ಗ್ರಾಮಸ್ಥರಿಗೆ ಕಾಣದ ನಕ್ಸಲರನ್ನು ಹುಡುಕುವ ಪೊಲೀಸರು!

ಕರ್ನಾಟಕ - 0 Comment
Issue Date : 10.09.2014

ಮುಂಡಗಾರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಒಂದು ಕುಗ್ರಾಮ.ಇಲ್ಲಿ ಸುಮಾರು 2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸುಮಾರು 100 ಮನೆಗಳಿವೆ. ಇಲ್ಲಿ ನೆಲೆಸಿರುವವರು ಬಹುತೇಕ ಗಿರಿಜನರು.ತಲತಲಾಂತರದಿಂದ ಇಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಾ ಇದ್ದರೂ ಈ ಗ್ರಾಮದ ನಾಗರಿಕರು ಸುಮಾರು 13 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಿದರೆ ಮಾತ್ರ ವಾಹನ ಸಂಪರ್ಕ ಪಡೆಯುವ ಅದೃಷ್ಟಶಾಲಿಗಳು! ತಾಲೂಕು ಕೇಂದ್ರದಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಈ ನಾಗರಿಕರ ಪಾಲಿಗೆ ಮೂಲಭೂತ ಸೌಕರ್ಯಗಳೆಂದರೆ ಮರೀಚಿಕೆಯೇ.ಆದರೆ ಈ ಗ್ರಾಮಸ್ಥರ ಪಾಲಿಗೆ ನಕ್ಸಲೀಯರ ಬೆಂಬಲಿಗರು ಎನ್ನುವ ಪಟ್ಟ ಅಂಟಿಸಿದ್ದಾರೆ ನಮ್ಮ ಪೊಲೀಸರು!
ಗ್ರಾಮದ ಜನರು ನಕ್ಸಲೀಯರ ಬೆಂಬಲಿಗರು ಎನ್ನುವ ತೀರ್ಮಾನಕ್ಕೆ ಬರಲು ಪೊಲೀಸರಿಗೆ ಇರುವ ಕಾರಣವೇನು ಎನ್ನುವುದು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು.ಇತ್ತೀಚಿನವರೆಗೂ ಗ್ರಾಮಸ್ಥರು ಯಾವುದೇ ಸೌಲಭ್ಯಗಳನ್ನೂ ಸರ್ಕಾರದಿಂದ ಬೇಡಿದವರಲ್ಲ.ಅವರ ಸ್ವಾಭಿಮಾನಿ ಜೀವನಕ್ಕೆ ಅಂತಹ ತುರ್ತು ಅಗತ್ಯವೂ ಇಲ್ಲ.ಆದರೆ ಈಚೆಗೆ ರಸ್ತೆ ಮುಂತಾದ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಮೂಡಿರುವ ಜಾಗೃತಿಯೇ ಇವರನ್ನು ನಕ್ಸಲೀಯ ಬೆಂಬಲಿಗರು ಎಂದು ಹಣೆಪಟ್ಟಿ ಕಟ್ಟಿಕೊಳ್ಳಬೇಕಾದ ಒತ್ತಡಕ್ಕೆ ಇವರನ್ನು ದೂಡಿಬಿಟ್ಟಿದೆ.ನಕ್ಸಲೀಯರಿಂದಾಗಿಯೇ ಗ್ರಾಮಸ್ಥರು ಮಾತನಾಡಲು ಆರಂಭಿಸಿದ್ದಾರೆ ಎನ್ನುವ ಗುಮಾನಿ ಪೊಲೀಸರಿಗೆ.ಹೀಗಾಗಿ ತಮ್ಮ ಮುಗ್ಧತೆಯನ್ನು ಅರ್ಥ ಮಾಡಿಕೊಳ್ಳದೇ ನಮಗೆ ನಕ್ಸಲರ ಬೆಂಬಲಿಗರು ಎಂದು ಹೇಳಿದರೆ ನಾವು ಅದನ್ನು ಹೇಗೆ ಒಪ್ಪುವುದು ಎಂದು ಗ್ರಾಮದ ಮುಖಂಡ ಪುಟ್ಟಪ್ಪ ಪ್ರಶ್ನಿಸುತ್ತಾರೆ.
ನಮ್ಮ ಗ್ರಾಮಕ್ಕೆ ಈವರೆಗೆ ಒಮ್ಮೆಯೂ ನಕ್ಸಲರು ಭೇಟಿ ನೀಡಿರುವ ಉದಾಹರಣೆ ಇಲ್ಲದಿದ್ದರೂ ಪೊಲೀಸರು ಮಾತ್ರ ಈ ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿಬಿಟ್ಟಿದ್ದಾರೆ.ಗ್ರಾಮದಲ್ಲೇ ಇರುವ ನಮಗೆ ಕಾಣದ ನಕ್ಸಲರು ಪೊಲೀಸರಿಗೆ ಮಾತ್ರ ಕಂಡಿರುವುದು ಸೋಜಿಗದ ಸಂಗತಿ ಎಂದು ಗ್ರಾಮಸ್ಥರು ಹೇಳುತ್ತಾರೆ.
ನಂತರ ಶುರುವಾಗಿದ್ದೇ ನಕ್ಸಲರಿಗೆ ಅಭಿವೃದ್ಧಿಯ ಪ್ಯಾಕೇಜ್ ದಂಧೆ. ಶೃಂಗೇರಿ ತಾಲೂಕಿನ ಕೆಲವು ಪುಢಾರಿಗಳಿಗೆ ನಕ್ಸಲರ ಪ್ಯಾಕೇಜ್ ಅಂದರೆ ಎಲ್ಲಿಲ್ಲದ ಒಲವು! ಅದಕ್ಕಾಗಿಯೇ ಗಿರಿಜನರ ಪುನರ್ವಸತಿ ಹೆಸರಿನಲ್ಲಿ ಅನೇಕ ಕಾರ್ಯಗಳು ದಾಖಲೆಯಲ್ಲಿ ಪೂರ್ಣಗೊಂಡಿವೆ!ಗಿರಿಜನರು ನೆಲೆಸಿರುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳು ಮಾತ್ರ ಎಲ್ಲೂ ಅಷ್ಟಾಗಿ ಕಾಣುವುದೇ ಇಲ್ಲ.ಇದು ಆ ಗ್ರಾಮಸ್ಥರಿಗೆ ತಟ್ಟಿರುವ ಶಾಪವೇ ಇರಬಹುದು!
ಮುಂಡಗಾರು ರೀತಿಯ ಅನೇಕ ಗ್ರಾಮಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.ಗಿರಿಜನರು ಅರಣ್ಯ ನಾಶ ಮಾಡುತ್ತಾರೆಂದೋ, ಅವರೆಲ್ಲಾ ನಕ್ಸಲರ ಬೆಂಬಲಿಗರು ಎಂದೋ ಅವರಿರುವ ಪ್ರದೇಶಗಳಿಂದ ಎತ್ತಂಗಡಿ ಮಾಡಿಸುವ ಯೋಚನೆಯನ್ನು ಸರ್ಕಾರದ ಕಿವಿಗೆ ತುಂಬಿದವರು ವಾಸ್ತವ ಚಿತ್ರಣ ಹೊರ ಪ್ರಪಂಚಕ್ಕೆ ತಿಳಿಯಲು ಆಸ್ಪದ ನೀಡುವುದೇ ಇಲ್ಲ.ಇದರಿಂದಾಗಿ ನಕ್ಸಲ್ ನಿರೋಧಿ ದಳದ ಪೊಲೀಸರ ನಿರಂತರ ಕಾಟ ಈ ಜನರಿಗೆ ತಪ್ಪಿದ್ದಲ್ಲ.ಅನೇಕರು ಪೊಲೀಸರ ಕಿರುಕಳ ತಪ್ಪಿಸಿಕೊಳ್ಳುವ ಸಲುವಾಗಿಯೇ ನಕ್ಸಲರ ಬೆಂಬಲಿಗರಾಗಬೇಕಾದ ಪರಿಸ್ಥಿತಿಯೂ ಇದೆ.ಅಂದರೆ ,ನಕ್ಸಲರಾದರೆ ಕಡೇ ಪಕ್ಷ ಅವರಲ್ಲಿ ನಾಯಕತ್ವವಿರುವುದರಿಂದ ಅದರಿಂದಾದರೂ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಕ್ಕೀತು ಎನ್ನುವ ಭ್ರಮೆಯಲ್ಲಿರುವವರೂ ಅಲ್ಲಲ್ಲಿ ಇದ್ದಾರೆ.
ಪ್ರಜ್ಞಾವಂತ ಜನಸಮುದಾಯವು ಸದಾ ಮುಂದಿಡುವ ಪ್ರಶ್ನೆ ಒಂದಿದೆ.ಯಾವುದೇ ಸೌಕರ್ಯಗಳಿಲ್ಲದೇ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬದಲು ಸರ್ಕಾರ ಒದಗಿಸುವ ಪುನರ್ವಸತಿ ಪ್ರದೇಶಕ್ಕೆ ತೆರಳುವುದು ಒಳ್ಳೆಯದು ಎನ್ನುವ ಮಾತು ಹೆಚ್ಚಿದೆ.ಗಿರಿಜನರ ಹೆಸರಿನಲ್ಲಿ ನಡೆಯುವ ರಾಜಕಾರಣಕ್ಕೆ ಮುಗ್ಧ ಗಿರಿಜನರೇಕೆ ಬಲಿಪಶುಗಳಾಗಬೇಕು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸರ್ಕಾರದಲ್ಲೂ ಇಲ್ಲ.ಸ್ಥಳೀಯ ಪುಢಾರಿಗಳ ಮಾತು ನಂಬಿ ಸರ್ಕಾರವೂ ಗಿರಿಜನರ ಸಲುವಾಗಿ ಮಾಡುವ ವೆಚ್ಚ ಕೂಡಾ ಯಾರದೋ ಜೇಬು ಸೇರುತ್ತಿದೆ.ಇದಕ್ಕಿಂತ ಈ ಗಿರಿಜನರು ಇರುವಲ್ಲೇ ಮೂಲಭೂತ ಸೌಕರ್ಯಗಳ ಜೊತೆಗೆ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಬೇಕು ಎನ್ನುವ ಕೂಗು ಈಗೀಗ ಈ ಪ್ರದೇಶಗಳಲ್ಲಿ ಹೆಚ್ಚಿದೆ.ಇದು ಸ್ಥಳೀಯ ರಾಜಕಾರಣಿಗಳ ಕೋಪಕ್ಕೂ ಕಾರಣವಾಗುತ್ತಿದೆ.
ನಾಗೇಶ್ ಅಂಗೀರಸ ಎನ್ನುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರ ನಿರಂತರ ಪರಿಶ್ರಮದಿಂದಾಗಿ ಈ ಭಾಗದ ಗಿರಿಜನರಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದರ ಜೊತೆಗೆ ಸ್ವಾವಲಂಬನೆಯ ಬದುಕಿನ ದಾರಿಗಳೂ ತೆರೆದುಕೊಳ್ಳುತ್ತಿವೆ.ಸರ್ಕಾರದ ಸೌಲಭ್ಯಕ್ಕಾಗಿ ಕಾಯದೇ ಸ್ಥಳೀಯರೇ ಬದುಕಿನ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಸಕಾರಾತ್ಮಕ ಪರಿವರ್ತನೆ ಇಲ್ಲಿ ಸಾಕಾರವಾಗುತ್ತಿದೆ.ಗಿರಿಜನರೇ ಸಹಕಾರ ಸಂಘಗಳ ಮೂಲಕ ಸಂಘಟಿತರಾಗಿ ಟವಲ್,ಕರವಸ್ತ್ರ ಮುಂತಾದ ನೇಯ್ಗೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.ಇದೇನೂ ಒಂದೆರಡು ದಿನಗಳಲ್ಲಿ ಆಗಿರುವ ಪರಿವರ್ತನೆ ಅಲ್ಲ. ನಾಗೇಶ್ ಅಂಗೀರಸ ತಮ್ಮಂತೆಯೇ ಸಾಮಾಜಿಕ ಕಳಕಳಿಯಿರುವ ಕೆಲವು ಉತ್ತಮ ಸಂಘಟಕರನ್ನು ಗುರ್ತಿಸಿ ಅವರ ಮೂಲಕ ಗಿರಿಜನರಿಗೆ ಶಕ್ತಿ ತುಂಬುತ್ತಿದ್ದಾರೆ.ಇದರಿಂದಾಗಿ ನಕ್ಸಲ್ ಪ್ರಭಾವಿತ ಪ್ರದೇಶಗಳೆಂದು ಗುರ್ತಿಸಿಕೊಂಡಿರುವ ಕಡೆಗಳಲ್ಲೂ ಜನರು ಹೆಚ್ಚು ಜಾಗೃತರಾಗುತ್ತಿದ್ದಾರೆ.ಸ್ವತಃ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೂಡಾ ಗಿರಿಜನರ ಸ್ವಾವಲಂಬಿ ಬದುಕಿಗೆ ಒತ್ತಾಸೆಯಾಗಿದ್ದಾರೆ. ಇವೆಲ್ಲವೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿವೆ ಎನ್ನುತ್ತಾರೆ ನಾಗೇಶ್.
ಪುನರ್ವಸತಿ ಹೆಸರಿನಲ್ಲಿ ಗಿರಿಜನರನ್ನು ಯಾವುದೋ ನಗರ ಪ್ರದೇಶಕ್ಕೆ ಸ್ಥಳಾಂತರ ಮಾಡುವುದು ಸಾಧನೆಯೇ ಅಲ್ಲ. ಅದರಿಂದ ಒಂದು ಸಂಸ್ಕೃತಿಯೇ ನಾಶವಾಗುತ್ತದೆ. ಗಿರಿಜನರಿಂದಾಗಿಯೇ ಇಂದು ಅರಣ್ಯ ಪ್ರದೇಶ ರಕ್ಷಣೆಯಾಗುತ್ತಿದೆ.ಏಕೆಂದರೆ ಅವರಿಗೆ ಯಾವುದೇ ದುರಾಸೆ ಇಲ್ಲ.ಎಷ್ಟು ಬೇಕೋ ಅಷ್ಟೇ ಬಳಕೆ ಮಾಡುವ ಗಿರಿಜನರ ಪರಿಸರ ಕಾಳಜಿ ಸರ್ಕಾರಕ್ಕೂ ಅರ್ಥವಾಗಿಲ್ಲ.ಇದರಿಂದಾಗಿ ಅರಣ್ಯ ರಕ್ಷಣೆಗೆ ಗಿರಿಜನರೇ ಮಾರಕವಾಗಿದ್ದಾರೆ ಎನ್ನುವ ಅಪಖ್ಯಾತಿ ಅಂಟಿದೆ.ಇದು ತಪ್ಪಬೇಕು ಎನ್ನುವುದು ನಾಗೇಶ್ ಅಂಗೀರಸ ಅವರ ನಿಲುವು.ಇದಕ್ಕಾಗಿ ಅವರು ಯಾವ ಫಲಾಪೇಕ್ಷೆ ಇಲ್ಲದೇ ಶ್ರಮಿಸುತ್ತಲೇ ಇದ್ದಾರೆ. ಹೊಸ ಹೊಸ ಸಂಘಟನೆಗಳನ್ನು ಈ ಕಾರ್ಯಕ್ಕೆ ಜೋಡಿಸುವ ಅವರ ಕಾಯಕ ಈಗಲೂ ಮುಂದುವರಿಯುತ್ತಲೇ ಇದೆ.ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕಾದ ಕೆಲಸ ನಮ್ಮದು.

– ಶಾಂತರಾಮ್.ಎಸ್ 

Leave a Reply