ಗುರುಕುಲಗಳ ಮುನ್ನಡೆಯ ಹೆಜ್ಜೆ ಗುರುತುಗಳು…

ಲೇಖನಗಳು - 0 Comment
Issue Date :

ಪ್ರೊ. ರಾಮಚಂದ್ರ ಜಿ. ಭಟ್ – 

ಪ್ರಾಚೀನ ಕಾಲದಲ್ಲಿ ಓರ್ವ ವ್ಯಕ್ತಿಯ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಮುಖ್ಯ ಧ್ಯೇಯವಾಗಿತ್ತು. ಇದನ್ನೇ ನಾವು ಸ್ವಸ್ಥ ವ್ಯಕ್ತಿ ನಿರ್ಮಾಣ ಎಂದು ಕರೆದಿದ್ದೇವೆ.

ಸಂಘದ ಸರಸಂಘಚಾಲಕರಾದ ಶ್ರೀ ಗುರೂಜಿಯವರು ಅಂದು ಗೀತಾ ವಿಶ್ವವಿದ್ಯಾಲಯದ ಉದ್ಘಾಟನೆ ಸಂದರ್ಭದಲ್ಲಿ ಭಗವದ್ಗೀತೆಯ ಆಧಾರದಲ್ಲಿ ಶಿಕ್ಷಣ ಹೇಗಿರಬೇಕು? ಎಂಬುದರ ಬಗ್ಗೆ ಹೇಳುತ್ತ, ‘ತದ್ಬುದ್ಧಯಃ ತದಾತ್ಮಾನಃ ತನ್ನಿಷ್ಠಾಃ ತತ್ಪರಾಯಣಾಃ ಎಂಬ ಗೀತಾ ಶ್ಲೋಕವನ್ನು ಉದಾಹರಿಸಿದ್ದಾರೆ. ಅಂದರೆ ಶಿಕ್ಷಕರಾದವರು ತನ್ಮಯರು, ನಿಷ್ಠರು, ಉತ್ತಮರು ಆಗಿರಬೇಕು. ಇಂತಹ ಗುರುಗಳಿದ್ದರೆ ಅದು ಗುರುಕುಲವಾಗುತ್ತದೆ ಎಂದಿದ್ದರು.

 ಈ ವಿಚಾರಗಳನ್ನೇ ನಾವು ಗಮನದಲ್ಲಿಟ್ಟುಕೊಂಡು, ಬದಲಾಗುತ್ತಿರುವ ಸಮಾಜದಲ್ಲಿ ಈ ಎಲ್ಲ ಗುಣಗಳನ್ನು ಹೊಂದಿರುವ ಆಚಾರ್ಯರನ್ನು ಗುರುಕುಲಗಳ ಮೂಲಕ ಸೃಷ್ಠಿಸಿದರೆ ಅಂದರೆ ತರಬೇತಿ ನೀಡಿದರೆ ಎಲ್ಲೆಡೆ ಹೆಚ್ಚಿನ ಸಂಖ್ಯೆಯ ಗುರುಕುಲಗಳ ನಿರ್ಮಾಣ ಸಾಧ್ಯ ಎಂದು ಕರ್ನಾಟಕದಲ್ಲಿ ಗುರುಕುಲ ಸಂಕಲ್ಪ ತೊಟ್ಟೆವು. ಅಂದು
ಕರ್ನಾಟಕದಲ್ಲಿಯೂ ಅನೇಕ ಹಿರಿಯರು ಮೌಲ್ಯಯುತ ಶಿಕ್ಷಣದ ಬಗ್ಗೆ ಅಧ್ಯಯನ, ಚಿಂತನೆ ನಡೆಸಿದವರಿದ್ದರು. ತುರ್ತು ಪರಿಸ್ಥಿತಿ ಹೇರಿಕೆಯಾಗಿದ್ದ ದಿನಗಳಲ್ಲಿ
1976-77 ರಲ್ಲಿ ಸಂಘದ ಪ್ರಾಂತ ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಗೋಕರ್ಣಕ್ಕೆ ಬಂದರು. ಅಲ್ಲಿಯೇ ಇದ್ದ ರಾಮಚಂದ್ರ ಭಟ್ಟ ಕೋಟೆಮನೆ ಹಾಗೂ ವಿ॥ಸೋತಿ ನಾಗರಾಜ್ ಮುಂದೆ ಶಿಕ್ಷಣದ ವ್ಯವಸ್ಥೆಯ ಕುರಿತು ಚಿಂತನೆಗಳನ್ನು ಬಿಚ್ಚಿಟ್ಟರು. ಇದನ್ನು ಕಾರ್ಯಗತಗೊಳಿಸುವ ಸಲುವಾಗಿ ಯೋಜನೆಯೊಂದು ರೂಪುಗೊಂಡಿತು.

  ಕಾರ್ಯಯೋಜನೆ ಶುಭಾರಂಭ

 ಆಗ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತೀರದಲ್ಲಿ ‘ಜನಕಲ್ಯಾಣ ಎಂಬ ವಿಶ್ವಸ್ತ ಮಂಡಳಿಯಿದ್ದು, ಬಂಟ್ವಾಳದ ಬಳಿ ನರಿಕೊಂಬು ಗ್ರಾಮದಲ್ಲಿರುವ ಕೃಷ್ಣ ಸೋಮಯಾಜಿಗಳು ವಿಶಾಲ ಹಿಂದೂ ಸಮಾಜಕ್ಕೆ ವೇದಾಭ್ಯಾಸ ಮಾಡಿಸುವ ಸಂಕಲ್ಪ ಹೊಂದಿದ್ದರು. ಅವರು ಸಂಘದ ಕಡೆಯಿಂದ ವಿಶಾಲ ಹಿಂದೂ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ವೇದ ಶಿಬಿರವನ್ನು ನಡೆಸೋಣ ಎಂಬ ಸಲಹೆ ಇಟ್ಟರು.

 ಅವರ ಮನೆಯಲ್ಲಿಯೇ ಒಂದು ತಿಂಗಳ ಈ ವೇದಶಿಬಿರ ನಡೆಸಲಾಯಿತು. ಸಮೃದ್ಧವಾದ ಮತ್ತು ಸುವ್ಯವಸ್ಥಿತ ಶೈಲಿಯಲ್ಲಿ ಶಿಬಿರ ನಡೆದು ಮಕ್ಕಳು ಚೆನ್ನಾಗಿ ಕಲಿತರು. ದಿನಚರ್ಯೆ, ಕುಟೀರಗಳ ಮರಗಳ ನಡುವೆ ಪಾಠ, ಅಂತೇವಾಸಿಗಳಾದ ಆಚಾರ್ಯರಿಂದ
ಶಿಕ್ಷಣ ಸೇರಿದಂತೆ ಗುರುಕುಲದ ಪರಿಸರ ಅಲ್ಲಿ ಸೃಷ್ಠಿಯಾಗಿತ್ತು. ಪೂಜ್ಯ ಪೇಜಾವರ ವಿಶ್ವೇಶತೀರ್ಥರು, ಬ್ರಹ್ಮಾನಂದರು ಮುಂತಾದ ವಿದ್ವಾಂಸರು ಅಲ್ಲಿಗೆ ಬಂದು ಪಾಠ ಮಾಡುತ್ತಿದ್ದರು. ನಿತ್ಯಪೂಜೆ, ವೇದಮಂತ್ರಗಳು, ಆಯ್ದ ಸೂಕ್ತಗಳ ಸಸ್ವರ ವೇದಪಾಠ ರೂಪಿಸಲಾಗಿತ್ತು. ಸಂಸ್ಕೃತ ಭಾಷಾಭ್ಯಾಸ, ಸುಭಾಷಿತಪಾಠ, ನದೀತೀರದ ಸೂರ್ಯೋಪಾಸನೆಗಳು ಗುರುಕುಲ ಸಂಸ್ಕೃತಿಯ ಉತ್ತಮಾಭ್ಯಾಸಗಳಾಗಿದ್ದವು.

 ನೇತ್ರಾವತಿ ನದಿ ತೀರದಲ್ಲಿ ಈ ವ್ಯವಸ್ಥಿತ ಕಾರ್ಯ ನಡೆಯುತ್ತಿದ್ದಂತೆ ಅತ್ತ ತುಂಗಾ ನದಿ ತೀರದ ಹರಿಹರಪುರದಲ್ಲೂ 1980ರಲ್ಲಿ ಕೆಲ ಸಂಘನಿಷ್ಠರು ಪ್ರಬೋಧಿನೀ ಟ್ರಸ್ಟನ್ನು ಇಂತಹ ಉದ್ದೇಶಗಳಿಗಾಗಿ ರೂಪಿಸಿದರು. ಅಲ್ಲಿ ಕುಟೀರ ಕಟ್ಟಿ ಮರಗಿಡಗಳ ಬುಡದಲ್ಲೇ ಪಾಠ ಮಾಡುವ ಏರ್ಪಾಟಾಯಿತು.

 ಜೊತೆಗೆ ದಿ॥ಅ.ಪಾ ಸುಬ್ರಹ್ಮಣ್ಯ ಭಟ್ಟರು, ಶ್ರೀ ಸುಬ್ರಹ್ಮಣ್ಯ ಭಟ್ಟರು ಮೊದಲಾದ ಶ್ರದ್ಧಾವಂತರನ್ನು ಜೋಡಿಸಿಕೊಂಡು ಗುರುಕುಲ ಪದ್ಧತಿಯ ಒಂದು ತಿಂಗಳ ವೇದಶಿಬಿರ ನಡೆಯುತ್ತಿತ್ತು. ಹೇಗೆ ಗಂಗಾನದಿ ಮೂಲ ಗೋಮುಖದಲ್ಲಿ ಕಿರಿದಾಗಿ ಹರಿದು ನಂತರ ಗಂಗೋತ್ರಿಯಲ್ಲಿ ನದಿಯಾಗಿ ಪ್ರ್ರವಹಿಸುತ್ತದೆಯೋ ಹಾಗೆಯೇ ಗುರುಕುಲದ ಮೂಲ ಸ್ರೋತ, ಕಾರ್ಯಪ್ರಣಾಳಿಕೆ ಪ್ರಾರಂಭವಾಗಿದ್ದೇ ನೇತ್ರಾವತಿ ಹಾಗೂ ತುಂಗಾ ತೀರದಲ್ಲಿ ನಡೆದ ವೇದಶಿಬಿರದಲ್ಲಿ ಎನ್ನಬಹುದು. ಹೀಗೆ ಈ ಆಧುನಿಕ ಗುರುಕುಲ ಪದ್ಧತಿಯ ಆರಂಭವನ್ನು 1977 ರಿಂದ 78, 79 80ರ ಕಾಲಘಟ್ಟಕ್ಕೆ ಜೋಡಿಸಬೇಕಾಗುತ್ತದೆ.

 ಪ್ರಸ್ತುತ ಜನಸೇವಾ ವಿದ್ಯಾ ಕೇಂದ್ರ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆ ಸ್ಥಾಪಿಸುವ ಆಲೋಚನೆ ಹೊಳೆಯಿತು. ಆ ದಿನಗಳಲ್ಲಿ ಮೂಲತಃ ಸರ್ಕಾರಿ ಶಿಕ್ಷಣಾಧಿಕಾರಿಗಳಾಗಿದ್ದ ತ.ಭೀ. ಗೋವಿಂದರಾುರು ಮುಖ್ಯೋಪಾಧ್ಯಾಯತ್ವದ ಜವಾಬ್ದಾರಿ ತೆಗೆದುಕೊಂಡರು. ಅರವಿಂದಾಶ್ರಮದಲ್ಲಿ ತರಬೇತಿ ಪಡೆದು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ನೀಡಬೇಕೆಂಬ ಮನಸ್ಸಿದ್ದ ಅವರು ‘ಭಾರತೀಯ ಶಿಕ್ಷಣ ಮಂಡಳಿಯ ಹೊಣೆಯನ್ನು ಹೊತ್ತಿದ್ದರು. ಅಲ್ಲದೆ ಆಧುನಿಕ ಶಿಕ್ಷಣದ ಪರಿಚಯವಿದ್ದ ಹಾಗೂ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಆಸಕ್ತಿ ಹೊಂದಿದ್ದ ಅನೇಕರು ಕೈ ಜೋಡಿಸಿದ್ದರು. ಇವರಲ್ಲಿ, ಮದನ ಮೋಹನ ಮಾಲವೀಯರ ಶಿಷ್ಯರಾದ ಡಾ. ಭಾರತೀ ರಮಣಾಚಾರ್ಯ, ಆರ್.ವಿ. ಕಾಲೇಜಿನ ಶಿಕ್ಷಕಿಯಾಗಿದ್ದ ಜಯಲಕ್ಷ್ಮೀ, ಪ್ರೊ. ರೋಹಿಡೇಕರ್ ಮೊದಲಾದವರ ಸಹಯೋಗ ಲಭ್ಯವಾಯಿತು.

 ಆಧುನಿಕ ಶಿಕ್ಷಣ ಪದ್ಧತಿಯ ಸಂಪೂರ್ಣ ಪರಿಚಯವಿದ್ದ ಈ ಎಲ್ಲ ಹಿರಿಯ ಚೇತನಗಳು, ಇಂದಿನ ರೀಡಿಂಗ್, ರೈಟಿಂಗ್, ಲೆಕ್ಕಾಚಾರಕ್ಕೆ (ಅರ್ಥ್‌ಮೆಟಿಕ್ಸ್) ಸೀಮಿತವಾದ ಹಳಸಿದ ಶಿಕ್ಷಣದಲ್ಲ್ ಏನೂ ಇಲ್ಲ ಎಂಬುದನ್ನರಿತು, ಹೊಸದಾಗಿ ಶಿಕ್ಷಣ ರೂಪಿಸಬೇಕೆಂಬ ಕಳಕಳಿಯವರಾಗಿದ್ದರು. ಚನ್ನೇನಹಳ್ಳಿಯಲ್ಲಿ ಹೊಸದಾಗಿ ಕೊಂಡ ಆ ಜಾಗದಲ್ಲಿಯೂ ವಿವೇಕಾನಂದ ಕುಟೀರ, ಹನುಮಂತನ ಕುಟೀರ ರಚಿಸಲಾಯಿತು. ಮರಗಿಡಗಳ

ರಾಷ್ಟ್ರೋತ್ಥಾನದಲ್ಲಿ ನಡೆದಿದ್ದು ವೈಚಾರಿಕ ಅಧಿಷ್ಠಾನದ ಚರ್ಚೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಶಿಕ್ಷಣದ ಪ್ರಯೋಗ ಮಾಡಿದ ಗಣ್ಯ ನಾಯಕರಾದ ಲೋಕಮಾನ್ಯ ತಿಲಕರು, ದಯಾನಂದ ಸರಸ್ವತಿ, ಮದನ ಮೋಹನ ಮಾಲವೀಯರು, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ರವೀಂದ್ರನಾಥ ಟಾಗೋರ್ ಇವರೆಲ್ಲರ ಬಗ್ಗೆ ಅಧ್ಯಯನ, ಉತ್ತಮ ಅಂಶಗಳ ಚರ್ಚೆ ಅಲ್ಲಿ ನಡೆಯುತ್ತಿತ್ತು. ಈ ಎಲ್ಲ ಚಿಂತನ ಮಂಥನದಿಂದ ಪರ್ಯಾಯ ಶಿಕ್ಷಣ ಪದ್ಧತಿ ಹೇಗಿರಬೇಕೆಂಬ ನವನೀತ ಹೊರಬಂದಿತು.

 ಬುಡದಲ್ಲಿ ಶಿಕ್ಷಣ, ಪ್ರಾತಃಕಾಲದಲ್ಲಿ ವೇದಾಧ್ಯಯನ, ಹನುಮಂತನ ಸನ್ನಿಧಿಯಲ್ಲಿ ಭಾರತೀಯ ವ್ಯಾಯಾಮ, ನಿತ್ಯ ಯೋಗ ಸೇರಿದಂತೆ ಋಷಿಪರಂಪರೆಯ ಶಿಕ್ಷಣ ನೀಡಲಾಗುತ್ತಿತ್ತು. ಇದು ಕೂಡ ಗುರುಕುಲ ಸಂಸ್ಕೃತಿಯ ಪ್ರಾರೂಪವಾಯಿತು.

 ಮೆಕಾಲೆ ಶಿಕ್ಷಣ ಬೇಡ, ಮಾರ್ಕ್ಸ್ ಬೇಡ, ಮಹರ್ಷಿ ಮಾದರಿ ಶಿಕ್ಷಣ ತರೋಣ ಎಂದು ನಾವು ಇಂದು ಹೇಳುತ್ತಿರುವ ಮಾತು ಅಂದೇ ಭಾವರೂಪದಲ್ಲಿ, ಕ್ರಿಯಾರೂಪದಲ್ಲಿ ಪ್ರಕಟವಾಯಿತು. ಪ್ರಾತಃಸ್ಮರಣೆ, ಸಸ್ವರ ವೇದಪಾಠ ಇವೆಲ್ಲ ಶುರುವಾಗಿ ಈಗಲೂ ಮುಂದುವರಿದಿದೆ. ಜನಸೇವಾದ ಆರಂಭದ ಜಾಡಿನಲ್ಲಿ ರೂಪುಗೊಂಡ ಈ ವ್ಯವಸ್ಥೆ, 1975ರಿಂದಲೂ ನಡೆದ ಪ್ರಯೋಗ ಇಂದಿನ ಪರಿಪೂರ್ಣ ಗುರುಕುಲಗಳ ಸ್ಥಾಪನೆಯ ಚಿಂತನೆಗೆ ಪ್ರಸ್ತಾವನೆ ಅಥವಾ ಇಟ್ಟಿಗೆಗಳು ಎನ್ನಬಹುದು.

 

ಡಾ. ಭಾರತೀರಮಣಾಆಚಾರ್ಯ, ನ. ಕೃಷ್ಣಪ್ಪ, ಡಾ. ರೋಹಿಡೇಕರ್, ಟಿ.ಕೆ. ಜಯಲಕ್ಷ್ಮಿ, ಡಾ. ಉಪೇಂದ್ರಶೆಣೈ, ಪ್ರೊ. ಮುಡಂಬಡಿತ್ತಾಯ, ಟಿ.ಬಿ. ಗೋವಿಂದರಾವ್.

ಪೂರ್ಣರೂಪ ವಿಕಾಸ

 ಅಂದು ಪರಿಪೂರ್ಣ ಗುರುಕುಲ ಆರಂಭಿಸುವ ಚಿಂತನೆಯಲ್ಲಿದ್ದವರಿಗೆೆ ಅರವಿಂದಾಶ್ರಮದಲ್ಲಿ ತರಬೇತಿ ಪಡೆದುಕೊಳ್ಳುವಂತೆ ಸಲಹೆ ನೀಡಿದವರು ತ.ಭೀ. ಗೋವಿಂದರಾಯರು. ಅಂತೆಯೇ ಗುರುಕುಲ ಸಾಧಕರು
ಪಾಂಡಿಚೇರಿಗೆ ಹೋಗಿ ತರಬೇತಿ ಪಡೆದರು. ಶಿಕ್ಷಣದ ಬಗ್ಗೆ ಹೊಸದಾಗಿ ಆಲೋಚಿಸಲು ಬೇಕಾದ ಪ್ರೇರಣೆ ಅರವಿಂದಾಶ್ರಮದಲ್ಲಿ ಸಿಗುತ್ತಿತ್ತು. ವಿವೇಕಾನಂದ, ಮಹಾತ್ಮ ಗಾಂಧಿ, ದಯಾನಂದ ಸರಸ್ವತಿಯವರ ಬಗ್ಗೆ ಅಧ್ಯಯನ ನಡೆಸಿದ ಡಾ. ಉಪೇಂದ್ರ ಶೆಣೈ ಅವರಂತೂ ಶಿಕ್ಷಣದಲ್ಲಿ ಮೂಲಭೂತ ಪರಿವರ್ತನೆ ತರಬೇಕೆಂಬ ಹಟ ಹೊಂದಿದ್ದವರು. ಭಾರತೀಯ ಶಿಕ್ಷಣ ಪದ್ಧತಿಯ ಒಲವಿದ್ದ ಡಾ. ಭಾರತೀ ರಮಣಾಚಾರ್ಯ ಹಾಗೂ ಇನ್ನಿತರ ಎಲ್ಲ ಸಮಾನ ಮನಸ್ಕರು ರಾಷ್ಟ್ರೋತ್ಥಾನದ ಐದನೇ ಮಹಡಿಯಲ್ಲಿ ತಿಂಗಳಿಗೊಮ್ಮೆ ಚಿಂತಕರ ಚಾವಡಿ ನಡೆಸುತ್ತಿದ್ದರು.

 ಇದೆಲ್ಲದರ ಬಳಿಕ ಚಿಂತಕರ ವಿಚಾರಕ್ಕೆ ಆಚಾರ ಜೋಡಿಸುವ ಮುಂದಿನ ಕೆಲಸವನ್ನು ಪೂರ್ಣಾವಧಿ ಕಾರ್ಯಕರ್ತರಾದ ರಾಮಚಂದ್ರ ಭಟ್ ಕೋಟೆಮನೆಯವರಿಗೆ ವಹಿಸಲಾಯಿತು. ಗುರುಕುಲದ ಸಂಯೋಜಕ ಜವಾಬ್ದಾರಿ ನೀಡಲಾಯಿತು. ನೀವು ಹಿಂದೂ ಸೇವಾ ಪ್ರತಿಷ್ಢಾನದ ಮೂಲಕ ಸರಸ್ವತಿ ಸಾಧನೆಗೆ ಮುಂದಾಗಿ. ಲಕ್ಷ್ಮೀ ಕೃಪೆಯಾಗುವಂತೆ ನಾವು ಮಾಡುತ್ತೇವೆ ಎಂದು ಬೆಂಬಲ ನೀಡಿದವರು ದಿನೇಶ್ ಕಾಮತ್ ಅವರ ನಿಕಟವರ್ತಿಗಳಾದ ಪ್ರಮೋದ್ ಕಾಮತರು ಹಾಗೂ ಅವರ ತೀರ್ಥರೂಪರು. ಅವರು ರಾಮೋಹಳ್ಳಿ ಬಳಿ ಜಮೀನು ನೀಡಲು ಮುಂದಾದರು. ಹೀಗೆ ಪರಿಪೂರ್ಣವಾಗಿ ಗುರುಕುಲ ಪದ್ಧತಿಯನ್ನು ಆವಾಸಿ ಸ್ಥಾನವಾಗಿ ರೂಪಿಸಬೇಕು ಎಂಬ ಚಿಂತನೆ ನಡೆದಾಗ 1993- 94 ರಲ್ಲಿ ರಾಮೋಹಳ್ಳಿಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಮತ್ತು ಶುಭಂ ಕರೋತಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೈತ್ರೇಯಿ ಗುರುಕುಲ ಆರಂಭಿಸಲು ನಿರ್ಧರಿಸಲಾಯಿತು. ಆಗ ಸರಸ್ವತಿ ಸಾಧನೆಯ ಮತ್ತೊಂದು ಮೈಲುಗಲ್ಲು ಶುರುವಾಯಿತು.

 ಹಿಂದೂ ಸೇವಾ ಪ್ರತಿಷ್ಠಾನದ ಸೇವಾವ್ರತಿಯರಾದ ಸಾವಿತ್ರಿ, ಶ್ರೀಮತಿ, ಸುಮನಾ ಕ್ರಿಯಾಯೋಜನೆ ರೂಪಿಸಿದರು. ಅದಾಗಲೇ ಗುರುಕುಲ ವಿದ್ಯಾಭ್ಯಾಸ ಪಡೆಯಲು 25 ಮಕ್ಕಳಿದ್ದರು. ಪ್ರತಿ ತಿಂಗಳ ಪ್ರಶಿಕ್ಷಣದಲ್ಲಿ ಶಿಕ್ಷಣದ ಎಲ್ಲಾ ಮಜಲುಗಳು ರೂಪತಾಳಿದವು.

 ಪ್ರತಿ ತಿಂಗಳು ನಮ್ಮ ಪ್ರಶಿಕ್ಷಣ ಎರಡೆರಡು ದಿನ ಅತ್ಯುತ್ತಮವಾಗಿ ನಡೆದು ಸಂಪೂರ್ಣ ಕ್ರಿಯಾಶೀಲವಾಗಿರುತ್ತಿತ್ತು. ಈ ವೇಳೆ ಪಂಚಭೂಮಿಕೆಗಳಾದ ವೇದ, ವಿಜ್ಞಾನ, ಯೋಗ, ಕೃಷಿ, ಕಲಾಕೌಶಲ ಕ್ಷೇತ್ರಗಳನ್ನು ಆಧಾರವಾಗಿಸಿ ಮಕ್ಕಳ ಜ್ಞಾನ ವೃದ್ಧಿಗೆ ಸಂಕಲ್ಪಿಸಲಾಯಿತು.

  ಛಾತ್ರ- ಛಾತ್ರೇಯರು, ಆಚಾರ್ಯ-ಮಾತೃಶ್ರೀಯರು, ಪಾಲಕರು, ಸಂಚಾಲಕ ವರ್ಗ ಹಾಗೂ ಮಾರ್ಗದರ್ಶಕ ಸಮಿತಿ ಎಂಬ ಪಂಚಸ್ತಂಭಗಳ ತಪಸ್ಸಿನಂತೆ ನಡೆದ ಚಿಂತನ, ಮಂಥನ, ಮುಕ್ತ ಸಂವಾದ, ಆದಾನ-ಪ್ರದಾನದಿಂದ ಗುರುಕುಲದ ಆಧಾರ ಭದ್ರವಾಯಿತು. ಆರಂಭದ ದಿನಗಳ ಮಾರ್ಗದರ್ಶಕ ಮಂಡಲಿ ನೀಡಿದ ಸಹಯೋಗ ಸಹಕಾರವೇ ಕ್ರಿಯಾಯೋಜನೆ ರೂಪುಗೊಳ್ಳಲು, ಶಿಕ್ಷಣದ ಎಲ್ಲ ಮಜಲುಗಳು ತೆರೆದುಕೊಳ್ಳಲು ಮತ್ತು ಗುರುಕುಲ ಇಲ್ಲಿಯವರೆಗೂ ಮುನ್ನಡೆದು ಬರಲು ಕಾರಣವಾಯಿತು.

 ಆ ಸಂದರ್ಭದಲ್ಲಿ ಹಿಂದೂಸೇವಾ ಪ್ರತಿಷ್ಠಾನದ ನಿರ್ದೇಶಕರಾಗಿದ್ದ ಸೀತಾರಾಮ ಕೆದಿಲಾಯರು ಪ್ರತಿ ತಿಂಗಳ ಪ್ರಶಿಕ್ಷಣ ವರ್ಗದಲ್ಲಿ ಎರಡು ದಿನಗಳೂ ಭಾಗವಹಿಸುತ್ತಿದ್ದರು. ನಂತರ ಐದು ಶೋಧ ಕ್ಷೇತ್ರಗಳನ್ನು ರೂಪಿಸಲಾಯಿತು. ಇವುಗಳು ಉಪನಿಷತ್ ಆಧಾರಿತ ಪಾಠನ ವಿಧಾನ, ಭಗವದ್ಗೀತಾ ಆಧಾರಿತ ಮನೋವಿಜ್ಞಾನ, ಪತಂಜಲಿ ಯೋಗ ಆಧಾರಿತ ಶರೀರ ವಿಜ್ಞಾನ, ವೇದ ಆಧಾರಿತ ಯಜ್ಞ ವಿಧಾನ, ಪ್ರಕೃತಿ ಕೇಂದ್ರಿತವಾದ ಸೃಷ್ಟಿ ವಿಜ್ಞಾನಗಳು ಸೇರಿವೆ.

 ಮುಂದೆ ಮೈತ್ರೇಯಿ ಗುರುಕುಲ ರೂಪುಗೊಂಡಾಗ ವಿದ್ಯಾಸಮಸ್ತಾ ತವ ದೇವಿ ಭೇದಾಃ… ಎಂಬ ಸಪ್ತಶತೀ ವಾಕ್ಯವನ್ನು ರೂಢಿಸಿಕೊಳ್ಳಲಾಯಿತು. ಅಲ್ಲದೆ ಕೀರ್ತಿ, ಸಂಪತ್ತಿಗೆ ಹೆಣ್ಣೇ ಕಾರಣ, ಸ್ವಸ್ಥ ವ್ಯಕ್ತಿ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಾತೃಶಕ್ತಿಯೇ ಮುಖ್ಯ ಎಂಬುದನ್ನರಿತು, ಈ ಸೈದ್ಧಾಂತಿಕ ನಂಬಿಕೆಯಡಿಯೇ ಮೈತ್ರೇಯಿ ಗುರುಕುಲ ಎಂಬ ಹೆಸರಿಡಲಾಯಿತು.

 ಬ್ರಹ್ಮವಾದಿನಿ ಪರಂಪರೆಯ ನಾರೀಶಕ್ತಿಯ ಆದರ್ಶವಾಗಿ ಮಹರ್ಷಿ ಯಾಜ್ಞವಲ್ಕ್ಯರ ಪತ್ನಿಯರಾದ ಮೈತ್ರೇಯಿ ಮತ್ತು ಗಾರ್ಗಿ ಅಲ್ಲದೆ ಸಿನಿವಾಲಿ, ಚೂಡಾಲ, ವಿಶ್ವಾವಾರ ಇವರೆಲ್ಲ ಇದ್ದಾರೆ. ಅಧಿಶೀಲ ಶಿಕ್ಷಣ ಸಿಗಬೇಕಿದ್ದರೆ ಮಾತೃಶಕ್ತಿ ಅಗತ್ಯ.

 ಮನೆಯೇ ಮೊದಲ ಪಾಠಶಾಲೆ ನಿಜ. ಆದರೆ ಇಂದಿನ ದಿನಮಾನದಲ್ಲಿ ಮನೆಯಲ್ಲಿ ಈ ಶಿಕ್ಷಣ ಸಾಧ್ಯವಾಗದ ಕಾರಣ ಗುರುಕುಲದಲ್ಲಿ ಈ ಶಿಕ್ಷಣ ದೊರಕಿಸಿ ಕೊಡಲು ಸಂಕಲ್ಪಿಸಲಾಯತು.

 ಹೀಗೆ ಗುರುಕುಲದ ವೈಚಾರಿಕ ಅಧಿಷ್ಠಾನ ಗಟ್ಟಿಯಾಗಿ ಮೈತ್ರೇಯಿ ಗುರುಕುಲ ದಕ್ಷಿಣ ಕನ್ನಡ ಜಿಲ್ಲೆಯ ಅಜೇಯ ವಿಶ್ವಸ್ತ ಮಂಡಲಿಯ ಆಶ್ರಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿಕೊಳ್ಳತ್ತ ಮುನ್ನಡೆದಿದೆ. ಅನೇಕ ಏಳುಬೀಳುಗಳನ್ನು ಕ್ರಮಿಸುತ್ತಾ 24 ವರ್ಷಗಳನ್ನು ಪೂರೈಸುತ್ತಿರುವ ಮೈತ್ರೇಯೀ ಗುರುಕುಲಕ್ಕೆ ಈ ವರ್ಷ ಅರ್ಧಮಂಡಲದ ಸಂಭ್ರಮ. ಅದರ ನಿಮಿತ್ತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರ್ನಾಟಕದಾದ್ಯಂತ ಗುರುಕುಲ ಚಟುವಟಿಕೆಯನ್ನು ಪರಿಚಯಿಸಲಾಗುತ್ತಿದೆ.

   

Leave a Reply