ಚದುರಂಗದ ಹಾಸು

ಕ್ರೀಡೆ - 0 Comment
Issue Date : 26.11.2014

ಹಿಂದಿನ ವಾರದಲ್ಲಿ ಮೈದಾನದಲ್ಲಿ ಆಡುವ ಗೋಲಿಯಾಟದಲ್ಲಿ ಕೆಲವು ಮಜಲುಗಳನ್ನು ಪರಿಚಯ ಮಾಡಿಕೊಂಡೆವು. ಈ ವಾರದಲ್ಲಿ ನಮ್ಮ ದೇಶದ್ದೇ ಆದ ಪುರಾತನ ಒಳಾಂಗಣ ಆಟ ‘ಚದುರಂಗ’ದ ವಿವಿಧ ನಡೆಗಳ ಪರಿಚಯ ಮಾಡಿಕೊಳ್ಳೋಣ.
ಚದುರಂಗದ ಹಾಸು ಒಂದು ಯುದ್ಧಭೂಮಿಯಂತೆ. ಅದರ ಕಾಯಿಗಳೇ ಸೈನ್ಯವಿದ್ದ ಹಾಗೆ. ಆ ಸೈನ್ಯದಲ್ಲಿ ರಾಜ, ಮಂತ್ರಿಯೊಂದಿಗೆ ಕುದುರೆ, ಆನೆ, ಒಂಟೆ, ಪದಾತಿಗಳ ಸೈನ್ಯವಿರುತ್ತದೆ. ಈ ರೀತಿಯ ಎರಡು ಸೈನ್ಯಗಳ ನಡುವೆ ಯುದ್ಧ ನಡೆಯುತ್ತದೆ. ಈ ಯುದ್ಧರೀತಿಯ ಆಟವನ್ನು ನಡೆಸುವವರು ಇಬ್ಬರು ಆಟಗಾರರು. ಯಾರ ಕಡೆಯ ರಾಜ ಸೋಲುತ್ತಾನೋ ಆ ರಾಜನ ಕಡೆಯ ಆಟಗಾರ ಸೋಲುತ್ತಾನೆ. ಆಟವನ್ನು ನೋಡಿದರೆ ತುಂಬಾ ಸರಳವೆನಿಸಿದರೂ ಆಟದ ಪ್ರತಿಯೊಂದು ನಡೆಯನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಿ ನಡೆಸಲು ತೀಕ್ಷ್ಣ ಬುದ್ಧಿಬೇಕಾಗುತ್ತದೆ, ಸಮಯವು ಬೇಕಾಗುತ್ತದೆ. ಆಶ್ಚರ್ಯವಾಗಬಹುದು, 1927ರಲ್ಲಿ ನಡೆದ ಒಂದು ಆಟ ಮೂರು ತಿಂಗಳು ನಡೆಯಿತು.
ಈ ಆಟ ಭಾರತದ ಕೊಡುಗೆಯೆಂಬುದು ನಮಗೆ ಹೆಮ್ಮೆಯ ಸಂಗತಿ. ಮಹಾಭಾರತದಲ್ಲೇ ಈ ಆಟದ ಉಲ್ಲೇಖ ಇದೆ. ಭಾರತದಿಂದ ಪರ್ಷಿಯ, ಅರಬ್ ಇನ್ನಿತರ ರಾಷ್ಟ್ರಗಳಿಗೆ ಹೊರಟ ಚದುರಂಗ ಆಟ ರಷ್ಯಾ ದೇಶದ ಪ್ರಮುಖ ಆಟವಾಗಿದೆ. ನಾಲ್ಕು ಅಂಗಗಳಾದ ಒಂಟೆ(ರಥ), ಕುದುರೆ, ಆನೆ, ಪದಾತಿಗಳಿಂದ ಆಡುವ ‘ಚದುರಂಗ’ ಆಟ ಸೈನ್ಯದ ವ್ಯೆಹಾತ್ಮಕ ನಡೆಗಳನ್ನು ನೆನಪಿಸುತ್ತದೆ. ಭಾರತೀಯ ಚದುರಂಗದಲ್ಲಿ ಮಂತ್ರಿ ಎಂದು ಕರೆಯಲ್ಪಡುವ ಕಾಯಿಯನ್ನು ಅಂತರಾಷ್ಟ್ರೀಯ ಆಟಗಳಲ್ಲಿ ‘ಕ್ವೀನ್’ ಎಂದು, ಹಾಗೆಯೇ ಕುದುರೆಯನ್ನು ‘ನೈಟ್’ ಒಂಟೆ (ರಥ)ಯನ್ನು ‘ಬಿಷಪ್’, ಆನೆಯನ್ನು ‘ಕ್ಯಾಸಲ್’ ಎಂದು ಕರೆಯುತ್ತಾರೆ.
ಬುದ್ಧಿಯ ಆಟವಾದ ಚದುರಂಗ ಬೇರೆ ಆಟಗಳಲ್ಲಿ ಇರುವಂತೆ ಅದೃಷ್ಟದ ಆಟವಲ್ಲ. ಆಟಗಾರನ ಕಲ್ಪನಾಶಕ್ತಿ , ಸಮಗ್ರ ದೃಷ್ಟಿ, ಏಕಾಗ್ರತೆಗಳು ಅವನ ಗೆಲುವಿಗೆ ಹಾದಿ ಮಾಡಿ ಕೊಡುತ್ತದೆ.
ಚದುರಂಗದ ಹಾಸಿನಲ್ಲಿ ಅಡ್ಡಕ್ಕೆ ಎಂಟು, ಉದ್ದಕ್ಕೆ ಎಂಟು ಒಟ್ಟು 64 ಮನೆಗಳಿರುತ್ತವೆ. ಇದರಲ್ಲಿ ಒಂದನ್ನು ಬಿಟ್ಟು ಮತ್ತೊಂದರಂತೆ ಕಪ್ಪು-ಬಿಳಿ ಮನೆಗಳು ಇರುತ್ತವೆ. ಇಬ್ಬರು ಆಟಕ್ಕೆ ಕೂರುವಾಗ ಪ್ರತಿಯೊಬ್ಬರ ಬಲತುದಿಗೆ ಬಿಳಿಮನೆ ಬರುವಂತೆ ಕೂರಬೇಕು. ಬಿಳಿ ಕಾಯಿಯವನು ಮೊದಲ ನಡೆ ನಡೆಸಬೇಕು. ಪ್ರತಿಯೊಬ್ಬ ಆಟಗಾರನ ಬಳಿಯೂ 16 ಕಾಯಿಗಳಿರುತ್ತವೆ. ಒಂದು ರಾಜ, ಒಂದು ಮಂತ್ರಿ, ಎರಡು ಒಂಟೆಗಳು, ಎರಡು ಕುದುರೆಗಳು, ಎರಡು ಆನೆಗಳು, ಎಂಟು ಪದಾತಿಗಳು ಇರುತ್ತವೆ. ರಾಜ, ಪ್ರಮುಖವಾದ ಕಾಯಿ. ರಾಜನ ಉಳಿವೇ ಆಟದ ಜೀವಾಳ. ಅವನ ಉಳಿವಿಗಾಗಿಯೇ ಎಲ್ಲಾ ನಡೆಗಳು. ಚಲನೆ ಸಾಧ್ಯವಾಗದೆ ಇರುವ ಜಾಗಕ್ಕೆ ಬಂದಾಗ ರಾಜ ಸೋತಂತೆ. ರಾಜ ಸುತ್ತಮುತ್ತ ಯಾವ ಮನೆಗೆ ಬೇಕಾದರೂ ಹೋಗಬಹುದು. ಆದರೆ ಒಂದೇ ಮನೆಯಷ್ಟು ಮಾತ್ರ ಚಲಿಸಬೇಕು.
ಮತ್ತೋರ್ವ ಮುಖ್ಯಸ್ಥನಾದ ಕಾಯಿ ಮಂತ್ರಿಯು ಉದ್ದಕ್ಕೆ, ಅಗಲಕ್ಕೆ ಅಥವಾ ಮೂಲೆಗೆ ಹೀಗೆ ಯಾವ ದಿಕ್ಕಿನಲ್ಲಾದರೂ ಎಷ್ಟು ಮನೆಗಳನ್ನಾದರೂ ಚಲಿಸಬಹುದು. ಆದರೆ ಹಾಗೆ ಹೋಗುವಾಗ ಯಾವುದಾದರೂ ಕಾಯಿ ಮಧ್ಯ ಇದ್ದರೆ, ಮಂತ್ರಿ ಅದರ ಹಿಂದಿನ ಮನೆಯವರೆಗೆ ಹೋಗಬಹುದು. ಕಾಯಿಗಳನ್ನು ದಾಟಿ ಹೋಗುವಂತಿಲ್ಲ.
ಮೂಲೆ ದಿಕ್ಕಿನಲ್ಲಿ ಮಾತ್ರ ಒಂಟೆ ಚಲಿಸಬೇಕು. ಕಾಯಿಗಳು ಅಡ್ಡವಿಲ್ಲದಿದ್ದರೆ ಹಿಂದೆ ಮುಂದೆ ಎಷ್ಟು ಮನೆಗಳನ್ನು ಬೇಕಾದರೂ ಚಲಿಸಬಹುದು. ಒಂದು ಒಂಟೆ ಬಿಳಿಯ ಮನೆಗಳಲ್ಲೇ ಚಲಿಸಿದರೆ, ಇನ್ನೊಂದು ಕಪ್ಪು ಮನೆಗಳಲ್ಲಿ ಚಲಿಸುತ್ತದೆ.
ಕುದುರೆ ನಡೆಯುವುದಕ್ಕಿಂತ ಹಾರುತ್ತದೆ ಎನ್ನಬಹುದು. ಮುಂದೆ ಇನ್ನೊಂದು ಕಾಯಿ ಇದ್ದರೂ ಅದನ್ನು ಹಾರಿ ಹೋಗಬಲ್ಲದು. ಈ ಕಾಯಿ ತಾನಿರುವ ಮನೆಯಿಂದ ಇನ್ನೊಂದು ಮನೆ ಬಿಟ್ಟು, ಅಕ್ಕಪಕ್ಕದ ಖಾಲಿ ಇರುವ ಮನೆಗೆ ಹೋಗುತ್ತದೆ. ಹೀಗೆ ಯಾವ ದಿಕ್ಕಿನಲ್ಲಾದರೂ ಚಲಿಸಬಹುದು. ಹೀಗೆ ಕುದುರೆಗಳಿಗೆ ಎಂಟು ಮನೆಗಳಿಗೆ ಹೋಗುವ ಅವಕಾಶವಿದೆ.
ಆನೆ ಮತ್ತೊಂದು ಪ್ರಮುಖ ಬಲ. ಮಧ್ಯ ಕಾಯಿಯ ಅಡೆತಡೆ ಇಲ್ಲದಿದ್ದರೆ ಇದು ಉದ್ದಕ್ಕೆ ಅಗಲಕ್ಕೆ ಎಷ್ಟು ದೂರ ಬೇಕಾದರೂ ಚಲಿಸಬಹುದು. ಪದಾತಿಗಳು ಅತ್ಯಂತ ದುರ್ಬಲ ಕಾಯಿಗಳಾದರೂ ಕೆಲವೊಮ್ಮೆ ಆಟದ ಗತಿಯನ್ನೇ ಬದಲಿಸಬಹುದು. ಒಂದು ಪದಾತಿ ತನ್ನ ಮುಂದಿನ ಖಾಲಿ ಮನೆಗೆ ಮಾತ್ರ ಚಲಿಸುತ್ತದೆ. ಪ್ರಾರಂಭದಲ್ಲಿ ಮಾತ್ರ ಎರಡು ಮನೆಗೆ ಚಲಿಸಬಹುದು.
ಯಾವ ಸಂದರ್ಭದಲ್ಲೂ ಒಂದೇ ಮನೆಯಲ್ಲಿ ಎರಡು ಕಾಯಿಗಳು ಸೇರುವಂತಿಲ್ಲ. ಆಟಗಾರರ ಎರಡು ಆಟಗಳನ್ನು ಒಮ್ಮೆಗೆ ಆಡುವಂತಿಲ್ಲ.
ರಾಜನನ್ನು ಸಂರಕ್ಷಿಸುತ್ತಾ , ಎದುರು ಪಕ್ಷದ ರಾಜನನ್ನು ಸೋಲಿಸುವ ಚದುರಂಗ ಆಟದ ಹಲವು ಮಜಲುಗಳನ್ನು ಮುಂದಿನ ವಾರ ಪರಿಚಯ ಮಾಡಿಕೊಳ್ಳೋಣ.

ಹಿಂದಿನ ವಾರದ ‘ಯೋಚಿಸಿ’ ಪ್ರಶ್ನೆಗೆ ಉತ್ತರ :
‘‘ಊಟ ಮಾಡಲು ಇದ್ದ ಜನ ಮೂರು. ಹಾಕಿದ ಎಲೆ ಎರಡು.’’
ಈ ವಾರದ ‘ಯೋಚಿಸಿ’ ಪ್ರಶ್ನೆ-
ನಿಂಗಪ್ಪ ಒಂದು ಮನೆಗೆ ಹೋದಾಗ , ಅವರ ಮನೆಯಲ್ಲಿ ಕಾಡುಕೋಳಿಗಳು ಹಾಗೂ ಮೊಲಗಳನ್ನು ಸಾಕಿದ್ದರು. ಕೋಳಿಗಳು, ಮೊಲಗಳು ಎಷ್ಟಿವೆ ಎಂಬ ಪ್ರಶ್ನೆಗೆ ಮನೆಯ ಮಾಲೀಕ ಹೇಳಿದ – ‘ಇಲ್ಲಿ ಒಟ್ಟು 100 ಕಾಲುಗಳು, 30 ತಲೆಗಳು ಇವೆ’ ಎಂದು ಹೇಳಿ, ನಿಂಗಪ್ಪನಿಗೆ ಮರುಪ್ರಶ್ನೆ ಮಾಡಿದ ‘ಕೋಳಿಗಳು, ಮೊಲಗಳು ಎಷ್ಟಿವೆ?’ ಎಂದು. ನಿಂಗಪ್ಪನಿಗೆ ಕೋಳಿ, ಮೊಲಗಳ ಸಂಖ್ಯೆ ತಿಳಿಯಲು ನೀವು ಸಹಾಯ ಮಾಡಿ.

(ಸಶೇಷ)

– ಶಿ.ನಾ.ಚಂದ್ರಶೇಖರ

   

Leave a Reply