ಚೌಕಾಬಾರ – 2

ಸ್ವದೇಶೀ ಕ್ರೀಡೆ - 0 Comment
Issue Date : 14.05.2015

– ಹಿಂದಿನ ಸಂಚಿಕೆಯಿಂದ…
ಮೇಲ್ಮುಖ ಬಿದ್ದ ಒಂದು ಕವಡೆಗೆ ಮೇಲ್ಮುಖ ಬಿದ್ದ ಇನ್ನೊಂದು ಕವಡೆಯಿಂದಲೂ, ಕೆಳಮುಖ ಬಿದ್ದ ಕವಡೆಗೆ ಕೆಳಮುಖ ಬಿದ್ದ ಇನ್ನೊಂದು ಕವಡೆಯಿಂದಲೂ, ಗೋಲಿ ಹೊಡೆಯುವಂತೆ ಬೆರಳಿನಿಂದ ಹೊಡೆಯಬೇಕು. ಒಂದಕ್ಕೆ ಇನ್ನೊಂದು ತಾಗಿದರೆ ಪ್ರತಿಬಾರಿ ಒಂದು ಅಂಕ ದೊರೆಯುತ್ತದೆ. ಹೊಡೆಯುವಾಗ ಕೆಲವೊಮ್ಮೆ ಕವಡೆ ಇನ್ನೊಂದು ಕವಡೆಗೆ ತಾಗದೆ ಅದರ ಸಮೀಪ ಬರುವುದುಂಟು. ಆಗ ಎದುರು ಪಕ್ಷದವರೊಬ್ಬರು ಅದನ್ನು ಜೀಕುವರು. ಜೀಕುವುದೆಂದರೆ ಸಮೀಪ ಬಿದ್ದ ಎರಡು ಕವಡೆಗಳ ನಡುವೆ ಕಿರುಬೆರಳು ಹಾಯಿಸುವರು. ಹಾಯಿಸುವಾಗ ಅಲುಗಾಡಿದರೆ ಹಿಂದೆ ಆಡಿದ ಮನೆಯಲ್ಲವೂ ಹೋಯಿತು. ಅಂದರೆ ಕಾಯಿ ತನ್ನ ಕಟ್ಟೆಗೆ ತಿರುಗಬೇಕು.
ಆರು ಕವಡೆಯಿಂದ ಆಡುವಾಗ ಜೀಕುವ ಪದ್ಧತಿಯಾಗಲಿ, ಒಂದಕ್ಕೆ ಇನ್ನೊಂದು ಹೊಡೆದು ಅಂಕ ಗೆಲ್ಲುವುದಾಗಲಿ ಇಲ್ಲ. ಆರು ಕವಡೆಯಿಂದ ಆಡುವಾಗ ಒಂದರ ಮೇಲೊಂದು ಕವಡೆ ಬಿದ್ದು ಕವಡೆಯ ನಿಶ್ಚಿತ ಸ್ಥಿತಿ ತಿಳಿಯದಂತಾದಾಗ ಇನ್ನೊಬ್ಬ ಆಟಗಾರ ಒಂದು ಕವಡೆ ಎತ್ತಿ ಅದರ ಮೇಲೆ ಬಡಿದು, ಅವು ಒಂದನ್ನೊಂದು ಅಗಲುದಂತೆ ಮಾಡಿ ನಿಜ ಸ್ಥಿತಿ ಗುರುತಿಸುವನು.
ಸಾಮಾನ್ಯವಾಗಿ ಒಂದು ಕಾಯಿಯಿಂದ ಇನ್ನೊಂದು ಕಾಯಿ ಹೊಡೆಯುತ್ತಾ, ತಮ್ಮ ರಕ್ಷಣೆ ಮಾಡಿಕೊಳ್ಳುತ್ತಾ ಹಣ್ಣು ಮನೆಗೆ ಬರುತ್ತಾರೆ. ಎರಡು ಕಾಯಿ ಜೋಡಿಯಿಂದ ಇನ್ನೊಂದು ಜೋಡಿ ಕೊಲ್ಲುವ ಅವಕಾಶವೂ ಇದೆ. ಪ್ರಾರಂಭದಿಂದ 12 ಮನೆ ದಾಟಿದ ಮೇಲೆ ಜೋಡಿ ಹೊಡೆಯುವ ಅವಕಾಶವಿದೆ. ಅಂದರೆ ಒಳಮನೆಯಲ್ಲಿ ಸಾಧ್ಯ. ಸಮ ಸಂಖ್ಯೆಯಲ್ಲಿ ಅಂಕ ದೊರೆತಾಗ ಮಾತ್ರ ಜೋಡಿ ಮಾಡಬೇಕು. ಜೋಡಿ ಬಿಡಿಸಬೇಕು, ಜೋಡಿ ನಡೆಸಬೇಕು. ಜೋಡಿ ನಡೆಸುವಾಗ 2 ಅಂಕ ದೊರೆತರೆ ಒಂದು ಮನೆ, 4 ಅಂಕ ದೊರೆತರೆ 2 ಮನೆ ನಡೆಸಬಹುದು. 3 ಅಂಕ ದೊರೆತರೆ ಬೇರೆ ಒಂಟಿ ಕಾಯಿ ನಡೆಸಬಹುದು. ಜೋಡಿಯನ್ನು ಕಟ್ಟೆಯಲ್ಲಿಯೇ ಮಾಡಬೇಕು, ಕಟ್ಟೆಯಲ್ಲಿಯೇ ಬಿಡಿಸಬೇಕು. ಒಳಗಿನ ಮನೆಯ ಕಟ್ಟೆಯಲ್ಲಿ ಜೋಡಿ ಮಾಡಿದರೆ ಅದನ್ನು ಬಿಡಿಸುವಂತಿಲ್ಲ. ಕೊನೆಯವರೆಗೆ ಅದನ್ನು ಜೋಡಿಯಾಗಿಯೇ ನಡೆಸಬೇಕು. ಸುರಕ್ಷಿತ ಮನೆಯ ಹಿಂದೆ ಜೋಡಿ ಮಾಡಿದರೆ ಅದನ್ನು ಒಂದು ಮನೆ ಚಲಿಸಿದ ನಂತರ ಬಿಡಿಸಬಹುದು.
ನಡುಮನೆ ಮುಟ್ಟಲು ಸಮೀಪ ಇದ್ದಾಗ ಅದನ್ನು ಮುಟ್ಟಲು ಬೇಕಾಗುವ ಅಂಕಕ್ಕಿಂತ ಒಂದು ಹೆಚ್ಚು ಅಂಕ ದೊರಕಬೇಕು. ಹೆಚ್ಚು ಅಂಕ ದೊರೆತರೆ ಆಟ ಬಿಡಬೇಕು ಅಥವಾ ಹಿಂದೆ ಬೇರೆ ಕಾಯಿಯಿದ್ದರೆ ನಡೆಸಬಹುದು. ನಾಲ್ವರಲ್ಲಿ ಮೊದಲು ಎಲ್ಲ ಕಾಯಿಯನ್ನು ಹಣ್ಣು ಮಾಡಿದವ ರಾಜ. ಎರಡನೆಯವ ಮಂತ್ರಿ, ಮೂರನೆಯವ ಸೇನಾಪತಿ, ನಾಲ್ಕನೆಯವ ಸೈನಿಕ. ಮೊದಲು ಆಡಿ ಮುಗಿಸಿದವ ತನ್ನ ಕಾಯಿ ತೆಗೆದುಕೊಳ್ಳುತ್ತಾನೆ. ಕ್ರಮೇಣ ಮಂಡಲ ಆಟಗಾರರ ಸಂಖ್ಯೆ ಕಡಿಮೆಯಾಗುತ್ತದೆ. ಒಬ್ಬರು ಆಟ ಮುಗಿಸಿದ ಮೇಲೆ ಉಳಿದವರಷ್ಟೆ ಆಟ ಮುಂದುವರೆಸುತ್ತಾರೆ. ಕೊನೆಗೆ ಉಳಿದವನಿಗೆ ಮೂರು ಅವಕಾಶ ಕೊಡಲಾಗುತ್ತದೆ. ಅಷ್ಟರಲ್ಲಿ ಆಟ ಮುಗಿಸದಿದ್ದರೆ ಅವನಿಗೆ ಉಳಿದವರು ಗುದ್ದು ಕೊಡುತ್ತಾರೆ. ಹೀಗಾಗಿ ಇದಕ್ಕೆ ‘ಗುದ್ದಿನ ಆಟ’ವೆಂತಲೂ ಕರೆಯುತ್ತಾರೆ.
ಹಿಂದಿನ ವಾರದ ಒಗಟುಗಳಿಗೆ ಉತ್ತರ
(1) ಭೂಪಟ (2) ಗಡಿಯಾರ
ಈ ವಾರದ ಒಗಟುಗಳು
(1) ಎಂಟು ಕೈಯುಂಟು ದೇವರಲ್ಲ, ಸೊಂಡಿಲುಂಟು ಆನೆಯಲ್ಲ. ಕಪ್ಪು ಸೀರೆ ಉಟ್ಟಿದ್ದಾಳೆ ಹೆಂಗಸಲ್ಲ.
(2) ಒಳ ಸಿಹಿ, ಹೊರಸಿಹಿ, ಹುಳಿಸಿಹಿ, ಮೈಯೆಲ್ಲ ಸಿಹಿ.

   

Leave a Reply