ಚೆನ್ನೆಮಣೆ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 30.04.2015

ತಾರಾ ತಿಂಬಾಟ
ಕರು ಬರುವ ಆಟದಂತೆಯ ಇದನ್ನು ಆಡುತ್ತಾರೆ. ಆದರೆ ಇಲ್ಲಿ ಹರಳು ಮುಗಿದ ಮನೆ ಬಿಟ್ಟು ಮುಂದಿನ ಮನೆಯ ಹರಳು ಎತ್ತಿಕೊಳ್ಳಬೇಕು. ಹರಳೆತ್ತಿದ ಮನೆಯಲ್ಲಿ ಒಂದು ಹರಳಿದಾಗ ಒಕ್ಕಳ್ಳು, ಎರಡಾದಾಗ ಇಕ್ಕಳ್ಳು, ಮೂರಾದಾಗ ಮುಕ್ಕಳ್ಳು, ನಾಲ್ಕಾದಾಗ ‘ತಾರಾ’ ಎನ್ನುವರು. ಯಾರ ಮನೆಯಲ್ಲಿ ತಾರಾ ಆದರೂ ಆಡುವವನು ಹರಳುಗಳನ್ನು ಎತ್ತಿಕೊಳ್ಳಬೇಕು. ನಾಲ್ಕಕ್ಕಿಂತ ಹೆಚ್ಚು ಹರಳಾದರೆ ಅದು ಕೊಳೆತುಹೋಗುತ್ತದೆ. ಒಂದೇ ಮನೆಯಲ್ಲಿ ಹರಳು ರಾಶಿಯಾಗಿ ಕಾಣುತ್ತಿದ್ದರೆ ‘ಹೆಗ್ಗಣ ಗುತ್ರಿ’ ಎನ್ನುತ್ತಾರೆ. ಹರಳು ಮುಗಿದ ಮನೆಯಾಚೆ ಖಾಲಿ ಇದ್ದರೆ ಆಟ ಬಿಡಬೇಕು. ತಾರಾ ಎತ್ತಿಕೊಂಡು ಕೈಯಲ್ಲಿ ಹರಳಿದ್ದರೆ ಮಾತ್ರ ಮುಂದುವರಿಯಬಹುದು.
ಆಟ ಮುಗಿದ ಮೇಲೆ ನಾಲ್ಕು ನಾಲ್ಕರಂತೆ ಕಾಳು ಹಾಕಿ ಮನೆ ತುಂಬುವರು. ಇಬ್ಬರ ಕಾಳು ಸರಿಯಾದರೆ ಸರ್ಮನೆ ಎನ್ನುತ್ತಾರೆ. ಹೆಚ್ಚು ಗೆದ್ದವರು ದಿವಾಳಿಯಾದವರಿಗೆ ಕಾಳು ಕೊಡುತ್ತಾರೆ. ನಂತರ ಇನ್ನೊಮ್ಮೆ ಆಟ ಪ್ರಾರಂಭ.
ಹೆಗ್ಗೆ ತಿಂಬಾಟ
ಆಟವೆಲ್ಲ ಮೇಲಿಂತಯೇ. ಹೆಗ್ಗೆ ಮುಂದಾಟದಲ್ಲಿ ಹರಳು ಮುಗಿದ ಮುಂದಿನ ಮನೆ ಖಾಲಿಯಿದ್ದರೆ ಖಾಲಿ ಮನೆಯ ಮುಂದಿನ ಮನೆ ಹಾಗೂ ಅದರ ಎದುರಿನ ಮನೆಗಳಲ್ಲಿಯ ಕಾಳನ್ನು ಎತ್ತಿಟ್ಟುಕೊಳ್ಳಬೇಕು. ಹೆಗ್ಗೆಯ ಮನೆಗಳಲ್ಲಿ ಒಂದು ಆಟಗಾರನ ಮನೆ; ಇನ್ನೊಂದು ಎದುರಾಳಿಯ ಮನೆ, ಹೆಗ್ಗೆ ತಿಂದರೆ ಆಟ ಬಿಡಬೇಕು. ನಡುವೆ ಎರಡು ಮನೆ ಖಾಲಿಯಿದ್ದರೆ ಆಟ ಬಿಡಬೇಕು. ಹೆಗ್ಗೆ ಇಲ್ಲ.
ಮೂಲೆ ಆಟ
ತಾರಾ ತಿಂಬಾಟದಂತೆಯ ಈ ಆಟ. ಆದರೆ ಪ್ರತಿಯೊಬ್ಬರು ತನ್ನ ಬದಿಯ ಮೂಲೆಯಿಂದ ಹರಳು ಮುರಿದು (ಎತ್ತಿ) ಆಡಬೇಕು. ಇಬ್ಬರೂ ತಮ್ಮ ತಮ್ಮ ಮೂಲೆಯಿಂದಲೂ ಒಂದೇ ಬಾರಿಗೆ ಆಟ ಪ್ರಾರಂಭಿಸಲೂಬಹುದು. ಮೂಲೆಯಲ್ಲಿ ನಾಲ್ಕೂ ಹರಳು ಮಾಡಿದಾಗ ಅದು ಇನ್ನೊಬ್ಬನ ಮನೆಯಾದರೂ ಆಟಗಾರನಿಗೆ ಸಲ್ಲುತ್ತದೆ. ಅದಕ್ಕೆ ಕಟ್ಟಿದ ಮನೆ ಎನ್ನುತ್ತಾರೆ. ಕಟ್ಟಿದ ಮನೆಗೆ ಯಾರು ಹರಳು ಹಾಕಬಾರದು, ಮುರಿಯಬಾರದು. ಹೀಗೆ ನಾಲ್ಕು ಮೂಲೆಗಳಲ್ಲಿ ಮನೆ ಕಟ್ಟುವವರೆಗೆ ಆಟ ಮುಂದುವರೆಯುತ್ತದೆ. ಹೆಚ್ಚು ಮನೆ ಕಟ್ಟಿದವನು ಗೆಲ್ಲುತ್ತಾನೆ.

ಮನೆಯೊಳಗಿನ ಆಟಗಳು
ಪಗ್ಗದ ಆಟ
ಇಬ್ಬರು ಆಟಗಾರರು. ಎರಡು ಬಗೆಯ ಕಾಳುಗಳು (ಅಥವಾ ಕಲ್ಲು ಇತ್ಯಾದಿ) ಪ್ರತಿಯೊಬ್ಬನಿಗೆ ಒಂಭತ್ತು ಕಾಳುಗಳು. ಬೇರೆ ಬೇರೆ ರೀತಿಯ ಕಾಳುಗಳಿರಬೇಕು. ಒಬ್ಬನ ಹತ್ತಿರ ಒಂದು ಬಗೆಯ ಕಾಳುಗಳು, ಇನ್ನೊಬ್ಬರ ಹತ್ತಿರ ಇನ್ನೊಂದು ಬಗೆಯ ಕಾಳುಗಳು ಇರಬೇಕು. ಒಬ್ಬರ ನಂತರ ಇನ್ನೊಬ್ಬರು ಆಡಬೇಕು. ಪ್ರತಿಯೊಬ್ಬನೂ ತನ್ನ ಮೂರು ಕಾಳು ಒಂದೇ ಸಾಲಿನಲ್ಲಿ ಬರುವಂತೆ ಪ್ರಯತ್ನಿಸುತ್ತಾನೆ ಹಾಗೂ ಇನ್ನೊಬ್ಬನ ಕಾಳು ಒಂದೇ ಸಾಲಿನಲ್ಲಿ ಬರದಂತೆ ತನ್ನ ಕಾಳೊಂದನ್ನು ಜೋಡಿಸಿ ಬಿಡುತ್ತಾನೆ. ಕಾಳನ್ನು ಒಂದೇ ಸಾಲಿನಲ್ಲಿ ತಂದವರು ಪಗ್ಗ ಗೆದ್ದಂತೆ. ಮೂರು ಕಾಳಿನ ಸಾಲಿಗೆ ಪಗ್ಗ ಎನ್ನುತ್ತಾರೆ. ಪಗ್ಗ ಮಾಡಿದವರು ಎದುರಾಳಿಯ ಒಂದು ಕಾಳನ್ನು ಜಾಣ್ಮೆಯಿಂದ ಎತ್ತಿಕೊಳ್ಳುತ್ತಾರೆ. ತಮ್ಮ ಕೈಯಲ್ಲಿ ಕಾಳು ತೀರುವವರೆ ಮನೆಯ ಕಾಳನ್ನು ನಡೆಸಬಾರದು. ಕೈಯಲ್ಲಿದ್ದ ಕಾಳೆಲ್ಲ ತೀರಿದ ಮೇಲೆ ಮನೆಯ ಕಾಳುಗಳನ್ನು ನಡೆಸಬೇಕು. ಕಾಳು ಮನೆಯಿಂದ ಮನೆಗೆ ನಡೆಯಬೇಕು. ಒಮ್ಮೆಲೆ ಎರಡು ಮನೆ ನಡೆಯಬಾರದು. ಬೇರೆಯವರ ಕಾಳನ್ನು ಹಾಕಬಾರದು. ಹೊಡೆಯಬಾರದು. ಗೆರೆಯ ಮೇಲೆ ಚಲಿಸಬೇಕು. ಪಗ್ಗವಾದ ಕಾಳುಗಳನ್ನು ಎತ್ತಿಕೊಳ್ಳಬಾರದು. ಚೌಕದ ಮೂಲೆಗಳು ಹಾಗೂ ನಾಲ್ಕು ಕಂಬಗಳು ಕೂಡಿದ ಸ್ಥಳಗಳು ಮನೆಗಳು. ಒಟ್ಟಿಗೆ 24 ಮನೆಗಳು, 16 ಪಗ್ಗದ ಸಾಲುಗಳು. ಪಗ್ಗ ಮಾಡಿದವರಿಗೆ ಆಡಲು ಇನ್ನೊಂದು ಅವಕಾಶವಿರುತ್ತದೆ. ಒಂದೊಂದೆ ಮನೆಯ ದಾಟುತ್ತ ಕಂಬದ ಮೂಲದ ಕೆಳಗಿನ ಸಾಲಿನ ಕಾಳು ಮೇಲೇರಬಹುದು. ತನ್ನ ಕಾಳುಗಳನ್ನು ಚಲಿಸಲಾಗದಂತೆ ಬೇರೆಯವರ ಕಾಳುಗಳು ಇದ್ದರೆ ಆಟ ಬಿಡಬೇಕು.
ಈ ಆಟ ಯೋಚಿಸಿ ಆಡುವಂತ ಆಟ. ಚೆಸ್ ರೀತಿ ಭವಿಷ್ಯದ ನಡೆಗಳನ್ನು ಅಂದಾಜು ಮಾಡಬೇಕು. ಬೇರೆ ಬೇರೆ ರೀತಿಯ ಚಲನೆಯ ಸಂಯೋಜನೆಗಳನ್ನು ಯೋಚಿಸುವರು ಈ ಆಟದಲ್ಲಿ ಗೆಲ್ಲುತ್ತಾರೆ.
ಹಿಂದಿನ ವಾರದ ಒಗಟುಗಳಿಗೆ ಉತ್ತರ
(1) ಹುಣಿಸೆಕಾಯಿ (ಮರದಲ್ಲಿ ತೂಗಾಡುತ್ತೆ) (2) ಊದಿನ ಕಡ್ಡಿ
ಈ ವಾರದ ಒಗಟುಗಳು
1. ಊಟಕ್ಕೆ ಮೊದಲು ನಾನು ಅಂತ ಬಂತು ಕೂತುಕೊಳ್ಳುತ್ತೆ.
2. ಮೇಲಿನಿಂದ ಹುಡುಗ ಕೆಳಗೆ ಬಿದ್ದ, ಚಡ್ಡಿ ಪಟಕ್ ಅಂತು.

– ಶಿ.ನಾ.ಚಂದ್ರಶೇಖರ

   

Leave a Reply