ಗುರುಮನೆಯ ದೀಪ ಬೆಳಗಿದಾತ

ಕಥೆಗಳು - 0 Comment
Issue Date : 30.10.2015

ಆ  ಹುಡುಗ ಈಗ ದಿಕ್ಕುತೋಚದಾಗಿದ್ದ. ಗುರುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ‘ನೀವು ಆಗಮಿಸುವವರೆಗೆ ಅಗ್ನಿ ಸಂರಕ್ಷಣೆಯ ಹೊಣೆ ನನ್ನದು, ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ’ ಆತ್ಮವಿಶ್ವಾಸ ದಿಂದ ನುಡಿದಿದ್ದ ಬಾಲಕ ಕಂಗಾಲಾಗಿದ್ದ. ಅಗ್ನಿಯ ಕಾಂತಿಯಿಲ್ಲದೆ ಆಶ್ರಮ ಮಂಕಾಗಿತ್ತು.
 ಆ ಕಾಲದಲ್ಲಿ ಪದ್ಧತಿ ಹಾಗಿತ್ತು. ಋಷ್ಯಾಶ್ರಮವೆಂದರೆ ಅಲ್ಲಿನ ಯಜ್ಞಕುಂಡ
ಸದಾ ಜ್ವಲಿಸುತ್ತಿರಬೇಕು. ಸಂಧ್ಯಾತ್ರಯದಲ್ಲೂ ತಪ್ಪದೇ ವಿವಿಧ ದ್ರವ್ಯ ಸಮಿತ್ತುಗಳಿಂದ ಹೋಮ ನಡೆಯಲೇಬೇಕು. ಅದು ತಪ್ಪುವಂತಿಲ್ಲ. ಅಗ್ನಿ ಆರಿದರೆ ಅನಾಹುತ ಖಂಡಿತ. ಈಗ ಆಶ್ರಮದಲ್ಲಿ ಅನಾಹುತ ಆಗಿಯೇಬಿಟ್ಟಿತ್ತು. ಯಜ್ಞಕುಂಡ ಶಾಂತವಾಗಿತ್ತು. ಗುರು ತನ್ನ ಶಿಷ್ಯನ ಮೇಲಿಟ್ಟ ವಿಶ್ವಾಸಕ್ಕೆ ಕುಂದುಂಟಾಗಿತ್ತು.
 ಆಗಿದ್ದಿಷ್ಟು. ಆ ಆಶ್ರಮದ ತಪಸ್ವಿ ತನ್ನ ತಮ್ಮ ಸುವರ್ಚಸ ಕೈಗೊಂಡ ಮಹಾಯಜ್ಞವೊಂದರಲ್ಲಿ ಭಾಗವಹಿಸಬೇಕಿತ್ತು. ಸುವರ್ಚಸನೂ ಮಹಾತಪಸ್ವಿ. ಆತ ಮಾಡುವ ಯಜ್ಞದಲ್ಲಿ ಸ್ವತಃ ದೇವತೆಗಳೇ ಪ್ರಕಟವಾಗಿ ಹವಿಸ್ಸನ್ನು ಪಡೆಯುವುದು ವಿಶೇಷ. ಆತ ಮಂತ್ರಸಿದ್ಧಋಷಿ. ತಾನು ಮಾಡುವ ಯಜ್ಞದಲ್ಲಿ ತನ್ನಣ್ಣನೂ ಭಾಗವಹಿಸಬೇಕೆಂದು ಆತನ ಅಪೇಕ್ಷೆ. ಹಾಗೆಂದೇ ತಾನೇ ಬಂದು ಆಹ್ವಾನಿಸಿದ್ದ. ದೀರ್ಘಕಾಲ ನಡೆವ ಯಜ್ಞದಲ್ಲಿ ಭಾಗವಹಿಸುವಾಗಿ ತನ್ನ ಶಿಷ್ಯನಿಗೆ ಆಶ್ರಮದ ಹೊಣೆ ಒಪ್ಪಿಸಿದ್ದ. ಆಗ ಆಗಿದ್ದು ಈ ಅನಾಹುತ.
 ಕೆಲದಿನ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಕುಶ, ಸಮಿತ್ತು ಸಂಗ್ರಹಿಸುವ ಕೆಲಸವೂ ಅವನದೇ. ಅಗ್ನಿಕುಂಡಕ್ಕೆ ಸಾಕಷ್ಟು ಸಮಿತ್ತು ಇಂಧನ ಪೇರಿಸಿಯೇ ಕಾಡಿಗೆ ಹೊರಟ. ನಿತ್ಯ ಸಂಧ್ಯಾತ್ರಯ ಹೋಮದ ವ್ಯವಸ್ಥೆಯನ್ನು ನೋಡಿಕೊಳ್ಳಲು ಮಿತ್ರನಿಗೆ ಹೇಳಿದ್ದ. ಕಾಡಿನಲ್ಲಿದ್ದಾಗ ಬಂದ ಬಿರುಮಳೆ ಗಾಳಿಗೆ ತತ್ತರಿಸಿದ. ಹಾಗಾಗಿ ಬರುವುದು ತಡವಾಗಿತ್ತು. ಇಲ್ಲಿ ಅಗ್ನಿ ಆರಿತ್ತು, ಗುರುವಿಗೆ ಎಸಗಿದ ಅಪಚಾರ ಮಾತ್ರವಲ್ಲ ವಿಶ್ವಸದ್ರೋಹದ ಪಾತಕವೂ ಸುತ್ತಿಕೊಂಡಿತು.
 ಗುರು ಹಿಂತಿರುಗುವಾಗ ಅಗ್ನಿ ಎಂದಿನಂತೆ ಇಲ್ಲದಿದ್ದರೆ ಶಾಪ ಖಂಡಿತ. ತನ್ನ ಈವರೆಗಿನ ಸಾಧನೆಯೆಲ್ಲಾ ಮಣ್ಣುಪಾಲು. ಏನು ಸಾಧಿಸಿದರೇನು ಗುರುವಿನ ನಂಬಿಕೆಗೆ ಚ್ಯುತಿ ಬಂದರೆ, ಮುಂದೆ ದಾರಿಯೇ ಇಲ್ಲ. ಈ ಜನ್ಮಕ್ಕೆ ಮಾತ್ರವಲ್ಲ ಜನ್ಮಜನ್ಮಾಂತರದವರೆಗೂ ಕ್ಷಯಿಸದ ಪಾಪ.
 ಗುರುವಿನ ಕೋಪದ ತಾಪ ತನ್ನ ಬದುಕನ್ನೇ ಸುಟ್ಟೀತು ಎಂದು ಬೆದರಿದ ಬಾಲಕ ಮಂಕಾಗಿ ಕುಳಿತ. ಅಷ್ಟರಲ್ಲಿ ಭಾರೀ ಸಿಡಿಲು – ಗುಡುಗು ಮಳೆ. ಆಗಸಕ್ಕೇ ರಂಧ್ರಬಿದ್ದಿದೆಯೋ ಎಂಬಂತೆ ಮುಸಲಧಾರೆ. ಇಡೀ ಆಶ್ರಮವೇ ಕೊಚ್ಚಿಹೋದೀತೆಂಬ ಭಯ. ‘ಭಗವಂತನೆಂದರೆ ಸರ್ವಶಕ್ತ. ಆತ ಒಲಿದರೆ ಏನು ಬೇಕಾದರೂ ಆದೀತು. ಮುನಿದರೆ ಏನೂ ಆದೀತು. ನಂಬಿದವರನ್ನೆಂದೂ ಕೈಬಿಡನು ಆತ’ ಅಧ್ಯಾಪನದ ನಡುವೆ ಗುರುಗಳು ಹೇಳಿದ ಮಾತು ನೆನಪಾಯಿತು. ಅವರದೋ ವಿಶ್ವಾಸ ತುಂಬಿದ ದನಿ. ಮತ್ತೆ ಮತ್ತೆ ಆದೇ ಮಾತು.. ಆಗ ತಾನೇ ಕೇಳಿದಂತೆ ಇತ್ತು. ಸರಿ.. ಅದನ್ನೇ ನಂಬಿ ನಡೆದರಾಯಿತೆಂದು ನಿರ್ಧರಿಸಿದ.
 ಮನಸ್ಸಿಗೆ ಧೈರ್ಯ ತುಂಬಿಕೊಂಡ. ಅದು ಸ್ವಲ್ಪ ಸಮಸ್ಥಿತಿಗೆ ಬರುತ್ತಲೇ ಅಗ್ನಿ ಸಂಬಂಧಿತ ಮಂತ್ರಗಳು ಒಂದೊಂದೇ ನೆನಪಿಗೆ ಬರತೊಡಗಿದವು. ರಾಹುಗಣ ಗೌತಮ ಋಷಿ ಕಂಡ ಮಂತ್ರ ‘ಏಹ್ಯಗ್ನ ಇಹ…’ ಥಟ್ಟನೆ ನೆನಪಾಯಿತು. ತನ್ನ ಗುರುಗಳು ಇದೇ ಮಂತ್ರದಿಂದ ಅಗ್ನಿಯನ್ನು ಆಹ್ವಾನಿಸುವ ಪರಿಯನ್ನಾತ ಕಂಡಿದ್ದ. ಜಾತವೇದ ಅಗ್ನಿಯೇ ದೇವತೆಯಾಗಿರುವ ಮಾರೀಚಕಶ್ಯಪ ಋಷಿ ಕಂಡ ‘ಜಾತವೇದಸೇ’ ಎಂಬ ಮಂತ್ರವೂ ನೆನಪಾಯಿತು.
 ಆ ಹುಡುಗನ ನಿರ್ಧಾರ ಕಂಡು ಇಂದ್ರ ವರುಣ ವಾಯು ಸುಮ್ಮನಾದರು. ಮಳೆಗಾಳಿ ನಿಂತಿತು. ಏಕೋಭಾವದಿಂದ ಒಂಟಿಕಾಲಲ್ಲಿ ನಿಂತು ಅಗ್ನಿಸೂಕ್ತಗಳನ್ನು ಹಾಡತೊಡಗಿದ. ಆತನ ಮನದಲ್ಲಿ ಮತ್ತೇನೂ ಸುಳಿಯದು. ‘ನಂಬಿ ಕರೆದರೆ ಬಂದೇ ಬರುವನು’ ಎಂಬ ಗುರುವಿನ ಧ್ವನಿ ಮತ್ತೆ ಮತ್ತೆ ಕೇಳಿಸಿತು. ಮನಸ್ಸು ನೆಲೆನಿಂತಿತು. ಭಕ್ತಿ ಬಲಿಯಿತು… ಒಮ್ಮೆಲೇ ಕಣ್ಣು ಕೋರೈಸುವ ಬೆಳಕು. ‘ಮಗೂ..’ ಎಂದಾಗಲೇ ಆತನಿಗೆ ಎಚ್ಚರ. ತನ್ನೆದುರಲ್ಲಿ ಅಗ್ನಿದೇವ! ಬಾಲಕ ಶಿರಬಾಗಿ ವಂದಿಸಿದ. ‘ನಿನಗೆ ಗೊತ್ತಲ್ಲ.. ನನಗೇನು ಬೇಕೆಂದು.. ಕರುಣಿಸು’ ಎಂದು ದಿಟ್ಟವಾಗಿ ನುಡಿದ. ತಕ್ಷಣ ಆಶ್ರಮದ ಯಜ್ಞಕುಂಡ ಪ್ರಜ್ವಲಿಸಿತು. ಅನ್ನ ನೀರಿಲ್ಲದೆ ಮಾಡಿದ್ದ ಕಠೋರ ತಪಕ್ಕೆ ಅಗ್ನಿ ಅನುಗ್ರಹಿಸಿದ್ದ.
 ‘ನಿನ್ನ ದೃಢಭಕ್ತಿ, ಗುರುನಿಷ್ಠೆಗೆ ಮನಸೋತೆ ನಾನು, ಮತ್ತೇನು ಬೇಕು ಕೇಳು ಕೊಡುವೆ’ ಎಂದ ಅಗ್ನಿಯ ಮಾತು ಕೇಳಿ ಆನಂದ ತುಂದಿಲನಾದ ಬಾಲಕ.
 ತನ್ನ ಗುರು ಸಂತಾನಕ್ಕಾಗಿ ಕಠಿಣ ತಪಗೈದರೂ ಸಫಲವಾಗದುದು ಆತನಿಗೆ ಗೊತ್ತಿತ್ತು. ಹಾಗೆಂದೇ ಅವರಿಗೆ ಪುತ್ರಸಂತಾನ ಕರುಣಿಸು ಎಂದಷ್ಟೇ ಬೇಡಿದ. ಗುರುಮನೆ ಬೆಳಗಿದರೆ, ತನ್ನ ಬದುಕೂ ಬೆಳಕಾಗುವುದೆಂದು ಭಾವಿಸಿದ್ದ ಈ ಶಿಷ್ಯ. ಅಗ್ನಿ ತಥಾಸ್ತು ಎಂದ. ಗುರುಭಕ್ತಿಯ ಮುಂದೆ ಆತ ಸೋತಿದ್ದ.
 ನಂದಿದ ಯಜ್ಞಕುಂಡದಲ್ಲೇ ಅಗ್ನಿ ಪ್ರತ್ಯಕ್ಷನಾಗುವಂತೆ ಮಾಡಿದ ಸಾಧಕ ಶಿಷ್ಯ ಶಾಂತಿ. ಆತನ ಗುರು ಭೂತಿ. ಅಗ್ನಿಯ ಅನುಗ್ರಹದಿಂದ ಜನಿಸಿದ ಭೂತಿಯ ಪುತ್ರನೇ ಭೌತ. ಮುಂದೆ ಮನ್ವಂತರಾಧಿಪನಾದವ.
 ‘ನನ್ನನ್ನು ಮೀರಿಸಿದ ಶಿಷ್ಯ ನೀನು’ ಗುರುಮನೆಯ ದೀಪ ಬೆಳಗಿದ ನಿನ್ನ ನೆನಪು ಮಾಡಿಕೊಂಡರೆ ಸಾಕು ಸಂತತಿ ವೃದ್ಧಿ ಆಗಲೆಂದು ಹಾರೈಸಿದ ಭೂತಿ.

   

Leave a Reply