ಟಿಪ್ಪು ಹೆಸರಿಡುವ ಮುನ್ನ ಆಲೂರರನ್ನು ಅರಿಯೋಣ

ಲೇಖಕರು - 0 Comment
Issue Date :

-ಪು. ರವಿವರ್ಮ

ಕುಲಪುರೋಹಿತರನ್ನು ನೆನೆಯದಿದ್ದೊಡೆ ಕನ್ನಡ ನಾಡು ಉಳಿಯುವುದೆಂತು…? ಸುಮಾರು 12 ವರ್ಷಗಳ ಕೆಳಗೆ ರಾಜ್ಯಮಟ್ಟದ ಸ್ಪರ್ಧೆಯ ಅಂತಿಮ ಸುತ್ತಿನ ಕಡೇ ಪ್ರಶ್ನೆಗೆ ಉತ್ತರಿಸಲಾಗದೆ ಆ ಸ್ಪರ್ದೆಯಲ್ಲಿ ಸೋತಿದ್ದೆ. ಕ್ವಿಜ್ ಮಾಸ್ಟರ್ ಕೇಳಿದ ಆ ಪ್ರಶ್ನೆಯನ್ನು ನಾನಿಂದು ಮರೆತಿಲ್ಲ. ‘ಕನ್ನಡ ಪುರೋಹಿತ ಎಂದು ಯಾರನ್ನು ಕರೆಯುತ್ತೇವೆ?’ ಎಂಬ ಆ ಪ್ರಶ್ನೆಗೆ ಇತರೆ ಯಾವ ತಂಡಗಳು ಉತ್ತರಿಸಲಿಲ್ಲ. ಅಲ್ಲಿದ್ದ ಸಭಿಕರಲ್ಲು ಯಾರಿಗೂ ಈ ಪ್ರಶ್ನೆಯ ಉತ್ತರ ತಿಳಿದಿರಲಿಲ್ಲ. ಕಡೆಗೆ ಕ್ವಿಜ್ ಮಾಸ್ಟರ್ ‘ಕರ್ನಾಟಕ ಏಕೀಕರಣದ ರೂವಾರಿ ಇವರು’ ಎಂಬ ಒಂದು ಸಾಲುದ್ದದ ವಿವರಣೆಯೊಂದಿಗೆ ‘ಆಲೂರು ವೆಂಕಟರಾಯರ’ ಹೆಸರನ್ನು ಆ ಪ್ರಶ್ನೆಗೆ ಸರಿ ಉತ್ತರವೆಂದು ಘೋಷಿಸಿದರು. ನಾನು ಅದೇ ಮೊದಲು ಆ ಹೆಸರು ಕೇಳಿದ್ದು. ಅವರಿಗಿದ್ದ ಬಿರುದಿನ ಬಗ್ಗೆ ನನ್ನ ಕುತೂಹಲ ಶುರುವಾಯಿತು. ‘ಅವರನ್ನೇಕೆ ಕನ್ನಡದ ಕುಲಪುರೋಹಿತ ಎನ್ನುತ್ತಾರೆ?’ ನಂತರ ಅವರ ಭಾವಚಿತ್ರಕ್ಕಾಗಿ ತಡಕಾಡಿದೆ, ಸಿಕ್ಕಿತು. ಆ ಚಿತ್ರವನ್ನು ನೋಡಿದ ಮೇಲೆ ಆ ಬಿರುದು ಸರಿಯಿದೆ ಎನಿಸಿತ್ತು.

ಸುಮಾರು 70-80 ರ ಆಸುಪಾಸಿನ ವಯಸ್ಸು. ಬೆಳ್ಳಿಯಲ್ಲಿ ಮೂಡಿದಂತಿದ್ದ ಬಿಳಿ ಕೂದಲು, ಋಷಿಮುನಿಗಳಂತೆ ಎದೆವರೆಗೆ ಇಳಿದಿದ್ದ ಬಿಳಿಗಡ್ಡ, ಹೊಳೆಯುವ ಕಣ್ಣುಗಳು, ಅಗಲವಾದ ಕಿವಿಗಳು, ನೀಳವಾದ ಮೂಗು, ಆಜ್ಞಾಚಕ್ರದಲ್ಲಿ ಕಂಗೊಳಿಸುವ ತಿಲಕ, ತೇಜಸ್ವಿ ಮುಖಮಂದಾರ, ಋಷಿ ಸದೃಶ ರೂಪ. ಕನ್ನಡದ ಕುಲಪುರೋಹಿತ ಅನ್ನುವುದರಲ್ಲಿ  ಯಾವ ಅತಿಶಯವಿಲ್ಲ. ಚಿತ್ರ ನೋಡಿದಾಕ್ಷಣ ನಾನು ಈ ಮೇಲಿನ ನಿರ್ಧಾರಕ್ಕೆ ಬಂದೆ. ಮುಂದೆ ಅವರ ಕುರಿತ ನನ್ನ ಅಧ್ಯಯನ ‘ಇವರೇ ನಿಜವಾದ ಕುಲಪುರೋಹಿತ’ ಎಂದು ಖಚಿತಪಡಿಸಿತು.  ಡಿ.ವಿ.ಜಿ ಯವರ ‘ಮಾತಿನಂತೆ ತೋರಣ, ಒಳಗಡೆ ಹೂರಣ’ ಎರಡೂ ಇದ್ದ  ವ್ಯಕ್ತಿತ್ವ ಆಲೂರು ವೆಂಕಟರಾಯರದ್ದು.

 ಶಾಲೆಯಲ್ಲಿ ನೀಡಿದ್ದ ಒಂದು ಸ್ವದೇಶಿ ಚಿಂತನೆಯ ಉಪನ್ಯಾಸ ಕೇಳಿದ ವೆಂಕಟರಾಯರು ತಮ್ಮ ಜೀವನವನ್ನು ಅತ್ಯಂತ ಸರಳವಾಗಿ ಇರಿಸಿಕೊಳ್ಳುವುದರಲ್ಲಿ, ಸ್ವದೇಶಿ ವಸ್ತುಗಳನ್ನೇ ಬಳಸುವ, ಸ್ವದೇಶಿ ಉಡುಪುಗಳನ್ನೇ ಧರಿಸುವ ಕುರಿತು ಚಿಂತಿಸಿದರು. ಅದನ್ನು ತಮ್ಮ ಜೀವನದ ಕಡೆಯವರೆಗೂ ಅನುಷ್ಠಾನಗೊಳಿಸಿದರು.

 ಈ ನಿಟ್ಟಿನಲ್ಲಿ ಆಲೂರು ವೆಂಕಟರಾಯರನ್ನು ಪ್ರಭಾವಿಸಿದ ಅನೇಕರಿದ್ದಾರೆ. ಅವರ ಜೀವನ ಒಂದು ಆದರ್ಶಮಯವಾಗಲು ಅವರನ್ನು  ಪ್ರಭಾವಿಸಿದ್ದು ನಾಲ್ವರು – ಮಧ್ವಾಚಾರ್ಯ, ವಿದ್ಯಾರಣ್ಯ, ಅರವಿಂದ ಮತ್ತು ಲೋಕಮಾನ್ಯ ತಿಲಕರು.

 ಮುಂದೆ ವೆಂಕಟರಾಯರ ಚಿಂತನೆ ಮೂಸೆಯಿಂದ ಹೊರಬಂದ ವಿಶಿಷ್ಟ ಚಿಂತನೆಯ ಪ್ರತಿ ಮಜಲಿನಲ್ಲಿ ಈ ನಾಲ್ವರ ಪ್ರಭಾವ ಯಥೇಚ್ಛವಾಗಿದೆ.

 ಸಾಮಾನ್ಯವಾಗಿ ರಾಷ್ಟ್ರೀಯವಾದಿಯಾದವರಿಗೆ ಪ್ರಾದೇಶಿಕ ಸಂಬಂಧಿ ಹಲವು ವಿಷಯಗಳಲ್ಲಿ ತಮ್ಮ ನಿಲುವು ನಿರ್ಣಯ ನಿಶ್ಚಯಿಸುವಲ್ಲಿ ಧರ್ಮಸಂಕಟ ಎದುರಾಗುವುದನ್ನು ಕಂಡಿದ್ದೇವೆ. ಅಥವಾ ಪ್ರಾದೇಶಿಕ ಹೋರಾಟಗಾರರಿಗೆ ರಾಷ್ಟ್ರೀಯ ದೃಷ್ಟಿ ಇರಲಾರದ ಸ್ಥಿತಿಯು ಇಂದು ಸಮಾಜದ ಪ್ರತಿಕಡೆ ನಾವು ಕಾಣಬಹುದಾಗಿದೆ. ಆದರೆ ಆಲೂರು ವೆಂಕಟರಾಯರು ಈ ವಿಷಯದಲ್ಲಿ ಒಂದು ವಿಶಿಷ್ಠ ಗಾತ್ರದಲ್ಲಿ ನಿಲ್ಲುತ್ತಾರೆ. ಅವರ ರಾಷ್ಟ್ರೀಯತೆಯ ಪ್ರಜ್ಞೆ  ಪ್ರಾದೇಶಿಕ ಸಂವೇದನೆಗೆ ಸಹಕಾರಿಯಾಗುತ್ತದೆ ಮತ್ತು ಪ್ರಾದೇಶಿಕ ಪ್ರಜ್ಞೆ ರಾಷ್ಟ್ರೀಯ ಸಂವೇದನೆಗೆ ಪೂರಕವಾಗಿದೆ. 1928 ರಲ್ಲಿ ಅವರು ‘ರಾಷ್ಟ್ರೀಯ ಮೀಮಾಂಸೆ’ ಕಿರು ಹೊತ್ತಿಗೆಯನ್ನು ಪ್ರಕಟಿಸಿದರು. ಅವರ ಈ ದೃಷ್ಠಿಕೋನ ನವ ಸಮಾಜದ ಸೃಷ್ಟಿಗೆ ಅಮೃತಧಾರೆಯಂತೆ ವರ್ತಿಸುತ್ತದೆ. ‘ರಾಷ್ಟ್ರೀಯತೆಯನ್ನು, ಅಥವಾ ರಾಷ್ಟ್ರಾಭಿಮಾನ ಎಂಬುದನ್ನು ಅಥವಾ ಅಹಂಕಾರವನ್ನು ಒಂದು ನದಿಗೆ ಹೋಲಿಸಬಹುದು. ಈ ಅಹಂಕಾರದ ರೂಪ ನದಿಯ ಉಗಮವು ಚಿಕ್ಕದು, ಅದು ತನ್ನ ಸ್ವಂತ ಮನಸ್ಸು  ಎಂಬಷ್ಟರ ಮಟ್ಟಿಗೆ ಮಾತ್ರವೆ ಇರುತ್ತದೆ.; ಆದರೆ ಅದು ಮುಂದೆ ವಿಸ್ತಾರವಾಗುತ್ತ ತನ್ನ ಹೆಂಡಿರು, ಮಕ್ಕಳು, ತನ್ನ ಊರು, ತನ್ನ ಪ್ರಾಂತ್ಯ, ತನ್ನ ರಾಷ್ಟ್ರ – ಇಲ್ಲಿಯವರೆಗೆ ವಿಸ್ತಾರ ಹೊಂದಿ ಕೊನೆಗೆ ಅದು ಸರ್ವಭೂ ಸಹಿತ ಸಮುದ್ರಕ್ಕೆ ಹೋಗಿ ಕೂಡುತ್ತದೆ.’ ಈ ಮಾತುಗಳನ್ನು ಅವರು ‘ರಾಷ್ಟ್ರೀಯ ಮೀಮಾಂಸೆ’ ಕಿರುಲೇಖನದಲ್ಲಿ ಪ್ರಕಟಿಸಿದ್ದಾರೆ.

 ಸ್ವಾತಂತ್ರ್ಯವೀರ ಸಾವರ್ಕರ್, ಬಾಲಗಂಗಾಧರ ತಿಲಕ್ ರಂತಹ ಮಹಾನ್ ರಾಷ್ಟ್ರೀಯವಾದಿ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದ ಆಲೂರರು ಸಹಜವಾಗಿ ಅಖಿಲ ಭಾರತೀಯ ದೃಷ್ಟಿಯನ್ನು ಬೆಳೆಸಿಕೊಂಡರು. ಆದರೆ ಅಷ್ಟೇ ಸ್ಪಷ್ಟವಾಗಿ ಕರ್ನಾಟಕವಷ್ಟೇ ತಕ್ಕ ಕಾರ್ಯಕ್ಷೇತ್ರವೆಂದು ಮನಗಂಡರು. ಅಸಹಕಾರ ಚಳುವಳಿಗೆ ಓಗೊಟ್ಟು ತಮ್ಮ ವಕೀಲಿ ವೃತ್ತಿಗೆ ತಿಲಾಂಜಲಿ ಕೊಟ್ಟರು.

 ‘ಜಯ  ಕರ್ನಾಟಕ ’ ಪತ್ರಿಕೆಯನ್ನು ಸ್ಥಾಪಿಸಿ, ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ.ಜೋಷಿ, ಮುಂತಾದ ಹಲವು ಜನಪ್ರಿಯ ಸಾಹಿತಿಗಳಿಗೆ ಪೋಷಣೆ, ಪ್ರೋತ್ಸಾಹ ನೀಡಿ ಬೆಳೆಸಿದರು. ಸ್ವತಃ ತಮ್ಮನ್ನು  ತಾವು ಎಂದೂ ಸಾಹಿತಿಯೆಂದು ಬಣ್ಣಿಸಿಕೊಳ್ಳದ ಅವರು ಜಯಕರ್ನಾಟಕದ ಸಂಪಾದಕೀಯದ ಮೂಲಕ ಯುವ  ಬರಹಗಾರರಿಗೆ ಬೋಧಿಸುತ್ತಿದ್ದರು. ಅವರ ಮಾತುಗಳಲ್ಲೇ ಕೇಳುವುದಾದರೆ  ‘ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲ ಭಾಗಗಳಲ್ಲಿಯೂ ಲೇಖಕರು, ಕವಿಗಳು ಹುಟ್ಟಬೇಕೆಂಬುದೇ ನನ್ನ ಉದ್ದೇಶ.’

 ಅಂದಿನ ದಿನಮಾನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ  ಗ್ರಂಥಕರ್ತರ ಸಮಾವೇಶವನ್ನು ಆಯೋಜಿಸಿ, ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹಿಸಿದರು. 1915 ರಲ್ಲಿ ಈ ಘಟನೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾಯಿತು. ಹೀಗೆ ಕರ್ನಾಟಕ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬ ದ ಯೋಜನೆ ಈ ಎಲ್ಲದರಲ್ಲು ಅಸ್ತಿಭಾರ ಹಾಕಿದ ಏಕೈಕ ವ್ಯಕ್ತಿ ಆಲೂರು ವೆಂಕಟರಾಯರು.

 ನಾವು ಕನ್ನಡಿಗರು ಎಂದು ಹೆಮ್ಮೆಪಡುವುದಕ್ಕೆ ಆಲೂರು ವೆಂಕಟರಾಯರೊಂದು ಕಾರಣ ಸಾಕು ನಮಗೆ ಎನಿಸುತ್ತದೆ. ಅವರೇ ಹೇಳುವಂತೆ ‘ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹದಲ್ಲಿ, ಮೋಚು ಮರ’. ಕನ್ನಡದ ಕರ್ನಾಟಕದ ದುರ್ಗತಿಯನ್ನು ಹೊಡೆದೋಡಿಸಲು ಈ ಮನೋಧರ್ಮವಲ್ಲದೆ ಬೇರೆ ಪರಿಹಾರವಿಲ್ಲ.

ಇಂದಿನ ಅನೇಕ ಗೊಂದಲಗಳಿಗೆ ಅವರ ‘ಕರ್ನಾಟಕಾಂರ್ಗತ ಭಾರತ’ ಕಲ್ಪನೆ ಸರಿಯಾದ ದರ್ಶನವನ್ನು ನೀಡುತ್ತದೆ.  ‘ನಾಳೆ ಜಗತ್ತೆಲ್ಲವು ಒಂದೇ ಧರ್ಮದಿಂದ, ಒಂದೇ ರಾಜ್ಯ ಪದ್ದತಿಯಿಂದ, ಒಂದೇ ಭಾಷೆಯಿಂದ, ಒಂದೇ ಸಂಸ್ಕೃತಿಯಿಂದ, ಒಂದೇ ತೆರನಾದ ಆಚಾರ-ವಿಚಾರಗಳಿಂದ, ಒಂದೇ ತರಹದ ಉಡುಪು ತೊಡುಪುಗಳಿಂದ ಬದ್ದವಾದರೆ ಅದು ಎಷ್ಟು ಸುಂದರವಾಗಿ ಕಂಡೀತು? ನಿಜಕ್ಕೂ ಇದು ಅತ್ಯಂತ ಸ್ಪೃಹಣೀಯವಾದ ಕಲ್ಪನೆಯು. ಈ ಕಲ್ಪನೆಯಲ್ಲಿ ಅದ್ಭುತವಾದ ಶಕ್ತಿಯಿದೆ. ಆದರೆ, ದುರ್ದೈವದಿಂದ, ಅದು ಅಸಾಧ್ಯವಾದ ಕಲ್ಪನೆಯು, ಅದು ಮೃಗಜಲವು. ಹಾಗಾದರೆ ಆ ಜಗತ್ತನ್ನು ಒಟ್ಟುಗೂಡಿಸುವ ಪ್ರಯತ್ನವನ್ನೇ ಮಾಡಬಾರದೋ? ಜಗತ್ತು ಯಾವಾಗಲೂ ಭಿನ್ನ ಭಿನ್ನ ಪ್ರಾಣಿಗಳ ಬಡಿದಾಟದ ಕ್ಷೇತ್ರವಾಗಿಯೇ ಉಳಿಯಬೇಕೋ ಎಂದು ಕೇಳಿದರೆ ಇಲ್ಲ, ಅದು ದೊಡ್ಡ ತಪ್ಪು. ಒಂದುಗೂಡಿಸುವ ತತ್ವವು ಯಾವಾಗಲೂ ಸ್ತುತ್ಯವೇ. ಜೀವಂತ ಸಂಸ್ಕೃತಿಗಳನ್ನು ಏಕಸೂತ್ರದಲ್ಲಿ ಬದ್ದಮಾಡುವುದು ಪುಣ್ಯವು. ಕರ್ನಾಟಕತ್ವದ ಈ ಸೂತ್ರವನ್ನು ಅನುಸರಿಸಿ, ರಾಷ್ಟ್ರೀಯತ್ವದ ನಿಜವಾದ ಕಲ್ಪನೆಯನ್ನು ಜನತೆಯಲ್ಲಿ ಬೇರೂರಿ, ಇಡೀ ಹಿಂದೂಸ್ಥಾನದಲ್ಲಿ ಸನಾತನ ರಾಷ್ಟ್ರೀಯತ್ವವನ್ನು ಪ್ರತಿಷ್ಠಾಪಿಸುವರೆಂದು ಆಶಿಸುತ್ತೇನೆ. ಈ ಮಾತಿನ ಅರಿವಾದರೆ ಅಪರೋಕ್ಷ, ಮರೆವಾದರೆ ವಿನಾಶ. ಕೊನೆಗೆ, ಈ ವಿವಿಧ ಸಂಸ್ಕೃತಿಗಳ ನವರತ್ನದ ಹಾರವನ್ನು ಧರಿಸಿದ – ಅಲ್ಲ, ಮಂಗಳಸೂತ್ರವನ್ನು ಕೊರಳಲ್ಲಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಭಾರತಮಾತೆಗೆ ನಮಸ್ಕರಿಸಿ ಈ ಲೇಖವನ್ನು ಮುಗಿಸುತ್ತೇವೆ ’ 1964 ರ ಮಾರ್ಚ್‌ನಲ್ಲಿ ಜಯಕರ್ನಾಟಕಕ್ಕೆ ಬರೆದ ಲೇಖನದ ಆಯ್ದ ಭಾಗವಿದು. ಇದೊಂದು ಮಾತು ಸಾಕು ಆಲೂರರ ಹೃದಯ ವೈಶಾಲ್ಯತೆ, ಎಲ್ಲವನ್ನು ಎಲ್ಲರನ್ನು ಜೋಡಿಸುವ ಕಲ್ಪನೆ, ಕೈಗೊಂಡ ಕಾರ್ಯಗಳ ಅರಿವಾಗಲು. ಸಕಲ ವಿಧಗಳಿಂದಲೂ ತಮ್ಮ ಜೀವನವನ್ನು ಈ ದೇಶದ ಸೇವೆಗೆ, ಭಾಷೆಯ ಏಳ್ಗೆಗೆ ಸವೆಸಿದ ಆ ಮಹಾಪುರುಷನನ್ನು ಮರೆತಿರುವ ನಾವು ಮೌಢ್ಯರಲ್ಲದೆ ಮತ್ತೇನು? ಇಂತಹ ನಾಡು ಕಟ್ಟಿದ ಚೇತನದ ನೆನಪು ಮಾಡಿಕೊಳ್ಳದಿದ್ದರೆ ಅದೊಂದು ಮಹಾಪಾತಕ. ನಾಡನ್ನು ಕೆಡವಲು ಹಪಹಪಿಸಿದ ದುಷ್ಟ ಟಿಪ್ಪುಸುಲ್ತಾನ್ ನನ್ನು ಆಲೂರರ ಆಲೋಚನೆಯೊಂದಿಗೆ ತಾಳೆ ನೋಡಲು ಸಾಧ್ಯವೇ ಇಲ್ಲ. ಚಾಮರಾಜಪೇಟೆಯ ಆಲೂರು ವೆಂಕಟರಾಯರ ರಸ್ತೆ ನಮ್ಮ ಮುಂದಿನ ಪೀಳಿಗೆಗೆ ಕನಿಷ್ಟ ಆ ಹೆಸರಿನ ನೆನಪನ್ನು ಉಳಿಸುವ ಪ್ರಯತ್ನದಂತಿತ್ತು. ಈಗ ಗುಲಾಮಿ ಮಾನಸಿಕತೆಯ, ಕೃತಜ್ಞತೆ ಬುದ್ದಿಯ ಈ ಸರ್ಕಾರ ಆ ಜಾಗದಲ್ಲಿ ದುಷ್ಟಶಕ್ತಿಯ ನಾಮಕರಣ ಮಾಡಲು ಹೊರಟು ನಿಂತಿದೆ. ಇದು ಕನ್ನಡದ, ಕರ್ನಾಟಕದ ಭವಿಷ್ಯದ ಬೆಳವಣಿಗೆಗೆ ಬಾರಿ ದೊಡ್ಡ ಪೆಟ್ಟು. ಕಡೆಯಲ್ಲಿ ಆಲೂರು ವೆಂಕಟರಾಯರ ಬಳಿ ಕ್ಷಮೆ ಕೇಳದೆ ಬೇರೆ ದಾರಿಯಿಲ್ಲ. ಕ್ಷಮಿಸಿ ಬಿಡಿ ಕುಲಪುರೋಹಿತರೆ.

 

   

Leave a Reply