂತ್ಯಗಳಿಗೆ ರವಾನೆ. ಎಲ್ಲದರಲ್ಲೂ ಯಂತ್ರವತ್ತಾದ ದಕ್ಷತೆ, ಠಾಕು ಠೀಕಾದ ನಿರ್ವಹಣೆ ಮತ್ತು ನಿರ್ವಿಘ್ನವಾಗಿ ಅದರ ಮುಕ್ತಾಯ.
ಮುಂದೆ ಏಕಕಾಲದಲ್ಲಿ ದೇಶದ ವಿಭಿನ್ನ ಊರುಗಳಲ್ಲಿ ಅದರ ವಿತರಣೆ ಆರಂಭವಾದಾಗಲೇ ಒಂದೆರಡು ಪ್ರತಿಗಳು ಗುಪ್ತಚರ ಇಲಾಖೆಗೂ ಲಭಿಸಿದವು. ಆಗಲೇ ಅದಕ್ಕೆ ಗೊತ್ತಾದುದು-ಒಂದೇ ರೀತಿಯ ಹೊತ್ತಿಗೆಗಳು, ಒಂದೇ ಮುದ್ರಣ ಎಲ್ಲಿ ಹೇಗೆ ಎಂಬುದೇ ಇಲಾಖೆಗೆ ಗೊತ್ತಾಗದ ಯಕ್ಷ ರಹಸ್ಯ. ಕೊನೆಗೂ ಅದನ್ನು ಕಂಡು ಹಿಡಿಯಲು ಅದಕ್ಕೆ ಸಾಧ್ಯವಾಗಲೇ ಇಲ್ಲ.
ಉದ್ಯೋಗಕ್ಕೆ ಸೂಟಿ
ಒಪ್ಪಿಕೊಂಡ ಕೆಲಸ ಮಾಡಿ ಪೂರೈಸುವುದಕ್ಕ್ಕಾಗಿ ಅದೆಷ್ಟೇ
ಕಷ್ಟಪಡಲು, ತ್ಯಾಗ ಮಾಡಲು ತಯಾರ್-ಹೀಗಿರುತ್ತಿತ್ತು. ಸೆರೆವಾಸಕ್ಕೆ ಹೋಗದೆ ಹೊರಗಡೆ ಇದ್ದು ಭೂಗತವಾಗಿ ಕೆಲಸ ಮಾಡುತಿದ್ದ ಕಾರ್ಯಕರ್ತರ ಮಾನಸಿಕತೆ. ಅಂತಹ ಉದಾಹರಣೆಗಳಿಗೆ ಕೊರತೆಯೇ ಇಲ್ಲ. ಒಂದು ಉದಾಹರಣೆ:
ಅಮರಾವತಿಯ ಅನಂತ ಸೋನಕರ ಗೋಖಲೆ ಮತ್ತು ಖಾಡಗಾಂವ್ಕರ ಎಂಬ ಇಬ್ಬರಿಗೆ ಗುಪ್ತಕರಪತ್ರಗಳ ಹಂಚುವಿಕೆಯ ಕೆಲಸ ವಹಿಸಲಾಗಿತ್ತು. ಬೇರೊಂದು ಗುಂಪು ಅದನ್ನು ತಯಾರಿಸಿ ತಲಪಿಸುತ್ತಿತ್ತು. ಶ್ರೀ ಗೋಖಲೆಯವರು ಎಮ್ಮೆ ಸಾಕಿ, ಹಾಲು ಮಾರಿ ಉದರಂಭರಣ ಮಾಡುತಿದ್ದವರು. ಮನೆಯಲ್ಲಿದ್ದವರು ಪತ್ನಿ ಮತ್ತು ಹುಟ್ಟ್ಟಿದ ಇನ್ನೂ ಆರು ತಿಂಗಳು ಸಹ ಕಳೆಯದ ಶಿಶು, ಅಷ್ಟೇ. ಸಂಘದ ಹಿರಿಯರಿಂದ ಸೂಚನೆ ಬಂದ ಮೇಲೆ ಶ್ರೀ ಗೋಖಲೆಯವರಿಗೆ ಅನಿಸಿತು-ತನ್ನ ಹಾಲಿನ ಉದ್ಯೋಗ ಮತ್ತು ಕರಪತ್ರಗಳ ವಿತರಣೆ ಇವೆರಡನ್ನು ಏಕಕಾಲದಲ್ಲಿ ನಿಭಾಯಿಸುವುದು ಸಾಧ್ಯವಿಲ್ಲ. ಅದನ್ನವರು ಸಂಘದ ಹಿರಿಯರಿಗೆ ಹೇಳಲಿಲ್ಲ. ‘ನನ್ನ ಉದ್ಯೋಗದಲ್ಲಿ ಬೇರೆ ಜತೆಗಾರರು ಯಾರೂ ಇಲ್ಲ. ನನ್ನ ಅನ್ನ ಇರುವುದೇ ಅದರಲ್ಲಿ’ ಇತ್ಯಾದಿ ನೆಪ ಹೇಳಿ ಅವರು ಜಾರಿಕೊಳ್ಳಲಿಲ್ಲ. ಅದರ ಬದಲಾಗಿ ‘ಸಂಘದ ಸೂಚನೆ ಪಾಲನೆ ಮಾಡಬೇಕು, ಅಷ್ಟೇ. ಮಿಕ್ಕಿದ್ದೆಲ್ಲವೂ ಭಗವಂತನ ಇಚ್ಛೆಯಂತೆ’ ಎಂದುಕೊಂಡರು ಅವರು.
ಅದಕ್ಕ್ಕಾಗಿ ತನ್ನ ಉದ್ಯೋಗವನ್ನೇ ಬಿಟ್ಟುಬಿಡಲು ಅವರು ನಿರ್ಧರಿಸಿದರು. ತನ್ನ ಎಮ್ಮೆಯನ್ನು ಇನ್ನೊಬ್ಬನಿಗೆ ಒಪ್ಪಿಸಿ ಅದನ್ನು ನೋಡಿಕೊಳ್ಳುವಂತೆ ತಿಳಿಸಿದರು. ಇನ್ನು ಕರಪತ್ರದ ವಿತರಣೆಯ ಕೆಲಸಕ್ಕಾಗಿ ತನ್ನ ಮನೆಯನ್ನೇ ಕೇಂದ್ರವಾಗಿ ಮಾಡಬೇಕಾಗಿದ್ದ ಕಾರಣಕ್ಕಾಗಿ ಅಲ್ಲಿ ಪತ್ನಿ ಮತ್ತು ಶಿಶು ಇರುವುದು ಸುರಕ್ಷಿತವಲ್ಲ ಎಂದು ಅವರಿಗನಿಸಿತು. ಅದಕ್ಕ್ಕಾಗಿ ಶಿಶು ಸಹಿತ ಪತ್ನಿಯನ್ನು ತನ್ನ ಸೋದರಿಯ ಮನೆಗೆ ಕಳುಹಿಸಿದರು. ಮನೆಗೆ ಹೊರಗಿನಿಂದ ಬೀಗ ತಗಲಿಸಿದರು. ತೋರಿಕೆಗೆ ಮನೆಯಲ್ಲಿ ಯಾರೂ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿತು. ಅವರು ಸ್ವತಃ ನೆರೆಮನೆಯ ಆವರಣದಿಂದ ಹಿಂಬಾಗಿಲಿನಿಂದ ಓಡಾಡಲು ವ್ಯವಸ್ಥೆ ಮಾಡಿಕೊಂಡರು.
ಸರಿ, ನಿಗದಿತ ಕೆಲಸ ಆರಂಭವಾಯ್ತು. ಭಾರೀ ಎಚ್ಚರ ವಹಿಸಿ ಎಲ್ಲವನ್ನು ನಡೆಸಲಾಗುತ್ತಿತ್ತು. ಆದರೂ ಅವರ ಮನೆಯ ಮುಂದೆಯೇ ವಾಸಿಸುತ್ತಿದ್ದ ಬೇಹುಗಾರರೊಬ್ಬರಿಗೆ ಅಲ್ಲೇನೋ ಗುಟ್ಟಾಗಿ ಕೆಲಸ ನಡೆಯುತ್ತಿದೆ ಎಂಬ ಸಂದೇಹ ಉಂಟಾಯಿತು. ಅವರು ತಮ್ಮ ಮೇಲಾಧಿಕಾರಿಯ ಕಿವಿಗೆ ಅದನ್ನು ಹಾಕಿದರು. ಅವರಿಬ್ಬರೂ ಸೇರಿ ಪೂರಾ ಸಿದ್ದತೆಯೊಂದಿಗೆ ಏಕದಂ ದಾಳಿ ನಡೆಸಲು ಯೋಜನೆ ಹಾಕಿದರು. ಆದರೆ ಸಂಘದ ಕಾರ್ಯಕರ್ತರಿಗೂ ತಮ್ಮದೇ ಮೂಲಗಳಿಂದ ಈ ಬಗ್ಗೆ ಸುಳಿವು ಸಿಕ್ಕಿತು. ಅವರೂ ಚುರುಕಾದರು. ತಮಗೆ ಮಾಹಿತಿ ದೊರೆತ ರಾತ್ರಿಯೇ ಹಿಂಬಾಗಿಲಿನಿಂದ ಅಲ್ಲಿದ್ದ ಎಲ್ಲ ಸಾಮಾನುಗಳನ್ನು ಸಾಗಿಸಿದರು. ನಂತರ ಗೋಖಲೆ ಯವರ ಸಹಕಾರಿ ಖಾಡಗಾಂವ್ಕರ್ ಯಾರಿಗೂ ಗುರುತು ಸಿಗದಿರಲಿ ಎಂಬುದಕ್ಕಾಗಿ ಒಂದು ಓವರ್ ಕೋಟ್ ಧರಿಸಿ, ತನ್ನ ಸೈಕಲ್ ಏರಿ, ಅಲ್ಲೆ ಇದ್ದ ಬೇಹುಗಾರ ‘ಮಿತ್ರ’ ರಿಗೆ ‘ರಾಂರಾಂ’ ಹೇಳುತ್ತ ಅಲ್ಲಿಂದ ಹೊರಟು ಹೋದರು. ಹೋಗುವ ಮೊದಲು ಮನೆಯ ಎಲ್ಲ ಕಿಟಕಿಗಳನ್ನು ತೆರದಿರಿಸಲಾಗಿತ್ತು.
ತಮ್ಮ ರೂಢಿಯಂತೆ ಪೊಲೀಸರು ಮಧ್ಯರಾತ್ರಿ ಎಲ್ಲ ಸಿದ್ದತೆಯೊಂದಿಗೆ ತಲಾಶ್‌ಗಾಗಿ ಬಂದರು. ಟಾರ್ಚ್ ಬಳಸಿ
ಕಿಟಕಿಗಳಿಂದ ಒಳಗೆ ನೋಡಿದಾಗ ಅಲ್ಲೇನಿದೆ? ಎಲ್ಲವೂ ಖಾಲಿಖಾಲಿ. ಪಕ್ಷಿ ಮೊದಲೇ ಪಂಜರದಿಂದ ಹಾರಿಹೋಗಿತ್ತು. ಮರುದಿನ ಠಾಣೆಯಲ್ಲಿ ಆ ಮಾಹಿತಿದಾರನಿಗೆ ಮೇಲಧಿಕಾರಿ ಪೊಲೀಸ್ ಭಾಷೆಯ ಮಂತ್ರಗಳಿಂದ ಮಂಗಳಾರತಿ ನಿವಾಳಿಸಿದುದೇ ಅವನಿಗೆ ಸಿಕ್ಕಿದ ಬಹುಮಾನ.
ಕಗ್ಗತ್ತಲ ರಾತ್ರಿ-ಮರಳುಗಾಡು ರಸ್ತೆ
‘ಸಂಘದ ಹಿರಿಯರು ನನ್ನ ಮೇಲೆ ಭರವಸೆಯಿರಿಸಿ ಈ ಕೆಲಸ ಒಪ್ಪಿಸಿದ್ದಾರೆ. ಅದನ್ನು ಮಾಡಿ ಪೂರೈಸುವುದಷ್ಟೇ ನನ್ನ ಕರ್ತವ್ಯ. ನಿಜ ನನಗೆ ಅದೊಂದು ಸವಾಲು, ಪರೀಕ್ಷೆಯ ಪ್ರಸಂಗ. ಅಪಾಯಕ್ಕೆ ನಾನೇಕೆ ಹೆದರಲಿ?’ ಇದು ಆ ದಿನಗಳಲ್ಲಿ ಸಾಮಾನ್ಯ ಬಾಲಕರು, ಕಿಶೋರರು ಯೋಚಿಸುತಿದ್ದ ರೀತಿ.
ಈಗ ಇಂದೂರ್ ಸಮೀಪದ ಮಹಾನಗರದ ನಿವಾಸಿಯಾಗಿರುವ ಶ್ರೀ ಕರ್ಡೇಕರ್, ಆಗ ಮಂದಸೌರ ಜಿಲ್ಲೆಯ ಗರೋಟ್‌ನಲ್ಲಿ ಇರುತಿದ್ದ ಓರ್ವ ಕಿಶೋರ. ವಯಸ್ಸು ಸುಮಾರು 11-12ರ ಆಸುಪಾಸು. ಮಾಧ್ಯಮಿಕ ಶಾಲಾ ವಿದ್ಯಾರ್ಥಿ. 1949ರ ಫೆಬ್ರವರಿ 8 ರಂದು ನಗರ ಕಾರ್ಯವಾಹ ಶ್ರೀ ರಾಮದಾಸ ಅವರು ಅವನಿಗೆ ಒಂದು ಪತ್ರ ಕೊಟ್ಟು ರಾಮಪುರಾ ಎಂಬ ಊರಲ್ಲಿರುವ ಪ್ರಚಾರಕ ಶ್ರೀ ಸಾತಾರಕರ ಅವರಿಗೆ ಅದೇ ರಾತ್ರಿ ತಲುಪಿಸುವೆಯಾ ಎಂದು ಕೇಳಿದರು. ಆಗ ರಾತ್ರಿ ಗಂಟೆ 8.30. ರಾಮಪುರಾ ಅಲ್ಲಿಂದ ಮೂವತ್ತು ಮೈಲು ದೂರ, ಅಷ್ಟು ಹೊತ್ತಿಗೆ ಯಾವುದೇ ಬಸ್ ಇಲ್ಲ. ಅವನಿದ್ದಲ್ಲಿಂದ ರಾಮಪುರಾಗೆ ಹೋಗುವ ದಾರಿಯಲ್ಲಿ ಬಡಾವದ ಎಂಬ ಪ್ರದೇಶ. ಆಗ ಇನ್ನೂ ಗಾಂಧಿಸಾಗರ ಅಣೆಕಟ್ಟು ಅಲ್ಲಿ ಆಗಿರಲಿಲ್ಲ. ಆ ದಿನಗಳಲ್ಲಿ ಅಲ್ಲಿ ಇದ್ದುದು ಬರಿಯ ಮರಳುಗಾಡು. ರಾತ್ರಿ ಹೊತ್ತು ಅಲ್ಲಿ ಕ್ರೂರ ಕಾಡುಮೃಗಗಳು ಓಡಾಡುತಿದ್ದುದು ಮಾಮೂಲಿ. ಆ ಹೊತ್ತಿನಲ್ಲಿ ಅಲ್ಲಿಗೆ ಹೋಗಬೇಕಾದಲ್ಲಿ ಸೈಕಲ್ ಬಿಟ್ಟು ಬೇರಾವುದೇ ವಾಹನ ಎಂಬುದಿರಲಿಲ್ಲ. ಅಂತಹ ಕತ್ತಲ ರಾತ್ರಿಯಲ್ಲಿ ಓರ್ವ ಕಿಶೋರ ಏಕಾಂಗಿಯಾಗಿ ಸೈಕಲ್ ತುಳಿದು ಮೂವತ್ತು ಮೈಲುಗಳ ದೂರ ಕ್ರಮಿಸುವುದು ಕಲ್ಪಿಸುವುದು ಸಹ ಕಠಿಣವೇ.
ಆದರೂ ಕರ್ಡೇಕರ್ ಹೊರಟ. ದಾರಿಯುದ್ದಕ್ಕೂ ಸೈಕಲ್ ದೀಪ ಬಿಟ್ಟಲ್ಲಿ ಬೇರೆ ಬೆಳಕೆಂಬುದೇ ಇಲ್ಲ. ನಿರ್ಜನ ಕಾಡುದಾರಿಯಲ್ಲಿ ಏನೇನೋ ಸದ್ದು. ಅದಾವುದನ್ನೂ ಅವನು ಗಣನೆಗೆ ತೆಗೆದುಕೊಳ್ಳಲಿಲ್ಲ. ಭಗವಂತನೇ ತನ್ನ ಜತೆಯಲ್ಲಿದ್ದಾನೆ ಎಂಬ ಮೊಂಡು ಧೈರ್ಯ ಆ ಪೋರನಿಗೆ. ‘ತ್ವದೀಯಾಯ ಕಾರ್ಯಾಯ ಬದ್ದಾ ಕಟೀಯಂ’ ಎಂಬ ದೃಢ ಸಂಕಲ್ಪದೊಂದಿಗೆ ಸೈಕಲ್ ತುಳಿಯುತ್ತಲೇ ಮುಂದುವರಿದ. ಅವನು ರಾಮಪುರಾ ತಲಪಿದಾಗ ರಾತ್ರೆ 2.00 ಘಂಟೆ ಕಳೆದಿತ್ತು. ಶ್ರೀ ಸಾತಾರಕರ ಅವರಿಗೆ ಪತ್ರ ತಲಪಿದ ಮೇಲಷ್ಟೇ ಅವನು ವಿಶ್ರಾಂತಿ ಪಡೆದ.

ಗುಪ್ತಚರನಾದ ಕಾರ್ಯಕರ್ತ
ಹಿಮಾಚಲ ಪ್ರದೇಶದ ಕಾಂಗ್ಡಾ ಜಿಲ್ಲೆಯ ಧರ್ಮಶಾಲಾದ ಭೂಗತ ಕಾರ್ಯಕರ್ತರು ಪೊಲೀಸರ ಚಟುವಟಿಕೆಗಳ ಮೇಲೆ ಕಣ್ಣಿರಿಸಿ ತಮಗಗತ್ಯದ ಮಾಹಿತಿ ಸಂಗ್ರಹಿಸಲು ಒಂದು ವಿನೂತನ ಮಾರ್ಗವನ್ನು ತಮ್ಮದಾಗಿಸಿದರು. ನಿಷೇಧದ ಕಾರಣದಿಂದಾಗಿ ಪೊಲೀಸರು ಮತ್ತು ಇನ್ನಿತರ ಸಂಘ ವಿರೋಧಿಗಳು ತುಂಬ ಕ್ರಿಯಾಶೀಲರಾಗಿದ್ದರು. ಅಷ್ಟಾದರೂ ಏಕತ್ರೀಕರಣ ಯಶಸ್ವಿಯಾಗಿ ನಡೆಯುತ್ತಿತ್ತು. ಅಗತ್ಯಕ್ಕನುಗುಣವಾಗಿ ಸ್ಥಾನವನ್ನಷ್ಟೆ ಬದಲಾಯಿಸುತಿದ್ದರು. ಕೆಲವೊಮ್ಮೆ ನ್ಯಾಯಾಲಯದ ಸಮೀಪವಿರುವ ಮಂದಿರದಲ್ಲಾದರೆ ಇನ್ನೂ ಕೆಲವೊಮ್ಮೆ ಸಮೀಪದ ಕಾಡುಗಳಲ್ಲಿ.

   

Leave a Reply