ಚೌಡಿ ಮಾಡಿದ ಉಪಕಾರ

ಕಥೆಗಳು ; ಕಿರಿಯರ ಲೋಕ - 0 Comment
Issue Date : 30.10.2015

ವಜ್ರಳ್ಳಿ ಎಂಬ ಊರಿನಲ್ಲಿ ನೆಡಿಗೆಮನೆ ಎಂಬ ಒಂದು ಬ್ರಾಹ್ಮಣರ ಕೇರಿಯಿತ್ತು.  ಗೋಪಾಲಭಟ್ಟರುಎಂಬ ಸದ್ಬ್ರಾಹ್ಮಣರೊಬ್ಬರು ಕುಟುಂಬ ಸಮೇತ ರೈತಾಪಿ ಮಾಡಿಕೊಂಡು ಜೀವನಯಾಪನೆ ಮಾಡುತ್ತಿದ್ದರು. ಹತ್ತಾರು ಎಕರೆ ಜಮೀನು ಇದ್ದರೂ ತೀವ್ರ ಬಡತನದಿಂದಾಗಿ ಸಾಗುವಳಿ ಮಾಡಲಾರದೆ ಕುನ್ನಡೆ ಬೈಲು ಎಂಬ ಹತ್ತು ಎಕರೆ ಗದ್ದೆ  ಹಾಳುಬಿದ್ದುಕೊಂಡೇ ಇತ್ತು. ಮನೆಯಲ್ಲಿ ಬಡತನವಿದ್ದುದರಿಂದ ಊಟಕ್ಕೂ ತತ್ವಾರ ಎಂಬ ಸ್ಥಿತಿ ಇತ್ತು. ಗೋಪಾಲಭಟ್ಟರನ್ನು ‘ಗೋಪಾಲಜ್ಜ’ ಎಂದೇ ಎಲ್ಲರೂ ಪ್ರೀತಿಯಿಂದ  ಕರೆಯುತ್ತಿದ್ದರು. ಅಷ್ಟಿಷ್ಟು ಮಂತ್ರ ಕಲಿತಿದ್ದರಿಂದ ಆಗೀಗ ಭಟ್ಟ  ಕಸುಬಿಗೂ ಹೋಗುತ್ತಿದ್ದರು. ಸಿಂಹತಿಂಗಳಿನಲ್ಲಿ ತಾಳೆಗರಿಯಲ್ಲಿದ್ದ ಪದ್ಯರೂಪದ ಶಂಕರ ಸಂಹಿತೆ ಆಖ್ಯಾನವನ್ನು ರಾಗವಾಗಿ ಓದುವುದು ಅವರಿಗೆ ಪ್ರಿಯವಾದ ಹವ್ಯಾಸ, ಕಾವ್ಯವನ್ನೂ ರಚಿಸುತ್ತಿದ್ದರು.
 ಮಳೆಗಾಲ ಶುರುವಾಯಿತು ಆ ವರ್ಷ ಹೊಲ ಸಾಗುವಳಿ ಮಾಡಬೇಕೆಂದು ಗೋಪಾಲಜ್ಜರು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಗದ್ದೆೆ ಉಳುಮೆ ಮಾಡಿ ಹಲಗೆ ಹೊಡೆದು ಇಡಲಾಗಿತ್ತು. ಆದರೆ ಸಸಿ ಕಿತ್ತು ನೆಟ್ಟಿ ಹಾಕುವವರು ಇರಲಿಲ್ಲ. ಆಳು ಸಿಗದೇ ಕಂಗಾಲಾಗಿದ್ದರು.
 ಆ ದಿನ ರಾತ್ರಿ ಕಿಟಕಿಯಲ್ಲಿ ಓರ್ವ ಹೆಂಗಸು ‘‘ಎಣ್ಣೆ ಕೊಡಿ, ತಲೆ ಬಾಚಿಕೊಳ್ಳುವೆ… ಬಾಚಿಕೊಳ್ಳದೆ ಬಾಳದಿನ ಆತು… ನಿಮ್ಮ ಕಷ್ಟ ನೋಡಲಾಗದೆ ನೆಟ್ಟಿ ಕೆಲಸ ಮುಗಿಸಿ ಹಾಕಿದ್ದೆ ನೋಡಿ..’’  ಎಂದು ಕೋಮಲ ಸ್ವರದಲ್ಲಿ ಹೇಳಿದ್ದನ್ನು ಕೇಳಿ ಧೈರ್ಯಶಾಲಿಯಾದ ಭಟ್ಟರು ಕಿಟಕಿ ಬಾಗಿಲು ತೆಗೆದು ಚಿಮಣಿ ಬೆಳಕು ಹಿಡಿದು ನೋಡಿದರು. ಕೂದಲನ್ನು ಬಿಚ್ಚಿ ಹಾಕಿಕೊಂಡ ಎಳೆಯ ಹೆಣ್ಣು ಮಗಳ ಆಕೃತಿ ಅವರಿಗೆ ಕಂಡಿತು..
 ಭಟ್ಟರು ‘ಯಾರು ನೀನು?’ ಕೇಳಿದರು.
 ‘ನಾನು ಚೌಡಿ… ಚೌಡಮ್ಮನ ಸೇವಕಿ..’ ಎಂದಳಂತೆ.
 ಚೌಡಿಗೆ ಎಣ್ಣೆೆಕೊಡಬಾರದು. ಎಣ್ಣೆೆಕೊಟ್ಟರೆ ಅವಳ ಅನುಗ್ರಹ ಕೃಪೆ ಇಲ್ಲದಂತಾಗುತ್ತದೆ ಎಂಬ ನಂಬಿಕೆ ಆಗ ಪ್ರಚಲಿತದಲ್ಲಿತ್ತಂತೆ. ಆದ್ದರಿಂದ ಎಣ್ಣೆಗಿಂಡಿಯನ್ನು ರಾತ್ರಿ ಸಮಯದಲ್ಲಿ ತಪ್ಪಿಯೂ ಹೊರಗೆ ಇಡುತ್ತಿರಲಿಲ್ಲವಂತೆ.  
 ‘ಕೊಡೋಣಂತೆ ಒಂದಿನ… ನಮಗೆ ಅನುಗ್ರಹ ಮಾಡು ನಿನಗೆ ಪೂಜೆ ಸಲ್ಲಿಸ್ತೇನೆ’ ಎಂದು ಭಟ್ಟರು ಹೇಳಿ ಕಿಟಕಿ ಬಾಗಿಲು ಹಾಕಿಕೊಂಡು ಮಲಗಿದರು. ಚೌಡಿ ಗುನುಗುನು ಹಾಡು ಹೇಳುತ್ತ ಝುಣುಝುಣು ಕಾಲುಗೆಜ್ಜೆ ದನಿ ಮಾಡುತ್ತ ನಡೆದು ಹೋದಳಂತೆ. ಮರುದಿನ ನಸುಕಿನಲ್ಲೇ ಎದ್ದು ಗೋಪಾಲಜ್ಜರು ಗದ್ದೆಗೆ ಹೋಗಿ ನೋಡುತ್ತಾರೆ! ಸಸಿ ಕಿತ್ತು ಇಡೀ ಗದ್ದೆ ಬಯಲಲ್ಲಿ ನೆಟ್ಟಿ ಮಾಡಲಾಗಿದೆ. ಆದರೆ ಸಸಿಯನ್ನು ತಲೆಕೆಳಗೆ ನೆಡಲಾಗಿತ್ತಂತೆ. ಇದು ಚೌಡಿಯದೇ ಕೆಲಸ ಎಂದು ಗೊತ್ತಾದ ಗೋಪಾಲ ಭಟ್ಟರು ತಲೆಕೆಳಗೆ ಯಾಕೆ ನೆಟ್ಟಿತು? ಎಂದು ತಲೆಕೆಡಿಸಿಕೊಂಡಾಗ ಅವರಿಗೆ ಪಕ್ಕನೆ ಹೊಳೆಯಿತು. ಮುನ್ನಿನ ದಿನ ಯಾರೋ ಮಕ್ಕಳು ತಮಾಷೆ ಮಾಡುತ್ತ ಒಂದೆರಡು ಸಸಿಯನ್ನು ತಲೆಕೆಳಗೆ ಮಾಡಿ ನೆಟ್ಟು ಬಂದಿದ್ದರು. ಅದರಂತೆ ಇಡೀ ಗದ್ದೆ ಬಯಲಿಗೂ ಚೌಡಿ ಸಸಿ ನೆಟ್ಟುಬಿಟ್ಟಿದ್ದಳು. ಇದನ್ನು ಅರ್ಥ ಮಾಡಿಕೊಂಡ ಗೋಪಾಲಜ್ಜರು ಐದು ಸಸಿಯನ್ನು ಕಿತ್ತು ಸರಿಯಾಗಿ ನೆಟ್ಟು ಬಂದರು. ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗ ಇಡೀ ಗದ್ದೆ ಬಯಲಿನಲ್ಲಿ ಭತ್ತದ ಸಸಿಯನ್ನು ಸರಿಯಾಗಿ, ಕ್ರಮಬದ್ಧವಾಗಿ ನಾಟಿ ಮಾಡಲಾಗಿತ್ತು! ಚೌಡಿಯ ಅನುಗ್ರಹಕ್ಕೆ ಎಲ್ಲರೂ ಬೆರಗಾಗಿ, ಪೂಜೆ ಪುನಸ್ಕಾರ ಮಾಡಿದರು. ಅಂದಿನಿಂದ ಅವರ ಅನೇಕ ದೊಡ್ಡ ದೊಡ್ಡ ಕೆಲಸಗಳಲ್ಲಿ ಚೌಡಿ ಅವರಿಗೆ ಸಹಾಯ ಮಾಡುತ್ತಿತ್ತಂತೆ. ಆದರೆ ಆಗೀಗ ಕಿಟಕಿಯ ಬಳಿ ನಿಂತು ಎಣ್ಣೆ ಕೊಡಿ, ತಲೆಬಾಚಿಕೊಳ್ಳುವೆ, ಬಾಚಿಕೊಳ್ಳದೆ ಬಾಳದಿನ ಆತು ಎಂದು ಹೇಳುತ್ತಿದ್ದಳಂತೆ. ಕೊಡೋಣ ಒಂದಿನ… ಅನುಗ್ರಹ ಇರಲಿ..ಅನುದಿನ ಎಂದು ಬೇಡಿಕೊಳ್ಳುತ್ತ ಬಂದರು. ಆದರೆ ಎಣ್ಣೆೆಕೊಡಲಿಲ್ಲ.
 ಹೀಗೆ ಕೆಲವು ವರ್ಷ ಚೌಡಿಯ ಅನುಗ್ರಹ ಅವರಿಗೆ ಆಯಿತು. ಕೆಲಸ ಮಾಡಿಕೊಡುತ್ತಿದ್ದಳು. ಅನುಕೂಲವೂ ಸುಧಾರಿಸಿತು.. ಆದರೆ ಅದೊಂದುದಿನ ಆಕಸ್ಮಿಕವಾಗಿ ಭಟ್ಟರ ಹೆಂಡತಿ ಕಿಟಕಿಯ ಬಳಿ ಕುಳಿತು ತಲೆಬಾಚಿಕೊಂಡು ಎಣ್ಣೆ ಗಿಂಡಿಯನ್ನು ಕಿಟಕಿಯ ಮೇಲೇಯೇ ಇಟ್ಟು ಮರೆತುಬಿಟ್ಟಳು. ಆ ದಿನ ರಾತ್ರಿ ಪ್ರಮಾದ ಘಟಿಸಿಹೋಯಿತು. ರಾತ್ರಿ ಎಣ್ಣೆ ಕೊಡಿ, ತಲೆಬಾಚಿಕೊಳ್ಳುವೆ ..ಬಾಚಿಕೊಳ್ಳದೆ ಬಾಳದಿನ ಆತು.. ಎನ್ನುತ್ತ ಬಂದ ಚೌಡಿ ಕಿಟಕಿಯಲ್ಲಿದ್ದ ಎಣ್ಣೆಗಿಂಡಿಯಿಂದ ಅಷ್ಟೂ ಎಣ್ಣ್ಣೆೆಯನ್ನು ತಲೆಗೆ ಹಾಕಿಕೊಂಡು, ತಲೆಬಾಚಿಕೊಂಡು ‘‘ನಾನು ಬರ್ತೆ ನಿಮ್ಗೆ ಒಳ್ಳೆದಾಗ್ಲಿ.. ಪುಣ್ಯ ಬರ‌್ಲಿ..’’ ಎಂದು ಹಾಡುತ್ತ ಹೊರಟು ಹೋದಳಂತೆ. ಆಗಲೇ ಭಟ್ಟರಿಗೆ ಎಚ್ಚರಾಗಿ, ಪ್ರಮಾದ ಆಗಿಹೋಯ್ತೆಂದು  ಹೊರಗೆ ಬಂದು ನೋಡಿದಾಗ ತುಂಬಿದ ಎಣ್ಣೆೆಗಿಂಡಿ ಬರಿದಾಗಿತ್ತು.
 ಆಮೇಲೆ ಎಂದೂ ರಾತ್ರಿ ಹೀಗೆ ಹೆಣ್ಣು ದನಿ ಕೇಳಿಬರಲಿಲ್ಲ. ಚೌಡಿಯ ದರ್ಶನ ಆಗಲಿಲ್ಲ. ಶಾಶ್ವತವಾಗಿ ಅವಳು ಹೊರಟು ಹೋಗಿದ್ದಳು. ಅವರಿಗೆ ಅನಾಯಾಸ ಆಗುತ್ತಿದ್ದ ಕೆಲಸಗಳೂ ನಿಂತುಹೋದವು. ಆದರೆ ಗೋಪಾಲಜ್ಜರು ಮತ್ತು ಮುಂದಿನ ಪೀಳಿಗೆಯವರೂ ವಂಶ ಪಾರಂಪಾರ್ಯವಾಗಿ ಚೌಡೇಶ್ವರಿಯನ್ನು ಸ್ಥಾಪಿಸಿ ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ರಾತ್ರಿ ಎಣ್ಣೆಗಿಂಡಿ-ಎಣ್ಣೆ ಪಾತ್ರೆ ಹೊರಗಿಡಬಾರದು ಎಂಬ ನಂಬಿಕೆ ಮತ್ತಷ್ಟು ಪ್ರಚಲಿತಗೊಂಡಿತಂತೆ.
 (ಎನ್ನ ಅಪ್ಪಯ್ಯ ಅವನ ಅಜ್ಜ ಹೇಳುತ್ತಿದ್ದ ಈ ಕಥೆಯನ್ನು ಎನಗೆ ಹೇಳುತ್ತಿದ್ದ)

   

Leave a Reply