ಗ್ರಾಮ ಪಂಚಾಯತ್‍ : ಬಿಜೆಪಿ ಗುರಿ

ಚುನಾವಣೆಗಳು - 0 Comment
Issue Date : 29.05.2015

ಅಧಿಕಾರ ವಿಕೇಂದ್ರೀಕರಣ ಆದರೆ ಸಾಲದು. ಪ್ರಜಾವರ್ಗವು ರಾಜಕೀಯ ಪ್ರಣಾಳಿಕೆಯ ಒಳಮರ್ಮ ಮತ್ತು ತಿರುಳನ್ನು ಅರಿಯುವಂತಾದಾಗ ಅಧಿಕಾರ ವಿಕೇಂದ್ರೀಕರಣದ ಮಹತ್ವ, ಔಚಿತ್ಯ ಹಾಗೂ ಅಭಿವೃದ್ಧಿಯ ‘ಗತಿ’ ಪ್ರಭಾವ ಬೀರುವುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಪಕ್ಷ ಜಯ ಸಾಧಿಸಿದೆ. ರಾಜ್ಯ ಸರ್ಕಾರದ ಹಿಡಿತವೂ ಇತ್ತು. ಕರ್ನಾಟಕದಲ್ಲಿ ಅಧಿಕಾರ ಚಲಾಯಿಸುವ ಕಾಂಗ್ರೆಸ್ ಪಕ್ಷವು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಹಿನ್ನಡೆ ಅಥವಾ ಸೋಲನ್ನನುಭವಿಸಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ನೈಜ ಲಾಭವನ್ನು ಕರ್ನಾಟಕದ ಮತದಾರರು ಮೂರು ದಶಕಗಳ ಹಿಂದೆಯೇ ತಿಳಿದಿರುವರು! ಆಗ ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷವು ರಾಜ್ಯದ ಆಡಳಿತ ಪಕ್ಷವಾಗಿತ್ತು. ಸಾಕಷ್ಟು ಭಾ.ಜ.ಪ. ಹುರಿಯಾಳುಗಳು ಸ್ಥಾನವನ್ನು ಭದ್ರಗೊಳಿಸಿದ್ದರು. ಇದೀಗ ಕೇಂದ್ರ ಸರ್ಕಾರದಲ್ಲಿ ಭಾ.ಜ.ಪ. ಮೈತ್ರಿ ಪಕ್ಷದ ನಾಯಕರ ಧೋರಣೆ ಮತ್ತು ನಿರ್ವಹಣೆಯು ಕರ್ನಾಟಕದ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಮುನ್ನುಡಿ ಬರೆಯಲಿದೆ. ಮತದಾರರು ನೈಜ ಅಭಿವೃದ್ಧಿಯ ಕುರಿತು ಆಸಕ್ತರಾಗಿದ್ದಾರೆ. ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರದ ವಿಚಿತ್ರ ನಡೆ, ಭ್ರಷ್ಟ ಆಡಳಿತದ ಬಗ್ಗೆ ಈಗಾಗಲೇ ಗ್ರಾಮೀಣ ಮತದಾರರು ಕಾಂಗ್ರೆಸ್ ಸ್ವಹಿತಾಸಕ್ತಿಯ ವಿರುದ್ಧ ಸೆಟೆದು ನಿಂತಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭದ್ರ ಬುನಾದಿಯಾಗಿದೆ. ಮತದಾರರು ಈ ಚುನಾವಣೆಯಲ್ಲಿ ತೋರುವ ಬುದ್ಧಿವಂತಿಕೆ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆಯು ರಾಜ್ಯ ಸರ್ಕಾರಕ್ಕೆ ಪ್ರತ್ಯುತ್ತರ ನೀಡುವಂತಾಗುವುದು. ಎರಡು ವರ್ಷ ಕಾಲಾವಧಿಯ ಕಾಂಗ್ರೆಸ್ ಪಕ್ಷದ ಅಕ್ರಮ, ಅವ್ಯವಹಾರ, ಸ್ವಜನಪಕ್ಷಪಾತ ಪ್ರಕರಣಗಳ ವಿರುದ್ಧ ಜನ ಸಮುದಾಯದ ತೀವ್ರ ವಿರೋಧವು ಪ್ರಕಟಗೊಳ್ಳಲಿದೆ. ದ್ವಂದ್ವ ನೀತಿಗೆ ಗ್ರಾಮೀಣ ಜನ ಸಮುದಾಯವು ತತ್ತರಿಸಿದೆ. ವಿನಾಕಾರಣ ಸಮಾಜವನ್ನು ಒಡೆದು ಆಳುವ ನೀತಿಯನ್ನು ಖಂಡಿಸುವ ಮತದಾರರು ಭಾರತೀಯ ಜನತಾ ಪಕ್ಷದ ಶಕ್ತಿ ಸಂಘಟನೆಯ ಸ್ವರೂಪವನ್ನು ತೋರಿಸುವ ಲಕ್ಷಣಗಳು ಕಾಣುತ್ತಿವೆ. ಭಾ.ಜ.ಪ. ಕಾರ್ಯಕರ್ತರು ಪ್ರತಿಯೊಂದು ಮನೆಗೂ ತೆರಳಿ ದೇಶ ರಾಜಕಾರಣ, ರಾಜ್ಯ ರಾಜಕಾರಣ, ಗ್ರಾಮ ರಾಜಕಾರಣ ಮತ್ತು ಆಡಳಿತ ಧ್ಯೇಯ ಧೋರಣೆಯ ಎರಡೂ ಮಗ್ಗುಲುಗಳನ್ನು ತಿಳಿಹೇಳಬಲ್ಲರು. ಭಾ.ಜ.ಪ. ನಾಯಕರು ಗ್ರಾಮ ಗ್ರಾಮಗಳಲ್ಲಿ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಸಾಮರ್ಥ್ಯವನ್ನೂ ಮತದಾರರಿಗೆ ಮನವರಿಕೆ ಮಾಡಲು ಸಿದ್ಧರಾಗಿರುವರು. ‘ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಸಹಕಾರ ಮತ್ತು ದೇಶದ ಹಿತ ಕಾಪಾಡುವ ಸದುದ್ದೇಶ’ ಗ್ರಾಮ ಮಟ್ಟದಲ್ಲಿ ಹೊಸ ಚಿಂತನ ಮಂಥನ ಮಾಡಬಲ್ಲದು.
ಗ್ರಾಮ ಅಭಿವೃದ್ಧಿಗೆ ಹೊಸ ಸ್ಪರ್ಶ
ಹಳ್ಳಿಗಳ ಅಭಿವೃದ್ಧಿಗಾಗಿ ಸ್ಪಷ್ಟ ನೀಲಿನಕಾಶೆ ಹೊಂದಿದ ಯೋಜನೆಯ ಕಿರುಹೊತ್ತಿಗೆ ಎಲ್ಲಿಯೂ ಸಿಗುವುದಿಲ್ಲ. ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಿಸಲು ನೂರು ಸಲ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡುವ ಮೇಷ್ಟ್ರ ಶ್ರಮ ವ್ಯರ್ಥವಾಗುತ್ತಿದೆ. ಒಂದು ಬಡಾವಣೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಬೇಕಾದರೆ ಬೆವರಿಳಿಸುವ ಪಂಚಾಯಿತಿ ಅಭಿವೃದ್ಧಿ(?!) ಅಧಿಕಾರಿಯ ದೌಲತ್ತು ನೋಡಿ ರೊಚ್ಚಿಗೆದ್ದಿದ್ದಾರೆ. ಹಳ್ಳಿಯ ಜನ ಸಮುದಾಯ ಅಕ್ಷರಸ್ಥರಾಗಿದ್ದರೂ, ವಿದ್ಯಾಸಂಪನ್ನರಾಗಿದ್ದರೂ ಆಕ್ರೋಶ ವ್ಯಕ್ತಪಡಿಸುವುದಿಲ್ಲ. ತಾಳ್ಮೆಯಿಂದಿರುವರು ಅವರಿಗೆ ಸರ್ಕಾರದಿಂದ ದೊರಕುವ ಸವಲತ್ತು, ಯೋಜನೆ, ಸೌಲಭ್ಯಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇರುವುದಿಲ್ಲ. ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ದೊಡ್ಡ ನಾಯಕರು, ಸಣ್ಣ ಪುಡಾರಿಗಳು ಆಶ್ವಾಸನೆ ನೀಡುವುದಿದೆ. ಗೆದ್ದ ಸದಸ್ಯ ಎಂದೂ ಆ ಕಡೆ ನೋಡುವುದಿಲ್ಲ! ತನ್ನ ಕುಟುಂಬದವರಿಗೆ, ಆಪ್ತರಿಗೆ, ಹಿಂಬಾಲಕ ಪುಡಾರಿಗಳಿಗೆ ಸೈಟ್ ಕೊಡಬಹುದಷ್ಟೇ!!
ಈಗ ಹಳ್ಳಿಯ ಮತದಾರರಿಗೆ ಸುವರ್ಣಾವಕಾಶ ದೊರೆತಿದೆ. ಮುಂದಿನ ಐದು ವರ್ಷಗಳ ಅವಧಿಗೆ ಪ್ರತಿಯೊಂದು ಬಡಾವಣೆಗೆ (ವಾರ್ಡ್‌ಗೆ) ‘ಸಮರ್ಥ – ಧಿೀರ – ಸಜ್ಜನ’ ವ್ಯಕ್ತಿಯ (ಪುರುಷ / ಮಹಿಳೆ) ಆಯ್ಕೆ ನಿರ್ಣಾಯಕವಾಗಿರುವುದು. ಶೇ.30ರಷ್ಟು ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಹಳ್ಳಿಗಳಿಗೆ ತಲುಪುತ್ತಿಲ್ಲ. ಪ್ರಧಾನಿಯಾಗಿ ಅಟಲ್ ಬಿಹಾರಿ ವಾಜಪೇಯಿಯವರು ಗ್ರಾಮೀಣ ಜನತೆ ರಸ್ತೆ – ನೀರು – ಮಾರುಕಟ್ಟೆ – ಉದ್ಯೋಗ ಕಲ್ಪಿಸುವ ಕನಸನ್ನು ನನಸಾಗಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಸಂಪುಟದ ಸದಸ್ಯರಿಗೆಲ್ಲರಿಗೂ ‘ಹಳ್ಳಿಯತ್ತ ತಿರುಗಿ ನೋಡಿ’ ಎಂಬ ಸಂದೇಶ ರವಾನಿಸಿದ್ದಾರೆ. ಶೇ. 70ರಷ್ಟು ಶಾಸಕರು, ಲೋಕಸಭಾ ಸದಸ್ಯರು, ಅಧಿಕಾರಿವರ್ಗದವರು ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರು. ವಿಪರ್ಯಾಸವೆಂದರೆ ಅವರು ಅಧಿಕಾರದ ಕುರ್ಚಿಯಲ್ಲಿ ಸುಖಾನುಭವ ಪಡೆದ ಬಳಿಕ ಹಳ್ಳಿಯತ್ತ ದೃಷ್ಟಿ ಹಾಯಿಸುವುದಿಲ್ಲ.
ಗ್ರಾಮೀಣ ಪ್ರದೇಶವು ರಾಜ್ಯದ ಸಂಪನ್ಮೂಲದ ಖಜಾನೆ. ಕೃಷಿ ಭೂಮಿಯಲ್ಲಿ ಬೆಳೆದ ಉತ್ಪನ್ನಗಳು ಹಸಿವನ್ನು ನೀಗಿಸುತ್ತವೆ ಮತ್ತು ಆರ್ಥಿಕ ಆದಾಯ ಮೂಲವಾಗಿವೆ. ಕೃಷಿಗಾಗಿ ನೆರವು, ನೀರಾವರಿ ಸೌಲಭ್ಯ, ವಿದ್ಯುತ್, ಬಡ್ಡಿರಹಿತ ಸಾಲ, ಮಾರುಕಟ್ಟೆ ವ್ಯವಸ್ಥೆ, ಮಕ್ಕಳಿಗೆ ಉತ್ತಮ ಶಿಕ್ಷಣ, ವೈದ್ಯಕೀಯ ಉಪಚಾರ – ಅತೀ ಅವಶ್ಯವೆನಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಎಂಬುದು ಮಾನವ ಸಂಪನ್ಮೂಲ ಕ್ರೋಢೀಕರಿಸುವ ಬಹುವಿಧ ವಿಭಾಗವಾಗಿದೆ. ಭಾ.ಜ.ಪ. ಸದಸ್ಯರು, ನಾಯಕರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಡೆಗಣಿಸಬಾರದು. ಒಂದೊಂದು ಗ್ರಾಮವೂ ಅಭಿವೃದ್ಧಿಯ ಮುನ್ನಡೆ ಸಾಧಿಸುವಂತೆ ಉತ್ತಮ ಜನಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆಯ ಕಣದಲ್ಲಿ ಹುರಿಯಾಳಾಗಿ ನಿಯೋಜಿಸಬೇಕಾಗಿದೆ. ಕೇಂದ್ರ ಸರ್ಕಾರದಲ್ಲಿ ಅತ್ಯಪೂರ್ವ ಬೆಳವಣಿಗೆ ಕಂಡುಕೊಳ್ಳಲು ಹಳ್ಳಿಗರ ಬೆಂಬಲವನ್ನು ಪಡೆಯಬೇಕಲ್ಲವೇ? ನೆನೆಗುದಿಗೆ ಬಿದ್ದಿರುವ ಹತ್ತಾರು ಯೋಜನೆಗಳು ಒಂದೆರಡು ವರ್ಷಗಳೊಳಗೆ ಅನುಷ್ಠಾನಗೊಳ್ಳುವಂತೆ ಮತದಾರರಿಗೆ ಜಾಗೃತಿ, ತಿಳಿವಳಿಕೆ ಮೂಡಿಸಬೇಕು.
ಬಿಜೆಪಿ ಆಶಯ
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾದ ಹಲವಾರು ‘ಜನಸ್ನೇಹಿ’ ಯೋಜನೆಗಳನ್ನು ರೂಪಿಸಬೇಕು. ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕುವ ವಿಚಾರಗಳನ್ನು ಮನನ ಮಾಡಿಸಬೇಕು. ಉತ್ತರ ಕರ್ನಾಟಕದ ಬೀದರ್, ರಾಯಚೂರು, ಕಲಬುರ್ಗಿ, ವಿಜಯಪುರ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಪಶು ಚಿಕಿತ್ಸಾಲಯ, ನೀರಾವರಿ ಕಾಲುವೆ – ಕೆರೆ ಅಭಿವೃದ್ಧಿ, ರೈತರಿಗೆ ಕೃಷಿ ಮಾರ್ಗದರ್ಶನ, ಸಂಪರ್ಕ ಕೇಂದ್ರ, ಕಿರು ಗುಡಿ ಕೈಗಾರಿಕಾ ಘಟಕ ಮುಂತಾದ ವಿಚಾರದಲ್ಲಿ ತಿಳಿಹೇಳಬೇಕು. ಹಳ್ಳಿಯಲ್ಲಿ ಈಗ ರಾಜಕೀಯ ಪ್ರಜ್ಞೆ ಇದೆ. ಸಮಗ್ರ ಅಭಿವೃದ್ಧಿಗಾಗಿ ರಾಜಕೀಯ ಇಚ್ಛಾಶಕ್ತಿ ಹೊಂದಿರುವ ಪುರುಷ – ಮಹಿಳಾ ಅಭ್ಯರ್ಥಿಗಳ ಆಯ್ಕೆ ಗಮನಾರ್ಹವಾಗಿರುತ್ತದೆ. ಮಹಾತ್ಮಾ ಗಾಂಧಿೀಜಿ, ವಿನೋಬಾ ಭಾವೆ ಹಳ್ಳಿಗರ ಮಧ್ಯೆ ಸ್ವಾತಂತ್ರ್ಯದ ಕನಸು ಕಂಡಿದ್ದರು! ಕರ್ನಾಟಕದಲ್ಲಿ ಅಭಿವೃದ್ಧಿಗಾಗಿ ಯೋಜನೆಗಳಿವೆ, ಸಾಕಷ್ಟು ಅನುದಾನವೂ ದೊರಕುತ್ತದೆ. ಆದರೆ ವಾರ್ಡ್ – ವಾರ್ಡ್‌ಗೆ ತಲುಪಿಸುವ ಪ್ರಾಮಾಣಿಕ ಯತ್ನ ಆಗಿಲ್ಲ.
ಉತ್ತಮ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದರೂ, ಪ್ರಾಮಾಣಿಕ ನಿಷ್ಠಾವಂತ ಜನಪ್ರತಿನಿಧಿಗಳು ವಿರಳವಾಗಿರುವುದರಿಂದ ರಾಜ್ಯ ಕೇಂದ್ರ ಸರ್ಕಾರದ ಪ್ರಾಸ್ತಾವಿಕ ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಲಾಗುತ್ತಿಲ್ಲ. ಮಲೆನಾಡು ಪ್ರದೇಶದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿಯ ಮಂಗಳೂರು, ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸಾಂಗವಾಗಿ ಅನುಷ್ಠಾನಗೊಳಿಸಲು ಭಾ.ಜ.ಪ. ಜಿಲ್ಲಾ ಘಟಕಗಳು ಹೊಸ ಸ್ಪರ್ಶ ನೀಡಬೇಕಾಗಿದೆ. ಸ್ವಸಹಾಯ ಗುಂಪುಗಳ ಸದಸ್ಯರು ಪ್ರಗತಿಯ ಕನಸು ಕಂಡವರು. ಮಡಿಕೇರಿ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಕೋಲಾರ, ಬೆಂಗಳೂರು ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳ ಸಮುದಾಯ ಈಗ ಚುನಾವಣೆಯನ್ನು ಕಡೆಗಣಿಸಬಾರದು. ಅವಕಾಶ ವಂಚಿತರಾಗಲೂ ಬಾರದು.
ಕರ್ನಾಟಕ ಪಂಚಾಯತ್‌ರಾಜ್ ವ್ಯವಸ್ಥೆಗೆ ವಿಶೇಷ ಮನ್ನಣೆ ಇದೆ. ಭಾರತೀಯ ಜನತಾ ಪಕ್ಷದ ಘಟಕಗಳು ಲಕ್ಷಾಂತರ ಸದಸ್ಯರನ್ನು ಹೊಂದಿವೆ. ಗ್ರಾಮೀಣ ಪ್ರದೇಶದಲ್ಲಿ ‘ಹಿಂದುಳಿದ ಭಾಗವಾಗಿದ್ದೇವೆ’ ಎಂಬ ಕೊರಗು ಇದೆ. ‘ನಮ್ಮನ್ನು ಕಡೆಗಣಿಸಿರುವ ಸರ್ಕಾರವು ಸರಿಯಾಗಿ ಅನುದಾನ ಒದಗಿಸುತ್ತಿಲ್ಲ’ ಎಂಬ ಆರೋಪವೂ ಇದೆ. ‘ಸ್ಮಾರ್ಟ್ ಹಳ್ಳಿ’ ಏಕಾಗಬಾರದು ಎನ್ನುವ ಯುವ ಮತದಾರರು ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮುಂದಿನ ಪೀಳಿಗೆಯವರು ಶಪಿಸುವಂತಾಗ ಬಾರದು. ನೆಲ – ಜಲ ರಕ್ಷಿಸುವ ಜವಾಬ್ದಾರಿ ಇದೆ. ಹಳ್ಳಿಗರ ಬದುಕು ಬಂಗಾರ ವಾಗಲಿ ಎಂಬ ಭಾ.ಜ.ಪ. ಆಶಯ ಫಲ ನೀಡಲಿ.
ಮತದಾನ ಮೂಲಭೂತ ಹಕ್ಕು ಮತ್ತು ಕರ್ತವ್ಯ ಎಂಬ ಮರ್ಮವನ್ನು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿ, ಸಂಕಷ್ಟ – ಸಮಸ್ಯೆ ತೊಲಗಿಸುವ ಸ್ವಚ್ಛತೆ ಕಾರ್ಯ ವನ್ನು ಭಾರತೀಯ ಜನತಾ ಪಕ್ಷವು ನೆರವೇರಿಸುವಂತಾಗಬೇಕು.

– ಡಾ. ಎಸ್.ಎನ್. ಅಮೃತ ಮಲ್ಲ

   

Leave a Reply