ಗುರುಕುಲ ಚಿಂತನೆ ದೇಶವ್ಯಾಪಿಯಾಗಲಿ

ಲೇಖನಗಳು - 0 Comment
Issue Date :

ಸಂದರ್ಶನ – ನ. ನಾಗರಾಜ

 

ಕಾಲ್ನಡಿಗೆಯಲ್ಲಿ ದೇಶಪರ್ಯಟನೆ ನಡೆಸಿ ದೇಶಾದ್ಯಂತ ಭಾರತೀಯ ಮೂಲ ಚಿಂತನೆಗಳನ್ನು ಪಸರಿಸಿದ ಸೀತಾರಾಮ ಕೆದಿಲಾಯರು ಸಂಘದ ಹಿರಿಯ ಪ್ರಚಾರಕರು. ಪ್ರಾಚೀನ ಗುರುಕುಲ ಪದ್ಧತಿಯನ್ನು ಯುಗಾನುಕೂಲಗೊಳಿಸಿ ಸುಸಂಸ್ಕೃತ ವ್ಯಕ್ತಿ ನಿರ್ಮಾಣದ ಮೂಲಕ ಸಮರ್ಥ ಭಾರತ ನಿರ್ಮಿಸುವ ಕಾರ್ಯದ ಕುರಿತು ತಮ್ಮ ಅನಿಸಿಕೆಗಳನ್ನು ವಿಕ್ರಮದೊಂದಿಗೆ ಹಂಚಿಕೊಂಡಿದ್ದಾರೆ.

 

 

ಗುರುಕುಲ ಮಾದರಿ ಶಿಕ್ಷಣವನ್ನು ಕರ್ನಾಟಕದಲ್ಲಿ ಪುನಃ ಪ್ರಾರಂಭ ಮಾಡಿ ಈಗಾಗಲೆ ಅರ್ಧ ಮಂಡಲ (24 ವರ್ಷ)ವನ್ನು ಪೂರೈಕೆ ಮಾಡಿರುವ ಈ ಸಂದರ್ಭದಲ್ಲಿ ಪ್ರಾರಂಭದ ದಿನಗಳಿಂದಲೂ ಜೊತೆಯಲ್ಲಿ ಇರುವ ನಿಮ್ಮ ಅನುಭವ, ಮೂಲ ಕಲ್ಪನೆ ಬಗ್ಗೆ ತಿಳಿಸಿ.

 ಇಂದು ದೇಶ ಸ್ವಚ್ಛ ಭಾರತದ ಸಂಕಲ್ಪ ತೊಟ್ಟಿದೆ,  ನೆಲ, ಜಲ, ಗಾಳಿ, ಆಕಾಶ ಎಲ್ಲವೂ ಪ್ರದೂಷಿತವಾಗಿವೆ ಅಂತ ವಿಜ್ಞಾನಿಗಳು, ತಜ್ಞರು ಹೇಳುತ್ತಾರೆ. ಇದೆಲ್ಲದಕ್ಕೂ ಕಾರಣ ಮಲಿನಗೊಂಡ ಶಿಕ್ಷಣ. ಹಾಗಾಗಿ ಸ್ವಚ್ಛ ಭಾರತದ ನಿಜವಾದ ಸಂಕಲ್ಪ ತೊಡುವುದಾದರೆ, ಎಲ್ಲಿಂದ ಪ್ರಾರಂಭ ಮಾಡಬೇಕೆಂದರೆ ಶಿಕ್ಷಣದ ಶುದ್ಧೀಕರಣದಿಂದ. ಉತ್ತಮ ವ್ಯಕ್ತಿಗಳ ನಿರ್ಮಾಣಕ್ಕಾಗಿ ಡಾ॥ಹೆಡಗೆವಾರ್‌ರವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಗುರುಕುಲವನ್ನು ಸ್ಥಾಪಿಸಿದರು. ಪರಿಣಾಮವಾಗಿ, ಭಾರತದಲ್ಲಿ ಸಾವಿರಾರು ಲಕ್ಷಾಂತರ ಜನರು ಸ್ವಂತಕ್ಕಿಂತ ದೇಶವನ್ನು ಪ್ರೀತಿಸುವ, ದೇಶಕ್ಕಾಗಿ ಬದುಕುವಂಥ ಸಂಕಲ್ಪ ಮಾಡಿ ಜೀವನವನ್ನು ನಡೆಸುವಂತಹ ಪರಿವರ್ತನೆಯನ್ನು ಕಾಣಬಹುದು. ಸಂಘದ ಸಂಪರ್ಕಕ್ಕೆ ಬಾರದ ಯುವಕ-ಯುವತಿಯರಿಗೆ ಅದೇ ರೀತಿಯ ಶಿಕ್ಷಣವನ್ನು ಇನ್ನೂ ದೀರ್ಘಕಾಲ ನೀಡಿದಲ್ಲಿ ಅವರ ಜೀವನದಲ್ಲಿ ಯಾವ ರೀತಿಯ ಪರಿವರ್ತನೆಯಾಗಬಹುದು ಎಂದು ಆಲೋಚನೆ ಮಾಡಿ ಕರ್ನಾಟಕದಲ್ಲಿ ಅಜಿತ ಕುಮಾರರ ಮುಂದಾಳತ್ವದಲ್ಲಿ ಒಂದು ಪ್ರಯೋಗ ಶುರು ಮಾಡಲಾಯ್ತು, ಅದೇ ಹಿಂದು ಸೇವಾ ಪ್ರತಿಷ್ಠಾನ. ಆ ಎರಡು ತಿಂಗಳ ಶಿಕ್ಷಣಕ್ಕೆ ಪ್ರಾರಂಭದಲ್ಲಿ ಕೇವಲ 17 ಜನ ಬಂದಂತಹ ಸೇವಾವ್ರತಿಗಳ ಸಂಖ್ಯೆ ಕರ್ನಾಟಕದಲ್ಲಿ ಬೆಳೆದು ಒಂದು ಆಂದೋಲನವೇ ಆಯಿತು. ಈ ಪರಿಣಾಮವನ್ನು ಕಂಡು ನ. ಕೃಷ್ಣಪ್ಪ, ಭಾರತೀರಮಣಾಚಾರ್ಯ, ಟಿ.ಬಿ. ಗೋವಿಂದರಾವ್, ಉಪೇಂದ್ರ ಶೆಣೈ, ಕೋಟೆಮನೆ ರಾಮಚಂದ್ರ ಭಟ್ ಇಂಥವರೆಲ್ಲ ಒಟ್ಟಿಗೆ ಸೇರಿ ನಡೆಸಿದ ಮಂಥನದ ಪರಿಣಾಮವಾಗಿ ಪ್ರಾಚೀನವಾಗಿರುವಂತಹ ಗುರುಕುಲ ಶಿಕ್ಷಣ ಪುನರುತ್ಥಾನಕ್ಕಾಗಿ 12 ವರ್ಷದ ಶಿಕ್ಷಣದ ಯೋಜನೆಯಾಯ್ತು. ಬೆಂಗಳೂರಿನ ರಾಮದಾಸ್ ಕಾಮತ್ ಕುಟುಂಬದವರ ಸಹಕಾರದಿಂದ ಭಾರತೀಯ ಶಿಕ್ಷಣ ಮಂಡಲದ ಮಾರ್ಗದರ್ಶನದಲ್ಲಿ ಕೇಶವ ಕೃಪಾದ ಎದುರಿನ ಶಂಕರ್ ರಾವ್ ಮನೆಯಲ್ಲಿ ಇದಕ್ಕಾಗಿ ಸಂಕಲ್ಪ ತೊಟ್ಟಂತಹ ಹಿಂದು ಸೇವಾ ಪ್ರತಿಷ್ಠಾನದ ಸಾವಿತ್ರಿ, ಶ್ರೀಮತಿ, ಸುಮಾ – ಈ ಮೂರೇ ಜನಕ್ಕೆ ಸುಮಾರು ಹತ್ತು ದಿನಗಳ ಕಾಲ ನಿರಂತರ ಶಿಕ್ಷಣ ಕೊಡಲಾಯಿತು. ಪ್ರಶಿಕ್ಷಣ ಆದ ನಂತರ ರಾಮೋಹಳ್ಳಿಯಲ್ಲಿ 24 ವರ್ಷಗಳ ಹಿಂದೆ ಪೇಜಾವರ ಶ್ರೀಗಳ ಸಾನ್ನಿಧ್ಯದಲ್ಲಿ ಗುರುಕುಲ ಪ್ರಾರಂಭವಾಯಿತು. ಹೀಗೆ ಅರಳಿದಂತಹ ಗುರುಕುಲ ಶಿಕ್ಷಣ ಪರಂಪರೆಯಲ್ಲಿ ಬೆಳೆವ ಮಕ್ಕಳನ್ನು ಕಂಡು, ಅದರ ಪರಿಣಾಮವನ್ನು ಗುರುತಿಸಿದ ನಂತರ ಹರಿಹರಪುರದ ಪ್ರಬೋಧಿನಿ ಸಂಸ್ಥೆಯ ಜಾಗದಲ್ಲಿ ಗಂಡುಮಕ್ಕಳಿಗಾಗಿ ಗುರುಕುಲವು ಒಂದು ವರ್ಷದ ನಂತರ ಪ್ರಾರಂಭವಾಯಿತು. ಬಾಲ್ಯದಲ್ಲಿ ಮಾಮೂಲಿ ಶಿಕ್ಷಣವನ್ನು ಪಡೆದಿದ್ದರೂ ಭಾರತೀಯ ಆರ್ಷ್ಯ ವಿದ್ಯೆ ಬೇಕೆನಿಸಿದ ಯುವಕ-ಯುವತಿಯರಿಗಾಗಿ ಚನ್ನೇನಹಳ್ಳಿ ಜನಸೇವಾ ಪಕ್ಕದ ಪ್ರತ್ಯೇಕವಾದ ಇನ್ನೊಂದು ಜಾಗದಲ್ಲಿ ವೇದ ವಿಜ್ಞಾನ ಗುರುಕುಲವನ್ನು ಪ್ರಾರಂಭಿಸಲಾಯ್ತು. ಇದು ಗುರುಕುಲ ಚಿಂತನೆ ವಿಕಾಸದ ಪ್ರಾರಂಭದ ಮೆಟ್ಟಿಲುಗಳು.

 ಗುರುಕುಲದಲ್ಲಿ ತಯಾರಾದ ಮಕ್ಕಳಿಂದ ತಾವು ಏನು ನಿರೀಕ್ಷೆ ಮಾಡುತ್ತೀರಾ ?

ಗುರುಕುಲದಲ್ಲಿ ಕಲಿತು ಬೆಳೆದ ಮಕ್ಕಳು ತಾವೂ ಆಚಾರ್ಯರಾಗಬೇಕು. ಅಂದರೆ ಗುರುಕುಲಗಳಿಂದ ಗುರುಕುಲಗಳಾಗಬೇಕು. ಅನಿವಾರ್ಯ ಕಾರಣಗಳಿಂದ ಅಸಹಾಯಕತೆ ಇದ್ದಲ್ಲಿ ಅವರು ತಮ್ಮ ಸ್ವಂತ ಮನೆಯನ್ನೇ ಗುರುಕುಲವನ್ನಾಗಿ ಮಾಡಿಕೊಳ್ಳಬಹುದು. ಇದಕ್ಕೆ ಗೃಹ ಗುರುಕುಲ ಎಂದು ಹೆಸರು. ವಿದ್ಯಾವಂತ ಮನೆಗಳಲ್ಲಿ ನಾಲ್ಕು-ಐದು ಜನ ಮಕ್ಕಳನ್ನು ಇಟ್ಟುಕೊಂಡು ಅವರಿಗೆ ಊಟ-ವಸತಿಗಳೊಂದಿಗೆ ಶಿಕ್ಷಣವನ್ನು ಕೊಡುವಂತಹ ಪರಂಪರೆ ಪ್ರಾಚೀನ ಕಾಲದಿಂದಲೂ ಇತ್ತು. ನಾಲ್ಕೈದು ಮಕ್ಕಳನ್ನು ಇಟ್ಟುಕೊಳ್ಳುವಷ್ಟು ಶಕ್ತಿ ಇಲ್ಲದಿದ್ದವರು ಬೆಳಗ್ಗೆ ಒಂದೆರಡು ತಾಸು, ಸಂಜೆ ಒಂದೆರಡು ತಾಸು ಊರಿನ ಮಕ್ಕಳನ್ನು ಸೇರಿಸಿ ಅವರಿಗೆ ಗುರುಕುಲ ಶಿಕ್ಷಣವನ್ನು ನೀಡಬೇಕು. ಇದು ಗೃಹ ಗುರುಕುಲದ ಮೂರನೇ ಮುಖ. ಗುರುಕುಲದ ಮೂಲ ಚಿಂತನೆಗೆ ಪೂರಕವಾಗಿ ಓರ್ವ ಗೃಹಸ್ಥನಾಗಿ – ಗೃಹಿಣಿಯಾಗಿ ಸಮಾಜದ ಹಿತಕ್ಕ್ಕಾಗಿ ಮನೆಯನ್ನು ರೂಪಿಸಬೇಕು. ಇದು ಕೊನೆಯ ನಿರೀಕ್ಷೆ.

 ತಮ್ಮ ಇಷ್ಟು ವರ್ಷಗಳ ಅನುಭವಗಳಲ್ಲಿನ ಕೆಲವು ಉದಾಹರಣೆಗಳನ್ನು ತಿಳಿಸಬಹುದೇ?

 ಭಾರತೀರಮಣಾಚಾರ್ಯರು ನಿಜವಾದ ಗುರುಕುಲದ ಪರಿಣಾಮ ಕಾಣಲು 24 ವರ್ಷ ಕಾಯಬೇಕು. ಏಕೆಂದರೆ ನಮ್ಮಲ್ಲಿ ಕಲಿತ ಮಕ್ಕಳೇ 12 ವರ್ಷದ ಪೂರ್ಣ ಶಿಕ್ಷಣವನ್ನು ಮುಗಿಸಿ ಮತ್ತೆ ಗುರುಕುಲಕ್ಕೆ ಆಚಾರ್ಯರಾಗಿ ಬರುವಂತಹ ಕಾಲ ಬಂದಾಗಲೇ ನಿಜವಾದ ಗುರುಕುಲವಾಗುತ್ತದೆ ಎನ್ನುತ್ತಿದ್ದರು. ಅದು ಇಂದು ಅಕ್ಷರಶಃ ಸತ್ಯವಾಗಿದೆ. ಉದಾಹರಣೆಗೆ, ವೇದ ವಿಜ್ಞಾನ ಗುರುಕುಲದಲ್ಲಿ ಇರುವಂತಹ ಎಲ್ಲಾ ಆಚಾರ್ಯರೂ ನಮ್ಮ ಗುರುಕುಲಗಳಲ್ಲಿ ಇದ್ದಂತಹ ವಿದ್ಯಾರ್ಥಿಗಳೇ.

 ಎರಡನೆಯದು – ಪ್ರಬೋಧಿನಿ ಗುರುಕುಲದಲ್ಲಿ ಇರುವಂತಹ 10 ಜನ ಆಚಾರ್ಯರು ಪ್ರಬೋಧಿನಿ ಗುರುಕುಲದಲ್ಲಿ 12 ವರ್ಷ ವಿದ್ಯಾಭ್ಯಾಸ ನಡೆಸಿ ವೇದವಿಜ್ಞಾನ ಗುರುಕುಲದಲ್ಲಿ ಶಿಕ್ಷಣವನ್ನು ಪಡೆದವರೇ.  ಮೈತ್ರೇಯಿ ಗುರುಕುಲದಲ್ಲಿ ಕೂಡ 5 ವಿದ್ಯಾರ್ಥಿಗಳೇ ಮೈತ್ರೇಯಿ ಗುರುಕುಲದ ಮಾತೃಶ್ರೀಗಳಾಗಿದ್ದಾರೆ. ಮೈತ್ರೇಯಿ ಗುರುಕುಲದ ಇಬ್ಬರು ಮಕ್ಕಳು, ಪ್ರಬೋಧಿನಿ ಗುರುಕುಲದ ಇಬ್ಬರು ಮಕ್ಕಳು ತಮ್ಮ ಮನೆಯನ್ನೇ ಗೃಹ ಗುರುಕುಲವನ್ನಾಗಿ ಮಾಡಿಕೊಂಡಿದ್ದಾರೆ. ನಾನು ಆಗಲೇ ಹೇಳಿದಂತೆ, ಅವರವರ ಅನುಕೂಲಕ್ಕೆ ಅನುಗುಣವಾಗಿ ಗುರುಕುಲದ ಸಂಸ್ಕೃತಿಯನ್ನು ಜೀವನದಲ್ಲಿ ಉಳಿಸಿಕೊಂಡಿದ್ದಾರೆ. ಸಮಾಜಕ್ಕೆ ಉಪಯೋಗಿಯಾಗಿ ಎಲ್ಲಾ ಮಕ್ಕಳು ಬದುಕುತ್ತಿದ್ದಾರೆ.

 ಗುರುಕುಲದಿಂದ ಈ ಮೊದಲೆರಡರಲ್ಲಿ ಇಲ್ಲದೇ ಇರುವಂತಹ, ಅದರೆ ಗುರುಕುಲಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವಂತಹವರ ಬಗ್ಗೆ ತಿಳಿಸಿ.

 ಉದಾಹರಣೆಗೆ, ಪ್ರಬೋಧಿನಿ ಗುರುಕುಲದ ಮತ್ತು ಮೈತ್ರೇಯಿ ಗುರುಕುಲದ ಮಕ್ಕಳು ಪೂರ್ವ ಛಾತ್ರ ಪರಿಷತ್ ಎಂದು ಮಾಡಿಕೊಂಡು ಪ್ರತಿಯೊಂದು ಜಿಲ್ಲೆಗೂ ಒಬ್ಬರನ್ನು ಸಂಯೋಜಕರನ್ನಾಗಿ ನಿಯೋಜಿಸಿದ್ದಾರೆ. ನಮ್ಮನ್ನು ಬೆಳೆಸಿದ ಗುರುಕುಲಕ್ಕಾಗಿ ನಾವೇನು ಮಾಡಬಹುದು, ಅದಕ್ಕೆ ಮಾನವ ಸಂಪನ್ಮೂಲ, ಅರ್ಥ ಸಂಪನ್ಮೂಲ, ವಸ್ತು ಸಂಪನ್ಮೂಲವನ್ನು ಹೇಗೆ ಜೋಡಿಸಬಹುದು, ನಮ್ಮನ್ನೇ ಗುರುಕುಲಕ್ಕೆ ಹೇಗೆ ತೊಡಗಿಸಿಕೊಳ್ಳಬಹುದು ಇತ್ಯಾದಿ ಎಂದು ಎಲ್ಲವನ್ನೂ ಪೂರ್ವ ಛಾತ್ರ ಪರಿಷತ್‌ನವರೇ ಯೋಚನೆ ಮಾಡಿದ್ದಾರೆ.

 ಗುರುಕುಲದಲ್ಲಿರುವ ಮಕ್ಕಳ ಪೋಷಕರಿಂದ ಗುರುಕುಲಕ್ಕೆ ನೀವೇನು ನಿರೀಕ್ಷೆ ಮಾಡುತ್ತೀರಿ ? ಪ್ರತಿಕ್ರಿಯೆ ಹೇಗಿದೆ ?

 ಮೊದಲನೆಯದು ಮನೆ.  ನಾನು ಆಗಲೇ ಹೇಳಿದಂತೆ ಆ ಮನೆಯನ್ನು ನೋಡಿದಾಗ ಇದು ಗುರುಕುಲದ ಮನೆ ಎಂಬುದನ್ನು ಮನೆಯವರ ವ್ಯವಹಾರದಿಂದ ಗುರುತಿಸುವಂತಿರಬೇಕು. ಅಂದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮಕ್ಕಳು ಏನು ಮಾಡುತ್ತಿದ್ದರೂ ಅದೆಲ್ಲವನ್ನೂ ಕೂಡ ಗುರುಕುಲದ ಪಾಲಕರು ಕೂಡ ತಾವೂ ಮನೆಯಲ್ಲಿ ಅಚರಣೆ ಮಾಡುವುದು ನಮ್ಮ ಅಪೇಕ್ಷೆ. ಪಾಲಕರಿಗೆ ಕೂಡ ಗುರುಕುಲದಲ್ಲಿ ವರ್ಷಕ್ಕೆ ಎರಡು ಬಾರಿ ಅಭ್ಯಾಸ ವರ್ಗ ಇರುತ್ತದೆ.

 ಎರಡನೆಯದು – ಗುರುಕುಲದ ಅನೇಕ ಮಕ್ಕಳು ಸಮಾಜದ ಜೊತೆ ಸಂಪರ್ಕ ಇಟ್ಟುಕೊಳ್ಳಲು ಬಾಲಗೋಕುಲ, ಮಾತೆಯರನ್ನು ಒಟ್ಟು ಸೇರಿಸಿ ಮಾತೃ ಮಂಡಲಿ ನಡೆಸುತ್ತಾರೆ. ಪಾಲಕರು ಕೂಡ ಗುರುಕುಲಕ್ಕಾಗಿ ಬೇರೆ ಬೇರೆ ರೀತಿಯ ಸಂಪನ್ಮೂಲಗಳನ್ನು ಜೋಡಿಸುವಂತಹ ಕೆಲಸ ಮಾಡುತ್ತಾರೆ. ಸಮಾಜಕ್ಕೂ ಗುರುಕುಲಕ್ಕೂ ಸೇತುವೆಯಾಗಿ ಪಾಲಕರು ಕಾರ್ಯ ನಿರ್ವಹಿಸುತ್ತಾರೆ.

 ನಿಮಗೆ ಆದಂತಹ, ಮರೆಯಲಾಗದಂತಹ ವಿಶೇಷ ಅನುಭವಗಳೇನು ?

 ಗುರುಕುಲದ ಮಕ್ಕಳು ವಾರಕ್ಕೊಮ್ಮೆ ಪಕ್ಕದ ಗ್ರಾಮಗಳಿಗೆ ಹೋಗಿ ಅಲ್ಲಿರುವಂತಹ ಮಕ್ಕಳಿಗೆ ಗುರುಕುಲದಲ್ಲಿ ತಾವು ಕಲಿತಿದ್ದನ್ನು ಕಲಿಸಿಕೊಡುತ್ತಾರೆ. ಪಂಚಮುಖಿ ಶಿಕ್ಷಣವನ್ನು ಸುತ್ತಮುತ್ತಲಿರುವ ಹಳ್ಳಿಯ ಜನಗಳ ಜೊತೆ ಹಂಚಿಕೊಳ್ಳುತ್ತಾರೆ. ಹರಿಹರಪುರದ ಮಕ್ಕಳು ಒಮ್ಮೆ ವಿಸ್ತಾರಕರಾಗಿ ಹೋಗಿದ್ದರು. ಗುರುಕುಲದ ಮಕ್ಕಳು ಇಡೀ ದಿನ ಭಿನ್ನ ಭಿನ್ನವಾದ ಚಟುವಟಿಕೆಗಳನ್ನು ಮಾಡುತ್ತಾರೆ. ಶಾಖೆಯನ್ನು ಸಂಜೆಯ ಸಮಯದಲ್ಲಿ ಮಾಡುತ್ತಾರೆ. ಜೊತೆಗೆ ಶಾಲೆಗೆ ಹೋಗಿ ಬಾಲಗೋಕುಲ ನಡೆಸುವುದಲ್ಲದೆ ಯೋಗಾಭ್ಯಾಸವನ್ನೂ ಕಲಿಸಿದರು. ಮಕ್ಕಳ ಕೈಯಿಂದ ವೃಕ್ಷಾರೋಪಣವನ್ನು ಮಾಡಿಸಿದ್ದಾರೆ. ಸಂಜೆ ಹೊತ್ತಿನಲ್ಲಿ ಮಕ್ಕಳಿಗೆ-ದೊಡ್ಡವರಿಗೆ ಸಂಸ್ಕೃತ ಸಂಭಾಷಣೆ ಶಿಬಿರವನ್ನು ನಡೆಸುತ್ತಾರೆ. ಹೀಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ವಿಭಿನ್ನ ರೀತಿಯ ಕಾರ್ಯಚಟುವಟಿಕೆಗಳನ್ನು ಜೋಡಿಸಿಕೊಂಡು ಕೆಲಸ ಮಾಡುತ್ತಾರೆ. ಹೀಗೆ ಶಾಖೆ-ಸಂಪರ್ಕದ ಜತೆಗೆ
ಬಹುಮುಖಿ ಚಟುವಟಿಕೆ ನಡೆಸಿ ಗ್ರಾಮಸ್ಥರ ಮೆಚ್ಚುಗೆ ಗಳಿಸುವುದು ಆನಂದ ತರುತ್ತದೆ.

 ಮಾ. 27, ಮೈತ್ರೇಯಿ ಗುರುಕುಲದ ಅರ್ಧಮಂಡಲೋತ್ಸವ ಸಂಭ್ರಮ. ಮೈತ್ರೇಯಿ ಗುರುಕುಲದ್ದೇ ಆದ ಅನನ್ಯತೆಗಳೇನು?

 ಹೆಣ್ಣುಮಕ್ಕಳ ಜೀವನದಲ್ಲಿ ವಿಶೇಷತೆಯೆಂದರೆ ಸಂವೇದನಾಶೀಲತೆ, ಅಂತೆಯೇ ಬಂದಂತಹವರನ್ನು ಗೌರವಿಸಿ ಆತಿಥ್ಯ ನೀಡುವುದು. ಸ್ವಾಭಾವಿಕವಾಗಿರುವಂತಹ ಗುಣಕ್ಕೆ ಗುರುಕುಲದ ಸಂಸ್ಕಾರಗಳನ್ನು ಜೋಡಿಸಿ ಗುರುಕುಲಕ್ಕೆ ಬರುವಂತಹ – ಸಾಮಾನ್ಯರಿಂದ ಹಿಡಿದು ದೊಡ್ಡವರವರೆಗೆ – ಎಲ್ಲರನ್ನೂ ಮಕ್ಕಳ ಸ್ವಾಗತಿಸುವ ಪರಿ, ಸತ್ಕರಿಸುವ ರೀತಿ, ಗುರುಕುಲದ ಪರಿಚಯಿಸುವಿಕೆ, ಹೊರಡುವಾಗ ಜೈ ಶ್ರೀರಾಮ್ ಎಂದು ಹೇಳಿ ಪ್ರೀತಿಯಿಂದ ಬೀಳ್ಕೊಡುವ ರೀತಿ, ಹೆಣ್ಣು ಮಕ್ಕಳೇ ಆಗಿರುವುದರಿಂದ ಅದರದೇ ಆದಂತಹ ಒಂದು ಪ್ರಭಾವವನ್ನು ಗುರುಕುಲಕ್ಕೆ ಬಂದಂತಹವರು ಗುರುತಿಸಿದ್ದಾರೆ. ಗುರುತಿಸಿದ್ದನ್ನು ಗೌರವಿಸಿದ್ದಾರೆ. ಇದು ಮೈತ್ರೇಯಿ ಗುರುಕುಲದಲ್ಲಿ ವಿಶೇಷವಾಗಿ ಗುರುತಿಸಬಹುದಾದ ಗುರುಕುಲದ ವಿಶೇಷ.

 ವಿದ್ವತ್ ಲೋಕದಲ್ಲಿ ಮೈತ್ರೇಯಿಯ ಮಕ್ಕಳ ವಿಶಿಷ್ಟ ಸಾಧನೆ ಏನು ?

 ಈ ವರ್ಷ ಮೊದಲನೆ ಬಾರಿಗೆ ಸಂಸ್ಕೃತದ ಬೇರೆ ಬೇರೆ ಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆಗಳು ಉಡುಪಿಯಲ್ಲಿ ನಡೆದವು. ಉಡುಪಿಯಲ್ಲಿ ನಡೆದಂತಹ ಆ ಪರೀಕ್ಷೆಗಳಲ್ಲಿ ಮೈತ್ರೇಯಿ ಗುರುಕುಲದ ವಿದ್ಯಾರ್ಥಿಗಳು ಅನೇಕ ವಿಷಯಗಳಲ್ಲಿ ಪ್ರಾವೀಣ್ಯತೆಯನ್ನು ತೋರ್ಪಡಿಸಿ ಮೆಚ್ಚುಗೆ ಗಳಿಸಿದ್ದಾರೆ. ಪ್ರಥಮ ಬಾರಿಗೆ ಮೈತ್ರೇಯಿ ಗುರುಕುಲದ ವಿದ್ಯಾರ್ಥಿಗಳು ಭಾಗವಹಿಸಿ 10 ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅಖಿಲ ಭಾರತ ಮಟ್ಟದಲ್ಲೂ ಭಾಗವಹಿಸಿ 7 ವಿದ್ಯಾರ್ಥಿಗಳು ಕೀರ್ತಿ ಸ್ಥಾಪಿಸಿದ್ದಾರೆ. ಅಷ್ಟಾಧ್ಯಾಯೀ ಎನ್ನುವಂತಹ ವಿಷಯದಲ್ಲಿ ಮೊದಲನೆ ಸ್ಥಾನವನ್ನು ಪಡೆದಿದ್ದಾರೆ. ಕಲಿಯುವ ಆಸಕ್ತಿ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ಇರುತ್ತದೆ. ಬಿಡುವಿನ ಸಮಯದಲ್ಲಿ ಆಡುತ್ತಾರೆ. ಬೇರೆ ಸಮಯದಲ್ಲಿ ಸುಮ್ಮನೆ ಮಾತುಕತೆಯಲ್ಲಿ ಕಾಲಹರಣ ಮಾಡುವುದಕ್ಕಿಂತ ಅವರ ಕಲಿಕೆಯ ಯಾವುದಾದರೂ ಒಂದು ವಿಷಯದಲ್ಲಿ ತೊಡಗಿರುವುದು ಇದಕ್ಕೆ ಕಾರಣವೆನ್ನಬಹುದು. ಇದು ಮೈತ್ರೇಯಿ ಗುರುಕುಲದ ಗುರುತಿಸಬಹುದಾದ ವಿಶೇಷ.

 ಅರ್ಧಮಂಡಲೋತ್ಸವ ಸಂದರ್ಭದ ವಿಶೇಷ ಕಲ್ಪನೆ ಹಾಗೂ ಒಟ್ಟಾರೆ ಈ ಪ್ರಯೋಗದ ಕುರಿತು ನಿಮ್ಮ ಅನಿಸಿಕೆಗಳೇನು?

 ಅರ್ಧಮಂಡಲೋತ್ಸವದಲ್ಲಿ ವಿಶೇಷವಾಗಿ ರಾಜ್ಯಾದ್ಯಂತ ಪಾಲಕರೆಲ್ಲರೂ ತಮ್ಮ ತಮ್ಮ ಊರುಗಳಲ್ಲಿ ಏನೆಲ್ಲಾ ಮಾಡಬೇಕು, ಇಲ್ಲಿಂದ ಹೋಗಿರುವಂತಹ ಪೂರ್ವ ಛಾತ್ರೆಯರು ಇರುವಂತಹ ಊರುಗಳಲ್ಲಿ ಅವರೇನು ಮಾಡಬೇಕು, ವರ್ಷವಿಡೀ ಗುರುಕುಲದಲ್ಲಿ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಏನು ಮಾಡಬೇಕು – ಈ ಮೂರನ್ನೂ ಗುರುಕುಲದವರು ಆಲೋಚನೆ ಮಾಡಿದ್ದಾರೆ. ವಿಭಿನ್ನ ರೀತಿಯ ಚಟುವಟಿಕೆಗಳನ್ನು ಮಾಡುವ ಮುಖೇನ ಗುರುಕುಲವನ್ನು ಸಮಾಜಕ್ಕೆ ಪರಿಚಯಿಸುವುದು, ಆ ಮೂಲಕವಾಗಿ ತಮ್ಮ ಮಕ್ಕಳಿಗೂ ಗುರುಕುಲದ ಶಿಕ್ಷಣ ಸಿಗಬೇಕು ಎಂಬ ಹಸಿವು-ತೃಷೆಯನ್ನು ಬೆಳೆಸುವುದು, ಇದು ಒಟ್ಟು ಕಾರ್ಯಕ್ರಮದ ಸ್ವರೂಪ. ಗುರುಕುಲದ ಅರ್ಧಮಂಡಲೋತ್ಸವದ ಸಮಿತಿಯಲ್ಲಿ ವಿಭಿನ್ನ ಕ್ಷೇತ್ರದ ಜನರು ತೊಡಗಿಕೊಂಡಿದ್ದಾರೆ. ಗೌರವಾಧ್ಯಕ್ಷರಿದ್ದಾರೆ,
ಅಧ್ಯಕ್ಷರಿದ್ದಾರೆ, ಸುಮಾರು 22 ಜನ ಉಪಾಧ್ಯಕ್ಷರಿದ್ದಾರೆ. ಶ್ರೀ ರವಿಶಂಕರ್ ಗುರೂಜಿಯವರ ಮಾರ್ಗದರ್ಶನ ನಮಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಸಂಘಚಾಲಕ್ ಮಾನ್ಯ ಮೋಹನ್ ಜೀ ಭಾಗ್ವತ್ ಉಪಸ್ಥಿತರಿರುತ್ತಾರೆ.

 ಗುರುಕುಲ ಚಿಂತನೆ ವಿಕಾಸವಾಗುತ್ತಿರುವುದರ ಕುರಿತು ನಿಮ್ಮ ಅಭಿಪ್ರಾಯ ತಿಳಿಸುವಿರಾ ?

 24 ವರ್ಷ ಗುರುಕುಲ ನಡೆದುಬಂದ ಹಾದಿಯನ್ನು ಅಖಿಲ ಭಾರತ ಮಟ್ಟದಲ್ಲಿ ಸಂಘ ಗುರುತಿಸಿದೆ ಮತ್ತು ಸ್ವೀಕರಿಸಿದೆ. ಹಿಂದಿನ ದಿನಗಳಲ್ಲಿ ಪ್ರಯೋಗ ಮಟ್ಟದಲ್ಲಿತ್ತು. ಸಹಸರಕಾರ್ಯವಾಹ ಸುರೇಶ್ ಸೋನಿಜೀಯವರ ಅಪೇಕ್ಷೆಯಂತೆ-ಇಂತಹ ಕಾರ್ಯ ದೇಶವ್ಯಾಪಿಯಾಗಿ ಬೆಳೆಯಬೇಕು, ಹಾಗಾಗಿ ಇದು ಮೂರಾಗಿ ನಿಲ್ಲದೆ ನೂರಾಗಬೇಕು, ದೇಶವ್ಯಾಪಿಯಾಗಿ ಬೆಳೆಯಬೇಕು ಎಂಬ ಆಶಯದಿಂದ ಇದನ್ನು ಭಾರತೀಯ ಶಿಕ್ಷಣ ಮಂಡಲದ ಜೊತೆ ಜೋಡಿಸಲಾಗಿದೆ. ಮುಂದಿನ ಏಪ್ರಿಲ್ ತಿಂಗಳ 28, 29 ಮತ್ತು 30 ಕ್ಕೆ ಗುರುಕುಲ ಕುಂಭಮೇಳ ಎಂಬ ಹೆಸರಿನಲ್ಲಿ ಕಾರ್ಯಕ್ರಮವೊಂದು ಉಜ್ಜಯಿನಿಯ ಸಾಂದೀಪನಿಯಲ್ಲಿ ನಡೆಯುತ್ತದೆ. ದೇಶವ್ಯಾಪಿ ಗುರುಕುಲ ಎಂದು ಹೆಸರನ್ನಿಟ್ಟುಕೊಂಡಿರುವ ಸಂಸ್ಕೃತ ಪಾಠಶಾಲೆಗಳು, ಅಧ್ಯಯನ ಕೇಂದ್ರಗಳು ಇದೆಲ್ಲವನ್ನು ಭಾರತೀಯ ಶಿಕ್ಷಣ ಮಂಡಲದ ಕಾರ್ಯಕರ್ತರು ಗುರುತಿಸಿ ಪಟ್ಟಿ ಮಾಡಿದ್ದಾರೆ. ಎಲ್ಲರನ್ನೂ ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿಶೇಷವಾಗಿ ಭಾರತದಿಂದ ಆಚೆ ಇರುವ ನೇಪಾಳ, ಶ್ರೀಲಂಕಾ ದೇಶಗಳಿಂದಲೂ ಪ್ರತಿನಿಧಿಗಳು ಬರುತ್ತಾರೆ. ಸರಸಂಘಚಾಲಕರು ಮಾರ್ಗದರ್ಶನ ಮಾಡಲಿದ್ದಾರೆ. ದಾರಿತಪ್ಪಿದ ಶಿಕ್ಷಣವನ್ನು ಶುದ್ಧೀಕರಣ ಮಾಡುವ ಪ್ರಕ್ರಿಯೆಯ ಒಂದು ದೊಡ್ಡ ಹೆಜ್ಜೆಯನ್ನು ನಾವು ಮುಂದಿಟ್ಟಿದ್ದೇವೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಭಾರತಕ್ಕೆ ಗುರುಕುಲ ಶಿಕ್ಷಣ ಪದ್ಧತಿಯೇ ಸೂಕ್ತ ಶಿಕ್ಷಣ ಪದ್ಧತಿ ಅಥವಾ ಪರ್ಯಾಯ ಪದ್ಧತಿ ಎನ್ನುವವರೆಗೆ ಬರುವ ಸಂಭವವಿದೆ ಎಂಬ ಒಂದು
ಸಂಕೇತ ಈ ನಡೆಗಳಿಂದ ಕಾಣುತ್ತಿದೆ.

(ಅಕ್ಷರ ರೂಪಕ್ಕೆ : ಆರ್. ಶಂಕರ್)

 

 

   

Leave a Reply