ಟಿಪ್ಪು ವೈಭವೀಕರಣಕ್ಕೆ ಕೊಡವರ ಆಕ್ರೋಶ

ಕೊಡಗು - 0 Comment
Issue Date : 06.12.2013


ಮಡಿಕೇರಿ: ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಕೋ.ಚೆನ್ನಬಸಪ್ಪ ಅವರು ಟಿಪ್ಪುವನ್ನು ವೈಭವೀಕರಿಸುವ ಭರಾಟೆಯಲ್ಲಿ ಕೊಡಗಿನ ಜನತೆಗೆ ಅಪಮಾನವೆಸಗಿದ್ದಾರೆ. ಅವರು ಡಿ.31ರೊಳಗೆ ಕೊಡಗಿನ ಜನತೆಯ ಕ್ಷಮೆ ಕೇಳದಿದ್ದಲ್ಲಿ ಯಾವುದೇ ಕಾರಣಕ್ಕೂ ಅವರನ್ನು ಕೊಡಗಿಗೆ ಕಾಲಿಡಲು ಬಿಡುವುದಿಲ್ಲ ಎಂದು ಟಿಪ್ಪು ವೈಭವೀಕರಣ ವಿರೋಧಿಸಮಿತಿ ಹೇಳಿದೆ.
ಕೋ.ಚೆ. ಅವರು ಇತ್ತೀಚೆಗೆ ಬರೆದಿರುವ ಮಹಾನ್ ದೇಶಭಕ್ತ ಟಿಪ್ಪು ಸುಲ್ತಾನ್ ಪುಸ್ತಕವನ್ನು ನಿರ್ಬಂಧಿಸಬೇಕು ಎಂಬ ಬೇಡಿಕೆಯನ್ನೂ ಸಮಿತಿ ಮುಂದಿಟ್ಟಿದೆ. ಡಿ. 27ರಂದು ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಆಗ್ರಹ ಪತ್ರ ಸಲ್ಲಿಸಿದ ಹೋರಾಟ ಸಮಿತಿಯ ನೂರಾರು ಮಂದಿ ಕಾರ್ಯಕರ್ತರು ಕೋ.ಚೆ. ಕ್ಷಮೆ ಕೇಳದೆ ಕೊಡಗಿಗೆ ಕಾಲಿಟ್ಟಲ್ಲಿ ಮುಂದಾಗುವ ಪರಿಣಾಮಗಳಿಗೆ ಕ.ಸಾ.ಪ., ಜಿಲ್ಲಾಡಳಿತ ಹಾಗೂ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಟಿಪ್ಪು ಕೊಡಗಿನವರ ಪಾಲಿಗೆ ಎಂದಿದ್ದರೂ ಗೌರವಿಸಲಾಗದ ವ್ಯಕ್ತಿ. ಆತನಿಂದ ಅತ್ಯಾಚಾರ, ಮತಾಂತರ, ದೌರ್ಜನ್ಯಕ್ಕೆ ಒಳಗಾದ ಅನೇಕ ಕುಟುಂಬಗಳು ಕೊಡಗಿನಲ್ಲಿ ಸಾಕ್ಷಿ ಪ್ರಜ್ಞೆಯಾಗಿ ನಿಂತಿವೆ. ಜನಾಂಗೀಯ ದ್ವೇಷಕ್ಕೆ ಆತ ಕಾರಣನಾಗಿದ್ದಾನೆ ಎಂದು ಸಮಿತಿಯ ಮುಖಂಡರು ಆರೋಪಿಸಿದರು.
ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಉಲ್ಲಾಸ್, ಧರ್ಮ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ನ.ಸೀತಾರಾಮ, ಅಡ್ಡಂಡ ಸಿ. ಕಾರ್ಯಪ್ಪ, ಐನಂಡ ಜೆಪ್ಪು ಅಚ್ಚಪ್ಪ, ಕಾಂತಿ ಬೆಳ್ಯಪ್ಪ ಹಾಗೂ ಆರೆಸ್ಸೆಸ್ ಜಿಲ್ಲಾ ಸಂಘ ಚಾಲಕರಾದ ಮಚ್ಚಾರಂಡ ಮಣಿ ಕಾರ್ಯಪ್ಪ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

   

Leave a Reply