ಜನರೇ ಸತ್ಯಾಗ್ರಹಿಗಳ ರಕ್ಷಣೆಗೆ ಮುಂದಾದರು

ಚಂದ್ರಶೇಖರ ಭಂಡಾರಿ - 0 Comment
Issue Date : 07.05.2016

-ಚಂದ್ರಶೇಖರ ಭಂಡಾರಿ

ಜನರಿಂದ ಸಹಕಾರ
ಆ ದಿನಗಳಲ್ಲಿ ಸರಕಾರಿ ಕೃಪಾಪೋಷಿತ ಮಾಧ್ಯಮ ಮತ್ತು ಇನ್ನಿತರ ಸಂಘ ವಿರೋಧಿ ಪತ್ರಿಕೆಗಳು ಸಹ ಸತ್ಯಾಗ್ರಹಿಗಳ ಮನೋಬಲ ಮುರಿಯಲು ಮತ್ತು ಸತ್ಯಾಗ್ರಹದ ಪ್ರಭಾವವೂ ಸಾರ್ವಜನಿಕರ ಮೇಲೆ ಆಗದಂತೆ ಮಾಡಲು ತಮ್ಮದೇ ರೀತಿಯಲ್ಲಿ ಅಪಪ್ರಚಾರದ ಬಿರುಗಾಳಿಯನ್ನೇ ಎಬ್ಬಿಸುವ ಪ್ರಯತ್ನದಲ್ಲಿ ತೊಡಗಿದ್ದವು. ಸಂಘದಲ್ಲಿ ಒಡಕು ಮೂಡಿದೆ, ಸತ್ಯಾಗ್ರಹಕ್ಕೆ ಜನಸಮರ್ಥನೆಯೇ ಇಲ್ಲ ಇತ್ಯಾದಿ ಅವುಗಳು ಪ್ರಚುರಪಡಿಸುತಿದ್ದ ಸರಕು. ಆದರೆ ಈ ಪ್ರಯತ್ನ ಅಪೇಕ್ಷಿತ ಪ್ರಮಾಣದಲ್ಲಿ ಫಲಪ್ರದವಾಗುತ್ತಿರಲಿಲ್ಲ ಎಂಬೂದೂ ಅಷ್ಟೇ ಸತ್ಯ. ಸತ್ಯಾಗ್ರಹಕ್ಕೆ ಲಭಿಸುತ್ತಿದ್ದ ಸಮರ್ಥನೆ ನಿಜಕ್ಕೂ ಧಾರಾಳವೇ. ಸತ್ಯಾಗ್ರಹ ನಡೆಯುವಲ್ಲೆಲ್ಲ ಅದರಲ್ಲಿ ಭಾಗವಹಿಸುವವರನ್ನು ಹರಸಿ, ಆಶೀರ್ವದಿಸಲು, ಸಹಾನುಭೂತಿ ತೋರಿಸಲು ಬರುತಿದ್ದವರು ಸಾವಿರಾರು. ಅವರು ಬರುತಿದ್ದುದು ಯಾವುದೋ ತಮಾಷೆ ನೋಡಲು ಅಲ್ಲ, ಬದಲಾಗಿ ತಾವೂ ಘೋಷಣೆಗಳನ್ನು ಹಾಕಲು, ಸತ್ಯಾಗ್ರಹಿಗಳನ್ನು ಅನುಸರಿಸಿ ತಾವೂ ಮೆರವಣಿಗೆ ನಡೆಸಿ ಹೆಜ್ಜೆ ಹಾಕಲು. ಪೊಲೀಸರ ಕ್ರಮವೇನಾದರೂ ಮಿತಿಮೀರಿತೆಂದು ಅನಿಸಿದಲ್ಲಿ ಅದರ ವಿರುದ್ಧ ಉಗ್ರಪ್ರತಿಭಟನೆ ಮಾಡುತಿದ್ದವರು ಜನರೇ.
ಸರಕಾರ ವಿರೋಧಿ ಬಂದ್
ಬಿಕಾನೇರ್‌ನಲ್ಲಿ ಸಂಘದ ಕಾರ್ಯಕರ್ತರನ್ನು ಸುರಕ್ಷಾ ಕಾನೂನಿನನ್ವಯ ಬಂಧಿಸಿದುದನ್ನು ವಿರೋಧಿಸಿ ಅಲ್ಲಿನ ಜನರು ತಮ್ಮ್ಮೆಲ್ಲ ವ್ಯವಹಾರಗಳನ್ನು ನಿಲ್ಲಿಸಿ ಬಂದ್ ಆಚರಿಸಿದ್ದರು. ಈ ವಿಧದ ತೀವ್ರ ಪ್ರತಿಭಟನೆಯ ಬಗ್ಗೆ ಪುಣೆಯ ದೈನಿಕ ‘ಭಾರತ’ ಮರುದಿನ ವರದಿ ಪ್ರಕಟಿಸಿದುದು ಹೀಗೆ: ‘ಸಂಘದ ಕಾರ್ಯಕರ್ತರಾಗಿರುವ ಅಪರಾಧಕ್ಕ್ಕಾಗಿ ಮನಹರ ಮೆಹತಾ ಮತ್ತು ಕೋಟಕ್ ಅವರನ್ನು ಸುರಕ್ಷಾ ಕಾನೂನಿನ್ವಯ ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಸ್ಥಾನೀಯ ಎಲ್ಲ ವ್ಯಾಪಾರಿಗಳು ತಾವಾಗಿಯೇ ಹರತಾಳ ಆಚರಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲೂ ಜನರು ಹಲವು ರೀತಿಯಲ್ಲಿ ತಮ್ಮ ಅಸಮಾಧಾನ ಪ್ರಕಟಿಸಿರುವುದು ವರದಿಯಾಗಿದೆ.’ ಇದೇ ರೀತಿಯಲ್ಲ್ ಡಿಸೆಂಬರ್ 11ರಂದು ರಾಹತವಾಡಾ ಜಿಲ್ಲೆಯ ಶಿಕಾರಿಪುರದಲ್ಲಿ ಹನ್ನೊಂದು ವಿದ್ಯಾರ್ಥಿಗಳನ್ನು ಅವರು ನಿಷೇಧಿತ ಸಂಸ್ಥೆಯ ಸದಸ್ಯರೆಂಬ ಕಾರಣ ನೀಡಿ ಪೊಲೀಸರು ಬಂಧಿಸಿದುದನ್ನು ವಿರೋಧಿಸಿ, ವಿದ್ಯಾಲಯದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹರತಾಳ ಆಚರಿಸಿದ್ದರು.
ಉತ್ತರ ಪ್ರದೇಶದ ಸೀತಾಪುರದಲ್ಲಂತೂ ಸತ್ಯಾಗ್ರಹಕ್ಕೆ ಸಹಾನುಭೂತಿ, ಸಮರ್ಥನೆ ಪ್ರಕಟಿಸುವುದರಲ್ಲಿ ಸ್ಥಾನೀಯ ಯುವಕರ ಉತ್ಸಾಹ ಕೋಡಿ ಹರಿದಿತ್ತು. ಅಲ್ಲಿ ಡಿಸೆಂಬರ್ 10ರಂದು 12 ಮಂದಿ ಸತ್ಯಾಗ್ರಹ ನಡೆಸಿದ್ದರು. ಅವರೆಲ್ಲರದು ಬಂಧನವೂ ಆಗಿತ್ತು. ಆದರೆ ವಿದ್ಯಾರ್ಥಿಗಳು ತಾವು ಸ್ವತಃ ಘೋಷಣೆಗಳೊಂದಿಗೆ ಒಂದರ ನಂತರ ಇನ್ನೊಂದು ವಿದ್ಯಾಲಯಕ್ಕೆ ಮೆರವಣಿಗೆಯಲ್ಲಿ ಹೋಗಲು ಆರಂಭಿಸಿದರು. ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು ಅವು. ಆದರೆ ಪರೀಕ್ಷೆಯನ್ನು ಪಕ್ಕಕ್ಕೆ ಸರಿಸಿ ಅದು ನಡೆಯುತಿದ್ದಾಗಲೇ ಬರೆಯುವುದನ್ನು ಬಿಟ್ಟು ತರಗತಿಗಳಿಂದ ಹೊರಬಂದು ವಿದ್ಯಾರ್ಥಿಗಳೂ ಮೆರವಣಿಗೆಯಲ್ಲಿ ಸೇರಿದರು. ಈ ಮೆರವಣಿಗೆ ರಾಜಾ ಹೈಸ್ಕೂಲ್ ತಲಪಿದಾಗ ಅಲ್ಲಿನ ವಿದ್ಯಾರ್ಥಿಗಳೂ ಪರೀಕ್ಷೆ ಬಿಟ್ಟು ಹೊರ ಬಂದರು. ಇಷ್ಟು ಹೊತ್ತಿಗೆ ಮೆರವಣಿಗೆ ಭಾರೀ ವಿಶಾಲ ಸ್ವರೂಪ ತಳೆದಿತ್ತು. ಮುಂದೆ ಅದು ಸರಕಾರಿ ಹೈಸ್ಕೂಲ್ ಬಳಿ ಬಂತು. ಅಲ್ಲೂ ಅದೇ ಕತೆಯಾಯ್ತು. ಸಂಪೂರ್ಣ ನಗರದ ವಿದ್ಯಾರ್ಥಿಗಳೆಲ್ಲರೂ ಸತ್ಯಾಗ್ರಹಿಗಳಾದರೇನೋ ಎಂಬಂತಹ ವಾತಾವರಣ ಅಂದು ಊರಲ್ಲಿ ಸೃಷ್ಟಿಯಾಗಿತ್ತು. (‘ಸ್ವದೇಶ’ ಲಖ್ನೋ)
ಬಂಗಾಲದ ಮಾಲ್ಡಾ ನಗರದಲ್ಲಿ ಡಿಸೆಂಬರ್ 20ರಂದು ನಡೆದ ಸತ್ಯಾಗ್ರಹದಲ್ಲ್ ಭಾಗವಹಿಸಿದವರೆಲ್ಲರ ಮೇಲೆ ಪೊಲೀಸರು ಬರ್ಬರ ಅತ್ಯಾಚಾರವೆಸಗಿದ್ದರು. ಇದರಿಂದ ಉದ್ರಿಕ್ತರಾಗಿ ಜನರು ಅಂದು ಸಂಪೂರ್ಣ ಬಜಾರ್ ಬಂದ್ ಮಾಡಿದರು. ತಮ್ಮ ತಮ್ಮ ಅಂಗಡಿಗಳನ್ನು ತೆರೆಯುವಂತೆ ಸರಕಾರಿ ಅಧಿಕಾರಿಗಳು ವ್ಯಾಪಾರಿಗಳನ್ನು ಹೆದರಿಸಿ, ಬೆದರಿಸಿ, ಒತ್ತಾಯಿಸಿದರೂ ಅವರ ಯಾವ ಆಟವೂ ಫಲಿಸಲಿಲ್ಲ. ಇದೇ ರೀತಿಯಲ್ಲಿ ಬೇಲಡಾಂಗಾ ಮೊದಲಾದ ಸ್ಥಳಗಳಲ್ಲೂ ಸತ್ಯಾಗ್ರಹಿಗಳನ್ನು ಬಂಧಿಸಿದುದರ ವಿರುದ್ಧ ಜನರು ಹರತಾಳ ಆಚರಿಸಿದರು.
ಸಚಿವಾಲಯ (ಸೆಕ್ರೆಟೇರಿಯಟ್) ಖಾಲಿ
ಡಿಲ್ಲಿಯಲ್ಲಿ ಕೇಂದ್ರ ಸಚಿವಾಲಯದಲ್ಲಿ ನಡೆದ ಮೊದಲ ದಿನದ ಸತ್ಯಾಗ್ರಹವೇ ಸಾರ್ವಜನಿಕರಿಗೆ ಸಂಘದ ಬಗ್ಗೆ ಅದೆಷ್ಟು ಆದರವಿದೆ ಎಂಬುದನ್ನು ಸಂಕೇತಿಸುವಂತಿತ್ತು. ನಿರ್ಧಾರಿತ ಸಮಯದಲ್ಲಿ ಅಲ್ಲಿ ಸೇರಿ ಸತ್ಯಾಗ್ರಹಿಗಳು ಘೋಷಣೆಗಳನ್ನು ಹಾಕಲಾರಂಭಿಸಿದಂತೆಯೇ ಎಲ್ಲ ಕಚೇರಿಗಳಲ್ಲಿದ್ದ ಹೆಚ್ಚಿನ ನೌಕರರು ತಮ್ಮ ಕೆಲಸ ಬಿಟ್ಟು ಹೊರಬಂದರು. ಅವರದೇ ಒಂದು ದೊಡ್ಡ ಸಮೂಹವಾಯಿತು. ಸತ್ಯಾಗ್ರಹಿಗಳ ಜತೆ ಅವರೂ ಘೋಷಣೆಗಳನ್ನು ಹಾಕಲಾರಂಭಿಸಿದರು. ಸಂಘಗೀತೆಗಳಿಗೂ ತಮ್ಮ ಧ್ವನಿಗೂಡಿಸಿದರು. ಸುಮಾರು ಮುಕ್ಕಾಲು ಘಂಟೆ ಕಾಲ ಇದೆಲ್ಲ ನಡೆಯಿತು. ಬಿಡುವಿನ ವೇಳೆ ಮುಗಿದುದೂ ಯಾರ ಲಕ್ಷ್ಯಕ್ಕೂ ಬರಲಿಲ್ಲ. ಸತ್ಯಾಗ್ರಹಿಗಳನ್ನೇನೋ ಬಂಧಿಸಿ ಪೊಲಿಸರು ತಮ್ಮ ವಾಹನಗಳಲ್ಲಿ ಒಯ್ದರು. ಅನೇಕ ನೌಕರರು ತಾವೂ ಆ ವಾಹನಗಳನ್ನು ಅನುಸರಿಸಿ ಘೋಷಣೆಗಳನ್ನು ಹಾಕುತ್ತಾ ನಡೆದರು. ಪರಿಣಾಮವಾಗಿ ಕಚೇರಿಗಳೆಲ್ಲ ಖಾಲಿ. ಇದರಿಂದಾಗಿ ಯಾರೂ ಸಹ ಸತ್ಯಾಗ್ರಹ ನೋಡಲು ಕಚೇರಿ ಬಿಟ್ಟು ಅನುಸರಿಸಿ ಘೋಷಣೆಗಳನ್ನು ಹಾಕುತ್ತಾ ನಡೆದರು. ಪರಿಣಾಮವಾಗಿ ಕಚೇರಿಗಳಲ್ಲಿ ಖಾಲಿ. ಇದರಿಂದಾಗಿ ಯಾರೂ ಸಹ ಸತ್ಯಾಗ್ರಹ ನೋಡಲು ಕಚೇರಿ ಬಿಟ್ಟು ಹೋಗಬಾರದು ಎಂಬ ಆದೇಶ ಮರುದಿನ ಹೊರಟಿತು. ಆದರೆ ಈ ಆದೇಶ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿತು. ತಮ್ಮ ಸ್ವಾತಂತ್ರ್ಯದ ಮೇಳೆ ಇದು ದಬ್ಬಾಳಿಕೆ ಎಂದು ನೌಕರರಿಗೆ ಅನಿಸಿತು. ಪರಿಣಾಮವಾಗಿ ಮುಂದೆ ಅಲ್ಲಿ ಸತ್ಯಾಗ್ರಹವಾದಾಗಲೆಲ್ಲ ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅವರು ಸೇರಿ ಸತ್ಯಾಗ್ರಹಿಗಳ ಉತ್ಸಾಹ ಹೆಚ್ಚಿಸತೊಡಗಿದರು. ಆದೇಶಕ್ಕೆ ಕವಡೆ ಕಿಮ್ಮತ್ತೂ ಉಳಿಯಲಿಲ್ಲ.
ರಕ್ಷಾ ಕವಚವಾದ ಜನತೆ
ಕಲ್ಕತ್ತಾದಲ್ಲಿ ಮೊದಲ ದಿನ ಬಂಧಿಸಲಾಗಿದ್ದ 250 ಸತ್ಯಾಗ್ರಹಿಗಳನ್ನು ಮರುದಿನ ಮಿಕ್ಕ ಅಪರಾಧಿಗಳಂತೆಯೇ ನಡೆಸಿಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಪೊಲೀಸರು ಸಿದ್ಧತೆಯಲ್ಲಿದ್ದುದ್ದ್ದನ್ನು ಕಂಡು ಸತ್ಯಾಗ್ರಹಿಗಳು ಪ್ರತಿಭಟಿಸಿದರು. ಇದರಿಂದ ಉದ್ರಿಕ್ತರಾಗಿ ಪೊಲೀಸರು ಬಲಾತ್ಕರಿಸಿದಾಗ ಅಲ್ಲಿದ್ದ ಜನರೇ ಸತ್ಯಾಗ್ರಹಿಗಳ ರಕ್ಷಣೆಗೆ ಮುಂದಾದರು. ಕೊನೆಯಲ್ಲಿ ಪೊಲೀಸರು ಕ್ಷಮೆ ಕೇಳಿ ತಮ್ಮ ತಪ್ಪು ಸುಧಾರಿಸಿಕೊಳ್ಳಬೇಕಾಯಿತು.
ಅಲ್ಲಿನ ಬಾಗಬಾಜಾರಿನ ಸತ್ಯಾಗ್ರಹಿಗಳಿಗೆ ಪ್ರಾರ್ಥನೆ ಮಾಡಲು ಪೊಲೀಸರು ಅನುಮತಿ ನೀಡದೆ ತಡೆದಾಗ ಅಲ್ಲಿದ್ದ ಓರ್ವತಾಯಿ ಕೋಪಗೊಂಡು ಮುಂದೆ ಬಂದರು. ಪೊಲೀಸರ ಇಂತಹ ನಡವಳಿಕೆಯನ್ನು ಅತ್ಯಂತ ಕಟು ಭಾಷೆಯಲ್ಲಿ ಟೀಕಿಸಿದ ಅವರು ಒಂದು ಉಗ್ರ ಭಾಷಣವನ್ನೇ ಮಾಡಿದರು. ಪೊಲೀಸ್ ಅಧಿಕಾರಿ ಸಹ ಕಣ್ಣೀರು ಸುರಿಸಬೇಕಾಗಿ ಬಂದಂತಹ ಭಾಷಣ ಆಗಿತ್ತದು. ಅಲ್ಲಿದ್ದ ಜನರಂತೂ ಪೊಲೀಸರಿಗೆ ಛೀಮಾರಿ ಹಾಕಿ ಘೋಷಣೆ ಹಾಕತೊಡಗಿದರು. ಅಂತಿಮವಾಗಿ ಜನರ ಒತ್ತಡಕ್ಕೆ ಪೊಲೀಸರು ಮಣಿಯಲೇಬೇಕಾಯಿತು. ಪ್ರಾರ್ಥನೆ ಮುಗಿಸಿದ ನಂತರವಷ್ಟೇ ಸತ್ಯಾಗ್ರಹಿಗಳನ್ನು ಬಂಧಿಸಲು ಅವರು ಮುಂದಾದರು.
ತಿಲಕ – ಕುಂಕುಮ
ಮಹಾರಾಷ್ಟ್ರದ ಪುಣೆಯಂತಹ ನಗರಗಳಲ್ಲಿ ಸತ್ಯಾಗ್ರಹಿಗಳನ್ನು ಆಶೀರ್ವದಿಸಲು ಆರಂಭದಿಂದಲೂ ಅದೆಷ್ಟು ಜನ ಸೇರುತ್ತಿದ್ದರೆಂದರೆ, ಅವರ ವ್ಯವಸ್ಥೆಗಾಗಿಯೇ ಪ್ರತ್ಯೇಕವಾಗಿ ಒಬ್ಬರನ್ನು ನಿಯುಕ್ತಿಸಬೇಕಾದ ಅಗತ್ಯ ಉಂಟಾಯಿತು. ಈ ರೀತಿಯಲ್ಲಿ ಸೇರುತ್ತಿದ್ದವರಲ್ಲಿ ಅನೇಕ ಬಾರಿ ಪುರುಷರಿಗಿಂತ ಹೆಚ್ಚಿರುತ್ತಿದ್ದವರು ಮಹಿಳೆಯರೇ. ಮಾತಾ ಭಗಿನಿಯರು ಸತ್ಯಾಗ್ರಹಿಗಳಿಗೆ ಖುಲ್ಲಂಖುಲ್ಲಾ ಕುಂಕುಮ ಹಚ್ಚಿ ‘ತಿಲಕವಿಟ್ಟು’ ಆರತಿ ಎತ್ತಿ ಶುಭಕೋರಿ ವಿದಾಯ ಬಯಸುತ್ತಿದ್ದರು. ಕೆಲವೊಮ್ಮೆ ಪ್ರಸಾದ ರೂಪದಲ್ಲಿ ಕಾಯಿ ಹಣ್ಣು ಸಹ ನೀಡುತ್ತಿದ್ದುದು ಉಂಟು. ಮೆರವಣಿಗೆ ರಸ್ತೆಗಳಲ್ಲಿ ಬರುವಾಗ ಅಲ್ಲಲ್ಲಿ ಅವರಿಗೆ ಸ್ವಾಗತ ಪುಷ್ಪವೃಷ್ಟಿಯಾಗುತ್ತಿತ್ತು. ಅಲ್ಲಲ್ಲಿ ನಿಲ್ಲಿಸಿ ಸತ್ಯಾಗ್ರಹಿಗಳಿಗೆ ಹಾಲು ಕುಡಿಸುತ್ತಿದ್ದರು. ಸತ್ಯಾಗ್ರಹವೇ ಊರಿನವರಿಗೆಲ್ಲ ಒಂದು ಸಂಭ್ರಮದ ಪ್ರಸಂಗದಂತೆ. ಇದೆಲ್ಲವೂ ಎಲ್ಲಿ? ಕೆಲವೇ ತಿಂಗಳುಗಳ ಹಿಂದೆ ‘ಸಂಘದವರು ಗಾಂಧಿ ಹಂತಕರು’ ‘ಕೊಲೆಪಾತಕಿಗಳನ್ನು ಗಲ್ಲಿಗೇರಿಸಿ’ ಎಂಬ ಘೋಷಣೆಗಳು ಅಬ್ಬರಿಸುತ್ತಿದ್ದ ಮಹಾರಾಷ್ಟ್ರದಲ್ಲಿ .
ಹಣದ ಮಳೆ
ಪಂಜಾಬಿನ ಅಮೃತಸರ, ಜಾಲಂಧರ ಮೊದಲಾದ ಕಡೆಗಳಲ್ಲಿ ಸತ್ಯಾಗ್ರಹ ನೋಡಲು ಕಿಕ್ಕಿರಿದು ಸೇರುತ್ತಿದ್ದ ಜನರಿಗೆ ತಂಡದ ಪ್ರಮುಖರ ಭಾಷಣ ಕೇಳಲು ಅನುಕೂಲವಾಗಲೆಂದು ಧ್ವನಿವರ್ಧಕದ ವ್ಯವಸ್ಥೆಯಾಗುತ್ತಿದ್ದುದೂ ಇದೆ. ಇದೆಲ್ಲವನ್ನೂ ಜನರು ತಾವಾಗಿಯೇ ಮಾಡುತ್ತಿದ್ದರು. ಸತ್ಯಾಗ್ರಹಿಗಳ ಮೇಲೆ ಹೂ, ಗುಲಾಲು ಮಾತ್ರವಲ್ಲ ರೂಪಾಯಿಗಳನ್ನೂ ಎಸೆದು ಜನರು ಸಂಭ್ರಮಿಸುತ್ತಿದ್ದರು. ಸುಮಾರಾಗಿ ಎಲ್ಲ ಕಡೆಗಳಲ್ಲೂ, ನಗರ ಮತ್ತು ಹೋಬಳಿ ಕೇಂದ್ರಗಳಲ್ಲೂ ಮಹಿಳೆಯರು ಮತ್ತು ಬಾಲಕರು ಸ್ವಯಂಸ್ಫೂರ್ತರಾಗಿ ಮೆರವಣಿಗೆ ನಡೆಸುತ್ತಿದ್ದರು.
ಕೆಲವೊಮ್ಮೆ ಭಾರೀ ರೋಮಾಂಚನಕಾರಿ ಸನ್ನಿವೇಶಗಳು ಏರ್ಪಡುತ್ತಿದ್ದುದೂ ಉಂಟು. ಡಿಸೆಂಬರ್ 10ರಂದು ಡಿಲ್ಲಿಯ ಕರೋಲ್‌ಬಾಗ್ ಪ್ರದೇಶದಲ್ಲಿ ಎರಡು ಕಡೆಗಳಲ್ಲಿ ಎರಡು ತಂಡಗಳು ಶಾಖಾ ಆರಂಭಿಸಿ ನಿಷೇಧವನ್ನು ಧಿಕ್ಕರಿಸಿದವು. ಪೊಲೀಸರು ಕಠಿಣವಾದ ಕ್ರಮಗಳಿಂದ ಅವರನ್ನು ತಡೆದಿರಿಸಲು ಪ್ರಯತ್ನಿಸಿದರು. ಜನರು ಸಹ ಕಿಕ್ಕಿರಿದು ಸೇರಿದ್ದರು. ಅವರ ನಡುವಿನಿಂದ ಓರ್ವ ಮಹಿಳೆ ಇನ್ನೂ ಅನೇಕರನ್ನೂ ತನ್ನ ಬೆನ್ನಿಗಿರಿಸಿ ಮುಂದೆ ಬಂದು ಪೊಲೀಸರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ‘‘ಸಂಘದವರಿಂದಾಗಿಯೇ ನಮ್ಮ ಮಾನ ಉಳಿಯಿತು. ಒಂದಿಷ್ಟು ವಸ್ತುಗಳ ಸಹಿತ ಸುರಕ್ಷಿತವಾಗಿ ಇಲ್ಲಿಗೆ ತಲುಪಲು ಸಾಧ್ಯವಾಯಿತು. ನಿಮಗದು ಗೊತ್ತೇ? ಈಗ ಅವರನ್ನು ಸೆರೆಮನೆಗೆ ತಳ್ಳಬೇಕೆಂದಿರುವಿರೇನು? ಸರಿ, ಹಾಗಿದ್ದಲ್ಲಿ ನಾವೂ ಅವರ ಜೊತೆಯಲ್ಲಿ ಬರುತ್ತೇವೆ. ನಮ್ಮನ್ನೂ ಸೆರೆಮನೆಗೆ ಸೇರಿಸಿ’’ ಎಂದು ಆವೇಶದಿಂದ ಗರ್ಜಿಸಿದರು. ಓರ್ವ ಮಹಿಳೆಯಂತೂ ಆವೇಶದ ಭರದಲ್ಲಿ ಸತ್ಯಾಗ್ರಹಿಗಳನ್ನು ತುಂಬಿದ್ದ ಪೊಲೀಸ್ ವಾಹನದೊಳಗೆ ತನ್ನ ಮಗುವನ್ನು ಇರಿಸಿದಳು. ‘ಇದನ್ನೂ ಸೆರೆಮನೆಗೆ ಸೇರಿಸಿಕೊಳ್ಳಿ ಎಂದು’ ಎಂದು ಗುಡುಗಿದಳು. ಇದನ್ನು ಕಂಡು ಜನರಲ್ಲೂ ಆವೇಶ
ಹೆಚ್ಚಿತು. ಎಲ್ಲರೂ ಪೊಲೀಸರಿಗೆ ಧಿಕ್ಕಾರ ಎಂದು ಕಿವಿಗಡಚಿಕ್ಕುವಂತೆ ಘೋಷಿಸತೊಡಗಿದರು. ಈ ವಿಷಯದಲ್ಲಿ ತಾವು ಅಸಹಾಯಕರು ಎಂದು ಒಪ್ಪಿಕೊಂಡ ಪೊಲೀಸರು ಆ ಮಗುವನ್ನು ತಾಯಿಗೆ ವಾಪಸ್ ಕೊಟ್ಟರು.

   

Leave a Reply