ಜೋನಿಬೆಲ್ಲ ಬಲ್ಲಿರಾ?

ಆರೋಗ್ಯ ; ಲೇಖನಗಳು - 1 Comment
Issue Date :

ಡಾ. ಶ್ರೀವತ್ಸ ಭಾರದ್ವಾಜ್
ದತ್ತಂ ಆಯುರ್ಧಾಮ, ಮಂಗಳೂರು

ಹಲವಾರು ಕಾರಣಗಳಿಂದ ಮನುಷ್ಯ ತನ್ನ ಜೀವನದಲ್ಲಿ ಅನಗತ್ಯವಾಗಿ ವಿಕೃತಿಯ ಕಡೆಗೆ ಹೋಗುತ್ತಿದ್ದಾನೆ. ಇದಕ್ಕೆ ಉದಾಹರಣೆ ಸಕ್ಕರೆ ತಯಾರಿಕೆ. ಈ ಸಕ್ಕರೆ ತಯಾರಿಕೆಯಾಗುವಾಗ ಹಲವಾರು ರಾಸಾಯನಿಕ ಘಟಕಗಳು ಕಬ್ಬಿನರಸಕ್ಕೆ ಸೇರುತ್ತದೆ. ಈ ಘಟಕಗಳು ಕಬ್ಬಿನೊಂದಿಗೆ ಮಿಶ್ರಣವಾಗಿ ಕಬ್ಬಿನ ರಸದ ವರ್ಣ, ಗುಣ, ಪೋಷಕಾಂಶಗಳನ್ನು ಬದಲಾಯಿಸುತ್ತವೆ. ಕಬ್ಬಿನ ರಸದ ವರ್ಣ ಕಂದು, ಸಕ್ಕರೆ ನೋಡಲು ಬಿಳಿ, ಕಬ್ಬು ದೇಹಕ್ಕೆ ತಂಪು ಆದರೆ ಸಕ್ಕರೆ ಈ ರಾಸಾಯನಿಕಗಳನ್ನು ಹೊಂದಿರುವ ಕಾರಣ ದೇಹಕ್ಕೆ ಉಷ್ಣ. ಕಬ್ಬಿನಲ್ಲಿ ನಾರಿನಾಂಶ, ನೀರಿನಾಂಶ, ಕಬ್ಬಿಣದಾಂಶ, ಕ್ಯಾಲ್ಸಿಯಂ ಕಂಡುಬರುತ್ತದೆ. ಆದರೆ ಇವು ಯಾವುದೂ ಸಕ್ಕರೆಯಲ್ಲಿ ಸಿಗುವುದಿಲ್ಲ ಈ ಸಕ್ಕರೆ ನಾಲಿಗೆಗೆ ಸಿಹಿ ಆದರೆ ಸಂಪೂರ್ಣ ದೇಹಕ್ಕೆ ವಿಷಕಾರಿಯಾಗಿದೆ.
ಈಗಿನ ಕಾಲದಲ್ಲಿ ಬೆಲ್ಲದಲ್ಲಿಯೂ ವರ್ಣಗಳು ಕಂಡುಬರುತ್ತದೆ. ಕಪ್ಪು ಬಣ್ಣದ ಬೆಲ್ಲ, ಕಂದುಬಣ್ಣದ್ದು, ಕಂದು ಮಿಶ್ರಿತ ಬಿಳಿಬಣ್ಣದ್ದು. ರಾಸಾಯನಿಕ ಅಳವಡಿಕೆಯಿಂದಾಗಿ ನಮಗೆ ಈ ಬಣ್ಣಗಳು ಲಭ್ಯವಾಗುತ್ತವೆ. ಕೆಲವು ಬೆಲ್ಲಗಳನ್ನು ರುಚಿಸುವಾಗ ಸಿಹಿಯೊಂದಿಗೆ ಉಪ್ಪು ಕೂಡಾ ಕಂಡುಬರುತ್ತದೆ. ಇದು ಅತ್ಯಂತ ಅಪಾಯಕಾರಿಯಾದ ಬೆಲ್ಲ. ಆದರೇನು ಮಾಡುವುದು ನಾವೆಲ್ಲರು ನೋಡಲು ಚೆನ್ನಾಗಿರುವಂತಹ ಆಹಾರವನ್ನೇ ಸೇವಿಸುತ್ತೇವೆ. ಈ ಬೆಲ್ಲ ನೋಡಲು ಸ್ವಲ್ಪ ಬಿಳಿ, ಹಾಗಾಗಿ ಇದು ಪರಿಶುದ್ಧವಾದ ಬೆಲ್ಲವೆಂದು ತಿಳಿದು ತಿನ್ನುತ್ತೇವೆ. ತಿಂದ ಕೂಡಲೆ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ಬೆಲ್ಲದಲ್ಲಿ ಅತ್ಯಧಿಕ ಪೋಷಕಾಂಶವಿರುವ ಬೆಲ್ಲ ನೀರು ಬೆಲ್ಲ ಅಥವ ಜೋನಿಬೆಲ್ಲ ಅಥವಾ ರವೆ ಎಂದು ಕರೆಯುತ್ತೇವೆ. ಇದು ನೋಡಲು ಕಪ್ಪು ಮಿಶ್ರಿತ ಕಂದು ಬಣ್ಣದ್ದಾಗಿದ್ದು ದ್ರವರೂಪದಲ್ಲಿ ಅಥವ ಪೇಸ್ಟ್ ರೂಪದಲ್ಲಿ ಕಂಡುಬರುತ್ತದೆ. ಇದರ ತಯಾರಿ ಅತಿ ಸುಲಭ. ಆಲೇಮನೆಯಲ್ಲಿ ಕಬ್ಬಿನರಸವನ್ನು ಹಲವಾರು ಗಂಟೆಗಳ ಕಾಲ ಕುದಿಸಿದ ನಂತರ ಪಾಕವಾಗಿ ಅಂಟಿನ ರೂಪವನ್ನು ತಾಳುತ್ತದೆ. ಇದರ ತಯಾರಿಕೆಯಲ್ಲಿ ಯಾವ ರೀತಿಯ ರಾಸಾಯನಿಕಗಳನ್ನೂ ಬಳಸಲಾಗುವುದಿಲ್ಲ. ಕಬ್ಬಿನಲ್ಲಿರುವ ಎಲ್ಲಾ ಗುಣಗಳನ್ನು ಈ ಬೆಲ್ಲ ಹೊಂದಿರುತ್ತದೆ.
ಇದರಲ್ಲಿರುವ ಪೋಷಕಾಂಶಗಳು:
ನಾರಿನಾಂಶ
ಕಬ್ಬಿಣ, ವೈಟಮಿನ್ ಎ ಮತ್ತು ಇ
ಕ್ಯಾಲ್ಸಿಯಂ
ಪೊಟಾಸಿಯಂ, ಮೆಗ್ನೀಸಿಯಂ, ಮ್ಯಾಂಗನೀಸ್, ಕೋಪರ್.
ಮೊದಲನೆಯದಾಗಿ ನಾರಿರುವ ಕಾರಣ ನಮ್ಮ ದೇಹದಲ್ಲಿನ ಮಲಬದ್ಧತೆಯನ್ನು ಹೋಗಲಾಡಿಸುವುದು ಸುಲಭ. ಈ ಮಲಗಳು ಶರೀರದಿಂದ ಹೊರ ಹೋದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಬೆಲ್ಲದಲ್ಲಿ ಕಬ್ಬಿಣದಾಂಶ ಅಧಿಕವಾಗಿ ಕಂಡುಬರುತ್ತದೆ. ಬೆಳಿಗ್ಗೆ ತಿಂಡಿಯೊಡನೆಯೋ, ಕಷಾಯದೊಡನೆಯೋ ಒಂದು ಅಥವಾ ಎರಡು ಚಮಚ ಸೇವಿಸಿದಲ್ಲಿ ನಮ್ಮಲ್ಲಿನ ಜಡತ್ವ, ಆಯಾಸ, ಆಲಸ್ಯ, ನಿರುತ್ಸಾಹ ದೂರವಾಗುವುದು; ಕೆಲಸ ಮಾಡಲು ಉತ್ಸಾಹ ಅಧಿಕವಾಗುತ್ತದೆ. ಮಕ್ಕಳಲ್ಲಿ ಕಬ್ಬಿಣದಾಂಶ ಈ ರೀತಿಯಲ್ಲಿ ಸಹಜವಾಗಿ ದೇಹಕ್ಕೆ ಸೇರಿದರೆ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಮಕ್ಕಳ ರೋಗನಿರೋಧಕ ಶಕ್ಕಿ ಹೆಚ್ಚುತ್ತದೆ.
ಈ ಬೆಲ್ಲದಲ್ಲಿ ಕಂಡುಬರುವ ಇನ್ನೊಂದು ಮುಖ್ಯ ಪೋಷಕಾಂಶ ಕ್ಯಾಲ್ಸಿಯಂ. ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಕ್ಯಾಲ್ಸಿಯಂ ಕೊರತೆಯಿದೆ ಎಂದು ಮಾತ್ರೆಗಳನ್ನು ಸೇವಿಸುವುದನ್ನು ನಾವು ನೋಡಿದ್ದೇವೆ. ಈ ಕೃತಕ ಮಾತ್ರೆಗಳ ಬದಲಿಗೆ ಪ್ರಕೃತಿಸಹಜವಾಗಿ ಸಿಗುವ ಕ್ಯಾಲ್ಸಿಯಂ ಉತ್ತಮ. ವೃದ್ಧರು ಈ ಬೆಲ್ಲವನ್ನು ಸೇವಿಸಿದಲ್ಲಿ ನಿತ್ರಾಣ, ಜಡತ್ವ, ಕೈ ಕಾಲುಗಳ ನೋವು ಪರಿಹಾರವಾಗುತ್ತದೆ. ಇನ್ನೊಂದು ವಿಶೇಷತೆ ಏನೆಂದರೆ ಈ ಬೆಲ್ಲದ ರುಚಿಯನ್ನು ಮಧುಮೇಹಿಗಳೂ ಕೂಡ ನಿರಾತಂಕವಾಗಿ ಸವಿಯಬಹುದು. ಇದರಿಂದ ಇವರ ಸಮಸ್ಯೆಗಳೇನು ಉಲ್ಭಣವಾಗುವುದಿಲ್ಲ. ಈ ಬೆಲ್ಲದಲ್ಲಿ ಪೋಷಕಾಂಶಗಳೇ ಅಧಿಕವಿದ್ದು ದೇಹಕ್ಕೆ ಮಾರಕವಾಗುವ ಅಂಶ ಕಂಡುಬರುವುದಿಲ್ಲ. ಈ ಬೆಲ್ಲದ ಸೇವನೆಯಿಂದ ನಮ್ಮ ಕೂದಲು ಉದುರುವುದು ನಿಂತು ಸಹಜವಾಗಿ ಕಪ್ಪಗಾಗುವುದಲ್ಲದೇ ಮೆದುಳಿನ ಬೆಳವಣಿಗೆಯೂ ಕೂಡ ಚೆನ್ನಾಗಿ ಆಗುತ್ತದೆ. ಇಷ್ಟೆಲ್ಲಾ ಗುಣಗಳಿರುವ ಈ ಬೆಲ್ಲವನ್ನು ಕೇಳುವವರ್ಯಾರು?

   

1 Response to ಜೋನಿಬೆಲ್ಲ ಬಲ್ಲಿರಾ?

  1. Dilip Navarathna

    Very good article. But we can’t download it. Pl correct & update to download in PDF or JPG format.

Leave a Reply