ಚೀನಾದ ಹತ್ತೊಂಬತ್ತನೆಯ ಮಹಾಸಭೆ ಹಾಗೂ ಅಲ್ಲಿ ಉದ್ಭವಿಸಿದ ಮಹಾನಾಯಕ !

ಲೇಖನಗಳು - 0 Comment
Issue Date :

-ವಿಕ್ರಮ ಜೋಷಿ

ಚೀನಾದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ(ಸಿಪಿಸಿ)ದ ಪ್ರತಿನಿಧಿಗಳ ಸಭೆ ನಡೆಯುತ್ತದೆ. ಇದು ಜರಗುವುದು ಬೀಜಿಂಗ್ ನಲ್ಲಿರುವ ‘ಗ್ರೇಟ್ ಹಾಲ್ ಆಫ್ ಚೈನಾ’ದಲ್ಲಿ. ಈ ಸಭೆಗೆ ಆ ದೇಶದ ವಿವಿಧ ಭಾಗಗಳಿಂದ ಸುಮಾರು ಮೂರು ಸಾವಿರ ಸಿಪಿಸಿಯ ಪ್ರತಿನಿಧಿಗಳು ಬಂದು ಸೇರುತ್ತಾರೆ. ಒಂದು ವಾರ ನಡೆಯುವ ಈ ಸಮ್ಮೇಳನಕ್ಕೆ ಒಂದು ವರ್ಷದ ಹಿಂದಿನಿಂದಲೇ ತಯಾರಿ ನಡೆಯುತ್ತದೆ. ಸಿಪಿಸಿ ಇಂದು ಸುಮಾರು ತೊಂಬತ್ತು ಕೋಟಿ ಸದಸ್ಯರನ್ನು ಹೊಂದಿದೆ. ಅವರೆಲ್ಲ ತಮ್ಮ ತಮ್ಮ ಕ್ಷೇತ್ರದಿಂದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿ ಸಮ್ಮೇಳನಕ್ಕೆ ಕಳಿಸುತ್ತಾರೆ. ಈ ಸಮ್ಮೇಳನವನ್ನು ಸಿಪಿಸಿಯ ನಿಯಂತ್ರಣ ಮಂಡಳಿ ರೂಪಿಸಿ, ನಿರ್ವಹಿಸುತ್ತದೆ. ಸಿಪಿಸಿಯನ್ನು ನಿಯಂತ್ರಿಸುವ ಆಡಳಿತ ಮಂಡಳಿಯನ್ನು  ‘ಪೊಲಿಟ್‌ಬ್ಯುರೋ’ ಎನ್ನುತ್ತಾರೆ. ಚೈನಾದಲ್ಲಿ ಪೊಲಿಟ್‌ಬ್ಯುರೋ ಅಂದರೆ ಆಡಳಿತದಲ್ಲಿ ಅತ್ಯಂತ ಪ್ರಬಲವಾದ ಚೌಕಟ್ಟು. ಈ ಪೊಲಿಟ್‌ಬ್ಯುರೋವನ್ನು ನಿಯಂತ್ರಣ ಮಾಡುವ ಅತ್ಯಂತ ಪ್ರಭಾವಶಾಲಿ ಇನ್ನೊಂದು ಮಂಡಳಿ ಇದೆ. ಅದನ್ನು ಪಾರ್ಟಿಯ ‘ಸ್ಟ್ಯಾಂಡಿಂಗ್ ಕಮಿಟಿ’ ಎನ್ನುತ್ತಾರೆ. ಸ್ವತಃ ಚೀನಾದ ಅಧ್ಯಕ್ಷರನ್ನು ಒಳಗೊಂಡಂತೆ ಅದರಲ್ಲಿ ಏಳು ಜನರಿರುತ್ತಾರೆ. ಇಡೀ ಚೀನಾವನ್ನು ನಿಯಂತ್ರಣ ಮಾಡುವವರು ಈ ಸ್ಟ್ಯಾಂಡಿಂಗ್ ಕಮಿಟಿಯ ಸದಸ್ಯರು. ಸ್ಟ್ಯಾಂಡಿಂಗ್ ಕಮಿಟಿಯ ಸದಸ್ಯರಲ್ಲಿ ಒಬ್ಬರು ಮುಂದಿನ ರಾಷ್ಟ್ರಾಧ್ಯಕ್ಷರಾಗುತ್ತಾರೆ. ಇಂತಹ ಅತ್ಯಂತ ಪ್ರಬಲವಾದ ಸಮಿತಿಯ ರಚನೆ ಮುಚ್ಚಿದ ಬಾಗಿಲಿನೊಳಗೆ ಅತ್ಯಂತ ಗೌಪ್ಯವಾಗಿ ನಡೆಯುತ್ತದೆ. ಈ ಎಲ್ಲ ಪ್ರಕ್ರಿಯೆ ನಡೆಯುವುದು ಈ ಸಮ್ಮೇಳನದಲ್ಲಿ. ಅಕ್ಟೋಬರ್ ಹದಿನೆಂಟರಿಂದ ಇಪ್ಪತ್ತೆರಡರ ತನಕ ಚೈನಾದ ರಾಜಧಾನಿಯಾದ ಬೀಜಿಂಗ್‌ನಲ್ಲಿ ಸಿಪಿಸಿಯ ಹತ್ತೊಂಬತ್ತನೆಯ ಮಹಾಸಭೆ ನಡೆಯಿತು. ಸಭೆಯಲ್ಲಿ ಹಾಲಿ ಅಧ್ಯಕ್ಷರಾದ ಷಿ ಜಿನ್ ಪಿಂಗ್, ಅವರಿಗಿಂತ ಮೊದಲಿನ ಅಧ್ಯಕ್ಷ ಹು ಜಿಂಟಾವೊ, ಹಾಗೂ ಅದಕ್ಕೂ ಮೊದಲಿನ ಅಧ್ಯಕ್ಷ ಜಿಯಾಂಗ್‌ಝೆಮಿನ್‌ಉಪಸ್ಥಿತರಿದ್ದರು. ಈ ಮಹಾಸಮ್ಮೇಳನ ಷಿ ಅವರಿಗೆ ಎಷ್ಟು ಮುಖ್ಯವಾಗಿತ್ತು ಅಂದರೆ, ಕಳೆದ ಐದು ವರ್ಷದ ವರದಿಯನ್ನು 4,800  ಜನರಿಗೆ ತೋರಿಸಿ ಅವರಿಂದ ಅಭಿಪ್ರಾಯ ಪಡೆದು, ನಂತರ ಆರು ಬೇರೆಬೇರೆ ಸಭೆಯಲ್ಲಿ ಅದನ್ನು ಚರ್ಚಿಸಿ ಅದನ್ನು ಹತ್ತೊಂಬತ್ತನೆಯ ಸಿಪಿಸಿ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಯಿತು. ಇದನ್ನು ನೋಡಿದರೆ ಅಧ್ಯಕ್ಷ ಷಿ ಎಷ್ಟು ಶಿಸ್ತುಬದ್ಧರು ಎಂದು ಗೊತ್ತಾಗುತ್ತದೆ. ಒಂದು ವರ್ಷದಿಂದ ಷಿ ಜಿನ್ ಪಿಂಗ್ ಸ್ವತಃ ವೈಯಕ್ತಿಕ ಆಸಕ್ತಿ ನೀಡಿ ಈ ವರದಿಯನ್ನು ತಯಾರಿಸಿದ್ದರು ಹಾಗೂ ಸಮ್ಮೇಳನದ ಮುತುವರ್ಜಿ ವಹಿಸಿದ್ದರು. ಹಿಂದಿನ ಐದು ವರ್ಷಗಳ ವರದಿ, ಮುಂದಿನ ಐದು ವರ್ಷಗಳ ಯೋಜನೆ, ಹೊಸ ಆಡಳಿತ ಮಂಡಳಿಯ ಆಯ್ಕೆ ಹಾಗೂ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸಂವಿಧಾನದಲ್ಲಿ ಬದಲಾವಣೆಗಳನ್ನು ತರುವುದು ಈ ಸಮ್ಮೇಳನದ ಮೂಲ ಉದ್ದೇಶವಾಗಿತ್ತು.

 ಸಿಪಿಸಿಯ ಹತ್ತೊಂಬತ್ತನೆಯ ಮಹಾಸಭೆ ಚೈನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಅವರನ್ನು ಜಗತ್ತಿನ ಅತ್ಯಂತ ಬಲಶಾಲಿ ನಾಯಕನನ್ನಾಗಿ ಮಾಡಿದೆ. ಇದಕ್ಕಿಂತ ಮೊದಲು ಷಿ ಅವರ ಕುರಿತು ಹಲವಾರು ಪ್ರಶ್ನೆಗಳು ಉದ್ಭವವಾಗಿದ್ದವು. ಮುಂದಿನ ಅಧ್ಯಕ್ಷನಾಗಿ ಷಿ ಯಾರನ್ನು ಸೂಚಿಸಬಹುದು? ಈಗಾಗಲೇ 64 ವಯಸ್ಸು ದಾಟಿರುವ ಷಿ ಅವರು ಇನ್ನೂ ಐದು ವರ್ಷಗಳ ಕಾಲ ಆಡಳಿತ ನಡೆಸಲು ಆರೋಗ್ಯ ಸಾಥ್ ಕೊಡಬಹುದೆ? ಪಾರ್ಟಿಯ ಸದಸ್ಯರ ಬೆಂಬಲ ಷಿ ಅವರಿಗೆ ಸಿಗಬಹುದೇ? ಜಗತ್ತಿನಲ್ಲೇ ಅತ್ಯಂತ ಪ್ರಬಲವಾದ ಸೈನ್ಯದಲ್ಲಿ ಒಂದಾದ ಚೀನಾದ ಸೇನಾಪಡೆಯನ್ನು ಷಿ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬಹುದೇ? ಎಂಬ ಪ್ರಶ್ನೆಗಳಿದ್ದವು. ಇವೆಲ್ಲಕ್ಕೂ ತೆರೆಕಂಡ ಮಹಾಸಭೆ ಉತ್ತರವಾಗಿ ಬಂದಿದೆ. ಇಳಿವಯಸ್ಸಿನಲ್ಲೂ ಷಿ ಜಿನ್ ಪಿಂಗ್ ಸತತ ಮೂರು ವರೆ ತಾಸುಗಳ ಭಾಷಣ ನೀಡಿದ್ದಾರೆ. ಆಧುನಿಕ ಜಗತ್ತಿನ ನಾಯಕರಲ್ಲಿ ಇಷ್ಟು ಉದ್ದದ ಭಾಷಣ ನೀಡಿದ್ದು ಇದೇ ಮೊದಲಿರಬೇಕು. ಗ್ರೇಟ್ಹಾಲ್ ಆಫ್ ಚೈನಾದಲ್ಲಿ ನೆರೆದ ಪ್ರತಿ ಸದಸ್ಯರು, ಹಳೆಯ ಪ್ರಮುಖ ನಾಯಕರು, ತೊಂಬತ್ತು ವರ್ಷದ ಜಿಯಾಂಗ್‌ಝೆಮಿನ್ ಸೇರಿ ಪ್ರತಿಯೊಬ್ಬರೂ ಪುಟದಿಂದ ಪುಟವನ್ನು  ಕೇಂದ್ರೀಕರಿಸಿ ನೋಡಿದ್ದು ಕಂಡುಬಂತು. ಮೂರುವರೆ ತಾಸಿನ ಭಾಷಣ ಮಾಡಿ ಷಿ ಅವರು ಇನ್ನೂ ಹತ್ತು ವರ್ಷ ಅಧ್ಯಕ್ಷನಾಗಿರಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಮರ್ಥ್ಯ ಹೊಂದಿರುವೆ ಎನ್ನುವುದನ್ನು ಕೂಡ ಇಡೀ ಜಗತ್ತಿಗೆ ತೋರಿಸಿದ್ದಾರೆ.

 ಭಾಷಣದಲ್ಲಿ ತಮ್ಮ ‘ಕನಸಿನ ಚೈನಾ’ ಹೇಗಿರಬೇಕು, ನಾವು ಮಾಡಿದ ಸಾಧನೆ ಏನು, ಮುಂದೆ ಮೂವತ್ತು ವರ್ಷಗಳ ದಾರಿ ಹೇಗಿರಬೇಕು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಚೈನಾ ದೊಡ್ಡಪ್ಪನ ಪ್ರಾಮುಖ್ಯತೆ ಪಡೆಯಬೇಕು ಎನ್ನುವುದು ಷಿ ಅವರ ಕನಸು. ಅದಕ್ಕಾಗಿ ಚೈನಾ ಹೊಸಯುಗವನ್ನು ಶುರು ಮಾಡಬೇಕು, ಸಮಾಜವಾದವನ್ನು ಬೆಂಬಲಿಸಬೇಕು ಎಂದಿದ್ದಾರೆ. ಈ ಮಾತನ್ನು ದೇಶದ ಸಂವಿಧಾನದಾನದಲ್ಲಿ ಯಾವುದೇ ವಿರೋಧವಿಲ್ಲದೆ ಅಂಗೀಕರಿಸಲಾಗಿದೆ. ಚೈನೀಸ್ ಲಿಪಿಯಲ್ಲಿ ಬರೆದ ‘ಹೊಸಯುಗ’ ಹಾಗೂ ‘ಸಮಾಜವಾದ’ವನ್ನು ಷಿ ಜಿನ್ ಪಿಂಗ್ ಅವರ ವಿಚಾರಗಳು ಎಂದು ಮುದ್ರಿಸಲಾಗಿದೆ. ಹೀಗೆ ಜೀವಂತ. ಇರುವಾಗಲೇ ಸಂವಿಂಧಾನದಲ್ಲಿ ಹೆಸರು ಮುದ್ರಿತಗೊಂಡುರಲ್ಲಿ ಪ್ರಾರಂಭವಾದ ಸಿಪಿಸಿಯಲ್ಲಿ ಮಾವೋನಂತರ ಷಿ ಎರಡನೇ ಅತೀ ಪ್ರಭಾವಶಾಲಿ ನಾಯಕ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ಮಾವೋ ಹಾಗೂ ಷಿ ಬಿಟ್ಟರೆ ಆಧುನಿಕ ಚೈನಾದ ನಿರ್ಮಾತೃಡೆಂಗ್ ಷಿಯಾವೋ ಪಿಂಗ್ ಹೆಸರು ಮಾತ್ರ ಸಂವಿಧಾನದಲ್ಲಿ ಬರೆದಿದೆ. ಆದರೆ ಡೆಂಗ್ ಷಿಯಾವೋ ಪಿಂಗ್ ಅವರ ಹೆಸರು ಅವರ ಜೀವಿತಾವಧಿಯಲ್ಲಿ ಬರೆದಿರಲಿಲ್ಲ. ಹೀಗಾಗಿ ಷಿ ಅವರನ್ನು ಚೈನಾವನ್ನು ರೂಪಾಂತರಗೊಳಿಸಿದ ನಾಯಕರಲ್ಲಿ ಪ್ರಮುಖರು ಎಂದು ಕರೆಯಬಹುದು.

 ಷಿ ತಮ್ಮದೇ ಆದ ವಿಚಾರಧಾರೆಯನ್ನು ಹೊಂದಿದ್ದಾರೆ. ಚೈನಾದ ಪ್ರತಿಯೊಂದು ಆಡಳಿತ ಕಮ್ಯೂನಿಸ್ಟ್ ಪಾರ್ಟಿಯ ಅಡಿಯಲ್ಲಿ ಬರಬೇಕು ಎನ್ನುವುದು ಅವರ ವಾದ. ಪಾರ್ಟಿ ತಳಪಾಯ ಇದ್ದ ಹಾಗೆ ಅದು ಗಟ್ಟಿಯಾದರೆ ಪರ್ವತವನ್ನೇ ಕಟ್ಟಬಹುದು ಎನ್ನುತ್ತಾರೆ. ಇವರ ಈ ನೀತಿ ಪಕ್ಷದ ಜನರನ್ನು ಇವರ ಪರವಾಗಿ ನಿಲ್ಲುವಂತೆ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ಷಿ ನಡೆಸಿದ ಕಾರ್ಯಾಚರಣೆ ಇಡೀ ದೇಶದಲ್ಲಿ ಜನಪ್ರಿಯತೆ ಪಡೆದಿದೆ. ಸೈನ್ಯದ ಪ್ರಭಾವ ಜಗತ್ತಿನಲ್ಲಿ ಅತ್ಯಂತ ಪ್ರಬಲವಾಗಬೇಕು ಎನ್ನುವ ಅವರ ಧೋರಣೆ ಸೇನೆಯ ನಾಯಕರನ್ನು ಷಿ ನೇತೃತ್ವಕ್ಕೆ ಮಣಿಯುವಂತೆ ಮಾಡಿದೆ. ಆದರೆ ವಾಕ್ ಸ್ವಾತಂತ್ರ್ಯ, ಆಂತರಿಕ ಮಾಹಿತಿಯನ್ನು ಹಂಚಿಕೊಳ್ಳುವುದು, ಚೈನಾದಲ್ಲಿ ವಿದೇಶಿ ಕಂಪನಿಗಳ ಪ್ರಾಬಲ್ಯ ಇವನ್ನು ಷಿ ಸಹಿಸಲಾರರು. ಚೈನಾದ ಮಣ್ಣು ಒಂದು ಇಂಚು ಕೂಡ ಇನ್ನೊಬ್ಬರ ವಶವಾಗದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರೆ ನೀಡಿದ್ದಾರೆ. ತೈವಾನ್, ಹಾಂಗ್‌ಕಾಂಗ್, ಹಾಗೂ ಸೌತ್ ಚೈನಾ ಸಾಗರದಲ್ಲಿರುವ ದ್ವೀಪದ ಬಗ್ಗೆ ತಮ್ಮ ಸಾರ್ವಭೌಮತ್ವದ ನಿಲುವನ್ನು ಕಠೋರವಾದ ಮಾತಿನಲ್ಲಿ ಮಂಡಿಸಿದ್ದಾರೆ. ಚೀನಾದ ಈ ಸಭೆಯು ಹೊಸದೊಂದು ನಾಯಕತ್ವವನ್ನು ಕಂಡಿದೆ. ಹೊಸತಾಗಿ ನಿಯಮಿತವಾದ ಸ್ಟೀರಿಂಗ್ ಕಮೀಟಿಯ ಸದಸ್ಯರು ಅಧ್ಯಕ್ಷ ಷಿ ಅವರ ಆಪ್ತರು. ಹ್ಯಾನ್ ಜಾಂಗ್, ವಾಂಗ್ ಹನ್ನಿಂಗ್, ಲೀ ಜಾನ್ಸು, ಲೀ ಕೆಕ್ಷಿ ್ವಯಾಂಗ್,

ವಾಂಗ್ ಹ್ಯಾಂಗ್, ಲಾವೋ ಲೆಜಿ ಹಾಗೂ ಅಧ್ಯಕ್ಷ ಷಿ ಚೈನಾದ ಸುಪರ್‌ಪವರ್ ಸ್ಟೀರಿಂಗ್ ಕಮಿಟಿಯ ಸದಸ್ಯರು. ಇವರೆಲ್ಲ ಷಿ ಅವರ ಹೊಸ ಯುಗದ ಕನಸನ್ನು ನನಸು ಮಾಡುವತ್ತ ಕೆಲಸ ಮಾಡುವ ಶಪಥ ಮಾಡಿದ್ದಾರೆ. ಚೀನಾ ಸಮರ್ಥ ನಾಯಕನ ಮುಂದಾಳತ್ವದಲ್ಲಿ ದೇಶ ಹಾಗೂ ವಿದೇಶದಲ್ಲಿ ಹೊಸ ವರ್ಚಸ್ಸು ಬೆಳೆಸಲಿದೆ. ಅಮೆರಿಕಾ ಹಾಗೂ ಕೊರಿಯಾದಂತಹ ಚಂಚಲ ನಾಯಕರ ಎದುರು ಚೀನಾ ಹಾಗೂ ಅದರ ನಾಯಕತ್ವ ಒಂದು ಕೈ ಮೇಲಿದೆ. ಚೀನಾ ಮೂವತ್ತು ವರ್ಷಗಳ ಹಿಂದೆ ಹೀಗೆ ಒಂದು ಹೊಸ ಕನಸು ಕಂಡು ಹೊಮ್ಮಿತ್ತು, ಇಂದು ಅದೇ ಹೊಸ ಕನಸಿನೊಡನೆ ಮುನ್ನಡೆಯುತ್ತಿದೆ. ಜಗತ್ತಿನಲ್ಲಿ ಮುಂದೆ ಚೀನಾ ಹೇಗೆ ಪ್ರಭಾವ ಬೀರುತ್ತದೆ, ಭಾರತಕ್ಕೆ ಅದರಿಂದ ಲಾಭವೇನು, ನಷ್ಟವೇನು ಎನ್ನುವ ವಿಶ್ಲೇಷಣೆ ಆಗಬೇಕಿದೆ. ಒಟ್ಟಿನಲ್ಲಿ ಚೈನಾ ಹೊಸದೊಂದು ಯುಗಕ್ಕೆ ಕಾಲಿಡುತ್ತಿದೆ. ಷಿ ಜಿನ್ ಪಿಂಗ್ ಅವರ ನಂತರ ಯಾರು ಎನ್ನುವ ಪ್ರಶ್ನೆ, ಪ್ರಶ್ನೆ ಆಗಿಯೇ ಉಳಿದಿದೆ. ಸಿಪಿಸಿಯ ಹತ್ತೊಂಬತ್ತನೆಯ ಸಮ್ಮೇಳನ ಮುಗಿದರೂ ಷಿ ತನ್ನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಸೂಚಿಸದೆ ಸಹಜವಾಗಿ ಎರಡನೆಯ ಅವಧಿಯಲ್ಲಿ ನಿವೃತ್ತಿ ಹೊಂದದೆ ಮೂರನೆಯ ಅವಧಿಗೂ ಮುಂದುವರೆಯುವ ಸೂಚನೆ ಕೊಟ್ಟಿದ್ದಾರೆ.

 

   

Leave a Reply