ಜಾಯಿಕಾಯಿ ಮನೆಯಲ್ಲಿದ್ದರೆ…

ಲೇಖನಗಳು - 0 Comment
Issue Date :

-ಡಾ. ಶ್ರೀವತ್ಸ ಭಾರಧ್ವಾಜ್

ಅಡುಗೆ ಅಮನೆ ಒಂದು ಔಷಧ ಶಾಲೆ ಇದ್ದಂತೆ. ಇದರಲ್ಲಿರುವ ಸಾಮಾನು ಕೆಲವೊಮ್ಮೆ ಜೀವರಕ್ಷಕವಾಗಿ ಕೆಲಸ ಮಾಡುತ್ತದೆ. ಆರೋಗ್ಯ ಕೆಟ್ಟಾಗ ಇವುಗಳ ಬಳಕೆಯಿಂದ ಸಾವಿರಗಟ್ಟಲೆ ಹಣ ಉಳಿಸಲೂಬಹುದು. ಪ್ರತಿಯೊಬ್ಬರಿಗೂ ತಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳ ಬಗ್ಗೆ, ಅವುಗಳ ಔಷಧೀಯ ಗುಣಗಳ ಬಗ್ಗೆ ಅರಿವು ಇರಲೇಬೇಕು. ಇವುಗಳ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನಮಗಿದ್ದರೆ ಎಂಥಹ ಕಾಯಿಲೆ ಬಂದರೂ ತುರ್ತುಚಿಕಿತ್ಸೆಗೆ ಬಳಸಿ ಗುಣಮುಖರಾಗಬಹುದು.

ಉದ್ಯೋಗಸ್ಥ ಮಹಿಳೆಯೊಬ್ಬರು ತನ್ನ ಕೆಲಸದ ಒತ್ತಡವನ್ನು ತಡೆಯಲಾರದೆ ಮಾನಸಿಕ ಖಿನ್ನತೆಯಿಂದ ಒದ್ದಾಡುತ್ತಿದ್ದರು. ಹಲವಾರು ವೈದ್ಯರನ್ನು ಭೇಟಿಯಾಗಿ ವರ್ಷಗಟ್ಟಲೆ ಔಷಧ ಮಾಡಿದಳು. ಅವರಿಗೆ ಯಾವ ಔಷಧವೂ ಪ್ರಯೋಜನವಾಗಲಿಲ್ಲ. ದಿನೇದಿನೆ ಖಿನ್ನತೆ ಜಾಸ್ತಿಯಾಗಿ ಆತ್ಮಹತ್ಯೆ ಮಾಡುವ ಪರಿಸ್ಥಿಗೆ ತಲುಪಿದ್ದರು. ಕಡೆಯ ಪ್ರಯತ್ನವಾಗಿ ಆಯುರ್ವೇದ ಔಷಧ ಮಾಡುವಾ ಎಂದು ನಮ್ಮಲ್ಲಿ ಬಂದರು. ಇವರಿಗೆ ಆಯುರ್ವೇದದಲ್ಲಿ ಸಂಪೂರ್ಣ ನಂಬಿಕೆ ಇಲ್ಲದ ಕಾರಣ ಮೊದಲಿಗೆ ಬರೇ ಮನೆಮದ್ದು ಮತ್ತು ಪಥ್ಯಾಹಾರವನ್ನು ಶುರು ಮಾಡೋಣ ಮತ್ತೆ ಔಷಧ ನೀಡುತ್ತೇವೆ ಎಂದೆ. ಇಷ್ಟೆಲ್ಲಾ ಮದ್ದು ಮಾಡಿ ಪರಿಹಾರ ಕಾಣದ್ದು ಮನೆಮದ್ದಿನಲ್ಲಿ ಪರಿಹಾರವಾದೀತೆ? ಎಂಬುವ ಸಂಶಯ ಇವರಲ್ಲಿ ಎದ್ದುಕಾಣುತ್ತಿತ್ತು. ಅಂತು ಇಂತು ನಮ್ಮ ಚಿಕಿತ್ಸಾಕ್ರಮವನ್ನು ಒಪ್ಪಿ ಮನೆಮದ್ದು ಪ್ರಾರಂಭಿಸಿದರು.ಇವರ ನಾಡಿ ಮಿಡಿತಕ್ಕೆ ಅನುಸಾರ ಜಾಯಿಕಾಯಿ ಮತ್ತು ಕೆಲವೊಂದು ಮನೆಮದ್ದು, ಪಥ್ಯಗಳನ್ನು ಹೇಳಿದೆ. ಒಂದು ತಿಂಗಳೊಳಗೆ 80% ಗುಣಮುಖರಾದರು. ಇಂತಹ ಅಗಾಧ ಔಷಧೀಯ ಗುಣ ಈ ಜಾಯಿಕಾಯಿಯಲ್ಲಿ ಅಡಗಿದೆ.

 • ಜಾಯಿಕಾಯಿ ಮಾನಸಿಕ ಖಿನ್ನತೆಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
 • ಜಾಯಿಕಾಯಿಯಲ್ಲಿ ನಮ್ಮ ಮೇಧಾಶಕ್ತಿಯನ್ನು ವೃದ್ಧಿಸುವ ಗುಣವಿದೆ. ಹಾಗಾಗಿ ಮಕ್ಕಳಲ್ಲಿ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸಲು ಪ್ರಯೋಜನವಾಗುತ್ತದೆ.
 • ಇದರಲ್ಲಿ ಕೀಟಾಣುನಾಶಕ ಗುಣಗಳಿವೆ. ಚರ್ಮದ ಸೋಂಕು ಇದ್ದಲ್ಲಿ ಜಾಯಿಕಾಯಿಯ ಲೇಪನ ಮಾಡಿದರೆ ಶೀಘ್ರ ಪರಿಹಾರ ಸಿಗುತ್ತದೆ.
 • ಸಂದಿಗಳಲ್ಲಿ ಬಾವು ನೋವು ಇದ್ದರೆ ಈ ಜಾಯಿಕಾಯಿಯನ್ನು ಲಿಂಬೆ ರಸದಲ್ಲಿ ತೇದು ಕುಡಿದರೆ ಪರಿಹಾರ ದೊರಕುವುದು.
 • ಅಜೀರ್ಣ, ಹೊಟ್ಟೆನೋವು, ಮಲಬದ್ಧತೆ ಇದ್ದಲ್ಲಿ ಇದನ್ನು ಹಾಲಿನಲ್ಲಿ ಸೇವಿಸಬೇಕು.
 • ಮೊಲೆಹಾಲು ಕುಡಿಸುವ ತಾಯಂದಿರು ಜಾಯಿಕಾಯಿಯನ್ನು ದಿನನಿತ್ಯ ಸೇವಿಸಿದರೆ ತಮ್ಮ ಹಾಲು ಶುದ್ಧವಾಗುತ್ತದೆ. ಇದನ್ನು ಕುಡಿದ ಮಗುವಿನ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
 • ಜ್ವರ ಬಂದಾಗ ತುಂಬಾ ಮೈ-ಕೈ ನೋವಿದ್ದರೆ ಜಾಯಿಕಾಯಿಯನ್ನು ನೀರಿನಲ್ಲಿ ತೇದು ಕುಡಿದರೆ ನೋವು ಶಮನವಾಗುತ್ತದೆ.
 • ಋತುಬಂಧವಾದ ಮಹಿಳೆಯರಲ್ಲಿ ಆಗುವ ಖಿನ್ನತೆ, ತೂಕವೃದ್ಧಿ, ಆಲಸ್ಯ, ಸಂದಿ ನೋವುಗಳನ್ನು ಜಾಯಿಕಾಯಿ ತಿಂದು ಪರಿಹರಿಸಬಹುದು.
 • ವಸಡಿನಲ್ಲಿ ನೋವು, ಹಲ್ಲು ಹುಳುಕು, ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಸ್ವಲ್ಪ ಜಾಯಿಕಾಯಿಯನ್ನು ದಿನನಿತ್ಯ ತಿಂದರೆ ಶೀಘ್ರ ಪರಿಹಾರ ದೊರಕುತ್ತದೆ.
 • ಮೂತ್ರಪಿಂಡದ ವೈಫಲ್ಯತೆ, ಮೂತ್ರಕೋಶದ ಸೋಂಕು ಇದ್ದಲ್ಲಿ ದಿನನಿತ್ಯಜಾಯಿಕಾಯಿಯನ್ನು ಲಿಂಬೆ ರಸದಲ್ಲಿ ಸೇವಿಸಿದರೆ ಪರಿಹಾರ ಸಿಗುತ್ತದೆ.
 • ಜಾಯಿಕಾಯಿಯನ್ನು ಹಾಲಿನಲ್ಲಿ ಹಾಕಿ ಕಷಾಯ ಮಾಡಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
 • ಪ್ರಯಾಣ ಹೋಗುವಾಗ ವಾಂತಿ ಮಾಡುವ ಸಮಸ್ಯೆಇದ್ದರೆ ಜಾಯಿಕಾಯಿಯ ಸಣ್ಣ ತುಂಡನ್ನು ಏಲಕ್ಕಿಯೊಂದಿಗೆ ಜಗಿದರೆ ಪರಿಹಾರ ಸಿಗುತ್ತದೆ.
 • ದಿನನಿತ್ಯ ಒಂದು ತುಂಡು ಜಾಯಿಕಾಯಿ ತಿಂದರೆ ರಕ್ತದಲ್ಲಿ ಕಬ್ಬಿಣದ ಅಂಶವನ್ನು ಜಾಸ್ತಿ ಮಾಡುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
 • ಜಾಯಿಕಾಯಿಯನ್ನು ಜೇನಿನಲ್ಲಿ ತೇದು ಮುಖಕ್ಕೆ ಲೇಪಿಸಿದರೆ ಮೊಡೆವೆಗಳು ಕಡಿಮೆಯಾಗಿ ಮುಖದ ಕಾಂತಿಯು ವೃದ್ಧಿಸುತ್ತದೆ.

  ಇಷ್ಟೆಲ್ಲಾ ಗುಣಗಳಿರುವ ಜಾಯಿಕಾಯಿ ನಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಲ್ಲವೇ?

   

Leave a Reply