ಟಿಪ್ಪು ಮತಾಂಧತೆಯ ಮೊಳಕೆ

ಇತಿಹಾಸ - 0 Comment
Issue Date : 22.02.2016

ಮಾನವಿಕ ಅಧ್ಯಯನ ಶಾಖೆಗಳಲ್ಲಿ ಒಂದಾದ ‘ಇತಿಹಾಸ’ ಇಂದು ಹಿಂದೆಂದಿಗಿಂತಲೂ ಹೆಚ್ಚು ಅತಂತ್ರವಾಗಿದೆ. ಉದ್ದೇಶ ಪೂರ್ವಕವಾಗಿ ಇತಿಹಾಸವನ್ನು ಕುಲಗೆಡಿಸುವ ಪ್ರಯತ್ನ ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮುಂದುವರಿಯುತ್ತಿರುವಾಗ ‘ಯಾವುದು ಇತಿಹಾಸ’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೂ ಆಗಬೇಕಾಗಿದೆ. ಇತ್ತೀಚೆಗೆ, ಇತಿಹಾಸದ ಗರ್ಭದಿಂದ ಒಮ್ಮಿಂದೊಮ್ಮೆಗೇ ಮೇಲೆದ್ದ ಟಿಪ್ಪೂ ಸುಲ್ತಾನನ ವ್ಯಕ್ತಿತ್ವ, ಸಾಧನೆ, ಇತ್ಯಾದಿಗಳ ಮೇಲೆ ಹೊಗಳಿಕೆ-
ತೆಗಳಿಕೆಗಳಾಗುತ್ತಿರುವಾಗ, ವೃತ್ತಿಪರವಾಗಿರದ ಇತಿಹಾಸಕ್ತರು ಗೊಂದಲಕ್ಕೊಳಗಾಗುವುದೂ ಸಹಜ. ಟಿಪ್ಪುವನ್ನು ಸ್ವಾತಂತ್ರ್ಯವೀರ, ಸಜ್ಜನ, ಮತಸಹಿಷ್ಣು, ಜಾತ್ಯತೀ (Secular) ಭಾವನೆಯವ ಎಂದು ಕೊಂಡಾಡಲು ಕೆಲವು ಇತಿಹಾಸದ ಆಧಾರಗಳನ್ನು ಉಲ್ಲೇಖಿಸಲಾಗುತ್ತದೆ. ಅವೆಲ್ಲಾ ನಿಸ್ಸಂಶಯವಾಗಿ ಇತಿಹಾಸದ ದಾಖಲೆಗಳೇ ಆಗಿವೆ. ಆದರೆ, ಆ ಆಧಾರಗಳ ತುಲನಾತ್ಮಕ ಅಧ್ಯಯನವಾಗದೆ, ಕೇವಲ ಅಂತಹ ‘ಆಧಾರಗಳ’ ಆಧಾರದಲ್ಲಿ ಇತಿಹಾಸವನ್ನು ವೀಕ್ಷಿಸಿದಾಗ ಟಿಪ್ಪೂವಿನ ಸಮಗ್ರ ವ್ಯಕ್ತಿತ್ವದ ಅಧ್ಯಯನಕ್ಕೆ ಐತಿಹಾಸಿಕ ಲೋಪವಾಗುವುದಾಗಿದೆ. ಟಿಪ್ಪುವನ್ನು ‘ಮತಸಹಿಷ್ಣು’ವಾಗಿ ಯೋಗ್ಯತಾತೀತ ಹೊಗಳಿಕೆಯಿಂದ ಅಲಂಕರಿಸಿದರೂ, (undue praise) ಅವನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡ ಮತಾಂಧತೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ! ಓರ್ವ ಆಂಗ್ಲ ಇತಿಹಾಸಕಾರ ಅಥವಾ ಹಿಂದೂ ಇತಿಹಾಸಕಾರ ಆ ಬಗ್ಗೆ ಬರೆದರೆ ಅದನ್ನು ಸುಲಭವಾಗಿ ‘ಪಕ್ಷಪಾತೀಯ’ವೆಂದು ತಿರಸ್ಕರಿಸಬಹುದು. ಆದರೆ, ಟಿಪ್ಪು ಸಮಕಾಲೀನ ಮುಸ್ಲಿಂ ಇತಿಹಾಸಕಾರ ಬರೆದುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮಿರ ಹುಸೈನ ಆಲಿ ಕಿರ್ಮಾನಿ ‘‘ನಿಶಾನ್-ಇ-ಹೈದುರೀ’’ ಎಂಬ ಪರ್ಶಿಯನ್ ಇತಿಹಾಸ ಕೃತಿಯನ್ನು 1802 ರಲ್ಲಿ ಬರೆದು ಪೂರ್ತಿಗೊಳಿಸಿದ. ಅದನ್ನು ಪರ್ಶಿಯನ್ ವಿದ್ವಾಂಸರ ಸಹಾಯದಿಂದ ಕರ್ನಲ್‌ಮೈಲ್ಸ್ 1864 ರಲ್ಲಿ ಇಂಗ್ಲಿಷ್‌ಗೆ ಭಾಷಾಂತರಿಸಿದ. (History of Tippu Sulthan Being a Continuation of the Neshan-i-Hyduri, Tr. by Cal.W.Miles) ಅದರ ಆಧಾರದಲ್ಲಿ ಟಿಪ್ಪೂ ಮತಾಂಧತೆಯ ಮೂಲವನ್ನು ಕಾಣಬಹುದಾಗಿದೆ.

arsid14619864 ಟಿಪ್ಪೂ ಮತಾಂಧತೆಯ ಬೆಳೆಯಸಿರಿಯು ಅವನ ಚಿಕ್ಕಂದಿನಲ್ಲೇ ಮೊಳಕೆಯೊಡೆದುದನ್ನು ಇತಿಹಾಸಕಾರ ಕಿರ್ಮಾನಿ ತೋರಿಸಿದ್ದಾನೆ. ‘‘………ಧೂರ್ತ ಬ್ರಾಹಣ ಕುಂದಾರಾವ್ (ಇಲ್ಲೇ ಹಿಂದೂ ದ್ವೇಷ ನೋಡಿ) ಹೈದರಾಲಿಯ ಜನಾನವನ್ನು ಮತ್ತು ಬಾಲಕ ಟಿಪ್ಪುವನ್ನು (6ವರ್ಷ) ಬಂಧಿಸಿ ಕೋಟೆಯೊಳಗೆ ಗೃಹ ಬಂಧನದಲ್ಲಿ ಇರಿಸಿದ್ದ. ಅಲ್ಲೇ ಒಂದು ಹಿಂದೂ ದೇವಾಲಯವಿತ್ತು. ಅದರ ಹೊರಾಂಗಣ ವಿಶಾಲವಾಗಿತ್ತು. ಅಲ್ಲಿ, ‘ಕಿನ್‌ಹಿರಿ ಬ್ರಾಹ್ಮಣ’ ಮಕ್ಕಳು ಆಟವಾಡುತ್ತಿದ್ದರು. ಬಾಲಕ ಟಿಪ್ಪೂ ಅವರ ಆಟಗಳನ್ನು ನೋಡಲು ಮತ್ತು ಅವರೊಡನೆ ಆಡಲು ಬರುತ್ತಿದ್ದ. ಅದಕ್ಕೆ ಯಾರೂ ಅಡ್ಡಪಡಿಸಲಿಲ್ಲ. ಹಾಗಿರುವಾಗ, ಒಂದು ದಿನ ಒಬ್ಬ ಫಕೀರ ಆ ದಾರಿಯಾಗಿ ಸಾಗುತ್ತಿದ್ದಾಗ ಟಿಪ್ಪೂವನ್ನು ನೋಡಿದ. ಆಗಲೇ ಫಕೀರ ಟಿಪ್ಪೂ ಮನದಲ್ಲಿ ಮತಾಂಧತೆಯನ್ನು ಬಿತ್ತಿದ. ಫಕೀರ ‘‘ಅದೃಷ್ಟವಂತ ಬಾಲಕನೇ, ಮುಂದೆ ನೀನು ಈ ಪ್ರದೇಶದ ಸುಲ್ತಾನನಾಗುವೆ. ಆ ಕಾಲ ಬಂದಾಗ ನನ್ನ ಈ ಮಾತನ್ನು ನೆನಪಿಸಿಕೊ ಇಲ್ಲಿರುವ ದೇವಾಲಯವನ್ನು ನಾಶಮಾಡು ಮತ್ತು ಒಂದು ಮಸೀದಿಯನ್ನು ನಿರ್ಮಿಸು. ಅದು ಕಾಲದುದ್ದಕ್ಕೂ ನಿನ್ನ ನೆನಪಿಗಾಗಿ ಉಳಿಯಲೀ’’ ಎಂದು ಬಾಲಕ ಟಿಪ್ಪೂಗೆ ಹಿಂದೂ ದ್ವೇಷದ ಬೋಧನೆ ನೀಡಿದ. ಆಗ ನಗುತ್ತಾ ಟಿಪ್ಪೂ ‘‘ನಿಮ್ಮ ಆಶೀರ್ವಾದದಿಂದ ಸುಲ್ತಾನನಾದರೆ ಮುಂದೆ ಹಾಗೆಯೇ ಮಾಡುವೆ’’ ಎಂದು ಆಶ್ವಾಸನೆ ನೀಡಿದ. ಮುಂದೆ ಟಿಪ್ಪೂ ಅವನ ವಾಗ್ದಾನವನ್ನು ಅಕ್ಷರಶಃ ಪಾಲಿಸಿದ. ಆ ಬಾಲಕ ಟಿಪ್ಪೂ ಮೈಗೂಡಿಸಿಕೊಂಡ ಮತಾಂಧತೆಯಿಂದ ಜೀವನಾದಾದ್ಯಂತ ಅದನ್ನೇ ಅನುಸರಿಸಿ ಹಿಂದು ದೇವಾಲಯಗಳ ನಾಶ ಹಾಗೂ ಮತಾಂತರದ ಕಾರ್ಯಗಳನ್ನು ಕೈಗೊಂಡ.
ಮತಾಂಧತೆಯನ್ನು ಬೋಧಿಸಿದ ಧರ್ಮಾಂಧ ಫಕೀರನ ಪ್ರಚೋದನೆಯಾದ ಮೇಲೆ ಸ್ವಲ್ಪ ಸಮಯದಲ್ಲೇ ಹೈದರಾಲಿ ಸುಲ್ತಾನನಾದ. ಹೈದರಾಲಿಯ ಮರಣದೊಂದಿಗೆ (1782) ಟಿಪ್ಪೂ ಸುಲ್ತಾನನಾದ. ಫಕೀರನ ಬೋಧನೆಯಾದಲ್ಲಿಯ ದೇವಾಲಯವನ್ನು ನಾಶಮಾಡಿ ಮಸೀದಿ ನಿರ್ಮಿಸಿದ ಟಿಪ್ಪೂ (AH1198) ಮುಂದೆ ಮತಾಂಧತೆಯ ಅದೇ ಮಾದರಿಯನ್ನು ಮುಂದುವರೆಸಿದ.

arsid14619864 ಕಿರ್ಮಾನಿ ತಿಳಿಸಿರುವ ಈ ಘಟನೆಯ ವಿಶ್ಲೇಷಣೆ ಕೆಲವು ಪ್ರಮುಖ ಅಂಶಗಳನ್ನೊಳಗೊಂಡಿದೆ. 1. ಅಲ್ಲಿಯ ಬ್ರಾಹ್ಮಣ ಮಕ್ಕಳು ಯಾವುದೇ ಸಂಕೋಚವಿಲ್ಲದೆ (reservation) ಟಿಪ್ಪೂವಿನೊಡನೆ ಬೆರೆತಿದ್ದರು. ಆರಂಭದಲ್ಲಿ ಟಿಪ್ಪು ಅವರೊಡನೆ ಸ್ನೇಹ ಭಾವನೆಯಿಂದಿದ್ದ. 2. ಅಲ್ಲಿಗೆ ಆಗಮಿಸಿದ ಫಕೀರ ಬಾಲಕ ಟಿಪ್ಪೂವಿನ ಮನದಲ್ಲಿ ಮತಾಂಧತೆಯನ್ನು ಬಿತ್ತಿದ! ಅಲ್ಲಿಯ ದೇವಾಲಯವನ್ನು ನಾಶಮಾಡಿ ಮಸೀದಿಯನ್ನು ನಿರ್ಮಿಸಲು ಬೋಧಿಸಿದ. ಫಕೀರನೊಬ್ಬ ಹಿಂದೂಗಳ ವಿರುದ್ಧ ಹೇಗೆ ಕಾರ್ಯಾಚರಣೆ ಮಾಡಿದ ಎಂಬುದನ್ನು ಇಲ್ಲಿ ನೋಡಬಹುದು. ಆ ಕಾಲದಲ್ಲೇ ಮುಸಲ್ಮಾನ ಬಾಲಕರಿಗೆ ‘ಜಿಹಾದ್’ ಬೋಧನೆಯಾಗುತ್ತಿತ್ತೇ ಎಂಬ ಸಂಶಯಕ್ಕೆ ಇಲ್ಲಿ ಆಸ್ಪದವಿದೆ. 3. ಬಾಲಕನಾಗಿದ್ದಾಗಲೇ ಟಿಪ್ಪೂ ಮನದಲ್ಲಿ ಬಿತ್ತಲ್ಪಟ್ಟ ಮತಾಂಧತೆಯ ಬೀಜ ಹೆಮ್ಮರವಾಗಿ ಬೆಳೆಯಿತು! ದೇವಾಲಯಗಳ ನಾಶದ ಬೋಧನೆಯನ್ನು ಮೈಗೂಡಿಸಿಕೊಂಡಿದ್ದ ಟಿಪ್ಪೂ ಮುಂದೆ ವಿಧ್ವಂಸಕನಾಗಿ ಮುಂದುವರಿದುದರಲ್ಲಿ ಆಶ್ಚರ್ಯವಿಲ್ಲ. ಟಿಪ್ಪೂ ಮತಾಂಧತೆಗೆ, ದೇವಾಲಯಗಳ ನಾಶದ ರಾಜಕೀಯ ಧೋರಣೆಗೆ, ಮತಾಂತರದ ಕ್ರೌರ್ಯಗಳಿಗೆ ಪ್ರಬಲವಾದ ಹಿನ್ನೆಲೆಯಿದೆ. ಟಿಪ್ಪೂ ಕೆಲವು ದೇವಾಲಯಗಳಿಗೆ ದಾನ-ದತ್ತಿ ನೀಡಿದ್ದ. ಅವನು ಶೃಂಗೇರಿ ಮಠದೊಂದಿಗೆ ಬಹಳ ಸೌಹಾರ್ದಮಯ ಸಂಬಂಧವಿರಿಸಿಕೊಂಡಿದ್ದ. ಆದರೆ, ಅದು ಅವನ ರಾಜಕೀಯ ಕುಟಿಲ ನೀತಿಯ ಭಾಗವಾಗಿತ್ತೆಂಬುದನ್ನು ಮನಗಾಣದ ಟಪ್ಪು ಚಿತ್ರಣ ಪಕ್ಷಪಾತೀಯವಲ್ಲವೇ? ಟಿಪ್ಪೂ ಪೋಷಣೆಗೆ ಒಳಪಟ್ಟ ದೇವಾಲಯಗಳ ಮತ್ತು ಅವನಿಂದ ನಾಶವಾದ ದೇವಾಲಯಗಳ ಅಂಕೆ-ಸಂಖ್ಯೆಗಳು ಅಜಗಜಾಂತರವಾಗಿವೆ. ನಿಜಕ್ಕೂ ಟಿಪ್ಪೂ ಧರ್ಮಸಹಿಷ್ಣುವಾಗಿದ್ದರೆ, ದೇವಾಲಯಗಳ ನಾಶದ, ವಿಗ್ರಹ ಭಂಜನೆಯ, ಬಲವಂತದ ಮತಾಂತರದ ವಿನಾಶಕಾರೀ ಕೃತ್ಯಗಳು ಅವನಿಂದ ನಡೆಯುತ್ತಿರಲಿಲ್ಲ. ತೋರಿಕೆಗೆ ಕೆಲವೊಂದು ದೇವಾಲಯಗಳನ್ನು ಮುಂದಿಟ್ಟು, ಸಾವಿರಾರು ದೇವಾಲಯಗಳನ್ನು ನೆಲಸಮಮಾಡಿದ ಗೋಮುಖ ವ್ಯಾಘ್ರತನ ಟಿಪ್ಪೂ ಜೀವನ ವೃತ್ತಾಂತದ ಅವಿಭಾಜ್ಯ ಅಂಗ!

   

Leave a Reply