ಚೌಕಾಬಾರ

ಸ್ವದೇಶೀ ಕ್ರೀಡೆ - 0 Comment
Issue Date : 08.05.2015


ಒಬ್ಬನ ಸಾಗುವ ವಿಧಾನವನ್ನು ಅಂಕೆ ಬರೆದು ತಿಳಿಸಲಾಗಿದೆ. ಇದೇ ರೀತಿ 49 ಮನೆ ಇದ್ದಾಗಲೂ ಸಾಗಬೇಕು.
ಈ ಆಟಕ್ಕೆ ಚವೆಯಾಟ, ಕವಡೆಯಾಟ, ಚೌಕಾಬಾರ ಇತ್ಯಾದಿ ಹೆಸರುಗಳಿವೆ. ಆಟಗಾರರು ನಾಲ್ಕು ಜನ, ಮನೆಗಳು 25 ಅಥವಾ 49. ನಾಲ್ಕು ಅಥವಾ ಆರು ಕವಡೆ ಬೇಕು. ಕವಡೆ ಬದಲಿಗೆ ಚಿಪ್ಪುಗಳನ್ನು ಉಪಯೋಗಿಸುವುದು ಉಂಟು. ಪ್ರತಿಯೊಬ್ಬ ಆಟಗಾರರನೂ ಒಂದೊಂದು ಬಗೆಯ ನಾಲ್ಕು / ಎಂಟು ವಸ್ತುಗಳನ್ನು ಕಾಯಿಗಳೆಂದು ಬಳಸಬೇಕು. ಕಡಲೆಕಾಳು, ಬಳೆಚೂರು, ಕಲ್ಲುಗಳು, ಕಡ್ಡಿ ಇತ್ಯಾದಿ ಬಳಸಬಹುದು. ಒಬ್ಬರ ಕಾಯಿ ಇನ್ನೊಬ್ಬರಂತೆ ಇರಬಾರದು.
ನಾಲ್ಕು ಆಟಗಾರರಿಗೆ ನಾಲ್ಕು ಮನೆಗಳು; ಇವಕ್ಕೆ ಕಟ್ಟೆ ಎನ್ನುತ್ತಾರೆ. 25 ಮನೆಯ ಆಟದಲ್ಲಿ ಮತ್ತೆ ನಾಲ್ಕು ಸುರಕ್ಷಿತ ಮನೆಗಳಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಕಟ್ಟೆಯಿಂದ ಆರಂಭಿಸುತ್ತಾರೆ. ನಡುವಿನ ಮನೆಗೆ ಹಣ್ಣು ಮನೆ ಎನ್ನುತ್ತಾರೆ. ಆಟದ ಕಟ್ಟೆ ಹಾಗೂ ಸುರಕ್ಷಿತ ಕಟ್ಟೆಗಳಲ್ಲಿ ಎಲ್ಲಾ ಕಾಯಿಗಳು ಸುರಕ್ಷಿತ. ಅಲ್ಲಿಯ ಯಾರು ಕಾಯಿಗಳನ್ನು ಕೊಲ್ಲಲಾರರು. ಪ್ರತಿಯೊಬ್ಬರು ಆಡುವ ಮೊದಲು ಒಂದು ಅವಕಾಶ ಪಡೆದು ತಾವು ನಡೆಸಬೇಕಾದ ಮನೆಗಳು ಎಷ್ಟು ಎಂಬುದನ್ನು ಕವಡೆ ಹಾಕಿ ಕಂಡುಕೊಳ್ಳಬೇಕು. ಆರು ಕವಡೆಗಳು ಮೇಲ್ಮುಖ ಬಿದ್ದರೆ ಆರು ಅಂಕ, ನಾಲ್ಕು ಇದ್ದಾಗ ನಾಲ್ಕು, ಆರು ಕವಡೆಗಳು ಕೆಳಮುಖ ಬಿದ್ದರೆ ಹನ್ನೆರಡು ಅಂಕ, ನಾಲ್ಕು ಇದ್ದಾಗ ಎಂಟು. ಕೆಲವು ಕೆಳಮುಖ ಬಿದ್ದು ಕೆಲವು ಮೇಲ್ಮುಖ ಬಿದ್ದರೆ, ಕೆಳಮುಖ ಬಿದ್ದವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಮೇಲ್ಮುಖ ಬಿದ್ದ ಪ್ರತಿಯೊಂದು ಕವಡೆಗೆ ಒಂದು ಅಂಕ. ಮೊದಲು ಆಡಿದ ಪ್ರತಿಯೊಬ್ಬರ ಎಲ್ಲ ಕವಡೆಗಳೂ ಕೆಳಮುಖ ಅಥವಾ ಮೇಲ್ಮುಖ ಬೀಳಲೇಬೇಕು. ಇಲ್ಲವಾದರೆ ಆಟ ಬಿಡಬೇಕು. 8 ಕಾಯಿಯಿಟ್ಟು ಆಡುವವರು ಪ್ರತಿಸಾರಿ 2 ಅವಕಾಶ ಪಡೆದು ಮೇಲ್ಮುಖ ಬಿದ್ದ ಕವಡೆಗಳ ಮೊತ್ತದಷ್ಟು ಮನೆ ನಡೆಸಬೇಕು. ನಾಲ್ಕು ಕಾಯಿ ನಡೆಸುವವರಾಗಲಿ, ಎಂಟು ಕಾಯಿ ನಡೆಸುವವರಾಗಲಿ ಎಲ್ಲ ಕವಡೆಗಳನ್ನು ಮೇಲ್ಮುಖ ಅಥವಾ ಕೆಳಮುಖ ಬೀಳಿಸಿದಾಗ ಅವರಿಗೆ ಇನ್ನೊಂದು ಅವಕಾಶವಿದೆ. ಕಾಯಿ ಕೊಂದವರಿಗೆ ಆಡಲು ಒಂದು ಅವಕಾಶವಿದೆ. ಎಂಟು ಕಾಯಿ ನಡೆಸುವವರು ಒಂದು ಆಟದಲ್ಲಿ 8 ಮತ್ತು 12 ಅಂಕ ಪಡೆದರೂ ಅವರಿಗೆ ಒಂದೇ ಅವಕಾಶ. ಹೀಗೆ ಯಾರಿಗೂ ಮೂರು ಅವಕಾಶಕ್ಕಿಂತ ಹೆಚ್ಚಿಲ್ಲ. ನಾಲ್ಕು ಕವಡೆ ಆಡುವಾಗ ಕೆಲವರು ಮೂರು ಕವಡೆ ಕೆಳಮುಖ ಬಿದ್ದಾಗ ಒಂದು ಮುಕ್ಕಿ ಎಂದು ಆಟ ಬಿಡುವರು. ನಾಲ್ಕು ಕವಡೆಯಿಂದ ಆಡುವಾಗ ಎರಡು ಕೆಳಮುಖ, ಎರಡು ಮೇಲ್ಮುಖ ಬಿದ್ದರೆ ಲೆಕ್ಕದಂತೆ ಎರಡು ಅಂಕ ದೊರೆಯಬೇಕಷ್ಟೇ, ಆದರೆ ಅದನ್ನು ಜೋಡಿಗೆ ಹೊಡೆದು ಕಾಯಿ ಗೆಲ್ಲಬಹುದು.
ಹಿಂದಿನ ವಾರದ ಒಗಟುಗಳಿಗೆ ಉತ್ತರ
(1) ತಟ್ಟೆ (2) ಹುಣಸೆಹಣ್ಣು
ಈ ವಾರದ ಒಗಟುಗಳು
(1) ಊರುಂಟು ಜನರಿಲ್ಲ, ನದಿಯುಂಟು ನೀರಿಲ್ಲ, ರಸ್ತೆಯುಂಟು ವಾಹನವಿಲ್ಲ, ಹಾಗಾದರೆ ನಾನ್ಯಾರು?
(2) ಎಲ್ಲರನ್ನು ಎಚ್ಚರಿಸುವ ಪೋರನಿಗೆ, ಕಿವಿ ಹಿಂಡಿದರೆ ಹೊಟ್ಟೆ ತುಂಬುತ್ತೆ

– ಶಿ.ನಾ. ಚಂದ್ರಶೇಖರ

   

Leave a Reply