ಗುರುಕುಲ ಪ್ರವೇಶಕ್ಕೆ ಮುನ್ನ

ಲೇಖನಗಳು - 0 Comment
Issue Date :

ಶ್ರೀಮಿತ ಕವಿತಾ –

ನಾನು ಉಡುಪಿಯ ಒಂದು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಎಳವೆಯಿಂದಲೂ ಕಲೆಗಳು, ಅದರಲ್ಲೂ ಭರತನಾಟ್ಯವೆಂದರೆ ನನಗೆ ಅಚ್ಚುಮೆಚ್ಚು. ಆದರೆ ನನ್ನ ವೈಯಕ್ತಿಕ ಆರೋಗ್ಯದ ಕಾರಣದಿಂದಾಗಿ ಅದಾಗಲೇ ಕಲಿಯತೊಡಗಿದ್ದ ಭರತನಾಟ್ಯವನ್ನು ಪ್ರಾಥಮಿಕ ಹಂತದಲ್ಲೇ ನಿಲ್ಲಿಸುವಂತಾಗಿತ್ತು. ಹೀಗಾಗಿ ಅದರಲ್ಲಿದ್ದ ಆಸಕ್ತಿ, ಹಂಬಲಗಳೆಲ್ಲವೂ ಮನಸ್ಸಿನಲ್ಲಿಯೇ ಮುದುಡಿದ್ದುವು. ಸಂಸ್ಕೃತವೆಂದರೂ ನನಗೆ ಬಲು ಪ್ರೀತಿ. ಬೇಸಗೆ ರಜೆಯಲ್ಲಿ ಸಂಭಾಷಣಾ ಶಿಬಿರಗಳಿಗೆ ಹೋಗುತ್ತಿದ್ದರೂ ಅದನ್ನು ಕಲಿಯುವ ಅವಕಾಶಗಳು ಕಡಿಮೆಯಿದ್ದುವು.

  ‘ತರಂಗ’ ವಾರಪತ್ರಿಕೆಯಲ್ಲಿ ಗುರುಕುಲದ ಬಗ್ಗೆ ಒಂದು ಲೇಖನ ಬಂದಿತ್ತು. ಯೋಗ, ಸಂಗೀತ, ಭರತನಾಟ್ಯಗಳನ್ನು ಕಲಿಸುತ್ತಾರೆ. ಸಂಸ್ಕೃತಭಾಷೆಯೇ ಸಂವಹನಮಾಧ್ಯಮ. ಜೊತೆಗೆ ಪಠ್ಯಪುಸ್ತಕ, ಪರೀಕ್ಷೆಗಳ ಒತ್ತಡವೂ ಇಲ್ಲ ಎಂದು ತಿಳಿಯಿತು. ಕುತೂಹಲದೊಂದಿಗೆ ಬಹಳ ಖುಷಿಯೂ ಆಯಿತು. ಜೊತೆಗೆ ಸ್ವಲ್ಪ ನಿರಾಶೆಯ ಭಯವೂ ಇತ್ತು. ಯಾಕೆಂದರೆ, ನಾನಾಗಲೇ 5ನೆಯ ತರಗತಿಯಲ್ಲಿದ್ದೆ. 4ನೆಯ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಎಂದಿತ್ತು. ಆದರೂ ಒಂದು ಪ್ರಯತ್ನ ಮಾಡೋಣವೆಂದು ಹಠ ಹಿಡಿದು ಅಪ್ಪ-ಅಮ್ಮನ ಜೊತೆಗೆ ಗುರುಕುಲದ ಕಡೆಗೆ ಹೊರಟೆ; ಸಂದರ್ಶನವೂ ಆಯಿತು. ಅದೃಷ್ಟವಶಾತ್ ಆಯ್ಕೆಯಾದ 20 ವಿದ್ಯಾರ್ಥಿನಿಯರಲ್ಲಿ ನಾನೂ ಒಬ್ಬಳಾಗಿದ್ದೆ!

 ಗುರುಕುಲದೊಳಗೆ….

 ಮನೆ ಬಿಟ್ಟು ದೂರವಿರುವುದು ಮೊದಲು ಕಷ್ಟವಾಯಿತು. ಆದರೆ ಗುರುಕುಲವು ಬರಿಯ ಪಾಠಶಾಲೆಯಂತೆ ಇರಲಿಲ್ಲ. ಅದು ಒಂದು ಕುಟುಂಬದಂತಿತ್ತು. ಅಕ್ಕಂದಿರ ಪ್ರೀತಿ, ಮಾತೃಶ್ರೀಯರ ಮಮತೆ, ಭಾವಪೂರ್ಣ ಸ್ಪಂದನೆಗಳು ಮನೆಯ ನೋವನ್ನು ಮರೆಸಿದವು.

 ಗುರುಕುಲ ಶಿಕ್ಷಣವು ನಾಟ್ಯ ಕ್ಷೇತ್ರದಲ್ಲಿ ನನ್ನ ಸಾಮರ್ಥ್ಯವನ್ನು ನನಗೆ ಗುರುತಿಸಿಕೊಟ್ಟಿತ್ತು. ಉತ್ತಮ ಪ್ರೋತ್ಸಾಹಗಳಿಂದ ನಾನು ಮುಂದುವರಿಯಬಲ್ಲೆ ಎಂಬ ವಿಶ್ವಾಸ ಮೂಡಿತು. ಅದರಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಆಸಕ್ತಿ ಇನ್ನಷ್ಟು ಹೆಚ್ಚಿತು; ಸಾಧನೆ ಮಾಡುವ ಛಲ ಮೂಡಿತು. ಹೀಗಾಗಿ ಒಂದರ್ಥದಲ್ಲಿ ಗುರುಕುಲ ಶಿಕ್ಷಣವು ನನ್ನ ಜೀವನದ ದಿಕ್ಕನ್ನೇ ಬದಲಿಸಿತೆನ್ನಬಹುದು. ಬದುಕನ್ನು ಕಾಣುವ ದೃಷ್ಟಿಕೋನವೂ ಬದಲಾಯಿತು. ಇಂದು ನನ್ನಲ್ಲಿ ಬದಲಾಗಿದೆ. ಅಲ್ಲಿ ನಮಗೆ ಕಲಿಸಿದ್ದು ವ್ಯಕ್ತಿಶಿಕ್ಷಣವೇ ಹೊರತು ವೃತ್ತಿಶಿಕ್ಷಣವಲ್ಲ. ಅದು ಪಠ್ಯಾಧಾರಿತ ಅಥವಾ ವಿಷಯಾಧಾರಿತವಲ್ಲ. ಅದು ಮೌಲ್ಯಾಧಾರಿತ ಮತ್ತು ಸಾಮರ್ಥ್ಯಾಧಾರಿತ. ಗುರುಕುಲದಿಂದ ಹೊರಗೆ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುತ್ತಾರೆ. ಆದರೆ ಗುರುಕುಲವು ಜೀವನಕ್ಕಾಗಿ ಶಿಕ್ಷಣ ನೀಡುತ್ತದೆ. ಶಿಕ್ಷಣದ ಕಾರ್ಯವೇ ಉತ್ತಮವಾದ ಜೀವನವನ್ನು ರೂಪಿಸುವುದು. ಗುರುಕುಲ ಶಿಕ್ಷಣದ ಮಹತ್ತ್ವವಿರುವುದು ವ್ಯಕ್ತಿತ್ವವನ್ನು ಅರಳಿಸುವುದರಲ್ಲಿ.

 ಗುರುಕುಲದ ಹೊರಗೆ..

ಗುರುಕುಲದಲ್ಲಿ ಆರು ವರ್ಷಗಳ ಶಿಕ್ಷಣ ಪಡೆದೆ. ಹೊರಗಿನ ವ್ಯವಸ್ಥೆಗೆ ‘ಸರ್ಟಿಫಿಕೇಟ್’ ಅವಶ್ಯವಾದದ್ದರಿಂದ 10ನೇ ತರಗತಿಯ ಪರೀಕ್ಷೆ ಬರೆದೆ. ಅನಂತರ ವಾಣಿಜ್ಯಶಾಸ್ತ್ರದಲ್ಲಿ ನೇರ ದ್ವಿತೀಯ ಪಿಯುಸಿಗೆ ಪಠ್ಯವನ್ನು ಮನೆಯಲ್ಲೇ ಅಧ್ಯಯನ ಮಾಡಿದೆ. ಗುರುಕುಲ ಶಿಕ್ಷಣವು ಸ್ವಾಧ್ಯಾಯದ ಕ್ರಮವನ್ನು ಬೋಧಿಸಿದ್ದರಿಂದ ಕಾಲೇಜಿಗೆ ಹೋಗದೆಯೇ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಇದರ ಜೊತೆಗೆ ನಾಟ್ಯಗುರುಗಳ ನಿರಂತರ ಸಲಹೆ-ಮಾರ್ಗದರ್ಶನಗಳಿಂದ ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನೇ ಪಡೆದು

ತೇರ್ಗಡೆಯಾದೆ. ಮುಂದೆ, ಬಿ.ಕಾಮ್. ಜೊತೆಗೆ

ಉಡುಪಿಯ ‘ನೃತ್ಯನಿಕೇತನ’ದ ಗುರುಗಳ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನೂ ಪಡೆದೆ.

 ಹೊರಜಗತ್ತಿನ, ಆಧುನಿಕ ಜೀವನದ ಮಾನಸಿಕತೆ ನನಗೆ ಕಾಲೇಜಿನಲ್ಲಿ ಅರಿವಿಗೆ ಬಂತು. ಗುರುಕುಲ ಶಿಕ್ಷಣವು ನನಗೆ ಸ್ವಂತಿಕೆಯನ್ನು ಕಲಿಸಿತ್ತಾದ್ದರಿಂದ ಕುರುಡಾಗಿ ಏನನ್ನೂ ಸ್ವೀಕರಿಸಲಿಲ್ಲ. ಸರಿ-ತಪ್ಪುಗಳನ್ನು ನಿರ್ಣಯಿಸುವ ಶಕ್ತಿಯನ್ನು ಗುರುಕುಲ ಕೊಟ್ಟಿತ್ತು; ಸ್ವಚಿಂತನೆಯ ಸಾಮರ್ಥ್ಯವನ್ನು ಬೆಳೆಸಿತ್ತು. ಹೀಗಾಗಿ ಅಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ ತನ್ನತನವನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಯಿತು.

 ಗುರುಕುಲವು ನನ್ನನ್ನು ಓರ್ವ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಸಮಾಜಕ್ಕೆ ಕಳುಹಿಸಿದೆ ಎಂದು ನನ್ನ ಭಾವನೆ. ಹೀಗಾಗಿ, ನೃತ್ಯ ಕ್ಷೇತ್ರದಲ್ಲಿ ನಾನು ಪಡೆದ ಜ್ಞಾನ-ಕೌಶಲ-ಅನುಭವಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಆಸಕ್ತರಿಗೆ ಹಂಚುವ ಪ್ರಯತ್ನದಲ್ಲಿದ್ದೇನೆ. ಇದರ ಜೊತೆಗೆ,

ನನಗೆ ತಿಳಿದ ಮಟ್ಟಿಗೆ ಯೋಗದ ತರಬೇತಿಯನ್ನೂ ನೀಡುತ್ತಿದ್ದೇನೆ. ಇದರಿಂದ ಜನ ನನ್ನನ್ನು ಇತರರಿಗಿಂತ ವಿಭಿನ್ನವಾಗಿ ಗುರುತಿಸುತ್ತಿದ್ದಾರೆ.

 ಈಗ ನಾನು ಗೃಹಿಣಿಯಾಗಿದ್ದೇನೆ. ನೃತ್ಯದ ಅಧ್ಯಾಪನದ ಜೊತೆಜೊತೆಗೆ ಗೃಹಿಣಿಯಾಗಿ ಒಂದು ಮನೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದೇನೆ. ಎಲ್ಲರ ಜೊತೆ ಬದುಕುವ ಸಹಜೀವನದ ಶಿಕ್ಷಣ ಮತ್ತು ಸಂಸ್ಕಾರ ಗುರುಕುಲದಿಂದ ಸಿಕ್ಕಿದೆ. ಹಾಗಾಗಿ ಹೊಂದಾಣಿಕೆಯಿಂದ ಬಾಳುವುದು ನನಗೆ ಸಮಸ್ಯೆಯಾಗಿಲ್ಲ. ‘ಗೃಹಿಣೀ ಗೃಹಮುಚ್ಯತೇ’ ಎಂಬ ಮಾತಿನಂತೆ ಸದ್ಗೃಹಿಣಿಯಾಗಿ ನನ್ನ ಮನೆಯನ್ನು ಬೆಳಗುತ್ತೇನೆ. ಅದರಂತೆ ಬಾಳುತ್ತಾ ಸ್ವಸ್ಥ ಕುಟುಂಬವನ್ನು ನಿರ್ಮಿಸುವುದರ ಜೊತೆಗೆ ‘ಪ್ರತಿಯೊಂದು ಮನೆಯೂ ಗುರುಕುಲವಾಗಬೇಕು’ ಎಂಬ ಗುರುಕುಲದ ಅಪೇಕ್ಷೆಯಂತೆ ನಡೆಯುವ ಪ್ರಯತ್ನದಲ್ಲಿದ್ದೇನೆ.

 

 

   

Leave a Reply