ತಪ್ಪು ಯಾರದು?

ಮಹಿಳೆ ; ಲೇಖನಗಳು - 0 Comment
Issue Date : 28.05.2016

ನಮಿತಾ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ಒಬ್ಬಳೇ ಮಗಳು ಎಂದ ಮೇಲೆ ಮುದ್ದಿನ ಮಗಳು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಚಿಕ್ಕ ವಯಸ್ಸಿನಿಂದ ಹಿಡಿದು ಆಕೆ ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವವರೆಗೂ ಅಮ್ಮ ಅವಳ ಬಳಿ ಒಂದೇ ಒಂದು ಕೆಲಸವನ್ನೂ ಹೇಳಿಲ್ಲ. ಅಮ್ಮನಿಗೆ ಹುಷಾರಿಲ್ಲವೆಂದರೆ ಅಪ್ಪನೇ ಕೆಲಸ ಮಾಡುತ್ತಾರೆಯೇ ಹೊರತು ನಮಿತಾ ಬಳಿ ಎಂದಿಗೂ ಕೆಲಸ ಮಾಡಿಸೋಲ್ಲ. ಇರುವವಳೊಬ್ಬಳೇ ಮಗಳು ಅವಳಿ ಬಳಿ ಕೆಲಸ ಮಾಡಿಸೋಕೆ ಮನಸ್ಸು ಬಾರದು ಎಂಬುದು ಅವರ ಮಾತು. ನಮಿತಾ ಹಾಗೇ ಬೆಳೆದಿದ್ದಾಳೆ. ಯಾವ ಕೆಲಸವನ್ನೂ ಮಾಡದೆ! ಈಗ ಅಮ್ಮನಿಗೂ ವಯಸ್ಸಾಗಿದೆ, ಸಣ್ಣ ಪುಟ್ಟ ಕೆಲಸವನ್ನೂ ಮಾಡದ ಮಗಳ ಬಗ್ಗೆ ಕೆಲವೊಮ್ಮೆ ಕೋಪ ಬರುತ್ತದೆ. ಅಮ್ಮ ಕರೆದು ಕೆಲಸ ಮಾಡೆಂದು ಹೇಳಿದರೂ ಆಕೆ ಮಾಡಲಾರಳು. ಏಕೆಂದರೆ ಅಮ್ಮನಿಗೆ ಕಷ್ಟವಾದೀತು, ನಾನೂ ಆಕೆಗೆ ಸಹಾಯ ಮಾಡಬೇಕೆಂಬ ಸಂವೇದನೆ ಆಕೆಗೆ ಮೂಡುವುದಕ್ಕೆ ಎಲ್ಲಿಯೂ ಅವಕಾಶ ಸಿಕ್ಕಿಲ್ಲ. ಬೆಳಗ್ಗೆ ಬೇಗನೇ ಎದ್ದು, ನಡುರಾತ್ರಿಯವರೆಗೂ ಶ್ರಮವಿಲ್ಲದೆ ದುಡಿದು ಹೈರಾಣಾಗುವುದು ಅಮ್ಮ ಎಂಬ ವ್ಯಕ್ತಿತ್ವದ ಕರ್ತವ್ಯವಿದ್ದಿರಬಹುದು ಎಂದೇ ಆಕೆ ನಂಬಿದ್ದಾಳೆ. ಈ ಎಲ್ಲವನ್ನೂ ಅಮ್ಮ ಅನಿವಾರ್ಯವಲ್ಲದಿದ್ದರೂ ಕುಟುಂಬಕ್ಕಾಗಿ ಮಾಡುತ್ತಿದ್ದಾರೆ ಎಂಬ ಸತ್ಯ ಆಕೆಗೆ ಇಂದಿಗೂ ಅರ್ಥವಾಗಿಲ್ಲ! ಅರ್ಥವಾಗುವುದೂ ಇಲ್ಲ!
ನಮಿತಾಗೆ ಮದುವೆ ಮಾಡಬೇಕು ಎಂದ ದಿನದಿಂದ ಅಮ್ಮ ಮಂಕಾಗಿ ಕೂತಿದ್ದಾರೆ. ಒಬ್ಬಳೇ ಮಗಳನ್ನು ಬೇರೆ ಮನೆಗೆ ಕಳಿಸಬೇಕೆಂಬ ನೋವಿಗಿರಬೇಕೆಂದು ಅಪ್ಪ ಅಂದುಕೊಂಡಿದ್ದಾರೆ. ಅದು ನಿಜವಿರಬಹುದು, ಆದರೆ ಅದೊಂದೇ ಕಾರಣವಲ್ಲ. ಯಾವ ಕೆಲಸವೂ ಗೊತ್ತಿಲ್ಲದ ಇವಳು ಪತಿಯ ಮನೆಯಲ್ಲಿ ಹೇಗೆ ಬದುಕಿಯಾಳು ಎಂಬ ಭಯ ಅಮ್ಮನನ್ನು ಆವರಿಸಿದೆ. ನಿದ್ದೆಯನ್ನೂ, ನೆಮ್ಮದಿಯನ್ನೂ ಆ ಭಯವೇ ಕದ್ದಿದೆ. ಈ ಬಗ್ಗೆ ಪತಿಯ ಬಳಿ ಮಾತನಾಡಿದರೆ ಪತಿಯ ಉತ್ತರ, ಮದುವೆಗೆ ಮೊದಲು ನೀನೂ ಹಾಗೇ ಇದ್ದೆ ಅಲ್ವಾ? ಈಗ ಎಷ್ಟು ಬದಲಾಗಿದ್ದೀಯಾ ಹೇಳು? ಹೆಣ್ಣು ಮಕ್ಕಳು ಬೇಗ ಬದಲಾವಣೆಗೆ ಹೊಂದ್ಕೋತಾರೆ, ಎಲ್ಲವನ್ನೂ ಕಲಿತುಕೊಳ್ತಾರೆ. ಅದೂ ಅಲ್ಲದೆ ನಾನು ಮನೆ ಅಳಿಯನ್ನೇ ಹುಡುಕಿಬಿಟ್ಟರೆ ಕಷ್ಟವಿಲ್ಲವಲ್ಲ ಎನ್ನುತ್ತಾರೆ. ಮನೆಅಳಿಯನ್ನ ಹುಡುಕಿದರೆ ನಾನು ಸಾಯೋವರೆಗೂ ಮನೆ ಚಾಕರಿ ಮಾಡ್ತೀನಿ, ಆಮೇಲೆ ಯಾರ‌್ಮಾಡ್ತಾರೆ? ನಿಮ್ಮಳಿಯ ಮಾಡ್ತಾರಾ? ಪತ್ನಿ ತಾಳ್ಮೆ ಕಳೆದುಕೊಂಡು ಕೇಳ್ತಾಳೆ. ಮಗಳಿಗೆ ಅಲ್ಪ ಸ್ವಲ್ಪಾನೂ ಕೆಲಸ ಕಲಿಸದೆ ಇರೋಳು ನೀನು, ಅದಕ್ಕೆ ನನ್ಯಾಕೆ ಬೈಯ್ತೀಯಾ? ಪತಿಯ ಮರುಪ್ರಶ್ನೆ. ನಾನು ಕಲಿಸೋಕೆ ಹೋದ್ರೂ ನೀವೇ ತಾನೆ, ಅವ್ಳತ್ರ ಕೆಲ್ಸ ಮಾಡಿಸ್ಬೇಡ ಅಂತ ತಲೆಮೇಲೆ ಹೊತ್ತುಕೊಂಡಿದ್ದು… ಹೀಗೆ ಪತಿ-ಪತ್ನಿಯರ ಜಗಳ ಮುಂದುವರಿಯುತ್ತದೆ.
ಇದ್ಯಾವುದರ ಪರಿವೆಯೇ ಇಲ್ಲದೆ ಮಗಳು ತನ್ನ ರೂಮಿನಲ್ಲಿ ಮಹಾರಾಣಿಯಂತೆ ಸುಖಾಸೀನಳಾಗಿ ತನ್ನ ಗೆಳೆಯ ಅಥವಾ ಗೆಳತಿಯರೊಂದಿಗೆ ಮೊಬೈಲ್‌ನಲ್ಲಿ ಚಾಟ್ ಮಾಡುತ್ತ ಕೂರುತ್ತಾಳೆ. ಇತ್ತೀಚೆಗೆ ಅಮ್ಮನ ತಾಳ್ಮೆಯ ಕಟ್ಟು ಒಡೆದಿದೆ. ಕೆಲಸ ಮಾಡೆಂದು ಮಗಳನ್ನು ಪೀಡಿಸುತ್ತಾಳೆ, ಆದರೆ ಮಗಳು ಬೇಕಿದ್ದರೆ ಕೆಲಸದವಳನ್ನು ನೋಡಿಕೋ ಅಂತಾಳೆ. ಮದುವೆಯಾದ ಮೇಲೆ ಏನ್ಮಾಡ್ತೀಯಾ ಅಂದ್ರೆ ಮನೆಕೆಲಸದವಳನ್ನ ಇಟ್ಕೋತಿನಿ, ಅವ್ಳೇ ಅಡುಗೆ ಎಲ್ಲಾ ಮಾಡ್ತಾಳೆ… ಎಂದು ಕಿಸಕ್ಕನೆ ನಗುತ್ತಾಳೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯನ್ನು ನೆನಪಿಸಿಕೊಂಡು ಅಮ್ಮ ತಮ್ಮ ತಪ್ಪಿಗೆ ತಮ್ಮನ್ನೇ ಹಳಿದುಕೊಳ್ಳುತ್ತಾರೆ.
ಮನೆಗೆ ಹತ್ತೆಂಟು ಜನ ನೆಂಟರು ಬಂದರೂ ನಮಿತಾ ಒಂದುಕ್ಷಣ ಅಡುಗೆ ಮನೆಗೆ ಬಂದು ಅಮ್ಮನ ಬಳಿ ಸಹಾಯ ಮಾಡಬೇಕಾ ಎಂದು ಸೌಜನ್ಯಕ್ಕಾದರೂ ಕೇಳಿದ ಉದಾಹರಣೆಯಿಲ್ಲ. ಆಗೆಲ್ಲ ಅಮ್ಮ ತನ್ನಮ್ಮನನ್ನು ನೆನಪಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸವನ್ನೂ ಅಮ್ಮ ತನ್ನ ಬಳಿ ಮಾಡಿಸುತ್ತಿದ್ದುದದು ಆಕೆಗೆ ನೆನಪಾಗುತ್ತದೆ. ತನ್ನನ್ನು ಪದೇ ಪದೇ ಕರೆಯುತ್ತ ತನ್ನ ಕೆಲಸಗಳಿಗೆ ಮಗಳೂ ನೆರವು ಮಾಡುವಂತೆ ನೋಡಿಕೊಳ್ಳುತ್ತಿದ್ದ ಅಮ್ಮನ ಉದ್ದೇಶ ಆಕೆಗೆ ಈಗ ಅರಿವಾಗುತ್ತಿದೆ. ತನಗೆ ಕಷ್ಟಕೊಡುವ ಉದ್ದೇಶ ತನ್ನಮ್ಮನಿಗಿರಲಿಲ್ಲ. ಆದರೆ ಮುಂದೊಮ್ಮೆ ತಾನು ಕಷ್ಟ ಪಡಬಾರದೆಂಬ ಇಂಗಿತ ಅಮ್ಮನ ಆ ವರ್ತನೆಯಲ್ಲಿತ್ತು ಎಂಬುದು ಆಕೆಗೆ ಈಗ ಅರ್ಥವಾಗುತ್ತಿದೆ. ತನ್ನ ಭವಿಷ್ಯದಲ್ಲಿ ತಾನೆಂದೂ ಜವಾಬ್ದಾರಿಗಳನ್ನು ಮರೆಯದೆ, ಪತಿಯ ಮನೆಯವರಿಂದ ಮಾತು ಕೇಳಿಸಿಕೊಳ್ಳದೆ, ಆದರ್ಶ ಬದುಕು ಬದುಕಬೇಕೆಂಬ ಅಮ್ಮನ ಬಯಕೆಯನ್ನು ತಾನು ಈಡೇರಿಸಿದ್ದೇನೆ. ಇಷ್ಟನ್ನೆಲ್ಲ ನನಗೆ ಕಲಿಸಿದ ಅಮ್ಮನಿಗೆ ನಾನು ಚಿರಋಣಿಯಾಗಿದ್ದೇನೆ. ನಾನೇನೋ ಅಮ್ಮನಿಗೆ ಚಿರಋಣಿಯಾಗಿದ್ದೇನೆ. ಆದರೆ ನನ್ನ ಮಗಳು? ಮುಂದೊಮ್ಮೆ ಅಮ್ಮನ ಬಗ್ಗೆ ಹೇಳಿಕೊಂಡು ಹೆಮ್ಮೆ ಪಡುವಂತೆ, ಅಮ್ಮನಿಂದಲೇ ನನ್ನ ಬದುಕು ಆದರ್ಶವಾಯಿತೆಂದು ಆಕೆ ಹಿಗ್ಗುವಂತೆ ತಾನವಳನ್ನು ಬೆಳೆಸಿದ್ದೇನೆಯೇ? ಅಮ್ಮ ತನ್ನಷ್ಟಕ್ಕೇ ಬಿಕ್ಕುತ್ತಾಳೆ!
ಹೀಗೆ ಮಕ್ಕಳನ್ನು ಬೆಳೆಸುವ ತಂದೆ ತಾಯಿಗಳನ್ನು ದೂರಬೇಕಾ ಅಥವಾ ತಂದೆ-ತಾಯಿಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದ ಮಕ್ಕಳನ್ನು ದೂರಬೇಕಾ? ಕೇವಲ ಹೆಣ್ಣು ಮಕ್ಕಳು ಎಂದಲ್ಲ. ಗಂಡು ಮಕ್ಕಳಿಗೂ ತಂದೆ-ತಾಯಿಯರ ಬಗ್ಗೆ ಕಾಳಜಿ ಇಲ್ಲ. ಅಪ್ಪ-ಅಮ್ಮನ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿರುವುದು ಗೊತ್ತಿದ್ದರೂ ಮಗನಿಗೆ ಶೋಕಿ ಮಾಡುವುದಕ್ಕೆ ರಾಯಲ್ ಎನ್‌ಫೀಲ್ಡ್ ಬೈಕೇ ಆಗಬೇಕು, ದುಬಾರಿ ಐಫೋನೇ ಬೇಕು!
ತಮ್ಮನ್ನು ತಮ್ಮ ತಂದೆ-ತಾಯಿ ಹೇಗೆ ಬೆಳೆಸಿದರು ಎಂಬುದನ್ನು ನೆನಪಿಸಿಕೊಂಡು ತಮ್ಮ ಮಕ್ಕಳನ್ನೂ ಹಾಗೆಯೇ ಬೆಳೆಸುವ ಸಂಕಲ್ಪವನ್ನು ಪತಿ-ಪತ್ನಿ ಮಾಡಿದರೆ ಮಕ್ಕಳು ಕಷ್ಟವನ್ನು ಅರಿಯುವ, ಸ್ಪಂದಿಸುವ ಬುದ್ಧಿಯನ್ನು ಕಲಿತಾರು. ಇಲ್ಲವಾದರೆ ಮಕ್ಕಳನ್ನು ದೂರಲು ಬಳಸುವ ಪದಗಳನ್ನು ಪಾಲಕರು ಕನ್ನಡಿಯ ಮುಂದೆ ನಿಂತು ಆಡಬೇಕಾಗುತ್ತದೆ!

   

Leave a Reply