ಗೋ ಸಮ್ಮೇಳನ ಸಮಾರೋಪ

ದಕ್ಷಿಣ ಕನ್ನಡ - 0 Comment
Issue Date : 17.02.2014

ಫೆ.15 ರಂದು ಬೆಳ್ತಂಗಡಿಯ  ಗುಂಡೂರಿ ಕಾವೇರಮ್ಮ ಅಮೃತಧಾರಾ ಗೋಶಾಲೆಯಲ್ಲಿ ಜನಜನನೀ ಗೋವಿನ ಉತ್ಸವ ಗೋ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ್ಯದ 1836 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸುಮಾರು 5 ಕೋಟಿ ರೂ. ನೆರವನ್ನು ನೀಡಲಾಗಿದ್ದು,. ಈ ಮೂಲಕ ಗೋವಿನ ಸಾಕಾಣಿಕೆಗೆ ಉತ್ತೇಜನ ನೀಡಲಾಗಿದೆ ಎಂದು ನುಡಿದರು.

 ಗೋವಿನ ಬಗ್ಗೆ ಗೌರವ ಮೂಡಿಸಬೇಕಾದ್ದು ನಮ್ಮ ಕರ್ತವ್ಯ. ಗೋ ಸಂಪತ್ತು ಇಲ್ಲದೆ ಮನುಷ್ಯನ ಬದುಕು ಸಾಧ್ಯವಿಲ್ಲ ಗೋವು ನಮ್ಮ ಬದುಕಿಗೆ ಪೂರಕವಾದ ಆರೋಗ್ಯ, ನೆಮ್ಮದಿಯನ್ನು ನೀಡಿದೆ. ಅದಕ್ಕಾಗಿ ಗೋವಿಗೆ ಕಾಮಧೇನು ಎಂಬ ಹೆಸರು ಬಂದಿದೆ. ವಿದೇಶದಲ್ಲಿ ಗೋವಿನ ಬಗ್ಗೆ ಪೂಜ್ಯತೆಯ ಭಾವ ಇಲ್ಲದಿದ್ದರೂ ನಮಗಿಂತ ಉತ್ತಮವಾಗಿ ಪ್ರೀತಿಯಿಂದ ಗೋವನ್ನು ಸಾಕುತ್ತಾರೆ. ಗೋವಿನ ಹಾಲು, ಹಾಲಿನ ಉತ್ಪನ್ನಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಗೋವಿನ ಅವಶ್ಯಕತೆ ಖಂಡಿತಾ ನಮಗೆ ಇದೆ ಎಂದ ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೂ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಗೋಶಾಲೆಗಳು ನಿಜವಾದ ದೇವಸ್ಥಾನಗಳು ಎಂದು ಅಭಿಪ್ರಾಯಪಟ್ಟ ಅವರು, ಅಡಿಕೆ ನಿಷೇಧದ ವಿರುದ್ದ ಕ್ಯಾಂಪ್ಕೋ ಹೋರಾಟ ಮಾಡುತ್ತಿದ್ದು, ಯಾವೂದೇ ಕಾರಣಕ್ಕೆ ಅಡಿಕೆ ನಿಷೇಧ ಮಾಡಲು ಬಿಡುವುದಿಲ್ಲ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿ, ನಾವು ಬದುಕಬೇಕು. ನಮ್ಮೊಂದಿಗೆ ಇತರ ಜೀವಿಗಳು ಬದುಕಬೇಕು ಎನ್ನುವುದು ಗೋ ಸಮ್ಮೇಳನದ ತತ್ವ. ಗೋವು ದೇವರು ಕೊಟ್ಟ ಅದ್ಭುತ ಸ್ವತ್ತು. ಅದನ್ನು ನಾವು ಉತ್ತಮವಾಗಿ ಉಪಯೋಗಿಸಬೇಕಾಗಿದೆ. ಗೋವು ತನ್ನ ಆಹಾರದ ದೋಷಗಳನ್ನು ತನ್ನ ಮಾಂಸಕ್ಕೆ ಅರ್ಪಿಸಿಕೊಂಡು ಉತ್ತಮ ಗುಣವನ್ನು ತನ್ನ ಉತ್ಪನ್ನದ ಮೂಲಕ ಮನಗೆ ನೀಡುತ್ತದೆ. ಹಾಗಾಗಿ ಗೋ ಮಾಂಸ ಭಕ್ಷಣೆ ರೋಗಕ್ಕೆ ಆಹ್ವಾನ ನೀಡಿದಂತೆ. ದೇವರು ಕೊಟ್ಟ ಗೋ ಸಂಪತ್ತನ್ನು ನಾವು ಸಾರ್ಥಕ ಪಡಿಸಬೇಕಾಗಿದೆ ಎಂದ ಅವರು, ಗೋ ಶಾಲೆಗಳು ಸಮಾಜದ ಸ್ವಾಸ್ಥ್ಯದ ಲಕ್ಷಣವಲ್ಲ. ಮನೆಮನೆಯಲ್ಲಿ ಗೋವು ಸಾಕಾವುದೇ ಸ್ವಾಸ್ಥ್ಯದ ಲಕ್ಷಣ. ತಾಜಾ ಹಾಲನ್ನು ಎಲ್ಲರೂ ಸೇವಿಸುವಂತಾಗಲು ಎಲ್ಲ ಮನೆಯಲ್ಲಿ ಗೋ ಸಾಕಾಣಿಕೆ ನಡೆಯಲಿ ಎಂದು ಆಶಿಸಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೇಟ್ನಾಯ, ಸಮ್ಮೇಳನ ಸಮಿತಿ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್ ಉಪಸ್ಥಿತರಿದ್ದರು.

70 ಹರೆಯದಲ್ಲೂ ಗೋ ಸಾಕಾಣಿಕೆ ನಡೆಸುತ್ತಿರುವ ಕೊಕ್ಕಡ ಪಟ್ಟೂರು ನಿವಾಸಿ ಪಾರ್ವತಿಯಮ್ಮ ಅವರನ್ನು ಸ್ವಾಮೀಜಿ ಗೌರವಿಸಿದರು.

 

   

Leave a Reply