ಗೋಲಿಯಾಟ-2

ಕ್ರೀಡೆ - 0 Comment
Issue Date : 18.11.2014

ಇದೊಂದು ಗುರಿ ಎಸೆತದ ಗೋಲಿಯಾಟ. ಗೋಲಿಗಳಿಂದ ಗೋಪುರ ಕಟ್ಟಬೇಕು, ಒಬ್ಬ ಆಟಗಾರ ತನ್ನಲ್ಲಿರುವ ಗೋಲಿಗಳನ್ನು ಹತ್ತಿರ ಹತ್ತಿರ ಸಾಲು ಜೋಡಿಸಿ ಗೋಪುರ ರಚಿಸಬೇಕು. ಅದರ ಸುತ್ತ ಒಂದು ವೃತ್ತ ಎಳೆಯಬೇಕು. ಉಳಿದ ಆಟಗಾರರು ಒಂದು ನಿರ್ದಿಷ್ಟ ದೂರದಲ್ಲಿ ನಿಂತು ಒಬ್ಬರಾದ ಮೇಲೊಬ್ಬರಂತೆ ಗೋಪುರದ ಕಡೆಗೆ ಗೋಲಿ ಹೊಡೆಯಬೇಕು. ಒಬ್ಬ ಆಟಗಾರ ಎಷ್ಟು ಬಾರಿಯಾದರೂ ಹೊಡೆಯಬಹುದು. ಆದರೆ ಒಮ್ಮೆ ಹೊಡೆಯುವುದಕ್ಕೆ ಒಂದು ಗೋಲಿಯನ್ನು ಗೋಪುರ ಜೋಡಿಸಿದವನಿಗೆ ಕೊಡಬೇಕು. ಆಟಗಾರ ಹೊಡೆದಾಗ ಗೋಲಿಗಳಿಗೆ ಏಟು ಬಿದ್ದು, ವೃತ್ತದ ಗೆರೆಯಿಂದ ಎಷ್ಟು ಗೋಲಿಗಳು ಹೊರಕ್ಕೆ ಬರುತ್ತವೋ, ಆ ಗೋಲಿಗಳೆಲ್ಲವೂ ಹೊಡೆದವನಿಗೆ ಸೇರುತ್ತದೆ. ಅವನ ಸರದಿ ಮುಗಿದ ನಂತರ ಪುನಃ ಗೋಪುರ ಕಟ್ಟಿ ಎರಡನೆಯ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು.
ಇದು ಇನ್ನೊಂದು ರೀತಿಯ ಗೋಲಿಯಾಟ. ವೃತ್ತದ ಗೋಲಿಯಾಟದಲ್ಲಿ ಮೂರು ಅಡಿ ಅಗಲದ ವೃತ್ತವನ್ನು ಬರೆಯಬೇಕು. ಅದರಲ್ಲಿ + ಆಕಾರದಲ್ಲಿ 12 ಗೋಲಿಗಳನ್ನು ಜೋಡಿಸಬೇಕು. ಸರದಿಯ ಪ್ರಕಾರ ಪ್ರತಿಯೊಬ್ಬ ಆಟಗಾರನೂ 12 ಅಡಿ ದೂರದಲ್ಲಿರುವ ಗೆರೆಯಿಂದ ಹಿಂದೆ ನಿಂತು ತನ್ನಲ್ಲಿರುವ ಗೋಲಿಯಿಂದ ವೃತ್ತದಲ್ಲಿರುವ ಗೋಲಿಗಳಿಗೆ ಒಂದು ಸಲ ಹೊಡೆಯಬೇಕು. ಎಷ್ಟು ಗೋಲಿಗಳು ವೃತ್ತದಿಂದ ಹೊರಗೆ ಬರುತ್ತವೋ ಅಷ್ಟನ್ನು ಅವನು ಗೆದ್ದ ಹಾಗೆ. 12 ಗೋಲಿಗಳು ವೃತ್ತದಿಂದ ಹೊರಗೆ ಬರುವವರೆಗೆ ಆಟ ಮುಂದುವರೆಯುತ್ತದೆ. ಹೆಚ್ಚು ಗೋಲಿಗಳನ್ನು ಯಾರು ಪಡೆಯುತ್ತಾರೋ ಅವನು ವಿಜಯಿ.
ಉಂಗುರದ ಗೋಲಿಯಾಟದಲ್ಲಿ ಸುಮಾರು 1 ಅಡಿ ಅಗಲದ ವೃತ್ತವನ್ನು ಎಳೆದು ಅದರೊಳಗೆ ಎಲ್ಲ ಆಟಗಾರರ ಒಂದೆರೆಡು ಗೋಲಿಗಳನ್ನು ಇರಿಸಬೇಕು. ಆ ವೃತ್ತದಿಂದ 6 ಅಡಿ ದೂರದಲ್ಲಿ ಇನ್ನೊಂದು ವೃತ್ತ ಹಾಕಬೇಕು. ಆಟಗಾರ ಎರಡನೇ ವೃತ್ತದ ಗೆರೆಯ ಮೇಲೆ ಕೈ ಊರಿಕೊಂಡು ಹೆಬ್ಬೆಟ್ಟು ಮತ್ತು ತೋರು ಬೆರಳುಗಳ ಸಹಾಯದಿಂದ ತನ್ನ ಗೋಲಿಯನ್ನು ಮಧ್ಯ ದೂರದಲ್ಲಿರುವ ಗೋಲಿಗಳತ್ತ ಹೊಡೆಯಬೇಕು. ಯಾವುದಾದರೂ ಗೋಲಿಗೆ ಏಟು ತಾಕಿದರೆ ಅದು ಈ ಆಟಗಾರನದಾಗುತ್ತದೆ. ಅವನು ತಾನು ಹೊಡೆದ ಗೋಲಿ ಬಿದ್ದಿರುವ ಸ್ಥಳದಿಂದ ಪುನಃ ಹೊಡೆಯಬಹುದು. ಆಟಗಾರ ಗೋಲಿಯಿಂದ ಹೊಡೆದಾಗ ಮಧ್ಯದಲ್ಲಿರುವ ಗೋಲಿಗೆ ಏಟು ಬೀಳದಿದ್ದರೆ ಅವನು ಆಟ ನಿಲ್ಲಿಸಬೇಕು. ಅವನು ಹೊಡೆದ ಗೋಲಿ ಎರಡು ವೃತ್ತದ ನಡುವೆ ಎಲ್ಲಿದ್ದರೂ ಅಲ್ಲಿಯೇ ಬಿಡಬೇಕು. ಏಕೆಂದರೆ ಮುಂದಿನ ಆಟಗಾರರು ಯಾರಾದರೂ ಅದರತ್ತ ಹೊಡೆಯಲು ಅಪೇಕ್ಷಿಸಬಹುದು. ಹಾಗೇ ಅಪೇಕ್ಷಿಸುವವನಿಗೆ ಒಂದು ಅವಕಾಶ ಕೊಡಬೇಕು. ಆಗ ಗೋಲಿಗೆ ಏಟು ತಗುಲಿದರೆ ಅದರ ಮಾಲೀಕ ಹೊಡೆದ ಆಟಗಾರನಿಗೆ ಒಂದು ಗೋಲಿ ಕೊಡಬೇಕು. ಗೋಲಿಯನ್ನು ಆಚೆಗೆ ತೆಗೆಯುವಂತಿಲ್ಲ. ವೃತ್ತದಲ್ಲಿರುವ ಗೋಲಿಗಳೂ ಮುಗಿಯುವರೆಗೆ ಆಟ ಮುಂದವರಿಯುತ್ತಿರುತ್ತದೆ.
ಹೀಗೆ ಹಲವಾರು ರೀತಿಯ ಗೋಲಿಯಾಟಗಳನ್ನು ಆಡಬಹುದು. ನಗರ ಪ್ರದೇಶಗಳಲ್ಲಿ ಕ್ರಿಕೆಟಿನ ಭರಾಟೆಯಲ್ಲಿ ಗೋಲಿಯಾಟಕ್ಕೆ ಗಮನ ಕಡಿಮೆಯಾಗುತ್ತಿರುವುದು ಕಾಲದ ಮಹಿಮೆ.
—–
ಚಿತ್ರದಲ್ಲಿರುವ ಆಕೃತಿಯ ಪ್ರತಿಯೊಂದು ಸಾಲಿನ ಬದಿಯ ಮಧ್ಯ ಚೌಕದ ಒಂದೊಂದು ಕಡ್ಡಿಯನ್ನು ತೆಗೆಯಿರಿ. ನಾಲ್ಕು ಬದಿಗಳಿಂದ 4 ಕಡ್ಡಿ ತೆಗೆದರೆ 5 ಚೌಕಗಳು ಉಳಿಯುತ್ತದೆ.
—–
ಇದೊಂದು ಸರಳ ಪ್ರಶ್ನೆ. ಇದಕ್ಕೆ ಸರಳ ಉತ್ತರ ಹುಡುಕಿ.
ತುಂಬಾ ಜನ ಊಟಕ್ಕೆ ಕುಳಿತಿದ್ದಾರೆ. ಮನೆಯ ಒಡತಿ ಬಾಳೆ ಎಲೆ ಹಾಕುತ್ತಿದ್ದಾಗ ಕೊನೆಗೆ ಒಂದು ಎಲೆ ಕಡಿಮೆ ಆಯಿತು. ಹಾಕಿದ ಎಲೆ ತೆಗೆದು ಒಂದೊಂದು ಎಲೆಯನ್ನು ಎರಡಾಗಿ ಸೀಳಿ, ಪುನಃ ಎಲೆ ಹಾಕಿದಾಗ, ಒಂದು ಸೀಳಿದ ಎಲೆ ಹೆಚ್ಚಾಯಿತು. ಹಾಗಾದರೆ ಊಟ ಮಾಡಲು ಇದ್ದ ಜನ ಎಷ್ಟು?
ಸರಳ ಉತ್ತರ ಹುಡುಕಲು ಸ್ವಲ್ಪ ಗಣಿತ ಉಪಯೋಗಿಸಿ

– ಶಿ.ನಾ. ಚಂದ್ರಶೇಖರ

   

Leave a Reply