ಚಂದನದ ಕರಂಡಕ ಮತ್ತು ಕಶ್ಯಪ

ಕಥೆಗಳು - 0 Comment
Issue Date : 18.04.2016

ಪಾಟಲೀ ಪುತ್ರ ನಗರದಲ್ಲಿ ಆದಿತ್ಯನೆಂಬ ಗೃಹಸ್ಥನಿದ್ದನು. ಆತನ ಬಳಿ ಬೆಲೆಬಾಳುವ ಒಂದು ಅಮೂಲ್ಯವಾದ ಚಂದನದ ಕರಂಡಕವಿದ್ದಿತು. ಆತನಿಗೆ ಆ ಕರಂಡಕದ ಬಗ್ಗೆ ವೈರಾಗ್ಯ ಮೂಡಿತು. ಅದನ್ನು ಪುರಜನರಿಗೆ ಯಾರಿಗಾದರೂ ಕೊಡೋಣವೆಂದುಕೊಂಡನು. ಅದಕ್ಕಾಗಿ ಒಂದು ಪರೀಕ್ಷೆಯನ್ನೂ ಇಟ್ಟನು. ಅದೇನೆಂದರೆ….
ಆ ಚಂದನದ ಕರಂಡಕವನ್ನು ಒಂದು ಎತ್ತರವಾದ ಕಂಬದ ತುದಿಯಲ್ಲಿಟ್ಟು ಅದರ ಕೆಳಗೆ ‘ಯಾರು ಏಣಿಯಿಂದ ಈ ಕಂಬವನ್ನು ಹತ್ತದೆ, ಅಥವಾ ಉದ್ದವಾದ ಕೋಲಿನ ಸಹಾಯವಿಲ್ಲದೆ ಅಥವಾ ಕಂಬವನ್ನು ಏರದೆ, ಕೇವಲ ಯಕ್ಷಿಣಿ ಮಂತ್ರ ಶಕ್ತಿಯಿಂದ ಈ ಕರಂಡಕವನ್ನು ತೆಗೆದುಕೊಳ್ಳುತ್ತಾರೋ ಅವರಿಗೆ ಅದು ಬಹುಮಾನವಾಗಿ ಸಿಗುವುದು’ ಎಂದು ಬರೆಸಿದನು.
ಅದೇ ದಿನ ಪಾಟಲೀಪುತ್ರದ ಬೀದಿಗಳಲ್ಲಿ ಭಿಕ್ಷುಗಳು ಭಿಕ್ಷಾಟನೆ ಮಾಡುತ್ತಾ ನಡೆದಿದ್ದರು. ಅವರಲ್ಲಿ ಕಶ್ಯಪ ಎನ್ನುವ ಭಿಕ್ಷು ಆದಿತ್ಯ ಬರೆಸಿದ್ದನ್ನು ನೋಡುತ್ತಾ ನಿಂತನು. ಆ ಘಳಿಗೆಯಲ್ಲಿ ಅವನ ಮನಸ್ಸು ಚಂದನದ ಕರಂಡಕದ ಕಡೆಗೆ ಆಕರ್ಷಿತವಾಯಿತು. ಅದನ್ನು ಪಡೆಯಬೇಕೆಂದುಕೊಂಡ. ಕಂಬದ ತುದಿಯಲ್ಲಿ ಕಟ್ಟಿದ್ದ ಕರಂಡಕವನ್ನು ತನಗೆ ಗೊತ್ತಿದ್ದ ಯಕ್ಷಿಣಿ ವಿದ್ಯೆಯನು ಉಪಯೋಗಿಸಿ ತೆಗೆದುಕೊಂಡನು.
ಕಶ್ಯಪನಿಗೆ ಆ ಕರಂಡಕದ ಮೇಲೆ ಅತಿ ಮೋಹವುಂಟಾಯಿತು. ಅದರ ಬಣ್ಣ, ಅದರ ಒಳಗೆ ಹೊರಗಿನ ಚಿತ್ತಾರ, ಅದರ ಗಾತ್ರ, ಆಕಾರ ಬಹು ಆಕರ್ಷಕವಾಗಿದ್ದಿತು. ಅದನ್ನೇ ನೋಡುತ್ತಾ ಕುಳಿತಿದ್ದನು.
ಸಂಜೆ ಎಲ್ಲಾ ಭಿಕ್ಷುಗಳೂ ಪ್ರಾರ್ಥನಾ ಮಂದಿರದಲ್ಲಿ ಸೇರಿದ್ದರು. ಕಶ್ಯಪನು ಬರುವುದು ಸ್ಪಲ್ಪ ತಡವಾಯಿತು. ಕರಂಡಕದ ಮೋಹದಲ್ಲೇ ಇದ್ದನು. ಅಮೂಲ್ಯವಾದ ಆ ವಸ್ತುವನ್ನು ತನ್ನ ಪೂಜ್ಯಗುರುಗಳಾದ ಬೋಧಿಸತ್ವನಿಗೆ ಸಮರ್ಪಿಸುವುದೇ ಅವನ ನಿರ್ಧಾರವೂ ಆಗಿದ್ದಿತು.
ಪ್ರಾರ್ಥನೆಯನ್ನು ಮುಗಿಸಿ ಎಲ್ಲರೂ ಹೊರಟು ಹೋದರು. ಕಶ್ಯಪನೊಬ್ಬನೇ ಕುಳಿತನು. ಬುದ್ಧನು ಕಶ್ಯಪನನ್ನು ಕೇಳಿದನು. ‘‘ನೀನು ಯಕ್ಷಿಣಿ ವಿದ್ಯೆಯನ್ನು ಕಲಿತಿರುವೆಯಾ?’’ ಅದಕ್ಕೆ ಕಶ್ಯಪನು ಹೌದು ಕಲಿತಿದ್ದೇನೆ. ಅದಕ್ಕೆ ಬುದ್ಧ ಸೌಮ್ಯವಾಗಿ ಕೇಳಿದ-
‘‘ನೀನು ಆ ಚಂದನದ ಕರಂಡಕವನ್ನು ತೆಗೆದುಕೊಂಡದ್ದು ಏಕೆ?’’
‘‘ಅದನ್ನು ತೆಗೆದುಕೊಳ್ಳಬಹುದೆಂದು ಬರೆದಿದ್ದಿತು.’’
‘‘ಸರಿ ಕಶ್ಯಪ, ಆದರೆ ಅದರ ಅಗತ್ಯ ನಿನಗೆ ಇತ್ತೆ?’’
‘‘ಇಲ್ಲ ಭಗವಾನ್’’ ಬುದ್ಧನು ಮುಂದುವರಿಸಿದ, ನೀನು ಎಲ್ಲಾ ವಾಸನೆಗಳಿಂದ, ವ್ಯಾಮೋಹದಿಂದ ಬಿಡುಗಡೆ ಹೊಂದಿರುವ ಭಿಕ್ಷು. ನಿನಗೆ ಅಗತ್ಯವಿಲ್ಲದಿರುವ ಸಂಪತ್ತನ್ನು ಪಡೆಯುವುದಕ್ಕೆ ನಿನ್ನ ಯಕ್ಷಿಣಿ ವಿದ್ಯೆಯನ್ನು ಉಪಯೋಗಿಸಿಕೊಂಡೆ. ಆಗ ನಿನ್ನ ಮನಸ್ಸು ಆಸೆಯಿಂದ ದುರ್ಬಲವಾಗಿದ್ದಿತು. ಇಂಥಹದೇ ಇನ್ನೊಂದು ದುರ್ಬಲ ಘಳಿಗೆಯಲ್ಲಿ ಭೋಗವಸ್ತುಗಳನ್ನು ನಿನ್ನ ಯಕ್ಷಿಣಿ ವಿದ್ಯೆಯಿಂದ ಪಡೆಯುತ್ತೀಯಲ್ಲವೇ?
ಕಶ್ಯಪ ತಲೆತಗ್ಗಿಸಿದ. ತನ್ನ ತಪ್ಪಿನ ಅರಿವಾಗಿದ್ದಿತು. ಕಶ್ಯಪನೆಂದ ‘‘ಪೂಜ್ಯರೇ ಅದನ್ನು ತಮ್ಮ ಪದತಲದಲ್ಲಿ ಅರ್ಪಿಸಲು ತಂದಿದ್ದೇನೆ’’ ಎಂದನು. ಬುದ್ಧನು ತಾಳ್ಮೆಯಿಂದ ‘‘ನೀನು ಒಂದು ಪ್ರಮಾದದ ಜೊತೆಗೆ ಮತ್ತೊಂದನ್ನು ಸೇರಿಸಲು ಹೊರಟಿದ್ದೀಯಾ. ಈಗಲೇ ಈ ಕರಂಡಕವನ್ನು ತೆಗೆದುಕೊಂಡು ಹೋಗಿ ದೂರದ ಶಾಲ್ಮಲೀ ನದಿಯಲ್ಲಿ ಎಸೆದು ಬಾ. ಜೊತೆಯಲ್ಲಿಯೇ ನಿನ್ನ ಮಂತ್ರ ಶಕ್ತಿಯನ್ನೂ ಸಹ.’’ ಎಂದನು.
ನಂತರ ಬುದ್ಧನು ಎಲ್ಲರನ್ನೂ ಉದ್ದೇಶಿಸಿ ‘ಯಾರು ಇಲ್ಲಿಗೆ ಭಿಕ್ಷುಗಳಾಗಿ ಬರುವರೋ ಅವರು ಅತೀಂದ್ರಿಯ ಶಕ್ತಿಯನ್ನು ಉಪಯೋಗಿಸುವಂತಿಲ್ಲ. ಅಂತಹವರಿಗೆ ಪ್ರವೇಶವಿಲ್ಲ’ ಎಂದುಬಿಟ್ಟನು.
ಭಿಕ್ಷುವಿಗೆ ಯಕ್ಷಿಣಿ ಸಲ್ಲ. ಸರಳತೆಯೇ ನಮ್ಮ ಸ್ವಭಾವ ಆಗಿರಬೇಕು.

   

Leave a Reply