ಜನಕ ಮಹಾರಾಜನ ಆತ್ಮವಿದ್ಯೆ !

ಕಿರಿಯರ ಲೋಕ ; ಲೇಖನಗಳು - 0 Comment
Issue Date :

ಜನಕ ಮಹಾರಾಜನ ಬಾಲ್ಯ ಮಿತ್ರ ಶುಕಮುನಿಗಳು. ಒಮ್ಮೆ ಬಹು ದಿನಗಳ ನಂತರ ಶುಕಮುನಿಗಳು ತಮ್ಮ ಆಪ್ತಮಿತ್ರ ಜನಕನನ್ನು ಕಾಣಲು ಬಂದರು. ಆಸ್ಥಾನದಲ್ಲಿ ಸಕಲ ಪಂಡಿತರು ಆಸೀನರಾಗಿದ್ದರು. ಶುಕಮುನಿಗಳು ಬಾಲಬ್ರಹ್ಮಚಾರಿ. ಕೌಪೀನಧಾರಿ, ಮುನಿ ಜನಕನ ಆಸ್ಥಾನಕ್ಕೆ ಬರಲು ದ್ವಾರ ಪಾಲಕರು ಅವನನ್ನು ತಡೆದು ನೀನಾರು? ಇಲ್ಲಿಗೇಕೆ ಬಂದಿರುವೆ? ಎಂದು ಕೇಳಲಾಗಿ, ಶುಕಮುನಿಗಳು ನಾನು ನಿಮ್ಮ ದೊರೆಯ ಆಪ್ತಮಿತ್ರನು. ನನ್ನ ಹೆಸರು ಶುಕನೆಂದು ಕರೆಯುತ್ತಾರೆ. ನಾನೀಗ ನಿಮ್ಮ ರಾಜನ ಭೇಟಿಗೆ ಬಂದಿರುವೆ ಎಂದು ತಿಳಿಸಲು, ದ್ವಾರಪಾಲಕರು ಈ ಬೆತ್ತಲೆ ಸನ್ಯಾಸಿಯನ್ನು ಕಂಡು ಅಪಹಾಸ್ಯಗೈದು, ನಡೆ ಆಚೆ ಎಂದು ಗದರಿಸಿದರು ! ಮುನಿಗಳೀಗ ದ್ವಾರಪಾಲಕರಿಗೆ ‘ನಿಮ್ಮ ದೊರೆಗೆ ನಾನು ಅವನ ಭೇಟಿಗೆ ಬಂದಿಹೆನೆಂದು ಹೇಳಿರಿ’ ಎಂದಾಗ ದ್ವಾರಪಾಲಕರು ಅವನನ್ನು ಅಲ್ಲಿಯೇ ನಿಲ್ಲಿಸಿ ಜನಕ ಮಹಾರಾಜರ ಹತ್ತಿರ ಹೋಗಿ ‘ಮಹಾರಾಜ, ತಮ್ಮ ಭೇಟಿಗೆಂದು ಒಬ್ಬ ಸನ್ಯಾಸಿ ಬಂದಿದ್ದಾನೆ. ಅವನು ತಮ್ಮ ಆಪ್ತಮಿತ್ರನೆಂದು ಹೇಳುತ್ತಿದ್ದಾನೆ. ಅವನ ಹೆಸರು ಶುಕಮುನಿ ಎಂದು ಹೇಳುತ್ತಿದ್ದಾನೆ’ ಎಂದರು.
ದ್ವಾರಪಾಲಕರು ಈ ರೀತಿ ಹೇಳಲು ತಕ್ಷಣವೇ ಜನಕ ಮಹಾರಾಜನು ಹರ್ಷಗೊಂಡು ಓಡೋಡಿ ಬಂದು, ದ್ವಾರಬಾಗಿಲಲ್ಲಿ ನಿಂತಿದ್ದ ತನ್ನ ಮಿತ್ರ ಶುಕಮುನಿಯನ್ನು ಅಪ್ಪಿಕೊಂಡು ಅತೀವ ಆನಂದದಿಂದ ಅವನ ಕ್ಷೇಮ-ಸಮಾಚಾರ ವಿಚಾರಿಸಿ, ಅವನ ಕೈ ಹಿಡಿದು ಕರೆತಂದು ತನ್ನ ಪಕ್ಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿಕೊಂಡು ಆಪ್ತ ಸಮಾಲೋಚನೆಯಲ್ಲಿ ತೊಡಗಿದ. ಅಷ್ಟರಲ್ಲಿಯೇ ರಾಜಬೀದಿಯಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಮನುಷ್ಯ ತೀರಿಕೊಂಡಿದ್ದ, ಅವನನ್ನು ಅಂತಿಮ ಸಂಸ್ಕಾರಕ್ಕೆ ಹೊತ್ತುಕೊಂಡು ಸ್ಮಶಾನಕ್ಕೆ ಹೊರಟಿದ್ದರು. ರಾಜದೂತರು ಈ ಸುದ್ದಿಯನ್ನು ಜನಕಮಹಾರಾಜನು ಕೇಳಿದ್ದಕ್ಕೆ ಹೇಳಿದಾಗ, ಜನಕನು ರಾಜದೂತನಿಗೆ ಅವನು (ಸತ್ತ ಮನುಷ್ಯನು) ಸ್ವರ್ಗಕ್ಕೆ ಹೊರಟಿದ್ದಾನೆಯೆ? ಇಲ್ಲವೆ ನರಕಕ್ಕೆ ಹೊರಟಿದ್ದಾನೆಯೇ ಹೋಗಿ ತಿಳಿದುಕೊಂಡು ಬಾ ಎಂದು ಹೇಳಿದನು. ಇದನ್ನೆಲ್ಲ ಅಲ್ಲಿ ಕುಳಿತ ಶುಕಮುನಿಗಳು ಆಲಿಸುತ್ತ ಆಶ್ಚರ್ಯ ಚಕಿತರಾದರು. ರಾಜದೂತನು ಈಗ ಹೊರಗೆ ಹೋಗಿ ತಿರುಗಿ ಬಂದು ಜನಕ ಮಹಾರಾಜನಿಗೆ, ಮಹಾರಾಜ ಅವನು ಸ್ವರ್ಗಕ್ಕೆ ಹೊರಟಿದ್ದಾನೆ. ಎಂದು ತಿಳಿಸಿದ್ದನ್ನು ಕೇಳಿ ಶುಕಮುನಿಗಳು ಜನಕನನ್ನು ಪಶ್ನಿಸುತ್ತಾರೆ:
ಮಿತ್ರಾ, ಆ ಮರಣಹೊಂದಿದ ಮನುಷ್ಯ ಸ್ವರ್ಗಕ್ಕೆ ಹೋಗುತ್ತಿರುವುದು ನಿನ್ನ ಆ ರಾಜದೂತನಿಗೆ ಹೇಗೆ ಗೊತ್ತಾಯಿತು? ಎಂದು ಕೇಳಿದಾಗ ಇದೇನು ದೊಡ್ಡ ಸಮಸ್ಯೆ ಅಲ್ಲ. ಅದನ್ನು ಆ ರಾಜದೂತನೇ ಹೇಳುತ್ತಾನೆ ಕೇಳಿರೆಂದ! ಈಗ ಶುಕಮುನಿ ಮತ್ತಷ್ಟು ಆಶ್ಚರ್ಯ ಹೊಂದಿ ರಾಜದೂತನನ್ನು ಪ್ರಶ್ನಿಸಿ ಆ ಮನುಷ್ಯ ಸ್ವರ್ಗಾರೋಹಣ ಮಾಡುವುದು ನಿನಗೆ ಹೇಗೆ ತಿಳಿಯಿತು? ಎನ್ನಲಾಗಿ ರಾಜದೂತನೀಗ ‘ಪೂಜ್ಯರೇ ಅವನ ಅಂತ್ಯ ಸಂಸ್ಕಾರಕ್ಕೆ ಅವನ ಹಿಂದೆ ಹೊರಟ ಜನ ಅವನನ್ನು ಕೊಂಡಾಡುತ್ತಿದ್ದರು. ಆ ಮನುಷ್ಯ ತನ್ನ ಜೀವಿತ ಕಾಲವೆಲ್ಲ ಯಾರ ಮನಸ್ಸನ್ನು ನೋಯಿಸದೇ ಎಲ್ಲರೊಡನೆ ಪ್ರೇಮದಿಂದ ಬಾಳಿ, ಅನ್ಯರಾರಿಗೂ ತೊಂದರೆ ಕೊಡದೇ ಸರ್ವರಿಗೂ ಬೆಳಕಾಗಿ, ಬೇಕಾಗಿ, ಸಾರ್ಥಕ ಬದುಕನ್ನು ಬದುಕಿ ಸ್ವರ್ಗಕ್ಕೆ ಪ್ರಯಾಣ ಮಾಡುವಲ್ಲಿ ಸಂಶಯವೇನಿದೆ? ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು. ಅಲ್ಲವೇ ಪೂಜ್ಯರೇ’ ಎಂದಾಗ ಶುಕಮುನಿಗಳು ಹರ್ಷಗೊಂಡರು. ಈ ಸಂಗತಿ ಎಲ್ಲ ಅವರಿಗೂ ಪೂರ್ವದಲ್ಲಿಯೇ ತಿಳಿದಿತ್ತು. ಅವರು ತ್ರಿಕಾಲ ಜ್ಞಾನಿಗಳು, ಬಾಲ್ಯದಲ್ಲಿಯೇ ಬ್ರಹ್ಮಜ್ಞಾನಿಗಳು. ಜನಕ ಮಹಾರಾಜನು ರಾಜ್ಯಭಾರ ಮಾಡುತ್ತಿದ್ದರೂ ಆತ್ಮವಿದ್ಯೆಯಲ್ಲಿ ಬಲ್ಲಿದನಿದ್ದನು. ಅವನ ರಾಜ್ಯದಲ್ಲಿ ಸಕಲರೂ ಸೌಖ್ಯದಿಂದ ಜೀವಿಸುತ್ತಿದ್ದರು. ಜನಕರಾಜ್ಯವು ಸುಭಿಕ್ಷದಿಂದಿತ್ತು.
ರಾಜನೀತಿ, ಧರ್ಮ, ಪ್ರಜಾಪಾಲನೆ, ನ್ಯಾಯ ಪರಿಪಾಲನೆ ಇತ್ಯಾದಿ ಸಕಲ ಸದ್ಗುಣಗಳು ಜನಕ ಮಹಾರಾಜನಲ್ಲಿ ಮನೆ ಮಾಡಿದ್ದವು. ನಿಷ್ಕಾಮಕರ್ಮ ಮಾಡುತ್ತ, ಯಾವುದರ ಮೇಲೂ ಆಶಿಸದೇ ರಾಜ್ಯಭಾರ ಮಾಡುತ್ತಿದ್ದನು. ಒಮ್ಮೆ ಶುಕಮುನಿಗಳು ಜನಕ ಮಹಾರಾಜನ ನಿರ್ಮೋಹತ್ವವನ್ನು ತೋರಿಸಲು ಪರೀಕ್ಷೆ ಮಾಡಲು, ಜನಕಾ ಇನ್ನು ಸಾಕುಮಾಡು, ಪ್ರಪಂಚ ತೊರೆದು ನನ್ನ ಜೊತೆ ಬಾ ಹೋಗೋಣ. ವಾನಪ್ರಸ್ತ ಜೀವನ ಆರಂಭಿಸು. ಇನ್ನೂ ನಿನಗೆ ವ್ಯಾಮೋಹ ಹೋಗಿಲ್ಲವೆ? ಎಂದು ತನ್ನ ಜೊತೆ ಅರಣ್ಯಕ್ಕೆ ಕರೆದುಕೊಂಡು ಹೋದ. ಮಹಾರಾಜನಿಗೆ ಮಾರ್ಗ ಮಧ್ಯದಲ್ಲಿ ತೃಷೆ (ನೀರಡಿಕೆ) ಉಂಟಾಯಿತು. ಶುಕಮುನಿ ಅರಸನನ್ನು ಒಂದು ಅರಳೀ ಮರದ ಕೆಳಗೆ ಕೂರಿಸಿ ಸರೋವರಕ್ಕೆ ನೀರು ತರಲು ಹೋದನು. ಮಾರ್ಗಾಯಾಸ ಹೊಂದಿದ ಜನಕ ಮಹಾರಾಜನಿಗೆ ಬಲುಬೇಗ ನಿದ್ರೆ ಹೊಂದಿದೆ. ಅಷ್ಟರಲ್ಲಿ ವಾಯುವಿಹಾರಕ್ಕೆಂದು ಸಾಮಂತ ರಾಜನೊಬ್ಬ ತನ್ನ ಪ್ರಜೆಗಳೊಂದಿಗೆ ಆ ಮಾರ್ಗದಿಂದ ಬರುವಾಗ, ಮರದ ಕೆಳಗೆ ಮಲಗಿದ್ದ ಜನಕ ಮಹಾರಾಜನನ್ನು ಕಂಡು ಎಲ್ಲರೂ ಬಂದು ಗಾಳಿಹಾಕುವುದು, ಪಾದಸೇವೆ ಎಲ್ಲವೂ ನಡೆಯಿತು. ಅಷ್ಟರಲ್ಲಿ ಶುಕಮುನಿಗಳು ಬಂದು ನೋಡುತ್ತಾರೆ ! ಜನಕನ ವೈಭವ. ಅರಣ್ಯಕ್ಕೆ ಬಂದರೂ ಪ್ರಜೆಗಳು ನಿನ್ನ ಸೇವೆ ಮಾಡುತ್ತಿದ್ದಾರೆ, ನಾಡಿಗೆ ಬಂದರೂ ಭೋಗ ನಿನ್ನನ್ನು ಬಿಡಲಿಲ್ಲ. ಜನಕಾ ನೀನು ರಾಜ್ಯ ಬಿಟ್ಟು ನನ್ನ ಜೊತೆ ಬಂದರೂ ಕಿಂಚಿತ್ತೂ ಅಳುಕದೇ ನನ್ನ ಜೊತೆ ಅರಣ್ಯವಾಸ ಮಾಡಲು ಆನಂದದಿಂದ ಬಂದೆ. ನೀನು ನಿನ್ನ ರಾಜ್ಯದಲ್ಲಿದ್ದರೂ ಅಷ್ಟೇ, ಇದ್ದೂ ಇಲ್ಲದಂತೆ ನಿಷ್ಕಾಮ ಕರ್ಮ ಮಾಡುತ್ತಾ, ಧರ್ಮ ಪರಿಪಾಲನೆ ಮಾಡುತ್ತಾ ನಿನ್ನ ಪ್ರಜೆಗಳನ್ನು ಪಾಲನೆ – ಪೋಷಣೆ ಮಾಡುತ್ತಿರುವೆಯಲ್ಲ? ನೀನು ಸ್ಥಿತಪ್ರಜ್ಞನು, ನೀನು ಸಂಸಾರದಲ್ಲಿದ್ದೂ ಸನ್ಯಾಸಿಯೇ. ನೀನೇ ಧನ್ಯನು. ಎಂದು ಬಲು ಹರ್ಷಗೊಂಡು ಜನಕ ಮಹಾರಾಜನನ್ನು ಅವನ ರಾಜ್ಯಕ್ಕೆ ಪುನಃ ಪ್ರಜಾಪಾಲನೆ ಮಾಡಲು ಕಳಿಸಿ ತಾನು ಕಾಡಿಗೆ ಹೊರಟುಹೋದ.

   

Leave a Reply