ಗುರುಕುಲ ಶಿಕ್ಷಣ ನಡೆದು ಬಂದ ದಾರಿ

ಲೇಖನಗಳು - 0 Comment
Issue Date :

ಸಾವಿತ್ರಿ ಹೆಚ್‍.ಕೆ. – 

ಶಾಲೆಗೆ ಹೋಗುವಾಗ ಬೆನ್ನುಮೂಳೆ ಮುರಿಯುವಷ್ಟು ಪುಸ್ತಕಗಳ ಹೊರೆ, ಶಾಲೆಯಲ್ಲಿ ಗಿಳಿಪಾಠ, ಮನೆಗೆ ಬಂದರೆ ಮನೆಪಾಠದ ಕಿರಿಕಿರಿ, ವರ್ಷದ ಕೊನೆಯಲ್ಲಿ ಪರೀಕ್ಷೆಯ ಭಯ, ರ‌್ಯಾಂಕ್ ಬಾರದಿದ್ದಾಗ ಪಾಲಕರಿಂದ  ಬೈಗುಳ, ಮಕ್ಕಳಿಗೆ ಆನಂದದಿಂದ ಆಟ ಆಡಲು ಸಮಯವಿಲ್ಲ, ಪಾಲಕರಿಗೆ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಲೂ ಅವಕಾಶವಿಲ್ಲ, ಇವೆಲ್ಲವೂ ಅನೇಕ ವರ್ಷಗಳಿಂದಲೂ ಮಕ್ಕಳು ಅನುಭವಿಸುತ್ತಿರುವ ಗೋಳು – ಯಾತನೆ.

  ಮಕ್ಕಳ ನೈಜ ಸ್ವಭಾವವನ್ನು ಅರಿತ ಅನೇಕ ಶಿಕ್ಷಣ ತಜ್ಞರ, ಭವ್ಯ ಭಾರತದ ಕನಸನ್ನು ಹೊತ್ತ ಅನೇಕ ಹಿರಿಯರ ಮನಸ್ಸಿನಲ್ಲಿ ಸದಾ ಇದೇ ಚಿಂತನೆ. ಇಂದಿನ ಶಿಕ್ಷಣ ಪದ್ಧತಿ ಸರಿ ಇಲ್ಲ’ ಎಂಬುದು. ಆದರೆ ಎಲ್ಲಾ ಕಡೆ ಕತ್ತಲೆ ಇದೆ ಎಂದು ಗೊಣಗುತ್ತ ಕೂರುವ ಬದಲು ಒಂದು ಚಿಕ್ಕ ಹಣತೆಯನ್ನು ಹಚ್ಚುವುದು ಜಾಣತನವಲ್ಲವೇ?

 ವರ್ಷಗಳ ಕಾಲ ಚಿಂತನೆ ನಡೆಸಿದರು. ಶಿಕ್ಷಣದ ಎಲ್ಲಾ ಮಜಲುಗಳನ್ನೂ ವಿಶ್ಲೇಷಿಸುತ್ತಾ ಮುಂದಕ್ಕೆ ಇಂದಿನ ಶಿಕ್ಷಣ ಕ್ರಮಕ್ಕೆ ಪರ್ಯಾಯವಾಗಿ, ಆದರೆ ಇಂದಿನ ಯುಗಕ್ಕೆ
ಸರಿ ಹೊಂದುವಂತೆ ಒಂದು ನೂತನ ಶಿಕ್ಷಣ ಯೋಜನೆಯನ್ನು ರೂಪಿಸಬೇಕೆನ್ನುವ ಸದಭಿಪ್ರಾಯ- ಸದಾಶಯ ಎಲ್ಲರಲ್ಲೂ ಸಮಾನವಾಗಿ ಅಂಕುರಿಸಿತು. ಇದರ ಫಲವಾಗಿ ಭಾರತೀಯ ಗುರುಕುಲ ಪದ್ಧತಿಯನ್ನು ಆಧರಿಸಿ ಈವರೆಗಿನ ಎಲ್ಲ ಪ್ರಯೋಗಗಳ ಉತ್ತಮಾಂಶಗಳನ್ನು ಪರಿಗಣಿಸಿ ಒಂದು ನೂತನ ಶಿಕ್ಷಣ ಯೋಜನೆಯನ್ನು ರೂಪಿಸುವ ಕಾರ್ಯ ಪ್ರಾರಂಭವಾಯಿತು. ಈ ಸತ್ಸಂಕಲ್ಪ ಮನದಲ್ಲಿ ಮೂಡುತ್ತಿದ್ದಂತೇ ದೈವಾನುಗ್ರಹದಿಂದ ಇದರ ಕಾರ್ಯಯೋಜನೆಯ ಬೀಜ ಬಿತ್ತಲು ಒಂದು ಸದವಕಾಶ ‘ಹಿಂದು ಸೇವಾ ಪ್ರತಿಷ್ಠಾನದ ಅಡಿಯಲ್ಲಿ ದೊರೆಯಿತು. ‘ಸ್ವಸ್ಥ ಸಮಾಜದ ನಿರ್ಮಾಣ‘ ಗುರುಕುಲದ ಮೂಲ ಉದ್ದೇಶವೆಂದು ನಿರೂಪಿಸುತ್ತಾ, ಈ ಉದ್ದೇಶದ ಸಾಧನೆಗಾಗಿ ಸ್ವಸ್ಥಕುಟುಂಬಗಳು ರೂಪುಗೊಳ್ಳುಬೇಕೆಂಬ ನೆಲೆಯಲ್ಲಿ ಸ್ವಸ್ಥವ್ಯಕ್ತಿಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು. ಸ್ವಸ್ಥವ್ಯಕ್ತಿ ನಿರ್ಮಾಣಕ್ಕೆ ಶಿಕ್ಷಣವೊಂದೇ ಸಾಧನ ಎಂದು ತಿಳಿದು ಸಮಗ್ರ ಶಿಕ್ಷಣವನ್ನು ನೀಡುವ ಕಾರ್ಯಯೋಜನೆ ಶುಭಂ ಕರೋತಿ ಹೆಸರಿನಲ್ಲಿ ಹೆಣ್ಣುಮಕ್ಕಳ ಗುರುಕುಲ ರೂಪದಲ್ಲಿ ಆರಂಭಗೊಂಡಿತು.

 ಗುರುಕುಲವು ಒಂದು ಶಾಲೆಯಾಗದೆ ಒಂದು ಕುಟುಂಬದಂತೆ ಪಾರಿವಾರಿಕ ನೆಲೆಯಲ್ಲಿ ಇರಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಕಿಯರಿಗೆ ‘ಮಾತೃಶ್ರೀ ಎಂದು ಸಂಬೋಧಿಸಲಾಯಿತು. ತಾಯಿಯ ಸ್ಥಾನದಲ್ಲಿದ್ದು ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡುವ ಜವಾಬ್ದಾರಿ ಮಾತೃಶ್ರೀಯವರದು. ಒಂಭತ್ತು ವರ್ಷ ತುಂಬಿದ ಮಕ್ಕಳಿಗೆ ಇಲ್ಲಿ ಪ್ರವೇಶವೆಂದು, ಸಂದರ್ಶನದ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಲಾಯಿತು. ಗುರುಕುಲದ ಆರಂಭದ ಕಲಿಕೆ ಆರುವರ್ಷಗಳಾಗಿರಬೇಕು, ಮಾಧ್ಯಮ ಕನ್ನಡವಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಪ್ರಾತಿನಿಧ್ಯ ಇರಬೇಕೆಂದು ತೀರ್ಮಾನಿಸಿ, ಮಕ್ಕಳ ಸಮಗ್ರ ವಿಕಾಸದ ದೃಷ್ಟಿಯಿಂದ ‘ಪಂಚಮುಖೀ ಶಿಕ್ಷಣ’ (ಕೃಷಿ, ಯೋಗ, ವೇದ, ಆಯುರ್ವೇದ, ಕರಕುಶಲ) ದ ಯೋಜನೆಯಾಯಿತು. ತರಗತಿಗಳು ಇಲ್ಲದ ಕಾರಣ ಗುಣಗಳ ಆಧಾರದ ಮೇಲೆ ಶ್ರದ್ಧಾ, ಮೇಧಾ, ಪ್ರಜ್ಞಾ, ಪ್ರತಿಭಾ, ಧೃತಿ ಮತ್ತು ಧೀ ಎಂಬ ಗಣಗಳ ವ್ಯವಸ್ಥೆಯಾಗಿದ್ದು, ಶ್ರದ್ಧೆಯ ಆಧಾರದ ಮೇಲೆ ಈ ಶಕ್ತಿಗಳ ವಿಕಾಸವಾಗಬೇಕೆನ್ನುವ ದೃಷ್ಟಿಯಿಂದ ಆಯಾಯ ಗಣಗಳಲ್ಲಿ ಚಟುವಟಿಕೆಗಳನ್ನು ಯೋಜಿಸಲಾಯಿತು.

 ಇಷ್ಟೆಲ್ಲಾ ಸಿದ್ಧತೆಗಳು ಆದಂತೆ ಗುರುಕುಲ ಪದ್ಧತಿಯಂತೆ ಪಠ್ಯಪುಸ್ತಕಗಳು ಇಲ್ಲ, ಪರೀಕ್ಷೆಗಳು ಇಲ್ಲ, ಪ್ರಮಾಣಪತ್ರ ಇಲ್ಲಎಂಬ ನಕಾರಾತ್ಮಕ ಅಂಶಗಳನ್ನು ಹೇಳುತ್ತಿದ್ದ ನಮಗೆ ಗುರುಕುಲ ಪ್ರವೇಶಕ್ಕೆ ಮಕ್ಕಳು ಬರುವ ಬಗ್ಗೆ ಶಂಕೆ ಇತ್ತಾದರೂ, ಮೊದಲನೇ ವರ್ಷದಲ್ಲಿಯೇ 24 ಮಂದಿ ಪಾಲಕರು ತಮ್ಮ ಮಕ್ಕಳನ್ನು ಗುರುಕುಲಕ್ಕೆ ಸೇರಿಸುವ ಸಾಹಸ ಮಾಡಿದರು. ಆ ಪಾಲಕರು ಮತ್ತು ಮಕ್ಕಳೇ ನಮ್ಮ ಗುರುಕುಲ ಸಾಧನೆಯ ನಿಜವಾದ ಮೈಲುಗಲ್ಲುಗಳು ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ.

 ಮಕ್ಕಳ ಅವಲೋಕನವನ್ನು ಇನ್ನೂ ವೈಜ್ಞಾನಿಕವಾಗಿ ಮಾಡಬೇಕೆನ್ನುವ ದೃಷ್ಟಿಯಿಂದ ಭಾರತೀಯ ಪದ್ಧತಿಯಂತೆ ಮಾನವನ ವಿಕಾಸದ ಹಂತಗಳಾದ ಪಂಚಕೋಶಗಳ
ಆಧಾರದ ಮೇಲೆ ಅವಲೋಕನ ವಿಧಾನವನ್ನು ರೂಪಿಸಿ ಮಕ್ಕಳ ಸಾಮರ್ಥ್ಯವನ್ನು ಗುರುತಿಸುವ ಪ್ರಕ್ರಿಯೆ ಪ್ರಾರಂಭಗೊಂಡು, ನಂತರ ಯೋಗ ಮನೋವಿಜ್ಞಾನದ ಆಧಾರದ ಮೇಲೆ ಮುಂದುವರೆಯಿತು.

  ಪ್ರಾರಂಭದಲ್ಲಿ ಕಾರ್ಯಯೋಜನೆಗಳು ಪೂರ್ವನಿಶ್ಚಿತವಾಗಿರದಿದ್ದರೂ ಪ್ರತಿತಿಂಗಳ ಪ್ರಶಿಕ್ಷಣದಿಂದ ವರ್ಷಗಳು ಕಳೆದಂತೆ ಗುರುಕುಲ ಶಿಕ್ಷಣದ ಪ್ರಾರೂಪ ಒಂದು ನಿರ್ದಿಷ್ಟ ರೂಪರೇಷೆ ಪಡೆದು ಮಕ್ಕಳಿಗೆ, ಪಾಲಕರಿಗೆ ಮತ್ತು ಸಮಾಜಕ್ಕೆ ಗುರುಕುಲ ಶಿಕ್ಷಣದಲ್ಲಿ ವಿಶ್ವಾಸ ಮೂಡುವಂತಾಯಿತು.

 ಹೀಗೆ ಐದು ವರ್ಷಗಳು ಕಳೆದಾಗ ಗುರುಕುಲದ ಹಿರಿಯರೆಲ್ಲರ ಆಶಯದಂತೆ ಗುರುಕುಲವು ತನ್ನ
ಸ್ವಂತ ಜಾಗದಲ್ಲಿ ಸಮಾಜ ಬಾಂಧವರ ಸಹಾಯ – ಸಹಕಾರದಿಂದ ಬೆಳೆಯಲು ಇಚ್ಛಿಸಿ ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮೂರುಕಜೆಯಂಬ ಪ್ರಶಾಂತ ವಾತಾವರಣಕ್ಕೆ ವರ್ಗಾಯಿಸಲ್ಪಟ್ಟಿತು. ಅಜೇಯ ವಿಶ್ವಸ್ತ ಮಂಡಳಿಯ ಆಶ್ರಯದಲ್ಲಿ ಮೈತ್ರೇಯೀ ಗುರುಕುಲವು ತನ್ನ ಕಾರ್ಯವನ್ನು ಪ್ರಾರಂಭಿಸಿತು.

 ಬೆಂಗಳೂರಿನ ಶುಭಂ ಕರೋತಿ ಗುರುಕುಲದಿಂದ ಸುಮಾರು 35 ಮಂದಿ ವಿದ್ಯಾರ್ಥಿನಿಯರು ಮೂರುಕಜೆಯ ಈ ಗುರುಕುಲಕ್ಕೆ ಬಂದರು.

 ಇಲ್ಲಿಗೆ ಬಂದಾಗ ಮಳೆಗಾಲ – ಜಡಿಮಳೆ. ಮಳೆಯನ್ನೇ ಕಾಣದ ವಿದ್ಯಾರ್ಥಿನಿಯರಿಗೆ ಇದೊಂದು ಹೊಸ ಅನುಭವ. ದಿ॥ಪರಮೇಶ್ವರಿ ಅಮ್ಮನವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ದಾನವಾಗಿ ಕೊಟ್ಟ ಈ ಭೂಮಿ ಸುಮಾರು 100 ಎಕರೆಯ ವಿಸ್ತೀರ್ಣ ಪ್ರದೇಶ. ಕಾಡಿನ ಮಧ್ಯದಲ್ಲಿ ಒಂದು ಮನೆ. ಮನೆ ದೊಡ್ಡದಾಗಿದ್ದು  ವಿದ್ಯಾರ್ಥಿನಿಯರಿಗಿಲ್ಲಿ ಓಡಾಡುವುದೇ ಒಂದು ಸಂತಸದ ಸಂಗತಿ. ಪೂರ್ವನಿರೀಕ್ಷೆಯಿಲ್ಲದೆ ಪ್ರಾರಂಭವಾದ್ದರಿಂದ ತಕ್ಷಣಕ್ಕೆ ತಾತ್ಕಾಲಿಕ ಸ್ನಾನಗೃಹಗಳು, ಶೌಚಾಲಯಗಳು ನಿರ್ಮಾಣಗೊಂಡಾಗ ಎಲ್ಲವೂ ಹೊಸ ಅನುಭವವೇ
ಆಗಿತ್ತು. ವಿದ್ಯುತ್ ಅಭಾವ, ದೂರವಾಣಿ ಇಲ್ಲದಿರುವುದು, ಆರು ತಿಂಗಳುಗಳ ಕಾಲ ಸುರಿಯುವ ಮಳೆ ಇವೆಲ್ಲ ಕಾರಣಗಳಿಂದ ಜನರ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿದ್ದಂತೇ ಅನ್ನಿಸುತ್ತಿತ್ತು. ಪ್ರಾರಂಭದಲ್ಲಿ ಹೊಂದಾಣಿಕೆ ಕಷ್ಟವಾದರೂ ನಿಧಾನವಾಗಿ ಎಲ್ಲರೂ ಹೊಸ ಪರಿಸರಕ್ಕೆ ಹೊಂದಿಕೊಂಡು ಸಂತೋಷವನ್ನು ಅನುಭವಿಸಿದರು.

ಹನ್ನೆರಡು ವರ್ಷ ಶಿಕ್ಷಣ ಮುಗಿಸಿದ ಒಬ್ಬ ವಿದ್ಯಾರ್ಥಿನಿ ತಾನು ಈ ವರೆಗೆ ಕಲಿತ ವೇದ, ವೇದಾಂಗಗಳು, ವ್ಯಾಕರಣದ ಆಯ್ದ ಭಾಗ, ಸಸ್ವರ ವೇದ ಮಂತ್ರದ ಉಚ್ಚಾರಣೆ ಇತ್ಯಾದಿಗಳನ್ನು ವಿದ್ವಾಂಸರ ಎದುರು ಸಮರ್ಪಿಸಿ ಮಧ್ಯೆ ಮಧ್ಯೆ ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈ ಪರೀಕ್ಷೆಯು
ಅನುಕ್ರಮವಾಗಿ ಮುಂದುವರೆಯುತ್ತಿದೆ. ಮುಂದಿನ ದಿನಗಳಲ್ಲಿ ಹನ್ನೆರಡು ವರ್ಷಗಳ ಶಿಕ್ಷಣ ಮುಗಿಸಿದ ಎಲ್ಲಾ ವಿದ್ಯಾರ್ಥಿನಿಯರೂ ಈ ನೂತನ ಪರೀಕ್ಷಾ ಪರಂಪರೆಯನ್ನು ಮುಂದುವರೆಸಲಿರುವರು. ಗುರುಕುಲವು ಇಪ್ಪತ್ತ್ನಾಲ್ಕು ವರ್ಷಗಳನ್ನು ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ ಹನ್ನೆರಡು ವರ್ಷಗಳ ಶಿಕ್ಷಣವನ್ನು ಮುಗಿಸಿದ ಐದು ಮಂದಿ ವಿದ್ಯಾರ್ಥಿನಿಯರು ಮಾತೃಶ್ರೀಯರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ.

 ವಿದ್ಯಾರ್ಥಿನಿಯರಿಗೆ ಸಮಾಜದ ಸಂಪರ್ಕ ಬರಬೇಕು ಎನ್ನುವ ದೃಷ್ಟಿಯಿಂದ ಸುತ್ತಮುತ್ತಲ ಶಾಲೆಗಳಲ್ಲಿ ಬಾಲಗೋಕುಲ ಪ್ರಾರಂಭವಾಯಿತು. ರಾಮಾಯಣ, ಮಹಾಭಾರತ, ಭಗವದ್ಗೀತೆ, ಯೋಗಶಾಸ್ತ್ರ ಇತ್ಯಾದಿಗಳ ಬೋಧನೆಗಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಯಿತು. ಮಕ್ಕಳ ಮತ್ತು ಪಾಲಕರ ಒತ್ತಾಸೆಯಂತೆ ಗುರುಕುಲ ಶಿಕ್ಷಣದ ಅವಧಿಯನ್ನು ಒಂಭತ್ತು ವರ್ಷದವರೆಗೆ ವಿಸ್ತರಿಸಲಾಯಿತು.

 ಗುರುಕುಲವು ಹನ್ನೆರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭಸಂದರ್ಭದಲ್ಲಿ ಭಾರತೀಯ ಪದ್ಧತಿಯಂತೆ ‘ಪಾದಮಂಡಲೋತ್ಸವ‘ವನ್ನು ಆಚರಿಸಲಾಯಿತು. ಸಮಾಜಕ್ಕೆ ಗುರುಕುಲದ ಪರಿಚಯವನ್ನು ಮಾಡಿಕೊಡಬೇಕೆನ್ನುವ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಯೋಜಸಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಸಂಪರ್ಕಕ್ಕೆ ಬಂದಿದ್ದು ಅವರೆಲ್ಲರಿಗೂ ಗುರುಕುಲದ ಪರಿಚಯವಾಯಿತು.

 ಪಾದಮಂಡಲೋತ್ಸವದ ನಂತರ ಗುರುಕುಲದ ಮಾರ್ಗದರ್ಶಕ ಮಂಡಳಿಯ ಹಿರಿಯರು ಮತ್ತು ಆಚಾರ್ಯ-ಮಾತೃಶ್ರೀಯವರು ಒಟ್ಟು ಸೇರಿ ಗುರುಕುಲ ಶಿಕ್ಷಣದ ಸಾಧನೆಯ ಮೈಲುಗಲ್ಲುಗಳ ಸಿಂಹಾವಲೋಕನವನ್ನು ಮಾಡಲಾಯಿತು. ಹಿರಿಯರೆಲ್ಲರ ಆಶಯದಂತೆ ಗುರುಕುಲ ಶಿಕ್ಷಣದ ಅವಧಿಯನ್ನು ಹನ್ನೆರಡು ವರ್ಷಗಳವರೆಗೆ ವಿಸ್ತರಿಸಬೇಕೆಂದು ನಿಶ್ಚಯಿಸಲಾಯಿತು. ಅದರಂತೆಯೇ ಅದಕ್ಕೆ ಬೇಕಾದ ಪಠ್ಯಕ್ರಮಗಳು, ಪಠ್ಯವಿಷಯಗಳು ಯೋಜನಾಬದ್ಧವಾಗಿ ರೂಪಿಸಲ್ಪಟ್ಟು ಈಗಲೂ ಮುಂದುವರೆಯುತ್ತಿವೆ.

 ವಿದ್ಯಾರ್ಥಿನಿಯರು ವಿರಾಮಕಾಲದಲ್ಲಿ ಮನೆಗಳಿಗೆ ಹೋದಾಗ ಅಲ್ಲಿಯ ಶಾಲೆಯ ವಿದ್ಯಾರ್ಥಿನಿಯರಿಗಾಗಿ, ಯೋಗ ಶಿಬಿರ, ಸಂಸ್ಕೃತ ಸಂಭಾಷಣಾ ಶಿಬಿರ, ವೇದಗಣಿತ ಶಿಬಿರ, ಬಾಲಗೋಕುಲ ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದರ ಮೂಲಕ ತಾವು ಗುರುಕುಲದಲ್ಲಿ ಕಲಿತಿದ್ದನ್ನು ಬೇರೆಯವರಿಗೆ ಕಲಿಸುತ್ತಾ ಸಮಾಜಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಕರ್ನಾಟಕದ ಅನೇಕ ಕಡೆಗಳಲ್ಲಿ ಯೋಜಿಸಲಾಗುವ ವೇದ ಶಿಕ್ಷಣ ಶಿಬಿರದ ಪೂರ್ಣ ಜವಾಬ್ದಾರಿಯನ್ನು ಇಲ್ಲಿಯ ಮಕ್ಕಳೇ ನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಶಿಬಿರಗಳಲ್ಲಿ ಶಿಕ್ಷಾರ್ಥಿಗಳಾಗಿ, ಶಿಕ್ಷಕಿಯರಾಗಿ ಭಾಗವಹಿಸುತ್ತಾ ಸಾಮಾಜಿಕ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ..

 ಗುರುಕುಲದ ಮೂಲ ಆಶಯ ಪ್ರತಿಯೊಂದು ಮನೆಯೂ ಪುಟ್ಟ ಗುರುಕುಲವಾಗಬೇಕೆನ್ನುವುದು. ಇದಕ್ಕೆ
ಪೂರಕವಾಗಿ ಗುರುಕುಲದ ಪೂರಕ ಪರಿಸರ ಮಕ್ಕಳಿಗೆ ಮನೆಯಲ್ಲೂ ಸಿಗಬೇಕು ಎನ್ನುವ ದೃಷ್ಟಿಯಿಂದ ವರ್ಷದಲ್ಲಿ ಎರಡು ಬಾರಿ ಪಾಲಕರ ಸಭೆಯನ್ನು ಯೋಜಿಸಲಾಗುತ್ತಿದ್ದು ಪಾಲಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಮನೆಗಳಲ್ಲೂ ಸಂಸ್ಕಾರಯುತ ವಾತಾವರಣವನ್ನು ತರಲು  ಪ್ರಯತ್ನಿಸುತ್ತಿದ್ದಾರೆ.

 ಪೂರ್ವ ಛಾತ್ರೆಯರ ಸಹಮಿಲನ ಕಾರ್ಯಕ್ರಮವು ಪ್ರತಿ ವರ್ಷವೂ ನಡೆಯುತ್ತಿದ್ದು ಹಿರಿಯರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಹಾಯಕವಾಗುತ್ತಿದೆ.

 ಮಕ್ಕಳ ಅವಲೋಕನ ಕ್ರಮದಲ್ಲಿ ಅನೇಕ ಪರಿಷ್ಕಾರಗಳಾಗಿದ್ದು ಶಲಾಕ ಪರೀಕ್ಷೆಯು ಹೊಸದಾಗಿ ಸೇರ್ಪಡೆಯಾಗಿದೆ. ಶಾಸ್ತ್ರೀಯ ಪರಂಪರೆಯಲ್ಲಿ ನಡೆದುಬಂದ ಪರೀಕ್ಷಾ ಪದ್ಧತಿ ಆಧುನಿಕ ಪರೀಕ್ಷಾ ಪದ್ಧತಿಗಿಂತ ವಿಭಿನ್ನ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಗುರುಕುಲದಲ್ಲಿ ಇತ್ತೀಚೆಗೆ ವಿನೂತನ ಪರೀಕ್ಷಾವಿಧಾನ ‘ ಶಾಸ್ತ್ರ ಪಾರಮ್ಯ ಪರೀಕ್ಷೆಯನ್ನು ಯೋಜಿಸಲಾಗಿದೆ.

 ಹೀಗೆ ವಿನೂತನ ಪ್ರಯೋಗವಾಗಿ ಪ್ರಾರಂಭಗೊಂಡ ಈ ಗುರುಕುಲ ಅನೇಕ ಏರುಪೇರುಗಳನ್ನು ದಾಟಿ ಮುಂದುವರೆಯುತ್ತಾ ತನ್ನ ಇಪ್ಪತ್ತನಾಲ್ಕು ವರ್ಷಗಳ ಸುದೀರ್ಘ ಪಯಣವನ್ನು ಮುಗಿಸಿ, ಭಾರತೀಯ ಪದ್ಧತಿಯಂತೆ ಈಗ ‘ಅರ್ಧಮಂಡಲೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದೆ.

 ಇಂದು ಗುರುಕುಲ ಶಿಕ್ಷಣದ ಅನಿವಾರ್ಯತೆ ಎಲ್ಲರಿಗೂ ಅರಿವಾಗುತ್ತಿದ್ದು, ಸಮಾಜದಿಂದ ಮಾನ್ಯತೆ ಸಿಗುವಂತಾಗಿದೆ. ಹಾಗಾಗಿ ನಾವು ಸಾಗುತ್ತಿರುವ ದಾರಿ ಸರಿಯಾಗಿದೆ ಎಂಬುದರ ಬಗ್ಗೆ ವಿಶ್ವಾಸ ಮೂಡುತ್ತಿದೆ. ಪ್ರಯೋಗಾತ್ಮಕ ರೀತಿಯಲ್ಲಿ ಪ್ರಾರಂಭಗೊಂಡ ಗುರುಕುಲವು ಈಗ ರಾಷ್ಟ್ರೀಯ ಸ್ತರದಲ್ಲಿ ನೈಜ ಶಿಕ್ಷಣದ ಮಾದರಿ ವ್ಯವಸ್ಥೆಯಾಗಿ ಗುರುತಿಸಿಕೊಂಡಿರುವುದು ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ನಮಗೆ ಪ್ರೇರಣೆ ನೀಡುವ ಸಂಗತಿಯಾಗಿದೆ. ಸಾಧಿಸಿದ್ದು ಅಲ್ಪ- ಸಾಧಿಸಬೇಕಾದುದು ಅಪಾರ ಎಂಬ ಅರಿವಿದೆ. ಸಾಧನೆಯ ಪಥದಲ್ಲಿ ಸಮಾಜ ಬಾಂಧವರ ಸಹಾಯ – ಸಹಕಾರವನ್ನು ಸದಾ ಆಶಿಸುವೆವು.

 

   

Leave a Reply