ಚಿತ್ರದುರ್ಗದಲ್ಲಿ ಶಕ್ತಿ ದೇವತೆಗಳ ಶೋಭಾಯಾತ್ರೆ

ಚಿತ್ರದುರ್ಗ - 1 Comment
Issue Date : 17.02.2014

ಚಿತ್ರದುರ್ಗ: ಇಲ್ಲಿ ಮೊಟ್ಟಮೊದಲ ಬಾರಿಗೆ ತಾಲ್ಲೂಕು ಮತ್ತು ನಗರದ 85 ಶಕ್ತಿ ದೇವತೆಗಳನ್ನು ಒಂದೆಡೆ ಸೇರಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಫೆ.9ರಂದು ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಧರ್ಮ ಜಾಗರಣ ಸಮನ್ವಯ ವಿಭಾಗದಿಂದ ಆಯೋಜಿಸಿದ ಈ ‘ಶಕ್ತಿ ದೇವತೆಗಳ ಸಂಗಮ’ದಲ್ಲಿ ರಸ್ತೆಯುದ್ದಕ್ಕೂ ದೇವತೆಗಳ ಮೂರ್ತಿ ಹೊತ್ತಿದ್ದ ವಾಹನಗಳು, ಪಲ್ಲಕ್ಕಿಗಳು ನೂರಾರು ಸಂಖ್ಯೆಯಲ್ಲಿತ್ತು. 9 ವರ್ಷದ ಹೆಣ್ಣುಮಕ್ಕಳು ಕಳಸ ಹೊತ್ತು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಡೊಳ್ಳುಕುಣಿತ, ನಂದಿಕೋಲು, ಮರಗಾಲು ಕುಣಿತ, ಉರುಮೆ, ಬೊಂಬೆ ಕುಣಿತ, ಕರಡಿಚಮ್ಮಳ, ತಮಟೆ ವಾದ್ಯ ಮೆರವಣಿಗೆಗೆ ಮೆರಗು ನೀಡಿದವು. ಹುಣಸೆಕಟ್ಟೆ ಗ್ರಾಮದಿಂದ ಬಂದ 20 ಮಂದಿ ಪೋತರಾಜರು ಭಾಗವಹಿಸಿ ಚಡಿ ಏಟು ದೃಶ್ಯ ನೋಡುಗರ ಮನಕ್ಕೆ ಮುದ ನೀಡುವಂತಿತ್ತು.
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಶಕ್ತಿದೇವತೆಗಳ ವಿಶೇಷ ಪೂಜೆ ನೆರವೇರಿಸಲಾಯಿತು. ಪೂಜ್ಯಶ್ರೀಗಳು, ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಿ ಶುಭಕೋರಿದರು. ದೇವಾಲಯದಿಂದ ಹೊರಟ ಶೋಭಾಯಾತ್ರೆ ನಗರದ ಅಧಿದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅಣ್ಣಮ್ಮದೇವಿ ಮುಖ್ಯ ಅತಿಥಿಯಾಗಿ, ನಗರದ ಉಚ್ಚಂಗಿಯಲ್ಲಮ್ಮ, ಶ್ರೀ ಬರಗೇರಮ್ಮ, ಹಟ್ಟಿ ಮಾರಮ್ಮ, ತಿಪ್ಪನಘಟ್ಟಮ್ಮ, ಶ್ರೀ ಕನ್ನಿಕಾಪರಮೇಶ್ವರಿ, ಗೌರಸಂದ್ರ ಮಾರಮ್ಮ, ಕಾಳಿಕಾ ಪರಮೇಶ್ವರಿ, ಕೆಂಚಾಂಬಿಕ, ಬನ್ನಿ ಮಹಾಕಾಳಿ, ದುರ್ಗಾಂಬಿಕಾ, ಜಲಮಾತೆ ದುರ್ಗಮ್ಮ, ಶ್ರೀ ಚೌಡೇಶ್ವರಿ, ಶ್ರೀ ದುರ್ಗಾಪರಮೇಶ್ವರಿ ಸೇರಿದಂತೆ ನಗರ ಮತ್ತು ತಾಲ್ಲೂಕಿನ ಗ್ರಾಮಗಳಿಂದ ದೇವತೆಗಳು ಭಾಗವಹಿಸಿದವು.
ಶೋಭಾಯಾತ್ರೆಯ ಇಕ್ಕೆಲಗಳಲ್ಲಿ ಹರಿದು ಬಂದ ಜನಸಾಗರ ಶಕ್ತಿದೇವತೆಗಳ ವೈಭವದ ಮೆರವಣಿಗೆಯ ಸೊಬಗನ್ನು ಸವಿದರು. ರಸ್ತೆಯುದ್ದಕ್ಕೂ ಭಕ್ತಾದಿಗಳು ಹೂವು, ಹಣ್ಣು , ಕಾಯಿ ನೀಡಿ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಹೀಗೆ ಶೋಭಾಯಾತ್ರೆಯು ಸಾಗಿತ್ತು. ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಸಿದ್ಧಗೊಳಿಸಲಾದ ಸ್ಥಳಗಳಲ್ಲಿ ಶಕ್ತಿದೇವತೆಗಳನ್ನು ಪ್ರತಿಷ್ಠಾಪಿಸಲಾಯಿತು. ಅದೇ ಮೈದಾನದಲ್ಲಿ ದುರ್ಗಾಹೋಮ ಕಾರ್ಯಕ್ರಮವನ್ನು ಸಹ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ತಾಯಂದಿರು ಭಾಗವಹಿಸಿದ್ದರು. ನಂತರ ನಡೆದ ಸಭೆಯಲ್ಲಿ ಶ್ರೀ ಉಮೇಶ ನಿರೂಪಿಸಿದರು. ಸಂಚಾಲಕ ಕೆ.ಎಸ್. ನವೀನ ಸ್ವಾಗತಿಸಿದರು. ಧರ್ಮಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ, ದಿಕ್ಸೂಚಿ ಭಾಷಣ ಮಾಡಿದರು. ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಪಾಳೇಗಾರರ ಕಾಲದಿಂದ ಇಂತಹ ಉತ್ಸವ ಮಾಡಿಕೊಂಡು ಬರಲಾಗಿತ್ತು. ಈ ಕುರಿತು ಈವರೆಗೆ ಕೇಳಿದ್ದೆವು, ಆದರೆ ಇಂದು ಧರ್ಮಜಾಗರಣ ಸಮನ್ವಯ ವಿಭಾಗದಿಂದ ಆಯೋಜಿಸಿರುವ ಕಾರ್ಯಕ್ರಮದಿಂದ ಪಾಳೇಗಾರರ ಇತಿಹಾಸ ವೈಭವ ಮತ್ತೊಮ್ಮೆ ಮೈದಾಳಿದಂತಾಯಿತು ಎಂದರು.
ಕಣ್ಣಕುಪ್ಪೆ ಶ್ರೀಗಳು ಆಶೀರ್ವಚನ ನೀಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಭಾಷಣ ಮಾಡಿದರು. ಕಾಶೀಗಂಗಾ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

   

1 Response to ಚಿತ್ರದುರ್ಗದಲ್ಲಿ ಶಕ್ತಿ ದೇವತೆಗಳ ಶೋಭಾಯಾತ್ರೆ

  1. Prasanna Kadethota

    mareyalare
    I never forgot the day

Leave a Reply