ಜನಪದ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 28.07.2015

ಆಟಗಳು ಮನುಷ್ಯನ ನೈಜ ಪ್ರವೃತ್ತಿಯ ಮೂಲಕ ಅವನ ಬಾಲ್ಯಾವಸ್ಥೆ ಯಲ್ಲಿಯೇ ಗಿಡಗಳಿಗೆ ಚಿಗುರೊಡೆಯುವಂತೆ ಸಹಜವಾಗಿಯೇ ಹುಟ್ಟಿ ಕೊಂಡದ್ದು. ಮೊಟ್ಟಮೊದಲು ಅಷ್ಟೊಂದು ನಿಯಮಬದ್ಧವಾಗಿರದ ಆಟಗಳು ಮಾನವನ ಬೌದ್ಧಿಕ ಸಂಸ್ಕಾರದೊಂದಿಗೆ ಪ್ರೌಢವಾಗುತ್ತ, ನಿಯಮಬದ್ಧ ಶಾಸ್ತ್ರೀಯ ಆಟಗಳು ಜನಪದ ಆಟಗಳಿಂದಲೇ ಉಗಮವಾಗಿರುವುದು ವಿಶೇಷ.
 ಜನಪದ ಆಟಗಳು ತುಂಬಾ ಕಲಾತ್ಮಕವಾಗಿವೆ. ಕೆಲವು ಆಟಗಳಂತೂ ಉತ್ತಮ ಮನರಂಜನೆಯನ್ನು, ತಾದಾತ್ಮ್ಯವನ್ನು ಒದಗಿಸುತ್ತವೆ. ಜನಪದ ಆಟಗಳು ಸರಳ, ಸುಲಭ, ಹೆಚ್ಚು ಖರ್ಚಿಲ್ಲ.
 ಚೆನ್ನೆಮಣೆ, ತಾಬ್ಲಮಣೆ ಆಟಗಳಂತೂ ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದುಬರುತ್ತಿದ್ದವು. ಕೆಲವೆಡೆ ದನ ಕಾಯುವ ಮಕ್ಕಳು ಕಲ್ಲರೆಯ ಮೇಲೆ ಹೊಂಡ ತೋಡಿ, ಅರೆಯನ್ನೇ ಚೆನ್ನೆಮಣೆಯನ್ನಾಗಿ ಉಪಯೋಗಿಸಿದ್ದುಂಟು. ಕೆಲವು ಜನಪದ ಆಟಗಳಿಗಂತೂ ಸಲಕರಣೆಗಳೇ ಬೇಡ, ಕೇವಲ ಜನರಿದ್ದರಾಯ್ತು.
 ಕೆಲವು ಜನಪದ ಆಟಗಳಲ್ಲಿ ಅಜ್ಜಿಯ ಪಾತ್ರ ಹಿರಿದು. ಆಟಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಅಜ್ಜಿಯ ಪಾತ್ರ ಗಮನಿಸಬೇಕಾದ ಅಂಶ. ಮಕ್ಕಳ ಆಟಗಳಲ್ಲಿ ಅಜ್ಜಿಯ ಪಾತ್ರ ನಿರ್ದೇಶಕನ ಪಾತ್ರ. ಈಗ ಅಜ್ಜಿಯಲ್ಲದ ಮನೆಗಳಲ್ಲಿ ಅಜ್ಜಿಯ ಪಾತ್ರವನ್ನು ಮಕ್ಕಳೇ ವಹಿಸುವವರಿದ್ದಾರೆ.
 ಜನಪದ ಆಟಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಧಾರ್ಮಿಕತೆಯ ಲೇಪವನ್ನು ಹಿರಿಯರು ಹಾಕಿದ್ದುಂಟು. ಗ್ರೀಕರಲ್ಲಿ ಒಲಂಪಿಕ್ ಹಬ್ಬಗಳಲ್ಲಿ ಗ್ರೀಸರ ಪವಿತ್ರ ಸ್ಥಳಗಳಿಗೆ ಹೋಗಿ ಆಟವಾಡುತ್ತಿದ್ದರಂತೆ. ಕೆಲವು ದೇಶಗಳಲ್ಲಿ ಹಬ್ಬದ ದಿನದಂದು ಆಡಲೇಬೇಕೆಂಬ ನಿಯಮವನ್ನು ಹಾಕಿದ್ದಾರೆ. ಇಂದಿಗೂ ಮೈಸೂರು ದಸರಾ ಸಮಯದಲ್ಲಿ ಅನೇಕ ಪಂದ್ಯಗಳು ನಡೆಯುತ್ತಿರುವುದು ಉಲ್ಲೇಖನೀಯ.
 ಕೆಲವು ಜಿಲ್ಲೆಗಳಲ್ಲಿ ಸುಗ್ಗಿಯ ಕಾಲಕ್ಕೆ ಬೃಹತ್ ಕೋಲಾಟಗಳು ನಡೆಯುತ್ತವೆ. ದೇವತೆಗಳ ರಥೋತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಆಡುವ ಕೋಲಾಟ, ಬಣ್ಣ ತೂರುವ ಆಟಗಳು, ಮರಕಾಲ ಕುಣಿತ, ಓಕುಳಿ ಆಟ ಮುಂತಾದ ಕ್ರೀಡಾ ವಿನೋದಗಳೆಲ್ಲ ಧಾರ್ಮಿಕತೆಯಿಂದ ಒಪ್ಪವಡೆದು ಆಟಗಳ ಪಾವಿತ್ರ್ಯವನ್ನುಳಿಸಿ ಅವುಗಳ ಉಳಿವಿಗೆ ಕಾರಣವಾಗುತ್ತಿವೆ. ದೇಶಿ ಆಟಗಳಿಗೆ ಹೆಚ್ಚು ಒತ್ತನ್ನು ನೀಡುತ್ತಿರುವ ಸಂಘ ಶಾಖೆಗಳು ಸಹ ದೇಶೀ ಆಟವನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸಿದೆ.
 ಇಂದು ಪಾಶ್ಚಾತ್ಯ ಶಿಕ್ಷಣದ ಸಂಪರ್ಕದಿಂದಲೋ, ವೈಜ್ಞಾನಿಕತೆಯ ಪ್ರಭಾವ ದಿಂದಲೋ, ಪಟ್ಟಣಗಳಲ್ಲಿ ಸುಶಿಕ್ಷಿತ ಮಕ್ಕಳು, ಯುವಕರು ಪಾಶ್ಚಾತ್ಯ ಆಟಗಳನ್ನು ಆಡುತ್ತಿದ್ದಾರೆ. ಈ ಸೋಂಕು ಹಳ್ಳಿಯ ಯುವಕರನ್ನು ಬಾಧಿಸದೇ ಬಿಟ್ಟಿಲ್ಲ. ನಮ್ಮದೆಲ್ಲ ಕಾಡು ಆಟವೆಂಬ ಭಾವನೆ ಈಗಲೂ ಇದೆ. ಮಕ್ಕಳು ಆಡುತ್ತಿರುವುದೇ ಕಡಿಮೆಯಾಗಿದೆ.
 ನಮ್ಮ ಸಂಸ್ಕಾರ, ಆರೋಗ್ಯ ಬೆಳೆಯುವುದಕ್ಕಾಗಿ ನಮ್ಮ ಜನತೆಗೆ ಕೈಗೆ ನಿಲುಕುವ, ಅವರ ಜಾಯಮಾನಕ್ಕೆ ಹೊಂದುವ ನಮ್ಮ ಸಂಪ್ರದಾಯಗಳಿಂದ ಕಳೆಗೂಡಿದ ಆಟಗಳು ಹೆಚ್ಚು ಜನಪ್ರಿಯವಾಗಬೇಕು. ಪಾಶ್ಚಾತ್ಯ ಸಂಸ್ಕೃತಿಯ ಆಟಗಳು ಕೆಲವೊಮ್ಮೆ ನಮಗೆ ಹೊಂದಾಣಿಕೆಯಾಗುವುದೇ ಎಂಬುದನ್ನು ಗಮನಿಸಬೇಕು. ಒಂದೊಮ್ಮೆ ಅವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದಾದರೆ ಅವುಗಳನ್ನು ಸಂಸ್ಕರಿಸಿ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳಬೇಕು. ಹಣಕ್ಕಾಗಿ ಆಡುವ ಆಟಗಳು ಹಳ್ಳಿಗಳನ್ನು ಆವರಿಸಿ, ಅವರ ಮನರಂಜನೆ ಮತ್ತು ದೈಹಿಕ ಬಲ ನೀಡುವ ಆಟಗಳಾದ ಗರೆಟೆಪುಳಿ, ಗಿಡಗನ ಸೋಡಿ, ಮಲ್ಲಯುದ್ಧ ಮುಂತಾದ ಆಟಗಳನ್ನು ತಳ್ಳಿ ಹಾಕಿದೆ. ಉತ್ತಮ ಜನಪದ ಆಟಗಳನ್ನು ಸಂಗ್ರಹಿಸಿ ಅದನ್ನು ಇಂದಿನ ಯುವಕರಿಗೆ ಆಡಿಸುವುದಾದರೆ ಆ ಆಟಗಳು ಖಂಡಿತ ಮುಂದಿನ ಪೀಳಿಗೆಗೆ ಉಳಿಯುತ್ತದೆ. ಶಾಲಾ ಕಾಲೇಜುಗಳ ಪಂದ್ಯಾಟಗಳಲ್ಲಿ ಜನಪದ ಆಟಗಳನ್ನು ಆಡಿಸಬೇಕು. ನಾಡ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಹಿರಿಮೆಯನ್ನು ಪ್ರಪಂಚಕ್ಕೆ ತೋರಿಸಬೇಕು. ಹೀಗಾದಲ್ಲಿ ನಮ್ಮ ದೇಶಿ, ಜನಪದ ಆಟಗಳು ಪ್ರಪಂಚಕ್ಕೆ ಭಾರತದ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.

   

Leave a Reply