ಗುರುಕುಲದ ಬಗ್ಗೆ ಅನುಭವ

ಲೇಖನಗಳು - 0 Comment
Issue Date :

 ಶ್ರುತಕೀರ್ತಿ ಪ್ರಭು

ಏನಿದು ಗುರುಕುಲ? ಗುರುಕುಲವೆಂದರೆ 130 ಎಕರೆ ವಿಸ್ತೀರ್ಣದ ಜಾಗವಲ್ಲ, ಕಟ್ಟಡಗಳಲ್ಲ, ಗುರುಕುಲವೆಂದರೆ ಆಚಾರ್ಯ-ಆಚಾರ್ಯೆಯರ ನಿಕಟ ಸಂಬಂಧದಲ್ಲಿ ನಿರಂತರವಾಗಿ ಅರಳುತ್ತಾ ಬೆಳೆಯಲು ಅವಕಾಶವಿರುವ ಅತಿ ಅದ್ಭುತವಾದ ಸ್ಥಾನ. ನನ್ನ ದೃಷ್ಟಿಯಲ್ಲಿ ಗುರುಕುಲವಾಸ ಎಂದರೆ ಒಂದು ತಪಸ್ಸು. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಮೀನಿಗೆ ತನ್ನ ದಿಕ್ಕನ್ನು ಬದಲಿಸಿ ಈಜಲು ಅದಮ್ಯ ಕಸುವು ಬೇಕು. ಆಧುನಿಕ ಜೀವನದ ಆಕರ್ಷಣೆಯೆಂಬ ಪ್ರವಾಹದ ಸೆಳೆವು ಅತ್ಯಂತ ಬಲಿಷ್ಠವಾಗಿದೆ. ಇದರ ವಿರುದ್ಧ ಈಜಿ ಗುರಿ ಮುಟ್ಟಲು ಅಮಿತವಾದ ಕಸುವು ಬೇಕೇಬೇಕು. ಗುರುಕುಲ ಜೀವನದಲ್ಲಿ ಹಲವು ಬಾರಿ ನಾನು ಮೈಮರೆತು ಸ್ವಲ್ಪ ಸ್ವಲ್ಪ ಹಿಂದೆ ಜಾರಿದ್ದೆ. ಒಂದು ಬಾರಿಯಂತೂ ಪ್ರವಾಹದೊಡನೆ ಒಂದಿಷ್ಟು ದೂರ ಕೊಚ್ಚಿಯೂ ಹೋಗಿದ್ದೆ. ಆದರೆ ಮತ್ತೆ ಮೈಕೊಡವಿ ಈಜುತ್ತಾ ಇಷ್ಟು ದೂರ ಬಂದಿದ್ದೇನೆ.

ವಿರಾಮದ ಸಂದರ್ಭದಲ್ಲಿ ಮನೆಗೆ ಹೋದಾಗ ಹಳೆಯ ಸ್ನೇಹಿತರು ಮೊಬೈಲ್, ಟಿ.ವಿ ಇತ್ಯಾದಿಗಳಿಲ್ಲದೇ ಹಳೆಯ ಶಿಲಾಯುಗದಲ್ಲಿರುವಂತೆ ಆ ಕಾಡಿನಲ್ಲಿ ಏನೇನೂ ಎಂಜಾಯ್ ಮಾಡದೇ ಜೀವನ ವೇಸ್ಟ್ ಮಾಡಿಕೊಳ್ಳುತ್ತಿದ್ದೀಯಾ ಅಂತೆಲ್ಲಾ ಹೇಳುತ್ತಾರೆ. ಆಗೆಲ್ಲಾ ನಾವು ಹಳೆಯ ಕಾಲದಲ್ಲಿಲ್ಲ. ನಮಗೆ ಹಾನಿಯಾಗುವಂತೆ ತಂತ್ರಜ್ಞಾನವನ್ನು ಬಳಸುವುದಿಲ್ಲ ಅಷ್ಟೆ. ಇರುವುದರಲ್ಲಿ ಸಂತೋಷವನ್ನು ಅನುಭವಿಸುವ ಕಲೆ ನನಗೆ ಗುರುಕುಲದಿಂದ ಸಿಕ್ಕಿದೆ ಎಂಬ ಮಾತನ್ನು ಸ್ವಲ್ಪವೂ ಅಳುಕಿಲ್ಲದೇ ನುಡಿಸುತ್ತಿರುವುದು ನಾನು ಪಡೆದ ಗುರುಕುಲದ ಶಿಕ್ಷಣ.

 ಗುರುಕುಲ ಶಿಕ್ಷಣಪದ್ಧತಿಯಲ್ಲಿ ಶಿಕ್ಷಣ ಎಂದರೇನು ಎಂಬುದನ್ನು ನಾನು ಅರ್ಥ ಮಾಡಿಕೊಂಡ ಬಗೆಯನ್ನು ಹೇಳದೇ ಹೋದಲ್ಲಿ ಈ ಅನುಭವ ಅಪೂರ್ಣವಾಗುತ್ತದೆ. ಗುರುಕುಲ ಜೀವನದ ಮೊದಲ ದಿನ. ಇಲ್ಲಿನ ಅಕ್ಕಂದಿರು ತುಂಬು ತುಂಬು ತುಂಬಿಕೋ ಜ್ಞಾನ ಕುಂಭ ತುಂಬಿಕೋ ಎಂದು ಹಾಡುತ್ತಾ ನಮ್ಮನ್ನು ಬರಮಾಡಿಕೊಂಡರು. ಈ ಹಾಡಿನ ಸಾಲಿನಂತೆ ಕಲಿಕೆ ಪುಸ್ತಕದಿಂದ, ಶಿಕ್ಷಕರಿಂದ ಮಾತ್ರವಲ್ಲ ಜಗತ್ತಿನ ಕಣಕಣವೂ ನನಗೆ ಗುರು ಎಂಬ ತಿಳಿವು ಮೂಡುವಂತಹ ಶಿಕ್ಷಣ ನನಗಿಲ್ಲಿ ಸಿಗುತ್ತಿದೆ.

 ಹೇಳಲೇಬೇಕು ಎಂದುಕೊಂಡ ಒಂದು ವಿಚಾರವೇನೆಂದರೆ ಗುರುಕುಲದಿಂದ ಮನೆಗೆ ಅಥವಾ ಹೊರಗೆ ಹೋದ ಸಂದರ್ಭಗಳಲ್ಲಿ ನಾನು ಉಳಿದವರೆಲ್ಲರಿಗಿಂತ ವಿಶೇಷವಾಗಿ ಗುರುತಿಸಲ್ಪಡುತ್ತೇನೆ. ಗುರುಕುಲದಲ್ಲಿ ಪಂಚಮುಖಿ ಶಿಕ್ಷಣ ಪದ್ಧತಿ ಚಾಲ್ತಿಯಲ್ಲಿದೆ.

 ವ್ಯಕ್ತಿಯೊಬ್ಬ ಬೆಳೆಯುವುದು ಅವನ ಯೋಚನಾ ಸಾಮರ್ಥ್ಯದಿಂದ. ಯೋಚಿಸಲಾರಂಭಿಸಿದಂದಿನಿಂದ ನನ್ನ ಬೆಳೆಯುವಿಕೆ ನನ್ನ ಅರಿವಿಗೆ ಬರುತ್ತಾ ಇದೆ. ಆರೋಗ್ಯದಲ್ಲಿ ಏರುಪೇರುಂಟಾದಾಗ, ರಾಗದ್ವೇಷಕ್ಕೊಳಗಾಗಿ ತಪ್ಪು ಮಾಡಿದಾಗ ಖಿನ್ನತೆಗೊಳಗಾಗುತ್ತಿದ್ದೆ. ಅಂತಹ ಸಂದರ್ಭದಲ್ಲಿ ಧನಾತ್ಮಕ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತಾ ಆತ್ಮವಿಶ್ವಾಸದಿಂದ ಖಿನ್ನತೆಯನ್ನು ದೂರ ಮಾಡಲು ಸಾಧ್ಯವಾದದ್ದು ಗುರುಕುಲ ಶಿಕ್ಷಣದಿಂದ.

ಹೀಗೆ ಗುರುಕುಲ ಶಿಕ್ಷಣ ಇಲ್ಲಿ ಅಧ್ಯಯನ ಮಾಡಿದ ಪ್ರತಿಯೊಬ್ಬಳನ್ನು ನೂರರಲ್ಲಿ ಒಬ್ಬಳನ್ನಾಗಿ ಮಾಡದೇ, ನೂರಕ್ಕೆ ಒಬ್ಬಳನ್ನಾಗಿ ಮಾಡಿದೆ. ಎಲ್ಲರಿಗೆ ಒಳಿತನ್ನು ಮಾಡುವ ಸಲುವಾಗಿ ಈ ಶರೀರ ನನಗೆ ಸಿಕ್ಕಿದೆ ಎಂಬ ವಿಶಾಲ ಚಿಂತನೆಯನ್ನು ಮಾಡುವಂತೆ ನನ್ನನ್ನು ಬೆಳಸಿರುವುದು ಗುರುಕುಲ.

ಶ್ರೀಮತಿ ಪ್ರಸನ್ನಾ ಮಹಾಬಲೇಶ್ಚರ – 

ಆಧುನಿಕ ಸಮಾಜವು ಅಂತರ್ಜಾಲ, ಸಾಫ್ಟ್‌ವೇರ್ ಹಾಗೂ ಪಾಶ್ಚಾತ್ಯ ಸಂಸ್ಕೃತಿಗಳ ಹಿಂದೆ ವೇಗವಾಗಿ ಓಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನೂ ತನ್ನ ದೇಶದ ಸಂಸ್ಕೃತಿ, ಇತಿಹಾಸ ಹಾಗೂ ಗರಿಮೆಗಳನ್ನು ತಿಳಿಯದಿದ್ದರೆ ಭಾರತ ಜಗದ್ಗುರುವಾಗುವುದು ಕೇವಲ ಕನಸಿನ ಮಾತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದರಷ್ಟೇ ಬಳಸಬೇಕು. ಪಾಶ್ಚಾತ್ಯ ಸಂಸ್ಕೃತಿಯ ಎದುರು ಭಾರತೀಯ ಸಂಸ್ಕೃತಿಯ ಹಿಂದಿನ ವೈಜ್ಞಾನಿಕ ಮಹತ್ವವನ್ನು ತಿಳಿಯಬೇಕು. ತಾಂತ್ರಿಕ ಕ್ಷೇತ್ರದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರು ಮಾನವೀಯ ಮೌಲ್ಯಗಳನ್ನು ಮರೆಯಬಾರದು. ಈ ಎಲ್ಲಾ ವಿಷಯಗಳೂ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಮನದಟ್ಟಾಗುತ್ತದೆ.

 ನಾನು ಗುರುಕುಲದಲ್ಲಿದ್ದಾಗಿನ ಸವಿನೆನಪುಗಳು ಅನೇಕ. ನನಗೆ ಗುರುಕುಲವು ಬಹಳಷ್ಟು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಗುರುಕುಲ ಜೀವನ ಒಂದು ಒಳ್ಳೆಯ ಅನುಭವ. ಗುರುಕುಲ ಎಂದರೆ ದೊಡ್ಡ ಮನೆ ಅಥವಾ ದೊಡ್ಡ ಕುಟುಂಬ ಎಂದರ್ಥ. ಅದರಂತೆ ಗುರುಕುಲದಲ್ಲಿ ಅಕ್ಕ-ತಂಗಿ, ಅಣ್ಣ-ತಮ್ಮ, ಅಮ್ಮ-ಮಗಳು ಎಂಬ ಸಂಬಂಧವನ್ನು ಕಲಿತೆವು. ಎಲ್ಲರೂ ಒಟ್ಟಿಗೆ ಸಹಜೀವನ ನಡೆಸಿದೆವು. ನಾವೇ ಕಟ್ಟಿಗೆ ತಂದು ಸ್ನಾನಕ್ಕೆ ಬಿಸಿನೀರು ಮಾಡುತ್ತಿದ್ದುದು, ಅಂಗಳಕ್ಕೆ ನಾವು ಸೆಗಣಿ ಸಾರಿಸುತ್ತಿದ್ದಾಗ ಆಗುತ್ತಿದ್ದ ಆನಂದ, ಸ್ವಚ್ಛತೆಗಾಗಿ ಕಾರ್ಯಗಣಗಳು, ವಾರಕ್ಕೊಮ್ಮೆ ಹೊರಸಂಚಾರ, ನಾವೇ ಬೆಳೆದ ತರಕಾರಿಗಳ ಅಡುಗೆ, ಎಲ್ಲರೂ ಒಟ್ಟಿಗೆ ಸೇರಿ ಆಚರಿಸುತ್ತಿದ್ದ ಹಬ್ಬಗಳು, ಮನೆ ಮನೆ ಸಂಪರ್ಕ, ಬಾಲಗೋಕುಲ-ಶಿಬಿರಗಳು, ಸಂಸ್ಕೃತದಲ್ಲಿ ವ್ಯವಹಾರ, ಹೀಗೆ ಅನೇಕ ವಿಷಯಗಳನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ನಾನು ಶಾಲೆಗೆ ಹೋಗಿ ಕಲಿಯುತ್ತಿದ್ದರೆ ಈ ಅನುಭವಗಳು ನನಗೆ ಸಿಗುತ್ತಿರಲಿಲ್ಲ. ಗುರುಕುಲದಿಂದಾಗಿ ನಮಗೆ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಬಹಳ ವಿಚಾರಗಳು ತಿಳಿದವು, ಸಂಘದ ಕೆಲವು ಹಿರಿಯರ ಪರಿಚಯವಾಯಿತು. ಒಟ್ಟಿನಲ್ಲಿ ಗುರುಕುಲ ಜೀವನ ನನ್ನ ಜೀವನದಲ್ಲಿ ಒಂದು ವಿಶಿಷ್ಟ ಅನುಭವವನ್ನು ನೀಡಿದೆ.

 ಗುರುಕುಲವು ನನಗೆ ಸಂಸ್ಕೃತದ ಮೇಲೆ ಆಸಕ್ತಿಯನ್ನು ಹುಟ್ಟಿಸಿತು. ಇದರಿಂದಾಗಿ ವಿದ್ಯಾರ್ಥಿ ಜೀವನದಲ್ಲಿ ಅನೇಕ ಕ್ರೆಡಿಟ್‌ಗಳು ಬಂದಿವೆ. ಸಂಸ್ಕೃತಕ್ಕೆ ಸಂಬಂಧಿಸಿದ ಹೆಚ್ಚಿನ ಸ್ಪರ್ಧೆಗಳಲ್ಲಿ ನನಗೆ ಬಹುಮಾನಗಳು ಬಂದಾಗ ಹಾಗೂ ಸಂಸ್ಕೃತ ವಿಷಯದಲ್ಲಿ  100% ಅಂಕಗಳು ದೊರಕಿದಾಗ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು- ಅವಳು ಗುರುಕುಲದ ಹುಡುಗಿ ಎಂದು ಗುರುತಿಸುತ್ತಿದ್ದುದು ನನಗೆ ಹೆಮ್ಮೆಯ ವಿಷಯವಾಗಿತ್ತು, ಆಗಿದೆ.

 ನಾನು ಸ್ನಾತಕೋತ್ತರ ವಿದ್ಯಾಭ್ಯಾಸ ಪಡೆದಿದ್ದರೂ ನನ್ನ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡಲು ಇಚ್ಛಿಸುತ್ತೇನೆ. ಉದ್ಯೋಗ, ಹಣ ಇವಕ್ಕಿಂತ ಮನೆಯವರ ಸಂತೋಷ ಮುಖ್ಯ ಎನಿಸುತ್ತದೆ. ಪೇಟೆಯ
ಯಾಂತ್ರಿಕ ಜೀವನಕ್ಕಿಂತ ಹಳ್ಳಿಯ ಕೃಷಿ, ದನ-ಕರುಗಳು, ಹಾಗೂ ಸಾಕುಪ್ರಾಣಿಗಳೊಂದಿಗಿನ ಜೀವನದಲ್ಲೇ ಒಂದು ರೀತಿಯ ಆನಂದವಿದೆ ಎನಿಸುತ್ತದೆ. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ತಾಳ್ಮೆ, ವಿಶ್ವಾಸ ಇತ್ಯಾದಿ ಗುಣಗಳೊಂದಿಗೆ ಕೂಡು ಕುಟುಂಬದಲ್ಲಿ ಸಹಬಾಳ್ವೆ ನಡೆಸಲು ಗುರುಕುಲ ಜೀವನದಿಂದ ಕಲಿತಿದ್ದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.

 

   

Leave a Reply